ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಕ್ರಿಕೆಟ್ ಭ್ರಷ್ಟಾಚಾರ; ಕಾನೂನಿಗಿಲ್ಲ ಪೂರ್ಣ ಅಧಿಕಾರ

ಬೆಟ್ಟಿಂಗ್ ಕಾನೂನುಬದ್ಧವಾಗುವುದು ಬೇಡವೇ?
Last Updated 6 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕ್ರಿಕೆಟ್ ಬೆಟ್ಟಿಂಗ್ ಅನ್ನು ಕಾನೂನುಬದ್ಧಗೊಳಿಸಬೇಕು. ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯಲ್ಲಿರುವ ಪದಾಧಿಕಾರಿಗಳು, ಆಡಳಿತ ಸಿಬ್ಬಂದಿ, ಆಟಗಾರರು ಇದರಲ್ಲಿ ಭಾಗಿಯಾಗುವಂತಿಲ್ಲ. ಅವರೆಲ್ಲರೂ ತಮ್ಮ ಆಸ್ತಿಪಾಸ್ತಿಯ ವಿವರವನ್ನು ಸಲ್ಲಿಸಬೇಕು...’

ವಿಶ್ವದ ಶ್ರೀಮಂತ ಕ್ರೀಡಾ ಸಂಸ್ಥೆಗಳಲ್ಲಿ ಒಂದಾಗಿರುವ ಬಿಸಿಸಿಐ ಆಡಳಿತದಲ್ಲಿ ಸುಧಾರಣೆ ತರಲು ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಅವರ ಸಮಿತಿಯು ನೀಡಿರುವ ಶಿಫಾರಸುಗಳ ಆಧಾರದಲ್ಲಿ ರಚನೆಯಾಗಿರುವ ನಿಯಮಾವಳಿಯಲ್ಲಿರುವ ಅಂಶ ಇದು. ಇದರ ಪ್ರಕಾರ; ಬೆಟ್ಟಿಂಗ್ ಕಾನೂನುಬದ್ಧವಾದರೆ, ಸರ್ಕಾರದ ನಿಯಂತ್ರಣ ಇರುತ್ತದೆ. ಅಲ್ಲದೇ ಅದರಿಂದ ಬರುವ ಆದಾಯವು ಮಂಡಳಿಗೆ ಮತ್ತು ತೆರಿಗೆಯ ಹಣ ಸರ್ಕಾರಕ್ಕೆ ಸಂದಾಯವಾಗುತ್ತದೆ. ಆದರೆ, ಮಂಡಳಿಯೊಳಗಿನ ಯಾರೂ ಇದರಲ್ಲಿ ಭಾಗಿಯಾಗುವಂತಿಲ್ಲ ಎಂಬುದು ಸ್ಪಷ್ಟ. ಏಕೆಂದರೆ, ಈ ಹಿಂದಿನ ಪ್ರಕರಣಗಳಲ್ಲಿ ಬಿಸಿಸಿಐ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ‘ಹಿತಾಸಕ್ತಿ ಸಂಘರ್ಷ’ಗಳ ಉದಾಹರಣೆಗಳಿವೆ.

ಆದರೆ, ಇದೀಗ ಬಿಸಿಸಿಐನ ಭ್ರಷ್ಟಾಚಾರ ತಡೆ ಘಟಕ (ಎಸಿಯು) ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿರುವ ಶಬೀರ್ ಹುಸೇನ್ ಖಂಡ್ವಾವಾಲಾ ಅವರ ಹೇಳಿಕೆಯು ಲೋಧಾ ಸಮಿತಿಯ ಈ ಶಿಫಾರಸಿಗೆ ತಿಲಾಂಜಲಿ ಇಡುವ ಮುನ್ನುಡಿಯಂತೆ ಕಾಣುತ್ತಿದೆ. ಇನ್ನೆರಡು ದಿನಗಳು ಕಳೆದರೆ ಐಪಿಎಲ್ ಆರಂಭವಾಗಲಿದೆ. ಈ ವರ್ಷ ಟಿ20 ವಿಶ್ವಕಪ್ ಟೂರ್ನಿಗೂ ಭಾರತವೇ ಆತಿಥ್ಯ ವಹಿಸಲಿದೆ. ಈ ಕಾರಣಕ್ಕೆ ಶಬೀರ್ ಹೇಳಿಕೆಯು ಮಹತ್ವ ಪಡೆದುಕೊಂಡಿದೆ.

‘ಬೆಟ್ಟಿಂಗ್ ಕಾನೂನುಬದ್ಧಗೊಳಿಸುವುದರಿಂದ ಮ್ಯಾಚ್‌ ಫಿಕ್ಸಿಂಗ್‌ಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಭ್ರಷ್ಟಾಚಾರದ ಚಟುವಟಿಕೆಗಳನ್ನು ಮಟ್ಟ ಹಾಕಬೇಕು. ಬೆಟ್ಟಿಂಗ್ ನಿಯಮಬದ್ಧವಾದರೆ ಸರ್ಕಾರಕ್ಕೆ ಅಪಾರ ಆದಾಯ ಬರುತ್ತದೆ ಎಂಬುದು ಮೇಲ್ನೋಟದ ಮಾತು. ಬೆಟ್ಟಿಂಗ್‌ ಅಪಾಯಕಾರಿ, ಅದರಿಂದಾಗುವ ಅನಾಹುತ ಹೆಚ್ಚು. ಪಿಡುಗು ತಡೆಯಲು ನಿಯಮ ರೂಪಿಸುವ ಹೊತ್ತಿನಲ್ಲಿ, ಅಪರಾಧವನ್ನೇ ಕಾನೂನುಬದ್ಧಗೊಳಿಸುವುದು ಸರಿಯಲ್ಲ’ ಎಂದು ಗುಜರಾತ್‌ನ ಮಾಜಿ ಪೊಲೀಸ್ ಮಹಾನಿರ್ದೇಶಕರಾಗಿರುವ ಶಬೀರ್ ಹೇಳಿದ್ದಾರೆ.

ಕಳೆದೆರಡು ದಶಕಗಳಿಂದ ಭಾರತದ ಕ್ರಿಕೆಟ್‌ ಅನ್ನು ಈ ಪಿಡುಗು ಕಾಡುತ್ತಿದ್ದರೂ ಕಟ್ಟುನಿಟ್ಟಿನ ಕಾನೂನು ರಚನೆಯಾಗಿಲ್ಲ. 1999– 2000ರಲ್ಲಿ ಮೊದಲ ಬಾರಿಗೆ ದೊಡ್ಡ ಸದ್ದು ಮಾಡಿದ್ದ ಪಂದ್ಯ ಫಿಕ್ಸಿಂಗ್ ಪ್ರಕರಣದಲ್ಲಿ, ಭಾರತ ತಂಡದ ನಾಯಕರಾಗಿದ್ದ ಮೊಹಮ್ಮದ್ ಅಜರುದ್ದೀನ್, ಮನೋಜ್ ಪ್ರಭಾಕರ್, ಅಜಯ್ ಜಡೇಜ, ದಕ್ಷಿಣ ಆಫ್ರಿಕಾದ ಹ್ಯಾನ್ಸಿ ಕ್ರೊನಿಯೆ ಅವರೆಲ್ಲರೂ ಕಳಂಕ ಮೆತ್ತಿಕೊಂಡಿದ್ದರು. ಯಾವುದೋ ದೇಶದಲ್ಲಿ ಕುಳಿತು ಫೋನ್‌ ಮೂಲಕ ಕ್ರಿಕೆಟ್‌ ಅಭಿಮಾನಿಗಳಿಂದ ಬಾಜಿ ಕಟ್ಟಿಸುವ ಮಾಫಿಯಾ ಕಿಂಗ್‌ಪಿನ್‌ಗಳು, ಇನ್ನೊಂದು ಹಾದಿಯಿಂದ ತಮಗೆ ಲಾಭ ತರುವಂತಹ ಫಲಿತಾಂಶಕ್ಕಾಗಿ ಕ್ರಿಕೆಟ್ ಆಟಗಾರರನ್ನು ಬುಕ್ಕಿಗಳ ಮೂಲಕ ಬುಟ್ಟಿಗೆ ಹಾಕಿಕೊಳ್ಳುವ ತಂತ್ರ ಅನುಸರಿಸಿದ್ದರು. ಆಮಿಷಗಳಿಗೆ ತಾರಾವರ್ಚಸ್ಸಿನ ಆಟಗಾರರು ಬಲಿಯಾಗಿದ್ದರು.

ಆನಂತರವೂ ಈ ಪಿಡುಗು ಬೇರೆ ಬೇರೆ ರೂಪ ಪಡೆದು ಅಟ್ಟಹಾಸ ಮೆರೆಯುತ್ತಿದೆ. ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಹಣ, ಆಸ್ತಿಪಾಸ್ತಿ ಕಳೆದುಕೊಂಡು ಬೀದಿಪಾಲಾದವರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಟಿ20 ಮಾದರಿ ಜನಪ್ರಿಯವಾದ ಮೇಲಂತೂ ಬಾಜಿ ಲೋಕವು ತನ್ನ ಕಬಂಧಬಾಹುಗಳನ್ನು ಮತ್ತಷ್ಟು ವಿಸ್ತರಿಸಿದೆ. 2013ರಲ್ಲಿ ಐಪಿಎಲ್‌ನಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಆಗಿನ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಸಿಕ್ಕಿಬಿದ್ದಿದ್ದರು. ಅವರು ಅಧಿಕಾರಿಯಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಇದೇ ಹಗರಣದಲ್ಲಿ ಸಿಕ್ಕಿಬಿದ್ದ ಆಟಗಾರರಾದ ಎಸ್‌. ಶ್ರೀಶಾಂತ್, ಅಜಿತ್ ಚಾಂಡೆಲಾ ಮತ್ತು ಅಂಕಿತ್ ಚವ್ಹಾಣ್ ಪ್ರತಿನಿಧಿಸುತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡಗಳು ಎರಡು ವರ್ಷ ನಿಷೇಧಕ್ಕೊಳಗಾದವು. ಆ ಸಂದರ್ಭದಲ್ಲಿಯೇ ಸುಪ್ರೀಂ ಕೋರ್ಟ್ ಲೋಧಾ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ನೀಡಿರುವ ನಿಯಮಗಳಲ್ಲಿ ಬೆಟ್ಟಿಂಗ್ ಕಾನೂನುಬದ್ಧಮಾಡುವುದು ಕೂಡ ಪ್ರಮುಖವಾಗಿದೆ.

ಡಿಜಿಟಲ್ ಸ್ಪರ್ಶ: ಭಾರತದ ಉದ್ದಗಲಕ್ಕೂ ಕ್ರಿಕೆಟ್‌ ಅನ್ನು ಆರಾಧಿಸುವ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಪಂದ್ಯಗಳ ಮೇಲೆ, ತಮ್ಮ ನೆಚ್ಚಿನ ಆಟಗಾರರ ಮೇಲೆ ಬಾಜಿ ಕಟ್ಟುವ ಲಕ್ಷಾಂತರ ಜನರೂ ಇದ್ದಾರೆ. ಈಗಂತೂ ಬೆಟ್ಟಿಂಗ್ ದಂಧೆ ವಿಕೇಂದ್ರೀಕರಣಗೊಂಡಿದೆ. ಡಿಜಿಟಲ್ ಯುಗದಲ್ಲಿ ಎಲ್ಲರ ಕಿಸೆಯಲ್ಲಿರುವ ಮೊಬೈಲ್ ಫೋನ್‌ ಬಾಜಿ ಲೋಕದ ಹೆಬ್ಬಾಗಿಲುಗಳಾಗಿವೆ.

ಸದ್ಯ ಮನರಂಜನೆಗಾಗಿ ಎಂದು ಹೇಳಿಕೊಳ್ಳುತ್ತಿರುವ ಕೆಲವು ಆನ್‌ಲೈನ್‌ ಗೇಮಿಂಗ್‌ ತಾಣಗಳೂ ಪರೋಕ್ಷವಾಗಿ ಬೆಟ್ಟಿಂಗ್‌ಗೆ ಕುಮ್ಮಕ್ಕು ಕೊಡುತ್ತಿವೆ ಎಂದು ಸಂಘಟನೆಯೊಂದು ಕೋರ್ಟ್‌ನಲ್ಲಿ ದಾವೆ ಹೂಡಿದೆ. ಕೊರೊನಾ ಸಮಯದಲ್ಲಿ ಶಾಲೆ ತರಗತಿಗಳು, ಕಚೇರಿ ಕೆಲಸಗಳು, ಸಂವಹನ ಮತ್ತು ಮನರಂಜನೆಗಾಗಿ ಬಹುಪಾಲು ಜನರು ಇಂಟರ್‌ನೆಟ್ ತಾಣಗಳನ್ನೇ ಆಶ್ರಯಿಸಿದ್ದಾರೆ. ಇದರಿಂದಾಗಿ ಶಾಲಾ ವಿದ್ಯಾರ್ಥಿಗಳಿಂದ ಹಿರಿಯ ನಾಗರಿಕರವರೆಗೂ ಬೆಟ್ಟಿಂಗ್ ಮಾರುಕಟ್ಟೆ ವಿಸ್ತರಿಸುವ ಅವಕಾಶ ಸೃಷ್ಟಿಯಾಗಿದೆ. ಇದರಿಂದಾಗಬಹುದಾದ ಅನಾಹುತ ತಡೆಗೆ ಕಾನೂನಿನ ಕಟ್ಟುನಿಟ್ಟಿನ ಚೌಕಟ್ಟು ಬೇಕು ಎಂಬುದು ಹಲವರ ಒತ್ತಾಯವಾಗಿದೆ.

‘ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳನ್ನು ಗಂಭೀರ ಅಪರಾಧಗಳೆಂದು ಪರಿಗಣಿಸಬೇಕು. ಅವುಗಳನ್ನು ಕಾನೂನಿನಡಿಯಲ್ಲಿ ತರಬೇಕು. ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಕಾನೂನು ತಜ್ಞರು ಹಲವು ವರ್ಷಗಳಿಂದ ಹೇಳುತ್ತಿದ್ದಾರೆ. ಆದರೆ, ಈ ವಿಷಯದಲ್ಲಿ ಭಾರತದಲ್ಲಿ ಪೊಲೀಸರ ಕೈ ಕಟ್ಟಿಹಾಕಲಾಗಿದೆ’ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಭ್ರಷ್ಟಾಚಾರ ತಡೆ ಘಟಕದ ಸಂಯೋಜಕ ಸ್ಟೀವ್ ರಿಚರ್ಡ್ಸನ್ ಒಂದು ವರ್ಷದ ಹಿಂದೆ ಹೇಳಿದ್ದರು. ಕ್ರಿಕೆಟ್‌ ಕ್ಷೇತ್ರಕ್ಕೆ ದೊಡ್ಡಣ್ಣನಾಗಿರುವ ಬಿಸಿಸಿಐ, ಈಗಲಾದರೂ ಎಚ್ಚೆತ್ತುಕೊಂಡರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವ ಹೆಚ್ಚಿಸಿಕೊಳ್ಳಬಹುದು ಎಂಬುದು ಕ್ರಿಕೆಟ್‌ ಪ್ರೇಮಿಗಳ ನಿರೀಕ್ಷೆಯಾಗಿದೆ.

ಬೆಟ್ಟಿಂಗ್: ಜಗತ್ತಿನ ಹಲವು ದೇಶಗಳಲ್ಲಿ ದೊಡ್ಡ ಉದ್ಯಮ
ಕ್ರೀಡೆಗಳಲ್ಲಿ ಬೆಟ್ಟಿಂಗ್‌ ನಡೆಸಲು ಜಗತ್ತಿನ ಹಲವು ರಾಷ್ಟ್ರಗಳು ಅವಕಾಶ ಮಾಡಿಕೊಟ್ಟಿವೆ. ಬೆಟ್ಟಿಂಗ್ ಒಂದು ದೊಡ್ಡ ಉದ್ಯಮವಾಗಿ ಬೆಳೆದಿದ್ದು, ಸಾಕಷ್ಟು ಉದ್ಯೋಗ ಸೃಷ್ಟಿಸಿವೆ. ಕೆಲವು ರಾಷ್ಟ್ರಗಳಲ್ಲಿ ಎಲ್ಲಾ ಕ್ರೀಡೆಗಳನ್ನೂ ಬೆಟ್ಟಿಂಗ್‌ನ ವ್ಯಾಪ್ತಿಗೆ ತರಲಾಗಿದೆ. ಇನ್ನೂ ಕೆಲವು ರಾಷ್ಟ್ರಗಳು ಒಂದೆರಡು ಕ್ರೀಡೆಗಳಲ್ಲಿ ಮಾತ್ರ ಬೆಟ್ಟಿಂಗ್‌ಗೆ ಅವಕಾಶ ನೀಡಿವೆ.

ಕಾನೂನು ರಚನೆಯ ಪರವಾಗಿದ್ದ ಶೇಖಾವತ್
ಬಿಸಿಸಿಐ ಎಸಿಯುನ ನಿಕಟಪೂರ್ವ ಮುಖ್ಯಸ್ಥ ಅಜಿತ್ ಸಿಂಗ್ ಶೇಖಾವತ್ ಅವರು ಬೆಟ್ಟಿಂಗ್ ಅನ್ನು ಕಾನೂನು ಬದ್ಧಗೊಳಿಸುವುದರ ಪರವಾಗಿದ್ದರು. ಮ್ಯಾಚ್‌ ಫಿಕ್ಸಿಂಗ್ ನಿಯಂತ್ರಣ ಕಾಯ್ದೆ ರಚಿಸಬೇಕು ಎಂದು ಹಲವು ಬಾರಿ ಒತ್ತಾಯಿಸಿದ್ದರು. ಆದರೆ, ಅವರ ಬೇಡಿಕೆ ಈಡೇರಲಿಲ್ಲ.

‘ಈ ಪಿಡುಗನ್ನು ನಿಯಂತ್ರಿಸುವುದು ಅಸಾಧ್ಯವೇನಲ್ಲ. ಅದಕ್ಕಾಗಿ ಒಂದು ವಿಶೇಷ ಕಾನೂನಿನ ಅಗತ್ಯವಿದೆ. ಸ್ಪಷ್ಟವಾದ ನಿಯಮ, ನಿರ್ದೇಶನವಿದ್ದರೆ ಪೊಲೀಸರ ಕಾರ್ಯನಿರ್ವಹಣೆಯೂ ಉನ್ನತ ಮಟ್ಟಕ್ಕೇರುತ್ತದೆ. ಆದ್ದರಿಂದ ಈ ಅವ್ಯವಹಾರಗಳಿಗೆ ಕಡಿವಾಣ ಹಾಕಬಹುದು’ ಎಂದು ಶೇಖಾವತ್ ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು. ಬಿಸಿಸಿಐ ಮತ್ತು ಐಸಿಸಿಯಲ್ಲಿ ಭ್ರಷ್ಟಾಚಾರ ತಡೆ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಸಿಕ್ಕಿಬಿದ್ದ ಆಟಗಾರರ ಬಂಧನ ಮತ್ತು ತನಿಖೆಗಳು ಪೊಲೀಸ್ ವ್ಯಾಪ್ತಿಗೆ ಬರುತ್ತವೆ. ಆದರೆ, ಶಿಕ್ಷೆ ನೀಡುವ ಪ್ರತ್ಯೇಕವಾದ ಕಾನೂನು ಇಲ್ಲಿಲ್ಲ. ಈ ಲೋಪವನ್ನೇ ಬಳಸಿಕೊಂಡು ಆರೋಪಿಗಳು ಪಾರಾಗುತ್ತಾರೆ ಎಂದು ತಜ್ಞರು ಹೇಳುತ್ತಾರೆ.

ರಾಜ್ಯ ಲೀಗ್‌ಗಳಿಗೂ ಕಳಂಕ
ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪಿಡುಗುಗಳು ರಾಷ್ಟ್ರ– ಅಂತರರಾಷ್ಟ್ರೀಯ ಮಟ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಐಪಿಎಲ್ ಪ್ರಭಾವದಿಂದ ರಾಜ್ಯಮಟ್ಟದಲ್ಲಿ ಆರಂಭಗೊಂಡ ಫ್ರ್ಯಾಂಚೈಸಿ ಲೀಗ್‌ಗಳಲ್ಲಿಯೂ ಫಿಕ್ಸಿಂಗ್ ಸದ್ದು ಮಾಡಿತ್ತು.

ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಮತ್ತು ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‌ಪಿಎಲ್) ನಲ್ಲಿ ನಡೆದ ಹಗರಣಗಳು 2019ರಲ್ಲಿ ಭಾರಿ ಸದ್ದು ಮಾಡಿದ್ದವು. ರಾಜ್ಯದ ಯುವ ಆಟಗಾರರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯೆಂದು ಬಿಂಬಿತವಾಗಿದ್ದ ಈ ಟೂರ್ನಿಗಳು ಕಳಂಕ ಮೆತ್ತಿಕೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT