ಭಾನುವಾರ, ಮೇ 22, 2022
23 °C
ಆಡಳಿತವನ್ನು ಸೇನೆ ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇಕೆ?

Explainer: ಏನಾಗುತ್ತಿದೆ ಮ್ಯಾನ್ಮಾರ್‌ನಲ್ಲಿ, ಸೇನಾ ದಂಗೆಗೆ ಕಾರಣವೇನು?

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

Myanmar military

ಜಕಾರ್ತ: ಮ್ಯಾನ್ಮಾರ್‌ನಲ್ಲಿ ಆಡಳಿತವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವ ಸೇನೆಯು ಸ್ಟೇಟ್‌ ಕೌನ್ಸಿಲರ್‌ ಆಂಗ್‌ ಸಾನ್ ಸೂಕಿ ಹಾಗೂ ಅವರ ಸರ್ಕಾರದ ಪ್ರಮುಖ ನಾಯಕರನ್ನು ವಶದಲ್ಲಿರಿಸಿದೆ. ಸೇನೆಯು ಈ ನಿರ್ಧಾರಕ್ಕೆ ಮುಂದಾಗಲು ಕಾರಣವೇನಿರಬಹುದು? ಕೆಲವು ಸಾಧ್ಯತೆಗಳ ಮಾಹಿತಿ ಇಲ್ಲಿದೆ.

ಮ್ಯಾನ್ಮಾರ್ ಸಂವಿಧಾನವೇ ಕಾರಣವೇ?

ಸೇನೆಯು ಆಡಳಿತವನ್ನು ನಿಯಂತ್ರಣಕ್ಕೆ ತೆಗದುಕೊಂಡಿರುವ ಬಗ್ಗೆ ವರದಿ ಮಾಡಿರುವ ಟಿವಿ ಚಾನೆಲ್ ಮ್ಯಾನ್ಮಾರ್ ಸಂವಿಧಾನದ 417ನೇ ವಿಧಿಯನ್ನು ಉಲ್ಲೇಖಿಸಿದೆ. ಇದರ ಪ್ರಕಾರ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಆಡಳಿತವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಅಧಿಕಾರ ಸೇನೆಗಿದೆ. ಕೊರೊನಾ ವೈರಸ್ ಬಿಕ್ಕಟ್ಟು, ನವೆಂಬರ್‌ನಲ್ಲಿ ಚುನಾವಣೆಯನ್ನು ಮುಂದೂಡಲು ಸರ್ಕಾರ ವಿಫಲವಾಗಿದ್ದೇ ತುರ್ತು ಪರಿಸ್ಥಿತಿಗೆ ಕಾರಣ ಎಂದು ಚಾನೆಲ್ ಹೇಳಿದೆ.

2008ರಲ್ಲಿ ಸಂವಿಧಾನದ ಕರಡು ಸಿದ್ಧಪಡಿಸಿದ್ದ ಸೇನೆಯು ಪ್ರಜಾಪ್ರಭುತ್ವ, ನಾಗರಿಕ ಆಡಳಿತದಲ್ಲಿ ಲೋಪವಾದಲ್ಲಿ ತಾನೂ ಅಧಿಕಾರದ ಮೇಲೆ ನಿಯಂತ್ರಣ ಪಡೆಯಬಹುದು ಎಂದು ಉಲ್ಲೇಖಿಸಿತ್ತು. ಇದು ದಂಗೆಗೆ ಅನುಕೂಲ ಮಾಡಿಕೊಟ್ಟಂತೆ ಎಂದು ಮಾನವ ಹಕ್ಕು ವಿಚಕ್ಷಣದಳವೂ ಅಭಿಪ್ರಾಯಪಟ್ಟಿತ್ತು.

ಓದಿ: 

ಸಂವಿಧಾನದ ಪ್ರಕಾರ ಸಚಿವ ಸಂಪುಟದಲ್ಲಿ ಪ್ರಮುಖ ಸಚಿವ ಸ್ಥಾನಗಳು ಮತ್ತು ಸಂಸತ್‌ನಲ್ಲಿ ಶೇ 25ರಷ್ಟು ಸ್ಥಾನ ಸೇನೆಗೆ ಮೀಸಲಿಡಲಾಗಿದೆ. ಸೇನೆಯ ಸಮ್ಮತಿಯಿಲ್ಲದೆ ಇದಕ್ಕೆ ತಿದ್ದುಪಡಿ ತರುವುದಕ್ಕೂ ನಿರ್ಬಂಧ ಹೇರಲಾಗಿದೆ.

ಆಡಳಿತದಲ್ಲಿ ಪ್ರಬಲ ಸ್ಥಾನ ಹೊಂದಿದ್ದರೂ ಸೇನೆ ಹೀಗೇಕೆ ಮಾಡಿದೆ ಎಂದು ಕೆಲವು ತಜ್ಞರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು, ಸಶಸ್ತ್ರ ಪಡೆಗಳ ಕಮಾಂಡರ್ ಇನ್ ಚೀಫ್ ಮೀನ್ ಆಂಗ್ ಲಾಯ್ 2011ರಿಂದಲೇ ಅಧಿಕಾರದಲ್ಲಿದ್ದು, ನಿವೃತ್ತಿಗೆ ಸನಿಹರಾಗುತ್ತಿದ್ದಾರೆ. ಈ ಕಾರಣ ಇದ್ದರೂ ಇರಬಹುದು ಎಂದು ಶಂಕಿಸಿದ್ದಾರೆ.


ಸೇನೆಯ ವಶದಲ್ಲಿ ಯಾಂಗೂನ್ ನಗರದ ಸರ್ಕಾರಿ ಕಟ್ಟಡ

‘ಪ್ರಕರಣದ ಸುತ್ತ ಸೇನೆಯ ಆಂತರಿಕ ರಾಜಕೀಯವೂ ಅಡಗಿದೆ. ಅದು ಪಾರದರ್ಶಕವಾಗಿಲ್ಲ. ಆಡಳಿತ ನಿಯಂತ್ರಣಕ್ಕೆ ಪಡೆದಿರುವ ವಿಚಾರ ಸೇನೆಯ ಆಂತರಿಕ ದಂಗೆಗೂ ಸಂಬಂಧಿಸಿರಬಹುದು. ಸೇನೆಯೊಳಗೆ ಅಧಿಕಾರವನ್ನು ಉಳಿಸಿಕೊಳ್ಳುವ ತಂತ್ರವೂ ಆಗಿರಬಹುದು’ ಎಂದು ಮ್ಯಾನ್ಮಾರ್‌ನ ಆಡಳಿತ ಮತ್ತು ಸೇನೆಯ ನಡುವಣ ಸಂಬಂಧದ ಬಗ್ಗೆ ಸಂಶೋಧನಾ ನಿರತರಾಗಿರುವ ಕಿಮ್ ಜಾಲಿಫ್ ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಮ್ಯಾನ್ಮಾರ್ ಉಪಾಧ್ಯಕ್ಷರಾಗಿರುವ, ಮಾಜಿ ಸೇನಾಧಿಕಾರಿ ಮೈಂಟ್ ಸ್ವೀ ಅವರನ್ನು ಸೇನೆಯು ಸರ್ಕಾರದ ಮುಖ್ಯಸ್ಥರನ್ನಾಗಿ ಒಂದು ವರ್ಷದ ಅವಧಿಗೆ ನೇಮಕ ಮಾಡಿದೆ.

ಚುನಾವಣೆ...

ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಸೂಕಿ ಅವರ ಪಕ್ಷವು ಸಂಸತ್‌ನ 476 ಸ್ಥಾನಗಳ ಪೈಕಿ 396ರಲ್ಲಿ ಜಯ ಗಳಿಸಿತ್ತು. ಫಲಿತಾಂಶವನ್ನು ಅಲ್ಲಿನ ಚುನಾವಣಾ ಆಯೋಗ ದೃಢಪಡಿಸಿತ್ತು.

ಆದರೆ, ಫಲಿತಾಂಶ ಘೋಷಣೆಯಾದ ಬೆನ್ನಲ್ಲೇ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಸೇನೆ ಆರೋಪಿಸಿತ್ತು. 314 ಟೌನ್‌ಶಿಪ್‌ಗಳಲ್ಲಿ ಅಕ್ರಮ ಮತದಾನ ನಡೆದಿದೆ. ಅನೇಕ ಮತದಾರರು ಹಲವು ಬಾರಿ ಮತ ಚಲಾಯಿಸಿದ್ದಾರೆ ಎಂದು ಸೇನೆ ದೂರಿತ್ತು.

ಆದರೆ ಈ ಆರೋಪಗಳಿಗೆ ಸೇನೆಯು ದಾಖಲೆ ಒದಗಿಸಿಲ್ಲ ಎಂದು ಜಾಲಿಫ್ ಹೇಳಿದ್ದಾರೆ.

ಓದಿ: 

ಸೇನೆಯ ಆರೋಪವನ್ನು ಚುನಾವಣಾ ಆಯೋಗವು ಕಳೆದ ವಾರ ನಿರಾಕರಿಸಿದ್ದಲ್ಲದೆ, ಆರೋಪಕ್ಕೆ ಸಾಕ್ಷ್ಯಾಧಾರಗಳಿಲ್ಲ ಎಂದಿತ್ತು.

ಈ ಮಧ್ಯೆ, ಒಂದು ವರ್ಷದ ತುರ್ತು ಪರಿಸ್ಥಿತಿ ಮುಕ್ತಾಯಗೊಂಡ ಬಳಿಕ ಚುನಾವಣೆವನ್ನು ನಡೆಸುವುದಾಗಿಯೂ ಅದರಲ್ಲಿ ಗೆದ್ದವರಿಗೆ ಅಧಿಕಾರ ಹಸ್ತಾಂತರಿಸುವುದಾಗಿಯೂ ಸೇನೆ ಹೇಳಿದೆ.

ಈಗ ಹೇಗಿದೆ ಮ್ಯಾನ್ಮಾರ್‌ ಪರಿಸ್ಥಿತಿ?

ಬೆಳಿಗ್ಗೆ, ಮಧ್ಯಾಹ್ನದ ವೇಳೆಗೆ ಮ್ಯಾನ್ಮಾರ್‌ನಲ್ಲಿ ದೂರಸಂಪರ್ಕ ಸ್ಥಗಿತಗೊಂಡಿದೆ. ರಾಜಧಾನಿಯಲ್ಲಿ ಅಂತರ್ಜಾಲ ಸೇವೆ, ದೂರವಾಣಿ ಬಳಕೆ ನಿಷೇಧಿಸಲಾಗಿದೆ. ದೇಶದ ಇತರೆಡೆಗಳಲ್ಲಿ, ಅಂತರ್ಜಾಲ ಸೇವೆ ಲಭ್ಯವಿರುವಲ್ಲಿ ಜನರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಿರುವುದು ಗಮನಕ್ಕೆ ಬಂದಿದೆ.

ಅತಿದೊಡ್ಡ ನಗರ ಯಾಂಗೂನ್‌ನ ರಸ್ತೆಗಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಸರ್ಕಾರಿ ಕಟ್ಟಡಗಳನ್ನು ಸೇನಾ ಪಡೆಗಳು ವಶಕ್ಕೆ ಪಡೆದಿವೆ.

ಓದಿ: 

ನಗರ ನಿವಾಸಿಗಳು ಎಟಿಎಂಗಳಿಗೆ ಮತ್ತು ಆಹಾರೋತ್ಪನ್ನ ಖರೀದಿಗೆ ಮುಗಿಬೀಳುವ ದೃಶ್ಯ ಸಾಮಾನ್ಯವಾಗಿದೆ. ಕೆಲವು ಅಂಗಡಿಗಳು ಸೂಕಿ ಪಕ್ಷ ‘ದಿ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ’ಯ ಬ್ಯಾನರ್‌ಗಳನ್ನು ತೆರವುಗೊಳಿಸಿವೆ.

ಮುಂದೇನಾಗಲಿದೆ?


ಮ್ಯಾನ್ಮಾರ್ ಸೇನೆ ವಿರುದ್ಧ ನೇಪಾಳದಲ್ಲಿ ಪ್ರತಿಭಟನೆ

ಅಂತರರಾಷ್ಟ್ರೀಯ ಸಂಘಟನೆಗಳು ಮತ್ತು ವಿಶ್ವದ ವಿವಿಧ ಸರ್ಕಾರಗಳು ಮ್ಯಾನ್ಮಾರ್ ಸೇನೆಯ ನಡೆಯನ್ನು ಖಂಡಿಸಿವೆ. ಈ ಘಟನೆಯಿಂದ ಮ್ಯಾನ್ಮಾರ್‌ನ ಪ್ರಜಾಸತ್ತಾತ್ಮಕ ಸುಧಾರಣೆಗಳಿಗೆ ಹಿನ್ನಡೆಯಾಗಿದೆ ಎಂದಿವೆ.

‘ಮ್ಯಾನ್ಮಾರ್ ಅನ್ನು ಪ್ರಜಾಪ್ರಭುತ್ವ ದೇಶ ಎಂದು ಪ್ರಸ್ತುತಪಡಿಸುವ ಪ್ರಯತ್ನಗಳಿಗೆ ಇದು ಅತ್ಯಂತ ದೊಡ್ಡ ಹೊಡೆತವಾಗಿದೆ’ ಎಂದು ಮಾನವ ಹಕ್ಕು ವಿಚಕ್ಷಣದಳದ ಕಾನೂನು ಸಲಹೆಗಾರ ಲಿಂಡಾ ಲಖ್ದೀರ್ ಹೇಳಿದ್ದಾರೆ.

ಸೇನೆಯು ಇನ್ನಷ್ಟು ನಿರ್ಬಂಧಗಳನ್ನು ವಿಧಿಸುವ ಬಗ್ಗೆ ಮಾನವ ಹಕ್ಕು ವಿಚಕ್ಷಣದಳಗಳೂ ಆತಂಕಗೊಂಡಿವೆ.

ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಾಗ ಹಿಂಪಡೆಯಲಾಗಿದ್ದ ಕೆಲವು ನಿರ್ಬಂಧಗಳನ್ನು ಅಮೆರಿಕವು ಮತ್ತೆ ಹೇರುವ ಸಾಧ್ಯತೆ ಇದೆ ಎಂದು ಅಮೆರಿಕದ ಸಂಸದರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದಿಂದ ನಿರ್ಬಂಧ ವಿಧಿಸುವ ಎಚ್ಚರಿಕೆ

ಮ್ಯಾನ್ಮಾರ್ ಸೇನೆಯು ತಕ್ಷಣವೇ ನಾಯಕರನ್ನು ಬಿಡುಗಡೆ ಮಾಡಬೇಕು ಎಂದು ಮೆರಿಕದ ವಿದೇಶಾಂಗ ವ್ಯವಹಾರಗಳ ಸಮಿತಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಬಾಬ್ ಮೆನೆಂಡೆಜ್ ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಅಮೆರಿಕವು ಮ್ಯಾನ್ಮಾರ್ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಲಿದೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಬೆಳವಣಿಗೆಗಳನ್ನು ಅವಲೋಕಿಸಲಾಗುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮರುಸ್ಥಾಪಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಯಾವುದೇ ಕ್ರಮ ಕೈಗೊಳ್ಳಲು ಅಮೆರಿಕ ಸಿದ್ಧ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆ ಸಾಕಿಯೂ ಹೇಳಿದ್ದಾರೆ.

ಓದಿ: 

ಈ ಮಧ್ಯೆ, ಮ್ಯಾನ್ಮಾರ್‌ನಲ್ಲಿ ಸೇನಾ ದಂಗೆ ಮತ್ತು ಉನ್ನತ ರಾಜಕೀಯ ನಾಯಕರನ್ನು ಸೇನೆ ವಶದಲ್ಲಿಟ್ಟುಕೊಂಡಿರುವುದರ ಬಗ್ಗೆ ಭಾರತವೂ ಕಳವಳ ವ್ಯಕ್ತಪಡಿಸಿದೆ. ಮ್ಯಾನ್ಮಾರ್‌ನಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಭಾರತ ಸದಾ ಬೆಂಬಲ ನೀಡುತ್ತದೆ ಎಂದು ವಿದೇಶಾಂಗ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ದಂಗೆ ವಿರೋಧಿಸಿ: ಸೂ ಕಿ

‘ದೇಶದಲ್ಲಿ ಸೇನೆಯ ದಂಗೆಯನ್ನು ವಿರೋಧಿಸಿ’ ಎಂದು ಅಂಗ್‌ ಸಾನ್‌ ಸೂ ಕಿ ನೇತೃತ್ವದ ನ್ಯಾಷನಲ್‌ ಲೀಗ್‌ ಫಾರ್‌ ಡೆಮಾಕ್ರಸಿ ಪಕ್ಷ ಜನರಿಗೆ ಮನವಿ ಮಾಡಿದೆ. ಸೂ ಕಿ ಅವರು ತಮ್ಮ ಫೇಸ್‌ಬುಕ್‌ ಖಾತೆ ಮೂಲಕ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

‘ಸೇನೆಯ ಈ ದಂಗೆಯನ್ನು ಸಮರ್ಥಿಸಲಾಗದು. ಸೇನೆಯ ಈ ನಡೆ ಸಂವಿಧಾನದ ಆಶಯ ಹಾಗೂ ಮತದಾರರ ತೀರ್ಪಿಗೆ ವಿರುದ್ಧವಾಗಿದೆ. ಯಾವುದೇ ಕಾರಣಕ್ಕೂ ದೇಶದಲ್ಲಿ ಮತ್ತೆ ಮಿಲಿಟರಿ ಸರ್ವಾಧಿಕಾರಿ ಆಡಳಿತ ಬರದಂತೆ ನೋಡಿಕೊಳ್ಳಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು