ಮಂಗಳವಾರ, ಮೇ 18, 2021
28 °C

ಆಳ-ಅಗಲ | ಕೋವಿಡ್‌ ನಡುವೆ ನೀಟ್:‌ ಸರ್ಕಾರಕ್ಕೆ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಇದೇ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜೆಇಇ ಮತ್ತು ನೀಟ್‌ ಪರೀಕ್ಷೆಗಳನ್ನು ಮುಂದೂಡುವಂತೆ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ. ಪೂರ್ವನಿಗದಿಯಂತೆ ಪರೀಕ್ಷೆಗಳನ್ನು ನಡೆಸಿ ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿದ್ದರೂ, ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದ್ದಾರೆ. ಪರೀಕ್ಷೆಯ ದಿನಾಂಕ ಮತ್ತು ಮಾರ್ಗಸೂಚಿಯನ್ನು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ) ಘೋಷಿಸಿದ ನಂತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ವಿದ್ಯಾರ್ಥಿಗಳು ‘ಪ್ರೊಟೆಸ್ಟ್ ಫ್ರಂ ಹೋಂ’ ಎಂದು ಮನೆಯಿಂದಲೇ ಪ್ರತಿಭಟನೆ ಆರಂಭಿಸಿದ್ದಾರೆ. ಪರೀಕ್ಷೆಗಳನ್ನು ಮುಂದೂಡುವಂತೆ ಲಕ್ಷಾಂತರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಟ್ವೀಟ್ ಮಾಡುತ್ತಿದ್ದಾರೆ.

***

ವಿದ್ಯಾರ್ಥಿಗಳ ಬೇಡಿಕೆ

ಕೋವಿಡ್‌ ಹರಡುವಿಕೆ ನಿಯಂತ್ರಣಕ್ಕೆ ಬಂದಿಲ್ಲ. ಕೋವಿಡ್‌ ವ್ಯಾಪಕವಾಗಿ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು, ವಿದ್ಯಾರ್ಥಿಗಳ ಆರೋಗ್ಯವನ್ನು ಅಪಾಯಕ್ಕೆ ದೂಡಿದಂತೆ. ಕೋವಿಡ್ ನಿಯಂತ್ರಣಕ್ಕೆ ಬಂದಿಲ್ಲದೇ ಇರುವುದರಿಂದ ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ಸೋಂಕು ತಗಲುವ ಅಪಾಯವಿದೆ. ಕೋವಿಡ್‌ಗೆ ಈವರೆಗೆ ಚಿಕಿತ್ಸೆ ಮತ್ತು ಲಸಿಕೆ ಇಲ್ಲದೇ ಇರುವುದರಿಂದ ಇದು, ವಿದ್ಯಾರ್ಥಿಗಳ ಜೀವಕ್ಕೆ ತೊಂದರೆ. ಹೀಗಾಗಿ ಕೋವಿಡ್‌ ನಿಯಂತ್ರಣಕ್ಕೆ ಬಂದು, ಪರಿಸ್ಥಿತಿ ತಿಳಿಯಾಗುವವರೆಗೂ ಪರೀಕ್ಷೆಗಳನ್ನು ನಡೆಸಬಾರದು ಎಂಬುದು ವಿದ್ಯಾರ್ಥಿಗಳ ಒತ್ತಾಯ. ಪರೀಕ್ಷೆಯನ್ನು ಮುಂದೂಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲೂ ವಿದ್ಯಾರ್ಥಿಗಳು ಇದೇ ಕಾರಣಗಳನ್ನು ಮುಂದುಮಾಡಿದ್ದರು.

ವಿದ್ಯಾರ್ಥಿಗಳ ಒತ್ತಾಯಕ್ಕೆ, ಹವಾಮಾನ ವೈಪರೀತ್ಯ ಕಾರ್ಯಕರ್ತೆ ಗ್ರೆಟ್ಟಾ ಥುನ್‌ಬರ್ಗ್‌ ಬೆಂಬಲ ಸೂಚಿಸಿದ್ದಾರೆ. ‘ಕೋವಿಡ್‌ ಹಾವಳಿಯ ಸಂದರ್ಭದಲ್ಲಿ ಪರೀಕ್ಷೆಗೆ ಕುಳಿತುಕೊಳ್ಳಿ ಎಂದು ಭಾರತ ಸರ್ಕಾರ ಹೇಳುತ್ತಿರುವುದು ಉಚಿತವಲ್ಲ. ಪ್ರವಾಹದ ಕಾರಣ ಲಕ್ಷಾಂತರ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ. ಈ ವಿಚಾರದಲ್ಲಿ ನಾನು ವಿಉದ್ಯಾರ್ಥಿಗಳ ಪರ ನಿಲ್ಲುತ್ತೇನೆ. ನೀಟ್‌ಪರೀಕ್ಷೆಯನ್ನು ಮುಂದೂಡಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ವಿದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಈಗ ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿದೇಶಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆದು, ಪರೀಕ್ಷೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಇನ್ನೊಂದು ಅರ್ಜಿ ಸಲ್ಲಿಕೆಯಾಗಿತ್ತು.

ಸರ್ಕಾರದ ಪ್ರತಿಪಾದನೆ

ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಸರ್ಕಾರ ಮನವರಿಕೆ ಮಾಡಿಕೊಟ್ಟ ಕಾರಣ, ಈ ಎರಡೂ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಸಾರಾಸಗಟಾಗಿ ತಳ್ಳಿಹಾಕಿತು. ‘ನೀಟ್‌ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಈ ಮೊದಲು 2,546 ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ನಡೆಸಲು ವ್ಯವಸ್ಥೆ ಮಾಡಲಾಗಿತ್ತು. ಈಗ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು 3,843ಕ್ಕೆ ಹೆಚ್ಚಿಸಲಾಗಿದೆ. ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಸುರಕ್ಷಿತ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಕೋವಿಡ್ ಹರಡದಂತೆ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ಪರೀಕ್ಷೆ ಮುಂದೂಡುವುದರಿಂದ, ವಿದ್ಯಾರ್ಥಿಗಳ ಭವಿಷ್ಯಕ್ಕೆ  ತೊಂದರೆಯಾಗಲಿದೆ. ಹೀಗಾಗಿ ಪೂರ್ವನಿಗದಿಯಂತೆ ಸೆಪ್ಟೆಂಬರ್ ತಿಂಗಳಲ್ಲೇ ಪರೀಕ್ಷೆ ನಡೆಸಲು ಅನುವು ಮಾಡಿಕೊಡಬೇಕು’ ಎಂಬುದು ಸರ್ಕಾರದ ವಾದವಾಗಿತ್ತು. ಈ ವಾದವನ್ನು ಸುಪ್ರೀಂ ಕೋರ್ಟ್‌ ಮಾನ್ಯ ಮಾಡಿತು.

'ಸುಪ್ರೀಂ' ಆದೇಶ

‘ವಿದೇಶಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆದು, ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಅಲ್ಲಿರುವ ವಿದ್ಯಾರ್ಥಿಗಳನ್ನು ವಂದೇಭಾರತ್ ಮಿಷನ್ ಅಡಿ ಕರೆದುಕೊಂಡು ಬನ್ನಿ. ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ತಲುಪಿಸಲು ಅಗತ್ಯ ಸಾರಿಗೆ ವ್ಯವಸ್ಥೆ ಮಾಡಿ’ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ‘ಕೋವಿಡ್‌ ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ವ್ಯವಸ್ಥೆಗಳನ್ನು ಸರ್ಕಾರ ಮಾಡಿಕೊಂಡಿದೆ. ಹೀಗಾಗಿ ಪೂರ್ವನಿಗದಿಯಂತೆ ಸೆಪ್ಟೆಂಬರ್‌ನಲ್ಲೇ ಪರೀಕ್ಷೆ ನಡೆಯಲಿ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಹೋಗಲು ಯಾವುದೇ ಅಡಚಣೆಯಾಗದಂತೆ ವ್ಯವಸ್ಥೆ ಮಾಡುವ ಹೊಣೆ ಸರ್ಕಾರದ್ದು’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಈ ಆದೇಶದನ್ವಯ ಪರೀಕ್ಷೆಯ ದಿನಾಂಕವನ್ನು ಎನ್‌ಟಿಎ ಹೊರಡಿಸಿದೆ. ಪರೀಕ್ಷೆ ಮುಂದೂಡುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದ್ದಾರೆ. ‘ಕೋವಿಡ್‌ ಇದ್ದ ಕಾರಣ, ತರಬೇತಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಿಲ್ಲ. ಮನೆಯಲ್ಲಿ ಕೂತು ಸರಿಯಾಗಿ ಅಭ್ಯಾಸ ಮಾಡಲು ಸಾಧ್ಯವಾಗಿಲ್ಲ. ಅಗತ್ಯ ಪಠ್ಯಪುಸ್ತಕಗಳು ದೊರೆಯದ ಕಾರಣ ಪರೀಕ್ಷೆಗೆ ಪೂರ್ಣಪ್ರಮಾಣದಲ್ಲಿ ಸಿದ್ಧತೆ ಮಾಡಿಕೊಂಡಿಲ್ಲ. ಪರೀಕ್ಷೆಯನ್ನು ಮುಂದೂಡಬಹುದು, ಆಗ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬಹುದು ಎಮದು ಊಹಿಸಿದ್ದೆವು. ಆದರೆ, ಈಗ ಸಿದ್ಧತೆಯೇ ಇಲ್ಲದೆ ಪರೀಕ್ಷೆಯನ್ನು ಬರೆಯಬೇಕಾಗಿದೆ’ ಎನ್ನುತ್ತಾರೆ ತುಮಕೂರಿನ ತೇಜಸ್ವಿನಿ. ಆಕೆಯ ಗೆಳೆಯ ಗೆಳತಿಯರದ್ದೂ ಇದೇ ಅಳಲು.

ಇದೇ ವೇಳೆ ಬಿಹಾರದಲ್ಲಿ ಲಾಕ್‌ಡೌನ್‌ ಅನ್ನು ಸೆಪ್ಟೆಂಬರ್ 6ರವರೆಗೆ ವಿಸ್ತರಿಸಲಾಗಿದೆ. ಲಾಕ್‌ಡೌನ್‌ ಅಲ್ಲಿಗೇ ಮುಗಿಯುತ್ತದೆಯೇ ಇಲ್ಲವೇ ಎಂಬುದು ಅನಿಶ್ಚಿತವಾಗಿದೆ. ದೇಶದ ಹಲವೆಡೆ ಪ್ರವಾಹವಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸಿದರೆ ಹೇಗೆ? ವಿದ್ಯಾರ್ಥಿಗಳು ಏಕಾಗ್ರತೆಯಿಂದ ಪರೀಕ್ಷೆಗೆ ಸಿದ್ಧರಾಗುವುದು ಹೇಗೆ? ಪರೀಕ್ಷೆ ಬರೆಯುವುದಾದರೂ ಹೇಗೆ. ಇವು ಟ್ವಿಟರ್‌ನಲ್ಲಿ ವಿದ್ಯಾರ್ಥಿಗಳು ಕೇಳುತ್ತಿರುವ ಪ್ರಶ್ನೆ.

ವಿಳಂಬದಿಂದ ಹಲವು ಸಮಸ್ಯೆ

‘ಪರೀಕ್ಷೆಗಳನ್ನು ಇನ್ನಷ್ಟು ವಿಳಂಬ ಮಾಡಿದರೆ ಗಂಭೀರ ಪರಿಣಾಮ ಉಂಟಾಗುತ್ತದೆ. ಶೈಕ್ಷಣಿಕ ವೇಳಾಪಟ್ಟಿ ಏರುಪೇರಾಗುವುದಷ್ಟೇ ಅಲ್ಲ, ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುತ್ತದೆ’ ಎಂದು ಐಐಟಿ ದೆಹಲಿಯ ನಿರ್ದೇಶಕ ವಿ. ರಾಮಗೋಪಾಲ ರಾವ್‌ ಹೇಳುತ್ತಾರೆ. ಈ ಕುರಿತಾಗಿ ಅವರು ಉಲ್ಲೇಖಿಸಿದ ಕೆಲವು ಅಂಶಗಳು ಹೀಗಿವೆ...

* ನಾವು ಎರಡು ಬ್ಯಾಚ್‌ಗಳನ್ನು ಏಕಕಾಲದಲ್ಲಿ ನಡೆಸಲು ಹೇಗೆ ಸಾಧ್ಯ? ನಮ್ಮ ಶೈಕ್ಷಣಿಕ ವೇಳಾಪಟ್ಟಿ ಈಗಾಗಲೇ ತುಂಬಾ ಸಂಕೀರ್ಣವಾಗಿದೆ ಮತ್ತು ಇತರ ಹಲವು ವಿಚಾರಗಳನ್ನು ಒಳಗೊಂಡಿದೆ. ಕೂಡಲೇ ಪರೀಕ್ಷಾ ಪ್ರಕ್ರಿಯೆ ಆರಂಭಿಸದಿದ್ದರೆ ಹಲವು ವಿದ್ಯಾರ್ಥಿಗಳಿಗೆ ಈ ವರ್ಷ ಶೂನ್ಯ ಶೈಕ್ಷಣಿಕ ವರ್ಷವಾಗುತ್ತದೆ

* ಈಗಾಗಲೇ ಆರು ತಿಂಗಳು ಕಳೆದುಹೋಗಿವೆ. ಸೆಪ್ಟೆಂಬರ್‌ನಲ್ಲಿ ಪರೀಕ್ಷೆ ನಡೆಸಿದರೆ ಡಿಸೆಂಬರ್‌ ವೇಳೆಗೆ ಐಐಟಿಗಳಲ್ಲಿ ಪಠ್ಯಕ್ರಮವನ್ನು (ಆನ್‌ಲೈನ್‌ನಲ್ಲಾದರೂ) ಆರಂಭಿಸಬಹುದು. ಪರೀಕ್ಷೆಯನ್ನು ಮುಂದೂಡುವುದರಿಂದ ಎಲ್ಲರಿಗೂ ತೊಂದರೆಯಾಗುತ್ತದೆ

* ಕನಿಷ್ಠ ಇನ್ನು ಒಂದು ವರ್ಷ ಕಾಲ ಕೊರೊನಾ ನಮ್ಮಿಂದ ದೂರವಾಗುವುದಿಲ್ಲ. ಹಾಗೆಂದು ನಾವು ಪೂರ್ಣ ಲಾಕ್‌ಡೌನ್‌ ಸ್ಥಿತಿಯಲ್ಲಿರಲು ಸಾಧ್ಯವಿಲ್ಲ. ಸುರಕ್ಷಾ ನಿಯಮಗಳನ್ನು ಪಾಲಿಸುವ ಮೂಲಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕು. ಒಮ್ಮೆ ಪರೀಕ್ಷೆ ಮುಂದೂಡಿದ್ದರಿಂದ ಪೂರ್ಣಪ್ರಮಾಣದಲ್ಲಿ ಸಿದ್ಧತೆ ಮಾಡಿಕೊಳ್ಳಲು ನಮಗೆ ಅನುಕೂಲವಾಗಿದೆ

* ಪರೀಕ್ಷೆಗಾಗಿ ಗಂಭೀರವಾಗಿ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಗಳು ಕೋವಿಡ್‌ ಜತೆಗೆ ಪರೀಕ್ಷೆ ಮುಂದೂಡಿಕೆಯ ಒತ್ತಡವನ್ನೂ ಎದುರಿಸುತ್ತಿದ್ದಾರೆ. ನೂರಾರು ವಿದ್ಯಾರ್ಥಿಗಳು ಇ–ಮೇಲ್‌ ಮೂಲಕ ಆತಂಕವನ್ನು ವ್ಯಕ್ತಪಡಿಸಿದ್ದಾರೆ

* ಕಾರಣಾಂತರಗಳಿಂದ ಈ ಬಾರಿ ಪರೀಕ್ಷೆ ಬರೆಯಲಾಗದವರು ಆರು ತಿಂಗಳ ಬಳಿಕ ಪುನಃ ಬರೆಯಬಹುದು. ಆತಂಕಕ್ಕೆ ಕಾರಣವಿಲ್ಲ. ಜೆಇಇ ಆಯೋಜಕ ಸಂಸ್ಥೆಗಳಾಗಿ ಪರೀಕ್ಷೆಗಳನ್ನು ಆಯೋಜಿಸಲು ಎಲ್ಲಾ ಪ್ರಾಮಾಣಿಕ ಪ್ರಯತ್ನಗಳನ್ನು ಐಐಟಿಗಳು ಮಾಡಲಿವೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಅಗತ್ಯ ಹೆಜ್ಜೆಗಳನ್ನಿಡಲಿವೆ. ಮುನ್ನೆಚ್ಚರಿಕೆಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿವೆ

* ಅಭ್ಯರ್ಥಿಗಳ ಆರೋಗ್ಯ ನಮ್ಮ ಪರಮ ಆದ್ಯತೆಯಾಗಿದೆ. ನಮಗೂ ಮಕ್ಕಳಿದ್ದಾರೆ, ಪಾಲಕರ ಆತಂಕವನ್ನು ಅರ್ಥಮಾಡಿಕೊಳ್ಳಬಲ್ಲೆವು

ಬಿಜೆಪಿಯೇತರ ಆಡಳಿತದ ರಾಜ್ಯಗಳ ವಿರೋಧ

ಕೊರೊನಾ ಕಾಲದಲ್ಲಿ ಜೆಇಇ, ನೀಟ್‌ ಪರೀಕ್ಷೆಗಳನ್ನು ಆಯೋಜಿಸುವುದನ್ನು ಬಿಜೆಪಿಯೇತರ ಆಡಳಿತವಿರುವ ಬಹುತೇಕ ಎಲ್ಲಾ ರಾಜ್ಯಗಳು ವಿರೋಧಿಸಿವೆ.

ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಹಾಗೂ ಒಡಿಶಾ ರಾಜ್ಯ ಸರ್ಕಾರಗಳು ಪರೀಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸಿ ಕೇಂದ್ರದ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್ ಅವರಿಗೆ ಪತ್ರ ಬರೆದಿವೆ.

‘ಅತಿವೃಷ್ಟಿಯ ಕಾರಣದಿಂದ ಅನೇಕ ರಾಜ್ಯಗಳಲ್ಲಿ ವಿದ್ಯಾರ್ಥಿಗಳಿಗೆ ಅಭ್ಯಾಸ ನಡೆಸಲು ಸಮಸ್ಯೆಯಾಗಿದೆ. ಕೊರೊನಾ ಕಾರಣದಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿರುವುದರಿಂದ ಪರೀಕ್ಷಾ ಕೇಂದ್ರಗಳಿಗೆ ಬರಲು ವಿದ್ಯಾರ್ಥಿಗಳಿಗೆ ಸಾಧ್ಯವಾಗಲಾರದು’ ಎಂದು ಕೆಲವು ರಾಜ್ಯಗಳು ಆತಂಕ ವ್ಯಕ್ತಪಡಿಸಿವೆ.

‘ನೀಟ್‌ ಪರೀಕ್ಷೆಗಳನ್ನೇ ರದ್ದು ಮಾಡಬೇಕು ಅಥವಾ ಒಂದು ವೇಳೆ ಪರೀಕ್ಷೆ ಆಯೋಜಿಸಿದರೂ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಬೇಕು’ ಎಂದು ತಮಿಳುನಾಡು ಸರ್ಕಾರ ಒತ್ತಾಯಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು