ಗುರುವಾರ , ಏಪ್ರಿಲ್ 2, 2020
19 °C

ಕೋವಿಡ್‌–19: ಸ್ಯಾನಿಟೈಜರ್‌ನ ಬಳಕೆಗಿಂತ ಸೋಪು–ನೀರೇ ಒಳ್ಳೆಯದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲೂ ಕೋವಿಡ್‌–19ನಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರಿಂದ ಕೊರೊನಾ–2 ವೈರಸ್‌ ವಿಷಯವಾಗಿ ಜನ ಹೆಚ್ಚು ಆತಂಕಗೊಂಡಿದ್ದಾರೆ. ಕೈ ತೊಳೆಯಲು ಸ್ಯಾನಿಟೈಜರ್‌ಗಳೇ ಆಗಬೇಕೆಂದು ಎಲ್ಲರೂ ಅವುಗಳಿಗೆ ಮುಗಿಬಿದ್ದಿದ್ದರಿಂದ ಮಾರುಕಟ್ಟೆಯಲ್ಲಿ ಸ್ಯಾನಿಟೈಜರ್‌ಗಳ ಲಭ್ಯತೆಯೇ ಇಲ್ಲವಾಗಿದೆ. ಆದರೆ, ಸ್ಯಾನಿಟೈಜರ್‌ಗಳಿಗಿಂತ ಕೈ ಶುಚಿಗೊಳಿಸಲು ಸೋಪು–ನೀರಿನ ಬಳಕೆಯೇ ಉತ್ತಮ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಸೋಂಕು ಅಂಟದಂತೆ ತಡೆಗಟ್ಟಲು ವಹಿಸಬೇಕಾದ ಸುರಕ್ಷಾ ಕ್ರಮಗಳು ಹೀಗಿವೆ:

ಇದು ಕೊರೊನಾ–2 ವೈರಸ್‌
ಈ ಹಿಂದೆ 2003ರಲ್ಲಿ ದಾಳಿಯಿಟ್ಟಿದ್ದ ಸಾರ್ಸ್‌ ಸೋಂಕನ್ನು ಕೊರೊನಾ–1 ವೈರಸ್‌ ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿತ್ತು. ಈಗ ಜಗತ್ತಿನ ನೂರಕ್ಕೂ ಅಧಿಕ ದೇಶಗಳಲ್ಲಿ ವ್ಯಾಪಿಸಿರುವ ಸೋಂಕಿಗೆ ಕೊರೊನಾ–2 ಎಂದು ಹೆಸರಿಸಲಾಗಿದೆ. ಕೊರೊನಾ ವೈರಸ್‌ನಿಂದ ಜ್ವರ ಬಂದು ಬಳಲುವವರನ್ನು ಕೋವಿಡ್‌–19 ಸೋಂಕು ಪೀಡಿತರು ಎಂದು ಗುರುತಿಸಲಾಗುತ್ತದೆ.

ಕೊರೊನಾ ವೈರಸ್‌ನ ತಾಂತ್ರಿಕ ಹೆಸರು ಸಾರ್ಸ್‌ ಕೊರೊನಾ ವೈರಸ್‌–2 ಎಂದಾಗಿದೆ. ಈ ವೈರಸ್‌ನಿಂದ ಬರುವ ಉಸಿರಾಟದ ತೊಂದರೆ ಉಂಟು ಮಾಡುವ ರೋಗವನ್ನು ಕೊರೊನಾವೈರಸ್‌ ರೋಗ–2019 ಅಥವಾ ಕೋವಿಡ್‌–19 ಎಂದು ಹೆಸರಿಸಲಾಗಿದೆ. 

ವೈರಸ್‌ನ ಹೊರಭಾಗದಲ್ಲಿ ಮುಕುಟದಂತಹ ರಚನೆ ಇರುವುದರಿಂದ ಕೊರೊನಾ ಎಂದು ಹೆಸರು ಇರಿಸಲಾಗಿದೆ. ಜನರು ಮತ್ತು ಮನುಷ್ಯರಲ್ಲಿ ಸಾಮಾನ್ಯವಾಗಿ ಅಪಾರ ಸಂಖ್ಯೆಯ ವೈರಸ್‌ಗಳು ಇರುತ್ತವೆ. ಕೊರೊನಾ ಕೂಡ ಅಂತಹುದೇ ಒಂದು ವೈರಸ್‌. ಚೀನಾದಲ್ಲಿ ಮೊದಲು ಪತ್ತೆಯಾದ ಇದು ಬಾವಲಿಗಳಿಂದ ಬಂದಿದೆ ಎಂದು ಅಂದಾಜಿಸಲಾಗಿದೆ.

14 ದಿನ ನಿಗಾ ಯಾಕೆ?
ಒಬ್ಬ ವ್ಯಕ್ತಿಯು ಸೋಂಕಿಗೆ ತೆರೆದುಕೊಂಡ 2–14 ದಿನಗಳಲ್ಲಿ ಆ ವ್ಯಕ್ತಿಯಲ್ಲಿ ಸೋಂಕಿನ ಪ್ರಭಾವಗಳು ಕಾಣಿಸಿಕೊಳ್ಳಬಹುದು. ಬಹುತೇಕ ಪ್ರಕರಣಗಳಲ್ಲಿ ಐದು ದಿನಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ. ವ್ಯಕ್ತಿಯಲ್ಲಿ ಸೋಂಕು ಇದ್ದು, ಅದರ ಲಕ್ಷಣಗಳು ಗೋಚರಿಸದ ಸಂದರ್ಭದಲ್ಲಿಯೂ ಸೋಂಕು ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಇದೆ.

14 ದಿನ ಪ್ರತ್ಯೇಕವಾಗಿ ಇದ್ದ ವ್ಯಕ್ತಿಯಲ್ಲಿ ರೋಗದ ಯಾವ ಲಕ್ಷಣವೂ ಕಾಣಿಸಿಕೊಳ್ಳದಿದ್ದರೆ, ಅವರಿಂದ ಇತರ ರಿಗೆ ಸೋಂಕು ಹರಡುವ ಅಪಾಯ ಇಲ್ಲ ಎಂದು ಡಬ್ಲ್ಯುಎಚ್‌ಒ ಹೇಳಿದೆ.

ತುರ್ತುಸ್ಥಿತಿ ಘೋಷಣೆ
ನೈಸರ್ಗಿಕ ವಿಕೋಪಗಳು, ಪಿಡುಗುಗಳು ಮತ್ತು ಇತರ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯ ಸಂದರ್ಭದಲ್ಲಿ ತುರ್ತುಪರಿಸ್ಥಿತಿ ಘೋಷಿಸಲು ಸರ್ಕಾರಕ್ಕೆ ಅವಕಾಶ ಇದೆ. ಹೀಗೆ ಘೋಷಣೆ ಮಾಡಿದರೆ, ಸಾರ್ವಜನಿಕ ಆರೋಗ್ಯ ರಕ್ಷಣೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಅವಕಾಶ ಸಿಗುತ್ತದೆ. 

ಜಾಗತಿಕ ಪಿಡುಗು ಈ ವೈರಸ್‌ ಹಾವಳಿ
ಕೊರೊನಾ ವೈರಸ್‌ ಹಾವಳಿಯನ್ನು ಪಿಡುಗು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಬುಧವಾರ ಘೋಷಿಸಿದೆ. ಆರು ಖಂಡಗಳ ನೂರಕ್ಕೂ ಹೆಚ್ಚು ದೇಶಗಳಿಗೆ ಸೋಂಕು ಹರಡಿದ ಕಾರಣ ಪಿಡುಗು ಎಂದು ಘೋಷಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು.

ಜಗತ್ತಿನ ವಿವಿಧೆಡೆ ಭಾರಿ ಸಂಖ್ಯೆಯಲ್ಲಿ ಜನರಿಗೆ ಸೋಂಕು ತಗಲಿದ ಕಾರಣಕ್ಕೆ ಈ ತೀರ್ಮಾನಕ್ಕೆ ಬರಲಾಯಿತು. ಈ ತೀರ್ಮಾನ ತೆಗೆದುಕೊಳ್ಳಲು ಡಬ್ಲ್ಯುಎಚ್‌ಒ ಆರಂಭದಲ್ಲಿ ಹಿಂಜರಿದಿತ್ತು. ಸೋಂಕು ತಡೆ ಅಸಾಧ್ಯ ಎಂಬ ಭಾವನೆ ಜನರಲ್ಲಿ ಮೂಡಬಾರದು ಎಂಬುದು ಈ ಹಿಂಜರಿಕೆಗೆ ಕಾರಣವಾಗಿತ್ತು. 

ಕರ್ನಾಟಕ ಸೇರಿ ಭಾರತದ ಹಲವು ರಾಜ್ಯಗಳು ಕೂಡ ಈ ಸೋಂಕನ್ನು ಪಿಡುಗು ಎಂದು ಪರಿಗಣಿಸಿವೆ. ರೋಗವೊಂದು ಸಾಂಕ್ರಾಮಿಕದ ರೂಪ ತಳೆದು ಅನಿರೀಕ್ಷಿತ ರೀತಿಯಲ್ಲಿ ಹರಡುತ್ತಿದ್ದರೆ ಅದನ್ನು ಪಿಡುಗು ಎಂದು ಘೋಷಿಸಬಹುದು ಎಂಬುದು ಡಬ್ಲ್ಯುಎಚ್‌ಒ ನಿಯಮ.

ಕಣ್ಣು, ಮೂಗು ಮುಟ್ಟಬೇಡಿ
ಸಮೂಹ ಸಾರಿಗೆ ವಾಹನಗಳಲ್ಲಿ ಆಸರೆಗಾಗಿ ನೂರಾರು ಮಂದಿ ಮುಟ್ಟಿದ ಹ್ಯಾಂಡಲ್‌ಗಳ ಮೇಲೆಯೇ ನಾವೂ ಕೈ ಇಟ್ಟಿರುತ್ತೇವೆ. ಅದೇ ಕೈಯಿಂದ ಕಣ್ಣು, ಮೂಗು ಮುಟ್ಟಿದರೆ ಸೋಂಕು ಅಂಟುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಸೋಪಿನಿಂದ ಕೈ ತೊಳೆಯುವ ಮುನ್ನ ಕಣ್ಣು, ಮೂಗು ಮುಟ್ಟುದಿರುವುದು ಲೇಸು

ಯಾರು ಮಾಸ್ಕ್‌ ಧರಿಸಬೇಕು?
ಕೆಮ್ಮು, ಜ್ವರ, ಉಸಿರಾಟದ ತೊಂದರೆ ಸೇರಿದಂತೆ ಅನಾರೋಗ್ಯ ಸಮಸ್ಯೆ ಇರುವವರು ಮಾಸ್ಕ್‌ ಧರಿಸಬೇಕು. ಆರೋಗ್ಯವಾಗಿರುವವರು ಮಾಸ್ಕ್‌ ಧರಿಸಬೇಕಿಲ್ಲ. ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರವನ್ನು ಬಳಸಬೇಕು

ಯಾವುದು ಉತ್ತಮ?
ಸ್ಯಾನಿಟೈಜರ್‌ ಬಳಕೆಗಿಂತ ಸೋಪು–ನೀರಿನ ಬಳಕೆಯೇ ಉತ್ತಮ. ಏಕೆಂದರೆ, ಸ್ಯಾನಿಟೈಜರ್‌ ಬಳಕೆ ಸಂಪೂರ್ಣ ಸುರಕ್ಷಿತವಲ್ಲ ಎನ್ನುವುದು ಪರೀಕ್ಷೆಯಿಂದ ದೃಢಪಟ್ಟಿದೆ ಎನ್ನುತ್ತದೆ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ವರದಿ. ಸ್ಯಾನಿಟೈಜರ್‌ಗಳ ಬಳಕೆ ವಿಧಾನವೂ ಜನರಿಗೆ ಸರಿಯಾಗಿ ತಿಳಿದಿಲ್ಲ. ಅಲ್ಲದೆ, ಕಲ್ಮಶವಾದ ಕೈಗಳಿಗೆ ಅದನ್ನು ಬಳಸುವುದರಿಂದ ಹೆಚ್ಚಿನ ಪ್ರಯೋಜನವಾಗದು

ಮುನ್ನೆಚ್ಚರಿಕೆ ಕ್ರಮಗಳು
* ಜ್ವರ, ಕೆಮ್ಮು ಸೇರಿದಂತೆ ರೋಗ ಲಕ್ಷಣಗಳು ಕಾಣಿಸಿಕೊಂಡಾಗ ವೈದ್ಯರನ್ನು ಸಂಪರ್ಕಿಸಿ, ಪರೀಕ್ಷಿಸಿಕೊಳ್ಳಿ. ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರವನ್ನು ಬಳಕೆ ಮಾಡಿ
* ಬಳಸಿದ ಟಿಶ್ಯೂ ಪೇಪರ್‌ಗಳನ್ನು ತಕ್ಷಣವೇ ಮುಚ್ಚಿದ ತೊಟ್ಟಿಯಲ್ಲಿ ಹಾಕಿ
* ಬಿಸಿಯಾದ ನೀರನ್ನು ಹೆಚ್ಚಾಗಿ ಬಳಕೆ ಮಾಡಿ
* ತಾಜಾ, ಜೀರ್ಣಕ್ಕೆ ಸುಲಭವಾದ ಆಯಾ ಕಾಲದಲ್ಲಿ ಲಭ್ಯವಿರುವ ತರಕಾರಿಗಳನ್ನು ಸೇವಿಸಿ

ರೋಗ ಲಕ್ಷಣಗಳು
ಜ್ವರ, ತಲೆನೋವು, ನೆಗಡಿ ಮತ್ತು ಕೆಮ್ಮು, ಉಸಿರಾಟದ ತೊಂದರೆ, ಬೇಧಿ

ಆಗಾಗ ಕೈ ತೊಳೆಯಿರಿ
ದೈನಂದಿನ ಕೆಲಸದ ಸಂದರ್ಭದಲ್ಲಿ ಕೈ ಸಂಪರ್ಕಕ್ಕೆ ಬಂದಿರಬಹುದಾದ ರೋಗಕಾರಕ ಜೀವಾಣುಗಳು ನಿಯಮಿತ ಅಂತರದಲ್ಲಿ ಚೆನ್ನಾಗಿ ಕೈ ತೊಳೆಯುವುದರಿಂದ ನಿರ್ಮೂಲನೆ ಆಗುತ್ತವೆ. ಕೋವಿಡ್‌–19 ಸೋಂಕು ತಗುಲದಂತೆ ತಡೆಗಟ್ಟಲು ನಿಯಮಿತವಾಗಿ ಅಲ್ಕೋಹಾಲ್‌ ಇರುವ ಸೋಪ್‌ನಿಂದ ಕೈ ತೊಳೆಯುವುದು ಹೆಚ್ಚು ಪ್ರಯೋಜನಕಾರಿ. ಕೈಗಳನ್ನು ಸೇರಿರಬಹುದಾದ ವೈರಸ್‌ಗಳು ಸೋಪ್‌ನಲ್ಲಿರುವ ಅಲ್ಕೋಹಾಲ್‌ ಅಂಶದಿಂದ ಸಂಪೂರ್ಣ ನಾಶವಾಗುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ

ಒಂದು ಮೀಟರ್‌ ಅಂತರ ಇರಲಿ
ಕೆಮ್ಮುವ ಇಲ್ಲವೆ ಶೀತದಿಂದ ಬಳಲುವ ವ್ಯಕ್ತಿಯಿಂದ ಕನಿಷ್ಠ ಒಂದು ಮೀಟರ್‌ ಅಂತರವನ್ನು ಕಾಯ್ದುಕೊಳ್ಳಿ. ಕೆಮ್ಮುವಾಗ ಇಲ್ಲವೆ ಸೀನುವಾಗ ಆ ವ್ಯಕ್ತಿಯ ಬಾಯಿ ಅಥವಾ ಮೂಗಿನಿಂದ ರೋಗಕಾರಕ ವೈರಸ್‌ಗಳು ಹೊರಬೀಳುತ್ತವೆ. ತುಂಬಾ ಹತ್ತಿರದಲ್ಲಿದ್ದರೆ ನಮ್ಮ ದೇಹಕ್ಕೆ ಅವುಗಳು ಸೇರ್ಪಡೆ ಆಗುವ ಸಾಧ್ಯತೆ ಇರುತ್ತದೆ

ಸೆಲೆಬ್ರಿಟಿಗಳನ್ನೂ ಬಿಡದ ಸೋಂಕು
ಸೋಫಿ ಗ್ರಾಗ್ವಾರ್ ಟ್ರೂಡೊ, ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರ ಪತ್ನಿ

ಬ್ರಿಟನ್‌ ಪ್ರವಾಸದಿಂದ ಹಿಂತಿರುಗಿದ ನಂತರ ಸೋಫಿ ಅವರಲ್ಲಿ ಜ್ವರ ಕಾಣಿಸಿಕೊಂಡಿತ್ತು. ನಂತರ ಅವರೂ ಕೋವಿಡ್–19 ಪೀಡಿತರಾಗಿರುವುದು ಪತ್ತೆಯಾಯಿತು.

ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರೂ ಜ್ವರದಿಂದ ಬಳಲುತ್ತಿದ್ದಾರೆ. ಆದರೆ, ಅವರಿಗೆ ಕೊರೊನಾ ಸೋಂಕು ತಗುಲಿಲ್ಲ. ಜಸ್ಟಿನ್ ಅವರು ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವುಳಿದಿದ್ದಾರೆ

ರೂಡಿ ಗೊಬರ್ಟ್‌, ಅಮೆರಿಕದ ಬ್ಯಾಸ್ಕೆಟ್‌ಬಾಲ್ ಆಟಗಾರ

ಅಮೆರಿಕ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್‌ನ ಆಟಗಾರರಾದ ರೂಡಿ ಗೊಬರ್ಟ್‌ ಅವರಿಗೆ ಕೋವಿಡ್–19 ಸೋಂಕು ತಗಲಿರುವುದು ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಮತ್ತೊಂದು ಕ್ಲಬ್‌ನ ಆಟಗಾರ ಡೊನೊವಾಲ್ ಮಿಷಲ್‌ ಅವರಿಗೂ ಕೋವಿಡ್–19 ತಗುಲಿರುವುದು ದೃಢವಾಯಿತು.

ಟಾಮ್ ಹಾಂಕ್ಸ್‌-ರೀಟಾ ವಿಲ್ಸನ್ (ಹಾಲಿವುಡ್ ನಟ-ನಟಿ)

ಟಾಮ್ ಮತ್ತು ರೀಟಾ ಅವರು ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಆಸ್ಟ್ರೇಲಿಯಕ್ಕೆ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಇಬ್ಬರಲ್ಲೂ ಜ್ವರದ ಲಕ್ಷಣಗಳು ಕಾಣಿಸಿಕೊಂಡ ಕಾರಣ ಆರೋಗ್ಯ ತಪಾಸಣೆ ಮಾಡಲಾಗಿತ್ತು. ಇಬ್ಬರೂ ಕೋವಿಡ್–19 ಪೀಡಿತರಾಗಿರುವುದು ಧೃಡಪಟ್ಟಿದೆ. ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು