ಶುಕ್ರವಾರ, ಆಗಸ್ಟ್ 12, 2022
27 °C

ಅನುಭವ ಮಂಟಪ | ‘ಉಳ್ಳವರಿಗಲ್ಲ, ಉಳುವ ಆಸಕ್ತರಿಗೆ ಜಮೀನು’

ಎಸ್‌.ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

prajavani

ಜಗತ್ತು 45 ವರ್ಷಗಳ ಹಿಂದೆ ಇದ್ದಂತಿಲ್ಲ, ಕಾಲ ಬದಲಾಗಿದೆ. ಕಂಪ್ಯೂಟರ್, ಆಧುನಿಕ ತಂತ್ರಜ್ಞಾನ, ಡಿಜಿಟಲ್‌ ವ್ಯವಸ್ಥೆ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಆದರೆ, ಕೃಷಿ ಕ್ಷೇತ್ರ ಏಕೆ ಬದಲಾಗಬಾರದು. ಕೃಷಿಯಲ್ಲಿ ಆಸಕ್ತಿ ಇರುವವರು, ಆಧುನಿಕ ಚಿಂತನೆಯುಳ್ಳವರು ಬೇಸಾಯಕ್ಕೆ ಏಕೆ ಬರಬಾರದು ಎಂದು ಪ್ರಶ್ನಿಸುತ್ತಾರೆ ಕಂದಾಯ ಸಚಿವ ಆರ್‌.ಅಶೋಕ.

* ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ಬಲವಾದ ಕಾರಣವೇನು? ಶ್ರೀಮಂತರಿಗೆ ಕೆಂಪುಹಾಸು ಹಾಕಿ, ಬಡ ರೈತರನ್ನು ಬೀದಿ ಪಾಲು ಮಾಡುವುದೇ ಸರ್ಕಾರದ ಉದ್ದೇಶ ಎಂಬ ಆರೋಪಗಳು ಕೇಳಿಬರುತ್ತಿವೆ?

ಇದು ಶುದ್ಧ ಸುಳ್ಳು. ಆರೋಪಗಳಲ್ಲಿ ಕಿಂಚಿತ್ತೂ ಸತ್ಯಾಂಶವಿಲ್ಲ. ಸರ್ಕಾರದ ಸದುದ್ದೇಶವನ್ನು ಕೆಲವರು ತಮ್ಮ ಸೈದ್ಧಾಂತಿಕ ಧೋರಣೆಗೆ ತಕ್ಕಂತೆ ತಿರುಚಿ, ರೈತ ರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ದೇಶದ ಇತರ ರಾಜ್ಯಗಳೂ ಇಂತಹುದೇ ತಿದ್ದುಪಡಿ ಮಾಡಿವೆಯಲ್ಲ. ಎಷ್ಟು ರೈತರು ಭೂಮಿ ಕಳೆದುಕೊಂಡು ಬೀದಿಗೆ ಬಂದಿ ದ್ದಾರೆ. ಎಷ್ಟು ಕೃಷಿ ಜಮೀನನ್ನು ಎಷ್ಟು ಕಾರ್ಪೊರೇಟ್‌ ಕಂಪನಿಗಳು ತಮ್ಮ ಕಪಿಮುಷ್ಟಿಗೆ ತೆಗೆದುಕೊಂಡಿವೆ ಎಂಬುದರ ಲೆಕ್ಕ ಆಕ್ಷೇಪ ಎತ್ತುತ್ತಿರುವವರಲ್ಲಿ ಇದೆಯೇ? ರಾಜ್ಯದಲ್ಲಿ ಕಳೆದ 20 ವರ್ಷಗಳಿಂದ ಉಳುಮೆ ಆಗದೇ ಬೀಳು ಬಿದ್ದಿರುವ ಭೂಮಿಯೇ 22 ಲಕ್ಷ ಹೆಕ್ಟೇರ್‌ಗಳಷ್ಟಿದೆ. ಇದನ್ನು ಹೀಗೇ ಬಿಟ್ಟುಬಿಡ ಬೇಕೇ? ಅಲ್ಲಿ ವ್ಯವಸಾಯ ಆಗಬಾರದೇ? ಕೃಷಿಯಲ್ಲಿ ನಮ್ಮ ರಾಜ್ಯ ಓಬಿರಾಯನ ಕಾಲದಲ್ಲೇ ಉಳಿಯಬೇಕೇ. ನೀಲಗಿರಿ ಬೆಳೆದು ಹಾಳುಗೆಡವಬೇಕೇ?

* ಉಳ್ಳವರು ರೈತರಿಂದ ಫಲವತ್ತಾದ ಭೂಮಿ ಕಸಿದುಕೊಳ್ಳುತ್ತಾರೆ. ಅವರ ಕಣ್ಣು ಇರುವುದು ಫಲವತ್ತಾದ ಭೂಮಿಯ ಮೇಲೆ ಹೊರತು ಬೀಳು ಭೂಮಿಯ ಮೇಲಲ್ಲ ಎಂಬ ಆರೋಪವಿದೆಯಲ್ಲ?

ಈ ವಾದವೇ ನಿಜ ಅಂದುಕೊಳ್ಳುವುದಾದರೆ, ನೆರೆಯ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರಗಳಲ್ಲೂ ರೈತರು ಫಲವತ್ತಾದ ಭೂಮಿ ಕಳೆದುಕೊಳ್ಳಬೇಕಿತ್ತಲ್ಲ. ಒಂದು ವೇಳೆ ಹಾಗೆ ಆಗಿದ್ದರೆ ರೈತರು ಸುಮ್ಮನಿರುತ್ತಿದ್ದರೆ? ಬಂಡವಾಳಶಾಹಿಗಳ ವಿರುದ್ಧ ಕ್ರಾಂತಿಯೇ ಆಗಬೇಕಿತ್ತು. ಅಂತಹದ್ದೇನೂ ಸಂಭವಿಸಿಲ್ಲವಲ್ಲ. ಬದಲಿಗೆ ಆ ರಾಜ್ಯಗಳು ಕೃಷಿಯಲ್ಲಿ ತುಂಬಾ ಮುಂದಕ್ಕೆ ಹೋಗಿವೆ. ಗುಜರಾತ್‌ನಿಂದ‌ ಕೃಷಿ ಉತ್ಪನ್ನಗಳ ರಫ್ತು ಪ್ರಮಾಣ ಹೆಚ್ಚಿದೆ. ತಮಿಳುನಾಡು ಮತ್ತು ಆಂಧ್ರಪ್ರದೇಶ ಕೂಡ ಮುನ್ನಡೆ ಸಾಧಿಸಿವೆ.

* ಈ ತಿದ್ದುಪಡಿಯಿಂದ ರಾಜ್ಯದ ಕೃಷಿ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ಸಕಾರಾತ್ಮಕ ಬದಲಾವಣೆ ಆಗಬಹುದು ಎಂಬುದು ನಿಮ್ಮ ನಿರೀಕ್ಷೆ?

ಉಳ್ಳವರಿಗೆ ಭೂಮಿ ಎಂಬ ಅಪಪ್ರಚಾರ ನಡೆಯು ತ್ತಿದೆ. ಉಳ್ಳವರಿಗೆ ಅಲ್ಲ, ಉಳುಮೆಯಲ್ಲಿ ಆಸಕ್ತಿ ಇರುವವರಿಗೆ ಭೂಮಿ. ಕೃಷಿ ಆಸಕ್ತ ವಿದ್ಯಾವಂತರು ಜಮೀನು ಖರೀದಿಸಿ, ಕೃಷಿ ಮಾಡಿದರೆ ತಪ್ಪೇನು? ವ್ಯವಸಾಯದ ಬಗೆಗಿನ ತುಡಿತಕ್ಕೆ ಇಂಬುಕೊಟ್ಟಂತೆ ಆಗುತ್ತದೆ ಅಲ್ಲವೇ? ಕೃಷಿ ಆಧರಿಸಿದ ಉದ್ಯಮಗಳನ್ನೂ ಆರಂಭಿಸಬಹುದು. ಟೊಮೆಟೊ ಬೆಳೆಯುವ ಪ್ರದೇಶದ ಬಳಿಯೇ ಕೆಚಪ್‌ ಘಟಕ ಸ್ಥಾಪಿಸ ಬಹುದು. ಭತ್ತ ಬೆಳೆಯುವ ಪ್ರದೇಶದಲ್ಲೇ ರೈಸ್‌ ಮಿಲ್‌ ಮತ್ತು ಪ್ಯಾಕಿಂಗ್‌ ಘಟಕ ಸ್ಥಾಪಿಸಬಹುದು. ಹೀಗೆ ವಿವಿಧ ಕೃಷಿ ಉತ್ಪನ್ನಗಳಿಗೆ ಪೂರಕ ಉದ್ಯಮ, ಶೀತಲಗೃಹ, ಸಂಸ್ಕರಣ ಘಟಕಗಳನ್ನು ಸ್ಥಾಪಿಸಬಹುದು. ಪ್ರತಿವರ್ಷ ಕೃಷಿ ಪದವಿ ಪೂರ್ಣಗೊಳಿಸಿ ಬರುವ ವಿದ್ಯಾವಂತ ಯುವಕರಿಗೆ ಹೊಸ ಅವಕಾಶದ ಬಾಗಿಲುಗಳೂ ತೆರೆಯುತ್ತವೆ. ವಿದ್ಯಾವಂತರಿಗೆ ಬಾಗಿಲು ಮುಚ್ಚುವ ಹುನ್ನಾರ ನಡೆಸಬಾರದು.

* ನಗರ ಪ್ರದೇಶಗಳಿಂದ ವಿದ್ಯಾವಂತ ಯುವಕರು ಕೃಷಿಯತ್ತ ಆಕರ್ಷಿತರಾಗಿ ಬರುತ್ತಿದ್ದಾರೆ ಎಂದು ಹೇಳಿದ್ದೀರಿ. ಅದು ಎಷ್ಟರಮಟ್ಟಿಗೆ ನಿಜ?

ಹೌದು, ಸಾಕಷ್ಟು ಜನ ಐಟಿ–ಬಿಟಿ ಮತ್ತು ಇತರ ಉದ್ಯೋಗಗಳಲ್ಲಿ ಇದ್ದು ಸ್ವಲ್ಪ ಹಣ ಮಾಡಿಕೊಂಡ ಯುವಕರು ಹೊಸ ಆಲೋಚನೆ, ಕೃಷಿ ಪದ್ಧತಿಯನ್ನು ಇಟ್ಟುಕೊಂಡು ವ್ಯವಸಾಯದತ್ತ ಬರುತ್ತಿದ್ದಾರೆ. ತೋಟಗಾರಿಕೆ ಮತ್ತು ಬೇಸಾಯದ ಮೂಲಕ ವರ್ಷಕ್ಕೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಗಳಿಸುವ ಕೆಲವರು ನನಗೆ ಗೊತ್ತಿದ್ದಾರೆ. ನಮ್ಮಲ್ಲಿ ಹೊಸತನವನ್ನು ವಿರೋಧಿಸುವವರು ಇಸ್ರೇಲ್‌ಗೆ ಹೋಗಿ ಅಲ್ಲಿನ‌ ಕೃಷಿ ಪದ್ಧತಿ ಬಗ್ಗೆ ಮೂಗಿನ ಮೇಲೆ ಬೆರಳಿಟ್ಟು ಮಾತನಾಡುತ್ತಾರೆ. ಅಂತಹ ‘ಕ್ರಾಂತಿ’ ಇಲ್ಲಿ ಮಾಡಲು ಹೊರಟರೆ ಅಡ್ಡಗಾಲು ಹಾಕುತ್ತಾರೆ.

* ಭೂಮಿಯನ್ನು ರೆಸಾರ್ಟ್‌, ಹೋಟೆಲ್‌, ರಿಯಲ್‌ ಎಸ್ಟೇಟ್‌ಗಳಿಗೆ ಬಳಸಿದರೆ?

ಕೃಷಿ ಭೂಮಿ ಹಸಿರು ವಲಯದಲ್ಲಿ ಬರುವುದರಿಂದ ಅದಕ್ಕೆ ಅವಕಾಶವೇ ಇರುವುದಿಲ್ಲ. ಕೃಷಿ ಚಟುವಟಿಕೆ ಬಿಟ್ಟು ಬೇರೆ ಏನೂ ಮಾಡಲು ಸಾಧ್ಯವಿಲ್ಲ. ಬೀಳುಭೂಮಿ 108 ಎಕರೆಗಿಂತ ಜಾಸ್ತಿ ಖರೀದಿಸುವಂತಿಲ್ಲ. ತೋಟ, ಗದ್ದೆ 54 ಎಕರೆಗಿಂತ
ಜಾಸ್ತಿ ಖರೀದಿಸಲಾಗದು. ಫಲವತ್ತಾದ ಭೂಮಿಯನ್ನು ಯಾವ ರೈತನೂ ಮಾರುವುದಿಲ್ಲ.

ಬಾವಿಯೊಳಗಿನ ಕಪ್ಪೆಗಳು

‘ನಾವು ಹಳೆ ಪದ್ಧತಿಯಲ್ಲೇ ಸಾಗಬೇಕು. ಹೊಸ ವ್ಯವಸ್ಥೆ, ಚಿಂತನೆಗಳು ಬೇಡ ಎನ್ನುವುದಾದರೆ, ಅದು ಬಾವಿಯೊಳಗಿನ ಕಪ್ಪೆಯ ಮನಸ್ಥಿತಿ ಎನ್ನಬೇಕಾಗುತ್ತದೆ. ನಾವು ಎಲ್ಲಿ ಇರುತ್ತೇವೆಯೋ ಅಲ್ಲೇ ಉಳಿಯಬೇಕಾಗುತ್ತದೆ. ಕೆಲವರು ತಾವು ಮಾತ್ರ ಬುದ್ದಿವಂತರು, ಉಳಿದ ರಾಜ್ಯದ ಜನರು ದಡ್ಡರು ಎಂದು ಭಾವಿಸಿದಂತಿದೆ. ಎಷ್ಟೇ ಉತ್ತಮ ವಿಚಾರಗಳಿದ್ದರೂ ಅದನ್ನು ವಿರೋಧಿಸದಿದ್ದರೆ ಕೆಲವರಿಗೆ ನಿದ್ದೆಯೇ ಬರುವುದಿಲ್ಲ. ವಿರೋಧಕ್ಕಾಗಿ ವಿರೋಧಿಸುತ್ತಾರೆ. ಈ ಕಾಯ್ದೆಗೆ 1992 ರಲ್ಲಿ ಮತ್ತು 2015 ರಲ್ಲಿ ತಿದ್ದುಪಡಿ ಮಾಡಲಾಗಿತ್ತು. ಇದು ಮೂರನೇ ಬಾರಿ. ಆಗ ಇಲ್ಲದ ವಿರೋಧ ಈಗ ಏಕೆ?

‘ಕಳೆದ 45 ವರ್ಷಗಳಿಂದ ಅಧಿಕಾರಿಗಳಿಗೆ ಕಾಸು ಕೊಟ್ಟು ಹಣವಂತರು ಕೃಷಿ ಭೂಮಿ ಖರೀದಿಸುತ್ತಲೇ ಬಂದಿದ್ದಾರೆ. ಇನ್ನು ಮುಂದೆ ಈ ಅಧಿಕಾರಿಗಳಿಗೆ ಕಾಸು ಮಾಡಲು ಆಗುವುದಿಲ್ಲ. ಹಿಂಬಾಗಿಲಿನಿಂದ ನಡೆಯುವುದನ್ನು ಕಣ್ಣು ಮುಚ್ಚಿ ಒಪ್ಪಿಕೊಂಡು ಹೋಗಲು ಸಾಧ್ಯವಿಲ್ಲ. ಅಧಿಕಾರಿಗಳು ಹಣ ಮಾಡುವುದಕ್ಕೆ ತಿದ್ದುಪಡಿಯಿಂದ ಕಡಿವಾಣ ಬೀಳುತ್ತದೆ’ ಎಂಬುದು ಅಶೋಕ ಅವರ ಪ್ರತಿಪಾದನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು