ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ –ಅಗಲ: ಸಂಸ್ಕರಣೆ, ಪೂರೈಕೆಯಲ್ಲಿ ಹಲವು ನ್ಯೂನತೆ

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿ ಬೇಳೆಕಾಳು ಪೂರೈಕೆ
Last Updated 22 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಅಡಿಯಲ್ಲಿ ಬಡವರು ಮತ್ತು ಸೈನಿಕರಿಗೆ ಪೂರೈಕೆ ಮಾಡುವ ಬೇಳೆಕಾಳುಗಳ ಹರಾಜಿನಲ್ಲಿಕೇಂದ್ರದ ಎನ್‌ಡಿಎ ಸರ್ಕಾರವು ಅಳವಡಿಸಿಕೊಂಡಿರುವ ಅಪಾರದರ್ಶಕ ನಿಯಮಗಳಿಂದಾಗಿ, ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದ್ದರೆ, ಗಿರಣಿಗಳಿಗೆ ಭರ್ಜರಿ ಲಾಭವಾಗಿದೆ.

ಕೇಂದ್ರ ಸರ್ಕಾರದ ‘ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್’ (ಎನ್‌ಎಎಫ್‌ಇಡಿ) ಸಂಸ್ಥೆಯು ದ್ವಿದಳ ಧಾನ್ಯಗಳನ್ನು ಖರೀದಿಸಿ, ಅವನ್ನು ಬೇಳೆ ಮಾಡಲು ಗಿರಣಿಗಳಿಗೆ ಗುತ್ತಿಗೆ ನೀಡುತ್ತದೆ. 2017ರಿಂದ ಸಾವಿರಾರು ಹರಾಜು ಪ್ರಕ್ರಿಯೆ ನಡೆಸಿದ್ದರೂ, ದ್ವಿದಳ ಧಾನ್ಯಗಳ ಬದಲಿಗೆ ಗಿರಣಿಗಳು ವಾಪಸ್‌ ನೀಡಬೇಕಿರುವ ಬೇಳೆಯ ಕನಿಷ್ಠ ಪ್ರಮಾಣ ನಿಗದಿಮಾಡಿಲ್ಲ. ಗಿರಣಿ ಮಾಲೀಕರು ಹೆಚ್ಚುವರಿ ಲಾಭ ಮಾಡಿಕೊಳ್ಳುತ್ತಿದ್ದರೂ, ಆದನ್ನು ಪತ್ತೆಮಾಡುವ ಕಾರ್ಯತಂತ್ರ ರೂಪಿಸುವಲ್ಲಿ ಸಂಸ್ಥೆ ವಿಫಲವಾಗಿದೆ.

ಕಳೆದ 4 ವರ್ಷಗಳಲ್ಲಿ 5.4 ಲಕ್ಷ ಟನ್ ದ್ವಿದಳಧಾನ್ಯವನ್ನು ಸಂಸ್ಕರಣೆ ಮಾಡಲಾಗಿದೆ. ಹರಾಜು ನೀತಿಯಲ್ಲಿನ ನ್ಯೂನತೆಯ ಕಾರಣ ಸರ್ಕಾರದ ಬೊಕ್ಕಸಕ್ಕೆ ₹4,600 ಕೋಟಿ ನಷ್ಟವಾಗಿದೆ. ಬೇಳೆಕಾಳುಗಳ ಗುಣಮಟ್ಟವನ್ನೂ ಕಾಯ್ದುಕೊಂಡಿಲ್ಲ ಎಂಬುದುಆರ್‌ಟಿಐ ಹಾಗೂ ಸರ್ಕಾರಿ ಜಾಲತಾಣಗಳ ದಾಖಲೆಗಳಿಂದ ಗೊತ್ತಾಗಿದೆ. ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್ ಯೋಜನೆ (ಪಿಎಂಜಿಕೆಎವೈ) ಅಡಿಯಲ್ಲಿ ಲಾಕ್‌ಡೌನ್ ವೇಳೆ ವಿವಿಧ ರಾಜ್ಯಗಳಿಗೆ ಪೂರೈಕೆಯಾದ ಇಂತಹ ದ್ವಿದಳಧಾನ್ಯಗಳ ಗುಣಮಟ್ಟದ ಬಗ್ಗೆ ಕೆಲವು ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ದೂರು ನೀಡಿದ ಬಳಿಕ ಹರಾಜು ಪ್ರಕ್ರಿಯೆಯ ವಿಷಯ ಚರ್ಚೆಗೆ ಬಂದಿತು.

ಒಟಿಆರ್ ಪದ್ಧತಿ: 2015ರಲ್ಲಿ ದ್ವಿದಳ ಧಾನ್ಯಗಳ ದರ ದಾಖಲೆಯ ಮಟ್ಟಕ್ಕೆ ಏರಿದ್ದರಿಂದ, ಖರೀದಿ ಪ್ರಕ್ರಿಯೆಯ ಉಸ್ತುವಾರಿಯನ್ನು ಎನ್‌ಎಎಫ್‌ಇಡಿಗೆ ವಹಿಸಲಾಯಿತು. ಹೆಚ್ಚು ಹೆಚ್ಚು ಬೇಳೆಕಾಳು ಬೆಳೆಯುವಂತೆ ಇದು ರೈತರ ಮನವೊಲಿಸಿತು. 2017ರಲ್ಲಿ, ಹೆಚ್ಚುವರಿ ದಾಸ್ತಾನನ್ನು ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಅಡಿಯಲ್ಲಿ ವಿವಿಧ ರಾಜ್ಯಗಳಿಗೆ ಪೂರೈಸುವ ಪ್ರಸ್ತಾಪವನ್ನು ಸರ್ಕಾರದ ಮುಂದೆ ಇರಿಸಿತು. ಕಚ್ಚಾ ದ್ವಿದಳಧಾನ್ಯಗಳನ್ನು ಖರೀದಿಸಿ, ಸಂಸ್ಕರಿತ ಬೇಳೆಕಾಳನ್ನು ರಾಜ್ಯಗಳಿಗೆ ಪೂರೈಸುವ ನಿರ್ಧಾರವಾಯಿತು.

2017ಕ್ಕೂ ಮುನ್ನ, ಹರಾಜಿನಲ್ಲಿ ಕಡಿಮೆ ಮೊತ್ತಕ್ಕೆ ಬಿಡ್ ಸಲ್ಲಿಸುವ ಗಿರಣಿಯವರಿಗೆ ಗುತ್ತಿಗೆ ನೀಡಲಾಗುತ್ತಿತ್ತು. ದ್ವಿದಳ ಧಾನ್ಯಗಳ ಸಂಸ್ಕರಣೆ ವೇಳೆ ಲಭ್ಯವಾಗುವ ಬೇಳೆಯ ಪ್ರಮಾಣ, ಸಂಸ್ಕರಣೆ, ಪ್ಯಾಕಿಂಗ್‌ ಮತ್ತು ಪೂರೈಕೆ ವೆಚ್ಚ ಮತ್ತು ಸಂಸ್ಕರಣೆ ವೇಳೆಸಿಗುವ ಹೊಟ್ಟು, ನುಚ್ಚು ಮತ್ತಿತರ ಉಪ ಉತ್ಪನ್ನಗಳಿಂದ ಬರುವ ಆದಾಯ ಹಾಗೂ ತಮ್ಮ ಲಾಭವನ್ನು ಲೆಕ್ಕಹಾಕಿ ಗಿರಣಿಯವರು ಬಿಡ್‌ ಮೊತ್ತವನ್ನು ನಮೂದಿಸಬೇಕಾಗಿತ್ತು. ಅತ್ಯಂತ ಕಡಿಮೆ ಮೊತ್ತ ನಮೂದಿಸಿದವರಿಗೆ ಗುತ್ತಿಗೆ ದೊರೆಯುತ್ತಿತ್ತು.

ಆದರೆ ಎನ್‌ಎಡಿಇಎಫ್, ಈ ಹರಾಜು ಪ್ರಕ್ರಿಯೆಯನ್ನು 2017ರಲ್ಲಿ ಬದಲಾಯಿಸಿತು.ಕಚ್ಚಾ ಬೇಳೆಕಾಳು ಮತ್ತು ಸಂಸ್ಕರಿತ ಬೇಳೆಕಾಳುಗಳ ನಡುವಿನ ಅನುಪಾತ (ಔಟ್ ಟರ್ನ್ ರೇಷಿಯೊ–ಒಟಿಆರ್‌) ನಮೂದಿಸುವಂತೆ ಕೇಳಲಾಯಿತು. (ಉದಾಹರಣೆಗೆ 100 ಟನ್‌ ದ್ವಿದಳ ಧಾನ್ಯಗಳಿಗೆ ಬದಲಾಗಿ ಅಂದಾಜು 80 ಟನ್‌ ಬೇಳೆ ನೀಡುವ ಪದ್ಧತಿ). ಯಾರು ಹೆಚ್ಚಿನ ಪ್ರಮಾಣದ ಸಂಸ್ಕರಿತ ಬೇಳೆಕಾಳು ಪೂರೈಸುತ್ತೇವೆ ಎಂದು ನಮೂದಿಸುತ್ತಾರೋ ಅವರಿಗೆ ಗುತ್ತಿಗೆ ನೀಡುವ ಪದ್ಧತಿಯನ್ನು ಜಾರಿಗೆ ತರಲಾಯಿತು. ಈ ಪದ್ಧತಿಯಲ್ಲಿ ಸರ್ಕಾರವು ದ್ವಿದಳ ಧಾನ್ಯಗಳನ್ನು ಮಾತ್ರ ಗಿರಣಿಗಳಿಗೆ ಪೂರೈಸುತ್ತವೆ. ಸಂಸ್ಕರಣೆ ವೇಳೆ ದೊರೆಯುವ ಉಪ ಉತ್ಪನ್ನಗಳನ್ನು ಮಾರಿ, ಗಿರಣಿಗಳು ಲಾಭ ಮಾಡಿಕೊಳ್ಳಬೇಕು. ಸರ್ಕಾರವು ಗಿರಣಿಗಳಿಗೆ ಯಾವುದೇ ರೀತಿಯ ಶುಲ್ಕ ನೀಡುವುದಿಲ್ಲ.

ಎಚ್ಚರಿಕೆಗಳ ಕಡೆಗಣನೆ: ಎನ್‌ಎಎಫ್‌ಇಡಿ ಅಳವಡಿಸಿ ಕೊಂಡಿರುವಒಟಿಆರ್‌ ಹರಾಜು ಪದ್ಧತಿಯಲ್ಲಿನ ನ್ಯೂನತೆಗಳ ಬಗ್ಗೆ ಈ ಹಿಂದೆಯೇ ಸಿಎಜಿ ಸೇರಿದಂತೆ ಹಲವು ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. 2015ರಲ್ಲೂ ಇಂಥದ್ದೇ ಪದ್ಧತಿಯ ಅಡಿ ಭತ್ತವನ್ನು ಒಕ್ಕಿ, ಅಕ್ಕಿ ನೀಡುವ ಗುತ್ತಿಗೆಯಲ್ಲಿಅಕ್ಕಿಗಿರಣಿ ಮಾಲೀಕರಿಗೆ ಹೆಚ್ಚು ಲಾಭವಾಗಿದೆ ಎಂಬುದಾಗಿ ಸಿಎಜಿ 2015ರಲ್ಲೇ ಎಚ್ಚರಿಕೆ ನೀಡಿತ್ತು. ‘ಕಡಿಮೆ ಒಟಿಆರ್ ನಿಗದಿಪಡಿಸುವುದರಿಂದ ಸಂಸ್ಕರಣೆ ಮಾಡುವವರ ಬಳಿ ಹೆಚ್ಚುವರಿ ಅಕ್ಕಿ ಉಳಿದುಕೊಂಡು, ಬೊಕ್ಕಸಕ್ಕೆ ₹2,000 ಕೋಟಿ ನಷ್ಟಕ್ಕೆ ಕಾರಣವಾಗಿದೆ’ ಎಂದು ತಿಳಿಸಿತ್ತು.

ಹರಾಜು ಪದ್ಧತಿ ವಿಷಯವು 2020ರಲ್ಲಿ ಕೇಂದ್ರೀಯ ಜಾಗೃತ ಆಯೋಗದ ಎದುರು ಬಂದಿತ್ತು. ₹1,000 ಕೋಟಿ ನಷ್ಟಕ್ಕೆ ಈ ಹರಾಜು ಪ್ರಕ್ರಿಯೆ ಕಾರಣವಾಗಿದ್ದು, ಸಮಗ್ರ ಲೆಕ್ಕಪರಿಶೋಧನೆಗೆ ಆಗ್ರಹ ಹೇಳಿಬಂದಿತ್ತು. ಆದರೆ ಈ ವಿಚಾರದಲ್ಲಿ ಯಾವ ಬೆಳವಣಿಗೆಯೂ ಆಗಿಲ್ಲ.

ಕೇಂದ್ರ ಸರ್ಕಾರದ ಮುಂಚೂಣಿ ಸಂಶೋಧನಾ ಸಂಸ್ಥೆ ‘ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಪೋಸ್ಟ್ ಹಾರ್ವೆಸ್ಟಿಂಗ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ’ಯು (ಸಿಐಪಿಎಚ್‌ಇಟಿ) ಹರಾಜು ಪ್ರಕ್ರಿಯೆ ಕುರಿತು ಕೇಂದ್ರ ಸರ್ಕಾರಕ್ಕೆ ಈ ಹಿಂದೆ ವರದಿ ಸಲ್ಲಿಸಿತ್ತು.ಈ ವರದಿಯ ಪರಿಣಾಮವಾಗಿ, ಇಡೀ ಪ್ರಕ್ರಿಯೆಯ ಪರಾಮರ್ಶೆ ನಡೆಸಲು, ಸಂಬಂಧಿತ ಏಜೆನ್ಸಿಗಳನ್ನು ಒಳಗೊಂಡ ಸಮಿತಿಯನ್ನು ಸರ್ಕಾರ ನೇಮಿಸಿತ್ತು.ಈ ಸಮಿತಿ ಮೂರು ಬಾರಿ ಸಭೆ ಸೇರಿದ್ದರೂ, ಶಿಫಾರಸು ಅಂತಿಮಗೊಳಿಸಿಲ್ಲ. ಈ ನಡುವೆ ಮತ್ತೊಂದು ವರ್ಷದ ಧಾನ್ಯ ಖರೀದಿ ಮತ್ತು ಸಂಸ್ಕರಣೆ ಪ್ರಕ್ರಿಯೆಗೆ ಎನ್‌ಎಎಫ್‌ಇಡಿ ಸಿದ್ಧವಾಗಿದೆ.

ಗಿರಣಿಗಳಿಂದ ಪೂರೈಕೆ: ಕನಿಷ್ಠ ಪ್ರಮಾಣ ನಿಗದಿ ಇಲ್ಲ
ಎನ್‌ಎಎಫ್‌ಇಡಿ ಅನುಸರಿಸುತ್ತಿರುವ ಒಟಿಆರ್‌ ಹರಾಜು ವಿಧಾನದಲ್ಲೇ ನ್ಯೂನತೆ ಇದೆ. ಗಿರಣಿಗಳು ಪಡೆದುಕೊಳ್ಳುವ ಕಾಳುಗಳ ಒಂದು ಘಟಕವನ್ನು ಸಂಸ್ಕರಿಸಿದಾಗ, ದೊರೆಯುವ ಬೇಳೆಯಲ್ಲಿಎನ್‌ಎಎಫ್‌ಇಡಿಗೆ ವಾಪಸ್‌ ನೀಡಬೇಕಾದ ಬೇಳೆಯ ಕನಿಷ್ಠ ಪ್ರಮಾಣವನ್ನು ನಿಗದಿ ಮಾಡಿಲ್ಲ.ಹೀಗಾಗಿ ಕಾಳುಗಳ ಒಂದು ಘಟಕವನ್ನು ಸಂಸ್ಕರಿಸಿದಾಗ ತಮಗೆ ದೊರೆಯುವ ಬೇಳೆಯ ಪ್ರಮಾಣಕ್ಕಿಂತಲೂ, ಕಡಿಮೆ ಪ್ರಮಾಣವನ್ನು ಗಿರಣಿಗಳು ಎನ್‌ಎಎಫ್‌ಇಡಿಗೆ ಪೂರೈಸುತ್ತಿವೆ. ಇದರಿಂದ ಗಿರಣಿಗಳ ಬಳಿ ಗಣನೀಯ ಪ್ರಮಾಣದ ಬೇಳೆ ಉಳಿಯುತ್ತಿದೆ.ಸಂಸ್ಕರಣದ ವೇಳೆ ದೊರೆಯುವ ಉಪಉತ್ಪನ್ನಗಳ ಜತೆಗೆ, ತಮ್ಮ ಬಳಿ ಉಳಿಯುವ ಬೇಳೆಯನ್ನೂ ಗಿರಿಣಿಗಳು ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ಈ ಮೂಲಕ ಗಿರಣಿಗಳು ಹೆಚ್ಚು ಲಾಭ ಮಾಡಿಕೊಳ್ಳುತ್ತಿವೆ.

2018ರಲ್ಲಿ ತಮಿಳುನಾಡು ಸರ್ಕಾರವು ಒಟಿಆರ್‌ ಹರಾಜು ವಿಧಾನದಲ್ಲಿಯೇ ತೊಗರಿ ಬೇಳೆಯನ್ನು ಸಂಸ್ಕರಿಸಲು ಗಿರಣಿಗಳಿಗೆ ಗುತ್ತಿಗೆ ನೀಡಿತ್ತು. ಸರ್ಕಾರದ ಗೋದಾಮುಗಳಿಂದ ಪಡೆದುಕೊಂಡ ಧಾನ್ಯವನ್ನು ಸಂಸ್ಕರಿಸಿ, ಅದರ ಶೇ 68ರಷ್ಟು ಪ್ರಮಾಣದ ಬೇಳೆಯನ್ನು ನೀಡಲು ಗಿರಣಿಗಳು ಒಪ್ಪಂದ ಮಾಡಿಕೊಂಡಿದ್ದವು.ಆದರೆ ಲಾಕ್‌ಡೌನ್‌ ಅವಧಿಯಲ್ಲಿ ಕೇಂದ್ರ ಸರ್ಕಾರದ ಎನ್‌ಎಎಫ್‌ಇಡಿಯ ಗೋದಾಮುಗಳಿಂದ ಪಡೆದುಕೊಂಡ ತೊಗರಿಕಾಳನ್ನು ಸಂಸ್ಕರಿಸಿ, ಅದರ ಶೇ 61ರಷ್ಟು ಪ್ರಮಾಣದ ತೊಗರಿ ಬೇಳೆಯನ್ನು ವಾಪಸ್ ನೀಡಲು ಗಿರಣಿಗಳು ಒಪ್ಪಿಕೊಂಡಿವೆ. ತಮಿಳುನಾಡು ಸರ್ಕಾರವು ನಿಗದಿ ಮಾಡಿದ್ದಕ್ಕಿಂತ 7 ಶೇಕಡಾವಾರು ಅಂಶಗಳಷ್ಟು ಕಡಿಮೆ ಬೇಳೆಯನ್ನು ಪಡೆದುಕೊಳ್ಳಲುಎನ್‌ಎಎಫ್‌ಇಡಿ ಒಪ್ಪಿಕೊಂಡಿದೆ. ಗಿರಣಿಗಳಿಗೆ ಹೆಚ್ಚು ಲಾಭ ಮಾಡಿಕೊಳ್ಳಲು ಈ ಮೂಲಕ ಅವಕಾಶ ಮಾಡಿಕೊಡಲಾಗಿದೆ.

ಈ ಬಗ್ಗೆ ವೆಚ್ಚಗಳ ಇಲಾಖೆಯು ಆಕ್ಷೇಪ ವ್ಯಕ್ತಪಡಿಸಿದೆ. ಜತೆಗೆ ಈ ವಿಧಾನಕ್ಕೆ ಹಲವು ಸುಧಾರಣೆಗಳನ್ನು ಶಿಫಾರಸು ಮಾಡಿದೆ. ಆದರೆ ಈ ಶಿಫಾರಸುಗಳನ್ನು ಗ್ರಾಹಕ ವ್ಯವಹಾರಗಳ ಇಲಾಖೆಯು ಕಡೆಗಣಿಸಿದೆ. ಹೀಗೆ ಮಾಡುವ ಮೂಲಕ, ಒಟಿಆರ್‌ ಹರಾಜು ವಿಧಾನವು ಕಾರ್ಯಸಾಧುವೇ ಎಂಬುದನ್ನು ಪರಿಶೀಲಿಸಲು ಇದ್ದ ಅವಕಾಶವನ್ನೂ ತಡೆಯಲಾಗಿದೆ.

ಒಟಿಆರ್‌ ಹರಾಜು ವಿಧಾನದಲ್ಲಿ ಗಿರಣಿಗಳು ನೀಡಬೇಕಾದ ಬೇಳೆಯ ಕನಿಷ್ಠ ಪ್ರಮಾಣವನ್ನು ಏಕೆ ನಿಗದಿ ಮಾಡಿಲ್ಲ ಎಂದುಎನ್‌ಎಎಫ್‌ಇಡಿಯನ್ನು ಪ್ರಶ್ನಿಸಲಾಗಿದೆ. ಅದಕ್ಕೆಎನ್‌ಎಎಫ್‌ಇಡಿ, ‘ಕಾಳುಗಳನ್ನು ಖರೀದಿಸಬೇಕಾದ ಸ್ಥಳ–ಗೋದಾಮು, ಗಿರಣಿಗೆ ಒಯ್ಯಬೇಕಾದ, ಸಂಸ್ಕರಿಸಿದ ಬೇಳೆಕಾಳುಗಳನ್ನು ಪೂರೈಸಬೇಕಾದ ಸ್ಥಳಗಳ ನಡುವಣ ಅಂತರ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಹೀಗಾಗಿ ಗಿರಣಿಗಳು ನೀಡಬೇಕಾದ ಬೇಳೆಯ ಕನಿಷ್ಠ ಪ್ರಮಾಣವನ್ನು ಈ ಗುತ್ತಿಗೆಗಳಲ್ಲಿ ನಿಗದಿ ಮಾಡಿಲ್ಲ’ ಎಂದು ಉತ್ತರಿಸಿದೆ.

ಫಲಾನುಭವಿಗಳಿಗೆ ಕಳಪೆ ಬೇಳೆ
2017ರಲ್ಲಿಎನ್‌ಎಎಫ್‌ಇಡಿ, ತನ್ನ ಒಟಿಆರ್‌ ಹರಾಜು ವಿಧಾನದಲ್ಲಿ ಬದಲಾವಣೆ ಮಾಡಿಕೊಂಡಿದೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಕಳಪೆ ಗುಣಮಟ್ಟದ ಬೇಳೆಕಾಳುಗಳು ಪೂರೈಕೆಯಾಗಲು ಈ ಬದಲಾವಣೆಯೇ ಪ್ರಧಾನ ಕಾರಣ.

ಈ ಮೊದಲು ಜಾರಿಯಲ್ಲಿದ್ದ ಒಟಿಆರ್‌ ಹರಾಜು ವಿಧಾನದಲ್ಲಿ ಗುತ್ತಿಗೆ ಪಡೆದ ಗಿರಣಿಗಳುಎನ್‌ಎಎಫ್‌ಇಡಿ ಗೋದಾಮಿನಿಂದ ಕಾಳುಗಳನ್ನು ಸಂಗ್ರಹಿಸಿಕೊಳ್ಳಬೇಕಿತ್ತು. ಆನಂತರ ಅವನ್ನು ಸಂಸ್ಕರಿಸಿ, ಸಂಬಂಧಿತ ಗೋದಾಮಿಗೆ ವಿತರಣೆ ಮಾಡಬೇಕಿತ್ತು.ಆದರೆ, 2017ರಲ್ಲಿ ಈ ನಿಯಮಗಳಿಗೆ ಬದಲಾವಣೆ ತರಲಾಯಿತು. ಬೇಳೆ ಖರೀದಿ ಮತ್ತು ವಿತರಣೆಗೆ ಎರಡು ರೀತಿಯ ವಿಧಾನಗಳ ಆಯ್ಕೆಯ ಅವಕಾಶ ನೀಡಲಾಯಿತು. ಗಿರಣಿಗಳು ತಮಗೆ ಅಗತ್ಯವಿರುವ ಕಾಳುಗಳನ್ನು ಎನ್‌ಎಎಫ್‌ಇಡಿ ಗೋದಾಮಿನಿಂದ ಸಂಗ್ರಹಿಸಿ, ಸಂಸ್ಕರಿಸಿ ನಂತರ ವಿತರಣೆ ಮಾಡಬಹುದಿತ್ತು. ಆದರೆಎನ್‌ಎಎಫ್‌ಇಡಿಯಿಂದ ಪಡೆದುಕೊಳ್ಳುವ ಕಾಳುಗಳ ಮಾರುಕಟ್ಟೆ ಬೆಲೆಯ ಶೇ 100ರಷ್ಟು ಮೊತ್ತವನ್ನು ಭದ್ರತಾ ಠೇವಣಿಯಾಗಿ ಇರಿಸಬೇಕು. ಇದು ಮೊದಲನೇ ಆಯ್ಕೆ. ಶೇ 100ರಷ್ಟು ಭದ್ರತಾ ಠೇವಣಿ ಇರಿಸಿಬೇಕಿದ್ದ ಕಾರಣ ಗಿರಣಿಗಳು ಈ ಆಯ್ಕೆಯಿಂದ ದೂರ ಉಳಿದವು.

ಗಿರಣಿಗಳು ತಾವು ಪೂರೈಸಬೇಕಿರುವ ಬೇಳೆಯ ಪ್ರಮಾಣವನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಸಬೇಕು. ಅವನ್ನು ರಾಜ್ಯ ಸರ್ಕಾರಗಳ ಗೋದಾಮುಗಳಿಗೆ ವಿತರಿಸಬೇಕು. ಬೇಳೆ ಖರೀದಿಗೆ ತಗುಲಿದ ವೆಚ್ಚ ಕುರಿತ ಬಿಲ್‌ ಅನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಒಟಿಆರ್‌ ಹರಾಜು ಒಪ್ಪಂದದಲ್ಲಿ ಸೂಚಿಸಿದಷ್ಟು ಕಾಳುಗಳನ್ನುಎನ್‌ಎಎಫ್‌ಇಡಿ ಗೋದಾಮಿನಿಂದ ಪಡೆದುಕೊಳ್ಳಬೇಕು. ಇದು ಎರಡನೇ ಆಯ್ಕೆ.

2017ರಲ್ಲಿ ಗುತ್ತಿಗೆ ಪಡೆದುಕೊಂಡ ಬಹುತೇಕ ಗಿರಣಿಗಳು ಎರಡನೇ ವಿಧಾನವನ್ನು ಆಯ್ಕೆ ಮಾಡಿಕೊಂಡಿವೆ. ಈ ವಿಧಾನದಲ್ಲಿ ಲಾಭದ ಪ್ರಮಾಣ ಅಧಿಕವಾಗಿರುವ ಕಾರಣ ಇದೇ ವಿಧಾನವನ್ನು ಅನುಸರಿಸಿಕೊಂಡು ಬರುತ್ತಿವೆ. ಮುಕ್ತ ಮಾರುಕಟ್ಟೆಯಿಂದ ಕಳಪೆ ಗುಣಮಟ್ಟದ ಬೇಳೆಯನ್ನು ಕಡಿಮೆ ಬೆಲೆಗೆ ಖರೀದಿಸಿ, ವಿತರಣೆ ಮಾಡಿವೆ. ಅದರ ಬದಲಿಗೆಎನ್‌ಎಎಫ್‌ಇಡಿ ಗೋದಾಮಿನಿಂದ ಗುಣಮಟ್ಟದ ಕಾಳುಗಳನ್ನು ಪಡೆದುಕೊಂಡಿವೆ. ಈ ಗುಣಮಟ್ಟದ ಕಾಳುಗಳನ್ನು ಬಳಸಿಕೊಂಡು, ಗಿರಣಿಗಳು ಹೆಚ್ಚು ಲಾಭ ಮಾಡಿಕೊಂಡಿವೆ.

ಗಿರಣಿಗಳು ಹೀಗೆ ಪೂರೈಸಿದ ಕಳಪೆ ಗುಣಮಟ್ಟದ ಬೇಳೆಯನ್ನು ಹಲವು ರಾಜ್ಯ ಸರ್ಕಾರಗಳು ವಾಪಸ್ ಮಾಡಿವೆ.2020ರಲ್ಲಿ ದೆಹಲಿ ಒಂದು ಬಾರಿ ಬೇಳೆಕಾಳುಗಳನ್ನು ವಾಪಸ್ ಮಾಡಿದೆ. ಮೇ ತಿಂಗಳಿನಲ್ಲಿ ಪಂಜಾಬ್ ಸರ್ಕಾರವು 46 ಟನ್ ಬೇಳಕಾಳುಗಳನ್ನು ವಾಪಸ್ ಮಾಡಿದೆ. ಗುಜರಾತ್ ಸರ್ಕಾರವೂ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಆದರೆ, ‘ಲಾಕ್‌ಡೌನ್‌ ಅವಧಿಯಲ್ಲಿ ತುರ್ತಾಗಿ ಬೇಳೆಕಾಳುಗಳನ್ನು ವಿತರಿಸಿಬೇಕಿದ್ದ ಕಾರಣ, ಮುಕ್ತಮಾರುಕಟ್ಟೆಯಿಂದ ಖರೀದಿ ಮಾಡಿ ವಿತರಣೆ ಮಾಡಲು ಗಿರಣಿಗಳಿಗೆ ಅವಕಾಶ ನೀಡಲಾಗಿತ್ತು’ ಎಂದುಎನ್‌ಎಎಫ್‌ಇಡಿ ಹೇಳಿದೆ. ಆದರೆ 2017ರಿಂದಲೂಎನ್‌ಎಎಫ್‌ಇಡಿ ಇದೇ ವಿಧಾನವನ್ನು ಅನುಸರಿಸಿಕೊಂಡು ಬರುತ್ತಿದೆ.

2020ರಲ್ಲಿ ಗುಜರಾತ್ ಸರ್ಕಾರವು, ‘ನಮಗೆ ಪೂರೈಕೆಯಾದ ಕಡಲೆಬೇಳೆಯಲ್ಲಿ ಶೇ 21ರಷ್ಟು ವಿತರಣೆಗೆ ಅಯೋಗ್ಯವಾಗಿದೆ. ಇದರ ಬದಲಿಗೆ ಗುಣಮಟ್ಟದ ಬೇಳೆ ನೀಡಿ. ಗಿರಣಿಗಳಿಂದ ಬೇಳೆಕಾಳನ್ನು ಟ್ರಕ್‌ಗಳಿಗೆ ತುಂಬಿಸುವಾಗ ಮತ್ತು ರಾಜ್ಯ ಸರ್ಕಾರದ ಗೋದಾಮುಗಳಲ್ಲಿ ಇಳಿಸುವಾಗ ಗುಣಮಟ್ಟ ಪರಿಶೀಲಿಸುವ ವ್ಯವಸ್ಥೆಯನ್ನು ಜಾರಿಗೆ ತನ್ನಿ’ ಎಂದು ಎನ್‌ಎಎಫ್‌ಇಡಿಯನ್ನು ಕೇಳಿಕೊಂಡಿತ್ತು.

ಆದರೆಎನ್‌ಎಎಫ್‌ಇಡಿ ಈ ಮನವಿಯನ್ನು ತಳ್ಳಿಹಾಕಿತ್ತು. ‘ನಾವು ರೈತರಿಂದ ಗುಣಮಟ್ಟದ ಕಾಳುಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಖರೀದಿಸುತ್ತೇವೆ. ಅವುಗಳಿಂದ ಸಂಸ್ಕರಿಸಿದ ಗುಣಮಟ್ಟದ ಬೇಳೆಯನ್ನೇ ಗಿರಣಿಗಳು ರಾಜ್ಯ ಸರ್ಕಾರಗಳಿಗೆ ವಿತರಿಸುತ್ತವೆ.ಗಿರಣಿಗಳಿಂದ ಟ್ರಕ್‌ಗಳಿಗೆ ತುಂಬಿಸುವಾಗ ಬೇಳೆಯ ಗುಣಮಟ್ಟ ಪರಿಶೀಲನೆ ಸಾಧ್ಯವಿಲ್ಲ. ರಾಜ್ಯ ಸರ್ಕಾರಗಳು ತಮ್ಮ ಗೋದಾಮಿನಲ್ಲಿ ಅವನ್ನು ಇಳಿಸಿಕೊಂಡ ನಂತರವೇ ಗುಣಮಟ್ಟವನ್ನು ಪರಿಶೀಲಿಸಿಕೊಳ್ಳಬೇಕು’ ಎಂದು ಹೇಳಿತ್ತು.

ಆಧಾರ: ರಿಪೋರ್ಟರ್ಸ್‌ ಕಲೆಕ್ಟೀವ್ ವರದಿ.

* ಈ ವರದಿಯ ಇಂಗ್ಲಿಷ್ ಅವತರಣಿಕೆಯು ‘ದಿ ವೈರ್‌’ನಲ್ಲಿ ಪ್ರಕಟವಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT