ಭಾನುವಾರ, ಫೆಬ್ರವರಿ 5, 2023
20 °C

ಆಳ–ಅಗಲ | ಜಾಗತಿಕ ತಾಪಮಾನ ಹೆಚ್ಚಳ; ಹವಾಮಾನ ಏರುಪೇರು

ಪ್ರಜಾವಾಣಿ ವಾರ್ತೆ 6 Jun, 2017 Updated:

ಅಕ್ಷರ ಗಾತ್ರ : | |

ಭಾರತದಲ್ಲಿ ಈ ವರ್ಷದ ಹವಾಮಾನವು ಅತ್ಯಂತ ಅನಿರೀಕ್ಷಿತವೂ ಪ್ರತಿಕೂಲಕರವಾಗಿಯೂ ಇತ್ತು. ಜನವರಿಯಿಂದ ಸೆಪ್ಟೆಂಬರ್ ವರೆಗೆ ವಿವಿಧ ರೀತಿಯ ನಾಶ, ನಷ್ಟಗಳಿಗೆ ದೇಶವು ಸಾಕ್ಷಿಯಾಗಿದೆ. ಸಾಮಾನ್ಯವಾಗಿ ಮುಂಗಾರು ಮಳೆ ಋತುವಿನ ಅವಧಿಯಲ್ಲಿ ಹೆಚ್ಚು ಮಳೆ ಬೀಳುವುದು, ಪ್ರವಾಹ ಉಂಟಾಗುವುದು ಸಹಜ. ಆದರೆ, ಈ ವರ್ಷ ಚಳಿಗಾಲ, ಮುಂಗಾರುಪೂರ್ವ ಅವಧಿಯಲ್ಲಿಯೂ ಪ್ರತಿಕೂಲ ಹವಾಮಾನ ಉಂಟಾಗಿದೆ. 273 ದಿನಗಳ ಪೈಕಿ 242 ದಿನಗಳು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳನ್ನು ದೇಶವು ಕಂಡಿದೆ. ದೇಶದ ಎಲ್ಲ ರಾಜ್ಯಗಳೂ ಇಂತಹ ಪರಿಸ್ಥಿತಿಯನ್ನು ಎದುರಿಸಿವೆ. ಕರ್ನಾಟಕವೂ ಇದಕ್ಕೆ ಹೊರತಲ್ಲ. ಇಲ್ಲಿ ಈ ಅವಧಿಯಲ್ಲಿ 82 ದಿನ ಪ್ರತಿಕೂಲ ಹವಾಮಾನ ಉಂಟಾಗಿದೆ. 

ಈ ರೀತಿಯ ಹವಾಮಾನ ಸ್ಥಿತಿಗೆ ಜಾಗತಿಕ ತಾಪಮಾನ ಏರಿಕೆಯೇ ಕಾರಣ ಎಂದು ಪರಿಣತರು ಹೇಳುತ್ತಿದ್ದಾರೆ. ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ಎಂಟು ಜಿಲ್ಲೆಗಳು ಸದಾ ಕಾಲವೂ ಬರದಿಂದ ನರಳುತ್ತಿರುತ್ತವೆ. ಆದರೆ, ಈ ಬಾರಿ ಅಲ್ಲಿ ಯಥೇಚ್ಛ ಮಳೆಯಾಗಿದೆ. ಹಾಗಾಗಿ, ಈ ವರ್ಷವೂ ಅಲ್ಲಿನ ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡರು. 

ಈ ವರ್ಷ ಎಂಟು ರಾಜ್ಯಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಅಂತಹ ರಾಜ್ಯಗಳಲ್ಲಿ ಉತ್ತರ ಪ್ರದೇಶವೂ ಒಂದು. ಆದರೆ ಸೆಪ್ಟೆಂಬರ್‌ ಕೊನೆಯ ವಾರದಲ್ಲಿ ವಾಡಿಕೆಗಿಂತ ಶೇ 193ರಷ್ಟು ಹೆಚ್ಚು ಮಳೆ ಬಿದ್ದಿದೆ. ಪ್ರವಾಹ ಉಂಟಾಗಿದೆ. ಅಕ್ಟೋಬರ್‌ 5ರಂದು ಉತ್ತರ ಪ್ರದೇಶದ ಮೂರು ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ 10,000ದಷ್ಟು ಹೆಚ್ಚು ಮಳೆಯಾಗಿದೆ. 

ಭಾರತದಲ್ಲಿ ಈ ವರ್ಷ ಆಗಿರುವುದು ಇನ್ನು ಮುಂದಿನ ದಿನಗಳ ಸಹಜ ವಾಸ್ತವವೇ ಆಗಿರಲಿದೆ ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ. ಕಳೆದ 20 ವರ್ಷಕ್ಕೆ ಹೋಲಿಸಿದರೆ, ಜಗತ್ತಿನಲ್ಲಿ ಪ್ರಕೃತಿ ವಿಕೋಪಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿವೆ ಎಂಬ ಎಚ್ಚರಿಕೆಯನ್ನು ವಿಶ್ವಸಂಸ್ಥೆಯ ವರದಿಯೊಂದು ನೀಡಿದೆ. ಕಳೆದ 20 ವರ್ಷಗಳಲ್ಲಿ ಅತಿ ಹೆಚ್ಚು ಪ್ರಕೃತಿ ವಿಕೋಪಗಳು ಸಂಭವಿಸಿದ ಮೂರನೇ ದೇಶ ಭಾರತವಾಗಿದೆ. 1995ರಿಂದ 2020ರ ಅವಧಿಯಲ್ಲಿ ಭಾರತದಲ್ಲಿ 1,058 ಪ್ರಕೃತಿ ವಿಕೋಪ ಘಟನೆಗಳು ಉಂಟಾಗಿವೆ ಎಂದು ವಿಪತ್ತು ನಿರ್ವಹಣೆಯ ರಾಷ್ಟ್ರೀಯ ಸಂಸ್ಥೆ (ಎನ್‌ಐಡಿಎಂ) ಹೇಳಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು