ಜಾಗತಿಕ ತಾಪಮಾನ ಹೆಚ್ಚಳದ ಪರಿಣಾಮಗಳು ಭೂಮಿಯ ಮೇಲಷ್ಟೇ ಅಲ್ಲ, ಸಮುದ್ರದ ನೀರಿನೊಳಗೂ ಕಾಣತೊಡಗಿವೆ. ಸಮುದ್ರದ ನೀರಿನ ಮೇಲ್ಮೈನ ತಾಪಮಾನದಲ್ಲಿ ಹೆಚ್ಚಳವಾಗಿರುವುದು ಮತ್ತು ಅಲೆಗಳು ತೀವ್ರಗೊಂಡಿರುವುದರಿಂದ ಹವಳದ ದಿಬ್ಬಗಳು ಬಿಳಿಚಿಕೊಳ್ಳುತ್ತಿದ್ದು, ಹವಳಗಳು ಜೀವ ಕಳೆದುಕೊಳ್ಳುತ್ತಿವೆ. 1998ರಿಂದ ಭಾರತದ ಲಕ್ಷದ್ವೀಪದಲ್ಲಿ ಈ ರೀತಿ ಶೇ 50ರಷ್ಟು ಹವಳದ ದಿಬ್ಬಗಳು ನಿರ್ನಾಮವಾಗಿವೆ ಎಂದು 24 ವರ್ಷದ ಅಧ್ಯಯನ ವರದಿ ತಿಳಿಸಿದೆ. ಜಾಗತಿಕ ಮಟ್ಟದಲ್ಲಿಯೂ ಇದೇ ಪ್ರವೃತ್ತಿ ಕಂಡುಬಂದಿದ್ದು, ಇದು ಹವಳಗಳ ದಿಬ್ಬದ ಕಣ್ಮರೆಯ ವಿಚಾರ ಮಾತ್ರವೇ ಆಗಿರದೇ ಅರ್ಥ ವ್ಯವಸ್ಥೆ, ಪ್ರಾಕೃತಿಕ ಸಮತೋಲನ ಮತ್ತು ಜೀವಜಾಲದ ಅಳಿವು ಉಳಿವಿನ ಪ್ರಶ್ನೆಯೂ ಆಗಿದೆ