ಬುಧವಾರ, ಸೆಪ್ಟೆಂಬರ್ 29, 2021
20 °C
ಅನುಭವ ಮಂಟಪ

ಅನುಭವ ಮಂಟಪ| ಕನಸುಗಳಿಗೆ ರೆಕ್ಕೆ ಕಟ್ಟಿದ ಸುಧಾರಣೆ

ಕ್ಯಾಪ್ಟನ್‌ ಜಿ.ಆರ್‌. ಗೋಪಿನಾಥ್‌ Updated:

ಅಕ್ಷರ ಗಾತ್ರ : | |

ಸುಧಾರಕರು ಯಾವಾಗಲೂ ಜಗತ್ತನ್ನು ಉತ್ತಮವಾಗಿ ಬದಲಾಯಿಸುವುದರ ಹರಿಕಾರರು ಮತ್ತು ನಾಗರಿಕತೆಯ ಗತಿಯ ಮೇಲೆ ಪ್ರಭಾವ ಬೀರುವುದರ ಮುನ್ನೆಲೆಯಲ್ಲಿ ಇರುವವರು. ಉಪನಿಷತ್‌ನಿಂದ ಈಗಿನವರೆಗೆ ಭಾರತದ ಇತಿಹಾಸವನ್ನು ಗಮನಿಸಿದರೆ, ಜನರ ಜೀವನವನ್ನು ಅಧ್ಯಾತ್ಮಿಕ ಮತ್ತು ಸತ್ಯಯುತ ನಡವಳಿಕೆಯ ನೆಲೆಯಲ್ಲಿ ಮೇಲಕ್ಕೆ ಎತ್ತುವ ತುಡಿತವಿದ್ದ ಹಲವು ಶ್ರೇಷ್ಠರನ್ನು ಗುರುತಿಸಬಹುದು. ಆದಿ ಶಂಕರ, ಬುದ್ಧ, ರಾಜಾರಾಮ್‌ ಮೋಹನ್‌ರಾಯ್‌, ಕಬೀರ್‌, ಮೀರಾ, ಅಕ್ಕ ಮಹಾದೇವಿ, ಬಸವೇಶ್ವರ, ದಯಾನಂದ ಸಾಗರ್‌, ಸ್ವಾಮಿ ವಿವೇಕಾನಂದ, ಅರವಿಂದೋ, ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್‌, ಸರೋಜಿನಿ ನಾಯ್ಡು– ಇವು ನಮ್ಮನ್ನು ಚಕಿತರನ್ನಾಗಿ ಮಾಡಿ, ಸ್ಫೂರ್ತಿ ತುಂಬಿದ ಕೆಲವು ಹೆಸರುಗಳು. 

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಆರ್ಥಿಕ ಕ್ಷೇತ್ರದ ಸುಧಾರಣೆಯಲ್ಲಿ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್‌ ಅವರ ಎತ್ತರಕ್ಕೆ ನಿಲ್ಲಬಲ್ಲ ಇನ್ನೊಬ್ಬ ನಾಯಕ ಇಲ್ಲ; ಸಾರ್ವತ್ರಿಕವಾಗಿ ಅವರಷ್ಟು ಗೌರವಕ್ಕೆ ಭಾಜನರಾದ ವ್ಯಕ್ತಿಯೂ ಇಲ್ಲ. ರಾವ್ ಅವರ ನೇತೃತ್ವದಲ್ಲಿ, ಆಗಿನ ಹಣಕಾಸು ಸಚಿವ ಡಾ. ಮನಮೋಹನ್ ಸಿಂಗ್‌ ಜಾರಿಗೆ ತಂದ ಆರ್ಥಿಕ ಸುಧಾರಣೆ ಲಕ್ಷಾಂತರ ಭಾರತೀಯರನ್ನು ಬಡತನದಿಂದ ಮೇಲಕ್ಕೆ ಎತ್ತಿತು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಭಾರತವು ಏಷ್ಯಾದ ಹೊಸ ವ್ಯಾಘ್ರ ಎಂಬುದನ್ನು ಜಗತ್ತು ಗಮನಿಸಿತು. 

ಭಾರತದ ಅರ್ಥ ವ್ಯವಸ್ಥೆಗೆ ದಶಕಗಳ ಕಾಲ ಸಂಕೋಲೆಯಾಗಿದ್ದ ಲೈಸೆನ್ಸ್‌ರಾಜ್‌ ಪದ್ಧತಿಯನ್ನು ರಾವ್‌ ಅವರ ಸ್ಪಷ್ಟ ಸೂಚನೆಗೆ ಅನುಗುಣವಾಗಿ ಮನಮೋಹನ್‌ ಅವರು ರದ್ದುಪಡಿಸದೇ ಇದ್ದಿದ್ದರೆ ಇನ್ಫೊಸಿಸ್‌, ಟಿಸಿಎಸ್‌, ವಿಪ್ರೊ, ಎಚ್‌ಸಿಎಲ್‌, ಬಯೊಕಾನ್‌ ಮತ್ತು ಇತರ ಕಂಪನಿಗಳು ಅವು ಈಗ ಇರುವ ಸ್ಥಿತಿಯಲ್ಲಿ ಇರುತ್ತಿರಲಿಲ್ಲ; ಕೆಲವಂತೂ ಬದುಕಿ ಉಳಿಯುವುದೇ ಸಂದೇಹಾಸ್ಪದ. ನನ್ನ ಔದ್ಯಮಿಕ ಪಯಣ ಮತ್ತು ‘ಏರ್‌ ಡೆಕ್ಕನ್‌’ ಸ್ಥಾಪನೆಯ ಕತೆಯನ್ನು ಕೂಡ ಸಂಕ್ಷಿಪ್ತವಾಗಿ ಇಲ್ಲಿ ಉಲ್ಲೇಖಿಸುವುದು ಪ್ರಸ್ತುತ ಎನಿಸಬಹುದು. ಎಮರ್ಸನ್‌ ಹೇಳಿದಂತೆ, ಭರವಸೆಯು ಸುಧಾರಣೆಗಳ ತಾಯಿ. ಭರವಸೆಯು ಅರ್ಥ ವ್ಯವಸ್ಥೆಯ ಅಗೋಚರ ಶಕ್ತಿಯೂ ಹೌದು. ಹೊಸ ಮಾರುಕಟ್ಟೆಗಳನ್ನು ಸೃಷ್ಟಿಸಬಹುದು ಎಂಬ ಕನಸು ಮತ್ತು ಭರವಸೆಯೊಂದಿಗೆ ಉದ್ಯಮಿಗಳು ಹೊಸ ಕಂಪನಿಗಳನ್ನು ಸ್ಥಾಪಿಸುತ್ತಾರೆ. ನಿಯಮ, ನಿಯಂತ್ರಣ ಮತ್ತು ನೀತಿಗಳಿಗೆ ಸಂಬಂಧಿಸಿದ ಪೂರಕ ವಾತಾವರಣ, ಚಿಂತನೆಗಳ ಬೀಜ ಬಿತ್ತಲು ಮತ್ತು ಉದ್ಯಮವನ್ನು ಕಟ್ಟಿ ಬೆಳೆಸಲು ಫಲವತ್ತಾದ ನೆಲ ಹಾಗೂ ತಮ್ಮ ಉದ್ಯಮವು ಗೆಲ್ಲಲಿದೆ ಎಂಬ ಭರವಸೆ ಇದ್ದಾಗ ಮಾತ್ರ ಉದ್ಯಮಿಗಳು ದೊಡ್ಡ ದೊಡ್ಡ ಸಾಹಸಗಳಿಗೆ ಕೈ ಹಾಕುತ್ತಾರೆ. 

ಸರಳವಾದ ಕೆಲವು ಚಿಂತನೆಗಳು, ತಡೆದು ನಿಲ್ಲಿಸಲಾಗದ ಸುಧಾರಣೆಯ ಹಾದಿಯಲ್ಲಿದ್ದ ಭಾರತ, ಉದ್ಯೋಗ ಇಲ್ಲದೆ ಇದ್ದ ನೂರಾರು ಪೈಲಟ್‌ಗಳು, ಒಂದು ಹೆಲಿಕಾಪ್ಟರ್‌ ಕೂಡ ಇಲ್ಲದಿದ್ದ ದಕ್ಷಿಣ ಭಾರತವು ನಾನು ಮತ್ತು ಸೇನೆಯ ಸಹೋದ್ಯೋಗಿ ಕ್ಯಾಪ್ಟನ್‌ ಸ್ಯಾಮುವೆಲ್‌ ಸೇರಿ 1995ರಲ್ಲಿ ಡೆಕ್ಕನ್‌ ಹೆಲಿಕಾಪ್ಟರ್‌ ಕಂಪನಿ ಸ್ಥಾಪಿಸಲು ಸ್ಫೂರ್ತಿಯಾದವು. ಆಗ ನರಸಿಂಹ ರಾವ್‌ ಅವರು ಪ್ರಧಾನಿಯಾಗಿದ್ದರು. ಪ್ರತಿ ಭಾರತೀಯನೂ ವಿಮಾನದಲ್ಲಿ ಪ್ರಯಾಣಿಸಬೇಕು ಎಂಬ ಅಸಾಧ್ಯವೇ ಆಗಿದ್ದ ಹುಚ್ಚು ತುಡಿತವು ಮಿತ ದರದ ವಿಮಾನ ಯಾನ ಸಂಸ್ಥೆ ಏರ್‌ ಡೆಕ್ಕನ್‌ ಸ್ಥಾಪನೆಯ ಕನಸಿಗೆ ಕಾರಣವಾಯಿತು. ಏರ್‌ ಡೆಕ್ಕನ್‌ ಸ್ಥಾಪನೆಯು ವಿಮಾನಯಾನದ ಬಗೆಗಿನ ಮಿಥ್ಯೆಯನ್ನು ಒಡೆಯಿತು ಮತ್ತು ವಿಮಾನಯಾನ ಕ್ಷೇತ್ರದ ಕ್ರಾಂತಿಗೆ ಕಾರಣವಾಯಿತು. ಸರಳ ನಿಯಮಗಳು, ತ್ವರಿತ ಪರವಾನಗಿ, ಬದಲಾದ ಮನಸ್ಥಿತಿಯ ಅಧಿಕಾರಶಾಹಿ, ಬದಲಾದ ರಾಜಕೀಯ ಪರಿಸ್ಥಿತಿ, ಮಾರುಕಟ್ಟೆಗೆ ಪೂರಕವಾದ ಸ್ಥಿತಿಯು ಹೊಸ ಹೊಸ ಯೋಚನೆಗಳು ಉದ್ಯಮಗಳಾಗಲು ನೆರವಾದವು. ಎಲ್ಲಕ್ಕಿಂತ ಮುಖ್ಯವಾಗಿ, ಚಲನಶೀಲವಾದ ಅರ್ಥ ವ್ಯವಸ್ಥೆಯು ಹೂಡಿಕೆದಾರರು, ಉದ್ಯಮಿಗಳು ಮತ್ತು ಜನರಲ್ಲಿ ಭರವಸೆ ಮೂಡಿಸಿತು ಮತ್ತು ಕನಸುಗಳಿಗೆ ರೆಕ್ಕೆ ಕಟ್ಟಿತು. ಏರ್‌ ಡೆಕ್ಕನ್‌ ನವ ಭಾರತದ, ಹೊಸ ಸಾಧ್ಯತೆಗಳ ಭಾರತದ ಕಥನ. ರಾವ್‌ ಮತ್ತು ಮನಮೋಹನ್‌ ಅವರ ಸುಧಾರಣೆಗಳಿಲ್ಲದೇ ಇದ್ದರೆ ಏರ್‌ ಡೆಕ್ಕನ್‌ ಆಕಾಶಕ್ಕೆ ಏರುತ್ತಲೇ ಇರಲಿಲ್ಲ. 

ರಾವ್‌ ಅವರ ಪಕ್ಷದ ಪರಂಪರೆ ಏನಿತ್ತು ಎಂಬುದನ್ನು ಗಣನೆಗೆ ತೆಗೆದುಕೊಂಡಾಗ ಮಾತ್ರ ಅವರ ಕೊಡುಗೆ ಎಷ್ಟು ಅಮೂಲ್ಯವಾದುದು ಎಂಬುದು ಮನವರಿಕೆ ಆಗುತ್ತದೆ. ಮೊದಲಿಗೆ, ಜವಾಹರಲಾಲ್‌ ನೆಹರೂ ನಾಯಕತ್ವದಲ್ಲಿ ಮತ್ತು ನಂತರ ಇಂದಿರಾ ಗಾಂಧಿ ನಾಯಕತ್ವದಲ್ಲಿ ಸಮಾಜವಾದಿ ಚಿಂತನೆ ಆಧಾರಿತ ಅರ್ಥ ವ್ಯವಸ್ಥೆ ಇತ್ತು. ಖಾಸಗಿ ಕ್ಷೇತ್ರವೂ ಇದ್ದ ಮಿಶ್ರ ಅರ್ಥ ವ್ಯವಸ್ಥೆ ಅದಾಗಿದ್ದರೂ, ಸಾರ್ವಜನಿಕ ವಲಯದ ಪ್ರಾಬಲ್ಯವೇ ಹೆಚ್ಚಾಗಿತ್ತು. ಖಾಸಗಿ ವಲಯವು ಅಧಿಕಾರಶಾಹಿಯ ನಿಯಂತ್ರಣದಲ್ಲಿತ್ತು. ಬಜಾಜ್‌ ಕಂಪನಿಯ ಎಷ್ಟು ಸ್ಕೂಟರ್‌ಗಳು ತಯಾರಾಗಬೇಕು ಅಥವಾ ಎಷ್ಟು ಅಂಬಾಸಡರ್‌ ಕಾರುಗಳು ತಯಾರಾಗಬೇಕು, ಟಾಟಾ ಕಂಪನಿಯು ಎಷ್ಟು ಉಕ್ಕು ತಯಾರಿಸಬೇಕು ಎಂಬುದನ್ನು ಅಧಿಕಾರಶಾಹಿಯೇ ನಿರ್ಧರಿಸುತ್ತಿತ್ತು. ಈ ಎಲ್ಲ ಪ್ರಮುಖ ಉದ್ಯಮಗಳ ಪರವಾನಗಿಯು ಭಾರತದ ಪ್ರಸಿದ್ಧವಾದ ಕೆಲವು ಕಂಪನಿಗಳ ಕೈಯಲ್ಲಿ ಇತ್ತು. ಪ್ರಧಾನಿಯಾಗಿದ್ದ ರಾಜೀವ್‌ ಗಾಂಧಿ ಆಧುನಿಕರಾಗಿದ್ದರೂ ಭಾರತವು ಸಿಲುಕಿಕೊಂಡಿದ್ದ ಕಂದರದಿಂದ ಬಿಡಿಸಿ ಮಾರುಕಟ್ಟೆ ಕೇಂದ್ರಿತ ಅರ್ಥವ್ಯವಸ್ಥೆಯತ್ತ ಒಯ್ಯುವ ರಾಜಕೀಯ ಸಾಮರ್ಥ್ಯವಾಗಲಿ, ಚಾತುರ್ಯವಾಗಲಿ ಅವರಲ್ಲಿ ಇರಲಿಲ್ಲ. 

ಲೈಸೆನ್ಸ್‌ ರಾಜ್‌ ವ್ಯವಸ್ಥೆಯನ್ನು ಕೊನೆಗೊಳಿಸಿದವರು ಎಂದಷ್ಟೇ ನಾವು ರಾವ್‌ ಅವರನ್ನು ನೆನಪಿಸಿಕೊಂಡರೆ ಅದು ತೀರಾ ಸರಳೀಕರಣವಾಗುತ್ತದೆ. ಅವರು ಜಾರಿಗೆ ತಂದ ದಿಟ್ಟ, ಗಾಢ ಮತ್ತು ವಿಸ್ತೃತವಾದ ಸುಧಾರಣೆಗಳು ವ್ಯಾಪಕವಾದ ಆರ್ಥಿಕ ಚಟುವಟಿಕೆಗಳಿಗೆ ಪೂರಕವಾಗಿದ್ದವು. ಬಜೆಟ್‌ ಅಂಗೀಕರಿಸುವುದಕ್ಕೇ ಸಾಧ್ಯವಿಲ್ಲದ ರೀತಿಯಲ್ಲಿ ಚಂದ್ರಶೇಖರ್‌ ನೇತೃತ್ವದ ಸರ್ಕಾರದ ಪತನದ ಬಳಿಕ ದೇಶವು ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿ ಕುಸಿಯುವುದನ್ನು ಈ ಆರ್ಥಿಕ ಸುಧಾರಣೆಗಳು ತಡೆದವು. ವಿದೇಶಿ ಹೂಡಿಕೆ, ಬಂಡವಾಳ ಮತ್ತು ಶೇರು ಮಾರುಕಟ್ಟೆಗೆ ಸಂಬಂಧಿಸಿದ ಕ್ರಾಂತಿಕಾರಕ ಸುಧಾರಣೆಗಳು, 1992ರ ಸೆಬಿ ಕಾಯ್ದೆ, 1994ರಲ್ಲಿ ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಸ್ಥಾಪನೆ, ನಿಯಂತ್ರಣ ಮುಕ್ತವಾದ ದೇಶೀಯ ವ್ಯಾಪಾರ, ಆರ್ಥಿಕ ಕೊರತೆ ಇಳಿಕೆ, ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣ, ಮೂಲಸೌಕರ್ಯದಲ್ಲಿ ಹೆಚ್ಚಿನ ಹೂಡಿಕೆ, ರಫ್ತು–ಆಮದುವಿನ ವ್ಯಾಪಾರ ಸುಧಾರಣೆ ಮುಂತಾದ ಕ್ರಮಗಳು ಅರ್ಥ ವ್ಯವಸ್ಥೆಗೆ ಶಕ್ತಿ ತುಂಬಿದವು. ಭಾರತದ ಅರ್ಥ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವಲ್ಲಿ ಈ ಎಲ್ಲ ಸುಧಾರಣೆಗಳ ಒಟ್ಟು ಪ್ರಭಾವವು ಅಪಾರವೇ ಆಗಿದೆ. ಇದು ಭಾರತದ ಅರ್ಥ ವ್ಯವಸ್ಥೆಯನ್ನು ಹಿಂದಕ್ಕೆ ಜಾರದ, ತಡೆಯೊಡ್ಡಲಾಗದ ಹಾದಿಗೆ ಒಯ್ದು, ಜಾಗತಿಕ ಮಟ್ಟದ ಅರ್ಥ ವ್ಯವಸ್ಥೆಗಳ ಸಾಲಿಗೆ ತಂದು ನಿಲ್ಲಿಸಿತು. 

ಆರ್ಥಿಕ ಸುಧಾರಣೆಗಳು ಮತ್ತು ಇತರ ಕ್ಷೇತ್ರಗಳ ಸಾಧನೆ ಜತೆಗೆ ಜತೆಗೆ ಸಾಗಿದವು ಮತ್ತು ಇವು ಜಾಗತಿಕವಾಗಿ ಭಾರತದ ವರ್ಚಸ್ಸು ಹೆಚ್ಚಿಸಿದವು ಎಂಬುದು ನಾವು ಮರೆತಿರುವ ಇನ್ನೊಂದು ವಿಚಾರ. ಇಸ್ರೇಲ್‌ ಜತೆಗೆ ರಾವ್‌ ಅವರು ರಾಜತಾಂತ್ರಿಕ ಸಂಬಂಧ ಸ್ಥಾಪಿಸಿದರು. ತೈವಾನ್‌ ಜತೆಗೆ ರಾಜತಾಂತ್ರಿಕ ಸಂಬಂಧ ಭಾಗಶಃ ಆರಂಭಗೊಂಡಿತು. ‘ಪೂರ್ವಕ್ಕೆ ಒತ್ತು’ ಎಂಬ ಭಾರತದ ನೀತಿಯು ಆಸಿಯಾನ್‌ ಜತೆಗಿನ ಭಾರತದ ನಂಟನ್ನು ನಿಕಟಗೊಳಿಸಿತು ಮತ್ತು ಚೀನಾದ ಪ್ರಾಬಲ್ಯ ತಡೆಗೆ ಇದು ನೆರವಾಯಿತು. ಅಣ್ವಸ್ತ್ರ ಕಾರ್ಯಕ್ರಮಕ್ಕೂ ಇದು ನೆರವು ನೀಡಿ, ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ 1998ರಲ್ಲಿ ಪೋಖರಣ್‌ ಅಣು ಪರೀಕ್ಷೆಗೆ ಇದು ಪೂರಕವಾಯಿತು ಎಂಬುದನ್ನು ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರು ಒಪ್ಪಿಕೊಂಡಿದ್ದರು.
‘ಬಾಂಬ್‌ ಸಿದ್ಧವಾಗಿದೆ ಎಂದು ರಾವ್‌ ನನಗೆ ಹೇಳಿದ್ದರು. ಅದನ್ನು ನಾನು ಸ್ಫೋಟಿಸಿದೆ ಅಷ್ಟೇ’ ಎಂದು ವಾಜಪೇಯಿ ಅವರು
ತಮ್ಮ ವಿಶಿಷ್ಟ ಶೈಲಿಯಲ್ಲಿ ಹೇಳಿದ್ದರು. ಭಯೋತ್ಪಾದನೆ ವಿರುದ್ಧ ಹೋರಾಡುವುದಕ್ಕಾಗಿ ಅವರು ರಕ್ಷಣಾ ವೆಚ್ಚ ಹೆಚ್ಚಿಸಿದ್ದರು ಮತ್ತು ಪಂಜಾಬ್‌ನ ಬಂಡಾಯವನ್ನು ದಮನ ಮಾಡಿದ್ದರು. 

ದೇಶವು ರಾವ್‌ ಅವರಿಗೆ ಸದಾ ಋಣಿಯಾಗಿರಬೇಕು. ಮುಕ್ತ ಮಾರುಕಟ್ಟೆಯು ಇನ್ನೊಂದು ತುದಿಗೆ ತಲುಪಿ, ಹಳೆಯ ಊಳಿಗಮಾನ್ಯ ಉದ್ಯಮಕ್ಕೆ ಬದಲಾಗಿ ಹೊಸ ಉದ್ಯಮಪತಿಗಳನ್ನು ಸೃಷ್ಟಿಸಿ, ಅವರು ಸರ್ಕಾರವನ್ನು ನಿಯಂತ್ರಿಸಿದರೆ ನಮ್ಮಂತಹ ಪರಿಪೂರ್ಣವಲ್ಲದ ಪ್ರಜಾಸತ್ತೆಗಳಲ್ಲಿ ಅಸಮತೋಲನ ಉಂಟಾಗಬಹುದು. ರಾವ್‌ ಉತ್ತರಾಧಿಕಾರಿಗಳು ಅವರನ್ನೇ ಅನುಸರಿಸಬೇಕು ಮತ್ತು ಸುಸ್ಥಿರ ಮತ್ತು ಸುಸಂಬದ್ಧ ನೀತಿಗಳ ಮೂಲಕ ಸುಧಾರಣೆಯನ್ನು ಮುಂದುವರಿಸುತ್ತಲೇ ಇರಬೇಕು. ಇದು ಮಾಲೀಕತ್ವ ನೆಲೆಯನ್ನು ಇನ್ನಷ್ಟು ವಿಸ್ತರಿಸಲು ನೆರವಾಗುತ್ತದೆ, ಲಕ್ಷಾಂತರ ಉದ್ಯಮಿಗಳು ಮತ್ತು ಉದ್ಯಮಗಳಿಗೆ ಪ್ರೋತ್ಸಾಹ ನೀಡುತ್ತದೆ ಹಾಗೂ ಈ ಮೂಲಕ ಸ್ಪರ್ಧೆ ಹೆಚ್ಚಿಸಿ ಏಕಸ್ವಾಮ್ಯ ಹಾಗೂ ಕೆಲವೇ ಗುಂಪುಗಳ ಪ್ರಾಬಲ್ಯವನ್ನು ತಪ್ಪಿಸುತ್ತದೆ. 

ವ್ಯಾಪಾರ ಮತ್ತು ವಾಣಿಜ್ಯವು ಸಮಾಜದಲ್ಲಿ ಸಮಾನತೆ ತರುವ ಚಟುವಟಿಕೆಗಳು. ಏಕೆಂದರೆ, ಉದಾರ, ಸ್ಪರ್ಧಾತ್ಮಕ ಅರ್ಥ ವ್ಯವಸ್ಥೆಯಲ್ಲಿ ಸಂಪತ್ತು ಎಲ್ಲೋ ಒಂದು ಕಡೆ ಕೇಂದ್ರೀಕರಣವಾಗುವುದಿಲ್ಲ. ಹೊಸ ಉದ್ಯಮಿಗಳು ಯಥಾಸ್ಥಿತಿಯನ್ನು ಅಲುಗಾಡಿಸುತ್ತಾರೆ ಮತ್ತು ಹಳೆಯ ಉದ್ಯಮಗಳು ಶಿಥಿಲವಾಗುತ್ತವೆ. ನೀರಿನಂತೆ ಸಮಾಜದಲ್ಲಿ ಎಲ್ಲೆಡೆಗೆ ಹರಿಯುವ ಪ್ರವೃತ್ತಿಯನ್ನು ಹೊಂದಿರುವ ಇದು, ಜನರನ್ನು ಒಗ್ಗೂಡಿಸುತ್ತದೆ. ಸಮಾಜದಲ್ಲಿ ಸೇವೆ ಹಾಗೂ ಸರಕುಗಳ ಉತ್ಪಾದಕರು ಮತ್ತು ಗ್ರಾಹಕರು ಎಂಬ ಎರಡು ಜಾತಿಗಳು ಮಾತ್ರ ಉಳಿಯುತ್ತವೆ. 

ಎಲ್ಲಕ್ಕಿಂತ ಮುಖ್ಯವಾಗಿ, ವ್ಯಾಪಾರವು ಶಾಂತಿಯ ಅಡಿಪಾಯ. ಸಂಘರ್ಷ ತಪ್ಪಿಸುವ ಹೊಣೆಯು ಪ್ರತಿಯೊಬ್ಬರಲ್ಲಿಯೂ ಇರುತ್ತದೆ. 

ಸುಧಾರಣೆಗಳ 30ನೇ ವರ್ಷಕ್ಕೆ ಶುಭಹಾರೈಕೆಗಳು ಮತ್ತು ರಾವ್‌ ಅವರ ಕೊಡುಗೆಯು ದೀರ್ಘಾಯುವಾಗಲಿ.

ಲೇಖಕ: ಉದ್ಯಮಿ ಮತ್ತು ಅಂಕಣಕಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು