ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಳ-ಅಗಲ | ಜೀವವೈವಿಧ್ಯ ಸಂರಕ್ಷಣೆಗೆ ಸುಸ್ಥಿರ ಕ್ರಿಯಾಯೋಜನೆ

Published : 21 ಡಿಸೆಂಬರ್ 2022, 22:30 IST
ಫಾಲೋ ಮಾಡಿ
Comments

ವಿಶ್ವದ ಜೀವವೈವಿಧ್ಯ ಸಂರಕ್ಷಣೆಗಾಗಿ ರೂಪಿಸಿರುವ ಜಾಗತಿಕ ಕ್ರಿಯಾ ಯೋಜನೆಗೆ 196 ದೇಶಗಳು ಈಚೆಗೆ ಸಹಿ ಮಾಡಿವೆ. ನಾಲ್ಕು ವರ್ಷಗಳಿಂದ ಚರ್ಚೆಯಲ್ಲಿದ್ದ ಈ ಕ್ರಿಯಾಯೋಜನೆಗೆ ಈಗ ಅಂತಿಮ ರೂಪ ದೊರೆತಿದೆ. ಮಾನವನ ಚಟುವಟಿಕೆಗಳು ಪರಿಸರದ ಮೇಲೆ ಬೀರುತ್ತಿರುವ ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡುವ ಮತ್ತು ಜೀವವೈವಿಧ್ಯಕ್ಕೆ ಪೂರಕವಾಗುವಂತೆ ಆರ್ಥಿಕ ಚಟುವಟಿಕೆಗಳನ್ನು ಮಾರ್ಪಡಿಸುವ ಸುಸ್ಥಿರ ಅಭಿವೃದ್ಧಿ ಮಾದರಿಯನ್ನು 2050ರ ವೇಳೆಗೆ ಸಾಧಿಸಬೇಕು ಎಂಬುದು ಈ ಕ್ರಿಯಾಯೋಜನೆಯ ಗುರಿ. ಜಾಗತಿಕ ಮಟ್ಟದ ಎಲ್ಲಾ ಪರಿಸರ ಸಂಬಂಧಿ ಕ್ರಿಯಾಯೋಜನೆಗಳ ಅನುಷ್ಠಾನದ ಪ್ರಯೋಗಶಾಲೆಗಳು ಅಭಿವೃದ್ಧಿಶೀಲ ರಾಷ್ಟ್ರಗಳೇ ಆಗಿವೆ. ಜಾಗತಿಕ ಜೀವವೈವಿಧ್ಯ ಕ್ರಿಯಾಯೋಜನೆಯಲ್ಲೂ ಅಭಿವೃದ್ಧಿಶೀಲ ದೇಶಗಳೇ ಈ ಪ್ರಯೋಗಕ್ಕೆ ಇಳಿಯಬೇಕಿದೆ

ಅಪಾಯಗಳ ನಿವಾರಣೆ

2050 ವೇಳೆಗೆ ಸುಸ್ಥಿರ ಅಭಿವೃದ್ಧಿ ಮಾದರಿಯನ್ನು ರೂಪಿಸುವಲ್ಲಿ ಕೆಲವಾರು ಕಡಿಮೆ ಅವಧಿಯ ಗುರಿಗಳನ್ನು ಹಾಕಿಕೊಳ್ಳಲಾಗಿದೆ. 2030ರ ವೇಳೆಗೆ ಈ ಗುರಿಗಳನ್ನು ಮುಟ್ಟಬೇಕಿದೆ. ಅವುಗಳಲ್ಲಿ, ಜೀವವೈವಿಧ್ಯವು ಈಗ ಎದುರಿಸುತ್ತಿರುವ ಅಪಾಯಗಳನ್ನು ನಿವಾರಣೆ ಮಾಡುವುದು ಮೊದಲ ಗುರಿ.

*ವಿಶ್ವದ ಎಲ್ಲೆಡೆ ನೆಲ ಮತ್ತು ಜಲದಲ್ಲಿ ಜೀವವೈವಿಧ್ಯದ ದೃಷ್ಟಿಯಿಂದ ಮಹತ್ವದ ಸ್ಥಳಗಳನ್ನು ರಕ್ಷಿಸಬೇಕು. ಅಂತಹ ಸ್ಥಳಗಳಿಗೆ ಅಥವಾ ನೆಲೆಗಳಿಗೆ ಇನ್ನೂ ಹೆಚ್ಚಿನ ಹಾನಿಯಾಗದಂತೆ ಎಚ್ಚರವಹಿಸಬೇಕು

*ನೆಲ ಮತ್ತು ಜಲ ಪ್ರದೇಶಗಳಲ್ಲಿ ಈಗಾಗಲೇ ನಾಶವಾಗಿರುವ ಜೀವವೈವಿಧ್ಯ ನೆಲೆಗಳಲ್ಲಿ, ಶೇ 20ರಷ್ಟಾದರೂ ನೆಲೆಗಳನ್ನು ಮರುರೂಪಿಸುವ ಕೆಲಸವಾಗಬೇಕು. ಅಲ್ಲಿದ್ದ ಸಹಜ ಪರಿಸರ ವ್ಯವಸ್ಥೆಯನ್ನು ಮರುಸ್ಥಾಪಿಸಬೇಕು

*ಜೀವವೈವಿಧ್ಯದ ದೃಷ್ಟಿಯಿಂದ ತೀರಾ ಮಹತ್ವ ಪಡೆದಿರುವ ಹಲವು ಪ್ರದೇಶಗಳು ಈಗಾಗಲೇ ನಾಶವಾಗಿವೆ. ಅತ್ಯಂತ ಮಹತ್ವದ ಈ ಪ್ರದೇಶಗಳಲ್ಲಿ ಶೇ 30ರಷ್ಟನ್ನಾದರೂ ಮರುಸ್ಥಾಪಿಸಬೇಕು

*ಒಂದು ಪ್ರದೇಶಕ್ಕೆ ಸೀಮಿತವಾದ ಸಸ್ಯ ಮತ್ತು ಪ್ರಾಣಿ ಪ್ರಬೇಧಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಆದ್ಯತೆ ನೀಡಬೇಕು. ಈಗಾಗಲೇ ವಿನಾಶದ ಅಂಚಿಗೆ ತಲುಪಿರುವ ಇಂತಹ ಪ್ರಬೇಧಗಳನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳಬೇಕು. ಮಾನವ–ವನ್ಯಜೀವಿ ಸಂಘರ್ಷವನ್ನು ತಡೆಗಟ್ಟಲು ಅಥವಾ ಕಡಿಮೆ ಮಾಡಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು

*ಅರಣ್ಯ ಉತ್ಪನ್ನಗಳನ್ನು ಸುಸ್ಥಿರ ವಿಧಾನದ ಮೂಲಕ ಸಂಗ್ರಹಿಸಬೇಕು. ಅಂತಹ ಉತ್ಪನ್ನಗಳ ಸಂಗ್ರಹ, ಮಾರಾಟ ಮತ್ತು ಬಳಕೆಯನ್ನು ಕಾನೂನುಬದ್ಧಗೊಳಿಸಬೇಕು. ಈ ಮೂಲಕ ಅರಣ್ಯಗಳ ಬಳಕೆಯ ಮೇಲೆ ನಿಗಾ ಇರಿಸಬೇಕು

*ಬೇರೊಂದು ಪರಿಸರದ ಪ್ರಬೇಧಗಳನ್ನು ಹೊಸ ಪ್ರದೇಶಗಳಿಗೆ ಪರಿಚಯಿಸುವ ಯತ್ನಗಳು ಕಡಿಮೆಯಾಗಬೇಕು. ನಿಯಂತ್ರಿತ ವಿಧಾನದಲ್ಲಿ ಇಂತಹ ಕ್ರಿಯೆಗಳನ್ನು ನಡೆಸಬೇಕು. ಸ್ಥಳೀಯ ಪ್ರಬೇಧಗಳಿಗೆ ಪ್ರತಿಕೂಲವಾಗಿ ಪರಿಣಮಿಸುವ ಅಥವಾ ಪರಿಣಮಿಸುತ್ತಿರುವ ಬೇರೊಂದು ಪರಿಸರದ ಪ್ರಬೇಧಗಳನ್ನು, ಅಲ್ಲಿಂದ ನಿವಾರಣೆ ಮಾಡಬೇಕು

*ಜೀವವೈವಿಧ್ಯ ಮತ್ತು ಪರಿಸರ ವ್ಯವಸ್ಥೆಗೆ ಧಕ್ಕೆಯಾಗದೇ ಇರುವಷ್ಟರಮಟ್ಟಿಗೆ ಎಲ್ಲಾ ಸ್ವರೂಪದ ಮಾಲಿನ್ಯಗಳನ್ನು ತಗ್ಗಿಸಬೇಕು. ಭೂಮಿಯ ಫಲವತ್ತತೆ ಕಳೆದುಕೊಳ್ಳುವಂತಹ ಕ್ರಿಯೆಗಳನ್ನು 2030ರ ವೇಳೆಗೆ ಶೇ 50ರಷ್ಟು ಕಡಿಮೆ ಮಾಡಬೇಕು. ಕೃಷಿಯಲ್ಲಿ ಕೀಟನಾಶಕಗಳ ಬಳಕೆಯನ್ನು ಮೂರನೇ ಎರಡರಷ್ಟು ಕಡಿಮೆ ಮಾಡಬೇಕು. 2030ರ ವೇಳೆಗೆ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಂಪೂರ್ಣವಾಗಿ ನಿವಾರಿಸಬೇಕು

*ಹವಾಮಾನ ವೈಪರೀತ್ಯವು ಜೀವವೈವಿಧ್ಯವನ್ನು ಬಾಧಿಸದಂತೆ ತಡೆಯಬೇಕು ಅಥವಾ ಅದರ ಪರಿಣಾಮವನ್ನು ಕಡಿಮೆ ಮಾಡಬೇಕು. ಈಗಾಗಲೇ ಜೀವವೈವಿಧ್ಯದ ಮೇಲೆ ಆಗಿರುವ ದುಷ್ಪರಿಣಾಮಗಳನ್ನು ಅಧ್ಯಯನ ಮಾಡಬೇಕು. ಮತ್ತೆ ಅಂತಹ ಪರಿಸರ ವ್ಯವಸ್ಥೆ ಮರುಸ್ಥಾಪನೆಗೆ ಯತ್ನಿಸಬೇಕು

‘ಹಂಚಿಕೊಳ್ಳುವುದರಲ್ಲಿದೆ ಸುಸ್ಥಿರ ಅಭಿವೃದ್ಧಿ’

ಜೀವವೈವಿಧ್ಯ ಸಂರಕ್ಷಣೆಯನ್ನು ಸುಸ್ಥಿರ ಅಭಿವೃದ್ಧಿಯ ಮಾದರಿಯನ್ನಾಗಿಸುವುದೂ ಈ ಕ್ರಿಯಾಯೋಜನೆಯ ಮಹತ್ವದ ಘಟ್ಟಗಳಲ್ಲಿ ಒಂದು. ಜೀವವೈವಿಧ್ಯ ಸಂರಕ್ಷಣೆ ಹೆಸರಿನಲ್ಲಿ ಅತ್ಯಗತ್ಯವಾದ ಅಭಿವೃದ್ಧಿ ಚಟುವಟಿಕೆಗಳು ಕುಂಠಿತವಾಗದಂತೆ ನೋಡಿಕೊಳ್ಳುವುದು ಮತ್ತು ಮಾನವರ ಅಗತ್ಯ ಪೂರೈಕೆಗೆ ತೊಡಕಾಗದಂತೆ ಎಚ್ಚರವಹಿಸುವುದೂ ಅತ್ಯಗತ್ಯವಾಗಿದೆ. ಇದಕ್ಕಾಗಿಯೂ ಕೆಲವಾರು ಕ್ರಿಯಾಚೌಕಟ್ಟುಗಳನ್ನು ಅಳವಡಿಸಿಕೊಳ್ಳಲಾಗಿದೆ. ಇವುಗಳನ್ನು ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರಗಳು ಪಾಲಿಸಬೇಕಿದೆ.

ಜೀವವೈವಿಧ್ಯ ಸಂರಕ್ಷಣೆಯಲ್ಲಿ ನೆಲ, ಜಲ ಸಂರಕ್ಷಣೆಗೆ ಕ್ರಮ ತೆಗೆದುಕೊಳ್ಳುವುದೇನೋ ಸರಿ. ಆದರೆ, ಅದರಿಂದ ಜನರ ಆಹಾರ ಭದ್ರತೆಗೆ, ಪೌಷ್ಟಿಕಾಂಶ ಪೂರೈಕೆಗೆ ಯಾವುದೇ ತೊಡಕಾಗಬಾರದು. ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶ ಪೂರೈಕೆಗೆ ಧಕ್ಕೆಯಾದರೆ ಜನರ ಆರೋಗ್ಯವು ಹದಗೆಡುವ ಅಪಾಯವಿರುತ್ತದೆ. ಜತೆಗೆ ಜನರ ಜೀವನೋಪಾಯಕ್ಕೂ ಧಕ್ಕೆಯಾಗುತ್ತದೆ. ಈ ಕಾರಣದಿಂದಾಗಿ ಸುಸ್ಥಿರ ಅಭಿವೃದ್ಧಿಯ ಮಾದರಿಯನ್ನು ರೂಪಿಸುವುದು ಅತ್ಯವಶ್ಯಕ. ಹೀಗಾಗಿ ಬುಡಕಟ್ಟು ಸಮುದಾಯಗಳು ಪರಿಸರದ ಜತೆಗೆ ಇಟ್ಟುಕೊಂಡಿರುವಂತಹ ರಕ್ಷಣಾತ್ಮಕ ಪದ್ಧತಿಗಳ ಅಧ್ಯಯನ ನಡೆಸಬೇಕು ಮತ್ತು ಅವುಗಳನ್ನು ಅಳವಡಿಸಿಕೊಳ್ಳಬೇಕು. ಈ ಮೂಲಕ ಪರಿಸರ ಸಂರಕ್ಷಣೆ ಮತ್ತು ಜನರ ಜೀವನೋಪಾಯ ಎರಡನ್ನೂ ಸಮರ್ಥವಾಗಿ ನಿರ್ವಹಿಸಬೇಕು ಎಂಬುದು ಈ ಕ್ರಿಯಾ ಯೋಜನೆಯ ಉದ್ದೇಶ.

ಪ್ರತಿ ಪ್ರದೇಶದಲ್ಲೂ ಅಲ್ಲಿನ ಪರಿಸರ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ಕೃಷಿ ಪದ್ಧತಿ, ಮೀನುಗಾರಿಕೆ ಮತ್ತು ಅರಣ್ಯೀಕರಣ ಕ್ರಮಗಳನ್ನು ರೂಪಿಸಬೇಕು. ಏಕಸ್ವರೂಪದ ಪದ್ಧತಿಗಳು, ಎಲ್ಲಾ ಪರಿಸರಗಳಿಗೆ ಹೊಂದಿಕೆಯಾಗುವುದಿಲ್ಲ. ಕೆಲವು ಪರಿಸರ ವ್ಯವಸ್ಥೆಗೆ ಪೂರಕವಾಗುವ ಅಭಿವೃದ್ಧಿ ಪದ್ಧತಿಗಳು, ಬೇರೊಂದು ಪರಿಸರ ವ್ಯವಸ್ಥೆಗ ಮಾರಕವಾಗಬಹುದು. ಈ ಅಪಾಯವನ್ನು ತಪ್ಪಿಸುವ ಸಲುವಾಗಿ ಪ್ರತಿ ಜೀವವೈವಿಧ್ಯ ತಾಣಕ್ಕೂ ಪ್ರತ್ಯೇಕವಾದ ಅಭಿವೃದ್ಧಿ ಪದ್ಧತಿಗಳನ್ನು ರೂಪಿಸುವುದಕ್ಕೆ ಆದ್ಯತೆ ನೀಡಬೇಕು.

ಸುಸ್ಥಿರ ಅಭಿವೃದ್ಧಿಯ ಮಾದರಿ ಮತ್ತು ಪದ್ಧತಿಗಳ ಜ್ಞಾನವನ್ನು ವಿಶ್ವದ ಎಲ್ಲಾ ದೇಶಗಳ ಜತೆಗೆ ಹಂಚಿಕೊಳ್ಳಬೇಕು. ಇದರಿಂದ ಜೀವವೈವಿಧ್ಯದ ರಕ್ಷಣೆ, ಮಾನವನ ಜೀವನೋಪಾಯ ಮತ್ತು ಆರೋಗ್ಯದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಈ ಸ್ವರೂಪದ ಪರಸ್ಪರ ನೆರವಾಗುವಂತಹ ಮನಸ್ಥಿತಿಯು ಸುಸ್ಥಿರ ಅಭಿವೃದ್ಧಿ ಸಾಧಿಸಲು ನೆರವಾಗುತ್ತದೆ ಎಂದು ಜೀವವೈವಿಧ್ಯ ಸಂರಕ್ಷಣೆ ಕ್ರಿಯಾಯೋಜನೆಯಲ್ಲಿ ವಿವರಿಸಲಾಗಿದೆ.

ಜೀವವೈವಿಧ್ಯ ಸಂರಕ್ಷಣೆಗೆ ಮುಂದಾಗಬೇಕಿರುವುದು ಅಭಿವೃದ್ಧಿಶೀಲ ದೇಶಗಳೇ ಆಗಿವೆ. ಕ್ರಿಯಾಯೋಜನೆಯಲ್ಲಿ ವಿವರಿಸಿರುವಂತಹ ಗುರಿಗಳನ್ನು ಸಾಧಿಸಲು ಈ ದೇಶಗಳು ತಮ್ಮ ಅಭಿವೃದ್ಧಿಯನ್ನು ಸ್ವಲ್ಪಮಟ್ಟಿಗೆ ಬಲಿಕೊಡಬೇಕಾದ ಅನಿವಾರ್ಯತೆ ಇದೆ. ಅಭಿವೃದ್ಧಿಶೀಲ ದೇಶಗಳು ಮಾಡುವ ಇಂತಹ ತ್ಯಾಗ್ಯಕ್ಕೆ, ಅಭಿವೃದ್ಧಿ ಹೊಂದಿದ ದೇಶಗಳು ಪರಿಹಾರ ಒದಗಿಸಬೇಕಾಗುತ್ತದೆ. ಹವಾಮಾನ ವೈಪರೀತ್ಯ ನಿಯಂತ್ರಣ ಕ್ರಮಗಳಲ್ಲೂ ಅಭಿವೃದ್ಧಿ ಹೊಂದಿದ ದೇಶಗಳು, ಅಭಿವೃದ್ಧಿಶೀಲ ದೇಶಗಳಿಗೆ ಈ ಸ್ವರೂಪದ ಹಣಕಾಸು ನೆರವನ್ನು ನೀಡುತ್ತಿವೆ. ಜೀವವೈವಿಧ್ಯ ಸಂರಕ್ಷಣೆ ಕ್ರಿಯಾಯೋಜನೆಯಲ್ಲೂ ಅಭಿವೃದ್ಧಿಶೀಲ ದೇಶಗಳಿಗೆ ಇಂತಹ ನೆರವು ದೊರೆಯಲಿದೆ. ಭಾರತಕ್ಕೂ ಇಂತಹ ಅನುದಾನ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ರಸಗೊಬ್ಬರ, ಕೀಟನಾಶಕ ಬಳಕೆಗೆ ನಿರ್ಬಂಧ

ಕೃಷಿಯಲ್ಲಿ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯು ಜೀವವೈವಿಧ್ಯ ಸಂರಕ್ಷಣೆಯಲ್ಲಿ ದೊಡ್ಡ ತೊಡಕಾಗಿದೆ ಎಂಬುದು ಈ ಸಮ್ಮೇಳನದಲ್ಲಿ ಚರ್ಚೆಗೆ ಬಂದಿದ್ದ ಪ್ರಮುಖ ವಿಷಯಗಳಲ್ಲಿ ಒಂದು. ಹೀಗಾಗಿ ಕ್ರಿಯಾಯೋಜನೆಯಲ್ಲೂ ಈ ವಿಷಯವನ್ನು ಪ್ರಸ್ತಾಪಿಸಲಾಗಿತ್ತು.

ಅಭಿವೃದ್ಧಿಶೀಲ ದೇಶಗಳು ಕೃಷಿಯಲ್ಲಿ ಬಳಸುತ್ತಿರುವ ರಸಗೊಬ್ಬರ ಮತ್ತು ಕೀಟನಾಶಕಗಳಿಗೆ ಸಹಾಯಧನ ನೀಡುತ್ತಿವೆ. ಈ ಸಹಾಯಧನವನ್ನು ಕಡಿತಗೊಳಿಸಬೇಕು. ಆ ಮೂಲಕ ಕೃಷಿಯಲ್ಲಿ ರಸಗೊಬ್ಬರ ಮತ್ತು ಕೀಟನಾಶಕ ಬಳಕೆಯನ್ನು ತಗ್ಗಿಸಬೇಕು ಎಂದು ಜೀವವೈವಿಧ್ಯ ಸಂರಕ್ಷಣೆಯ ಕರಡು ಕ್ರಿಯಾಯೋಜನೆಯಲ್ಲಿ ಉಲ್ಲೇಖಿಸಲಾಗಿತ್ತು.

ಇದಕ್ಕೆ ಭಾರತವು ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ‘ರಸಗೊಬ್ಬರ ಮತ್ತು ಕೀಟನಾಶಕ ಬಳಕೆಯನ್ನು ತಗ್ಗಿಸುವುದು ಅಹಾರ ಪದಾರ್ಥಗಳ ಉತ್ಪಾದನೆಯನ್ನು ಬಾಧಿಸುತ್ತದೆ. ಇದರಿಂದ ಜನರ ಆಹಾರ ಭದ್ರತೆಗೆ ಧಕ್ಕೆಯಾಗುತ್ತದೆ. ಅಲ್ಲದೆ, ಜನರ ಜೀವನೋಪಾಯದ ಹಾದಿಯೂ ದುರ್ಗಮವಾಗುತ್ತದೆ. ಇಂತಹ ಷರತ್ತುಗಳು ಕಾರ್ಯಸಾಧುವಲ್ಲ. ಹೀಗಾಗಿ ರಸಗೊಬ್ಬರ ಮತ್ತು ಕೀಟನಾಶಕ ಬಳಕೆಗೆ ನೀಡಿರುವ ಗುರಿಯ ಮಟ್ಟವನ್ನು ತಗ್ಗಿಸಬೇಕು’ ಎಂದು ಭಾರತವು ಆಗ್ರಹಿಸಿತ್ತು. ದೀರ್ಘಾವಧಿಯ ಚರ್ಚೆಯ ನಂತರ ಈ ಷರತ್ತನ್ನು ಸಡಿಲಗೊಳಿಸಲಾಗಿದೆ. ಆದರೆ, ರಸಗೊಬ್ಬರ ಮತ್ತು ಕೀಟನಾಶಕ ಬಳಕೆಯನ್ನು ಸ್ವಲ್ಪಮಟ್ಟಿಗಾದರೂ ತಗ್ಗಿಸಬೇಕಾದ ಅನಿವಾರ್ಯತೆಗೆ ಅಭಿವೃದ್ಧಿಶೀಲ ದೇಶಗಳನ್ನು ಈ ಕ್ರಿಯಾಯೋಜನೆ ದೂಡುತ್ತದೆ.

ಅನುಷ್ಠಾನದ ತಂತ್ರಗಳು

*ಜೀವವೈವಿಧ್ಯ ಸಂರಕ್ಷಣೆ ದಿಸೆಯಲ್ಲಿ ತೆಗೆದುಕೊಳ್ಳುವ ವೈವಿಧ್ಯಮಯ ಕ್ರಮಗಳು ಸಮಗ್ರವಾಗಿರಬೇಕು. ನೀತಿಗಳು, ನಿಯಮಾವಳಿಗಳು, ಯೋಜನೆ, ಅಭಿವೃದ್ಧಿ ಪ್ರಕ್ರಿಯೆ, ಬಡತನ ನಿರ್ಮೂಲನೆ ಕಾರ್ಯತಂತ್ರಗಳು, ಸರ್ಕಾರದ ಎಲ್ಲ ಹಂತಗಳಲ್ಲಿ ತೆಗೆದುಕೊಳ್ಳುವ ಪರಿಸರ ಪರಿಣಾಮ ಮೌಲ್ಯಮಾಪನ ಚಟುವಟಿಕೆಗಳು ಹಾಗೂ ಆರ್ಥಿಕ ಕಾರ್ಯಕ್ರಮಗಳು ಜೀವವೈವಿಧ್ಯ ರಕ್ಷಣೆ ಉದ್ದೇಶಕ್ಕೆ ಹೊಂದಾಣಿಕೆಯಾಗುವಂತಿರಬೇಕು

*ಸರ್ಕಾರಿ ಹಾಗೂ ಖಾಸಗಿ ವಲಯದ ಸಣ್ಣ, ಮಧ್ಯಮ, ಬೃಹತ್ ಉದ್ದಿಮೆಗಳು ತಮ್ಮ ನಿಯಂತ್ರಣದಲ್ಲಿರುವ ಚಟುವಟಿಕೆಗಳ ಮೇಲೆ ನಿಗಾ ವಹಿಸಿ, ಜೀವವೈವಿಧ್ಯದ ಮೇಲೆ ಸ್ಥಳೀಯವಾಗಿ ಅಥವಾ ಜಾಗತಿಕವಾಗಿ ಪರಿಣಾಮ ಉಂಟಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ಮಾಡಬೇಕು. ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತಿದ್ದಲ್ಲಿ, ಅದನ್ನು ಅರ್ಧದಷ್ಟು ತಗ್ಗಿಸಲು ಕ್ರಮ ತೆಗೆದುಕೊಳ್ಳುವುದರ ಜೊತೆಗೆ ಜೀವವೈವಿಧ್ಯ ಸಂರಕ್ಷಣೆಗೆ ಪೂರಕವಾದ ಕ್ರಮಗಳನ್ನೂ ತೆಗೆದುಕೊಳ್ಳಬೇಕು. ಈ ಮೂಲಕ ಉದ್ಯಮಗಳಲ್ಲಿ ಜೀವವೈವಿಧ್ಯಕ್ಕೆ ಇರುವ ಅಪಾಯಗಳನ್ನು ತಪ್ಪಿಸಿ, ಉತ್ಪಾದನೆ, ಪೂರೈಕೆ ಸರಪಳಿ, ವಿಲೇವಾರಿಯಲ್ಲಿ ಸುಸ್ಥಿರತೆ ಸಾಧಿಸಬಹುದು

*ಜನರು ತಮ್ಮ ಸಂಸ್ಕೃತಿಯ ಅನುಸಾರ ತೊಡಗಿಕೊಳ್ಳುವ ಚಟುವಟಿಕೆಗಳು ಜವಾಬ್ದಾರಿಯುತ ಆಯ್ಕೆಗಳು ಆಗಿರುವಂತೆ ನೋಡಿಕೊಳ್ಳಬೇಕಿದೆ. ಸೂಕ್ತ ಮಾಹಿತಿಗಳೊಂದಿಗೆ, ಪರ್ಯಾಯ ಚಟುವಟಿಕೆಗಳ ಬಗ್ಗೆ ಅವರನ್ನು ಜಾಗೃತಗೊಳಿಸಬೇಕಿದೆ. ತ್ಯಾಜ್ಯ ಉತ್ಪಾದನೆಯನ್ನು ಅರ್ಧದಷ್ಟು ಕಡಿತಗೊಳಿಸುವುದು, ಆಹಾರ ಹಾಗೂ ಇತರೆ ಸಾಮಗ್ರಿಗಳ ಅತಿಯಾದ ಬಳಕೆಯ ಬಗ್ಗೆ ತಿಳಿವಳಿಕೆ ಮೂಡಿಸಬೇಕಿದೆ

*ಜೈವಿಕ ತಂತ್ರಜ್ಞಾನದಿಂದಾಗಿ ಜೀವವೈವಿಧ್ಯ, ಮಾನವನ ಆರೋಗ್ಯದ ಮೇಲೆ ಆಗಬಹುದಾದ ವ್ಯತಿರಿಕ್ತ ಪರಿಣಾಮಗಳನ್ನು ತಡೆಗಟ್ಟಲು ಹಾಗೂ ನಿಯಂತ್ರಿಸಲು ಎಲ್ಲ ದೇಶಗಳಲ್ಲಿ ಪೂರಕ ಕ್ರಮಗಳನ್ನು ತೆಗೆದುಕೊಳ್ಳಬೇಕು

*ಜೀವವೈವಿಧ್ಯಕ್ಕೆ ಹಾನಿಮಾಡಬಹುದಾದ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವುದನ್ನು ನ್ಯಾಯಯುತ ಮಾರ್ಗದಲ್ಲಿ ಸ್ಥಗಿತಗೊಳಿಸಬೇಕು ಅಥವಾ ನೀತಿಗಳಲ್ಲಿ ಸುಧಾರಣೆ ತರಬೇಕು. ಸಹಾಯಧನಗಳು ಸೇರಿದಂತೆ, ಪ್ರತೀ ವರ್ಷ ₹41 ಲಕ್ಷ ಕೋಟಿಯಷ್ಟು (500 ಬಿಲಿಯನ್ ಡಾಲರ್) ಮೊತ್ತದ ಪ್ರೋತ್ಸಾಹಧನವನ್ನು ಕಡಿತಗೊಳಿಸಬೇಕು

*ಸಾಮರ್ಥ್ಯ ವೃದ್ಧಿ, ತಂತ್ರಜ್ಞಾನ ವರ್ಗಾವಣೆ, ವೈಜ್ಞಾನಿಕ ಸಹಕಾರದ ಮೂಲಕ ಕ್ರಿಯಾಯೋಜನೆಯ ಗುರಿಗಳನ್ನು ತಲುಪಬಹುದು. ಇದಕ್ಕಾಗಿ ಹಣಕಾಸಿನ ಸಂಪನ್ಮೂಲವನ್ನು ವೃದ್ಧಿಸುವ ಅಗತ್ಯವಿದೆ. ಎಲ್ಲ ಮೂಲಗಳಿಂದ ₹16 ಲಕ್ಷ ಕೋಟಿ (200 ಬಿಲಿಯನ್ ಡಾಲರ್) ಹಣಕಾಸನ್ನು ಪ್ರತೀ ವರ್ಷ ಕ್ರೋಢೀಕರಿಸಬೇಕಿದೆ. ಈ ಪೈಕಿ ಸುಮಾರು ₹82 ಸಾವಿರ ಕೋಟಿಯಷ್ಟು ಹಣವನ್ನು (10 ಬಿಲಿಯನ್ ಡಾಲರ್) ಅಭಿವೃದ್ಧಿಶೀಲ ದೇಶಗಳಿಗೆ ಹರಿಸಬೇಕು. ರಾಷ್ಟ್ರೀಯ ಜೀವವೈವಿಧ್ಯ ಹಣಕಾಸು ಯೋಜನೆಗಾಗಿ ಖಾಸಗಿ ವಲಯದಿಂದ ಗರಿಷ್ಠ ನೆರವು ಪಡೆದುಕೊಳ್ಳಬೇಕು ಹಾಗೂ ಸ್ಥಳೀಯ ಸಂಪನ್ಮೂಲಗಳನ್ನು ಕ್ರೋಢೀಕರಿಸಬೇಕು

*ಜೀವವೈವಿಧ್ಯದ ಪರಿಣಾಮಕಾರಿ ನಿರ್ವಹಣೆಗೆ ಜನರಲ್ಲಿ ಜಾಗೃತಿ ಮೂಡಿಸುವುದು, ತಿಳಿವಳಿಕೆ ಮೂಡಿಸುವುದು ಹಾಗೂ ಸಂಶೋಧನೆಯ ಮಾರ್ಗಗಳು ಪರಿಣಾಮಕಾರಿ. ಜನಾಂಗೀಯ ಸಮುದಾಯಗಳು ಹಾಗೂ ಸ್ಥಳೀಯರಿಗೆ ಆದ್ಯತೆ ನೀಡಿ, ಅವರ ಜೊತೆ ಮುಕ್ತ ಸಮಾಲೋಚನೆಯೊಂದಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಜೀವವೈವಿಧ್ಯಕ್ಕೆ ಸಂಬಂಧಪಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ವೇಳೆ, ಜನಾಂಗೀಯ ಸಮುದಾಯದವರು ಹಾಗೂ ಸ್ಥಳೀಯ ನಿವಾಸಿಗಳ ಭಾಗವಹಿಸುವಿಕೆ ಕಡ್ಡಾಯ. ತಾವು ವಾಸಿಸುತ್ತಿರುವ ಪರಿಸರದ ಮೇಲೆ ಅವರು ಹೊಂದಿರುವ ಹಕ್ಕುಗಳು ಹಾಗೂ ಅಲ್ಲಿನ ಸಂಪನ್ಮೂಲಗಳನ್ನು ಗೌರವಿಸಬೇಕು

ಆಧಾರ: ವಿಶ್ವ ಸಂಸ್ಥೆಯ ಜೀವವೈವಿಧ್ಯ ಸಂರಕ್ಷಣಾ ಕ್ರಿಯಾಯೋಜನೆ, ಪಿಟಿಐ, ಎಎಫ್‌ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT