ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ- ಅಗಲ: ರಸ್ತೆ ಅಪಘಾತದಲ್ಲಿ ಸಾವು– ಭಾರತದಲ್ಲಿಯೇ ಅತಿ ಹೆಚ್ಚು

Last Updated 1 ಜನವರಿ 2023, 19:45 IST
ಅಕ್ಷರ ಗಾತ್ರ

ದೇಶದಲ್ಲಿ ರಸ್ತೆ ಅಪಘಾತಗಳು ಮತ್ತು ರಸ್ತೆ ಅಪಘಾತಗಳಲ್ಲಿ ಮೃತಪಡುವವರ ಸಂಖ್ಯೆ ಪ್ರತಿ ವರ್ಷ ಏರಿಕೆಯಾಗುತ್ತಲೇ ಇದೆ. ವಿಶ್ವದ ಬೇರೆಲ್ಲಾ ದೇಶಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚು ಇದ್ದರೂ, ಅಪಘಾತಗಳಲ್ಲಿ ಮೃತಪಡುವವರ ಸಂಖ್ಯೆ ಕಡಿಮೆ ಇದೆ. ವಿಶ್ವದಲ್ಲಿ ಅತಿಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಆದರೆ, ರಸ್ತೆ ಅಪಘಾತಗಳಲ್ಲಿ ಹೆಚ್ಚು ಜನರು ಮೃತಪಡುವ ದೇಶಗಳ ಪಟ್ಟಿಯಲ್ಲಿ ಭಾರತ ಮೊದಲ ಸಾಲಿನಲ್ಲಿದೆ.

ಭಾರತದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳಲ್ಲಿ ಮೃತಪಡುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ರಸ್ತೆ ಅಪಘಾತಗಳನ್ನು ತಡೆಗಟ್ಟಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಸಚಿವಾಲಯವು ಈಚೆಗೆ ಬಿಡುಗಡೆ ಮಾಡಿರುವ ‘ಭಾರತದಲ್ಲಿ ರಸ್ತೆ ಅಪಘಾತಗಳು –2021’ ವರದಿಯಲ್ಲಿ ಇಂತಹ ಕ್ರಮಗಳನ್ನು ಉಲ್ಲೇಖಿಸಿದೆ. ಅಪಘಾತ ತಡೆ ಕ್ರಮಗಳ ಹೊರತಾಗಿಯೂ ರಸ್ತೆ ಅಪಘಾತಗಳ ಸಂಖ್ಯೆ ಏರಿಕೆಯಾಗಿದೆ ಎಂಬುದನ್ನು ವರದಿಯಲ್ಲಿ ಗುರುತಿಸಲಾಗಿದೆ.

ಅಪಘಾತಗಳನ್ನು ತಡೆಯಲು ಅತ್ಯುತ್ತಮ ಗುಣಮಟ್ಟದ ಹೆದ್ದಾರಿ ಮತ್ತು ರಸ್ತೆಗಳನ್ನು ನಿರ್ಮಿಸಲಾಗಿದೆ. ಅತಿವೇಗಕ್ಕೆ ಕಡಿವಾಣ ಹಾಕಲು ಸ್ಪೀಡ್ ಕ್ಯಾಮೆರಾಗಳನ್ನು ಅಳವಡಿಸಿ, ದಂಡ ವಿಧಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಅಡ್ಡಾದಿಡ್ಡಿ ಮತ್ತು ಅಪಾಯಕಾರಿ ಚಾಲನೆಯನ್ನು ಗುರುತಿಸಿ, ದಂಡ ವಿಧಿಸುವ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ. ಇಂತಹ ಕ್ರಮಗಳ ಹೊರತಾಗಿಯೂ ಅಪಘಾತಗಳ ಸಂಖ್ಯೆ ಏರಿಕೆಯಾಗಿದೆ. 2020ರಲ್ಲಿ ದೇಶದಾದ್ಯಂತ ಒಟ್ಟು 3.66 ಲಕ್ಷ ಅಪಘಾತಗಳು ಸಂಭವಿಸಿವೆ. ಆದರೆ, 2021ರಲ್ಲಿ ಅಪಘಾತಗಳ ಸಂಖ್ಯೆ 4.32 ಲಕ್ಷಕ್ಕೆ ಏರಿಕೆಯಾಗಿದೆ. ಒಂದು ವರ್ಷದ ಅವಧಿಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಶೇ 12ರಷ್ಟು ಏರಿಕೆಯಾಗಿದೆ. ರಸ್ತೆ ಅಪಘಾತ ತಡೆಗೆ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳು ಪರಿಣಾಮಕಾರಿಯಲ್ಲ ಎಂಬುದನ್ನು ಈ ದತ್ತಾಂಶಗಳು ಸೂಚಿಸುತ್ತವೆ.

ಅಪಘಾತದ ಸಂದರ್ಭದಲ್ಲಿ ಮೃತಪಡುವವರ ಸಂಖ್ಯೆಯನ್ನು ಕಡಿಮೆ ಮಾಡಲೂ ಸಚಿವಾಲಯವು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಕಾರುಗಳಲ್ಲಿ ಚಾಲಕ ಮತ್ತು ಮುಂಬದಿಯ ಪ್ರಯಾಣಿಕರ ಸೀಟ್‌ಗಳಿಗೆ ಏರ್‌ಬ್ಯಾಗ್‌ ಅನ್ನು ಕಡ್ಡಾಯ ಮಾಡಲಾಗಿದೆ. ಸೀಟ್‌ಬೆಲ್ಟ್‌ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ದ್ವಿಚಕ್ರ ವಾಹನಗಳ ಇಬ್ಬರು ಸವಾರರೂ ಹೆಲ್ಮೆಟ್‌ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಹೀಗಿದ್ದೂ, ಅಪಘಾತಗಳಲ್ಲಿ ಸಾವಿನ ಸಂಖ್ಯೆ ನಿಯಂತ್ರಣಕ್ಕೆ ಬಂದಿಲ್ಲ. ಅಪಘಾತಗಳನ್ನು ತಡೆಯಲು ಮತ್ತು ಅಪಘಾತ ಸಂಭವಿಸಿದಾಗ ಸಾವು ಸಂಭವಿಸುವುದನ್ನು ತಡೆಯಲು ಸರ್ಕಾರವು ತೆಗೆದುಕೊಂಡ ಕ್ರಮಗಳು ಸ್ವಲ್ಪವೂ ಪರಿಣಾಮ ಬೀರಿಲ್ಲ ಎಂಬುದನ್ನು ಈ ದತ್ತಾಂಶಗಳು ಸೂಚಿಸುತ್ತವೆ. ಸಾವುಗಳ ಸಂಖ್ಯೆ ಇಳಿಕೆಯಾಗುವುದರ ಬದಲಿಗೆ, ಅವುಗಳ ಸಂಖ್ಯೆ ಏರಿಕೆಯಾಗಿರುವುದೇ ಇದಕ್ಕೆ ಸ್ಪಷ್ಟ ನಿದರ್ಶನ.

ದೇಶದ ಜನರ ಚಾಲನಾ ಸ್ವರೂಪ ಮತ್ತು ಹವ್ಯಾಸದಲ್ಲಿ ಬದಲಾವಣೆ ಆಗದೇ ಇರುವುದೇ ಅಪಘಾತಗಳು ಮತ್ತು ಸಾವಿನ ಸಂಖ್ಯೆ ಏರಿಕೆಯಾಗಲು ಪ್ರಮುಖ ಕಾರಣ ಎಂಬುದರತ್ತ ಈ ವರದಿ ಬೆಳಕು ಚೆಲ್ಲಿದೆ. 2021ರಲ್ಲಿ ದೇಶದಲ್ಲಿ ಸಂಭವಿಸಿದ ಒಟ್ಟು ಅಪಘಾತಗಳಲ್ಲಿ ಅತಿವೇಗದ ಕಾರಣದಿಂದ ಸಂಭವಿಸಿದ ಅಪಘಾತಗಳ ಪ್ರಮಾಣ ಶೇ 77ರಷ್ಟು. ದೇಶದ ಪ್ರತಿ ಹೆದ್ದಾರಿ ಮತ್ತು ರಸ್ತೆಗೂ ಗರಿಷ್ಠ ವೇಗ ಮಿತಿ ಇದೆ. ಈ ಮಿತಿಯನ್ನೂ ಮೀರಿದ ವೇಗವನ್ನು ಅತಿವೇಗ ಎಂದು ಪರಿಗಣಿಸಲಾಗುತ್ತದೆ. ಈ ರೀತಿಯ ಮಿತಿಮೀರಿದ ವೇಗದಿಂದಲೇ ಬಹುತೇಕ ಅಪಘಾತಗಳು ಸಂಭವಿಸಿವೆ. ಜತೆಗೆ ಲೇನ್‌ ಶಿಸ್ತು ಇಲ್ಲದ ಚಾಲನೆಯಿಂದ ಸಂಭವಿಸಿದ ಅಪಘಾತಗಳ ಪ್ರಮಾಣವೂ ಹೆಚ್ಚು ಇದೆ. ಸಿಗ್ನಲ್‌ ಜಂಪ್‌, ಚಾಲನೆ ವೇಳೆ ಮೊಬೈಲ್‌ ಬಳಕೆಯಂತಹ ಸಂಚಾರ ಮತ್ತು ಚಾಲನಾ ನಿಯಮಗಳ ಉಲ್ಲಂಘನೆಯೂ ಹೆಚ್ಚು ಅಪಘಾತಗಳಿಗೆ ಕಾರಣವಾಗಿವೆ ಎಂಬುದನ್ನು ವರದಿಯಲ್ಲಿ ವಿವರಿಸಲಾಗಿದೆ.

ಒಟ್ಟಾರೆ ಜನರ ಚಾಲನಾ ಹವ್ಯಾಸ ಮತ್ತು ಸ್ವರೂಪ ಬದಲಾಗದೇ ಇದ್ದರೆ, ಅಪಘಾತಗಳು ಹಾಗೂ ಅಪಘಾತಗಳಿಂದ ಸಂಭವಿಸುವ ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗುವುದಿಲ್ಲ ಎಂಬುದನ್ನು ಈ ದತ್ತಾಂಶಗಳು ಮತ್ತು ವಿಶ್ಲೇಷಣೆಗಳು ಸೂಚಿಸುತ್ತವೆ.

ಅಪಘಾತ ಮರಣ ದರ ಏರಿಕೆ

* ಹಿಂದಿನ 21 ವರ್ಷಗಳಲ್ಲಿ ಅಪಘಾತದಿಂದಾಗುವ ಮರಣ ದರವು ಸತತ ಏರಿಕೆಯಾಗಿದೆ

* ಭಾರತದಲ್ಲಿ ಪ್ರತಿ ನೂರು ಅಪಘಾತಗಳಲ್ಲಿ ಮೃತಪಡುವವರ ಪ್ರಮಾಣ ಏರಿಕೆಯಾಗುತ್ತಲೇ ಇದೆ. 2000ರಲ್ಲಿ ಸಂಭವಿಸಿದ ಪ್ರತಿ ನೂರು ಅಪಘಾತಗಳಲ್ಲಿ 20ರಷ್ಟು ಜನರು ಮೃತಪಟ್ಟಿದ್ದರು. ಆನಂತರದ ವರ್ಷಗಳಲ್ಲಿ ರಸ್ತೆ–ಹೆದ್ದಾರಿ ಮೂಲಸೌಕರ್ಯವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ

* 2021ರಲ್ಲಿ ಸಂಭವಿಸಿದ ಪ್ರತಿ ನೂರು ಅಪಘಾತಗಳಲ್ಲಿ 37ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇದು ದೇಶದಲ್ಲಿ ಈವರೆಗಿನ ಗರಿಷ್ಠ ಅಪಘಾತ ಮರಣ ದರವಾಗಿದೆ.

* 2020ರಲ್ಲಿ 91,239 ಜನರು ಅತಿವೇಗದ ಚಾಲನೆಯ ಕಾರಣಕ್ಕೆ ನಡೆದ ಅಪಘಾತದಲ್ಲಿ ಪ್ರಾಣ ಬಿಟ್ಟಿದ್ದಾರೆ. ಅಂದರೆ, ಮೃತಪಟ್ಟ 1.31 ಲಕ್ಷ ಪ್ರಯಾಣಿಕರ ಪೈಕಿ, ಅತಿವೇಗದ ಚಾಲನೆಯ ಕಾರಣದಿಂದ ಸಂಭವಿಸುವ ಅಪಘಾತಗಳಲ್ಲಿ ಶೇ 69ರಷ್ಟು ಜನರು ಜೀವ ತೆತ್ತಿದ್ದಾರೆ. 2021ರಲ್ಲಿ ಇದೇ ಕಾರಣಕ್ಕೆ ಮೃತಪಟ್ಟವರ ಸಂಖ್ಯೆ 1.07 ಲಕ್ಷಕ್ಕೆ ಹೆಚ್ಚಳವಾಗಿದೆ.

* ಮದ್ಯ ಅಥವಾ ಮಾದಕದ್ರವ್ಯದ ಅಮಲಿನಲ್ಲಿ ಚಾಲನೆ ಮಾಡಿದ ಕಾರಣಕ್ಕೆ ನಡೆದ ಅಪಘಾತಗಳಲ್ಲಿ 2021ರಲ್ಲಿ 3,314 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವಿರುದ್ಧ ದಿಕ್ಕಿನಲ್ಲಿ ವಾಹನಗಳನ್ನು ಚಾಲನೆ ಮಾಡಿ ಅಥವಾ ಲೇನ್ ಶಿಸ್ತು ಉಲ್ಲಂಘಿಸಿ ನಡೆದ ಅಪಘಾತದಲ್ಲಿ 8,122 ಜನರು ಅಸುನೀಗಿದ್ದಾರೆ. 2,982 ಜನರ ಸಾವಿಗೆ ಚಾಲನೆ ವೇಳೆ ಮೊಬೈಲ್ ಬಳಕೆಯೂ ಕಾರಣವಾಗಿದೆ ಎಂದು ವರದಿ ತಿಳಿಸಿದೆ.

ವಿಶ್ವದಲ್ಲಿ ಅತಿಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ದೇಶಗಳ ಪಟ್ಟಿಯಲ್ಲಿ ಅಮೆರಿಕವು ಮೊದಲ ಸ್ಥಾನದಲ್ಲಿದೆ. ಭಾರತವು ಎರಡನೇ ಸ್ಥಾನದಲ್ಲಿದೆ. ಆದರೆ, ರಸ್ತೆ ಅಪಘಾತಗಳಲ್ಲಿ ಹೆಚ್ಚು ಜನರು ಮೃತಪಡುವ ದೇಶಗಳ ಪಟ್ಟಿಯಲ್ಲಿ ಭಾರತವು ಮೊದಲನೇ ಸ್ಥಾನದಲ್ಲಿದೆ. ವಿಶ್ವದಲ್ಲಿ ರಸ್ತೆ ಅಪಘಾತಕ್ಕೆ ಹೆಚ್ಚು ಜನರು ಬಲಿಯಾಗುವುದು ಭಾರತದಲ್ಲೇ. ಸರಿಸುಮಾರು ಭಾರತದಷ್ಟೇ ಅಪಘಾತಗಳು ಸಂಭವಿಸುವ ದೇಶಗಳಲ್ಲಿ, ಮೃತಪಡುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕಡಿಮೆ ಇದೆ. 2021ರಲ್ಲಿ ಭಾರತದಲ್ಲಿ 4.32 ಲಕ್ಷ ಅಪಘಾತಗಳು ಸಂಭವಿಸಿದ್ದರೆ, ಒಟ್ಟು 1.53 ಲಕ್ಷ ಜನರು ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ ಅಮೆರಿಕದಲ್ಲಿ 19.27 ಲಕ್ಷ ಅಪಘಾತಗಳಲ್ಲಿ 36,560 ಜನರಷ್ಟೇ ಮೃತಪಟ್ಟಿದ್ದಾರೆ. 2021ರಲ್ಲಿ ಜಪಾನ್‌ನಲ್ಲಿ 4.30 ಲಕ್ಷ ಅಪಘಾತಗಳು ಸಂಭವಿಸಿವೆ. ಆದರೆ, ಇಷ್ಟು ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆ ಕೇವಲ 4,166.

ತಿರುವಿನಲ್ಲಿ ಅಲ್ಲ, ನೇರ ರಸ್ತೆಯಲ್ಲೇ ಹೆಚ್ಚು ಅಪಘಾತ

ಪ್ರಯಾಣದ ವೇಳೆ ದಿಢೀರನೆ ಎದುರಾಗುವ ರಸ್ತೆ ತಿರುವುಗಳು ಅಪಘಾತಕ್ಕೆ ಮುಖ್ಯ ಕಾರಣ ಎಂಬ ಸಾಮಾನ್ಯ ನಂಬಿಕೆಯಿದೆ. ಈ ತಿರುವುಗಳಲ್ಲಿ ‘ಅಪಘಾತ ವಲಯ’ ಎಂಬ ಎಚ್ಚರಿಕೆಯ ಫಲಕವನ್ನೂ ಹಾಕಲಾಗಿರುತ್ತದೆ. ಅಂಕುಡೊಂಕಾದ ರಸ್ತೆಗಳು, ಇಳಿಜಾರು ರಸ್ತೆಗಳು ಅಥವಾ ಗುಂಡಿಗಳಿಂದ ತುಂಬಿರುವ ರಸ್ತೆಗಳಲ್ಲಿ ಹೆಚ್ಚು ಅಪಘಾತ ಸಂಭವಿಸುತ್ತವೆ ಎಂದೂ ಹೇಳಲಾಗುತ್ತದೆ. ಆದರೆ, ಈ ಎಲ್ಲ ವಾದಗಳು ಸಂಪೂರ್ಣ ನಿಜವಲ್ಲ ಎನ್ನುತ್ತದೆ ಈ ವರದಿ. ನೇರವಾಗಿರುವ ರಸ್ತೆಯಲ್ಲೇ ಅತಿಹೆಚ್ಚು ಅಪಘಾತಗಳು ನಡೆದಿರುವುದು ವರದಿಯಲ್ಲಿರುವ ಅಂಕಿಅಂಶಗಳಿಂದ ದೃಡಪಟ್ಟಿದೆ.

2020ರಲ್ಲಿ ದೇಶದಲ್ಲಿ 3.66 ಲಕ್ಷ ಅಪಘಾತಗಳು ನಡೆದಿವೆ. ಈ ಪೈಕಿ ನೇರವಾದ ರಸ್ತೆಗಳಲ್ಲೇ ಶೇ 65ರಷ್ಟು ಅಪಘಾತಗಳು (2.37 ಲಕ್ಷ) ಸಂಭವಿಸಿವೆ. 2021ರಲ್ಲಿ 4.32 ಲಕ್ಷ ಅಪಘಾತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ನೇರವಾದ ರಸ್ತೆಯಲ್ಲಿ ಸಂಭವಿಸಿದ ಅಪಘಾತಗಳು ಶೇ 65ರಷ್ಟು (2.78 ಲಕ್ಷ) ಎಂದು ವರದಿಯಾಗಿವೆ.

ನೇರ ರಸ್ತೆಗಳ ನಂತರ, ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ಆಗುವ ಅಪಘಾತಗಳ ಸಂಖ್ಯೆ ಹೆಚ್ಚು. 2020ರಲ್ಲಿ ಸಂಭವಿಸಿದ ಒಟ್ಟು ಅಪಘಾತಗಳ ಪೈಕಿ ತಿರುವಿನಿಂದ ಕೂಡಿದ ರಸ್ತೆಯಲ್ಲಿ ನಡೆದ ಅಪಘಾತಗಳ ಪಾಲು
ಶೇ 13. ಈ ಪ್ರಮಾಣ 2021ರಲ್ಲಿ ಶೇ 11.5ಕ್ಕೆ ಇಳಿಕೆಯಾಗಿದೆ.

ರಸ್ತೆ ತಿರುವಿನ ಜಾಗದಲ್ಲಿ ಚಾಲಕರು ವಾಹನಗಳ ವೇಗವನ್ನು ತಗ್ಗಿಸಿ, ಜಾಗ್ರತೆಯಿಂದ ಚಾಲನೆ ಮಾಡುತ್ತಾರೆ. ಆದರೆ ನೇರ ರಸ್ತೆಗಳಲ್ಲಿ ಯಾವ ಅಡ್ಡಿಯೂ ಇರುವುದಿಲ್ಲ ಎಂದು ಭಾವಿಸುವ ಚಾಲಕರು ಅತಿವೇಗದಿಂದ ವಾಹನ ಓಡಿಸುತ್ತಾರೆ. ದಿಢೀರನೆ ಅಡ್ಡಿ ಎದುರಾದಾಗ, ವಾಹನಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾಗುತ್ತಾರೆ. ಹೀಗಾಗಿ ನೇರ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT