ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ ಅಗಲ | ಚುನಾವಣಾ ಆಯುಕ್ತರ ನೇಮಕ: ಕೇಂದ್ರದ ಮುಂದೆ ಹಲವು ಹಾದಿಗಳು...
ಆಳ ಅಗಲ | ಚುನಾವಣಾ ಆಯುಕ್ತರ ನೇಮಕ: ಕೇಂದ್ರದ ಮುಂದೆ ಹಲವು ಹಾದಿಗಳು...
Published 10 ಮಾರ್ಚ್ 2024, 23:42 IST
Last Updated 10 ಮಾರ್ಚ್ 2024, 23:42 IST
ಅಕ್ಷರ ಗಾತ್ರ

ಚುನಾವಣಾ ಆಯುಕ್ತರಾಗಿದ್ದ ಅರುಣ್‌ ಗೋಯಲ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಚುನಾವಣಾ ಆಯೋಗದಿಂದ ಹೊರ ನಡೆದಿದ್ದಾರೆ. ಇದಕ್ಕೂ ಮುನ್ನ ಫೆಬ್ರುವರಿಯಲ್ಲಿ ಮತ್ತೊಬ್ಬ ಚುನಾವಣಾ ಆಯುಕ್ತ ಅನೂಪ್‌ ಚಂದ್ರ ಪಾಂಡೆ ಅವರು ನಿವೃತ್ತರಾಗಿದ್ದರು. ಅಂದರೆ ಇದ್ದ ಮೂವರು ಆಯುಕ್ತರಲ್ಲಿ ಎರಡು ಹುದ್ದೆಗಳು ತೆರವಾಗಿವೆ. ಇನ್ನೇನು ಲೋಕಸಭಾ ಚುನಾವಣೆ ನಡೆಯಬೇಕಿದೆ. ಅದಕ್ಕೂ ಮುನ್ನ ಕೇಂದ್ರ ಸರ್ಕಾರವು ಇಬ್ಬರು ಚುನಾವಣಾ ಆಯುಕ್ತರನ್ನು ನೇಮಕ ಮಾಡುತ್ತದೆಯೇ ಎಂಬುದು ಈ ಹೊತ್ತಿನ ಪ್ರಶ್ನೆ. ಚುನಾವಣಾ ಆಯೋಗ ಮತ್ತು ಚುನಾವಣಾ ಆಯುಕ್ತರ ನೇಮಕಾತಿ ಮತ್ತು ಅಧಿಕಾರಗಳಿಗೆ ಸಂಬಂಧಿಸಿದ ಕಾನೂನುಗಳು ಸರ್ಕಾರದ ಮುಂದೆ ಹಲವು ಅವಕಾಶ ಮತ್ತು ಸಾಧ್ಯತೆಗಳನ್ನು ಇರಿಸಿವೆ.

ಚುನಾವಣಾ ಆಯೋಗವನ್ನು ರಚಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಅಧಿಕಾರವನ್ನು ಸಂವಿಧಾನದ 324ನೇ ವಿಧಿಯು ನೀಡುತ್ತದೆ. ಚುನಾವಣಾ ಆಯೋಗದ ರಚನೆ, ಆಯುಕ್ತರ ನೇಮಕ, ಸೇವಾ ನಿಯಮ, ಅಧಿಕಾರ ವ್ಯಾಪ್ತಿಯನ್ನು ನಿರ್ಧರಿಸಲು ಸರ್ಕಾರವು ಪ್ರತ್ಯೇಕ ಕಾನೂನನ್ನು ರಚಿಸಬೇಕು ಎಂದೂ ಈ ವಿಧಿ ಹೇಳುತ್ತದೆ. ಅದರಂತೆ ಕಾಯ್ದೆ ಜಾರಿಯಲ್ಲಿಯೂ ಇದೆ. ಆದರೆ, ಮೂಲ ಕಾಯ್ದೆಯ ಪ್ರಕಾರ ಒಬ್ಬ ಚುನಾವಣಾ ಆಯುಕ್ತರನ್ನು ಮಾತ್ರ ನೇಮಕ ಮಾಡಲು ಅವಕಾಶವಿತ್ತು ಮತ್ತು 1989ರವರೆಗೆ ಅದೇ ಪದ್ಧತಿ ಚಾಲ್ತಿಯಲ್ಲಿತ್ತು. 1989ರ ಚುನಾವಣೆಯ ಸಂದರ್ಭದಲ್ಲಿ ಎದುರಾದ ಬಿಕ್ಕಟ್ಟುಗಳ ಕಾರಣದಿಂದ ಇನ್ನೂ ಇಬ್ಬರು ಆಯುಕ್ತರನ್ನು ನೇಮಕ ಮಾಡಲಾಗಿತ್ತು. 90ರ ದಶಕದಲ್ಲಿ ಅದಕ್ಕೆ ಸಂಬಂಧಿಸಿದ ಕಾನೂನುಗಳಿಗೆ ತಿದ್ದುಪಡಿ ತರಲಾಯಿತು. ಆನಂತರ ಒಟ್ಟು ಮೂವರು ಆಯುಕ್ತರನ್ನು ನೇಮಕ ಮಾಡುತ್ತಾ ಬರಲಾಗಿದೆ.

ಆದರೆ, ಚುನಾವಣಾ ಆಯುಕ್ತರ ಹುದ್ದೆ ತೆರವಾದ ನಂತರ ಆ ಹುದ್ದೆಗೆ ಎಷ್ಟು ಅವಧಿಯಲ್ಲಿ ನೇಮಕಾತಿ ನಡೆಸಬೇಕು ಎಂಬುದನ್ನು ಸಂಬಂಧಿತ ಯಾವ ಕಾನೂನಿನಲ್ಲೂ ವಿವರಿಸಿಲ್ಲ. ಕಾಲಮಿತಿಯೊಳಗೆ ನೇಮಕಾತಿ ನಡೆಸಬೇಕು ಎಂಬ ಯಾವ ನಿಯಮವೂ ಇಲ್ಲ. ಹೀಗಾಗಿಯೇ ತೆರವಾದ ಹಲವು ತಿಂಗಳ ನಂತರವೂ ನೇಮಕಾತಿ ನಡೆಯದೇ ಇದ್ದ ಉದಾಹರಣೆಗಳು ಹಿಂದಿನ ಒಂದೆರಡು ವರ್ಷಗಳಲ್ಲೇ ಸಿಗುತ್ತವೆ. ಆದರೆ, ಮುಖ್ಯ ಚುನಾವಣಾ ಆಯುಕ್ತರ ಹೊರತಾಗಿ ಆಯೋಗದಲ್ಲಿ ಇನ್ನು ಎಷ್ಟು ಮಂದಿ ಆಯುಕ್ತರು ಇರಬಹುದು ಎಂಬುದನ್ನು ಆಗಾಗ್ಗೆ ಪರಿಷ್ಕರಿಸಬಹುದು ಎಂದು ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆ ಹೇಳುತ್ತದೆ. ಆ ಪ್ರಕಾರ, ಒಬ್ಬರೇ ಆಯುಕ್ತರನ್ನು ಉಳಿಸಿಕೊಳ್ಳಲು ಸರ್ಕಾರವು ಕಾನೂನಿಗೆ ಬದಲಾವಣೆ ತರಲು ಅವಕಾಶವಿದೆ. ಈಗ ಕಾಯ್ದೆಗೆ ತಿದ್ದುಪಡಿ ತರಲು ಸಮಯವಿಲ್ಲ ಮತ್ತು ತಾಂತ್ರಿಕವಾಗಿ ಆ ಸಾಧ್ಯತೆಯೂ ಇಲ್ಲ. ಆದರೆ, ಸುಗ್ರೀವಾಜ್ಞೆ ಮೂಲಕ ಅಂತಹ ಬದಲಾವಣೆ ತರಬಹುದಾಗಿದೆ. ಸರ್ಕಾರ ಹೀಗೆ ಮಾಡುತ್ತದೆಯೇ ಇಲ್ಲವೇ ಎಂಬುದರ ಬಗ್ಗೆ ತಜ್ಞರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.

ಇದಲ್ಲದೇ ಸರ್ಕಾರವು ಇತರ ಚುನಾವಣಾ ಆಯುಕ್ತರನ್ನು ನೇಮಕ ಮಾಡದೆಯೂ ಇರಬಹುದಾಗಿದೆ. ಸರ್ಕಾರದ ಮುಂದೆ ಅಂತಹ ಆಯ್ಕೆಯನ್ನೂ ಕಾನೂನು ಇರಿಸಿದೆ. ಜತೆಗೆ ತ್ವರಿತಗತಿಯಲ್ಲಿ ಇಬ್ಬರು ಆಯುಕ್ತರನ್ನು ನೇಮಕ ಮಾಡಲೂ ಅವಕಾಶವಿದೆ. ಮೂಲಗಳ ಪ್ರಕಾರ ಈ ವಾರವೇ ಸರ್ಕಾರವು ಈ ಸಂಬಂಧ ಸಭೆ ನಿಗದಿ ಮಾಡಿಕೊಂಡಿದೆ. ಆ ಸಭೆಯ ನಿರ್ಧಾರ ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಚುನಾವಣಾ ಆಯೋಗದ ನಿರ್ಧಾರಗಳು, ಸಾಧ್ಯವಿರುವ ಮಟ್ಟಿಗೆ ಅವಿರೋಧವಾಗಿರಬೇಕು ಎಂದು ಚುನಾವಣಾ ಆಯುಕ್ತರ ನೇಮಕಾತಿ ಮತ್ತು ಸೇವಾ ಕಾಯ್ದೆ ಹೇಳುತ್ತದೆ. ಆಯೋಗದ ಕಾರ್ಯನಿರ್ವಹಣೆ ಮತ್ತು ಕರ್ತವ್ಯಗಳಿಗೆ (ಚುನಾವಣೆ ಘೋಷಣೆ, ಚುನಾವಣೆ ಆಯೋಜನೆ, ಫಲಿತಾಂಶ ಪ್ರಕಟ... ಇತ್ಯಾದಿ) ಸಂಬಂಧಿಸಿದಂತೆ ಆಯುಕ್ತರ ಮಧ್ಯೆ ಭಿನ್ನಾಭಿಪ್ರಾಯದ ಸಾಧ್ಯತೆಯೂ ಇರುತ್ತದೆ. ಆಗ ಬಹುಮತದ ಆಧಾರದಲ್ಲಿ ಆಯೋಗವು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕಾಯ್ದೆಯ 18ನೇ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ.‌

ಒಬ್ಬರೇ ಆಯುಕ್ತರು ಉಳಿದಾಗ ತಕ್ಷಣಕ್ಕೆ ಏನು ಮಾಡಬೇಕು ಎಂಬುದನ್ನು ಸಂಬಂಧಿತ ಯಾವ ಕಾನೂನಿನಲ್ಲೂ ಸ್ಪಷ್ಟವಾಗಿ ಹೇಳಿಲ್ಲ. 

ಆದರೆ ಈಗ ಮುಖ್ಯ ಚುನಾವಣಾ ಆಯುಕ್ತರು ಒಬ್ಬರೇ ಉಳಿದಿರುವ ಕಾರಣ, ಆಯೋಗದಲ್ಲಿ ಭಿನ್ನಾಭಿಪ್ರಾಯಕ್ಕೆ ಅವಕಾಶವಿಲ್ಲ. ಮತ್ತೊಬ್ಬರು ಅಥವಾ ಇಬ್ಬರು ಆಯುಕ್ತರು ನೇಮಕ ಆಗುವವರೆಗೆ ಮುಖ್ಯ ಚುನಾವಣಾ ಆಯುಕ್ತರು ತೆಗೆದುಕೊಳ್ಳುವ ನಿರ್ಧಾರಗಳು ಅವಿರೋಧದ್ದೇ ಆಗಿರುತ್ತವೆ. ಜತೆಗೆ ಏಕಪಕ್ಷೀಯವಾಗಿಯೂ ಇರುತ್ತವೆ.

ರಾಜೀನಾಮೆಗೆ ಅನ್ಯ ಕಾರಣಗಳಿಲ್ಲ

ಅನಾರೋಗ್ಯದ ಕಾರಣದಿಂದ ಅರುಣ್‌ ಗೋಯಲ್‌ ಅವರು ಚುನಾವಣಾ ಆಯುಕ್ತರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಅಧಿಕೃತ ದಾಖಲೆಗಳು ಹೇಳುತ್ತವೆ. ಆದರೆ, ವಾಸ್ತವದಲ್ಲಿ ಅವರಿಗೆ ಆರೋಗ್ಯದ ಯಾವುದೇ ಸಮಸ್ಯೆ ಇಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಜತೆಗೆ ಮುಖ್ಯ ಚುನಾವಣಾ ಆಯುಕ್ತರೊಂದಿಗಿನ ಭಿನ್ನಾಭಿಪ್ರಾಯದ ಕಾರಣದಿಂದ ಗೋಯಲ್ ರಾಜೀನಾಮೆ ನೀಡಿದ್ದಾರೆ ಎಂದೂ ಮೂಲಗಳು ಹೇಳಿವೆ.ಆದರೆ, ಗೋಯಲ್‌ ಅವರು ಅನಾರೋಗ್ಯದ ಕಾರಣದಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ನಮೂದಿಸಿರುವುದು ಕಾನೂನಿನ ನಿರ್ಬಂಧದ ಕಾರಣದಿಂದ ಮಾತ್ರ. ಏಕೆಂದರೆ ಕಾನೂನಿನ ಪ್ರಕಾರ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರು ಬೇರೆ ಕಾರಣಗಳನ್ನು ನೀಡಿ ರಾಜೀನಾಮೆ ನೀಡುವಂತಿಲ್ಲ. ಅವರ ಹುದ್ದೆ ತೆರವಾಗುವುದು ಅವರು ಆರು ವರ್ಷ ಸೇವೆ ಪೂರೈಸಿದಾಗ ಅಥವಾ ಅವರಿಗೆ 65 ವರ್ಷವಾದಾಗ. ಅವಧಿಗೂ ಮುನ್ನ ರಾಜೀನಾಮೆ ನೀಡಬೇಕು ಅಂದರೆ ‘ಅನಾರೋಗ್ಯವಿದೆ’ ಎಂದು ಪ್ರಮಾಣಪತ್ರ ಸಲ್ಲಿಸಲೇಬೇಕು. ವೈಯಕ್ತಿಕ ಕಾರಣಗಳು, ರಾಜಕೀಯ ಒತ್ತಡಗಳು, ಆಯೋಗದಲ್ಲಿನ ಭಿನ್ನಾಭಿಪ್ರಾಯಗಳು ಸೇರಿ ಬೇರೆ ಯಾವುದೇ ಕಾರಣಗಳಿದ್ದರೂ ರಾಜೀನಾಮೆ ವೇಳೆ ಅವುಗಳನ್ನು ಉಲ್ಲೇಖಿಸಲು ಅವಕಾಶವಿಲ್ಲ.

ಒಮ್ಮೆ ಮಿಂಚಿನ ವೇಗ, ಒಮ್ಮೆ ವಿಳಂಬ

ಚುನಾವಣಾ ಆಯುಕ್ತರ ನೇಮಕ ವಿಚಾರದಲ್ಲಿ ಕೇಂದ್ರ ಸರ್ಕಾರವು ಒಮ್ಮೊಮ್ಮೆ ಒಂದೊಂದು ಧೋರಣೆಯನ್ನು ಅನುಸರಿಸಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ ಕೂಡ ಪ್ರಶ್ನೆ ಮಾಡಿತ್ತು. ಚುನಾವಣಾ ಆಯುಕ್ತರ ಹುದ್ದೆಗೆ ರಾಜೀನಾಮೆ ನೀಡಿ, ರಾಜೀನಾಮೆಯು ಅಂಗೀಕಾರಗೊಂಡಿರುವ ಅರುಣ್‌ ಗೋಯಲ್‌ ಅವರ ನೇಮಕವು ಈ ಹಿಂದೆ ದೇಶದಾದ್ಯಂತ ದೊಡ್ಡ ಸುದ್ದಿ ಮಾಡಿತ್ತು. ಈ ವಿಷಯ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು ಕೂಡ.

ಅರುಣ್‌ ಗೋಯಲ್‌ ಅವರು ಆಯುಕ್ತರಾಗಿ ನೇಮಕಗೊಳ್ಳುವುದಕ್ಕೂ ಮೊದಲು ಈ ಸ್ಥಾನವು ಏಳು ತಿಂಗಳಿನಿಂದ ಖಾಲಿ ಇತ್ತು. ಆದರೆ, ಅರುಣ್‌ ಅವರು ತಮ್ಮ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದ ಒಂದು ದಿನದಲ್ಲಿ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸುಪ್ರೀಂ ಕೋರ್ಟ್‌ ಮಿಂಚಿನ ವೇಗವೇಕೆ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು.

‘ಅರುಣ್ ಗೋಯಲ್ ಅವರ ಸ್ವಯಂ ನಿವೃತ್ತಿಯನ್ನು ನವೆಂಬರ್ 18ರಂದು ಮಾನ್ಯ ಮಾಡಲಾಗಿದೆ. ಚುನಾವಣಾ ಆಯುಕ್ತರ ಹುದ್ದೆಗೆ ಅಂದೇ ಅರ್ಜಿ ಸಲ್ಲಿಕೆಯಾಗಿದೆ. ಒಂದೇ ದಿನದಲ್ಲಿ ಅವರ ನೇಮಕಾತಿ ನಡೆದಿದೆ. 24 ಗಂಟೆಗಳಲ್ಲಿ ಅವರ ಕಡತವು ಸಚಿವಾಲಯಗಳ ಮಧ್ಯೆ ಓಡಾಡಿದೆ. ಇಷ್ಟು ಮಿಂಚಿನ ವೇಗದಲ್ಲಿ ಅವರ ನೇಮಕಾತಿ ಏಕೆ ನಡೆದಿದೆ’ ಎಂದು ಕೇಳಿತ್ತು. ಏಳು ತಿಂಗಳಿನಿಂದ ಖಾಲಿ ಇದ್ದ ಹುದ್ದೆಗೆ ಒಂದೇ ದಿನದಲ್ಲಿ ನೇಮಕ ನಡೆದದ್ದು ಕೇಂದ್ರ ಸರ್ಕಾರ ಧೋರಣೆ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಈಗ, ಅರುಣ್‌ ಅವರ ರಾಜೀನಾಮೆ ಕೂಡ ಒಂದೇ ದಿನದಲ್ಲಿ ಅಂಗೀಕಾರಗೊಂಡಿದೆ.

ಮೂವರು ಚುನಾವಣಾ ಆಯುಕ್ತರನ್ನು ಒಳಗೊಂಡ ಆಯೋಗದಲ್ಲಿ ಈಗ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಅವರನ್ನು ಬಿಟ್ಟು ಬೇರೆ ಯಾವ ಸದಸ್ಯರೂ ಇಲ್ಲ. ಅರುಣ್‌ ಅವರ ರಾಜೀನಾಮೆಯಿಂದ ಒಂದು ಹುದ್ದೆ ತೆರವಾಗಿದ್ದರೆ, ಫೆಬ್ರುವರಿಯಲ್ಲಿಯೇ ನಿವೃತ್ತಿಯ ಕಾರಣದಿಂದ ಮತ್ತೊಂದು ಸ್ಥಾನ ತೆರವಾಗಿತ್ತು. ಫೆ.14ರಂದು ಅನೂಪ್‌ ಚಂದ್ರ ಪಾಂಡೆ ಅವರು ತಮ್ಮ ವಯೋಮಾನದ (65) ಆಧಾರದಲ್ಲಿ ನಿವೃತ್ತರಾಗಿದ್ದರು. ಈ ಸ್ಥಾನ ತೆರವಾಗಿ ಒಂದು ತಿಂಗಳು ಕಳೆದರು ಇನ್ನೂವರೆಗೂ ನೇಮಕಾತಿ ನಡೆದಿಲ್ಲ.

ಅನೂಪ್‌ ಚಂದ್ರ ಪಾಂಡೆ ಅವರು ನಿವೃತ್ತರಾಗುವ ಮೊದಲೇ ಅವರ ಸ್ಥಾನಕ್ಕೆ ನೇಮಕ ಮಾಡುವ ಸಂಬಂಧ ಪ್ರಕ್ರಿಯೆಗಳನ್ನು ಕೇಂದ್ರ ಸರ್ಕಾರ ಆರಂಭಿಸಿತ್ತು. ಫೆ.7ರಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ‘ಆಯ್ಕೆ ಸಮಿತಿ’ಯ ಸಭೆಯನ್ನು ನಿಶ್ಚಯಿಸಲಾಗಿತ್ತು. ಅದೇ ದಿನವೇ ‘ಶೋಧ ಸಮಿತಿ’ಯ ಸಭೆಯು ನಿಯೋಜನೆಗೊಂಡಿತ್ತು. ಆದರೆ, ಈ ಯಾವ ಸಭೆಗಳು ನಡೆಯಲೇ ಇಲ್ಲ. ಆದ ಕಾರಣ ಇದುವರೆಗೂ ಈ ಸ್ಥಾನಕ್ಕೆ ನೇಮಕಾತಿ ನಡೆದಿಲ್ಲ. ಅರುಣ್‌ ಅವರ ನೇಮಕಾತಿಯಲ್ಲಿ ಮಿಂಚಿನ ವೇಗ ಅನುಸರಿಸಿದ್ದ ಕೇಂದ್ರ ಸರ್ಕಾರವು, ಅನೂಪ್‌ ಅವರ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ನೇಮಕಾತಿ ಮಾಡುವಲ್ಲಿ ವಿಳಂಬ ಮಾಡಿದೆ. 

ಆಯೋಗದ ಎರಡೂ ಹುದ್ದೆಗಳಿಗೆ ನೇಮಕಾತಿ ನಡೆಸಲು ಪ್ರಧಾನಿ ಮೋದಿ ನೇತೃತ್ವದ ‘ಆಯ್ಕೆ ಸಮಿತಿ’ಯು ಮಾರ್ಚ್‌ 15ರಂದು ಸಭೆ ಸೇರಬಹುದು ಎಂದು ಸರ್ಕಾರದ ಮೂಲಗಳು ಹೇಳುತ್ತಿವೆ. ಈ ದಿನಾಂಕಕ್ಕೆ ಸಭೆ ನಡೆಯಲೂಬಹುದು ಅಥವಾ ನಡೆಯದೆಯೇ ಇರಬಹುದು. ಈ ಹಿಂದೆಯೂ ಈ ರೀತಿಯ ಸಭೆ ನಡೆಸಲು ದಿನಾಂಕ ಗೊತ್ತು ಮಾಡಲಾಗಿತ್ತು. ಆದರೆ, ಸಭೆ ನಡೆದಿರಲಿಲ್ಲ.

ಆಯ್ಕೆ ಹೇಗೆ?

ನೇಮಕಾತಿಗೆ ಸಂಬಂಧಿಸಿದ ಕಾನೂನನ್ನು ಕೇಂದ್ರ ಸರ್ಕಾರವು ಕಳೆದ ಡಿಸೆಂಬರ್‌ನಲ್ಲಿ ಜಾರಿಗೆ ತಂದಿದೆ. ಇದರ ಅನ್ವಯ ಎರಡು ಹಂತಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ. ಮೊದಲು ‘ಶೋಧ ಸಮಿತಿ’ಯನ್ನು ರಚಿಸಲಾಗುತ್ತದೆ. ಕೇಂದ್ರ ಕಾನೂನು ಸಚಿವ, ಕೇಂದ್ರ ಸರ್ಕಾರದ ಕಾರ್ಯದರ್ಶಿ ರ‍್ಯಾಂಕ್‌ನ ಇಬ್ಬರು ಅಧಿಕಾರಿಗಳು ಈ ಸಮಿತಿಯ ಸದ್ಯಸರಾಗಿರುತ್ತಾರೆ. ಇವರು ಐವರು ಹೆಸರುಗಳನ್ನು ಸೂಚಿಸಬೇಕು. ನಂತರ, ಈ ಪಟ್ಟಿಯು ‘ಆಯ್ಕೆ ಸಮಿತಿ’ ಮುಂದೆ ಹೋಗುತ್ತದೆ. ಈ ಸಮಿತಿಯಲ್ಲಿ ಪ್ರಧಾನಿ, ವಿರೋಧ ಪಕ್ಷದ ನಾಯಕ (ಅಧಿಕೃತ ವಿರೋಧ ಪಕ್ಷ ಇಲ್ಲದೇ ಇದ್ದರೆ, ವಿರೋಧಿ ಪಾಳೆಯದಲ್ಲಿನ ಅತ್ಯಂತ ದೊಡ್ಡ ಪಕ್ಷದ ನಾಯಕ) ಹಾಗೂ ಪ್ರಧಾನಿ ನೇಮಿಸಿದ ಸಂಪುಟ ದರ್ಜೆಯ ಸಚಿವ ಸದಸ್ಯರಾಗಿರುತ್ತಾರೆ. ಈ ಐವರಲ್ಲಿ ಆಯ್ಕೆ ಸಮಿತಿಯು ನೇಮಕಾತಿ ನಡೆಸಬೇಕು. ಜೊತೆಗೆ, ಶೋಧ ಸಮಿತಿ ಸೂಚಿಸಿದ ಹೆಸರುಗಳನ್ನೇ ಆಯ್ಕೆ ಸಮಿತಿಯು ಗಣನೆಗೆ ತೆಗೆದುಕೊಳ್ಳಬೇಕಾಗಿಲ್ಲ. ಆ ಪಟ್ಟಿಯಲ್ಲಿ ಇಲ್ಲದೇ ಇದ್ದವರನ್ನೂ ನೇಮಕ ಮಾಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT