ಭಾನುವಾರ, ಜೂನ್ 26, 2022
26 °C

ಆಳ–ಅಗಲ: ಯುಎಪಿಎ ಪರಿಷ್ಕರಣೆಗೆ ಕೂಗು

ಹಮೀದ್‌ ಕೆ., ಜಯಸಿಂಹ ಆರ್‌., ಅಮೃತ್ ಕಿರಣ್ ಬಿ.ಎಂ. Updated:

ಅಕ್ಷರ ಗಾತ್ರ : | |

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯು (ಯುಎಪಿಎ) ದುರುಪಯೋಗ ಆಗುತ್ತಿದೆ ಮತ್ತು ಈ ಕಾಯ್ದೆಯನ್ನು ಈಗ ಇರುವ ಸ್ವರೂಪದಲ್ಲಿ ಉಳಿಸಿಕೊಳ್ಳಬಾರದು ಎಂಬ ಕೂಗು ಬಲವಾಗಿಯೇ ಕೇಳಿ ಬಂದಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮದನ್‌ ಲೋಕೂರ್ ಅವರು ಈ ಕಾಯ್ದೆಯ ದುರು‍ಪಯೋಗದ ಬಗ್ಗೆ ಶನಿವಾರ ನಡೆದ ‘ಸೆಡಿಶನ್‌ ಸೆ ಆಜಾದಿ’ ಎಂಬ ಕಾರ್ಯಕ್ರಮದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. 

ಯುಎಪಿಎಯ ದುಷ್ಪರಿಣಾಮಗಳ ಕುರಿತು 2021ರ ಜುಲೈನಲ್ಲಿ ನಡೆದ ವರ್ಚುವಲ್‌ ಸಮಾವೇಶದಲ್ಲಿ ಮಾತನಾಡಿದ್ದ ಅವರು, ಈ ಕಾಯ್ದೆಯ ಅಡಿಯಲ್ಲಿ ಬಂಧಿತರಾದ ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಮತ್ತು ನಾಗರಿಕರ ಕುಟುಂಬದ ಸದಸ್ಯರು ಅನುಭವಿಸುವ ಮಾನಸಿಕ ಹಿಂಸೆಯನ್ನು ನ್ಯಾಯಾಲಯ, ಸರ್ಕಾರ ಮತ್ತು ಸಮಾಜ ಗಣನೆಗೆ ತೆಗೆದುಕೊಳ್ಳಬೇಕು ಎಂದಿದ್ದರು. 

ಯುಎಪಿಎ ದುರುಪಯೋಗ ಆಗಬಹುದು ಎಂಬುದು ಸಾಬೀತಾಗಿದೆ. ಹಾಗಾಗಿ, ಈ ಕಾಯ್ದೆಯನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ನ್ಯಾಯಾಲಯಗಳು ಮಾರ್ಗಸೂಚಿ ಸಿದ್ಧಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ದೀಪಕ್‌ ಗುಪ್ತಾ ಅದೇ ವರ್ಚುವಲ್‌ ಕಾಯಕ್ರಮದಲ್ಲಿ ಪ್ರತಿಪಾದಿಸಿದ್ದಾರೆ. ಯುಎಪಿಎ ಅಡಿ ಬಂಧಿತರಾಗಿ ಜೈಲಿನಲ್ಲಿ ಮೃತಪಟ್ಟ 84 ವರ್ಷದ ಫಾ. ಸ್ಟ್ಯಾನ್‌ ಸ್ವಾಮಿ ಪ್ರಕರಣವನ್ನು ಅವರು ಉಲ್ಲೇಖಿಸಿದ್ದಾರೆ. ‘ನಾವು ಮನುಷ್ಯರೇ’ ಎಂದು ಪ್ರಶ್ನಿಸಿರುವ ಅವರು, ‘ಯುಎಪಿಎ ಈಗ ಇರುವ ಸ್ವರೂಪದಲ್ಲಿ ಮುಂದುವರಿಯುವುದು ಸಾಧ್ಯವಿಲ್ಲ’ ಎಂದಿದ್ದಾರೆ. 

ಈ ಕಾಯ್ದೆ ಅಡಿ ಬಂಧಿತರಾಗಿ ಬಹುಕಾಲ ಜೈಲು ಸೇರಿ ಜೀವನವೇ ಹಾಳಾದವರ ಬಗ್ಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಫ್ತಾಬ್‌ ಆಲಂ ಮಾತನಾಡಿದ್ದಾರೆ. ಈ ಕಾಯ್ದೆಯ ಅಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ತಪ್ಪಿತಸ್ಥರು ಎಂದು ಸಾಬೀತಾಗುವ ಪ್ರಮಾಣ ಅತ್ಯಲ್ಪ ಎಂಬುದರತ್ತ ಅವರು ಬೊಟ್ಟು ಮಾಡಿದ್ದಾರೆ. ಯುಎಪಿಎಯನ್ನು ನ್ಯಾಯಾಂಗದ ವಿಮರ್ಶೆಗೆ ಒಳಪಡಿಸಲು ಸೀಮಿತ ಅವಕಾಶವಷ್ಟೇ ಇದೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಹೇಳಿದ್ದಾರೆ. ‌ಸಾಂವಿಧಾನಿಕ ನ್ಯಾಯಾಲಯಗಳ ಜಾಮೀನು ನೀಡುವ ಅಧಿಕಾರವನ್ನೇ ಈ ಕಾಯ್ದೆ ಕಸಿದುಕೊಂಡಿದ್ದು, ಇದು ಸಂವಿಧಾನಬಾಹಿರ ಎಂದು ಅವರು ಪ್ರತಿಪಾದಿಸಿದ್ದಾರೆ. 

ರಾಜಕೀಯ ವಲಯದಿಂದಲೂ ಈ ಕಾಯ್ದೆಗೆ ವಿರೋಧ ವ್ಯಕ್ತವಾಗಿದೆ. ‘ಯುಎಪಿಎ ರದ್ದುಪಡಿಸಬೇಕು, 2019ರಲ್ಲಿ ತಿದ್ದುಪಡಿ ಕಾಯ್ದೆಯು ಸಂಸತ್ತಿನಲ್ಲಿ ಚರ್ಚೆಯಾದಾಗ ವಿರೋಧಿಸಿದ್ದೆ’ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಇತ್ತೀಚೆಗೆ ಹೇಳಿದ್ದಾರೆ. 

ಈ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೂರು ಅರ್ಜಿಗಳು ದಾಖಲಾಗಿವೆ. ಕಾಯ್ದೆಯ 35 ಮತ್ತು 36ನೇ ಸೆಕ್ಷನ್‌ಗಳನ್ನು ರದ್ದುಪಡಿಸಬೇಕು ಎಂದು ಕೋರಿ ಅಸೋಸಿಯೇಷನ್‌ ಫಾರ್‌ ಪ್ರೊಟೆಕ್ಷನ್‌ ಆಫ್‌ ಸಿವಿಲ್‌ ರೈಟ್ಸ್‌ ಸಂಘಟನೆಯು ಒಂದು ಅರ್ಜಿ ಸಲ್ಲಿಸಿದೆ. ಸಜಲ್‌ ಅವಸ್ಥಿ ಎಂಬವರು ಇನ್ನೊಂದು ಅರ್ಜಿ ಸಲ್ಲಿಸಿದ್ದಾರೆ. ಈ ಎರಡೂ ಅರ್ಜಿಗಳು 2019ರಲ್ಲಿ ಸಲ್ಲಿಕೆಯಾಗಿವೆ. ಈ ಅರ್ಜಿಯ ಆಧಾರದಲ್ಲಿ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಲಾಗಿತ್ತು.

ಕಾಯ್ದೆಯಲ್ಲಿರುವ ವಿವಿಧ ಅವಕಾಶಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಭಾರತೀಯ ನಾಗರಿಕ ಸೇವೆಯ ಹಲವು ನಿವೃತ್ತ ಅಧಿಕಾರಿಗಳು ಒಟ್ಟಾಗಿ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್‌ಗೆ 2021ರ ನವೆಂಬರ್‌ನಲ್ಲಿ ಸಲ್ಲಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠವು ಅರ್ಜಿಯ ವಿಚಾರಣೆ ನಡೆಸಿ, ಕೇಂದ್ರಕ್ಕೆ ನೋಟಿಸ್‌ ನೀಡಿದೆ. ಇದೇ ವಿಷಯದ ಬಗ್ಗೆ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ಒಟ್ಟು ಸೇರಿಸಿ ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿದೆ.

ಕಾನೂನುಬಾಹಿರ ಚಟುವಟಿಕೆ...
‘ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಸಂಘಟನೆಯ ಕಾರ್ಯಚಟುವಟಿಕೆಗಳು ಕಾನೂನುಬಾಹಿರ ಎಂದು ಸರ್ಕಾರವು ಅಭಿಪ್ರಾಯಪಟ್ಟರೆ, ಅಂತಹ ಸಂಘಟನೆಯನ್ನು ‘ಕಾನೂನುಬಾಹಿರ ಸಂಘಟನೆ’ ಎಂದು ಘೋಷಿಸಬಹುದು. ಆ ಅಧಿಸೂಚನೆಯು ರಾಜ್ಯಪತ್ರದಲ್ಲಿ ಪ್ರಕಟವಾಗಬೇಕು’ ಎಂದು ಯುಎಪಿಎ ಕಾಯ್ದೆಯ ಮೂರನೇ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳು ಯಾವುವು ಎಂಬುದನ್ನು ಇದೇ ಕಾಯ್ದೆಯ 10ನೇ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ. ‘ಕಾನೂನುಬಾಹಿರ ಎಂದು ಘೋಷಿಸಲಾದ ಸಂಘಟನೆಯ ಸದಸ್ಯನಾಗಿ ಮುಂದುವರಿಯುವ, ಸಂಘಟನೆಯನ್ನು ಉತ್ತೇಜಿಸುವ ಮತ್ತು ಸಂಘಟನೆಯಿಂದ ಪ್ರೇರಿತನಾಗಿ ಯಾವುದೇ ಕೃತ್ಯ ಎಸಗುವ ವ್ಯಕ್ತಿಯನ್ನು ಶಿಕ್ಷೆಗೆ ಗುರಿ ಮಾಡಬಹುದಾಗಿದೆ. ಪರವಾನಗಿ ಇಲ್ಲದ ಬಂದೂಕು/ಪಿಸ್ತೂಲು, ಮದ್ದುಗುಂಡುಗಳು, ಸ್ಫೋಟಕ ಅಥವಾ ಯಾವುದೇ ಸಲಕರಣೆ ಅಥವಾ ಸಾಮೂಹಿಕ ವಿನಾಶ ಮಾಡಲು ಸಾಧ್ಯವಿರುವಂತಹ ವಸ್ತುಗಳನ್ನು ಹೊಂದಿರುವ ವ್ಯಕ್ತಿಯ ವಿರುದ್ಧ ಈ ಕಾಯ್ದೆಯ ಅಡಿ ಪ್ರಕರಣ ದಾಖಲಿಸಬಹುದು. ಮಾನವ ಜೀವಕ್ಕೆ ಹಾನಿಯಾಗುವಂತಹ ಅಥವಾ ಗಾಯವಾಗುವಂತಹ ಅಥವಾ ಯಾವುದೇ ಸ್ವತ್ತಿಗೆ ಹಾನಿ ಮಾಡುವಂತಹ ಕೃತ್ಯ ಎಸಗಿದ ವ್ಯಕ್ತಿಯ ವಿರುದ್ಧ ಈ ಕಾಯ್ದೆಯ ಅಡಿ ಪ್ರಕರಣ ದಾಖಲಿಸಬಹುದು’ ಎಂದು ಈ ಕಾಯ್ದೆಯ 10ನೇ ಸೆಕ್ಷನ್‌ನ 6ನೇ ಭಾಗದಲ್ಲಿ ವಿವರಿಸಲಾಗಿದೆ.

ಶೇ 55ರಷ್ಟು ಪ್ರಕರಣಗಳು ವಜಾ
ದೇಶದ್ರೋಹ ಕಾನೂನಿನ ನಂತರ ಸರ್ಕಾರವು ಅತಿಹೆಚ್ಚು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕಾನೂನು, ‘ಯುಎಪಿಎ’ ಎಂಬುದು ವಿರೋಧ ಪಕ್ಷಗಳು ಮತ್ತು ಸಾಮಾಜಿಕ ಸಂಘಟನೆಗಳ ಆರೋಪ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಅಸ್ತಿತ್ವಕ್ಕೆ ಬಂದ ನಂತರ ಈ ಕಾಯ್ದೆಯ ದುರ್ಬಳಕೆ ಹೆಚ್ಚಾಗಿದೆ ಎಂಬ ಆರೋಪವೂ ಇದೆ. ಈ ಕಾಯ್ದೆಯಡಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದ ದತ್ತಾಂಶಗಳೂ ಈ ಆರೋಪಕ್ಕೆ ಪುಷ್ಟಿ ನೀಡಿವೆ. 2016ರಿಂದ 2020ರ ಅವಧಿಯಲ್ಲಿ ಈ ಕಾಯ್ದೆ ಅಡಿ ದಾಖಲಾದ ಪ್ರಕರಣಗಳಲ್ಲಿ ಶೇ 55ರಷ್ಟು ತನಿಖೆ, ವಿಚಾರಣೆಯ ಹಂತದಲ್ಲೇ ವಜಾ ಆಗಿವೆ.

2016ರಿಂದ 2020ರ ಅವಧಿಯಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲಿ ಪೊಲೀಸರು ಈ ಕಾಯ್ದೆ ಅಡಿ ಒಟ್ಟು 5,003 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇವುಗಳಲ್ಲಿ 2,479 ಪ್ರಕರಣಗಳನ್ನು ಸಾಕ್ಷ್ಯಗಳ ಕೊರತೆ, ತಪ್ಪಾಗಿ ಪ್ರಕರಣ ದಾಖಲಾಗಿದೆ ಎಂಬ ಕಾರಣಗಳನ್ನು ನೀಡಿ ಪೊಲೀಸರೇ ಕೈಬಿಟ್ಟಿದ್ದಾರೆ. ಒಟ್ಟು ಪ್ರಕರಣಗಳಲ್ಲಿ ಪೊಲೀಸರೇ ಹೀಗೆ ವಜಾ ಮಾಡಿದ ಪ್ರಕರಣಗಳ ಪ್ರಮಾಣ ಶೇ 49.6ರಷ್ಟು. ಅಂದರೆ ಅರ್ಧದಷ್ಟು ಪ್ರಕರಣಗಳು ತನಿಖೆಯ ಹಂತದಲ್ಲೇ ಮುಗಿದುಹೋಗುತ್ತವೆ.

ಈ ಅವಧಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಮತ್ತು ಅದಕ್ಕೂ ಹಿಂದಿನ ವರ್ಷಗಳಿಂದ ಬಾಕಿಯಿದ್ದ ಪ್ರಕರಣಗಳಲ್ಲಿ ನ್ಯಾಯಾಲಯಗಳಲ್ಲಿ ವಜಾ ಆದ ಪ್ರಕರಣಗಳ ಸಂಖ್ಯೆ 271. ಈ ಅವಧಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಹೀಗೆ ವಜಾ ಆದ ಪ್ರಕರಣಗಳ ಪ್ರಮಾಣ ಶೇ 5.4ರಷ್ಟು ಮಾತ್ರ. ಈ ಅವಧಿಯಲ್ಲಿ ದಾಖಲಾದ ಒಟ್ಟು ಪ್ರಕರಣಗಳಲ್ಲಿ ಪೊಲೀಸರೇ ಕೈಬಿಟ್ಟ ಮತ್ತು ನ್ಯಾಯಾಲಯಗಳು ವಜಾ ಮಾಡಿದ ಪ್ರಕರಣಗಳ ಪ್ರಮಾಣ ಶೇ 55ರಷ್ಟು. ಕಾಯ್ದೆಯನ್ನು ಅನ್ವಯ ಮಾಡಲು ಸಾಧ್ಯವೇ ಇಲ್ಲದ ಪ್ರಕರಣಗಳಲ್ಲೂ ಈ ಕಾಯ್ದೆಯನ್ನು ಅನ್ವಯ ಮಾಡಲಾಗುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ. ಇನ್ನು ಈ ಅವಧಿಯಲ್ಲಿ ಈ ಕಾಯ್ದೆಯ ಅಡಿ ಶಿಕ್ಷೆ ಘೋಷಣೆಯಾದ ಪ್ರಕರಣಗಳ ಸಂಖ್ಯೆ 105 ಮಾತ್ರ. ಈ ಅವಧಿಯಲ್ಲಿ ದಾಖಲಾದ ಒಟ್ಟು ಪ್ರಕರಣಗಳಲ್ಲಿ ಶಿಕ್ಷೆಯಾದ ಪ್ರಕರಣಗಳ ಪ್ರಮಾಣ ಶೇ 2ರಷ್ಟು ಮಾತ್ರ.

ಪ್ರಮುಖ ಪ್ರಕರಣಗಳು
ಸಿದ್ದಿಕ್ ಕಪ್ಪನ್: 
2020ರ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶ ಹಾಥರಸ್‌ನಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದ ವರದಿಗಾರಿಕೆಗೆ ತೆರಳುತ್ತಿದ್ದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರನ್ನು ಮಾರ್ಗಮಧ್ಯೆ ಬಂಧಿಸಲಾಗಿತ್ತು. ಶಾಂತಿ ಕದಡುವ ಸಂಚಿನ ಭಾಗವಾಗಿ ಅವರು ಹಾಥರಸ್‌ಗೆ ತೆರಳುತ್ತಿದ್ದಾರೆ ಎಂಬ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪಾಪ್ಯುಲರ್ ಫ್ರಂಟ್ ಸಂಘಟನೆ ಜತೆ ಗುರುತಿಸಿಕೊಂಡಿದ್ದ ಆರೋಪದಲ್ಲಿ ಇತರ ಎಂಟು ಜನರ ಹೆಸರನ್ನೂ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.

ಫವಾದ್ ಶಾ: ಕಾಶ್ಮೀರದ ಪತ್ರಕರ್ತ ಫವಾದ್ ಶಾ ವಿರುದ್ಧ ಇದೇ ಫೆಬ್ರುವರಿಯಲ್ಲಿ ಯುಎಪಿಎ ಅಡಿಯಲ್ಲಿನ ಎರಡು ಸೇರಿದಂತೆ ಒಟ್ಟು ಮೂರು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಒಂದು ಪ್ರಕರಣದಲ್ಲಿ ಜಾಮೀನು ಸಿಗುತ್ತಿದ್ದಂತೆಯೇ, ಮತ್ತೊಂದು ಪ್ರಕರಣದಲ್ಲಿ ಅವರು ಜೈಲು ಸೇರುತ್ತಿದ್ದರು. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಹಾಗೂ ಕ್ರಿಮಿನಲ್ ಉದ್ದೇಶದ ದೇಶವಿರೋಧಿ ಕಂಟೆಂಟ್ ಅನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಎಂಬುದು ಫವಾದ್ ವಿರುದ್ಧ ಇರುವ ಆರೋಪ.  

ಸಲೀಂ ಖಾನ್: 2020ರ ಫೆಬ್ರುವರಿಯಲ್ಲಿ ದೆಹಲಿಯಲ್ಲಿ ಗಲಭೆಗೆ ಸಂಚು ರೂಪಿಸಿದ ಆರೋಪದ ಮೇಲೆ ಸಲೀಂ ಖಾನ್ ಸೇರಿದಂತೆ ಹಲವರ ವಿರುದ್ಧ ಯುಎಪಿಎ ಪ್ರಕರಣ ದಾಖಲಾಗಿತ್ತು. ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)  ಹಾಗೂ ರಾಷ್ಟ್ರೀಯ ಪೌರತ್ವದ ನೋಂದಣಿ (ಎನ್‌ಆರ್‌ಸಿ) ವಿರೋಧಿ ಆಂದೋಲನದ ವೇಳೆ ಈ ಗಲಭೆ ನಡೆದಿತ್ತು. ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ನಲ್ಲಿ ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಸೇರಿ ಹಲವರ ಹೆಸರುಗಳಿದ್ದವು. ಈ ಆರೋಪಿಗಳು ಚಳವಳಿಗೆ ಕರೆ ನೀಡುವ ಮೂಲಕ ಗಲಭೆ ಸೃಷ್ಟಿಯಾಗಲು ಹಾಗೂ ಕೋಮು ಭಾವನೆ ಕೆರಳಿಸಲು ಉದ್ದೇಶಿಸಿದ್ದರು ಎಂದು ಎಫ್ಐಆರ್‌ನಲ್ಲಿ ಆರೋಪಿಸಲಾಗಿತ್ತು. ನಾವು ಹೋರಾಡಿದ್ದು ದಬ್ಬಾಳಿಕೆಯ ಕಾಯ್ದೆಯ ವಿರುದ್ಧ ಮಾತ್ರ ಎಂದು ಉಮರ್ ಖಾಲಿದ್ ಸೋಮವಾರವಷ್ಟೇ ದೆಹಲಿ ಹೈಕೋರ್ಟ್‌ನಲ್ಲಿ ವಾದಿಸಿದ್ದಾರೆ.

ಅಖಿಲ್ ಗೊಗೊಯಿ: ಅಸ್ಸಾಂನಲ್ಲಿ ಸಿಎಎ ವಿರೋಧಿ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಶಾಸಕ ಅಖಿಲ್ ಗೊಗೊಯಿ ವಿರುದ್ಧ ಪೊಲೀಸರು ಯುಎಪಿಎ ಅಡಿ ಪ್ರಕರಣ ದಾಖಲಿಸಿದ್ದರು. ಆದರೆ ಎನ್‌ಐಎ ವಿಶೇಷ ಕೋರ್ಟ್, ಇವರ ಮೇಲಿನ ಈ ಆರೋಪವನ್ನು ಕೈಬಿಟ್ಟಿತ್ತು.

ಕೊಯಮತ್ತೂರು ಪ್ರಕರಣ: ಮತಾಂತರಕ್ಕೆ ಒಪ್ಪದ ಕುಮಾರೇಶನ್ ಎಂಬ ವ್ಯಕ್ತಿಯ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಐದು ಜನರನ್ನು ಇದೇ ಮಾರ್ಚ್‌ನಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಂಧಿಸಿ ಯುಎಪಿಎ ಅಡಿ ಪ್ರಕರಣ ದಾಖಲು ಮಾಡಲಾಗಿತ್ತು.  

ಕುಮಾರೇಶನ್ ಅವರ ಮಗ ಮುಸ್ಲಿಂ ಹುಡುಗಿಯನ್ನು ವಿವಾಹವಾಗಿದ್ದರು. ಆದರೆ ಹುಡುಗಿಯ ತಾಯಿ ನೂರ್ ನಿಶಾ ಅವರು ಅಳಿಯನನ್ನು ಇಸ್ಲಾಂಗೆ ಮತಾಂತರಿಸಲು ಒತ್ತಾಯಿಸಿದ್ದರು. ಆದರೆ ಇದನ್ನು ಕುಮಾರೇಶನ್ ವಿರೋಧಿಸಿದ್ದರು. ಹೀಗಾಗಿ ಕುಮಾರೇಶನ್ ಅವರ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಿದ ಮಾಹಿತಿಯನ್ನು ಕೊಯಮತ್ತೂರು ಪೊಲೀಸರು ಕೇಂದ್ರ ಗೃಹಸಚಿವಾಲಯಕ್ಕೆ ಕೆಲ ದಿನಗಳ ಹಿಂದೆ ಸಲ್ಲಿಸಿದ್ದಾರೆ.

***********

ಆಧಾರ: ಎನ್‌ಸಿಆರ್‌ಬಿಯ ಭಾರತದಲ್ಲಿ ಅಪರಾಧ ವರದಿ 2016, 2017, 2018, 2019, 2020, ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ, ಪಿಟಿಐ, ಸುಪ್ರೀಂ ಕೋರ್ಟ್‌ ಅಬ್ಸರ್ವರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು