ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ | ದತ್ತಾಂಶ ಸೋರಿಕೆ: 2,600 ಕೋಟಿ ದಾಖಲೆಗಳು ಡಾರ್ಕ್‌ವೆಬ್‌ನಲ್ಲಿ ಬಿಕರಿಗೆ
ಆಳ–ಅಗಲ | ದತ್ತಾಂಶ ಸೋರಿಕೆ: 2,600 ಕೋಟಿ ದಾಖಲೆಗಳು ಡಾರ್ಕ್‌ವೆಬ್‌ನಲ್ಲಿ ಬಿಕರಿಗೆ
Published 25 ಜನವರಿ 2024, 2:00 IST
Last Updated 25 ಜನವರಿ 2024, 2:00 IST
ಅಕ್ಷರ ಗಾತ್ರ

ದತ್ತಾಂಶ ಸೋರಿಕೆ ಈ ಡಿಜಿಟಲ್‌ ಯುಗದ ಅಪಾಯಗಳಲ್ಲಿ ಒಂದು. ನಮ್ಮ ಕೈಯಲ್ಲಿರುವ ಫೋನ್‌ ಜಗತ್ತಿನ ಎಲ್ಲಾ ವಿಚಾರಗಳನ್ನು ನಮಗೆ ತಲುಪಿಸುವುದು ಮಾತ್ರವಲ್ಲ, ನಮ್ಮ ವೈಯಕ್ತಿಕ ವಿವರ, ಬ್ಯಾಂಕ್‌ ಖಾತೆ ಮಾಹಿತಿಗಳನ್ನೂ ಹ್ಯಾಕರ್‌ಗಳಿಗೆ ಒದಗಿಸುತ್ತವೆ. ನಾವು ಪ್ರತಿದಿನ ಬಳಸುವ ಅಪ್ಲಿಕೇಷನ್‌ಗಳು ನಮ್ಮೆಲ್ಲಾ ಮಾಹಿತಿಗಳನ್ನು ಕಲೆಹಾಕಿಕೊಂಡಿರುತ್ತವೆ. ಅಂತಹ ಮಾಹಿತಿಗಳನ್ನು ಕಳವು ಮಾಡಿ, ಈಚೆಗೆ ಡಾರ್ಕ್‌ವೆಬ್‌ನಲ್ಲಿ ಮಾರಾಟಕ್ಕೆ ಇಡಲಾಗಿದೆ. ಅಲ್ಲಿರುವ ಮಾಹಿತಿಯ ಗಾತ್ರ ಎಷ್ಟಿದೆ ಅಂದರೆ, ‘ಈವರೆಗಿನ ಎಲ್ಲಾ ದತ್ತಾಂಶ ಸೋರಿಕೆಗಳ ಮಹಾತಾಯಿ’ ಎಂದು ಬಣ್ಣಿಸಲಾಗಿದೆ.

ಫೋಬ್ಸ್‌ ಈಚೆಗೆ ಒಂದು ವರದಿ ಪ್ರಕಟಿಸಿತ್ತು. ‘ದತ್ತಾಂಶ ಸೋರಿಕೆಯ ಎಲ್ಲಾ ಪ್ರಕರಣಗಳ ಮಹಾತಾಯಿ’ ಎಂದು ಆ ವರದಿಯ ತಲೆಬರಹವನ್ನು ಕನ್ನಡಕ್ಕೆ ಸ್ಥೂಲವಾಗಿ ಅನುವಾದಿಸಬಹುದು. ಆ ವರದಿಗೆ ಹಾಗೆ ತಲೆಬರಹ ನೀಡಲೂ ಫೋಬ್ಸ್‌ ಬಳಿ ಬಲವಾದ ಕಾರಣವಿತ್ತು. ಈಚೆಗೆ ಹೀಗೆ ಸೋರಿಕೆಯಾಗಿದ್ದರಲ್ಲಿ ಇದ್ದ ಬಳಕೆದಾರರ ಹೆಸರು, ಪಾಸ್‌ವರ್ಡ್‌ಗಳು, ಪಿನ್‌ಪ್ಯಾಟ್ರನ್‌ಗಳು, ವೈಯಕ್ತಿಕ ವಿವರಗಳಂತಹ ದತ್ತಾಂಶಗಳ ಒಟ್ಟು ಸಂಖ್ಯೆ 2,600 ಕೋಟಿಯಷ್ಟು. (ಕೆಲವು ದಾಖಲೆಗಳು ಹಲವು ಪ್ರತಿಗಳಲ್ಲಿ ಇರುವ ಕಾರಣ ಇಷ್ಟು ದೊಡ್ಡ ಸಂಖ್ಯೆಯನ್ನು ತೋರಿಸಲಾಗಿದೆ) ಭಾರತದ ಸುದ್ದಿ ಮಾಧ್ಯಮಗಳು ಈ ಬಗ್ಗೆ ಸಂಕ್ಷಿಪ್ತ ವರದಿಗಳನ್ನು ಪ್ರಕಟಿಸಿ ಸುಮ್ಮನಾದವು. ಏಕೆಂದರೆ ಫೋಬ್ಸ್‌ ಪ್ರಕಟಿಸಿದ್ದ ವರದಿಯಲ್ಲಿ ಭಾರತೀಯರ ದತ್ತಾಂಶಗಳು ಸೋರಿಕೆಯಾದುದರ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ ವಾಸ್ತವ ಸಂಗತಿ ಬೇರೆಯದ್ದೇ ಆಗಿತ್ತು. ಲಕ್ಷಾಂತರ ಭಾರತೀಯರ ದತ್ತಾಂಶಗಳೂ ಇಲ್ಲಿ ಸೋರಿಕೆಯಾಗಿದ್ದವು.

ಈ ದತ್ತಾಂಶ ಸೋರಿಕೆಯನ್ನು ಪತ್ತೆ ಮಾಡಿದ್ದು, ಸೈಬರ್ ಭದ್ರತಾ ಸೇವಾ ಸಂಸ್ಥೆ ‘ಸೆಕ್ಯುರಿಟಿ ಡಿಸ್ಕವರಿ’. ‘ಡಾರ್ಕ್‌ವೆಬ್‌ನಲ್ಲಿ ಇಷ್ಟೊಂದು ದತ್ತಾಂಶವನ್ನು ಸೋರಿಕೆ ಮಾಡಲಾಗಿತ್ತು. ಇವೆಲ್ಲವೂ ಈಚೆಗೆ ಕದ್ದ ಮಾಹಿತಿಯಲ್ಲ. ಬದಲಿಗೆ ಈವರೆಗಿನ ಎಲ್ಲಾ ದತ್ತಾಂಶ ಸೋರಿಕೆಗಳ ಮಾಹಿತಿಗಳನ್ನು ಒಳಗೊಂಡ ಫೋಲ್ಡರ್‌ಗಳು ಡಾರ್ಕ್‌ವೆಬ್‌ಗೆ ಬಂದುಬಿದ್ದಿವೆ. ವಿಶ್ವದ ಎಲ್ಲಾ ಮೂಲೆಯಲ್ಲಿ ನಡೆದಿದ್ದ ದತ್ತಾಂಶ ಸೋರಿಕೆಗಳಲ್ಲಿನ ಮಾಹಿತಿಯನ್ನು ಪ್ರತ್ಯೇಕ ಫೋಲ್ಡರ್‌ಗಳಲ್ಲಿ ಸಂಗ್ರಹಿಸಿ ಇಡಲಾಗಿದೆ. ಇಂತಹ ಒಟ್ಟು 3,800 ಫೋಲ್ಡರ್‌ಗಳು ಇಲ್ಲಿವೆ. ಇದು ಹೊಸದಾಗಿ ಕದ್ದ ದತ್ತಾಂಶಗಳು ಅಲ್ಲವಾದರೂ, ಒಂದು ಬಳಕೆದಾರರ ಹೆಸರಿಗೆ ಸಂಬಂಧಿಸಿದ ಪಾಸ್‌ವರ್ಡ್‌ ಮತ್ತು ಪಿನ್‌ಗಳನ್ನು ಪರಸ್ಪರ ಹೊಂದಿಸಲಾಗಿದೆ. ಇದು ಹೆಚ್ಚು ಅಪಾಯಕಾರಿ ಅಂಶ’ ಎಂದು ಸೆಕ್ಯುರಿಟಿ ಡಿಸ್ಕವರಿ ಕಳವಳ ವ್ಯಕ್ತಪಡಿಸಿದೆ.

‘ಇಷ್ಟೊಂದು ದತ್ತಾಂಶಗಳನ್ನು ಒಂದೆಡೆ ಕ್ರೋಡೀಕರಿಸಿ, ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್‌ಗಳನ್ನು ಹೊಂದಿಸಿ ಇಡುವ ಅವಶ್ಯಕತೆ ಯಾರಿಗೆ ಇತ್ತು? ಯಾವ ಉದ್ದೇಶಕ್ಕಾಗಿ ಅವುಗಳನ್ನು ಹೀಗೆ ವಿಂಗಡಿಸಿ ಇಡಲಾಗಿತ್ತು? ಇವು ನಮ್ಮ ಮುಂದೆ ಇದ್ದ ದೊಡ್ಡ ಪ್ರಶ್ನೆಗಳು. ಇಷ್ಟು ದೊಡ್ಡ ಪ್ರಮಾಣದ ದತ್ತಾಂಶ ಸಂಸ್ಕರಣೆಯನ್ನು ಯಾವುದೋ ಒಬ್ಬ ವ್ಯಕ್ತಿ ಅಥವಾ ಒಂದು ಗುಂಪು ಮಾಡಲು ಸಾಧ್ಯವಿಲ್ಲ. ಬದಲಿಗೆ ಹೆಚ್ಚು ಬಂಡವಾಳ ಹೂಡಲು ಶಕ್ತವಾಗಿರುವ ದೊಡ್ಡ ಗುಂಪು ಅಥವಾ ಸರ್ಕಾರ ಹೀಗೆ ಮಾಡಿರಬಹುದು’ ಎಂದು ವರದಿಯಲ್ಲಿ ಶಂಕಿಸಲಾಗಿದೆ. 

‘ಆದರೆ ಅದಕ್ಕಿಂತಲೂ ಹೆಚ್ಚು ಅಪಾಯಕಾರಿಯಾದ ಅಂಶವೆಂದರೆ ಹೀಗೆ ಅತ್ಯಂತ ವ್ಯವಸ್ಥಿತವಾಗಿ ವಿಂಗಡಿಸಿ ಇಟ್ಟಿದ್ದ 3,800 ಫೋಲ್ಡರ್‌ಗಳನ್ನು, ಯಾರೋ ಬೇರೊಬ್ಬರು ಕದ್ದಿದ್ದಾರೆ ಮತ್ತು ಅವನ್ನು ಡಾರ್ಕ್‌ವೆಬ್‌ನಲ್ಲಿ ಮಾರಾಟಕ್ಕೆ ಇಟ್ಟಿದ್ದಾರೆ. ಇಲ್ಲಿರುವ ದತ್ತಾಂಶಗಳನ್ನು ಬಳಸಿಕೊಂಡು ನಿಮ್ಮ ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌, ಬ್ಯಾಂಕ್‌ ಖಾತೆಗಳಿಂದ ಹಣವನ್ನು ವರ್ಗಾವಣೆ ಮಾಡಿಕೊಳ್ಳಬಹುದು. ನಿಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಬೇರೊಬ್ಬರು ತೆರೆದು, ಪೋಸ್ಟ್‌ ಮಾಡಬಹುದು ಅಥವಾ ನಿಮ್ಮ ಖಾತೆಗಳಲ್ಲಿ ಇರುವ ವೈಯಕ್ತಿಕ ಚಿತ್ರಗಳನ್ನು ಕದಿಯಬಹುದು...’ ಈ ದತ್ತಾಂಶಗಳ ದುರ್ಬಳಕೆಯ ಸಾಧ್ಯತೆಯನ್ನು ಸೆಕ್ಯುರಿಟಿ ಡಿಸ್ಕವರಿ ವಿವರಿಸುವುದು ಹೀಗೆ.

ಬಳಕೆದಾರರ ಇಷ್ಟೆಲ್ಲಾ ಮಾಹಿತಿಯನ್ನು ಎಲ್ಲಿಂದ ಕದಿಯಲಾಗಿದೆ ಎಂಬುದರ ವಿವರವನ್ನೂ ವರದಿಯಲ್ಲಿ ನೀಡಲಾಗಿದೆ. ಜನರು ಪ್ರತಿದಿನ ಸಾಮಾನ್ಯವಾಗಿ ಬಳಸುವ ಆನ್‌ಲೈನ್‌ ಪ್ಲಾಟ್‌ಫಾರಂಗಳು, ಸ್ಮಾರ್ಟ್‌ಫೋನ್‌ ಅಪ್ಲಿಕೇಷನ್‌ಗಳ ಮೂಲಕ ಬಳಕೆದಾರರ ಮಾಹಿತಿಯನ್ನು ಕದಿಯಲಾಗಿದೆ. ಭಾರತೀಯರು ಸಾಮಾನ್ಯವಾಗಿ ಬಳಸುವ ಟ್ವಿಟರ್‌, ಫೇಸ್‌ಬುಕ್‌, ಲಿಂಕ್ಡ್‌ಇನ್‌, ಅಡೋಬಿ, ಕ್ಯಾನ್ವಾಗಳಿಂದ ಈ ಮಾಹಿತಿಗಳನ್ನು ಕದಿಯಲಾಗಿದೆ. ಈ ಸಂಬಂಧ ಟೆಕ್‌ ಕಂಪನಿಗಳು ಸ್ಪಷ್ಟೀಕರಣ ನೀಡಿವೆ. ಕೆಲವು ಕಂಪನಿಗಳು ತಮ್ಮ ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸಿಕೊಳ್ಳುವುದಾಗಿ ಹೇಳಿದ್ದರೆ, ಕೆಲವು ಕಂಪನಿಗಳು ಪ್ರತಿಕ್ರಿಯೆ ನೀಡಿಲ್ಲ. ಆದರೆ ‘ಈ ಪ್ಲಾಟ್‌ಫಾರ್ಂಗಳು ಮತ್ತು ಅಪ್ಲಿಕೇಷನ್‌ಗಳ ಬಳಕೆದಾರರು ತಮ್ಮ ಪಾಸ್‌ವರ್ಡ್‌ಗಳನ್ನು ತಕ್ಷಣವೇ ಬದಲಿಸುವುದು ಈಗಿರುವ ಏಕೈಕ ಪರಿಣಾಮಕಾರಿ ಪರಿಹಾರ’ ಎನ್ನುತ್ತದೆ ಸೆಕ್ಯುರಿಟಿ ಡಿಸ್ಕವರಿ.

ಕೋಟ್ಯಂತರ ಭಾರತೀಯರ ಖಾತೆಗಳಿಗೆ ಕನ್ನ

ಭಾರತೀಯರು ಇಂತಹ ದತ್ತಾಂಶ ಕಳವು ಮತ್ತು ದತ್ತಾಂಶ ಸೋರಿಕೆಗೆ ಗುರಿಯಾಗುತ್ತಲೇ ಬಂದಿದ್ದಾರೆ. ಈಗ ಸೋರಿಕೆಯಾಗಿರುವ 2,600 ಕೋಟಿ ದಾಖಲೆಗಳಲ್ಲಿ ಭಾರತೀಯರಿಗೆ ಸಂಬಂಧಿಸಿದ ದತ್ತಾಂಶಗಳೂ ಇವೆ. 2023ರಲ್ಲಿ ದತ್ತಾಂಶ ಕಳುವಿಗೆ ಅತಿಹೆಚ್ಚು ಗುರಿಯಾದವರಲ್ಲಿ ಭಾರತೀಯರು ನಾಲ್ಕನೇ ಸ್ಥಾನದಲ್ಲಿದ್ದಾರೆ. 2003ರಿಂದ ಈವರೆಗಿನ ಎಲ್ಲಾ ದತ್ತಾಂಶ ಸೋರಿಕೆಗಳಲ್ಲಿ ಗುರಿಯಾದವರಲ್ಲಿ ಭಾರತೀಯರು 10ನೇ ಸ್ಥಾನದಲ್ಲಿದ್ದಾರೆ.

ಭಾರತೀಯರ ದತ್ತಾಂಶಗಳು ಹೆಚ್ಚು ಸೋರಿಕೆಯಾಗಿದ್ದು ‘ಇಂಡಿಯಾಮಾರ್ಟ್‌_ಕಾಂ’ನಿಂದ ಎಂದು ಸೆಕ್ಯುರಿಟಿ ಡಿಸ್ಕವರಿ ಮತ್ತು ಸೈಬರ್‌ನ್ಯೂಸ್‌ ಪೋರ್ಟಲ್‌ನ ‘ಲೀಕ್‌ಚೆಕ್ಕರ್‌’ ಹೇಳುತ್ತದೆ. ಲೀಕ್‌ಚೆಕ್ಕರ್‌ನಲ್ಲಿ ಇ–ಮೇಲ್‌ ಮತ್ತು ಫೋನ್‌ ನಂಬರ್ ನಮೂದಿಸಿದರೆ, ಈಗ ಸೋರಿಕೆಯಾಗಿರುವ ದತ್ತಾಂಶಗಳಲ್ಲಿ ನಿಮ್ಮ ಮಾಹಿತಿ ಇದೆಯೇ ಎಂಬುದನ್ನು ತೋರಿಸುತ್ತದೆ. ಜತೆಗೆ ಯಾವ ಪ್ಲಾಟ್‌ಫಾರಂಗಳು ಮತ್ತು ಅಪ್ಲಿಕೇಷನ್‌ಗಳ ಮೂಲಕ ಅವು ಸೋರಿಕೆಯಾಗಿವೆ ಎಂಬುದರ ಮಾಹಿತಿಯನ್ನೂ ಅದು ನೀಡುತ್ತದೆ.ಭಾರತದಲ್ಲಿ ನೋಂದಣಿಯಾದ ಕೆಲವು ಫೋನ್‌ ಸಂಖ್ಯೆ ಮತ್ತು ಇ–ಮೇಲ್‌ ವಿಳಾಸಗಳನ್ನು ನಮೂದಿಸಿ ಹುಡುಕಿದಾಗ ಇಂಡಿಯಾಮಾರ್ಟ್‌, ಝೂಮ್‌ಕಾರ್‌, ಬಿಗ್‌ಬ್ಯಾಸ್ಕೆಟ್‌, ಲಿಂಕ್ಡ್‌ಇನ್‌, ಗಾಡಿ.ಕಾಂ, ಟ್ರೂಕಾಲರ್‌, ಕ್ಯಾನ್ವಾಗಳಿಂದ ದತ್ತಾಂಶಗಳನ್ನು ಕದಿಯಲಾಗಿದೆ ಎಂಬ ವಿವರ ದೊರೆಯಿತು. ಫೇಸ್‌ಬುಕ್‌ನಲ್ಲಿ ಅವತಾರ್‌ಗಳನ್ನು ಸೃಷ್ಟಿಸಿ ಎಂದು ಬಿತ್ತರವಾಗುವ ಲಿಂಕ್‌ಗಳಿಂದಲೂ ದತ್ತಾಂಶ ಕಳುವಾಗಿದೆ ಎಂದು ಲೀಕ್‌ಚೆಕ್ಕರ್ ಹೇಳುತ್ತದೆ.

29.3 ಕೋಟಿ: ಭಾರತೀಯರ ಖಾತೆಗಳಿಂದ ಕದ್ದು ಸೋರಿಕೆ ಮಾಡಲಾದ ದತ್ತಾಂಶಗಳ ಸಂಖ್ಯೆ
22,460: ಜಾಲತಾಣಗಳ ಮೂಲಕ ಭಾರತೀಯರ ದತ್ತಾಂಶಗಳನ್ನು ಕದಿಯಲಾಗಿದೆ

ಭದ್ರತೆಗಾಗಿ ಹೀಗೆ ಮಾಡಿ...

ಇಲ್ಲಿ ಸೋರಿಕೆಯಾಗಿರುವ ಎಲ್ಲಾ ದತ್ತಾಂಶಗಳು ಒಂದೋ ಇ–ಮೇಲ್‌ ಜತೆಗೆ ಜೋಡಣೆಯಾಗಿವೆ ಅಥವಾ ಫೋನ್‌ ನಂಬರ್‌ಗೆ ಜೋಡಣೆಯಾಗಿವೆ. ಹೀಗಾಗಿ ನಿಮ್ಮ ಇ–ಮೇಲ್‌ ಮತ್ತು ಫೋನ್‌ ನಂಬರ್‌ಗಳನ್ನು ಒಳಗೊಂಡಿರುವ ಅಪ್ಲಿಕೇಷನ್‌ಗಳನ್ನು ಅಪ್‌ಡೇಟ್‌ ಮಾಡಿ. ನಂತರ ಅವುಗಳ ಪಾಸ್‌ವರ್ಡ್‌ ಮತ್ತು ಪಿನ್‌ ಅನ್ನು ಬದಲಿಸಿ.

ಸೈಬರ್‌ನ್ಯೂಸ್‌ನ ‘Personal Data Leak Checker: Your Email & Data - Breached? | CyberNews’ ವಿಳಾಸದಲ್ಲಿ ದೊರೆಯುವ ಪೋರ್ಟಲ್‌ ಅನ್ನು ತೆರೆಯಿರಿ. ಅಲ್ಲಿ ಇ–ಮೇಲ್‌ ಅಥವಾ ಫೋನ್‌ ನಂಬರ್‌ ಅನ್ನು ನಮೂದಿಸಿ. ನಿಮ್ಮ ಖಾತೆಗಳಿಂದ ಎಷ್ಟು ಬಾರಿ ದತ್ತಾಂಶಗಳನ್ನು ಕದಿಯಲಾಗಿದೆ ಮತ್ತು ಯಾವ ಯಾವ ಅಪ್ಲಿಕೇಷನ್‌ಗಳಿಂದ ಕದಿಯಲಾಗಿದೆ ಎಂಬ ಮಾಹಿತಿ ದೊರೆಯಲಿದೆ. ನಿಮ್ಮ ಖಾತೆಗಳು ದತ್ತಾಂಶ ಕಳವಿಗೆ ಗುರಿಯಾಗದೇ ಇದ್ದರೆ, ಅದು ಸುರಕ್ಷಿತವಾಗಿದೆ ಎಂದೂ ಪೋರ್ಟಲ್‌ ತೋರಿಸುತ್ತದೆ.

ನಿಮ್ಮ ಖಾತೆಗಳಿಂದ ದತ್ತಾಂಶ ಕಳವಾಗಿದ್ದರೆ,

  • ಯಾವ ಅಪ್ಲಿಕೇಷನ್‌ಗಳಿಂದ ನಿಮ್ಮ ದತ್ತಾಂಶಗಳನ್ನು ಕದಿಯಲಾಗಿದೆ ಎಂದು ತೋರಿಸುತ್ತದೆಯೋ, ಆ ಅಪ್ಲಿಕೇಷನ್‌ ಅನ್ನು ಹೆಚ್ಚು ಬಳಸದೇ ಇದ್ದರೆ ಡಿಲೀಟ್‌ ಮಾಡಿ. ಆಗ್ಗಾಗ್ಗೆ ಬಳಸುತ್ತಿದ್ದರೆ, ಅವುಗಳಿಗೆ ನೀಡಿರುವ ಆ್ಯಪ್‌ ಪರ್ಮಿಷನ್‌ಗಳನ್ನು ತೆಗೆದುಹಾಕಿ. ಅಗತ್ಯವಿದ್ದಾಗಷ್ಟೇ ಪರ್ಮಿಷನ್‌ಗಳನ್ನು ನೀಡಿ

  • ಅತ್ಯಂತ ಶಕ್ತಿಯುತವಾದ ಪಾಸ್‌ವರ್ಡ್‌ಗಳನ್ನು ಬಳಸಿದರೆ, ದತ್ತಾಂಶ ಕಳವಿನ ಸಾಧ್ಯತೆ ಕಡಿಮೆ ಇರುತ್ತದೆ. ಅದಕ್ಕಾಗಿ ಪಾಸ್‌ವರ್ಡ್‌ ಮ್ಯಾನೇಜರ್‌ಗಳನ್ನು ಬಳಸಿ

  • ಪಾಸ್‌ವರ್ಡ್‌ ಮತ್ತು ಪಿನ್‌ ಪ್ಯಾಟ್ರನ್‌ಗಳನ್ನು ನಿಯಮಿತವಾಗಿ ಬದಲಿಸುತ್ತಿರಿ. ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ 

  • ಫೋನ್‌ ಅಪ್ಲಿಕೇಷನ್‌ಗಳಿಗೆ ಎರಡು ಹಂತದ ಪರಿಶೀಲನಾ ವ್ಯವಸ್ಥೆಯನ್ನು ಬಳಸಿ. ಇದರಿಂದ ಪಾಸ್‌ವರ್ಡ್‌ ಕಳವಾದರೂ, ಅದರ ದುರ್ಬಳಕೆ ಸಾಧ್ಯತೆಯನ್ನು ತಡೆಗಟ್ಟಬಹುದು

ಆಧಾರ: ಫೋಬ್ಸ್‌, ಸೆಕ್ಯುರಿಟಿ ಡಿಸ್ಕವರಿ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT