ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಕಾರ್ಮಿಕ ಸಂಹಿತೆಗೆ ಉದ್ಯಮಿಗಳ ಸ್ವಾಗತ

Last Updated 24 ಸೆಪ್ಟೆಂಬರ್ 2020, 20:47 IST
ಅಕ್ಷರ ಗಾತ್ರ
ADVERTISEMENT
""
""
""
""

ಹೊಸ ಕಾರ್ಮಿಕ ಸಂಹಿತೆಯು ಕಾರ್ಮಿಕ ವಿರೋಧಿಯಾಗಿದೆ ಎಂಬ ವಾದವನ್ನು ಉದ್ಯಮಿಗಳು ಒಪ್ಪುವುದಿಲ್ಲ. ಬದಲಿಗೆ ಇದು ಉದ್ದಿಮೆಗಳು ಮತ್ತು ಕಾರ್ಮಿಕರು ಇಬ್ಬರಿಗೂ ಸಹಕಾರಿ ಎಂದು ಅವರು ಹೇಳುತ್ತಾರೆ. ಮಾಲೀಕರು ಮತ್ತು ಕಾರ್ಮಿಕರ ನಡುವೆ ಸಮತೋಲನ ಕಾಪಾಡುವಲ್ಲಿ ಸಂಹಿತೆ ಬಹುತೇಕ ಯಶಸ್ವಿಯಾಗಿದೆ. ಜತೆಗೆ, ಕಾರ್ಮಿಕರಿಗೆ ಇನ್ನಷ್ಟು ಭದ್ರತೆಗಳು ಲಭಿಸಿವೆ ಎಂದು ಅವರು ಹೇಳುತ್ತಾರೆ.

ಬೆಂಗಳೂರು: ‘ಕೇಂದ್ರ ಸರ್ಕಾರವು ಜಾರಿಗೆ ತರಲು ಹೊರಟಿರುವ ನೂತನ ಕಾರ್ಮಿಕ ಸಂಹಿತೆಗಳು ಉದ್ದಿಮೆಗಳ ಬೆಳವಣಿಗೆಗೆ ಸಹಕಾರಿಯಾಗಲಿವೆ. ಆದರೆ, ಕೈಗಾರಿಕೆಗಳ ಹಿತಾಸಕ್ತಿಯ ದೃಷ್ಟಿಯಿಂದ ಇನ್ನಷ್ಟು ಕಠಿಣ ನಿಯಮಗಳನ್ನು ನಿರೀಕ್ಷಿಸಿದ್ದೆವು’ ಎಂದು ಉದ್ಯಮಿಗಳು ಹೇಳಿದ್ದಾರೆ.

ಸಂಘಟಿತ ವಲಯದಲ್ಲಿ ಮತ್ತು ಅಸಂಘಟಿತ ವಲಯದಲ್ಲಿ ಕಾರ್ಮಿಕರ ಉತ್ಪಾದಕತೆಯನ್ನು ಹೆಚ್ಚಿಸಲು ಈ ಕಾನೂನುಗಳು ನೆರವಾಗುತ್ತದೆ ಎಂದು ಹಲವು ಉದ್ಯಮಿಗಳು ಹೇಳಿದ್ದಾರೆ.‘ಈ ಕಾನೂನು ಜಾರಿಗೆ ಬಂದರೆ ನಮಗೆ ಅನುಕೂಲವೇ ಆಗುತ್ತದೆ’ ಎನ್ನುತ್ತಾರೆ ಬೆಂಗಳೂರಿನ ನೆಲಮಂಗಲ ಮತ್ತು ಮಹದೇವಪುರದಲ್ಲಿ ಪ್ರಿಕಾಸ್ಟ್ ಆರ್‌ಸಿಸಿ ಕಿಟಕಿ ತಯಾರಿಕಾ ಘಟಕ ಹೊಂದಿರುವ ವಿಠ್ಠಲ್ ಕೊಠಾರಿಯ. ವಿಠ್ಠಲ್ ಅವರ ಮಾಲೀಕತ್ವದ ಶಿವಾಂತ್ ಸಿಮೆಂಟ್ ಆರ್ಟಿಕಲ್ಸ್‌ನ ಘಟಕಗಳಲ್ಲಿ ಪ್ರಿಕಾಸ್ಟ್ ಆರ್‌ಸಿಸಿ ಕಿಟಕಿ ಫ್ರೇಂಗಳು, ಪ್ರಿಕಾಸ್ಟ್‌ ಆರ್‌ಸಿಸಿ ಬಾಗಿಲ ಫ್ರೇಂಗಳು, ಪ್ರಿಕಾಸ್ಟ್ ಆರ್‌ಸಿಸಿ ಬೀಮ್‌ಗಳನ್ನು ತಯಾರಿಸಲಾಗುತ್ತದೆ.

‘ನಮ್ಮಲ್ಲಿ 260 ಕಾರ್ಮಿಕರು ಇದ್ದಾರೆ. ಇದರಲ್ಲಿ ಹಲವರು ಗುತ್ತಿಗೆ ನೌಕರರು. ನಮ್ಮದು ಕಠಿಣ ಕೆಲಸ, ಉತ್ತಮ ಸಂಬಳವನ್ನೂ ನೀಡುತ್ತೇವೆ. ಆದರೆ ವರ್ಷಪೂರ್ತಿ ಕೆಲಸ ಇರುವುದಿಲ್ಲ. ಆದರೂ ಕಾರ್ಮಿಕರನ್ನು ಕೆಲಸದಿಂದ ತೆಗೆಯುವುದಿಲ್ಲ. ಆದರೆ ಕೆಲವು ಕಾರ್ಮಿಕರು ಒಪ್ಪಂದವನ್ನು ಮುರಿದು ಕೆಲಸ ಬಿಡುತ್ತಾರೆ. ನಮ್ಮ ಸಂಸ್ಥೆಯಲ್ಲಿ ಬಳಸುವ ತಂತ್ರಜ್ಞಾನಗಳನ್ನು ತಿಳಿದುಕೊಂಡು, ಪ್ರತಿಸ್ಪರ್ಧಿ ಕಂಪನಿಗಳಿಗೆ ನೀಡಿದ ಪ್ರಕರಣಗಳೂ ಇವೆ. ಇವನ್ನೆಲ್ಲಾ ಕಾನೂನಾತ್ಮಕವಾಗಿ ಎದುರಿಸಬೇಕು. ನಮಗೆ ಯಾವುದೇ ಪ್ರಾಜೆಕ್ಟ್‌ ಇಲ್ಲದೇ ಕಾರ್ಮಿಕರು ಸುಮ್ಮನೆ ಕೂರುವ ಸಂದರ್ಭವಿದ್ದಾಗಲೇ ಹೀಗೆ ಆಗಿದೆ. ಕಾರ್ಮಿಕರನ್ನು ಕೆಲಸದಿಂದ ತೆಗೆಯಲು ಹಲವು ನಿಯಮಗಳನ್ನು ಪಾಲಿಸಬೇಕಿತ್ತು. ಇದಕ್ಕೆಲ್ಲಾ ಒಂದೆರಡು ತಿಂಗಳೇ ಹಿಡಿಯುತ್ತಿತ್ತು. ನೂತನ ಕಾನೂನಿನಲ್ಲಿ ಇದನ್ನು ಸುಲಭ ಮಾಡಲಾಗಿದೆ ಎಂದು ನಮ್ಮ ವಕೀಲರು ಹೇಳಿದ್ದಾರೆ’ ಎಂದು ವಿಠ್ಠಲ್ ಕೊಠಾರಿಯ ಹೇಳಿದರು.

‘ಹೊಸ ಕಾನೂನಿನಲ್ಲಿ ಫಿಕ್ಸ್ಡ್‌ ಟರ್ಮ್ ಎಂಪ್ಲಾಯ್ಮೆಂಟ್‌ಗೆ (ನಿಗದಿತ ಅವಧಿಯ ಉದ್ಯೋಗ) ಅವಕಾಶವಿದೆ. ನಮಗೆ ಪ್ರಾಜೆಕ್ಟ್‌ಗಳು ಇದ್ದಾಗ ಮಾತ್ರ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲು, ಪ್ರಾಜೆಕ್ಟ್ ಮುಗಿದ ನಂತರ ಕೆಲಸದಿಂದ ತೆಗೆಯಲು ಅವಕಾಶ ಸಿಗಲಿದೆ. ಇದು ಉದ್ದಿಮೆಯ ಬೆಳವಣಿಗೆಯ ಉದ್ದೇಶದಿಂದ ಸಹಕಾರಿಯಾಗಲಿದೆ. ಇದು ಕಾರ್ಮಿಕರಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲಿದೆ. ನಮ್ಮ ಉದ್ಯಮವನ್ನು ವಿಸ್ತರಿಸಲೂ ಅನುಕೂಲವಾಗಲಿದೆ’ ಎನ್ನುತ್ತಾರೆ ವಿಠ್ಠಲ್.

‘ಕಾರ್ಮಿಕ ಸಂಘಟನೆಗಳಿಗೆ ಸಂಬಂಧಿಸಿದ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಬೇಕಿತ್ತು. 2019ರಲ್ಲಿ ಮಂಡಿಸಿದ್ದ ಮಸೂದೆಯಲ್ಲಿ ‘ಒಟ್ಟು ಕಾರ್ಮಿಕರಲ್ಲಿ ಶೇ 75ರಷ್ಟು ಮಂದಿಯ ಸದಸ್ಯತ್ವ ಇರುವ ಕಾರ್ಮಿಕ ಸಂಘಟನೆಗೆ ಮಾತ್ರ ಆಡಳಿತ ಮಂಡಳಿ ಜತೆ ಮಾತುಕತೆ ನಡೆಸುವ ಹಕ್ಕು ಸಿಗುತ್ತದೆ ಎಂದು ಹೇಳಲಾಗಿತ್ತು. ಈಗ ಇದನ್ನು ಶೇ 51ಕ್ಕೆ ಇಳಿಸಲಾಗಿದೆ. ಮೊದಲಿದ್ದ ಮಿತಿಯನ್ನೇ ಉಳಿಸಿಕೊಳ್ಳಬೇಕಿತ್ತು’ ಎನ್ನುತ್ತಾರೆ ಬೆಂಗಳೂರಿನಲ್ಲಿಡ್ರೀಮ್‌ಮೇಕರ್ಸ್‌ ಪ್ರೈವೇಟ್ ಲಿಮಿಟೆಡ್ ಎಂಬ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಹೊಂದಿರುವ ಬಾಲಕೃಷ್ಣ ಎಂ. ‘ಫಿಕ್ಸ್ಡ್ ಟರ್ಮ್ ಎಂಪ್ಲಾಯ್ಮೆಂಟ್‌’ ಎಂಬ ಹೊಸ ಪರಿಕಲ್ಪನೆಯನ್ನು ಈ ಕಾನೂನಿನಲ್ಲಿ ತರಲಾಗಿದೆ. ಅಗತ್ಯವಿದ್ದಾಗ ಕಾರ್ಮಿಕರನ್ನು ತೆಗೆದುಕೊಳ್ಳುವುದು, ಕೆಲಸ ಮುಗಿದಾಗ ಕೆಲಸದಿಂದ ತೆಗೆಯಬಹುದು ಎಂದು ಕಾನೂನಿನಲ್ಲಿ ವಿವರಿಸಲಾಗಿದೆ. ಇದೇ ಸ್ವರೂಪದ ಪದ್ಧತಿ ಇವೆಂಟ್ ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ. ಆದರೆ ಅವುಗಳ ನಿಯಮಗಳಲ್ಲಿ ಏಕರೂಪತೆ ಇಲ್ಲ’ ಎಂದು ಬಾಲಕೃಷ್ಣ ವಿವರಿಸಿದರು.

‘ಈ ಸ್ವರೂಪದ ಕೆಲಸಗಳನ್ನು ಫಿಕ್ಸ್ಡ್‌ ಟರ್ಮ್ ಎಂಪ್ಲಾಯ್ಮೆಂಟ್‌ ಹೆಸರಿನಲ್ಲಿ ಈ ಕಾನೂನು ವ್ಯವಸ್ಥಿತಗೊಳಿಸುತ್ತದೆ. ಈವರೆಗೆ ಸ್ಪಷ್ಟ ನಿಯಮಗಳು ಇಲ್ಲದೇ ಇದ್ದದ್ದರಿಂದ ಕಾರ್ಮಿಕರು ಮತ್ತು ಮಾಲೀಕರ ಮಧ್ಯೆ ಸಂಘರ್ಷಕ್ಕೆ ಕಾರಣವಾಗುತ್ತಿತ್ತು. ಎಷ್ಟೋ ಬಾರಿ ಕಾರ್ಮಿಕ ಆಯೋಗದ ಅಧಿಕಾರಗಳ ಮಧ್ಯಪ್ರವೇಶದಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಪರಿಸ್ಥಿತಿ ಎದುರಾಗುತ್ತಿತ್ತು. ಈಗ ಈ ಸ್ವರೂಪದ ಕೆಲಸಗಳಿಗೆ ನಿಯಮಗಳನ್ನು ರಚಿಸಿರುವುದರಿಂದ ಇಂತಹ ಸಂಘರ್ಷ ನಡೆಯುವ ಸಾಧ್ಯತೆ ಕಡಿಮೆ. ಇದು ಸ್ವಾಗತಾರ್ಹ’ ಎಂದು ಬಾಲಕೃಷ್ಣ ಹೇಳಿದರು.

ಬಾಲಕೃಷ್ಣ

‘ಮುಷ್ಕರ ನಡೆಸದೇ ಇರುವ ಕಾರ್ಮಿಕರ ಮೇಲೆಮುಷ್ಕರ ನಡೆಸುತ್ತಿರುವ ಕಾರ್ಮಿಕರು ಒತ್ತಡ ಮತ್ತು ಬೆದರಿಕೆ ಹೇರುವುದನ್ನು ನೂತನ ಕಾನೂನು ತಡೆಯುತ್ತದೆ. ನಮ್ಮಲ್ಲಿ ಕೆಲವು ನೌಕರರು ತುರ್ತು ಸಂದರ್ಭಗಳಲ್ಲಿ ಕೆಲಸವನ್ನು ಬಾಯ್ಕಾಟ್ ಮಾಡುತ್ತಿದ್ದರು. ಕೆಲಸ ಮಾಡಲು ಮುಂದಾಗುತ್ತಿದ್ದ ಬೇರೆ ನೌಕರರನ್ನೂ ತಡೆಯುತ್ತಿದ್ದರು. ಆ ಮೂಲಕ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಮಾಡುತ್ತಿದ್ದರು. ಕೆಲವೇ ನೌಕರರ ಬೆದರಿಕೆ ಮತ್ತು ಒತ್ತಡದ ಕಾರಣ ಹಲವು ನೌಕರರು ಕೆಲಸವನ್ನು ಬಾಯ್ಕಾಟ್ ಮಾಡುತ್ತಿದ್ದರು. ಮುಷ್ಕರ ನಡೆಸುವುದಿಲ್ಲ ಎಂದು ಹೇಳುವ ನೌಕರರಿಗೆ ಮುಷ್ಕರ ನಡೆಸುತ್ತಿರುವ ನೌಕರರಿಂದ ಅಪಾಯವಿತ್ತು. ಆದರೆ, ಮುಷ್ಕರ ನಡೆಸದೇ ಇರುವ ನೌಕರರಿಗೆ ಕಾನೂನಾತ್ಮಕವಾಗಿ ರಕ್ಷಣೆ ನೀಡಲು ಹೊಸ ಕಾನೂನಿನಲ್ಲಿ ಅವಕಾಶವಿದೆ’ ಎಂದು ಬಾಲಕೃಷ್ಣ ಹೇಳಿದರು.

‘ಮುಷ್ಕರ ನಿಯಂತ್ರಣ ಸ್ವಾಗತಾರ್ಹ’
‘ನಮ್ಮ ಮಹದೇವಪುರ ಘಟಕದಲ್ಲಿ 240 ಕಾರ್ಮಿಕರು ಇದ್ದಾರೆ. ಓವರ್‌ ಟೈಂ ಹಂಚಿಕೆ ಮಾಡುವ ವಿಚಾರದಲ್ಲಿ ಮ್ಯಾನೇಜರ್ ಮತ್ತು ಕಾರ್ಮಿಕರ ಮಧ್ಯೆ ಹಲವು ಬಾರಿ ಸಂಘರ್ಷ ನಡೆದಿದೆ. ಮುಷ್ಕರವೂ ನಡೆದಿದೆ. ಸಣ್ಣಪುಟ್ಟ ವಿಚಾರಗಳಿಗೆಲ್ಲಾ ಮುಷ್ಕರ ನಡೆಸಿದ್ದಾರೆ. ಒಂದು ತಾಸು ಕೆಲಸ ನಿಂತರೂ ತೀರಾ ನಷ್ಟವಾಗುತ್ತದೆ. ಕಾರ್ಮಿಕರನ್ನು ಸಮಾಧನಪಡಿಸಿ ಕೆಲಸ ಆರಂಭಿಸುವಷ್ಟರಲ್ಲಿ ಒಂದೆರಡು ತಾಸು ಕಳೆದಿರುತ್ತದೆ. ಮುಷ್ಕರ ನಡೆಸುವುದಕ್ಕೂ 14 ದಿನ ಮೊದಲು ನೋಟಿಸ್‌ ನೀಡಬೇಕೆಂದು ಹೊಸ ನಿಯಮ ಹೇಳುತ್ತದೆ. ಇದು ಅತ್ಯಂತ ಅನುಕೂಲಕರ ನಿಯಮ’ ಎನ್ನುತ್ತಾರೆ ವಿಠ್ಠಲ್ ಕೊಠಾರಿಯ. ‘ನೋಟಿಸ್‌ ನೀಡುವುದರಿಂದ, ಮುಷ್ಕರದ ದಿನದವರೆಗೂ ಸಾಕಷ್ಟು ಸಮಯ ದೊರೆಯುತ್ತದೆ. ಈ ಅವಧಿಯಲ್ಲಿ ಕಾರ್ಮಿಕರ ಜತೆ ಮಾತುಕತೆ ನಡೆಸಿ, ಸಮಸ್ಯೆಯನ್ನು ಬಗೆಹರಿಸಲು ಸಾಕಷ್ಟು ಸಮಯಾವಕಾಶ ದೊರೆಯುತ್ತದೆ. ಇದು ಕಾರ್ಮಿಕರು ಮತ್ತು ಮಾಲೀಕರ ಮಧ್ಯೆ ಸಂಘರ್ಷ ನಡೆಯದಂತೆ ನೋಡಿಕೊಳ್ಳಲು ಸಹಾಯಕವಾಗುತ್ತದೆ. ಹೀಗಾಗಿ ಇದು ಸ್ವಾಗತಾರ್ಹ ಕಾನೂನು. ಕಾನೂನುಬಾಹಿರವಾಗಿ ಮುಷ್ಕರ ನಡೆಸುವ ಕಾರ್ಮಿಕರಿಗೆ ದಂಡ ವಿಧಿಸಲು ಅವಕಾಶವಿದೆ. ದಂಡ ಮತ್ತು ಶಿಕ್ಷೆಯ ಭಯದಿಂದಾದರೂ ಕಾರ್ಮಿಕರು ಪದೇ ಪದೇ ಮುಷ್ಕರ ನಡೆಸುವುದು ತಪ್ಪುತ್ತದೆ’ ಎಂದು ಅವರು ಹೇಳಿದರು.

ಸಿ.ಆರ್‌. ಜನಾರ್ದನ್‌

‘ಕೈಗಾರಿಕೆ ಬೆಳವಣಿಗೆ, ಉದ್ಯೋಗ ಸೃಷ್ಟಿಗೆ ಪೂರಕ’
ಬೆಂಗಳೂರು:
‘ದೇಶದ ಆರ್ಥಿಕತೆಯು ಕುಸಿಯುತ್ತಿರುವಾಗ ಕೈಗಾರಿಕೆಗಳನ್ನು ಉಳಿಸಿ–ಬೆಳೆಸುವ, ಆ ಮೂಲಕ ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ಕೆಲಸ ಆಗಬೇಕಿತ್ತು. ಈ ನಿಟ್ಟಿನಲ್ಲಿ ಕಾರ್ಮಿಕ ಸಂಹಿತೆಯಲ್ಲಿ ಬದಲಾವಣೆ ತಂದಿರುವುದನ್ನು ನಾವು ಸ್ವಾಗತಿಸುತ್ತೇವೆ’ ಎಂದು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ (ಎಫ್‌ಕೆಸಿಸಿಐ) ಅಧ್ಯಕ್ಷ ಸಿ.ಆರ್‌. ಜನಾರ್ದನ್‌ ತಿಳಿಸಿದರು.

‘ಮಾಲೀಕರು– ಕಾರ್ಮಿಕರ ನಡುವೆ ಸೌಹಾರ್ದತೆ ಇದೆ. ಹೊಸ ಕಾರ್ಖಾನೆಗಳು ಅಸ್ತಿತ್ವಕ್ಕೆ ಬಂದಾಗ ಉದ್ಯೋಗ ಸೃಷ್ಟಿಗೆ ಅನುಕೂಲ ಆಗುವಂತೆ ನಿಯಮ ಸಡಿಲಿಸಲಾಗಿದೆ. ಕೈಗಾರಿಕೆಗಳ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಇದರಿಂದ ಹೆಚ್ಚಿನ ಅವಕಾಶ ಸಿಗಲಿದ್ದು, ಆರ್ಥಿಕ ಬೆಳವಣಿಗೆಯೂ ಸಾಧ್ಯವಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹೂಡಿಕೆಗೆ ಉತ್ತೇಜನ
‘ಸಂಹಿತೆಯಲ್ಲಿನ ಸುಧಾರಣೆಗಳಿಂದಾಗಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಸಕಾಲಕ್ಕೆ ಕನಿಷ್ಠ ವೇತನ, ಉಚಿತ ಆರೋಗ್ಯ ತಪಾಸಣೆಯ ಅನುಕೂಲಗಳು ಲಭ್ಯವಾಗಲಿವೆ. ದೇಶ ಮತ್ತು ವಿದೇಶದಿಂದ ಹೊಸದಾಗಿ ಹೂಡಿಕೆಯನ್ನು ಆಕರ್ಷಿಸಲೂ ಉತ್ತೇಜಿಸಲಿದೆ. ಉದ್ದಿಮೆಗಳ ಮಧ್ಯೆ ಸ್ಪರ್ಧಾತ್ಮಕ ವಾತಾವರಣ ಸೃಷ್ಟಿಸುವ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸಿ, ಉದ್ಯೋಗ ಸೃಷ್ಟಿಗೂ ಕಾರಣವಾಗಲಿದೆ’ ಎನ್ನುವುದು ಕಾಸಿಯಾ ಅಧ್ಯಕ್ಷ ಕೆ.ಬಿ. ಅರಸಪ್ಪ ಅವರ ಅಭಿಪ್ರಾಯ.

ಕೆ.ಬಿ. ಅರಸಪ್ಪ

ಎಸ್‌ಎಂಇಗೆ ಕಠಿಣ: ‘ಹೊಸ ಸಂಹಿತೆಯ ನಿಯಮಗಳು ಎಸ್‌ಎಂಇಗಳಿಗೆ ಕಠಿಣವಾಗಿವೆ. ಸಣ್ಣ ಪುಟ್ಟ ತಪ್ಪುಗಳಿಗೂ ಭಾರಿ ದಂಡ ತೆರಬೇಕು. ಉದ್ಯಮಿಗಳು ಶಿಕ್ಷೆ ಎದುರಿಸಬೇಕಾಗುತ್ತದೆ. ಇದರಿಂದ ಇವುಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಎಸ್‌ಎಂಇಗಳು ಕಷ್ಟಕ್ಕೆ ಸಿಲುಕದಂತೆ ನೋಡಿಕೊಳ್ಳಬೇಕು’ ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಅರಸಪ್ಪ ಹೇಳಿದರು.

**
ಸಮತೋಲಿತ ನಿರ್ಧಾರ
‘ಉದ್ದಿಮೆ ಮತ್ತು ಕಾರ್ಮಿಕರು ಇಬ್ಬರನ್ನೂ ಗಮನದಲ್ಲಿ ಇಟ್ಟುಕೊಂಡು ಬದಲಾವಣೆ ತರಲಾಗಿದೆ. ಇದೊಂದು ಸಮತೋಲಿತ ನಿರ್ಧಾರ. 300ಕ್ಕಿಂತ ಕಡಿಮೆ ಕಾರ್ಮಿಕರಿರುವ ಉದ್ದಿಮೆಯನ್ನು ಮುಚ್ಚಲು ಅಥವಾ ಕಾರ್ಮಿಕರನ್ನು ಕೆಲಸದಿಂದ ತೆಗೆಯಲು ಸರ್ಕಾರದ ಒಪ್ಪಿಗೆ ಬೇಕಿಲ್ಲ. ಇದು ಉದ್ದಿಮೆಯ ದೃಷ್ಟಿಯಿಂದ ಉತ್ತಮ ನಿರ್ಧಾರ. ಕಾರ್ಮಿಕರ ದೃಷ್ಟಿಯಿಂದ ಹೇಳುವುದಾದರೆ ಗುತ್ತಿಗೆ ಕಾರ್ಮಿಕರಿಗೂ ಇಎಸ್‌ಐ, ಪಿಎಫ್‌, ಗ್ರಾಚ್ಯುಟಿ ಸಿಗಲಿದೆ. ಕಾರ್ಮಿಕರು–ಮಾಲೀಕರಲ್ಲಿ ಯಾರಿಗೂ ತೊಂದರೆ ಆಗಬಾರದು. ಉತ್ಪಾದಕತೆ ಹೆಚ್ಚಿಸುವ ಜತೆಗೆ ಕೆಲಸ ಮಾಡುವ ವಾತಾವರಣ ಸುಧಾರಿಸುವ ನಿಟ್ಟಿನಲ್ಲಿ ಬದಲಾವಣೆ ಮಾಡಲಾಗಿದೆ’ ಎಂದು ಅಖಿಲ ಭಾರತ ತಯಾರಕರ ಸಂಸ್ಥೆಯ ಕರ್ನಾಟಕದ ಅಧ್ಯಕ್ಷ ಸಂಪತ್‌ ರಾಮನ್‌ ಹೇಳಿದರು.

**

ಸರ್ಕಾರದ ಪ್ರತಿಪಾದನೆ

* ಎಲ್ಲಾ ಕೈಗಾರಿಕೆಗಳು, ಉದ್ದಿಮೆಗಳು ಕೈಗಾರಿಕಾ ಸಂಬಂಧಗಳ ಸಂಹಿತೆಯನ್ನು ಜಾರಿಗೆ ತರಬೇಕಾಗುತ್ತದೆ. ಕೇವಲ ಒಬ್ಬ ಕಾರ್ಮಿಕ ಇರುವ ಕೈಗಾರಿಕೆಯೂ ಇದನ್ನು ಜಾರಿಗೆ ತರಬೇಕಾಗುತ್ತದೆ. ಇದು ಕಾರ್ಮಿಕರ ಕಲ್ಯಾಣಕ್ಕೆ ನೆರವಾಗುತ್ತದೆ. ಉದ್ದಿಮೆಯ ಬೆಳವಣಿಗೆಗೂ ಸಹಕಾರಿಯಾಗಲಿದೆ

*300ಕ್ಕಿಂತ ಕಡಿಮೆ ಕಾರ್ಮಿಕರು ಇರುವ ಉದ್ದಿಮೆಗಳು ಸರ್ಕಾರದ ಅನುಮತಿ ಇಲ್ಲದೇ ಕಾರ್ಮಿಕರನ್ನು ಕೆಲಸದಿಂದ ತೆಗೆಯಲು ಅವಕಾಶ ನೀಡಲಾಗಿದೆ. ಈ ನಿಯಮಗಳನ್ನು ಸರಳಗೊಳಿಸಿರುವ ಕಾರಣ ಉದ್ದಿಮೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುತ್ತವೆ. ಇದರಿಂದ ಬಂಡವಾಳ ಹೂಡಿಕೆಯಾಗುತ್ತದೆ, ಉದ್ಯೋಗ ಸೃಷ್ಟಿಯಾಗುತ್ತದೆ

* ಕೈಗಾರಿಕಾ ಕಾನೂನುಗಳನ್ನು ಸರಳಗೊಳಿಸಿರುವ ಕಾರಣ, ಸುಲಲಿತವಾಗಿ ವಹಿವಾಟ ನಡೆಸಲು ಸಾಧ್ಯವಾಗುತ್ತದೆ. ಇದು ಕಾರ್ಮಿಕರನ್ನೂ ಬಲಪಡಿಸುತ್ತದೆ, ಉದ್ಯಮಿಗಳನ್ನೂ ಬಲಪಡಿಸುತ್ತದೆ. ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡುತ್ತದೆ

* ಕಾರ್ಮಿಕರ ಮುಷ್ಕರದ ಹಕ್ಕನ್ನು ಕಿತ್ತುಕೊಂಡಿಲ್ಲ. ಬದಲಿಗೆ 14 ದಿನಗಳ ಮುನ್ನ ನೋಟಿಸ್ ನೀಡಿ, ಮುಷ್ಕರ ನಡೆಸಬಹುದಾಗಿದೆ. ಈ ಅವಧಿಯಲ್ಲಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಅವಕಾಶವಿದೆ. ಮುಷ್ಕರ ನಡೆದರೆ ಮಾಲೀಕರಿಗೂ ನಷ್ಟ, ಕಾರ್ಮಿಕರಿಗೂ ನಷ್ಟ. ಇಂತಹ ನಷ್ಟವನ್ನು ತಪ್ಪಿಸಲು ಹೊಸ ಸಂಹಿತೆ ಅವಕಾಶ ಮಾಡಿಕೊಡುತ್ತದೆ

*ಅಸಂಘಟಿತ ವಲಯದಲ್ಲಿ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಲ್ಲಿ ಅರ್ಧದಷ್ಟು ಮಂದಿ, ಅದೇ ಕ್ಷೇತ್ರದಲ್ಲಿ ಉದ್ಯೋಗದಲ್ಲಿರಬೇಕು ಎನ್ನುವುದನ್ನು ಕಡ್ಡಾಯ ಮಾಡಲಾಗಿದೆ. ಆ ಕ್ಷೇತ್ರದಲ್ಲಿ ಉದ್ಯೋಗಿಯಾಗಿರುವವರು ಮಾತ್ರವೇ, ಆ ಕ್ಷೇತ್ರದ ಸಮಸ್ಯೆಗಳನ್ನು ಬಲ್ಲವರಾಗಿರುತ್ತಾರೆ. ಕಾರ್ಮಿಕರ ನಿಜವಾದ ಪ್ರತಿನಿಧಿಗಳು ಇದ್ದರಷ್ಟೇ ಮಾತುಕತೆ ವೇಳೆ ವಾಸ್ತವ ಸಂಗತಿಗಳು ಚರ್ಚೆಗೆ ಬರುತ್ತವೆ

*ಕಾರ್ಮಿಕ ಸಂಘಟನೆಗಳ ನೋಂದಣಿ, ಸದಸ್ಯತ್ವ ಶುಲ್ಕ ಮತ್ತು ಕಾರ್ಯಚಟುವಟಿಕೆಗಳನ್ನು ನಿಗದಿಪಡಿಸಲು ಕೈಗಾರಿಕಾ ಸಂಬಂಧಗಳ ಸಂಹಿತೆಯಲ್ಲಿ ಅವಕಾಶವಿದೆ. ಇದು ಕಾರ್ಮಿಕ ಸಂಘಟನೆಗಳು ಸರಿಯಾಗಿ ಕಾರ್ಯನಿರ್ವಹಿಸಲು ಮತ್ತು ಸಂಘಟನೆಯೊಳಗಿನ ಭ್ರಷ್ಟಾಚಾರವನ್ನು ತಡೆಯಲು ನೆರವಾಗುತ್ತದೆ

ಆಧಾರ: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನಡೆದ ಚರ್ಚೆಗಳು, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT