ಶುಕ್ರವಾರ, ಮೇ 20, 2022
19 °C

ಆಳ-ಅಗಲ| ಎಎಪಿ, ಟಿಎಂಸಿ ನೆಲೆ ವಿಸ್ತರಣೆ: ಕಾಂಗ್ರೆಸ್‌ಗೆ ಬವಣೆ

ಹಮೀದ್‌ ಕೆ., ಜಯಸಿಂಹ ಆರ್‌., ಅಮೃತ್ ಕಿರಣ್ ಬಿ.ಎಂ. Updated:

ಅಕ್ಷರ ಗಾತ್ರ : | |

2014ರಲ್ಲಿ ಆರಂಭವಾದ ಇಳಿಜಾರು ಹಾದಿಯ ಜಾರುವಿಕೆಯ ಪಥ ಬದಲಿಸಿಕೊಳ್ಳಲು ಕಾಂಗ್ರೆಸ್‌ ಪಕ್ಷಕ್ಕೆ ಈವರೆಗೆ ಸಾಧ್ಯವಾಗಿಲ್ಲ. ಸವಾಲುಗಳ ಸಾಲು ಸಾಲು ಆ ಪಕ್ಷದ ಮುಂದಿನಿಂದ ಮರೆಯಾದದ್ದೇ ಇಲ್ಲ. ನಾಯಕತ್ವ ದುರ್ಬಲ, ಪಕ್ಷವು ಚುನಾವಣೆ ಗೆಲ್ಲುತ್ತಿಲ್ಲ, ದೊಡ್ಡ ದೊಡ್ಡ ಮುಖಂಡರೆಲ್ಲ ಪಕ್ಷ ತೊರೆದರು, ಇರುವ ನಾಯಕರ ನಡುವೆ ಮನಸ್ತಾಪ, ಪೈಪೋಟಿ, ಜನರ ಮನಗೆಲ್ಲಬಲ್ಲ ಗಟ್ಟಿ ಸಿದ್ಧಾಂತವೊಂದನ್ನು ರೂಪಿಸಿಕೊಳ್ಳಲು ಸಾಧ್ಯವಾಗಿಲ್ಲ... ಹೀಗೆ ಪಟ್ಟಿ ಮುಗಿಯುವುದಿಲ್ಲ. ಅದೇನೇ ಇದ್ದರೂ ರಾಷ್ಟ್ರವ್ಯಾಪಿ ಹೆಜ್ಜೆ ಗುರುತು ಇರುವ ಕಾರಣಕ್ಕೆ ಕೇಂದ್ರದಲ್ಲಿ ವಿರೋಧ ಪಕ್ಷಗಳ ನಾಯಕತ್ವದ ಅವಕಾಶವು ತಾನೇ ತಾನಾಗಿ ಆ ಪಕ್ಷದ ಮಡಿಲಿಗೆ ಬಿದ್ದಿದೆ. ಆದರೆ, ಈಗ ಈ ಅವಕಾಶವು ಕೂಡ ಕೈ ತಪ್ಪುವ ಸುಳಿವುಗಳು ರಾಜಕೀಯ ದಿಗಂತದಲ್ಲಿ ಕಾಣಿಸಿಕೊಳ್ಳತೊಡಗಿವೆ. ಕಾಂಗ್ರೆಸ್‌ ಈಗ ಇರುವ ಸ್ಥಾನವನ್ನು ಆಕ್ರಮಿಸಿಕೊಳ್ಳಲು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮತ್ತು ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಾರ್ಟಿ (ಎಎಪಿ) ಯೋಜಿತ
ಪ್ರಯತ್ನಗಳನ್ನು ನಡೆಸುತ್ತಿವೆ. 

ಬಲಶಾಲಿ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿದ ಹೆಗ್ಗಳಿಕೆ ಈ ಎರಡೂ ಪಕ್ಷಗಳಿಗೆ ಇದೆ. ದೆಹಲಿಯ 70 ವಿಧಾನಸಭಾ ಕ್ಷೇತ್ರಗಳ ಪೈಕಿ 67ರಲ್ಲಿ ಎಎಪಿ ಶಾಸಕರಿದ್ದಾರೆ. ಪಶ್ಚಿಮ ಬಂಗಾಳದ 294 ಕ್ಷೇತ್ರಗಳ ಪೈಕಿ 215ರಲ್ಲಿ ಟಿಎಂಸಿ ಗೆದ್ದಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರತಿಷ್ಠೆ ಪಣಕ್ಕಿಟ್ಟು ಮುಂಚೂಣಿಯಲ್ಲಿ ನಿಂತು ಪ್ರಚಾರ ನಡೆಸಿದರೂ ಬಿಜೆಪಿ ಗೆದ್ದದ್ದು 77 ಕ್ಷೇತ್ರಗಳಲ್ಲಿ ಮಾತ್ರ. ಎಎಪಿ, ಟಿಎಂಸಿ ಗೆಲುವಿನ ಹೊಳಪಿನ ಮುಂದೆ ಕಾಂಗ್ರೆಸ್‌ ಪಕ್ಷವು ಪೇಲವವಾಗಿ ಕಾಣಿಸುವುದು ಸಹಜವೇ ಆಗಿದೆ. ಸ್ಥಾಪನೆಯ 137ನೇ ವರ್ಷಾಚರಣೆಯನ್ನು ಕಾಂಗ್ರೆಸ್‌ ಪಕ್ಷವು ಮಂಗಳವಾರ ಮಾಡಿದೆ. ಆದರೆ, ಈ ಹೊತ್ತಿಗೆ ಅತ್ಯಂತ ಹಳೆಯ ಪಕ್ಷದ ಬೇರುಗಳು ಸಡಿಲವಾಗಿವೆ. ಸುದೀರ್ಘ ಕಾಲ ಈ ದೇಶದಲ್ಲಿ ಅಧಿಕಾರದಲ್ಲಿದ್ದ ಪಕ್ಷವು ಸ್ವಂತ ಬಲದಲ್ಲಿ ಈಗ ಮೂರು ರಾಜ್ಯಗಳಲ್ಲಿ (ರಾಜಸ್ಥಾನ, ಛತ್ತೀಸಗಡ, ಪಂಜಾಬ್‌) ಮಾತ್ರ ಅಧಿಕಾರದಲ್ಲಿದೆ. ಮಹಾರಾಷ್ಟ್ರ, ಜಾರ್ಖಂಡ್‌ ಮತ್ತು ತಮಿಳುನಾಡಿನಲ್ಲಿ ಸರ್ಕಾರದ ಭಾಗವಾಗಿದ್ದರೂ, ಕಿರಿಯ ಪಾಲುದಾರನ ಸ್ಥಾನವಷ್ಟೇ ಇದೆ. 

ತ್ರಿಪುರಾ, ಅಸ್ಸಾಂ ಮತ್ತು ಗೋವಾದಲ್ಲಿ ತನ್ನ ಬೇರೂರಲು ಟಿಎಂಸಿ ಪ್ರಯತ್ನ ನಡೆಸಿದೆ. ಪಂಜಾಬ್‌, ಹರಿಯಾಣ, ಉತ್ತರಾಖಂಡ, ಉತ್ತರ ಪ್ರದೇಶ, ಗುಜರಾತ್‌ ಮತ್ತು ಗೋವಾದಲ್ಲಿ ನೆಲೆಯೂರಲು ಎಎಪಿ ಯೋಜನೆಗಳನ್ನು ರೂಪಿಸಿದೆ. ಈ ರಾಜ್ಯಗಳಲ್ಲಿ ತಕ್ಷಣಕ್ಕೆ ಅಧಿಕಾರಕ್ಕೆ ಬರಬಹುದು ಎಂಬ ನಂಬಿಕೆ ಈ ಪಕ್ಷಗಳಿಗೆ ಇದ್ದಂತಿಲ್ಲ. 2024ರ ಲೋಕಸಭೆಯ ಚುನಾವಣೆಯ ಮೇಲೆ ಕಣ್ಣಿಟ್ಟುಕೊಂಡೇ ಕಾರ್ಯತಂತ್ರ ಹೆಣೆಯಲಾಗುತ್ತಿದೆ. 

2024ರಲ್ಲಿ ಬಿಜೆಪಿಯ ವಿರುದ್ಧ ವಿರೋಧ ಪಕ್ಷಗಳೆಲ್ಲವೂ ಒಟ್ಟಾಗಬೇಕು ಎಂಬ ಪ್ರಸ್ತಾವ ಗಟ್ಟಿಗೊಳ್ಳುತ್ತಿದೆ. ಹಾಗೆ ಒಟ್ಟಾದರೆ ಅದರ ನಾಯಕತ್ವ ತಮ್ಮದಾಗಬೇಕು ಎಂಬುದು ಮಮತಾ ಲೆಕ್ಕಾಚಾರ. ಬಿಜೆಪಿಯನ್ನು ಸೋಲಿಸಲು ತಮಗೆ ಮಾತ್ರ ಸಾಧ್ಯ ಎಂಬ ಭಾವನೆ ಅವರಲ್ಲಿ ಇದೆ. ಹಲವು ರಾಜ್ಯಗಳಲ್ಲಿ ನೆಲೆ ಇದ್ದರೆ, ವಿರೋಧ ಪಕ್ಷಗಳ ಕೂಟದ ಸೀಟು ಹಂಚಿಕೆಯಲ್ಲಿ ಚೌಕಾಸಿ ಸಾಮರ್ಥ್ಯ ಹೆಚ್ಚುತ್ತದೆ ಎಂಬ ಯೋಚನೆ ಎಎಪಿಯಲ್ಲಿ ಇದೆ. 

ಕಾಂಗ್ರೆಸ್‌ನಿಂದ ಸಿಡಿದು ಹೋಗಿ ರೂಪುಗೊಂಡ ಪಕ್ಷಗಳೆಲ್ಲ ಒಗ್ಗಟ್ಟಾಗುವ ಇನ್ನೊಂದು ಪ್ರಸ್ತಾವವೂ ಇದೆ. ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ, ಮಮತಾ ಅವರ ಟಿಎಂಸಿ, ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ ತಮ್ಮ ತಮ್ಮ ರಾಜ್ಯಗಳಲ್ಲಿ ಬಲವಾಗಿವೆ. ಇವೆಲ್ಲ ಒಂದಾದರೆ, ವಿರೋಧ ಪಕ್ಷಗಳ ನಾಯಕತ್ವ ಅವಕಾಶವು ಕಾಂಗ್ರೆಸ್‌ನಿಂದ ಜಾರುತ್ತದೆ.  

ವಿರೋಧ ಪಕ್ಷಗಳ ಒಕ್ಕೂಟದ ನಾಯಕತ್ವವು ದೇಶದ ಎಲ್ಲೆಡೆಯೂ ‘ಅಸ್ತಿತ್ವ’ ಇರುವ ಕಾಂಗ್ರೆಸ್‌ ಪಕ್ಷದ್ದೇ ಆಗಿರಬೇಕು. ಇಲ್ಲವಾದರೆ ಬಿಜೆಪಿಯನ್ನು ಸೋಲಿಸಲಾಗದು ಎಂಬುದು ಕಾಂಗ್ರೆಸ್‌ ಪಕ್ಷದ ಪ್ರತಿಪಾದನೆ. ಗೋವಾದಂತಹ ಬಿಜೆಪಿ–ಕಾಂಗ್ರೆಸ್‌ ನೇರ ಹೋರಾಟ ಇರುವ ರಾಜ್ಯದಲ್ಲಿ ಎಎಪಿ ಮತ್ತು ಟಿಎಂಸಿಯ ಪ್ರಯತ್ನವು ಬಿಜೆಪಿಗೆ ನೆರವಾಗುತ್ತದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಗೋವಾ ಇರಲಿ ಪ‍ಂಜಾಬ್‌ ಇರಲಿ ಎಲ್ಲೆಡೆಯೂ ಎಎಪಿ, ಟಿಎಂಸಿಯ ವಿಸ್ತರಣೆ ಪ್ರಯತ್ನವು ಕಾಂಗ್ರೆಸ್‌ ಮತಬುಟ್ಟಿಗೇ ಕೈ ಹಾಕುತ್ತದೆ ಎಂಬುದರಲ್ಲಿ ಅನುಮಾನ ಇಲ್ಲ. ಇದರಿಂದಾಗಿ, ಮೊದಲೇ ದುರ್ಬಲವಾಗಿರುವ ಕಾಂಗ್ರೆಸ್‌ ಇನ್ನಷ್ಟು ಶಿಥಿಲವಾಗಬಹುದು. 

ಬ್ರ್ಯಾಂಡ್‌ ಮಮತಾ: ಟಿಎಂಸಿ ಕಸರತ್ತು

ಪಶ್ಚಿಮ ಬಂಗಾಳದ ಆಚೆಗೂ ತನ್ನ ನೆಲೆ ಕಂಡುಕೊಳ್ಳಲು ಟಿಎಂಸಿ ಯತ್ನಿಸುತ್ತಿದೆ. ತ್ರಿಪುರಾ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿ ಕೈಸುಟ್ಟುಕೊಂಡಿದೆ. ಮುಂದಿನ ವರ್ಷ ಚುನಾವಣೆ ಎದುರಿಸಲಿರುವ ಮೇಘಾಲಯ ಮತ್ತು ಗೋವಾದಲ್ಲಿ ಅದೃಷ್ಟ ಪರೀಕ್ಷೆಗೆ ಟಿಎಂಸಿ ಮುಂದಾಗಿದೆ. ಕಾಂಗ್ರೆಸ್‌ ಮುಖಂಡರನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಟಿಎಂಸಿಯ ಒಂದು ಕಾರ್ಯತಂತ್ರ. ಅಸ್ಸಾಂ, ತ್ರಿಪುರಾ, ಗೋವಾ, ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್‌ ಮುಖಂಡರು ಟಿಎಂಸಿ ಸೇರಿದ್ದಾರೆ.  

ಟಿಎಂಸಿಯ ಚಟುವಟಿಕೆಗಳನ್ನು ‘ಮಮತಾ ಬ್ಯಾನರ್ಜಿಯ ಬ್ರ್ಯಾಂಡ್‌ ಬಿಲ್ಡಿಂಗ್ ಕಸರತ್ತು’ ಎಂದು ಒಂದು ವರ್ಗದ ರಾಜಕೀಯ ತಜ್ಞರು ವ್ಯಾಖ್ಯಾನಿಸಿದ್ದಾರೆ. ಟಿಎಂಸಿಯ ಹಲವು ನಾಯಕರೂ ಇದನ್ನು ಒಪ್ಪಿಕೊಂಡಿದ್ದಾರೆ. ‘ದೇಶದಲ್ಲಿ ಬಿಜೆಪಿಯನ್ನು ಬಗ್ಗುಬಡಿಯಬಲ್ಲ ಏಕೈಕ ಪಕ್ಷ ಟಿಎಂಸಿ’, ಮತ್ತು ‘ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಜೋಡಿಯನ್ನು ಸಮರ್ಥವಾಗಿ ಎದುರಿಸಬಲ್ಲ ಏಕೈಕ ಪ್ರಬಲ ನಾಯಕಿ ಮಮತಾ ಬ್ಯಾನರ್ಜಿ’ ಎಂಬ ಮಾತುಗಳನ್ನು ಟಿಎಂಸಿ ನಾಯಕರು ಹಲವು ಬಾರಿ ಹೇಳಿದ್ದಾರೆ. ಬೇರೆ ಪಕ್ಷಗಳಿಂದ ಟಿಎಂಸಿಗೆ ಕರೆಸಿಕೊಳ್ಳಲಾದ ನಾಯಕರಿಂದಲೂ ಈ ಮಾತುಗಳನ್ನು ಹೇಳಿಸಲಾಗಿದೆ. ಈ ಮೂಲಕ ಮಮತಾ ಬ್ಯಾನರ್ಜಿ ರಾಷ್ಟ್ರಮಟ್ಟದ ನಾಯಕಿ ಎಂದು ಬಿಂಬಿಸಲಾಗುತ್ತಿದೆ. ಈ ಕೆಲಸವನ್ನು ಟಿಎಂಸಿ ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಿದೆ.

ಟಿಎಂಸಿ ಒಂದು ರಾಷ್ಟ್ರೀಯ ಪಕ್ಷ ಎನಿಸಿಕೊಳ್ಳಲು, ಪಶ್ಚಿಮ ಬಂಗಾಳದ ಆಚೆಗೂ ಅದು ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಬೇಕು. ಆದರೆ ಟಿಎಂಸಿ ಮತ್ತು ಮಮತಾ ಬ್ಯಾನರ್ಜಿ ಅವರ ರಾಜಕಾರಣದ ಸ್ವರೂಪವು ಎಲ್ಲಾ ರಾಜ್ಯಗಳಿಗೆ ಒಪ್ಪುವುದಿಲ್ಲ. ಇದಕ್ಕಾಗಿ ಪಶ್ಚಿಮ ಬಂಗಾಳದೊಂದಿಗೆ ಸಾಂಸ್ಕೃತಿಕ ಸಂಬಂಧ ಹೊಂದಿರುವ ರಾಜ್ಯಗಳಲ್ಲಿ ತನ್ನ ನೆಲೆ ಕಂಡುಕೊಳ್ಳಲು ಟಿಎಂಸಿ ಮುಂದಾಗಿದೆ. ಬಂಗಾಳಿ ಭಾಷಿಕರು ಅಧಿಕವಾಗಿರುವ ತ್ರಿಪುರಾ ಮತ್ತು ಅಸ್ಸಾಂನಲ್ಲಿ ಟಿಎಂಸಿ ತನ್ನ ಕಚೇರಿಯನ್ನು ತೆರೆದಿದೆ. ತ್ರಿಪುರಾದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಎದುರು ಸ್ಪರ್ಧಿಸಿ, ಬೀದಿಕಾಳಗವನ್ನೂ ನಡೆಸಿದೆ. ಆದರೆ ಅದರ ಪ್ರತಿಫಲ ಫಲಿತಾಂಶದಲ್ಲಿ ಪ್ರತಿಬಿಂಬಿಸಲಿಲ್ಲ. ಬಂಗಾಳಿ ಭಾಷಿಕರು ಮತ್ತು ಮುಸ್ಲಿಮರು ಬಹುಸಂಖ್ಯಾತವಾಗಿರುವ ಅಸ್ಸಾಂನ ಬರಾಕ್‌ ಕಣಿವೆಯಲ್ಲಿ ಟಿಎಂಸಿ ಪಕ್ಷದ ಪದಾಧಿಕಾರಿಗಳನ್ನು ನೇಮಿಸಿದೆ. ಕಾಂಗ್ರೆಸ್‌ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ.

ತಾನು ಸ್ವತಂತ್ರವಾಗಿ ನೆಲೆ ಕಂಡುಕೊಳ್ಳಲು ಸಾಧ್ಯವಿಲ್ಲದೇ ಇರುವ ರಾಜ್ಯಗಳಲ್ಲಿ, ಪ್ರಾದೇಶಿಕ ಪಕ್ಷಗಳ ಜತೆಗೆ ಕೈಜೋಡಿಸಲು ಟಿಎಂಸಿ ಮುಂದಾಗಿದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಟಿಎಂಸಿ ಬೆಂಬಲ ಘೋಷಿಸಿದೆ. ಸ್ವತಃ ಮಮತಾ ಬ್ಯಾನರ್ಜಿ ಅವರು ಅಖಿಲೇಶ್ ಪರವಾಗಿ ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ. ಇದೇ ರೀತಿಯ ಮೈತ್ರಿಯನ್ನು ಎನ್‌ಸಿಪಿ ಮತ್ತು ಶಿವಸೇನಾ ಜತೆಗೆ ಮಾಡಿಕೊಳ್ಳಲು ಟಿಎಂಸಿ ಮುಂದಾಗಿದೆ. ಆದರೆ ಆ ಎರಡು ಯತ್ನಗಳು ನಿರೀಕ್ಷಿತ ಹಂತ ಮುಟ್ಟಿಲ್ಲ. 

ಈ ಎಲ್ಲಾ ಕಸರತ್ತುಗಳನ್ನು ನಡೆಸುವಾಗ ಟಿಎಂಸಿ ಒಂದು ಮಾತನ್ನಂತೂ ಒತ್ತಿ ಒತ್ತಿ ಹೇಳುತ್ತಿದೆ. ‘ವಿರೋಧ ಪಕ್ಷದ ಸ್ಥಾನವನ್ನು ನಿರ್ವಹಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ’ ಎಂಬುದೇ ಆ ಮಾತು. ಸ್ವತಃ ಮಮತಾ ಬ್ಯಾನರ್ಜಿ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಇದನ್ನು ಹೇಳಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಕಾಂಗ್ರೆಸ್ ನಾಯಕತ್ವದ ವಿರುದ್ಧ ಮಮತಾ ಬ್ಯಾನರ್ಜಿ ಅವರು ಹರಿಹಾಯುತ್ತಿದ್ದಾರೆ. ಮಮತಾ ಬ್ಯಾನರ್ಜಿ ಅವರಂತಹ ಆಕ್ರಮಣಕಾರಿ ನಾಯಕತ್ವದಿಂದ ಮಾತ್ರವೇ ಮೋದಿ–ಶಾ ಜೋಡಿಯನ್ನು ಸೋಲಿಸಲು ಸಾಧ್ಯ ಎನ್ನಲಾಗುತ್ತಿದೆ. ಆ ಮೂಲಕ ಮಮತಾ ಬ್ಯಾನರ್ಜಿಯ ಬ್ರ್ಯಾಂಡ್‌ ಕಟ್ಟಲಾಗುತ್ತಿದೆ.

ಕಾಂಗ್ರೆಸ್‌ ಮತಬುಟ್ಟಿಗೆ ಎಎಪಿ ಕೈ

ಚಂಡೀಗಡ ಮಹಾನಗರಪಾಲಿಕೆಗೆ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶವನ್ನು ಗಮನಿಸಿದರೆ, ಆಮ್ ಆದ್ಮಿ ಪಕ್ಷದಿಂದ ನಿಜಕ್ಕೂ ದೊಡ್ಡ ಪೆಟ್ಟು ಬಿದ್ದಿರುವುದು ಬಿಜೆಪಿಗೆ ಅಲ್ಲ, ಕಾಂಗ್ರೆಸ್ ಪಕ್ಷಕ್ಕೆ ಎಂಬುದು ಸ್ಪಷ್ಟ. ಎಎಪಿ ಹೋದ ಕಡೆಯಲ್ಲೆಲ್ಲಾ ಕಾಂಗ್ರೆಸ್ ಮತ ಗಳಿಕೆ ಪ್ರಮಾಣ ಹಾಗೂ ಸೀಟುಗಳು ಕುಸಿಯುತ್ತಿವೆ. ಸ್ಥಳೀಯಾಡಳಿತ ಸಂಸ್ಥೆ, ವಿಧಾನಸಭೆಗಳ ಮೇಲಿನ ಹಿಡಿತದ ಮೂಲಕ ಲೋಕಸಭೆಗೆ ರಹದಾರಿ ಮಾಡಿಕೊಳ್ಳುವ ಉದ್ದೇಶ ಎಎಪಿಯದ್ದು. 

ಚಂಡೀಗಡ ಪಾಲಿಕೆ ಚುನಾವಣೆಯಲ್ಲಿ ಎಎಪಿ ತೋರಿದ ಪ್ರದರ್ಶನವು ಗಮನಾರ್ಹ. ಬಿಜೆಪಿಯ ಮೇಯರ್ ಅವರನ್ನೇ ಸೋಲಿಸಿದ ಎಎಪಿ 35ರ ಪೈಕಿ 14 ಸ್ಥಾನಗಳನ್ನು ಗೆದ್ದಿದ್ದು, 2022ರಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಪೈಪೋಟಿಯ  ಮುನ್ಸೂಚನೆ ನೀಡಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಅನ್ನು ಎರಡು ಹಾಗೂ ಮೂರನೇ ಸ್ಥಾನಕ್ಕೆ ಎಎಪಿ ತಳ್ಳಿದೆ.  

ಪಂಜಾಬ್‌ ವಿಧಾನಸಭೆಗೆ 2017ರಲ್ಲಿ ನಡೆದ ಚುನಾವಣೆಯಲ್ಲಿಯೇ ಎಎಪಿ ಗೆಲ್ಲಲಿದೆ ಎಂದು ವಿಶ್ಲೇಷಿಸಲಾಗಿತ್ತು. ಎಎಪಿ 100 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆಗಳೂ ಅಂದಾಜಿಸಿದ್ದವು. ಕಾಂಗ್ರೆಸ್‌ನಲ್ಲಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಎಎಪಿಗೆ ಈ ಅವಕಾಶ ನೀಡಲಿಲ್ಲ. ಆದರೂ, 20 ಶಾಸಕರು ಆಯ್ಕೆಯಾಗುವ ಮೂಲಕ ಶೇ 23.8ರಷ್ಟು ಮತಗಳನ್ನು ಗಳಿಸಿತ್ತು.  

ಈಗ, ಪಂಜಾಬ್‌ನ ರಾಜಕೀಯ ಚಿತ್ರಣ ಬದಲಾಗಿದೆ. ಕಾಂಗ್ರೆಸ್‌ನಿಂದ ಕ್ಯಾಪ್ಟನ್ ಹೊರಬಂದಿದ್ದಾರೆ. ನೆಲೆಗೆ ಹುಡುಕಾಡುತ್ತಿರುವ ಬಿಜೆಪಿ ಜೊತೆ ಅವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಬದಲಾವಣೆ, ರಾಜ್ಯಾಧ್ಯಕ್ಷರ ಬದಲಾವಣೆ, ರಾಜೀನಾಮೆ ಪ್ರಹಸನ ಮೊದಲಾದ ಕಾರಣಗಳಿಂದ ಕಾಂಗ್ರೆಸ್‌ ಬಿಕ್ಕಟ್ಟಿನಲ್ಲಿದೆ. ಇದರ ನೇರ ಲಾಭ ಸಿಗುವುದು ಎಎಪಿಗೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಡುತ್ತಾರೆ. 

ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿಯೂ ಎಎಪಿ ಅಸ್ತಿತ್ವ ಇದೆ. 2021ರ ಮಾರ್ಚ್‌ನಲ್ಲಿ ಪ್ರಕಟವಾದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮೇಲುಗೈ ಸಾಧಿಸಿದರೂ, ರಾಜ್ಯದ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್‌ಗೆ ಎಎಪಿ ಅಡ್ಡಿಯಾಗಿದ್ದು ಸುಳ್ಳಲ್ಲ. 44 ವಾರ್ಡುಗಳಲ್ಲಿ ಎಎಪಿ ಗೆದ್ದಿದೆ. 2022ರ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್‌ಗೆ ಪೈಪೋಟಿ ನೀಡುವ ಸ್ಪಷ್ಟ ಸಂದೇಶವನ್ನು ಈ ಫಲಿತಾಂಶದ ಮೂಲಕ ಎಎಪಿ ರವಾನಿಸಿತ್ತು. 

ಗಾಂಧಿನಗರ ಪಾಲಿಕೆಯಲ್ಲಿ ಬಿಜೆಪಿ ಗೆದ್ದಿದ್ದು 41 ಸ್ಥಾನ. ಕಾಂಗ್ರೆಸ್ ಎರಡು ವಾರ್ಡ್‌ಗಳಲ್ಲಿ, ಎಎಪಿ ಒಂದು ವಾರ್ಡ್‌ನಲ್ಲಿ ಗೆದ್ದಿವೆ. ಎಎಪಿಯ ಸ್ಪರ್ಧೆಯಿಂದಾಗಿ ಕಾಂಗ್ರೆಸ್‌ನ ಮತ ಪ್ರಮಾಣ ಶೇ 21ಕ್ಕೆ ಕುಸಿದಿದೆ. ಹಾಗೆಯೇ ಫೆಬ್ರುವರಿಯಲ್ಲಿ ನಡೆದ ಸೂರತ್ ಪಾಲಿಕೆ ಚುನಾವಣೆಯಲ್ಲಿ ಎಎಪಿ ಶೇ 28ರಷ್ಟು ಮತಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದು, ಪಕ್ಷ ಭದ್ರವಾಗಿ ನೆಲೆಯೂರುತ್ತಿರುವ ಸೂಚನೆ ಇದು.  

2017ರಿಂದಲೂ ಗೋವಾದಲ್ಲಿ ಅಸ್ತಿತ್ವಕ್ಕಾಗಿ ಹುಡುಕಾಡುತ್ತಿರುವ ಆಮ್ ಆದ್ಮಿ ಪಕ್ಷವು ಪ್ರಖರ ಪ್ರಚಾರದ ಹೊರತಾಗಿಯೂ ಚುನಾವಣೆಯಲ್ಲಿ ಸೋಲುಂಡಿತ್ತು. 17 ಸ್ಥಾನ ಗೆದ್ದಿದ್ದರೂ ಈಗ 2 ಸ್ಥಾನಗಳಿಗೆ ಕುಸಿದಿರುವ ಕಾಂಗ್ರೆಸ್‌, ಈ ಬಾರಿ ಎಎಪಿಯಿಂದ ಪ್ರಬಲ ಪ್ರತಿರೋಧ ಎದುರಿಸುವ ಸಾಧ್ಯತೆಯುದೆ. ಎಬಿಪಿ–ಸಿ ವೋಟರ್ ಸಮೀಕ್ಷೆಯು ಎಎಪಿ ಪರವಾದ ಅಲೆಯಿದೆ ಎಂಬ ಸೂಚನೆ ನೀಡಿದೆ. ಎಎಪಿ ಶೇ 22ರಷ್ಟು ಮತಗಳನ್ನು ಗಳಿಸುವ ಸಾಧ್ಯತೆಯಿದೆ. ಈ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಗಳಿಸಲಿರುವ ಮತ ಪ್ರಮಾಣ ಶೇ 15ರಷ್ಟು ಮಾತ್ರ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು