ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ –ಅಗಲ: ಬೆಲೆ ಕುಸಿತದ ಕೂಪದಲ್ಲಿ ಕೊಬ್ಬರಿ ಬೆಳೆಗಾರ

Last Updated 8 ಮಾರ್ಚ್ 2023, 19:45 IST
ಅಕ್ಷರ ಗಾತ್ರ

ಕೊಬ್ಬರಿ ವಹಿವಾಟಿಗೆ ಖ್ಯಾತವಾದ ರಾಜ್ಯದ ಪ್ರಮುಖ ಎಪಿಎಂಸಿ ಮಾರುಕಟ್ಟೆಗಳಲ್ಲಿ ಕೊಬ್ಬರಿಯ ಬೆಲೆ ವಿಪರೀತ ಕುಸಿದಿದೆ. 2022ರ ಮಾರ್ಚ್‌ನಲ್ಲಿ ಕ್ವಿಂಟಲ್‌ ಉಂಡೆ ಕೊಬ್ಬರಿಗೆ ₹18,000ದ ಆಸುಪಾಸಿನಲ್ಲಿದ್ದ ಬೆಲೆಯು, 2023ರ ಮಾರ್ಚ್‌ ವೇಳೆಗೆ ₹ 9,000ದ ಆಸುಪಾಸಿಗೆ ಕುಸಿದಿದೆ. ಕೇವಲ ಒಂದು ವರ್ಷದ ಅವಧಿಯಲ್ಲಿ ಕೊಬ್ಬರಿಯ ಬೆಲೆಯಲ್ಲಿ ಶೇ 50ರಷ್ಟು ಇಳಿಕೆಯಾಗಿದೆ. ಕೈಗೆ ಬಂದು ನಿಂತಿರುವ ಕೊಬ್ಬರಿಯನ್ನು ನಷ್ಟದ ಬೆಲೆಗೇ ಮಾರಾಟ ಮಾಡುವ ಅನಿವಾರ್ಯತೆಗೆ ಕೊಬ್ಬರಿ ಬೆಳೆಗಾರ ಬಂದುನಿಂತಿದ್ದಾನೆ.

2022ರ ಮಾರ್ಚ್‌ನಲ್ಲಿ ಕ್ವಿಂಟಾಲ್‌ಗೆ ₹18,000 ಆಸುಪಾಸಿನಲ್ಲಿದ್ದರೂ, ಸರ್ಕಾರವು ನಿಗದಿ ಮಾಡಿದ್ದ ಬೆಂಬಲ ಬೆಲೆ ಪ್ರತಿ ಕ್ವಿಂಟಲ್‌ಗೆ ₹10,600 ಮಾತ್ರ. 2022–23ನೇ ಸಾಲಿನ ಖರೀದಿಗೆ 2022ರ ಜೂನ್‌ನಲ್ಲಿ ಪ್ರತಿ ಕ್ವಿಂಟಲ್‌ ಉಂಡೆ ಕೊಬ್ಬರಿಗೆ (ಉತ್ತಮ ಗುಣಮಟ್ಟ) ₹11,000 ಬೆಂಬಲ ಬೆಲೆಯನ್ನು ಸರ್ಕಾರ ನಿಗದಿ ಮಾಡಿತ್ತು. ಇದನ್ನು ₹15,000ಕ್ಕೆ ಹೆಚ್ಚಿಸಬೇಕು ಎಂದು ಕೊಬ್ಬರಿ ಬೆಳೆಗಾರರು ಮತ್ತು ರೈತ ಸಂಘಟನೆಗಳು ಆಗ್ರಹಿಸಿದ ಕಾರಣ, ಬೆಂಬಲ ಬೆಲೆಯನ್ನು ಸರ್ಕಾರ ಪರಿಷ್ಕರಿಸಿತ್ತು. ಆದರೆ ₹750ರಷ್ಟನ್ನು ಹೆಚ್ಚಿಸಿ, ಬೆಂಬಲ ಬೆಲೆಯನ್ನು ₹11,750ಕ್ಕೆ ನಿಗದಿಪಡಿಸಿದೆ. ಆದರೆ ರಾಜ್ಯದಲ್ಲಿ ಉತ್ಪಾದನೆಯಾಗುವ ಎಲ್ಲಾ ಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲಾಗದ ಸ್ಥಿತಿ ಇದೆ.

ರಾಜ್ಯದಲ್ಲಿ ಈ ಬಾರಿ ಒಟ್ಟು 2.18 ಲಕ್ಷ ಟನ್‌ನಷ್ಟು ಒಣಕೊಬ್ಬರಿ ಉತ್ಪಾದನೆಯಾಗಲಿದೆ ಎಂದು ರಾಜ್ಯ ಕೃಷಿ ಮಾರಾಟ ಮಂಡಳಿ ಅಂದಾಜಿಸಿದೆ. ಆದರೆ, ಸರ್ಕಾರದ ವತಿಯಿಂದ ಬೆಂಬಲ ಬೆಲೆಯಲ್ಲಿ ಖರೀದಿಸಲು ಅನುಮತಿ ದೊರೆತಿರುವುದು 54,000 ಟನ್‌ ಉಂಡೆ ಕೊಬ್ಬರಿಗೆ ಮಾತ್ರ. ಅಂದರೆ ಇನ್ನೂ 1.64 ಲಕ್ಷ ಟನ್‌ಗಳಷ್ಟು ಕೊಬ್ಬರಿಯನ್ನು ಬೆಂಬಲ ಬೆಲೆ ಇಲ್ಲದೆಯೇ ಮಾರಾಟ ಮಾಡಬೇಕಾಗಿದೆ. ಸಾಧಾರಣವಾಗಿ ಸರ್ಕಾರ ನಿಗದಿ ಮಾಡುವ ಬೆಂಬಲ ಬೆಲೆಗಿಂತ ಹೆಚ್ಚಿನ ಬೆಲೆಗೆ ಕೊಬ್ಬರಿ ಮಾರಾಟವಾಗುತ್ತದೆ. ಆದರೆ ಈ ಬಾರಿ ಮಾರುಕಟ್ಟೆ ಧಾರಣೆಯು, ಬೆಂಬಲ ಬೆಲೆಗಿಂತಲೂ ₹2,350ರಷ್ಟು ಕಡಿಮೆ ಮಟ್ಟಕ್ಕೆ ಕುಸಿದಿದೆ. ಹೀಗಾಗಿ ಬೆಂಬಲ ಬೆಲೆಯನ್ನು ಹೆಚ್ಚಿಸಬೇಕು ಮತ್ತು ಕೊಬ್ಬರಿ ಬೆಳೆಗಾರರಿಗೆ ಪ್ರೋತ್ಸಾಹಧನ ನೀಡಬೇಕು ಎಂದು ಒತ್ತಾಯಿಸಿ ತಿಪಟೂರು ಸೇರಿ, ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆಗಳಲ್ಲಿ ರೈತರು ಧರಣಿ ನಡೆಸುತ್ತಿದ್ದಾರೆ.

ಕಾರಣಗಳು
ಕೊಬ್ಬರಿ ಬೆಲೆ ಕುಸಿತಕ್ಕೆ ಹಲವು ಕಾರಣಗಳನ್ನು ರೈತರು ಮತ್ತು ರೈತ ಸಂಘಟನೆಗಳು ಪಟ್ಟಿ ಮಾಡುತ್ತವೆ. ಪ್ರಾಕೃತಿಕ ಅಂಶಗಳು, ಸರ್ಕಾರದ ನೀತಿಗಳೇ ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎಂದು ರೈತರು ಆರೋಪಿಸುತ್ತಾರೆ. ಅಂತಹ ಪ್ರಮುಖ ಕಾರಣಗಳು ಇಂತಿವೆ.

ಎಪಿಎಂಸಿ ಕಾಯ್ದೆ ತಿದ್ದುಪಡಿ
ಈ ಮೊದಲು ಎಪಿಎಂಸಿ ಮಾರುಕಟ್ಟೆಯ ಹೊರಗೆ ನಡೆಯುವ ವ್ಯಾಪಾರ ವಹಿವಾಟನ್ನು ನಿಯಂತ್ರಿಸಲು ಎಪಿಎಂಸಿ ಅಧಿಕಾರಿಗಳಿಗೆ ಅಧಿಕಾರವಿತ್ತು. ಆದರೆ, 2020ರಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಈ ಅಧಿಕಾರವನ್ನು ರದ್ದುಪಡಿಸಲಾಯಿತು. ಇದು ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎಂದು ಕೊಬ್ಬರಿ ಬೆಳೆಗಾರರು ಆರೋಪಿಸಿದ್ದಾರೆ.

‘ಎಪಿಎಂಸಿ ಹೊರಗೆ ನಡೆಯುವ ವಹಿವಾಟಿನಲ್ಲಿ ಸರ್ಕಾರದ ನಿಯಂತ್ರಣ ಇಲ್ಲವಾದ ಕಾರಣ, ವರ್ತಕರು ನಿಗದಿಪಡಿಸುವ ಬೆಲೆಗೇ ಬೆಳೆಗಾರರು ಕೊಬ್ಬರಿ ಮಾರಾಟ ಮಾಡಬೇಕಾಗಿದೆ. ಕೆಲವು ವರ್ತಕರು ತೋಟದಲ್ಲೇ ಕೊಬ್ಬರಿ ಖರೀದಿ ಮಾಡುತ್ತಿದ್ದಾರೆ. ಕೂಲಿ ಮತ್ತು ಗಾಡಿ ಬಾಡಿಗೆ ಖರ್ಚು ಉಳಿಯುತ್ತದೆ ಎಂದು ಹೇಳಿ ಕಡಿಮೆ ಬೆಲೆಗೇ ರೈತರು ತೋಟದಲ್ಲಿ ಕೊಬ್ಬರಿ ಮಾರಾಟ ಮಾಡುತ್ತಿದ್ದಾರೆ. ಎಪಿಎಂಸಿ ಹೊರಗೇ ಬಹುಪಾಲು ಕೊಬ್ಬರಿ ಮಾರಾಟವಾಗುತ್ತಿದೆ. ಹೀಗಾಗಿ ಎಷ್ಟು ಕೊಬ್ಬರಿ ಆವಕವಾಗುತ್ತಿದೆ, ಎಷ್ಟು ಮಾರಾಟವಾಗುತ್ತಿದೆ ಎಂಬ ಮಾಹಿತಿ ಬೆಳೆಗಾರರಿಗೆ ದೊರೆಯುತ್ತಿಲ್ಲ. ಬೇಡಿಕೆ ಎಷ್ಟಿದೆ ಮತ್ತು ಪೂರೈಕೆ ಎಷ್ಟಿದೆ ಎಂಬುದು ಗೊತ್ತಾದರೆ ಬೆಲೆ ನಿಗದಿ ಮತ್ತು ಬೆಲೆ ಏರಿಕೆಗೆ ಆಗ್ರಹಿಸಲು ಸಾಧ್ಯವಾಗುತ್ತದೆ. ಎಪಿಎಂಸಿಯ ಹೊರಗೇ ವ್ಯಾಪಾರ ನಡೆಯುತ್ತಿರುವುದರಿಂದ ಎಷ್ಟು ಬೇಡಿಕೆ ಇದೆ ಎಂಬುದು ಗೊತ್ತಾಗುತ್ತಿಲ್ಲ ಮತ್ತು ರೈತರು ಹೆಚ್ಚು ಬೆಲೆಗೆ ಒತ್ತಾಯಿಸಲು ಸಾಧ್ಯವಾಗುತ್ತಿಲ್ಲ. ಎಪಿಎಂಸಿ ಹೊರಗೆ ವ್ಯಾಪಾರ ನಡೆಸುತ್ತಿರುವ ವರ್ತಕರು, ಬೇಡಿಕೆ ಮತ್ತು ಪೂರೈಕೆಯ ಮಾಹಿತಿಯನ್ನು ಮುಚ್ಚಿಟ್ಟು ‘ಕೊಬ್ಬರಿಗೆ ಬೇಡಿಕೆಯೇ ಇಲ್ಲ’ ಎಂದು ಬೆಲೆ ಇಳಿಸುತ್ತಿದ್ದಾರೆ. ಹೀಗೆ ಕೊಬ್ಬರಿ ಬೆಲೆ ಕುಸಿದು, ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ’ ಎಂಬುದು ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿಯ ಅಧ್ಯಕ್ಷ ಡಿ.ಯೋಗೀಶ್ವರ ಸ್ವಾಮಿ ಅವರ ಆರೋಪ.

ಆಮದು ಮತ್ತು ಕಲಬೆರಕೆ
ದೇಶದ ಅತ್ಯಂತ ದೊಡ್ಡ ಕೊಬ್ಬರಿ ಮಾರುಕಟ್ಟೆಗಳಲ್ಲಿ ತಿಪಟೂರು ಮಾರುಕಟ್ಟೆ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ರಾಜ್ಯದಲ್ಲಿ ಅತಿಹೆಚ್ಚು ಕೊಬ್ಬರಿ ವಹಿವಾಟು ನಡೆಯುವುದು ತಿಪಟೂರಿನಲ್ಲೇ. ಭಾರತದಲ್ಲಿ ದೊರೆಯುವ ಕೊಬ್ಬರಿಯಲ್ಲಿ ತಿಪಟೂರು ಕೊಬ್ಬರಿಯದ್ದೇ ಗರಿಷ್ಠ ಗುಣಮಟ್ಟ. ಇದನ್ನು ತಿನ್ನುವ ಕೊಬ್ಬರಿ ಎಂದೇ ಕರೆಯಲಾಗುತ್ತದೆ. ಈ ಕೊಬ್ಬರಿ ಎಣ್ಣೆ ತಯಾರಿಕೆಗೆ ಹೋಗುವುದೇ ಇಲ್ಲ. ಬದಲಿಗೆ ಉತ್ತರ ಭಾರತದ ರಾಜ್ಯಗಳಲ್ಲಿ ಅಡುಗೆ, ಸಿಹಿ ತಿನಿಸು ಮತ್ತು ಧಾರ್ಮಿಕ ಕಾರ್ಯಗಳಿಗೆ ಬಳಕೆಯಾಗುತ್ತದೆ.

‘ಕೇರಳದಲ್ಲೂ ದೊಡ್ಡ ಪ್ರಮಾಣದಲ್ಲಿ ಕೊಬ್ಬರಿ ಉತ್ಪಾದನೆಯಾಗುತ್ತದೆ. ಆದರೆ, ಆ ಕೊಬ್ಬರಿ ಹೆಚ್ಚು ಬಳಕೆಯಾಗುವುದು ಕೊಬ್ಬರಿ ಎಣ್ಣೆ ತಯಾರಿಕೆಗೆ. ಅದರ ರುಚಿಯೇ ಬೇರೆ. ಆದರೆ, ಕೆಲವು ವರ್ತಕರು ಕೇರಳ ಕೊಬ್ಬರಿಯನ್ನು ಖರೀದಿಸಿ, ತಿಪಟೂರು ಕೊಬ್ಬರಿ ಹೆಸರಿನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ತಿಪಟೂರು ಕೊಬ್ಬರಿಗೆ ಇದ್ದ ಬ್ರ್ಯಾಂಡ್‌ ಮೌಲ್ಯ ಕುಸಿಯುತ್ತಿದೆ. ನಿಜವಾದ ತಿಪಟೂರು ಕೊಬ್ಬರಿಗೆ ಹೆಚ್ಚು ಬೆಲೆ ನೀಡಿ ಖರೀದಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಬೆಲೆ ಕುಸಿಯಲು ಇದೂ ಒಂದು ಪ್ರಮುಖ ಕಾರಣ’ ಎನ್ನುತ್ತಾರೆ ಯೋಗೀಶ್ವರ ಸ್ವಾಮಿ.

‘ಕೊಬ್ಬರಿ ಎಣ್ಣೆಗೆ ತಾಳೆ ಎಣ್ಣೆಯನ್ನು ಕಲಬೆರಕೆ ಮಾಡಿ ಮಾರಾಟ ಮಾಡಲಾಗುತ್ತಿದೆ. ತಾಳೆ ಎಣ್ಣೆಯ ಮೇಲೆ ವಿಧಿಸಲಾಗುತ್ತಿದ್ದ ಆಮದು ಸುಂಕವನ್ನು ಕಡಿಮೆ ಮಾಡಲಾಗಿದೆ. ಕಡಿಮೆ ಬೆಲೆಗೆ ದೊರೆಯುತ್ತಿರುವ ತಾಳೆ ಎಣ್ಣೆಯನ್ನು, ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಸ್ಥಳೀಯ ಕೊಬ್ಬರಿಗೆ ಬೇಡಿಕೆ ಕುಸಿದು, ಬೆಲೆ ಕುಸಿಯುತ್ತಿದೆ. ಉತ್ತರ ಭಾರತದಲ್ಲಿ ಕೊಬ್ಬರಿ ಪುಡಿಯನ್ನು ಹೆಚ್ಚು ಬಳಸಲಾಗುತ್ತದೆ. ಇಂತಹ ಪುಡಿ ತಯಾರಿಸುವ 20ಕ್ಕೂ ಹೆಚ್ಚು ಕಾರ್ಖಾನೆಗಳು ತಿಪಟೂರಿನಲ್ಲೇ ಇವೆ. ಆದರೆ, ಈ ಕಾರ್ಖಾನೆಗಳು ಆಮದು ಪುಡಿಯನ್ನು ಹೆಚ್ಚು ಬಳಸುತ್ತವೆ. ಅವನ್ನು ತಿಪಟೂರು ಕೊಬ್ಬರಿ ಪುಡಿ ಹೆಸರಿನಲ್ಲಿ ಮಾರಾಟ ಮಾಡುತ್ತಿವೆ. ಇದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕುಸಿಯುತ್ತಿದೆ’ ಎಂಬುದು ಅವರ ಆರೋಪ.

ಅತಿಯಾದ ಮಳೆ
2021ರಿಂದ ಈಚಿನವರೆಗೆ ಸುರಿದ ಅತಿಯಾದ ಮಳೆಯೂ ಕೊಬ್ಬರಿ ಬೆಲೆ ಕುಸಿಯಲು ಕಾರಣ ಎಂಬುದು ತಜ್ಞರ ಅಭಿಮತ. ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವ ಉಂಡೆ ಕೊಬ್ಬರಿಯು ಉತ್ತಮ ಗುಣಮಟ್ಟದ್ದಾಗಿರಬೇಕು. ಈ ಉಂಡೆ ಕೊಬ್ಬರಿಯಲ್ಲಿ ತೇವಾಂಶದ ಪ್ರಮಾಣ ಗರಿಷ್ಠ ಶೇ 7ರಷ್ಟು ಇರಬೇಕು. ಅತಿಯಾದ ಮಳೆಯ ಕಾರಣ ಕಾಯಿ ಒಣಗಿ ಕೊಬ್ಬರಿಯಾಗುವಲ್ಲಿ ಹೆಚ್ಚು ಸಮಯ ಬೇಕಾಯಿತು ಮತ್ತು ತೇವಾಂಶ ಕಡಿಮೆಯಾಗಿಲ್ಲ. ವೈಜ್ಞಾನಿಕವಾಗಿ ಕೊಬ್ಬರಿ ಒಣಗಿಸದೇ ಇರುವುದೂ ಇದಕ್ಕೆ ಕಾರಣ. ಬಹುತೇಕ ಕೊಬ್ಬರಿಯಲ್ಲಿ ತೇವಾಂಶ ಪ್ರಮಾಣ ಶೇ 8–10ರಷ್ಟಿದೆ. ಅಂತಹ ಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವುದಿಲ್ಲ. ಹೀಗಾಗಿ ರೈತರು ಬೆಂಬಲ ಬೆಲೆಗಿಂತಲೂ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗಿದೆ.

ಎಳನೀರು ಮಾರಾಟಕ್ಕೆ ಒಲವು
ಚಿತ್ರದುರ್ಗದ ಹೊಸದುರ್ಗ ತಾಲ್ಲೂಕಿನ ತೆಂಗು ಬೆಳೆಗಾರರು ಆರಂಭದ ವರ್ಷಗಳಲ್ಲಿ ಕೊಬ್ಬರಿ ಮಾರಾಟಕ್ಕೆ ಒಲವು ತೋರುತ್ತಿದ್ದರು. ಆದರೆ, ಈಗ ಕೊಬ್ಬರಿ ಬೆಲೆ ಕುಸಿದಿರುವ ಕಾರಣ ಈ ಋತುವಿನಲ್ಲಿ ಎಳನೀರನ್ನೇ ಇಳಿಸುತ್ತಿದ್ದು, ಕೊಬ್ಬರಿಗಾಗಿ ಎಳನೀರನ್ನು ಉಳಿಸಿಕೊಳ್ಳುತ್ತಿಲ್ಲ. 1,000 ಕಾಯಿ ಬಳಸಿ, 10 ತಿಂಗಳು ಕಾದು ಕೊಬ್ಬರಿ ಮಾಡಿದರೆ 1.2ರಿಂದ 1.3 ಕ್ವಿಂಟಾಲ್‌ನಷ್ಟು ಕೊಬ್ಬರಿ ದೊರೆಯುತ್ತದೆ. ಬೆಲೆ ಕುಸಿದಿರುವ ಕಾರಣ, ರೈತನಿಗೆ ಕೊಬ್ಬರಿ ಮಾರಾಟದಿಂದ ಹೆಚ್ಚು ಬೆಲೆ ಸಿಗುತ್ತಿಲ್ಲ. ಈಗಿನ ಬೆಲೆಯಲ್ಲಿ 1,000 ಉಂಡೆ ಕೊಬ್ಬರಿಯಿಂದ ಅಂದಾಜು ₹13,500 ಆದಾಯ ಬರುತ್ತದೆ. ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಿದರೆ ₹15,275 ದೊರೆಯುತ್ತದೆ. ಇದಕ್ಕಾಗಿ ಒಂದು ವರ್ಷ ಕಾಯಬೇಕು. ‘ಬೇಸಿಗೆಯ ಕಾರಣ ಎಳನೀರಿಗೆ ಬೇಡಿಕೆ ಹೆಚ್ಚುತ್ತಿದೆ. ಪ್ರತಿ ಎಳನೀರಿಗೆ ₹15ರಂತೆ 1,000 ಎಳನೀರಿಗೆ ತೋಟದಲ್ಲೇ ₹15,000 ದೊರೆಯುತ್ತಿದೆ. ಹೀಗಾಗಿ ಇಲ್ಲಿನ ತೆಂಗು ಬೆಳೆಗಾರರು ಎಳನೀರು ಮಾರಾಟಕ್ಕೆ ಆದ್ಯತೆ ನೀಡುತ್ತಿದ್ದಾರೆ’ ಎನ್ನುತ್ತಾರೆ ಹೊಸದುರ್ಗ ತಾಲ್ಲೂಕಿನ ಬುರುಡೆಕಟ್ಟೆ ಗ್ರಾಮದ ಪಿ.ಲವಕುಮಾರ.

ಹಾಸನದ ಚನ್ನರಾಯಪಟ್ಟಣದಲ್ಲಿ ಎಳನೀರು ಮತ್ತು ಕೊಬ್ಬರಿ ಎರಡೂ ಮಾರಾಟವಾಗುತ್ತದೆ. ಬೆಲೆಕುಸಿತದಿಂದ ಈ ಭಾಗದ ಕೆಲವು ರೈತರು ಎಳನೀರು ಮಾರಾಟಕ್ಕೂ ಮುಂದಾಗಿದ್ದಾರೆ. ವರ್ತಕರೇ ತೆಂಗು ಬೆಳೆಗಾರರ ಜಮೀನಿನಿಂದ ನೇರವಾಗಿ ಎಳನೀರು ಖರೀದಿಸುತ್ತಿದ್ದಾರೆ. ಒಂದು ಎಳನೀರಿಗೆ ₹17ರಿಂದ ₹18 ರೂಪಾಯಿ ಸಿಗುತ್ತಿದೆ. ಕೊಬ್ಬರಿ ಮಾರಾಟಕ್ಕಿಂತ ಎಳನೀರು ಮಾರಾಟಕ್ಕೆ ರೈತರು ಮುಂದಾಗಿರುವುದಕ್ಕೆ ಕೆಲವು ಕಾರಣಗಳಿವೆ. ಕೊಬ್ಬರಿ ಬೆಲೆ ಕುಸಿತವಾಗಿರುವುದು ಮುಖ್ಯ ಕಾರಣ. ತೆಂಗಿನಕಾಯಿಯಿಂದ ಕೊಬ್ಬರಿ ತೆಗೆಯಲು ವರ್ಷ ಕಾಯಬೇಕು. ತಾಳ್ಮೆಯಿಂದ ಅಷ್ಟು ಸಮಯ ಕಾದರೂ, ಕೊನೆಗೆ ಬೆಲೆ ಕುಸಿತವಾಗುವ ಆತಂಕ ಇದ್ದೇ ಇದೆ. ಆದರೆ ಎಳನೀರಿನಿಂದ ಮಾರಾಟ ಸಮಸ್ಯೆ, ಸಾಗಣೆ ಸಮಸ್ಯೆ ಇಲ್ಲ. ಜತೆಗೆ ತಕ್ಷಣವೇ ಹಣವೂ ದೊರೆಯುತ್ತದೆ ಎನ್ನುತ್ತಾರೆ ಇಲ್ಲಿನ ರೈತರು.

ಆದರೆ ತುಮಕೂರು ಜಿಲ್ಲೆಯ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಹಾಸನದ ಅರಸೀಕೆರೆ ಮೊದಲಾದ ಪ್ರದೇಶದಲ್ಲಿ ಕೊಬ್ಬರಿಗೇ ಆದ್ಯತೆ ನೀಡಲಾಗುತ್ತಿದೆ. ಈ ಭಾಗದಲ್ಲಿ ಎಳನೀರು ಮಾರಾಟ ಇಲ್ಲವೇ ಇಲ್ಲ ಎನ್ನಬಹುದಾದಷ್ಟು ಕಡಿಮೆ.

ವರ್ಷದಲ್ಲಿ ಶೇ 50ರಷ್ಟು ಕುಸಿತ (ತಿಂಗಳ ಸರಾಸರಿ ಬೆಲೆ) (ತಿಪಟೂರು ಮಾರುಕಟ್ಟೆ) (ಕ್ವಿಂಟಲ್‌ಗೆ)

* ತಿಂಗಳ ಸರಾಸರಿ ಬೆಲೆಯನ್ನು ಗಮನಿಸಿದರೆ, ಒಂದು ವರ್ಷದಲ್ಲಿ ಸರಿಸುಮಾರು ಒಂಬತ್ತು ಸಾವಿರ ರೂಪಾಯಿ ಇಳಿಕೆ ಕಂಡುಬಂದಿದೆ

* 2022ರ ಏಪ್ರಿಲ್‌ನಿಂದ ಮೇ ತಿಂಗಳ ಅವಧಿಯಲ್ಲಿ ಕ್ವಿಂಟಲ್ ಕೊಬ್ಬರಿ ಸರಾಸರಿ ₹18,000ದಂತೆ ಮಾರಾಟವಾಗಿತ್ತು

* 2023ರ ಫೆಬ್ರುವರಿಯಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಕ್ವಿಂಟಲ್ ಕೊಬ್ಬರಿ ಸರಾಸರಿ ₹10,500ಕ್ಕೆ ಮಾರಾಟವಾಗಿದೆ

* ಕಳೆದ ವರ್ಷದ ಮೇ ತಿಂಗಳ ಕೊನೆಯ ವಾರದಿಂದ ಜೂನ್ ತಿಂಗಳ ಕೊನೆಯ ವಾರದ ಅವಧಿಯಲ್ಲಿ ಸುಮಾರು ₹4,000ದಷ್ಟು ಭಾರಿ ಕುಸಿತ ದಾಖಲಾಗಿದೆ

* 2022ರ ಡಿಸೆಂಬರ್ ತಿಂಗಳಲ್ಲಿ ಸರಾಸರಿ ₹14,000 ಇದ್ದ ಕೊಬ್ಬರಿ ಬೆಲೆ, ಆ ನಂತರದ ದಿನಗಳಲ್ಲಿ ಮೇಲೇರಲೇ ಇಲ್ಲ

ತಿಂಗಳಲ್ಲಿ ₹1900 ಕುಸಿತ

* ತಿಪಟೂರು ಮಾರುಕಟ್ಟೆಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಕೊಬ್ಬರಿ ಬೆಲೆಯಲ್ಲಿ ಸರಿಸುಮಾರು ₹1,900 ಕುಸಿತವಾಗಿದೆ

* ಫೆಬ್ರುವರಿ 1ರಂದು ₹11,300ಕ್ಕೆ ಮಾರಾಟವಾಗಿದ್ದ ಕ್ವಿಂಟಲ್‌ ಕೊಬ್ಬರಿಯು ಮಾರ್ಚ್ 7ರಂದು ₹9,400ಕ್ಕೆ ಕುಸಿದಿದೆ

* ಐದು ವಾರಗಳ ಅವಧಿಯಲ್ಲಿ ಕೊಬ್ಬರಿ ಬೆಲೆಯಲ್ಲಿ ಶೇ 17ರಷ್ಟು ಕುಸಿತ ದಾಖಲಾಗಿದೆ

* ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಕೊಬ್ಬರಿ ಬೆಲೆ ₹10 ಸಾವಿರದ ಗಡಿಗಿಂತಲೂ ಕೆಳಗಿಳಿದಿದೆ

* ಮಾರ್ಚ್ 1ರಿಂದ ಮಾರ್ಚ್ 4ರ 3 ದಿನಗಳ ಅವಧಿಯಲ್ಲಿ ಮಾರಾಟ ಮಾಡಿದ ರೈತರಿಗೆ ಸುಮಾರು ₹1,000ದಷ್ಟು ನಷ್ಟವಾಗಿದೆ

* ಐದು ವಾರಗಳ ಅವಧಿಯಲ್ಲಿ ಕೊಬ್ಬರಿ ಬೆಲೆಯು 11 ಸಾವಿರ ರೂಪಾಯಿಯ ಗಡಿ ದಾಟಿದ್ದು ಕೆಲವು ಬಾರಿ ಮಾತ್ರ

ಆಧಾರ: ಕೃಷಿ ಮಾರಾಟ ವಾಹಿನಿ ಪ್ರಕಟಣೆಗಳು, ಕೇಂದ್ರ ಸರ್ಕಾರದ ಎಂಎಸ್‌ಪಿ ಘೋಷಣೆ ಪ್ರಕಟಣೆಗಳು, ಕರ್ನಾಟಕ ರಾಜ್ಯಪತ್ರ ಮಾಹಿತಿ: ‘ಪ್ರಜಾವಾಣಿ’ ಬ್ಯೂರೊಗಳಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT