ಮಂಗಳವಾರ, ಮಾರ್ಚ್ 31, 2020
19 °C

Explainer | ಕೋವಿಡ್‌–19 ಈಗ ಪ್ಯಾಂಡೆಮಿಕ್‌: ಏನಿದರ ಅರ್ಥ? 

ವೆಬ್‌ ವಿಶೇಷ Updated:

ಅಕ್ಷರ ಗಾತ್ರ : | |

ವಿಶ್ವ ಆರೋಗ್ಯ ಸಂಸ್ಥೆಯು ಬುಧವಾರ ರಾತ್ರಿ ಕೋವಿಡ್‌ 19 ಅನ್ನು ಪ್ಯಾಂಡೆಮಿಕ್‌ (ಜಾಗತಿಕ ಪಿಡುಗು) ಎಂದು ಘೋಷಿಸಿದೆ. 

ಪ್ಯಾಂಡೆಮಿಕ್‌ ಎಂದರೇನು? 

ಕಾಯಿಲೆಯೊಂದು ವ್ಯಾಪಿಸುತ್ತಿರುವ ತೀವ್ರತೆಯ ಆಧಾರದ ಮೇಲೆ ಅದನ್ನು ಜಾಗತಿಕ ಪಿಡುಗು ಎಂದು ನಿರ್ಧರಿಸಲಾಗುತ್ತದೆ. ಹೊಸ ಕಾಯಿಲೆಯೊಂದು ಬಹುದೊಡ್ಡ ಭೂಭಾಗವನ್ನು ದೇಶ, ಖಂಡ, ಸಮೂಹವನ್ನೂ ಮೀರಿ ಅತಿ ಶೀಘ್ರದಲ್ಲಿ ಆವರಿಸುತ್ತಾ ಸಾಗುವುದನ್ನು ಪ್ಯಾಂಡೆಮಿಕ್‌ ಎಂದು ಕರೆಯಲಾಗುತ್ತದೆ. ಎಪಿಡಮಿಕ್‌ಗಿಂತಲೂ (ಸಾಂಕ್ರಾಮಿಕ) ಪ್ಯಾಂಡೆಮಿಕ್‌ ಆತಂಕಕಾರಿ.  

ಕೊರೊನಾ ವೈರಸ್ 2 ಅಥವಾ nCoV19 ಎಂದು ಕರೆಯಲಾಗುವ ವೈರಸ್‌ನಿಂದ ಹರಡುವ ಕೋವಿಡ್-19 ಸದ್ಯ ಜಾಗತಿಕ ಮಹಾಮಾರಿ ಎಂದು ಪರಿಗಣಿಸಲ್ಪಟ್ಟಿದೆ. 

ಸ್ಥಳೀಯವಾಗಿ ಸಾಂಕ್ರಾಮಿಕವಾಗುತ್ತಿರುವ ಕಾಯಿಲೆಯನ್ನು ಎಪಿಡಮಿಕ್‌ ಎಂದು ಕರೆಯಲಾಗುತ್ತದೆ ಎಂದು ಅಮೆರಿಕದ ರೋಗ ಮತ್ತು ನಿಯಂತ್ರಣ ಸಂಸ್ಥೆ ಹೇಳುತ್ತದೆ. 

ಒಂದು ಕಾಯಿಲೆಯನ್ನು ಪ್ಯಾಂಡೆಮಿಕ್‌ ಎಂದು ಘೋಷಿಸಲು ಅದರಿಂದ ಸತ್ತವರ ಸಂಖ್ಯೆಯೇನೂ ಲೆಕ್ಕಕ್ಕೆ ಬಾರದು. ಅದು ಯಾವ ಸ್ವರೂಪದಲ್ಲಿ ಆವರಿಸಿಕೊಳ್ಳುತ್ತಿದೆ ಎಂಬುದೇ ಇಲ್ಲಿ ಮುಖ್ಯವಾಗುತ್ತದೆ. 

ಹೆಚ್ಚು ದೇಶಗಳಿಗೆ ಆವರಿಸದ, ಆದರೆ, ಪಶ್ಚಿಮ ಆಫ್ರಿಕಾದಲ್ಲಿ ಸಾವಿರಾರು ಮಂದಿಯನ್ನು ಬಲಿ ಪಡೆದ ಎಬೋಲಾ ವೈರಸ್‌ ಅನ್ನು ಎಪಿಡಮಿಕ್‌ ಎಂದಷ್ಟೇ ಕರೆಯಲಾಯಿತು. 

ಇದಕ್ಕೂ ಹಿಂದೆ ಇದೇ ಕೊರೋನಾ ವೈರಸ್‌ನಿಂದ ಕಾಣಿಸಿಕೊಂಡಿದ್ದ ಎಂಇಆರ್‌ಎಸ್‌ (27 ದೇಶಗಳಿಗೆ ಹಬ್ಬಿತ್ತು) ಮತ್ತು ಎಸ್‌ಎಆರ್‌ಎಸ್‌ (ಸಾರ್ಸ್‌) (26 ದೇಶ) ಗಳನ್ನು ಪ್ಯಾಂಡೆಮಿಕ್‌ ಎಂದು ಘೋಷಿಸಿರಲಿಲ್ಲ. 

ಈ ಹಿಂದಿನ ಪ್ಯಾಂಡೆಮಿಕ್‌ಗಳು

1918ರಲ್ಲಿ ಕಾಣಿಸಿಕೊಂಡು ಜಗತ್ತಿನಾದ್ಯಂತ 20–50 ಮಿಲಿಯನ್‌ ಜನರನ್ನು ಬಲಿ ಪಡೆದಿದ್ದ ‘ಸ್ಪ್ಯಾನಿಷ್‌ ಜ್ವರ’ವನ್ನು ಪ್ಯಾಂಡೆಮಿಕ್‌ ಎಂದು ಘೋಷಣೆ ಮಾಡಲಾಗಿತ್ತು. ಅದಕ್ಕೂ ಹಿಂದೆ 1817ರಲ್ಲಿ ಕಾಲರಾವನ್ನು ಪ್ಯಾಂಡೆಮಿಕ್‌ ಎನ್ನಲಾಗಿತ್ತು. 1968ರಲ್ಲಿ ಕಾಣಿಸಿಕೊಂಡಿದ್ದ ಎಚ್‌3ಎನ್‌2ವನ್ನು ಇದೇ ಪಟ್ಟಿಗೆ ಸೇರಿತ್ತು. ಎಚ್‌1ಎನ್‌1 ಅನ್ನು 2009ರಲ್ಲಿ ಪ್ಯಾಂಡೆಮಿಕ್‌ ಎಂದು ಘೋಷಿಸಲಾಗಿತ್ತು.

ಕೋವಿಡ್‌ ಅನ್ನು ಪ್ಯಾಂಡೆಮಿಕ್‌ ಎಂದು ಘೋಷಿಸಿದ್ದೇಕೆ ವಿಶ್ವ ಆರೋಗ್ಯ ಸಂಸ್ಥೆ? 

ಕೋವಿಡ್‌ ಎಂಬ ಮಾರಕ ಕಾಯಿಲೆ ತಲೆದೋರಿರುವುದಾಗಿ ಚೀನಾ ಡಿ. 31 ರಂದು ಘೋಷಿಸಿತು. ಅಲ್ಲಿಂದ ಒಂದು ತಿಂಗಳ ನಂತರ, ಜ.30ರಂದು ಚೀನಾ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿತು. ಸದ್ಯ ಚೀನಾದಲ್ಲಿ ಕಾಯಿಲೆ ತಹಬದಿಗೆ ಬರುತ್ತಿದೆ. ಆದರೆ, ಈ ಎರಡು ವಾರಗಳಲ್ಲಿ ಕೋವಿಡ್‌ ಸೋಂಕು ಹಲವು ದೇಶಗಳಲ್ಲಿ ಪಾರಮ್ಯ ಮೆರೆದಿದೆ. ಇಟಲಿಯಲ್ಲಿ ಫೆ. 29ರ ಹೊತ್ತಿಗೆ 888 ಸೋಂಕಿನ ಪ್ರಕರಣಗಳು ದಾಖಲಾಗಿದ್ದರೆ, ಒಂದೇ ವಾರದಲ್ಲಿ 4636 ಪ್ರಕರಣಕ್ಕೆ ಹೆಚ್ಚಿದೆ. ಅದರ ವ್ಯಾಪಕತೆಯ ಆಧಾರದ ಮೇಲೆ ಕಾಯಿಲೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಪ್ಯಾಂಡೆಮಿಕ್‌ ಎಂದು ಪರಿಗಣಿಸಿದೆ. ಇದಕ್ಕಾಗಿ ಅದು ಕಾಯಿಲೆ ಕಾಣಿಸಿಕೊಂಡ ನಂತರದ 72 ದಿನ ಕಾದಿತ್ತು. 

ಪ್ಯಾಂಡೆಮಿಕ್‌ ಎಂದು ಘೋಷಿಸುವುದರಿಂದ ಆಗುವ ಪರಿಣಾಮಗಳೇನು? 

ಪ್ಯಾಂಡೆಮಿಕ್‌ ಎಂದು ಘೋಷಣೆ ಮಾಡಿದ ಮಾತ್ರಕ್ಕೆ ಸೋಂಕು ಹರಡುವಿಕೆ, ಅದರಿಂದ ಸಂಭವಿಸುವ ಸಾವು ಯಾವುದೂ ಕಡಿಮೆಯಾಗುವುದಿಲ್ಲ. ಆದರೆ, ಸರ್ಕಾರಗಳು ಕಾಯಿಲೆಯನ್ನು ಗಂಭೀರವಾಗಿ ಪರಿಗಣಿಸುತ್ತವೆ. ರೋಗ ತಡೆಯಲು ಸಂಘಟಿತ ಪ್ರಯತ್ನ ಮೂಡಿಬರುತ್ತದೆ ಎಂಬುದು ತಜ್ಞರ ಅಭಿಪ್ರಾಯ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು