ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಅರುಣಾಚಲ ಪ್ರದೇಶವನ್ನು ಅತಿಕ್ರಮಿಸುತ್ತಿದೆಯೇ ಚೀನಾ?

Published 4 ಏಪ್ರಿಲ್ 2024, 0:29 IST
Last Updated 4 ಏಪ್ರಿಲ್ 2024, 0:29 IST
ಅಕ್ಷರ ಗಾತ್ರ
ಕಾಂಗ್ರೆಸ್‌ ಸರ್ಕಾರವು ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದ ಬೆನ್ನಲ್ಲೇ, ಮೋದಿ ಅವರ ಸರ್ಕಾರದ ಅವಧಿಯಲ್ಲಿ ಚೀನಾವು ಅರುಣಾಚಲ ಪ್ರದೇಶದ ಎಷ್ಟು ಭಾಗವನ್ನು ಅತಿಕ್ರಮಿಸಿದೆ ಎಂಬುದೂ ಚರ್ಚೆಗೆ ಬಂದಿದೆ. ಚೀನಾಕ್ಕೆ ಒಂದಿನಿತೂ ಜಾಗವನ್ನೂ ಬಿಟ್ಟುಕೊಟ್ಟಿಲ್ಲ ಎಂದು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಹಲವು ವರ್ಷಗಳಿಂದ ಹೇಳುತ್ತಲೇ ಇದೆ. ಆದರೆ ಚೀನಾವು ಭಾರತದ ನೆಲದಲ್ಲಿ ರಸ್ತೆ, ಗಡಿಠಾಣೆ, ಹಳ್ಳಿಗಳನ್ನು ನಿರ್ಮಿಸಿದೆ ಎಂಬುದನ್ನು ಉಪಗ್ರಹ ಚಿತ್ರಗಳು ತೋರಿಸುತ್ತವೆ

ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ. ಚೀನಾದ (ಟಿಬೆಟ್ ಭಾಗ) ದಕ್ಷಿಣದ ಗಡಿಗೆ ಅಂಟಿಕೊಂಡಿರುವ ಅರುಣಾಚಲ ಪ್ರದೇಶವು ಸಂಪೂರ್ಣವಾಗಿ ತಮ್ಮದು ಎಂಬುದು ಚೀನಾದ ವಾದ. ಈಚಿನ ವರ್ಷಗಳಲ್ಲಿ ಚೀನಾದ ಸೈನಿಕರು ಹಲವು ಬಾರಿ ಗಡಿದಾಟಿ ಭಾರತದ ಒಳಗೆ ಬಂದು ತಂಟೆ–ತಕರಾರು ನಡೆಸಿದ್ದಾರೆ. ಗಾಲ್ವನ್‌ ಕಣಿವೆ ಸಂಘರ್ಷ, ಬುಮ್‌ಲಾ ಪಾಸ್‌ ಸಂಘರ್ಷ ಅಂತಹ ಯತ್ನಗಳಿಗೆ ಉದಾಹರಣೆ. ಈ ಸ್ವರೂಪದ ಅತಿಕ್ರಮಣದ ಜತೆಗೆ ಚೀನಾವು ಭಾರತದ ನೆಲದಲ್ಲಿ ಹಳ್ಳಿಗಳನ್ನು ನಿರ್ಮಿಸುತ್ತಿದೆ, ರಸ್ತೆ–ಹೆದ್ದಾರಿಗಳನ್ನು ನಿರ್ಮಿಸುತ್ತಿದೆ ಎಂದು ಅರುಣಾಚಲ ಪ್ರದೇಶ ಜನರು ಆರೋಪಿಸುತ್ತಲೇ ಇದ್ದಾರೆ. ಕೇಂದ್ರ ಸರ್ಕಾರವು ಅದನ್ನು ನಿರಾಕರಿಸುತ್ತಲೇ ಬಂದಿದೆ, ಈಗಲೂ ನಿರಾಕರಿಸುತ್ತಿದೆ.

ಚೀನಾ ಮತ್ತು ಭಾರತದ ಮಧ್ಯದ ಗಡಿ– ಮೆಕ್‌ಮಹನ್‌ ರೇಖೆ ಮತ್ತು ವಾಸ್ತವ ನಿಯಂತ್ರಣ ರೇಖೆಗಳ (ಎಲ್‌ಎಸಿ) ದಕ್ಷಿಣ ಭಾಗಕ್ಕೆ, ಅಂದರೆ ಭಾರತದ ಗಡಿಯೊಳಗೆ ಕೆಲವು ಸುಸಜ್ಜಿತ ಹಳ್ಳಿಗಳು ಮತ್ತು ಹೆದ್ದಾರಿಗಳು ನಿರ್ಮಾಣವಾಗಿರುವುದು ಉಪಗ್ರಹ ಚಿತ್ರಗಳಲ್ಲಿ ಕಾಣುತ್ತದೆ. ಅತಿಸ್ಪಷ್ಟವಾದ ಉಪಗ್ರಹ ಚಿತ್ರಗಳನ್ನು ಒದಗಿಸುವ ಪ್ಲಾನೆಟ್‌ ಲ್ಯಾಬ್ಸ್‌ನ ಉಪಗ್ರಹ ಚಿತ್ರಗಳನ್ನು ಬಳಸಿಕೊಂಡು ಎನ್‌ಡಿ ಟಿ.ವಿ ‘ಭಾರತದ ನೆಲದಲ್ಲಿ ಹಳ್ಳಿ ನಿರ್ಮಿಸಿದ ಚೀನಾ’ ಎಂಬ ವರದಿ ಸರಣಿಯನ್ನೂ ಪ್ರಕಟಿಸಿತ್ತು. 

ಗೂಗಲ್‌ ಮ್ಯಾಪ್ಸ್‌ ಮತ್ತು ಗೂಗಲ್‌ ಅರ್ಥ್‌ ನಕ್ಷೆಗಳನ್ನು ಪರಿಶೀಲಿಸಿದಾಗ, ಎಲ್‌ಎಸಿಯಿಂದ ದಕ್ಷಿಣಕ್ಕೆ ಭಾರತದ ಗಡಿಭಾಗದಲ್ಲಿ ಹಲವು ಹಳ್ಳಿಗಳು ನಿರ್ಮಾಣವಾಗಿರುವುದು ಕಾಣುತ್ತದೆ. ಈ ಹಳ್ಳಿಗಳಲ್ಲಿ ಕೆಲವಕ್ಕೆ ಭಾರತದ ಕಡೆಯಿಂದ ಸಂಪರ್ಕ ರಸ್ತೆಗಳೇ ಇಲ್ಲ. ಆದರೆ ಚೀನಾದ ಕಡೆಯಿಂದ ಸಂಪರ್ಕ ರಸ್ತೆಗಳಿದ್ದು, ಚೀನಾದ ನೆಲದಲ್ಲಿ ನೂರಾರು ಕಿ.ಮೀ.ನಷ್ಟು ಒಳಕ್ಕೆ ಆ ರಸ್ತೆಗಳು ಸಂಪರ್ಕ ಕಲ್ಪಿಸುತ್ತವೆ. ಅಪ್ಪರ್‌ ಸುಬನ್‌ಸಿರಿ ಜಿಲ್ಲೆಯಲ್ಲಿ ಸುಬನ್‌ಸಿರಿ ನದಿ ದಂಡೆಯಲ್ಲಿ ಚೀನಾ ಹಳ್ಳಿಯೊಂದನ್ನು ನಿರ್ಮಾಣ ಮಾಡಿದೆ ಎಂಬ ಆರೋಪವಿದೆ. ಅರುಣಾಚಲ ಪ್ರದೇಶದ ಬಿಜೆಪಿ ಸಂಸದ ತಾಪಿರ್ ಗಾವ್‌ ಈ ಬಗ್ಗೆ ಲೋಕಸಭೆಯಲ್ಲೂ ಪ್ರಶ್ನೆ ಎತ್ತಿದ್ದರು. ಚೀನಾವು ಭಾರತದ ನೆಲವನ್ನು ಅತಿಕ್ರಮಿಸುತ್ತಿದೆ ಎಂದು ಹಲವು ಬಾರಿ ಕಳವಳ ವ್ಯಕ್ತಪಡಿಸಿದ್ದರು. 

ಅಮೆರಿಕದ ರಕ್ಷಣಾ ಸಚಿವಾಲಯವು ದಕ್ಷಿಣ ಏಷ್ಯಾದಲ್ಲಿ ಚೀನಾದ ಬಲವರ್ಧನೆ ಕುರಿತು ವರದಿ ಪ್ರಕಟಿಸಿತ್ತು. ‘ಚೀನಾವು ಭಾರತದ ಅರುಣಾಚಲ ಪ್ರದೇಶದಲ್ಲಿ ನಿರ್ಮಾಣ ಕಾರ್ಯ ನಡೆಸಿದೆ. ರಸ್ತೆ, ಹಳ್ಳಿಗಳು, ಗಡಿಠಾಣೆ, ಹೆಲಿಪ್ಯಾಡ್‌ಗಳನ್ನು ನಿರ್ಮಿಸಿದೆ’ ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಎಲ್ಲವನ್ನೂ ಕೇಂದ್ರ ಸರ್ಕಾರ ನಿರಾಕರಿಸುತ್ತಿದೆಯಷ್ಟೆ. ತನ್ನ ಪ್ರತಿಪಾದನೆ ಬಲಪಡಿಸುವಂತಹ ಯಾವುದೇ ಸಾಕ್ಷ್ಯಗಳನ್ನು ಒದಗಿಸುತ್ತಿಲ್ಲ.

ಸರ್ಕಾರದ ಪ್ರತಿಪಾದನೆ

2020ರಲ್ಲಿ ಲಡಾಖ್‌ನ ಗಾಲ್ವನ್‌ನಲ್ಲಿ ಚೀನಾ–ಭಾರತದ ಮಧ್ಯೆ ಸೇನಾ ಸಂಘರ್ಷ ನಡೆದಿತ್ತು. ಚೀನಾವು ಭಾರತದೊಳಗೆ ಹೊಕ್ಕಿದೆ ಎಂಬ ಅನುಮಾನವನ್ನು ಈ ಸಂಘರ್ಷವು ಹುಟ್ಟು ಹಾಕಿತ್ತು. 2021ರಲ್ಲಿ ಚೀನಾವು ಅರುಣಾಚಲ ಪ್ರದೇಶದೊಳಗೂ ನುಗ್ಗಿದೆ ಎಂಬುದನ್ನು ಎನ್‌ಡಿಟಿವಿ ವರದಿ ಮಾಡಿತ್ತು. ತನ್ನ ವಿಸ್ತೃತ ವರದಿಯನ್ನು ವಿದೇಶಾಂಗ ಸಚಿವಾಲಯಕ್ಕೂ ಕಳುಹಿಸಿಕೊಟ್ಟಿತ್ತು ಮತ್ತು ಸಚಿವಾಲಯದ ಪ್ರತಿಕ್ರಿಯೆಯನ್ನೂ ಕೇಳಿತ್ತು. ಇದಕ್ಕೆ ಸರ್ಕಾರ ನೀಡಿದ ಉತ್ತರವು ಆತಂಕಕ್ಕೀಡು ಮಾಡುವಂತಹದ್ದಾಗಿತ್ತು.

‘ಭಾರತದ ಗಡಿಗೆ ಅಂಟಿಕೊಂಡಿರುವ ಪ್ರದೇಶಗಳಲ್ಲಿ ಚೀನಾವು ಹಲವು ಕಾಮಗಾರಿಗಳನ್ನು ನಡೆಸುತ್ತಿರುವ ಕುರಿತ ವರದಿಗಳನ್ನು ನಾವು ಗಮನಿಸಿದ್ದೇವೆ. ಚೀನಾವು ಇಂಥ ಕಾಮಗಾರಿಗಳನ್ನು ಹಲವು ವರ್ಷಗಳಿಂದ ನಡೆಸುತ್ತಲೇ ಇದೆ’ ಎಂದು ವಿದೇಶಾಂಗ ಸಚಿವಾಲಯವು ಉತ್ತರಿಸಿತ್ತು.

ಈಗ 2024ರಲ್ಲಿ ಅರುಣಾಚಲ ಪ್ರದೇಶವನ್ನೂ ಒಳಗೊಂಡ ನಕ್ಷೆಯನ್ನು, ಅರುಣಾಚಲ ಪ್ರದೇಶದ ಹಳ್ಳಿಗಳಿಗೆ ಹೊಸ ಹೆಸರನ್ನೂ ಚೀನಾವು ಬಿಡುಗಡೆ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು, ‘ನಾನು ನಿಮ್ಮ ಮನೆಯ ಹೆಸರನ್ನು ಬದಲಾಯಿಸಿದರೆ, ಅದು ನನ್ನ ಮನೆಯಾಗಿ ಬಿಡುತ್ತದೆಯೇ? ಅರುಣಾಚಲ ಪ್ರದೇಶವು ಭಾರತದ ರಾಜ್ಯವಾಗಿತ್ತು, ಭಾರತದ ರಾಜ್ಯವಾಗಿದೆ ಮತ್ತು ಅದು ಎಂದಿಗೂ ಭಾರತದ ರಾಜ್ಯವಾಗಿಯೇ ಇರಲಿದೆ’ ಎಂದಿದ್ದಾರೆ. ‘ಚೀನಾವು ಅರುಣಾಚಲ ಪ್ರದೇಶದ ಒಳಹೊಕ್ಕಿಲ್ಲ’ ಎಂದು ಮುಖ್ಯಮಂತ್ರಿ ಪೆಮಾ ಖಂಡು ಅವರೂ ಹೇಳುತ್ತಾರೆ.

ಜೈಶಂಕರ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ಮನೀಷ್‌ ತಿವಾರಿ ಅವರು, ‘ಚೀನಾವು ಬಿಡುಗಡೆ ಮಾಡಿರುವ ಹೊಸ ನಕ್ಷೆ ಹಾಗೂ ಭಾರತದ ಹಳ್ಳಿಗಳಿಗೆ ನೀಡಿರುವ ಹೊಸ ಹೆಸರುಗಳ ಬೆಳವಣಿಗೆ ಕುರಿತು ದುರ್ಬಲವಾದ ಹೇಳಿಕೆಯನ್ನು ನೀಡಿದ್ದಾರೆ. ಇಂಥ ಹೇಳಿಕೆಗಳು ಭಾರತ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಅದರಲ್ಲೂ ಇಂಥ ಹೇಳಿಕೆಯು ವಿದೇಶಾಂಗ ಸಚಿವರೊಬ್ಬರಿಗೆ ಶೋಭೆ ತರುವಂಥದ್ದಲ್ಲ’ ಎಂದಿದ್ದಾರೆ.

ವಿದೇಶಾಂಗ ಸಚಿವಾಲಯ ಅಂದು ನೀಡಿದ ಪ್ರತಿಕ್ರಿಯೆ ಹಾಗೂ ಇಂದು ಸಚಿವರು ನೀಡಿದ ಉತ್ತರವು ವಿರೋಧ ಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಶ್ರೀಲಂಕಾದ ಕಚ್ಚತೀವು ದ್ವೀಪದ ಕುರಿತು ಪುಂಖಾನುಪುಂಖವಾಗಿ ಮಾತನಾಡುವ ಪ್ರಧಾನಿ ಮೋದಿ ಹಾಗೂ ಸಚಿವ ಜೈಶಂಕರ್‌ ಅವರು ಚೀನಾ ಕುರಿತು ಯಾಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸುವುದಿಲ್ಲ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ. ‘ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿಯೂ ಚೀನಾದ ಕುರಿತು ವಿರೋಧ ಪಕ್ಷಗಳು ಪ್ರಶ್ನೆಗಳನ್ನು ಎತ್ತುತ್ತವೆ. ಆದರೆ, ಪ್ರಧಾನಿ ಮೋದಿ ಅಥವಾ ವಿದೇಶಾಂಗ ಸಚಿವ ಜೈಶಂಕರ್‌ ಅವರುಮಾತ್ರ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’
ಎಂದು ಕಾಂಗ್ರೆಸ್‌ ಹೇಳಿದೆ.

ಆಧಾರ: ಪಿಟಿಐ, ರಾಯಿಟರ್ಸ್‌, ಬಿಬಿಸಿ, ಅಮೆರಿಕದ ರಕ್ಷಣಾ ಸಚಿವಾಲಯದ ವರದಿಗಳು, ಗೂಗಲ್‌ ಅರ್ಥ್, ಗೂಗಲ್‌ ಮ್ಯಾಪ್ಸ್‌ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT