ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಳ–ಅಗಲ: ‘ಶುದ್ಧಹಸ್ತ’ರಾಗಲು ಬಿಜೆಪಿ ಸೇರಿದ ನಾಯಕರು

Published 26 ಮಾರ್ಚ್ 2024, 22:32 IST
Last Updated 26 ಮಾರ್ಚ್ 2024, 22:32 IST
ಅಕ್ಷರ ಗಾತ್ರ

ಬಿಜೆಪಿ ಕೇಂದ್ರದಲ್ಲಿ 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಪಕ್ಷಾಂತರದ ವರಸೆಯೇ ಬದಲಾಗಿದೆ. ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಹೊತ್ತು ತನಿಖೆಗೆ ಒಳಗಾದ ಹಲವು ಮುಖಂಡರನ್ನು ಬಿಜೆಪಿ ತನ್ನೊಳಗೆ ಸೆಳೆದುಕೊಂಡಿದೆ. ಪಕ್ಷ ಸೇರುವವರೆಗೆ ಬಿಜೆಪಿ ಮುಖಂಡರು ಈ ಮುಖಂಡರ ಕುರಿತು ಪುಂಖಾನುಪುಂಖವಾಗಿ ಆರೋಪಗಳನ್ನು ಮಾಡಿದ್ದಾರೆ. ಆದರೆ, ಒಮ್ಮೆ ಬಿಜೆಪಿಯೊಳಕ್ಕೆ ಅವರು ಕಾಲಿಟ್ಟ ಮೇಲೆ ಆರೋಪಗಳೆಲ್ಲವೂ ನಿಂತು ಹೋಗಿವೆ. ಅವರ ವಿರುದ್ಧ ಇದ್ದ ಭ್ರಷ್ಟಾಚಾರದ ತನಿಖೆ ಏನಾಗಿದೆ ಎಂಬುದೇ ಯಾರಿಗೂ ತಿಳಿಯುವುದಿಲ್ಲ. ಹೀಗೆ ಬಿಜೆಪಿ ಸೇರಿ ‘ಸುಭಗ’ರಾದವರ ಒಟ್ಟು ಪಟ್ಟಿ ಇಲ್ಲಿದೆ:

ದಿಗಂಬರ ಕಾಮತ್‌

ದಿಗಂಬರ ಕಾಮತ್‌

ದಿಗಂಬರ ಕಾಮತ್‌

ಗೋವಾ ಹಾಗೂ ಅಸ್ಸಾಂಗಳಲ್ಲಿ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ಯೋಜನೆಗಳ ಗುತ್ತಿಗೆ ನೀಡುವ ವಿಚಾರದಲ್ಲಿ ಗೋವಾದ ಅಂದಿನ ಮುಖ್ಯಮಂತ್ರಿ ದಿಗಂಬರ ಕಾಮತ್‌ ಅವರು ಲಂಚ ಪಡೆದುಕೊಂಡಿದ್ದಾರೆ ಎಂದು 2010ರಲ್ಲಿ ಸುದ್ದಿಯಾಯಿತು. ಅಮೆರಿಕ ಮೂಲಕ ಲೂಯಿಸ್‌ ಬರ್ಗರ್‌ ಎನ್ನುವ ಕಂಪನಿಯು ಕಾಮತ್‌ ಅವರಿಗೆ ಕೋಟಿಗಟ್ಟಲೆ ರೂಪಾಯಿ ಲಂಚವನ್ನು ನೀಡಿತ್ತು ಎಂದು ಪ್ರಕರಣ ದಾಖಲಾಗಿತ್ತು. ಕಾಮತ್ ಅವರೊಂದಿಗೆ ಅಂದಿನ ಪಿಡಬ್ಲ್ಯುಡಿ ಸಚಿವ ಚರ್ಚಿಲ್‌ ಅಲೆಮಾವೊ ಅವರೂ ಈ ಪ್ರಕರಣದಲ್ಲಿ ಆರೋಪಿಯಾಗಿದ್ದರು.

ಸಿಬಿಐ ನಡೆಸುತ್ತಿದ್ದ ತನಿಖೆಯಲ್ಲಿ 2021ರ ಹೊತ್ತಿಗೆ ಜಾರಿ ನಿರ್ದೇಶನಾಲಯ ಪ್ರವೇಶ ಪಡೆದುಕೊಂಡಿತು. ಈ ಪ್ರಕರಣದಲ್ಲಿ ಈ ಇಬ್ಬರ ಮೇಲೆ ಪ್ರಕರಣ ದಾಖಲಿಸಲು ಅನುಮತಿಯನ್ನೂ ನೀಡಿತು. 2022ರಲ್ಲಿ ಕಾಮತ್‌ ಅವರು ಕಾಂಗ್ರೆಸ್‌ನ ಇನ್ನಿತರ ಎಂಟು ಶಾಸಕರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡರು.

ನಾನು ದೇವಾಲಯಕ್ಕೆ ಹೋಗಿ ದೇವರನ್ನು ಕೇಳಿದೆ, ಬಿಜೆಪಿಗೆ ಸೇರುವಂತೆ ದೇವರೇ ಸೂಚಿಸಿದರು
ದಿಗಂಬರ ಕಾಮತ್‌, ಬಿಜೆಪಿ ಶಾಸಕ (ಬಿಜೆಪಿ ಸೇರಿದ ಕೆಲ ದಿನಗಳ ಬಳಿಕ ನೀಡಿದ್ದ ಹೇಳಿಕೆ)

ಬಾಬಾ ಸಿದ್ದಿಕಿ

ಬಾಬಾ ಸಿದ್ದಿಕಿ

ಬಾಬಾ ಸಿದ್ದಿಕಿ


ಕೊಳೆಗೇರಿ ಜನರಿಗೆ ಪುನರ್‌ವಸತಿ ಕಲ್ಪಿಸುವ ಯೋಜನೆ ಸಂಬಂಧ ಭೂ ಅವ್ಯವಹಾರಕ್ಕೆ ಸಂಬಂಧಿಸಿ ₹500 ಕೋಟಿ ಹಗರಣ ನಡೆದಿದೆ ಎಂಬ ಆರೋಪವು ಕಾಂಗ್ರೆಸ್‌ನಿಂದ ಮೂರು ಬಾರಿ ಶಾಸಕರಾಗಿದ್ದ ಬಾಬಾ ಸಿದ್ದಿಕಿ ಅವರ ಮೇಲಿದೆ. ಈ ಸಂಬಂಧ 2017ರಲ್ಲಿ ಜಾರಿ ನಿರ್ದೇಶನಾಲವು ಅವರಿಗೆ ಸೇರಿದ ಸ್ಥಳಗಳಲ್ಲಿ ದಾಳಿ ನಡೆಸಿತು. 2018ರಲ್ಲಿ ಅವರ ಕೆಲವು ಆಸ್ತಿಗಳನ್ನೂ ಮುಟ್ಟುಗೋಲು ಹಾಕಿಕೊಂಡಿತು.

ಮಹಾರಾಷ್ಟ್ರ ವಸತಿ ಹಾಗೂ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಿದ್ದಿಕಿ, ತಮ್ಮ ಅಧಿಕಾರ ಬಳಿಸಿ, ಅವ್ಯವಹಾರ ನಡೆಸಿ, ಹಣ ಮಾಡಿಕೊಂಡಿದ್ದಾರೆ ಎನ್ನುವುದು ಅವರ ಮೇಲಿರುವ ಪ್ರಕರಣ. ಜಾರಿ ನಿರ್ದೇಶನಾಲಯವು ಪ್ರಕರಣದ ತನಿಖೆ ನಡೆಸುತ್ತಿರುವಂತೆಯೇ ಸಿದ್ದಿಕಿ ಅವರು ಅಜಿತ್‌ ಬಣದ ಎನ್‌ಸಿಪಿಯನ್ನು ಸೇರಿಕೊಂಡಿದ್ದಾರೆ. ಈ ಪಕ್ಷ ಮತ್ತು ಬಿಜೆಪಿ ಜೊತೆಯಾಗಿ ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿವೆ.

ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಸಂಸ್ಥೆಗಳು ವಿರೋಧ ಪಕ್ಷದವರಿಗೆ ಕಿರುಕುಳ ನೀಡುತ್ತಿದೆ. ಕೇಂದ್ರ ಸರ್ಕಾರವು ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇಂಥ ಕೆಲಸ ಮಾಡುತ್ತಿದೆ. ಜೊತೆಗೆ, ನಮ್ಮ ಚಾರಿತ್ರ್ಯವನ್ನು ಹನನ ಮಾಡುತ್ತಿದೆ ಮತ್ತು ನಮ್ಮ ಧ್ವನಿಗಳನ್ನು ಅಡಗಿಸುತ್ತಿದೆ. ಆದರೆ, ನಾವು ನಮ್ಮ ಧ್ವನಿ ಎತ್ತುವುದನ್ನು ಮುಂದುವರಿಸುತ್ತೇವೆ

ಬಾಬಾ ಸಿದ್ದಿಕಿ (2017ರಲ್ಲಿ ಜಾರಿ ನಿರ್ದೇಶನಾಲಯವು ದಾಳಿ ನಡೆಸಿದ ಬಳಿಕ, ಟ್ವಿಟರ್‌ನಲ್ಲಿ  ಮಾಡಿದ್ದ ಪೋಸ್ಟ್‌)

ವೈ.ಎಸ್‌. ಚೌಧರಿ

ವೈ.ಎಸ್‌. ಚೌಧರಿ

ವೈ.ಎಸ್‌. ಚೌಧರಿ


ತಮ್ಮ ಸುಜನ ಗ್ರೂಪ್‌ ಕಂಪನಿಯ ಕಾರಣಕ್ಕಾಗಿ ವೈ.ಎಸ್‌. ಚೌಧರಿ ಅವರನ್ನು ಸುಜನ ಚೌಧರಿ ಎಂದೇ ಕರೆಯಲಾಗುತ್ತದೆ. ಕೋಟ್ಯಂತರ ರೂಪಾಯಿ ವ್ಯವಹಾರವನ್ನು ಈ ಕಂಪನಿ ನಡೆಸುತ್ತದೆ. ಚೌಧರಿ ಅವರು ಕೇಂದ್ರದಲ್ಲಿ ಸಚಿವರೂ ಆಗಿದ್ದರು. ಆದರೆ, ಟಿಡಿಪಿಯು ಎನ್‌ಡಿಎ ಮೈತ್ರಿಕೂಟ ತೊರೆದ ಕಾರಣ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಹೀಗಿರುವಾಗ, 2018ರ ನವೆಂಬರ್‌ ಹೊತ್ತಿಗೆ ಚೌಧರಿ ಅವರಿಗೆ ಸೇರಿದ ಸುಮಾರು ಆರು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯವು ದಾಳಿ ನಡೆಸುತ್ತದೆ. ಚೌಧರಿ ಅವರ ಕಂಪನಿಯು ಸುಮಾರು ₹5,700 ಕೋಟಿ ಅವ್ಯವಹಾರ ನಡೆಸಿದೆ ಎಂದೂ ಅದು ಆರೋಪಿಸುತ್ತದೆ. ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆಯವರೂ ಚೌಧರಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸುತ್ತದೆ ಮತ್ತು ನೋಟಿಸ್‌ ನೀಡುತ್ತದೆ. ‘ಆಂಧ್ರದ ಮಲ್ಯ’ ಎಂದು ಚೌಧರಿ ಅವರನ್ನು ಕರೆಯಬೇಕು ಎಂದು ಬಿಜೆಪಿಯು ಒಮ್ಮೆ ವ್ಯಂಗ್ಯವಾಡಿತ್ತು.

ಇಷ್ಟೆಲ್ಲಾ ದಾಳಿಗಳು, ಪ್ರಕರಣಗಳು ದಾಖಲಾದ ಕೆಲವೇ ತಿಂಗಳಲ್ಲಿ ಅಂದರೆ, ಜೂನ್‌ 2019ರ ಹೊತ್ತಿಗೆ ವೈ.ಎಸ್‌. ಚೌಧರಿ ಸೇರಿ ಟಿಡಿಪಿಯ 6 ಸಂಸದರಲ್ಲಿ ನಾಲ್ವರು ಬಿಜೆಪಿ ಸೇರಿಕೊಂಡರು. ಈ ಬಳಿಕ, ಅವರ ಮೇಲಿದ್ದ ಆರೋಪಗಳು, ಪ್ರಕರಣಗಳಲ್ಲಿ ಯಾವುದೇ ತೀವ್ರ ತೆರನಾದ ಪ್ರಗತಿ ಕಂಡುಬಂದಿಲ್ಲ. ಅವರು ಈಗ ಬಿಜೆಪಿಯ ರಾಜ್ಯಸಭೆ ಸದಸ್ಯರಾಗಿದ್ದಾರೆ.

ನನ್ನ ವೃತ್ತಿ ರಾಜಕಾರಣವಲ್ಲ. ನಾನು ರಾಜಕಾರಣಿಯೂ ಅಲ್ಲ. ಆದರೆ, ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವುದಕ್ಕಾಗಿ ನಾನು ಬಿಜೆಪಿಯನ್ನು ಸೇರಿಕೊಂಡಿದ್ದೇನೆ

ವೈ.ಎಸ್‌. ಚೌಧರಿ (ಬಿಜೆಪಿ ಪಕ್ಷವನ್ನು ಸೇರಿಕೊಂಡ ಬಳಿಕ, ಪತ್ರಕರ್ತರಿಗೆ ನೀಡಿದ ಪ್ರತಿಕ್ರಿಯೆ)

–––

ಪ್ರಫುಲ್‌ ಪಟೇಲ್‌

ಪ್ರಫುಲ್‌ ಪಟೇಲ್‌

ಪ್ರಫುಲ್‌ ಪಟೇಲ್‌


ಎನ್‌ಸಿಪಿ (ಶರದ್‌ ಪವಾರ್‌ ಬಣ)–ಎನ್‌ಸಿಪಿ (ಅಜಿತ್‌ ಪವಾರ್‌  ಬಣ)

ಯುಪಿಎ ಅವಧಿಯ ಕೇಂದ್ರ ಸರ್ಕಾರದ ಅವಧಿಯಲ್ಲಿ ಎನ್‌ಸಿಪಿಯ ಪ್ರಫುಲ್‌ ಪಟೇಲ್‌ ಅವರು ವಿಮಾನಯಾನ ಸಚಿವರಾಗಿದ್ದರು. ಈ ವೇಳೆಯಲ್ಲಿ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು, ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಲಾಭ ಮಾಡಿಕೊಡುವುದಕ್ಕಾಗಿ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆಗಳಿಗೆ ನಷ್ಟ ಆಗುವಂತೆ ಮಾಡಿದ್ದಾರೆ ಎಂಬ ಆರೋಪ ಪಟೇಲ್‌ ಅವರ ಮೇಲಿದೆ. 2017ರಲ್ಲಿ ಈ ಬಗ್ಗೆ ಎಫ್‌ಐಆರ್‌ ದಾಖಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವೂ ತನಿಖೆ ನಡೆಸುತ್ತಿದೆ.

ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಆಪ್ತ ಇಕ್ಬಾಲ್‌ ಮಿರ್ಚಿ ಭಾಗಿಯಾಗಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪಟೇಲ್‌ ಅವರ ಹೆಸರೂ ಸೇರಿಕೊಂಡಿದೆ. ಈ ಸಂಬಂಧ 2019ರಿಂದಲೂ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. 2023ರಲ್ಲಿ ಪಟೇಲ್‌ ಅವರಿಗೆ ಸಂಬಂಧಿಸಿದ ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಮುಟ್ಟುಗೋಲು ಹಾಕಿಕೊಂಡಿತ್ತು.

ಈಗ ಅವರು ಶರದ್‌ ಪವಾರ್‌ ಅವರ ನೇತೃತ್ವದಲ್ಲಿದ್ದ ಎನ್‌ಸಿಪಿಯನ್ನು ತೊರೆದು, ಅಜಿತ್‌ ಪವಾರ್‌ ಅವರ ನೇತೃತ್ವದ ಎನ್‌ಸಿಪಿಯನ್ನು 2023ರ ಜುಲೈ ಹೊತ್ತಿಗೆ ಸೇರಿಕೊಂಡರು. ಆ ಮೂಲಕ ಮಹಾರಾಷ್ಟ್ರ ಸರ್ಕಾರದ ಭಾಗವಾದರು. ಈಗ ಅವರು ಅಜಿತ್‌ ನೇತೃತ್ವದ ಎನ್‌ಸಿಪಿಯ ರಾಜ್ಯಸಭಾ ಸದಸ್ಯ.

ಶಿವಸೇನಾದ ಸಿದ್ಧಾಂತವನ್ನು ಒಪ್ಪಿಕೊಂಡ ಮೇಲೆ, ಬಿಜೆಪಿಯ ಜೊತೆ ಹೋಗುವುದಕ್ಕೆ ವಿರೋಧ ಮಾಡುವುದರಲ್ಲಿ ಅರ್ಥವೇನಿದೆ? ಸ್ವತಂತ್ರ ಅಸ್ತಿತ್ವ ಇರುವ ಪಕ್ಷವಾಗಿ ನಾವು ಈ ಮೈತ್ರಿಯಲ್ಲಿ ಭಾಗಿಯಾಗಿದ್ದೇವೆ

ಪ್ರಫುಲ್‌ ಪಟೇಲ್‌ (ಅಜಿತ್‌ ನೇತೃತ್ವದ ಎನ್‌ಪಿಸಿ ಸೇರಿಕೊಂಡ ಬಳಿಕ, ಸಭೆಯೊಂದರಲ್ಲಿ ನೀಡಿದ ಹೇಳಿಕೆ)

ಛಗನ್‌ ಭುಜ್‌ಬಲ್‌

ಛಗನ್‌ ಭುಜ್‌ಬಲ್‌

ಛಗನ್‌ ಭುಜ್‌ಬಲ್‌


ಎನ್‌ಸಿಪಿ (ಶರದ್‌ ಪವಾರ್‌ ಬಣ)–ಎನ್‌ಸಿಪಿ (ಅಜಿತ್‌ ಪವಾರ್‌  ಬಣ)

ಛಗನ್‌ ಅವರೂ ಸೇರಿದಂತೆ, ಅವರ ಮಗ ಪಂಕಜ್‌ ಹಾಗೂ ಛಗನ್‌ ಅವರ ಸಂಬಂಧಿ ಸಮೀರ್‌, ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿದ್ದಾರೆ. ಮಹಾರಾಷ್ಟ್ರ ಸದನ್‌ ಹಗರಣ; ಇದು ಸುಮಾರು 2005 ಪ್ರಕರಣ. ಸದನ್‌ ಕಟ್ಟಡದ ನಿರ್ಮಾಣದಲ್ಲಿ ವಂಚನೆ ನಡೆದಿದೆ ಎಂದು ಎಫ್‌ಐಆರ್‌ ದಾಖಲಾಗಿತ್ತು. ಈ ಹಗರಣದ ಬಗ್ಗೆ 2016ರಿಂದ ಜಾರಿ ನಿರ್ದೇಶನಾಲಯವು ತನಿಖೆಯ ನಡೆಸುತ್ತಿದೆ.

ಸರ್ಕಾರಕ್ಕೆ ಸುಮಾರು ₹840 ಕೋಟಿ ನಷ್ಟ ಮಾಡಿದ್ದಾರೆ ಎನ್ನುವುದು ಛಗನ್‌ ಮೇಲಿರುವ ಮುಖ್ಯ ಆರೋಪ. ಈ ಸಂಬಂಧ ಅವರು 2016ರಿಂದ 2018ರವರೆಗೆ ಜೈಲಿನಲ್ಲಿದ್ದರು. ಇವರಿಗೆ ಸೇರಿದ ಕೋಟಿಗಟ್ಟಲೆ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಮುಟ್ಟುಗೋಲು ಹಾಕಿಕೊಂಡಿದೆ. ಈ ಹಗರಣದ ಕುರಿತ ತನಿಖೆ ಪ್ರಗತಿಯಲ್ಲಿರುವಾಗಲೇ ಛಗನ್‌ ಅವರು ಅಜಿತ್‌ ನೇತೃತ್ವದ ಎನ್‌ಸಿಪಿ ಸೇರಿಕೊಂಡಿದ್ದಾರೆ. ಬಿಜೆಪಿ, ಶಿವಸೇನಾ (ಶಿಂದೆ ಬಣ) ಹಾಗೂ ಎನ್‌ಸಿಪಿ (ಅಜಿತ್‌ ಬಣ) ಮೈತ್ರಿಯ ಸರ್ಕಾರದಲ್ಲಿ ಛಗನ್‌ ಅವರು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ರಕ್ಷಣೆ ಖಾತೆಗಳ ಸಚಿವರಾಗಿದ್ದರು. ಮರಾಠ ಮೀಸಲಾತಿ ವಿಚಾರವಾಗಿ ಅವರು ಇತ್ತೀಚೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಶರದ್‌ ಪವಾರ್‌ ಅವರು ಅಧಿಕಾರಕ್ಕಾಗಿ ಹಲವು ಬಾರಿ ಅತ್ತಿಂದಿತ್ತ ವಾಲಿದ್ದಾರೆ, ಮೈತ್ರಿ ಮಾಡಿಕೊಂಡಿದ್ದಾರೆ. ಈ ‘ವಾಲಿಕೆ’ ಪ್ರಕ್ರಿಯೆದಿಂದ ಬೇಸತ್ತು, ಆ ಪಕ್ಷದಿಂದ ಹೊರಬಂದೆ

ಛಗನ್‌ ಭುಜ್‌ಬಲ್‌ (ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿಯಿಂದ ಹೊರಬಂದ ಬಳಿಕ ನೀಡಿದ ಹೇಳಿಕೆ)

ಸಿ.ಎಂ. ರಮೇಶ್‌

ಸಿ.ಎಂ. ರಮೇಶ್‌

ಸಿ.ಎಂ. ರಮೇಶ್‌


ಉದ್ಯಮಿ ಸಿ.ಎಂ. ರಮೇಶ್‌ ಅವರು ಟಿಡಿಪಿಯಿಂದ ಸಂಸದರಾಗಿದ್ದವರು. ಚಂದ್ರಬಾಬು ನಾಯ್ಡು ಅವರಿಗೆ ಆಪ್ತರೂ ಆಗಿದ್ದರು. ರಮೇಶ್‌ ಅವರು ಟಿಡಿಪಿಯ ಸಂಸದರಾಗಿದ್ದಾಗಲೇ ‘ರಿತ್ವಿಕ್‌ ಪ್ರಾಜೆಕ್ಟ್ಸ್‌’ ಎಂಬ ಕಂಪನಿ ಸ್ಥಾಪಿಸಿದ್ದರು. ಸಿಬಿಐ, ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಅಧಿಕಾರಿಗಳು ರಮೇಶ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 2018ರಲ್ಲಿ ಆದಾಯ ತೆರಿಗೆ ಇಲಾಖೆಯು ರಮೇಶ್‌ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸುತ್ತದೆ. ₹100 ಕೋಟಿ ಅವ್ಯವಹಾರಕ್ಕೆ ಸಂಬಂಧಿಸಿ ಸುಮಾರು 100 ಮಂದಿ ಅಧಿಕಾರಿಗಳು ದಾಳಿಯಲ್ಲಿ ಭಾಗಿಯಾಗಿದ್ದರು.

ವೈ.ಎಸ್‌. ಚೌಧರಿ ಅವರೊಂದಿಗೆ ರಮೇಶ್‌ ಅವರೂ 2019ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಈಗ ಅವರು ರಾಜ್ಯಸಭಾ ಸದಸ್ಯರಾಗಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳ ಹಲವು ಯೋಜನೆಗಳ ಗುತ್ತಿಗೆಯು ರಿತ್ವಿಕ್‌ ಕಂಪನಿ ಪಾಲಿಗಿದೆ. ಇದೇ ಕಂಪನಿಯು ವಿವಿಧ ಪಕ್ಷಗಳಿಗೆ ಚುನಾವಣಾ ಬಾಂಡ್‌ ಮೂಲಕ ₹45 ಕೋಟಿ ದೇಣಿಗೆ ನೀಡಿದೆ.

ಇದು ರಾಜಕೀಯ ಪ್ರೇರಿತ ದಾಳಿಯಾಗಿದೆ. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಷಯದಲ್ಲಿ ನಾವು ಹೋರಾಟ ನಡೆಸುತ್ತಿದ್ದೇವೆ. ಹೋರಾಟವನ್ನು ಮುಂದುವರಿಸಿದರೆ, ಮುಂದಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ನಮಗೆ ಎಚ್ಚರಿಕೆ ನೀಡಿದ್ದರು. ಇದರ ಪರಿಣಾಮವೇ ಆದಾಯ ತೆರಿಗೆ ಇಲಾಖೆಯ ದಾಳಿ

ಸಿ.ಎಂ. ರಮೇಶ್‌ (ಆದಾಯ ತೆರಿಗೆ ಇಲಾಖೆಯ ದಾಳಿಯ ನಂತರ ನೀಡಿದ ಹೇಳಿಕೆ)

ಆಧಾರ: ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT