ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ಗ್ರಾಮಪಂಚಾಯಿತಿ ಸ್ಥಾನಗಳ ಹರಾಜು; ಪ್ರಜಾತಂತ್ರದ ಆಶಯಕ್ಕೇ ಕೊಡಲಿ?

Last Updated 7 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಗ್ರಾಮ ಪಂಚಾಯಿತಿ ಹಾಗೂ ಇತರ ಸ್ಥಳೀಯ ‌ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾದ ಸ್ಥಾನಗಳಲ್ಲಿ ರಾಜಕಾರಣಿಗಳು ತಮ್ಮ ಪತ್ನಿಯರನ್ನೇ ಕಣಕ್ಕಿಳಿಸಿ ಗೆಲ್ಲಿಸುವುದು, ಅನಂತರ ಮಹಿಳೆಯನ್ನು ಪಕ್ಕಕ್ಕೆ ಸರಿಸಿ, ತಾವೇ ಅಧಿಕಾರ ನಡೆಸಿರುವುದಕ್ಕೆ ನೂರಾರು ಉದಾಹರಣೆಗಳು ಸಿಗುತ್ತವೆ. ಇಂಥ ಪ್ರಕರಣಗಳು ಮಹಿಳಾ ಮೀಸಲಾತಿಯ ಉದ್ದೇಶವನ್ನೇ ವ್ಯರ್ಥಗೊಳಿಸುತ್ತವೆ ಎಂದು ಅನೇಕರು ಆಕ್ಷೇಪಿಸಿದ್ದಿದೆ.

ಆದರೆ, ಈಗ ಒಟ್ಟಾರೆ ಅಧಿಕಾರ ವಿಕೇಂದ್ರೀಕರಣದ ಉದ್ದೇಶಕ್ಕೇ ಮಾರಕವಾಗಬಲ್ಲಂಥ, ಪ್ರಜಾಪ್ರಭುತ್ವದ ಆಶಯವನ್ನೇ ಗಾಳಿಗೆ ತೂರುವಂಥ ಬೆಳವಣಿಗೆಗಳು ರಾಜ್ಯದ ವಿವಿಧ ಭಾಗಗಳಿಂದ ಕೇಳಿಬರುತ್ತಿವೆ. ಗ್ರಾಮ ಪಂಚಾಯಿತಿಯ ಸ್ಥಾನಗಳನ್ನು ಊರವರೆಲ್ಲಾ ಸೇರಿಕೊಂಡು ಲಕ್ಷಾಂತರ ರೂಪಾಯಿಗೆ ಹರಾಜು ಹಾಕುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಕಲಬುರ್ಗಿ ಜಿಲ್ಲೆ ಯಡ್ರಾವಿಯಲ್ಲಿ ನಡೆದ ಇಂಥ ಹರಾಜು ಪ್ರಕ್ರಿಯೆಯ ವಿಡಿಯೊ ವೈರಲ್‌ ಆಗಿದೆ. ಇನ್ನೂ ಹಲವು ಕಡೆ ಈ ಪ್ರಕ್ರಿಯೆ ಜಾರಿಯಲ್ಲಿದೆ.

ಊರಿಗೆ ಸೌಲಭ್ಯ ಕಲ್ಪಿಸುವವರಿಗೆ, ಗುಡಿ–ದೇವಸ್ಥಾನದ ಅಭಿವೃದ್ಧಿಗೆ ದೇಣಿಗೆ ನೀಡುವವರಿಗೆ ಮತ ಕೊಡುತ್ತೇವೆ ಎಂದೆಲ್ಲ ಹಳ್ಳಿಗಳ ಜನರು ಚುನಾವಣೆಯ ಸಂದರ್ಭದಲ್ಲಿ ಷರತ್ತು ವಿಧಿಸಿ ಮತದಾನ ನಡೆಸಿದ ಉದಾಹರಣೆಗಳು ಹಲವಿವೆ. ಊರವರೆಲ್ಲಾ ಒಂದಾಗಿ, ಆಕಾಂಕ್ಷಿಗಳ ಜತೆಗೆ ಮಾತುಕತೆ ನಡೆಸಿ, ರಾಜಿ ಸಂಧಾನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಅಲ್ಲಲ್ಲಿ ನಡೆಯುತ್ತದೆ. ಈಗ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, ಸ್ಥಾನವನ್ನು ಹರಾಜು ಹಾಕುತ್ತಿರುವ ಬೆಳವಣಿಗೆಗಳು ಆತಂಕಕ್ಕೆ ಕಾರಣವಾಗಿವೆ.

ಸಾಮಾನ್ಯ ವರ್ಗಕ್ಕೆ ಮೀಸಲಾದ ಸದಸ್ಯ ಸ್ಥಾನವನ್ನು ಪರಿಶಿಷ್ಟ ಜಾತಿಯ ವ್ಯಕ್ತಿ ₹ 8.55 ಲಕ್ಷಕ್ಕೆ, ಪರಿಶಿಷ್ಟ ಜಾತಿ ಮಹಿಳೆ ಸ್ಥಾನಕ್ಕೆ ₹ 7.25 ಲಕ್ಷ, ಪರಿಶಿಷ್ಟ ಜಾತಿ ಪುರುಷ ಸ್ಥಾನಕ್ಕೆ ₹ 5.50 ಲಕ್ಷ. ಪರಿಶಿಷ್ಟ ಪಂಗಡ ಮಹಿಳೆ ಸ್ಥಾನಕ್ಕೆ ₹ 5.25 ಲಕ್ಷ ಹರಾಜು ಕೂಗಿರುವ ದೃಶ್ಯಗಳು ಯಡ್ರಾವಿಯ ವಿಡಿಯೊದಲ್ಲಿ ಸೆರೆಯಾಗಿವೆ. ಹರಾಜು ನಡೆಸಿದವರು ಯಾರು, ಹರಾಜಿನಿಂದ ಬಂದಿರುವ ಹಣ ಯಾರ ಕೈಸೇರುತ್ತದೆ? ಯಾವ ಉದ್ದೇಶಕ್ಕೆ ಬಳಕೆಯಾಗುತ್ತದೆ ಎಂಬೆಲ್ಲ ವಿಚಾರಗಳ ಬಗ್ಗೆ ಎಲ್ಲಿಯೂ ಸ್ಪಷ್ಟತೆ ಇಲ್ಲ.

ಗ್ರಾಮ ಪಂಚಾಯಿತಿ ಸ್ಥಾನಗಳನ್ನು ಹರಾಜು ಹಾಕಲು ಕಾನೂನಿನಲ್ಲಿ ಅವಕಾಶವೇ ಇಲ್ಲ. ಇದು ಗೊತ್ತಿದ್ದರೂ, ಗ್ರಾಮಸ್ಥರನ್ನು ಎದುರುಹಾಕಿಕೊಳ್ಳಲಾಗದೆ ಅನೇಕರು ಸುಮ್ಮನಿದ್ದಾರೆ. ಹರಾಜು ಪ್ರಕ್ರಿಯೆಯನ್ನು ವಿರೋಧಿಸಿದವರ ಮೇಲೆ ಹಲ್ಲೆ ನಡೆಸಿದ ಘಟನೆ ಹೊಸಪೇಟೆಯಲ್ಲಿ ನಡೆದಿದೆ. ಪ್ರಕರಣ ಪೊಲೀಸ್‌ ಠಾಣೆಯ ಮೆಟ್ಟಿಲೇರಿದೆ. ಮಂಡ್ಯ ಜಿಲ್ಲೆಯಲ್ಲಿ ತಹಶೀಲ್ದಾರರೊಬ್ಬರು ತಮ್ಮ ಪತ್ನಿಯ ಅವಿರೋಧ ಆಯ್ಕೆಗಾಗಿ ₹25 ಲಕ್ಷ ನೀಡಲು ಮುಂದಾಗಿರುವುದು, ಇನ್ನೊಬ್ಬರು ಎಂಟು ಗುಂಟೆ ಜಮೀನು ನೀಡಲು ಮುಂದಾಗಿರುವುದು ಸಹ ವರದಿಯಾಗಿದೆ.

***

ಗ್ರಾಮಸ್ಥರಿಂದಲೇ ಬೆಲೆ ನಿಗಧಿ

ಹಾಸನ ಜಿಲ್ಲೆ ಹಿರೀಸಾವೆ ಹೋಬಳಿಯ ದಿಡಗ, ಜಿನ್ನೇಹಳ್ಳಿ, ಬೆಳಗೀಹಳ್ಳಿ, ಕಬ್ಬಳಿ, ಬಾಳಗಂಚಿ, ಮತಿಘಟ್ಟ ಮತ್ತು ಹಿರೀಸಾವೆ ಪಂಚಾಯಿತಿಗಳ ಹಲವು ಹಳ್ಳಿಗಳಲ್ಲಿ ಗ್ರಾಮದ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಸದಸ್ಯ ಸ್ಥಾನಗಳನ್ನು ಹರಾಜು ಮಾಡಲಾಗಿದೆ. ಗ್ರಾಮಸ್ಥರು ಸಭೆ ಸೇರಿ ಚರ್ಚಿಸಿ, ಸದಸ್ಯ ಸ್ಥಾನದ ಹರಾಜಿನ ಆರಂಭಿಕ ಮೊತ್ತ ನಿಗದಿ ಮಾಡುತ್ತಿದ್ದಾರೆ.

* ದಿಡಗ ಹಳೆ ಗ್ರಾಮದ ಮೂರು ಸ್ಥಾನಗಳಿಂದ ಮಾರಮ್ಮ ದೇವಸ್ಥಾನ ನಿರ್ಮಾಣಕ್ಕೆ ₹11 ಲಕ್ಷ ಪಡೆಯಲು ತೀರ್ಮಾನವಾಗಿದೆ. ಕರಿಕ್ಯಾತನಹಳ್ಳಿ ₹17 ಲಕ್ಷ ಮತ್ತು ಮೇಳಹಳ್ಳಿ ₹ 3 ಲಕ್ಷವನ್ನು ಗ್ರಾಮದ ಅಭಿವೃದ್ಧಿ ಅಥವಾ ದೇವಸ್ಥಾನ ನಿರ್ಮಾಣಕ್ಕೆ ನೀಡಲು ಒಪ್ಪಿಗೆಯಾಗಿದೆ. ಹೊಸಹಳ್ಳಿ ಮತ್ತು ನಾಗನಹಳ್ಳಿ ಗ್ರಾಮಗಳ 3 ಸ್ಥಾನಗಳು ಸುಮಾರು ₹ 16 ಲಕ್ಷಕ್ಕೆ ಮಾತುಕತೆ ನಡೆದಿದೆ. ಇಲ್ಲಿ ಎರಡು ಗುಂಪುಗಳಿದ್ದು, ಅಂತಿಮ ತೀರ್ಮಾನ ಆಗಬೇಕಿದೆ.

* ಕಬ್ಬಳಿ ಪಂಚಾಯಿತಿಯ ದಾಸರಹಳ್ಳಿ ವೀರಭದ್ರ ದೇವಸ್ಥಾನ ನಿರ್ಮಾಣಕ್ಕೆ ವ್ಯಕ್ತಿಯೊಬ್ಬರು ವರ್ಷದ ಹಿಂದೆಯೇ ಸುಮಾರು ₹ 5 ಲಕ್ಷ ನೀಡಿದ್ದಾರೆ. ಮಂಡಲೀಕನಹಳ್ಳಿಯ ಬಸವೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಹಣ ಕೊಡುವುದಾಗಿ ವ್ಯಕ್ತಿಯೊಬ್ಬರು ಒಪ್ಪಿಕೊಂಡಿದ್ದು, ಅದಕ್ಕೆ ಗ್ರಾಮಸ್ಥರು ಸಮ್ಮತಿಸಿದ್ದಾರೆ. ಬೆಳಗೀಹಳ್ಳಿ ಪಂಚಾಯಿತಿಯ ಚಿಕ್ಕೋನಹಳ್ಳಿ ಒಂದು ಸ್ಥಾನಕ್ಕೆ ₹ 4 ಲಕ್ಷ ನಿಗದಿಯಾಗಿದ್ದು, ಕೆಲವರ ಒಪ್ಪಿಗೆ ಇಲ್ಲದೆ ಮತ್ತೆ ಸಭೆ ನಡೆಯಬೇಕಿದೆ. ಇದೇ ಪಂಚಾಯಿತಿ ವ್ಯಾಪ್ತಿಯ ಬದ್ದಿಕೆರೆ ಗ್ರಾಮದ 2 ಸ್ಥಾನಗಳು ₹ 16.5 ಲಕ್ಷಕ್ಕೆ ನಿಗದಿಯಾಗಿದ್ದು, ಬಸವೇಶ್ವರಸ್ವಾಮಿ ರಥ ನಿರ್ಮಾಣಕ್ಕೆ ಹಣ ಬಳಸಲು ಗ್ರಾಮಸ್ಥರು ಒಪ್ಪಿದ್ದಾರೆ.

ಹಿರೀಸಾವೆ ಪಂಚಾಯಿತಿಯ ಕೊಳ್ಳೇನಹಳ್ಳಿಯಲ್ಲಿ ₹4 ಲಕ್ಷಕ್ಕೆ ಹರಾಜು ಪ್ರಕ್ರಿಯೆ ನಡೆದು, ನಂತರ ಒಮ್ಮತ ಸಿಗದೆ ಚುನಾವಣೆಗೆ ಸಿದ್ಧತೆ ನಡೆದಿದೆ.

‘ಹರಾಜು ಪ್ರಕ್ರಿಯೆಯಿಂದ ಗ್ರಾಮದಲ್ಲಿ ಹಣ, ಮದ್ಯ ಹಂಚುವುದು ನಿಲ್ಲುತ್ತದೆ, ಗಲಾಟೆ ಇರುವುದಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಹಣ ಸಿಗುತ್ತದೆ’ ಎಂದು ಅವಿರೋಧ ಆಯ್ಕೆಗೆ ಒಪ್ಪಿಗೆ ನೀಡಿರುವ ಗ್ರಾಮಸ್ಥರು ವಾದಿಸುತ್ತಾರೆ.

*ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಕೆಚ್ಚೇನಹಳ್ಳಿ ಗ್ರಾಮ ಪಂಚಾಯಿತಿಯ ಕೆಳಬೋಟೆಯಲ್ಲಿ ನಾಲ್ಕು ಸ್ಥಾನಗಳಿಗೆ ದೇವಸ್ಥಾನಕ್ಕೆ ಹೆಚ್ಚು ಹಣ ಕೊಡುವವರನ್ನು ಅವಿರೋಧವಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ.

*ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಗೆ ತಲಾ ಒಂದು ಸ್ಥಾನ ಹಾಗೂ ಸಾಮಾನ್ಯ ವರ್ಗಕ್ಕೆ ಎರಡು ಸ್ಥಾನಗಳು ಸೇರಿ ಈ ಹಳ್ಳಿಯಲ್ಲಿ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಆದರೆ, ಊರಿನವರು ಸೇರಿ ಇಲ್ಲಿನ ಆಂಜನೇಯ ದೇವಸ್ಥಾನಕ್ಕೆ ಹೆಚ್ಚು ಹಣ ನೀಡುವವರನ್ನು ಆಯ್ಕೆ ಮಾಡಲು ನಿರ್ಧರಿಸಿದರು. ಅದರಂತೆ ಮಾತುಕತೆ ನಡೆಸಿ ₹ 5 ಲಕ್ಷಕ್ಕಿಂತ ಅಧಿಕ ಹಣ ನೀಡುವ ನಾಲ್ವರನ್ನು ಆಯ್ಕೆ ಮಾಡಲು ಮುಂದಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

*ರಾಯಚೂರು ತಾಲ್ಲೂಕು ಡಿ.ಯದ್ಲಾಪುರ ಗ್ರಾಮ ಪಂಚಾಯಿತಿ‌‌ ವ್ಯಾಪ್ತಿಯ ಹನುಮನದೊಡ್ಡಿ ಗ್ರಾಮದಲ್ಲಿ ಎರಡು ಗ್ರಾಮ ಪಂಚಾಯಿತಿ ಸ್ಥಾನಗಳನ್ನು‌‌‌ ಗ್ರಾಮಸ್ಥರು ಹರಾಜು ಮಾಡಿದ್ದಾರೆ.

ಸಾಮಾನ್ಯ ವರ್ಗದ‌‌ ವಾರ್ಡ್ ಸ್ಥಾನವನ್ನು ಕುರುಬ ಸಮಾಜದ ವ್ಯಕ್ತಿಯೊಬ್ಬರು ₹4.75 ಲಕ್ಷಕ್ಕೆ ಪಡೆದಿದ್ದಾರೆ. ಹಿಂದುಳಿದ ವರ್ಗಗಳ ‌ಮಹಿಳೆಗೆ ಮೀಸಲಿರುವ ಇನ್ನೊಂದು ವಾರ್ಡ್‌ನ ಸ್ಥಾನವನ್ನು ಕುರುಬ ಸಮಾಜದ ಮಹಿಳೆಯೊಬ್ಬರು ₹4 ಲಕ್ಷಕ್ಕೆ ಪಡೆದಿದ್ದಾರೆ.

‘ಗ್ರಾಮದ ದೇವಸ್ಥಾನ‌‌ ಅಭಿವೃದ್ಧಿಗೆ‌‌ ಹಣ ಬಳಕೆ ಮಾಡಲಾಗುವುದು. ಹಣ ನೀಡಲು ಸದಸ್ಯರಿಗೆ ಗಡುವು ನೀಡಲಾಗಿದ್ದು, ನಿಗದಿತ ದಿನದಲ್ಲಿ ನೀಡದಿದ್ದರೆ ಚುನಾವಣೆ ಮಾಡಲಾಗುವುದು. ಅಲ್ಲಿಯವರೆಗೆ ಹರಾಜು ಪಡೆದವರ‌‌ ಹೆಸರು ಬಹಿರಂಗ ಮಾಡುವುದಿಲ್ಲ’ ಎಂದು ಗ್ರಾಮದ ಕೆಲವರು ಹೇಳುತ್ತಿದ್ದಾರೆ. ಆದರೆ, ಈ ಪ್ರಕ್ರಿಯೆಯನ್ನು ಗ್ರಾಮದ ಕೆಲವರು ವಿರೋಧಿಸುತ್ತಿದ್ದಾರೆ.

*ಹಾವೇರಿ ಜಿಲ್ಲೆಯ ಬಸಾಪುರ ಗ್ರಾಮದಲ್ಲಿ ಆಲದಮ್ಮ ದೇವಿಯ ಗುಡಿ ನಿರ್ಮಾಣಕ್ಕೆ ಹಣ ನೀಡಿದವರನ್ನೇ ಆಯ್ಕೆ ಮಾಡಲು ಊರವರು ನಿರ್ಧರಿಸಿದ್ದಾರೆ.

*ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಹಿಕ್ಕಣಗುತ್ತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಕಲಹಳ್ಳಿ ಗ್ರಾಮದ ಮೂರು ಸ್ಥಾನಗಳಿಗೆ ಹರಾಜು ಪ್ರಕ್ರಿಯೆ ನಡೆದಿದ್ದು, ಗ್ರಾಮ ದೇವತೆ ಲಕ್ಷ್ಮೀ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಒಂದು ಸ್ಥಾನ ₹ 6.75 ಲಕ್ಷ, ಇನ್ನೊಂದು ₹6 ಲಕ್ಷಕ್ಕೆ ಹಾಗೂ ಕೊನೆಯ ಸ್ಥಾನ ₹2 ಲಕ್ಷಕ್ಕೆ ಹರಾಜಾಗಿದೆ.

ಕೆರೂಟಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುದರಗೊಂಡ ಗ್ರಾಮದ ಎರಡು ಸ್ಥಾನಗಳು ₹ 5.50 ಲಕ್ಷ ಹಾಗೂ ₹5 ಲಕ್ಷಕ್ಕೆ ಕ್ರಮವಾಗಿ ಹರಾಜಾಗಿವೆ. ಹರಾಜು ಹಣ ಗ್ರಾಮದ ಹೊರ್ತಿ ರೇವಣಸಿದ್ದೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಬಳಸಲಾಗುತ್ತದೆ ಎಂದು ತಿಳಿದುಬಂದಿದೆ.

ಗಬಸಾವಳಗಿ ಗ್ರಾಮ ಪಂಚಾಯ್ತಿಯ ಆಹೇರಿ ಗ್ರಾಮದ ಐದು ಸ್ಥಾನಗಳಲ್ಲಿ ಎರಡು ಸ್ಥಾನಗಳು ₹ 3.20 ಲಕ್ಷಕ್ಕೆ ಹರಾಜಾಗಿವೆ. ಹಿಂದೂ ಸಮುದಾಯ ಭವನ ಮತ್ತು ದರ್ಗಾ ಕಟ್ಟಡಕ್ಕೆ ಈ ಹಣ ಬಳಸಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

*ಕುಣಿಗಲ್ ತಾಲ್ಲೂಕಿನ ಕಾಡಮತ್ತಿಕೆರೆ ಗ್ರಾಮದ ಬಸವಣ್ಣ ಸ್ವಾಮಿ ದೇವಾಲಯ ಜೀರ್ಣೋದ್ಧಾರಕ್ಕಾಗಿ ಗ್ರಾಮ ಪಂಚಾಯಿತಿಯ ಮೂರು ಸ್ಥಾನಗಳನ್ನು ಗ್ರಾಮಸ್ಥರು ಹರಾಜಿಗಿಟ್ಟಿದ್ದಾರೆ. ಮೂರು ದಿನಗಳ ಹಿಂದೆ ಗ್ರಾಮದಲ್ಲಿ ಡಂಗುರ ಸಾರಿ ಗ್ರಾಮಸ್ಥರ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಸ್ಥಾನಗಳನ್ನು ಬಹಿರಂಗ ಹರಾಜು ಕೂಗುವ ಮೂಲಕ ಬಂದ ಹಣವನ್ನು ದೇವಾಲಯದ ಜೀರ್ಣೊದ್ಧಾರಕ್ಕೆ ಬಳಸುವ ನಿರ್ಣಯ ಕೈಗೊಳ್ಳಲಾಯಿತು. ಸಾಮಾನ್ಯ ವರ್ಗದ ಸ್ಥಾನ ₹ 12 ಲಕ್ಷ, ಬಿಸಿಎಂ ‘ಎ’ ₹ 11.45 ಲಕ್ಷ ಮತ್ತು ಪರಿಶಿಷ್ಟ ಜಾತಿಯ ಸ್ಥಾನ ₹ 1.45 ಲಕ್ಷಕ್ಕೆ ಹರಾಜಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.‌

ಕುರುಗೋಡು ತಾಲ್ಲೂಕಿನ ಬೈಲೂರು ಗ್ರಾಮ ಪಂಚಾಯ್ತಿಯ ನಾಲ್ಕು ವಾರ್ಡ್‌ಗಳ 13 ಸ್ಥಾನಗಳನ್ನು ಸೋಮವಾರ ಹರಾಜು ಹಾಕಿದ್ದಾರೆನ್ನಲಾದ ಘಟನೆಯನ್ನು ಆಧರಿಸಿದ ವಿಡಿಯೋ ವೈರಲ್‌ ಆಗಿದೆ. ಇದು ಸ್ಪಷ್ಟವಾಗಿ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್‌.ನಂದಿನಿ ತಿಳಿಸಿದ್ದಾರೆ.

***

ಉದ್ದೇಶವೇ ಬುಡಮೇಲು

- ಸಿ. ನಾರಾಯಣ ಸ್ವಾಮಿ

ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ‘ಹರಾಜು ಕೂಗಿ’ ಹಣಪಡೆದು ಸ್ಥಾನಗಳನ್ನು ಬಿಟ್ಟುಕೊಡುವ ಪದ್ಧತಿ ಪ್ರಜಾಪ್ರಭುತ್ವದ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯ ಅಣಕವೇ ಸರಿ. ಕೆಲವೆಡೆ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಕೂತು, ನಿರ್ಣಿಯಿಸಿ ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಆದರೆ, ಸದಸ್ಯ ಸ್ಥಾನವನ್ನು ಹರಾಜು ಹಾಕುವುದು ಇದಕ್ಕಿಂತ ಭಿನ್ನವಾದುದು. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದ ವ್ಯವಸ್ಥೆ. ಇದನ್ನು ಎಲ್ಲರೂ ವಿರೋಧಿಸಬೇಕಿದೆ, ತಡೆಯಬೇಕಿದೆ.

ಹರಾಜು ಮೂಲಕ ಸದಸ್ಯ ಸ್ಥಾನವನ್ನು ಪಡೆದುಕೊಳ್ಳುವುದರಲ್ಲಿ ಎರಡು ರೀತಿಯ ಅಪಾಯವಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯಾರು ಬೇಕಿದ್ದರೂ ಸ್ಪರ್ಧಿಸುವ ಅವಕಾಶವನ್ನು ಪಂಚಾಯತ್ ರಾಜ್ ವ್ಯವಸ್ಥೆ ಮಾಡಿಕೊಟ್ಟಿದೆ. ಅಂದರೆ ಲಿಂಗ, ಜಾತಿ, ಧರ್ಮ, ಬಡವ ಮತ್ತು ಶ್ರೀಮಂತ ಎಂಬ ಭೇದವಿಲ್ಲದೆ ಯಾರು ಬೇಕಾದರೂ ಸ್ಪರ್ಧಿಸಬಹುದು. ಆದರೆ, ಹರಾಜು ಕೂಗಿ ಸ್ಥಾನಗಳನ್ನು ನೀಡುವುದರಿಂದ, ಸ್ಪರ್ಧಿಸಬೇಕೆಂಬ ಇಚ್ಛೆ ಇರುವವರು ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಬಹುದಾದ ನಾಗರಿಕರ ಹಕ್ಕನ್ನು ಈ ಮೂಲಕ ಕಸಿದುಕೊಂಡಂತಾಗುತ್ತದೆ. ಅಲ್ಲದೆ, ಹಣವಿದ್ದವರು ಮಾತ್ರ ಗ್ರಾಮ ಪಂಚಾಯಿತಿಗಳಿಗೆ ಆರಿಸಿ ಬರುತ್ತಾರೆ. ಅಲ್ಲಿಗೆ ಪಂಚಾಯತ್ ರಾಜ್ ವ್ಯವಸ್ಥೆಯ ಉದ್ದೇಶವೇ ಬುಡಮೇಲು ಆಗುತ್ತದೆ.

ಇನ್ನೊಂದೆಡೆ, ಗ್ರಾಮಸ್ಥರಲ್ಲಿ ಬಲಾಢ್ಯರು ಕೂತು ಹರಾಜು ಕೂಗಿಸಿ, ಸದಸ್ಯತ್ವವನ್ನು ಹಂಚಿಕೆ ಮಾಡುತ್ತಾರೆ. ಬಹುತೇಕ ಸಂದರ್ಭದಲ್ಲಿ ಬಲಾಢ್ಯರ ಒತ್ತಾಯಕ್ಕೆ ಮಣಿದು ಜನರು ಈ ಹರಾಜು ವ್ಯವಸ್ಥೆಯನ್ನು ಒಪ್ಪಿಕೊಂಡಿರುತ್ತಾರೆ. ಗ್ರಾಮದ ಜನರು ತಮ್ಮ ಪ್ರತಿನಿಧಿಯನ್ನು ಮತದಾನದ ಮೂಲಕ ಆಯ್ಕೆ ಮಾಡುವ ತಮ್ಮ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಹರಾಜು ಕೂಗಿ ಸದಸ್ಯತ್ವದ ಸ್ಥಾನ ಪಡೆದುಕೊಂಡವರು, ಮುಕ್ತವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಿದ್ದರೆ ಮತದಾರರು ಅವರಿಗೆ ಮತಹಾಕದೇ ಇರುವ ಸಾಧ್ಯತೆಯೂ ಇತ್ತು. ಆದರೆ ಮತದಾನವೇ ನಡೆಯದ ಪರಿಸ್ಥಿತಿ ಎದುರಾಗುವುದರಿಂದ, ಜನರು ತಮ್ಮ ಹಕ್ಕನ್ನು ಚಲಾಯಿಸಲು ಅವಕಾಶವೇ ದೊರೆಯುವುದಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದ ಬೆಳವಣಿಗೆ. ಚುನಾವಣೆಗಳಲ್ಲಿ ಮತದಾರರಿಗೆ ಆಮಿಷ ಒಡ್ಡುವುದು ಕಾನೂನುಬಾಹಿರ ಕ್ರಿಯೆ ಮತ್ತು ಶಿಕ್ಷಾರ್ಹ ಅಪರಾಧ. ಅದೇ ರೀತಿ ದೇವಾಲಯಕ್ಕೆ ಹರಾಜಿನ ಮೂಲಕ ಹಣನೀಡುವ ಪದ್ಧತಿ ಸಹ ಮತದಾರರಿಗೆ ಆಮಿಷ ಒಡ್ಡುವುದೇ ಆಗಿದೆ. ಹಣ ನೀಡಿ ಸದಸ್ಯನಾಗಿ ಆಯ್ಕೆಯಾದ ವ್ಯಕ್ತಿ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾನೆ ಎಂದು ಹೇಗೆ ನಿರೀಕ್ಷಿಸುವುದು? ಆತ ತಾನು ನೀಡಿರುವ ಹಣವನ್ನು ಮರಳಿ ಸಂಪಾದಿಸುವುದು ಹೇಗೆ ಎಂಬುದರತ್ತಲೇ ಗಮನಹರಿಸುತ್ತಾನೆ. ಭ್ರಷ್ಟನಾಗುತ್ತಾನೆ.

ಹರಾಜು ಕೂಗಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವುದರ ವಿರುದ್ಧ ಕಾನೂನು ಹೋರಾಟ ನಡೆಸಬಹುದು. ಆ ಮೂಲಕ ಅವರನ್ನು ಅನರ್ಹರನ್ನಾಗಿಸಬಹುದು. ಆದರೆ ಮತದಾರರು ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಬೇಕು. ಇಂತಹ ಅಕ್ರಮವನ್ನು ತಡೆಯಲು ಇದೊಂದೆ ಪರಿಣಾಮಕಾರಿಯಾದ ಮಾರ್ಗ.

ಲೇಖಕರು: ಕರ್ನಾಟಕ ಪಂಚಾಯಿತಿ ಪರಿಷತ್‌ ಕಾರ್ಯಾಧ್ಯಕ್ಷರು

***

ನಾಮಪತ್ರ ಸಲ್ಲಿಸಿದರೆ ಸಾಮಾಜಿಕ ಬಹಿಷ್ಕಾರ

- ಎಂ.ಎನ್‌.ಯೋಗೇಶ್‌

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದ ಮಹಿಳೆಯೊಬ್ಬರಿಗೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕುವ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ.

ಗ್ರಾಮ ಪಂಚಾಯಿತಿ ಹೆಸರು ಹಾಗೂ ತನ್ನ ಹೆಸರನ್ನು ಪ್ರಕಟಿಸಬಾರದು ಎಂಬ ಷರತ್ತಿನೊಂದಿಗೆ ಮಹಿಳೆ ‘ಪ್ರಜಾವಾಣಿ’ ಜೊತೆ ಮಾತನಾಡಿದರು.

ಮಹಿಳೆಗೆ ಮೀಸಲಾಗಿರುವ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಅವರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಗ್ರಾಮಸ್ಥರು ಆ ಸ್ಥಾನವನ್ನು ₹ 7.50 ಲಕ್ಷಕ್ಕೆ ಹರಾಜು ಹಾಕಿದ್ದಾರೆ. ಗ್ರಾಮಸ್ಥರ ನಿರ್ಧಾರ ವಿರೋಧಿಸಿ ನಾಮಪತ್ರ ಸಲ್ಲಿಕೆಗೆ ಮುಂದಾದರೆ ಅವರ ಕುಟುಂಬವನ್ನು ಗ್ರಾಮದ ಎಲ್ಲಾ ಚಟುವಟಿಕೆಯಿಂದ ದೂರ ಇಡಲಾಗುವುದು ಎಂದು ಗ್ರಾಮಸ್ಥರು ಬೆದರಿಕೆ ಹಾಕಿದ್ದಾರೆ.

ಮಹಿಳೆಯ ಮನೆ ಗ್ರಾಮದ ಹೊರವಲಯದಲ್ಲಿದ್ದು ಅವರು ಬೇರೆಯವರ ಜಾಗದಲ್ಲಿ ಓಡಾಡುವ ಅನಿವಾರ್ಯತೆ ಇದೆ. ಆ ಜಮೀನಿನ ಮಾಲೀಕ ದಾರಿಯನ್ನು ಬಂದ್‌ ಮಾಡುವುದಾಗಿ ಮತ್ತು ಆ ಜಾಗದಲ್ಲಿ ಹಾದು ಹೋಗಿರುವ ನೀರಿನ ಪೈಪ್‌ಲೈನ್‌ ಕಿತ್ತುಹಾಕುವುದಾಗಿ ಹೆದರಿಸಿದ್ದಾರೆ.

ಕಡೆ ಕಾರ್ತಿಕ ಸೋಮವಾರ ನಡೆಯಲಿರುವ ಹಬ್ಬದ ಅಂಗವಾಗಿ ಗ್ರಾಮಸ್ಥರಿಂದ ಸಂಗ್ರಹಿಸಿದ್ದ ₹ 500 ಚಂದಾ ಹಣವನ್ನು ಮಹಿಳೆಗೆ ವಾಪಸ್‌ ನೀಡಿದ್ದು ಹಬ್ಬದಲ್ಲಿ ಪಾಲ್ಗೊಳ್ಳದಂತೆ ತಾಕೀತು ಮಾಡಿದ್ದಾರೆ. ಮಹಿಳೆಯು ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರ ಮೇಟಿಯಾಗಿ ಕೆಲಸ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದರೆ ಅವರ ನಾಯಕತ್ವದಲ್ಲಿ ಯಾವ ಕಾರ್ಮಿಕರೂ ಕೆಲಸಕ್ಕೆ ಹೋಗದಂತೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

‘ನನ್ನ ಪತಿಯನ್ನು ಮಾರಿಗುಡಿ ಅಂಗಳಕ್ಕೆ ಕರೆಸಿ ಬೆದರಿಸಿದ್ದಾರೆ. ಗ್ರಾಮದಿಂದ ದೂರವಿಟ್ಟು ₹ 25 ಸಾವಿರ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಸೋಮವಾರ ನಾನು ಪಿಡಿಒ ಭೇಟಿಯಾಗಲು ಪಂಚಾಯಿತಿ ಕಚೇರಿಗೆ ತೆರಳಿದ್ದೆ. ನಾಮಪತ್ರ ಸಲ್ಲಿಸುವ ಉದ್ದೇಶದಿಂದಲೇ ತೆರಳಿದ್ದೇನೆ ಎಂದು ತಿಳಿದ ಗ್ರಾಮದ 10ಕ್ಕೂ ಹೆಚ್ಚು ಮಂದಿ ನನ್ನನ್ನು ಹಿಂಬಾಲಿಸಿಕೊಂಡು ಬಂದರು. ಸ್ಪರ್ಧೆ ಮಾಡುವ ಬಗ್ಗೆ ಪತಿಯ ಜೊತೆ ಮಾತನಾಡಿ ನಿರ್ಧರಿಸುತ್ತೇನೆ’ ಎಂದು ಮಹಿಳೆ ತಿಳಿಸಿದರು.

***

ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸ

- ನಂದನಾ ರೆಡ್ಡಿ

ಗ್ರಾಮ ಪಂಚಾಯಿತಿ ಸದಸ್ಯತ್ವವನ್ನು ಬಿಕರಿಗೆ ಇಡುವ ಸಂಸ್ಕೃತಿ ಇದೀಗ ಪಾರಮ್ಯ ಮುಟ್ಟಿದೆ. ಸಾಮಾನ್ಯ ಜನರು ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವುದು ಆಗದ ಮಾತು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಆರಂಭದಲ್ಲಿ ಪಂಚಾಯಿತಿ ಚುನಾವಣೆ ಕಣಕ್ಕಿಳಿಯಲು ಹತ್ತು ಸಾವಿರ ರೂಪಾಯಿ ಇದ್ದರೆ ಸಾಕಿತ್ತು. ಈಗ ಅದು ಎಷ್ಟೋ ಲಕ್ಷಗಳಿಗೆ ತಲುಪಿದೆ. ‘ಅವಿರೋಧ ಆಯ್ಕೆ’ ಹೆಸರಿನಲ್ಲಿ ಮತಗಳನ್ನು ದುಡ್ಡುಕೊಟ್ಟು ಕೊಂಡುಕೊಳ್ಳುವ ಹಂತಕ್ಕೆ ಚುನಾವಣೆ ತಲುಪಿರುವುದು ವಿಷಾದನೀಯ.

ಹಣದ ಆಮಿಷವೊಡ್ಡಿ ಅವಿರೋಧವಾಗಿ ಆಯ್ಕೆಯಾಗುವ ಪದ್ಧತಿಯು, ಕಾಯ್ದೆ ಪ್ರಕಾರ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಚುನಾವಣಾ ಆಯೋಗವು ಇಂಥವರನ್ನು ಅನರ್ಹಗೊಳಿಸಿ, ಕಠಿಣ ಕ್ರಮ ಜರುಗಿಸಬೇಕು. ಇಂತಹ ಬೆಳವಣಿಗೆಗಳ ಬಗ್ಗೆ ನಾವು ಈಗಾಗಲೇ ಆಯೋಗದ ಗಮನಕ್ಕೆ ತಂದಿದ್ದೇವೆ. ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವುದನ್ನು ಎದುರು ನೋಡುತ್ತಿದ್ದೇವೆ.

ಪಕ್ಷರಹಿತವಾಗಿ ನಡೆಯಬೇಕಿದ್ದ ಗ್ರಾಮ ಪಂಚಾಯಿತಿ ಚುನಾವಣೆಗೆ ರಾಜಕೀಯ ಪಕ್ಷಗಳು ಅಡಿಯಿಟ್ಟಿರುವುದೇ ಇದೆಲ್ಲಕ್ಕೂ ಕಾರಣ. ಗ್ರಾಮಸಭೆಗಳಿಗೆ ತೀರ್ಮಾನ ತೆಗೆದುಕೊಳ್ಳುವ ಹಕ್ಕಿದೆ. ಬಜೆಟ್, ಯೋಜನೆ ಮೊದಲಾದ ವಿಷಯಗಳಲ್ಲಿ ತೀರ್ಮಾನ ತೆಗೆದುಕೊಳ್ಳಲು ಜನರು ಹಕ್ಕುದಾರರು. ಗ್ರಾಮಸಭೆಯಲ್ಲಿ ಏನು ತೀರ್ಮಾನವಾಗುತ್ತದೆಯೋ ಅದನ್ನು ಆಧರಿಸಿ ಗ್ರಾಮ ಪಂಚಾಯಿತಿಯವರು ಆಡಳಿತ ನಡೆಸಬೇಕು. ಜನರ ನೇರ ಸಹಭಾಗಿತ್ವ ಇರುವ ಇದುವೇ ನಿಜವಾದ ಪ್ರಜಾಪ್ರಭುತ್ವ. ತಮ್ಮ ನಿಯಂತ್ರಣಕ್ಕೆ ಸಿಗುವುದಿಲ್ಲ ಎಂಬ ಕಾರಣಕ್ಕೆ, ಸರ್ಕಾರಗಳಿಗೆ, ರಾಜಕೀಯ ಪಕ್ಷಗಳಿಗೆ ಗ್ರಾಮ ಪಂಚಾಯಿತಿ ವ್ಯವಸ್ಥೆಯೇ ಬೇಡವಾಗಿದೆ. ಹೀಗಾಗಿ ಚುನಾವಣೆ ತಡೆಯಲು ನಾನಾ ಯತ್ನಗಳು ನಡೆದವು. ದಿನಾಂಕ ಘೋಷಣೆ ವಿಳಂಬ, ಕೋರ್ಟ್‌ಗೆ ಮೊರೆ, ಕೋರ್ಟ್‌ನಲ್ಲೂ ತಡ, ಕೋವಿಡ್ ಪಸರಿಸುವಿಕೆ ಮೊದಲಾದ ಸಬೂಬು ಹೇಳಲಾಯಿತು. ಕೊನೆಗೂ ಚುನಾವಣೆ ಘೋಷಣೆಯಾಯಿತು. ಅಂತಿಮ ಅಸ್ತ್ರವಾಗಿ, ಹಣಕೊಟ್ಟು ಅಭ್ಯರ್ಥಿಗಳನ್ನು ನಿಯಂತ್ರಣಕ್ಕೆ ತೆಗೆದು ಕೊಳ್ಳುವ ಯತ್ನಕ್ಕೆ ಎಲ್ಲ ರಾಜಕೀಯ ಪಕ್ಷಗಳು ಇಳಿದಿವೆ.

ಅವಿರೋಧವಾಗಿ ಆಯ್ಕೆ ಬಯಸಿದ ಅಭ್ಯರ್ಥಿಯೊಬ್ಬ ಗ್ರಾಮಕ್ಕೆ ನೀಡುವ ಇಂತಿಷ್ಟು ಲಕ್ಷ ಹಣವು ರಾಜಕೀಯ ಪಕ್ಷಗಳು ನೀಡಿದ ಹಣ. ಅಂದರೆ, ಹಣ ನೀಡಿದ ಪಕ್ಷವು ಗ್ರಾಮಪಂಚಾಯಿತಿ ಆಡಳಿತದಲ್ಲಿ ಪರೋಕ್ಷವಾಗಿ ಹಸ್ತಕ್ಷೇಪ ಮಾಡಿದಂತಾಯಿತು. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ. ಒಂದೊಮ್ಮೆ ಅವಿರೋಧ ಆಯ್ಕೆ ಬಯಸುವ ಅಭ್ಯರ್ಥಿಯೇ ಸ್ವಂತ ಹಣ ನೀಡಿದ್ದರೆ, ಅದರ ಹತ್ತು ಪಟ್ಟು ಹಣವನ್ನು ಆತ ಬಾಚಿಕೊಳ್ಳದೇ ಇರುತ್ತಾನೆಯೇ? ಭ್ರಷ್ಟಾಚಾರಿ ಹುಟ್ಟುವ ಮೊದಲ ಹಂತ ಇದು.

ಕೋವಿಡ್ ಕಾರಣವೊಡ್ಡಿ ಚುನಾವಣೆ ತಪ್ಪಿಸಲು ಯತ್ನಿಸಿದವರು ಅದೇ ಕಾರಣಕ್ಕೆ ಗ್ರಾಮಸಭೆ ನಡೆಸಲು ನಿರಾಕರಿಸಿದರೂ ಅಚ್ಚರಿಯಿಲ್ಲ. ಇದರರ್ಥ, ಗ್ರಾಮಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಜನರ ಹಕ್ಕನ್ನು ದುಡ್ಡುಕೊಟ್ಟು ಕಸಿದುಕೊಂಡಂತಾಯಿತು. ಒಬ್ಬನೇ ಅಭ್ಯರ್ಥಿ ಇದ್ದರೂ ಚುನಾವಣೆ ನಡೆಸಬೇಕು. ಚುನಾವಣೆಯೇ ಇಲ್ಲವೆಂದರೆ ಪ್ರಜಾಪ್ರಭುತ್ವಕ್ಕೆ ಅರ್ಥವೆಲ್ಲಿದೆ? ಚುನಾವಣೆ ನಡೆಯದಂತೆ ತಡೆಯುವುದರ ಹಿಂದೆ ಜನರನ್ನು ಕತ್ತಲಲ್ಲಿ ಇರಿಸುವ ಹುನ್ನಾರವೂ ಅಡಗಿದೆ. ಪ್ರಜಾಪ್ರಭುತ್ವವನ್ನು ಹೇಗೆ ಸಾಯಿಸಬಹುದು ಎಂಬುದಕ್ಕೆ ಇದು ನಿದರ್ಶನ.

ಲೇಖಕರು: ಸಂಚಾಲಕರು, ಗ್ರಾಮ ಪಂಚಾಯತ್‌ ಹಕ್ಕೊತ್ತಾಯ ಆಂದೋಲನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT