ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಭಾರತೀಯ ವಿದ್ಯಾರ್ಥಿಗಳೇ ಏಕೆ ಗುರಿ?

Published 28 ಮಾರ್ಚ್ 2024, 22:23 IST
Last Updated 28 ಮಾರ್ಚ್ 2024, 22:23 IST
ಅಕ್ಷರ ಗಾತ್ರ

‘ಅಮೆರಿಕದಲ್ಲಿ ಕಳೆದ ವರ್ಷದಿಂದ ದ್ವೇಷಾಪರಾಧ ಪ್ರಕರಣಗಳು ಏರಿಕೆಯಾಗಿವೆ. ಸಮುದಾಯಗಳ ನಡುವಣ ದ್ವೇಷಾಪರಾಧಗಳ ಸಂಖ್ಯೆಯೂ ಏರಿಕೆಯಾಗಿದೆ. ಆದರೆ, ಈ ದ್ವೇಷಕ್ಕೆ ಬಲಿಯಾಗುತ್ತಿರುವುದು ಮಾತ್ರ ವಿದ್ಯಾರ್ಥಿಗಳು’ ಎನ್ನುತ್ತಾರೆ 28 ವರ್ಷದ ಭಾರತದ ಅನುಕ್ತಾ ದತ್ತಾ. ಇವರು ಕ್ಯಾಲಿರ್ಫೋನಿಯಾ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾರೆ.

‘ಅಮೆರಿಕದಲ್ಲಿ ಹೆಚ್ಚುತ್ತಿರುವ ಭಾರತದ ವಿದ್ಯಾರ್ಥಿಗಳ ಮೇಲಿನ ಅಪರಾಧ ಪ್ರಕರಣಗಳನ್ನು ನೋಡಿದಾಗ, ನಾನು ಇಲ್ಲಿಗೆ ಪರಕೀಯಳು ಎನ್ನುವ ಭಾವನೆ ಮೂಡುತ್ತದೆ. ಕ್ಯಾಲಿರ್ಫೋನಿಯಾವು ಹೆಚ್ಚು ಪ್ರಗತಿಪರ ರಾಜ್ಯ. ಆದರೂ ರಾಜ್ಯದಲ್ಲಿ ಎಲ್ಲೇ ಹೋದರೂ ನಮ್ಮನ್ನು ಜನಾಂಗೀಯ ತಾರತಮ್ಯದಿಂದಲೇ  ನೋಡುತ್ತಾರೆ. ನಾನು ಸ್ನೇಹಿತರೊಂದಿಗೇ ಇರುತ್ತೇನೆ. ಆದರೆ, ಇಂಥ ಘಟನೆಗಳು ನಡೆದಾಗ, ಒಬ್ಬೊಬ್ಬರೇ ಇದ್ದಾಗ ಎಷ್ಟು ಭಯವಾಗುತ್ತದೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಇದೇ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಭಾರತದ ಕಾಜರಿ ಸಹಾ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದ ಅಧಿವೇಶನದಲ್ಲಿ ಸಂಸದೆ ಮೌಸಂ ನೂರ್‌ ಎಂಬವರು ಕೇಂದ್ರ ಸರ್ಕಾರದಿಂದ ಮಾಹಿತಿಯೊಂದನ್ನು ಕೇಳಿದ್ದರು. ವಿದೇಶಗಳಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಬಗೆಗಿನ ಪ್ರಶ್ನೆ ಅದಾಗಿತ್ತು. 2018ರಿಂದ ಈಚೆಗೆ ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಷ್ಟು ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಮತ್ತು ಯಾವ ಯಾವ ದೇಶಗಳಲ್ಲಿ ಎಷ್ಟು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಕೇಂದ್ರವನ್ನು ಕೇಳಿದ್ದರು. ಇದಕ್ಕೆ ಉತ್ತರ ನೀಡಿದ್ದ ಕೇಂದ್ರದ ವಿದೇಶಾಂಗ ಸಚಿವಾಲಯವು, ‘2018–2023ರ ಅವಧಿಯಲ್ಲಿ ನೈಸರ್ಗಿಕ ವಿಕೋಪಗಳಲ್ಲಿ, ಅಪಘಾತದಲ್ಲಿ ಹಾಗೂ ವೈದ್ಯಕೀಯ ಕಾರಣಗಳಿಗಾಗಿ ವಿದೇಶಗಳಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳಲ್ಲಿ 403 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ’ ಎಂದು ಉತ್ತರಿಸಿತ್ತು.

ಇದೇ ಅವಧಿಯಲ್ಲಿ ಅಮೆರಿಕ ಒಂದರಲ್ಲಿಯೇ 36 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎನ್ನುವುದು ಕೇಂದ್ರ ಸರ್ಕಾರ ನೀಡಿದ ಉತ್ತರದಿಂದಲೇ ತಿಳಿದುಬಂದಿದೆ. ಐದು ವರ್ಷಗಳಲ್ಲಿ 36 ವಿದ್ಯಾರ್ಥಿಗಳು ಸತ್ತಿದ್ದರೆ, 2024ರ ಮೊದಲ ಮೂರು ತಿಂಗಳಲ್ಲೇ 9 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಇದು ಅಮೆರಿಕದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳಲ್ಲಿ, ಅವರ ಪೋಷಕರಲ್ಲಿ ಆತಂಕವನ್ನು ಹೆಚ್ಚಿಸಿದೆ. ಭಾರತೀಯ ವಿದ್ಯಾರ್ಥಿಗಳು ಹಾಗೂ ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ವಿದ್ಯಾರ್ಥಿಗಳ ಸಾವಿನ ಪ್ರಕರಣಗಳು ಅಮೆರಿಕದಲ್ಲಿ ಅಧಿಕವಾಗ ತೊಡಗಿರುವುದರನ್ನು ಈ ಅಂಕಿ–ಅಂಶವು ತೋರಿಸುತ್ತದೆ.

ವಿಶ್ವವಿದ್ಯಾಲಯಗಳ ಸಮೀಪ, ಹತ್ತಿರ ಅರಣ್ಯ ಪ್ರದೇಶದಲ್ಲಿ, ಮನೆಗಳ ಸಮೀಪವೇ ಸಾವು ಸಂಭವಿಸುತ್ತಿವೆ. ಕೆಲವರನ್ನು ಭೀಕರವಾಗಿ ಸಾಯಿಸಲಾಗಿದೆ. ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ತೀವ್ರ ಚಳಿಯ ಕಾರಣಕ್ಕೆ ವಿದ್ಯಾರ್ಥಿಯೋರ್ವ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ... ಹೀಗೆ ನಾನಾ ರೀತಿಯಲ್ಲಿ ಸಾವು ಸಂಭವಿಸಿದೆ. ಆದರೆ, ಈ ಯಾವ ಸಾವುಗಳಿಗೂ ನಿಖರ ಕಾರಣ ತಿಳಿದುಬಂದಿಲ್ಲ, ತನಿಖೆ ಮುಂದುವರಿಯುತ್ತಲೇ ಇದೆ ಎನ್ನುತ್ತಾರೆ ಅಲ್ಲಿನ ಪೊಲೀಸರು.

ಅಕುಲ್‌ ಬಿ. ಧವನ್‌ ಎನ್ನುವ ವಿದ್ಯಾರ್ಥಿಯು ವಿಶ್ವವಿದ್ಯಾಲಯದ ಸಮೀಪವೇ ಮೃತಪಟ್ಟಿದ್ದ. ಆತ ಕಾಣೆಯಾಗಿದ್ದಾನೆ ಎಂದು ದೂರು ಕೂಡ ದಾಖಲಾಗಿತ್ತು. ಕಾಣೆಯಾದ ಜಾಗದಿಂದ ತುಸುವೇ ದೂರದಲ್ಲಿ ವಿದ್ಯಾರ್ಥಿಯ ಮೃತದೇಹವು ದೂರು ದಾಖಲಾದ ಮಾರನೆ ದಿನ ಪತ್ತೆಯಾಗಿತ್ತು. ವಿಶ್ವವಿದ್ಯಾಲಯದ ಪೊಲೀಸರು ದೂರಿನ ಕುರಿತು ನಿರ್ಲಕ್ಷ್ಯ ಎಸಗಿದ್ದಾರೆ ಎಂದು ಅಕುಲ್‌ ಅವರ ಪೋಷಕರು ಪೊಲೀಸರ ವಿರುದ್ಧವೇ ದೂರು ನೀಡಿದ್ದಾರೆ. ವಿದ್ಯಾರ್ಥಿಗಳ ಸಾವಿನ ಹಲವು ಪ್ರಕರಣಗಳು ದಾಖಲಾಗಿದ್ದರೂ ಯಾವ ಪ್ರಕರಣದಲ್ಲಿಯೂ ಸಾವಿನ ಕಾರಣದ ಕುರಿತು ಯಾವುದೇ ಅಂತಿಮವಾದ ಮಾಹಿತಿ ಪತ್ತೆಯಾಗಿಲ್ಲ. ಯಾವ ತನಿಖೆಯೂ ಪೂರ್ಣಗೊಳ್ಳುತ್ತಿಲ್ಲ.

ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಕಾರ, ಅಮೆರಿಕದಲ್ಲಿ ಓದುತ್ತಿರುವ ವಿದೇಶಿ ವಿದ್ಯಾರ್ಥಿಗಳ ಪೈಕಿ, ಭಾರತೀಯ ವಿದ್ಯಾರ್ಥಿಗಳ ಪ್ರಮಾಣವು ಶೇ 35ರಷ್ಟಿದೆ. ಅಮೆರಿಕದಲ್ಲಿ ಓದಬಯಸುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿದ್ದರೆ, ಇನ್ನೊಂದೆಡೆ ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಾವಿನ ಸಂಖ್ಯೆಯು ಏರಿಕೆಯಾಗುತ್ತಿದೆ. ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲೇ ನೆಲೆಸಿ ತಮ್ಮ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳುತ್ತಾರೆ ಎಂಬ ಭಾವನೆ ಅಮೆರಿಕದ ನಿರುದ್ಯೋಗಿಗಳಲ್ಲಿ, ನಿರ್ಗತಿಕರಲ್ಲಿ ಹೆಚ್ಚುತ್ತಿದೆ. ಭಾರತದ ವಿದ್ಯಾರ್ಥಿಗಳ ಮೇಲೆ ದಾಳಿ ಹೆಚ್ಚಾಗಲು ಇದೇ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಈ ಬಗ್ಗೆ ಸರ್ಕಾರಗಳು ಅಧಿಕೃತವಾಗಿ ಏನನ್ನೂ ಹೇಳುತ್ತಿಲ್ಲ

‘ಹಿಂದೂ ವಿರೋಧಿ’ ‍ಪ್ರಕರಣಗಳು 25

ಅಮೆರಿಕದಲ್ಲಿ ದ್ವೇಷಾಪರಾಧ ಪ್ರಕರಣಗಳು
ಹೆಚ್ಚಾಗತೊಡಗಿದೆ ಎನ್ನುತ್ತದೆ ಫೆಡೆರಲ್‌ ಬ್ಯುರೊ ಆಫ್‌ ಇನ್‌ವೆಸ್ಟಿಗೇಷನ್‌ (ಎಫ್‌ಬಿಐ) ವರದಿ. ದ್ವೇಷಾಪರಧಗಳ ಕುರಿತು ಎಫ್‌ಬಿಐ ಪ್ರತಿ ವರ್ಷವೂ ಅಂಕಿ–ಅಂಶಗಳ ವರದಿಯೊಂದನ್ನು ಬಿಡುಗಡೆ ಮಾಡುತ್ತದೆ. ಈ ವರದಿಯಲ್ಲಿ 35 ವಿವಿಧ ಸಮುದಾಯಗಳ ವಿರುದ್ಧ ನಡೆಯುವ ಅಪರಾಧ ಪ್ರಕರಣಗಳ ಲೆಕ್ಕವನ್ನೂ ಇಡಲಾಗುತ್ತದೆ. ಈ ಸಮುದಾಯಗಳ ಪಟ್ಟಿಯಲ್ಲಿ ‘ಹಿಂದೂ ವಿರೋಧಿ’ ಎನ್ನುವ ಅಂಶವನ್ನು ಕೆಲ ವರ್ಷಗಳ ಈಚೆಗೆ ಸೇರಿಸಲಾಗಿದೆ. ಅಮೆರಿಕದಲ್ಲಿ ನೆಲೆಸಿರುವ ಹಿಂದೂ ಪರ ಸಂಘಟನೆಗಳ ಒತ್ತಾಯದ ಕಾರಣಕ್ಕಾಗಿ ಈ ಅಂಶವನ್ನು ಸೇರಿಸಲಾಗಿದೆ.

ಈ ವರದಿಯ ಪ್ರಕಾರ, 2022ರಲ್ಲಿ ದಾಖಲಾದ ಹಿಂದೂ ವಿರೋಧಿ ಪ್ರಕರಣಗಳ ಸಂಖ್ಯೆ 25. ಈ ಪ್ರಕರಣಗಳಲ್ಲಿ 31 ಜನರು ಸಂತ್ರಸ್ತರು. 2021ರಲ್ಲಿ ಹಿಂದೂ ವಿರೋಧಿ ಪ್ರಕರಣಗಳ ಸಂಖ್ಯೆ 10. ಅಂದರೆ, ಒಂದೇ ವರ್ಷದಲ್ಲಿ ಹಿಂದೂ ವಿರೋಧಿ ಪ್ರಕರಣಗಳುಶೇ 150ರಷ್ಟು ಏರಿಕೆಯಾಗಿವೆ. ದ್ವೇಷಾಪರಾಧಗಳಲ್ಲಿ ಕ ಪ್ಪು ಜನರ ಮೇಲಿನ ಜನಾಂಗೀಯ ನಿಂದನೆ ಪ್ರಕರಣಗಳೇ ಹೆಚ್ಚು.

ಅಮೆರಿಕನ್ನರು ಉದ್ಯೋಗಾವಕಾಶ ವಂಚಿತರಾದ ಕಾರಣಕ್ಕೆ ಭಾರತೀಯ ವಿದ್ಯಾರ್ಥಿಗಳು ಮತ್ತು ನೌಕರರ ಮೇಲೆ ನಡೆಸುತ್ತಿದ್ದ ಹಲ್ಲೆಗೂ, ಧರ್ಮಾಧಾರಿತ ಹಲ್ಲೆಗಳಿಗೂ ಬಹಳ ವ್ಯತ್ಯಾಸವಿದೆ. ಈ ಸ್ವರೂಪದ ಹಲ್ಲೆ ಅಥವಾ ದೌರ್ಜನ್ಯಗಳು ಈಚಿನ ವರ್ಷಗಳಲ್ಲಿ ನಡೆಯುತ್ತಿವೆ. ಭಾರತದ ಕೇಂದ್ರ ಸರ್ಕಾರದ ನಿಲುವುಗಳ ಕಾರಣದಿಂದ ಇಂತಹ ದೌರ್ಜನ್ಯ ಹೆಚ್ಚಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ರಷ್ಯಾ ಮತ್ತು ಉಕ್ರೇನ್‌ ಕದನದಲ್ಲಿ ಭಾರತ ಉಕ್ರೇನ್‌ ಪರ ನಿಲ್ಲಲಿಲ್ಲ ಎಂದೂ, ಮತ್ತು ಇಸ್ರೇಲ್‌–ಪ್ಯಾಲೆಸ್ಟೀನ್‌ ಯುದ್ಧದಲ್ಲಿ ಇಸ್ರೇಲ್‌ ಪರವಾಗಿ ನಿಂತಿತೆಂದು ಅಮೆರಿಕದಲ್ಲಿನ ಭಾರತೀಯರ ವಿರುದ್ಧ ಅಲ್ಲಿ ಪ್ರತಿಭಟನೆ ಮತ್ತು ಆಕ್ಷೇಪಗಳು ದಾಖಲಾದ ಉದಾಹರಣೆಗಳಿವೆ.

ಭಾರತದಲ್ಲಿನ ಆಂತರಿಕ ವಿಚಾರಗಳೂ ಅಮೆರಿಕದಲ್ಲಿ ಭಾರತೀಯರನ್ನು ನೋಡುವ ದೃಷ್ಟಿಕೋನವನ್ನು ಪ್ರಭಾವಿಸುತ್ತಿದೆ ಎಂಬುದನ್ನು ಈಚಿನ ಕೆಲ ಬೆಳವಣಿಗೆಗಳು ಸೂಚಿಸುತ್ತವೆ. ಈ ವಾರವಷ್ಟೇ (ಮಾರ್ಚ್‌ 26ರಂದು) ಅಮೆರಿಕದ 100ಕ್ಕೂ ಹೆಚ್ಚು ಸ್ವಯಂಸೇವಾ ಸಂಘಟನೆಗಳು ಸರ್ಕಾರಕ್ಕೆ ಬಹಿರಂಗ ಪತ್ರ ಬರೆದಿದ್ದವು. ಅಮೆರಿಕದಲ್ಲಿನ ಭಾರತೀಯರು ಕಟು ಹಿಂದುತ್ವವನ್ನು ಪ್ರತಿಪಾದಿಸುತ್ತಿದ್ದಾರೆ. ಭಾರತದಲ್ಲಿ ಮುಸ್ಲಿಂ ದ್ವೇಷವನ್ನು ಉದ್ದೀಪಿಸುತ್ತಿರುವಂತೆ ಇಲ್ಲಿನ ಭಾರತೀಯ ಹಿಂದೂಗಳೂ ಮುಸ್ಲಿಂ ದ್ವೇಷವನ್ನು ಪ್ರಚುರಪಡಿಸುತ್ತಿದ್ದಾರೆ. ಇದು ಅಮೆರಿಕದ ಪ್ರಜಾಪ್ರಭುತ್ವ ನಿಲುವುಗಳಿಗೆ ವಿರುದ್ಧವಾದುದು. ಅಮೆರಿಕದಲ್ಲಿ ಭಾರತೀಯರು ಮತ್ತು ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿಗಳು ಹೆಚ್ಚಾಗಲು ಇದೂ ಒಂದು ಕಾರಣ. ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕಬೇಕು ಎಂದು ಆ ಪತ್ರದಲ್ಲಿ ಒತ್ತಾಯಿಸಿದ್ದವು. ಆ ಪತ್ರಕ್ಕೆ ಅಮೆರಿಕ ಸರ್ಕಾರವು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಹಲವು ಪ್ರಕರಣಗಳು

ಜನವರಿ: ವಿವೇಕ್‌ ಸೈನಿ (25):  ಸೈನಿ ಅವರು ಜಾರ್ಜಿಯಾದ ಲಿಥೋನಿಯಾದಲ್ಲಿ ಎಂಬಿಎ ಪದವಿ ಓದುತ್ತಿದ್ದರು. ಜೊತೆಜೊತೆಗೆ ಅಂಗಡಿಯೊಂದರಲ್ಲಿ ಕ್ಲರ್ಕ್‌ ಉದ್ಯೋಗವನ್ನೂ ಮಾಡುತ್ತಿದ್ದರು. ಮನೆ–ಮಠ ಇಲ್ಲದ ಜುಲಿಯಾನ್‌ ಫಾಲ್ನರ್‌ಗೆ ಇದೇ ಅಂಗಡಿಯಲ್ಲಿ ಆಶ್ರಯ ನೀಡಲಾಗಿತ್ತು. ಸೈನಿ ಅವರು ಆತನಿಗೆ ತಿನ್ನುವುದಕ್ಕೆ ಕುಡಿಯುವುದಕ್ಕೆ ನೀಡುತ್ತಿದ್ದರು. ಆದರೆ, ಇವಕ್ಕೆ ಹಣ ನೀಡಬೇಕು ಎಂದು ಸೈನಿ ಹೇಳಿದರು. ಇದನ್ನು ಫಾಲ್ನರ್‌ ನಿರಾಕರಿಸಿದರು. ಆಹಾರಕ್ಕಾಗಿ ಹಣ ಕೇಳಿದ್ದಕ್ಕೆ ಮನೆಗೆ ಮರಳುವ ವೇಳೆಯಲ್ಲಿ ಸೈನಿ ಅವರ ಮೇಲೆ ಈತ ದಾಳಿ ನಡೆಸಿದ. ತಲೆ ಹಾಗೂ ಮುಖದ ಭಾಗಕ್ಕೆ ಸುಮಾರು 50 ಬಾರಿ ಸುತ್ತಿಗೆಯಿಂದ ಹೊಡೆದಿದ್ದಾನೆ. ಈ ದಾಳಿಯ ವಿಡಿಯೊವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ

ಜನವರಿ: ಶ್ರೇಯಸ್‌ ರೆಟದಟಿ ಬೆನಿಗರ್‌ (19): ಲಿಂಡ್ನರ್‌ ಸ್ಕೂಲ್‌ ಆಫ್‌ ಬ್ಯುಜಿನೆಸ್‌ನಲ್ಲಿ ಇವರು ಓದುತ್ತಿದ್ದರು. ಇವರನ್ನು ಹತ್ಯೆ ಮಾಡಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ

* ಜನವರಿ: ನೀಲ್‌ ಆಚಾರ್ಯ: ಪರ್ಡೇ ವಿಶ್ವವಿದ್ಯಾಲಯದಲ್ಲಿ ಇವರು ವ್ಯಾಸಂಗ ಮಾಡುತ್ತಿದ್ದರು. ಮಗ ಕಾಣೆಯಾಗಿದ್ದಾನೆ ಎಂದು ನೀಲ್‌ ತಾಯಿ ಜನವರಿ 28ರಂದು ಪೊಲೀಸರಿಗೆ ದೂರು ನೀಡಿದ್ದರು. ಇದಾದ ಕೆಲವು ದಿನಗಳ ಬಳಿಕ, ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿಯೇ ನೀಲ್‌ ಮೃತದೇಹ ಪತ್ತೆಯಾಯಿತು

* ಫೆಬ್ರುವರಿ: ಸಯ್ಯದ್‌ ಮಝರ್‌ ಅಲಿ: ಅಲಿ ಅವರು ಇಂಡಿಯಾನ ವೆಸ್ಲೆಯನ್‌ ವಿಶ್ವವಿದ್ಯಾಲಯದಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು. ತಮ್ಮ ಮನೆಗೆ ತೆರಳುತ್ತಿದ್ದಾಗ ಮೂವರು ಅನಾಮಿಕರು ಅವರ ಮೇಲೆ ದಾಳಿ ನಡೆಸಿದರು. ದಾಳಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅಲಿ ಅವರು ತಮ್ಮ ಮೇಲಾದ ದಾಳಿ ಕುರಿತು, ದಾಳಿ ಬಳಿಕವೇ ಖುದ್ದು ವಿಡಿಯೊ ಮಾಡಿದ್ದರು. ನಂತರ, ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು

ಫೆಬ್ರುವರಿ: ಸಮೀತ್‌ ಕಾಮತ್‌ (23): ಇವರು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ. ಪರ್ಡೇ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು. ವಿಶ್ವವಿದ್ಯಾಲಯದ ಸಮೀಪದಲ್ಲಿನ ಅರಣ್ಯ ಪ್ರದೇಶದಲ್ಲಿ ಸಮೀತ್‌ ಮೃತದೇಹ ದೊರೆತಿತ್ತು

* ಮಾರ್ಚ್‌: ಅಮರ್‌ನಾಥ್‌ ಘೋಷ್‌ (34): ಇವರು ಪಶ್ಚಿಮ ಬಂಗಾಳದವರು. ಈತ ಕೂಚುಪುಡಿ ಹಾಗೂ ಭರತನಾಟ್ಯ ನೃತ್ಯಪಟು. ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ನೃತ್ಯದ ಕುರಿತು ಹೆಚ್ಚಿನ ವ್ಯಾಸಂಗ ಮಾಡುತ್ತಿದ್ದ ಈತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಲೂಯಿಸ್‌ ಅಕಾಡೆಮಿಯ ಹತ್ತಿರವೇ ಅಮರ್‌ನಾಥ್‌ ಮೇಲೆ ಹಲವು ಸುತ್ತಿನ ಗುಂಡಿನ ದಾಳಿ ನಡೆಸಲಾಗಿತ್ತು. ಅಮರ್‌ನಾಥ್‌ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು

* ಮಾರ್ಚ್‌: ಅಭಿಜೀತ್‌ ಪುರುಚುರು (20): ಬಾಸ್ಟನ್‌ ವಿಶ್ವವಿದ್ಯಾಲಯದಲ್ಲಿ ಅಭಿಜೀತ್‌ ಅವರು ಎಂಜಿನಿಯರಿಂಗ್‌ ಓದುತ್ತಿದ್ದರು. ಬಾಸ್ಟನ್‌ನ ಅರಣ್ಯ ಪ್ರದೇಶವೊಂದರಲ್ಲಿ ಕಾರೊಂದರಲ್ಲಿ ಅಭಿಜೀತ್‌ ಅವರ ಮೃತದೇಹ ಪತ್ತೆಯಾಗಿದೆ. ಸಾವಿಗೆ ಕಾರಣ ತಿಳಿದುಬಂದಿಲ್ಲ. ಆದರೆ, ಸ್ಥಳೀಯ ಮಾಧ್ಯಮಗಳು ಇದನ್ನು ಹತ್ಯೆ ಎಂದು ಹೇಳುತ್ತಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT