ರಾಜ್ಯ ಸರ್ಕಾರವು ಆಸ್ತಿ ನೋಂದಣಿಗೆ ಇ–ಖಾತಾ ಕಡ್ಡಾಯ ಮಾಡಿದೆ. ನಿವೇಶನ, ಮನೆ ಮಾರಾಟಕ್ಕೆ ಸಂಬಂಧಿಸಿದ ಅಕ್ರಮಗಳನ್ನು ಮತ್ತು ಜನ ಮೋಸಹೋಗುವುದನ್ನು ತಡೆಯಲು ಇದು ನಿಜಕ್ಕೂ ಉತ್ತಮ ಹಾಗೂ ದಿಟ್ಟ ಹೆಜ್ಜೆ. ಆದರೆ, ಸರ್ಕಾರದ ಆಶಯಕ್ಕೆ ತಕ್ಕಂತೆ ಇ ಖಾತಾ ವಿತರಿಸುವ ಕೆಲಸ ವೇಗವಾಗಿ, ಪಾರದರ್ಶಕವಾಗಿ ನಡೆಯುತ್ತಿಲ್ಲ. ಹಲವು ತೊಡಕುಗಳಿಂದಾಗಿ ಇ–ಖಾತಾ ನೀಡುವ ಪ್ರಕ್ರಿಯೆ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ
ವಳಂಬವಾಗುತ್ತಿದೆ: ಇ–ಖಾತಾಗೆ ಅರ್ಜಿ ಹಾಕಿ ತಿಂಗಳಾದರೂ ಮಾಡಿಕೊಡುವುದಿಲ್ಲ. ಏನೇನೋ ಸಬೂಬು ಹೇಳಿಕೊಂಡು ದಿನ ದೂಡುತ್ತಾರೆ. ಯಾವುದೇ ನಿವೇಶನವನ್ನು ನೋಂದಣಿ ಮಾಡಬೇಕಾದರೆ ಮತ್ತು ಬ್ಯಾಂಕ್‌ನಲ್ಲಿ ಸಾಲ ಪಡೆಯಲು ಇ–ಖಾತಾ ಅತ್ಯವಶ್ಯಕ. ಆದರೆ ಪಂಚಾಯಿತಿಗಳಲ್ಲಿ ಇ–ಖಾತಾ ಪಡೆಯಲು ಹಲವು ತಿಂಗಳು ಬೇಕುರಾಜೇಶ್, ಆಲೂರು, ಹಾಸನ ಜಿಲ್ಲೆ
ಪರವಾನಗಿ ಕೇಳುತ್ತಾರೆ: 20 ವರ್ಷಗಳ ಹಿಂದೆ ಕಟ್ಟಿದ ಮನೆಗೆ ಇ–ಖಾತಾ ಮಾಡಿಸುವಾಗ, ಮನೆ ಕಟ್ಟಲು ನೀಡಿದ ಪರವಾನಗಿ ಕೇಳುತ್ತಾರೆ. ಮನೆ ನಿರ್ಮಿಸುವಾಗ ಎಲ್ಲ ದಾಖಲೆ ಇಟ್ಟುಕೊಂಡಿರುವುದಿಲ್ಲ. ಈಗ ಎಂ.ಎ.ಆರ್–19ಗೆ ಅರ್ಜಿ ಸಲ್ಲಿಸಿದರೆ ತಿಂಗಳುಗಟ್ಟಲೆ ಕಚೇರಿಗೆ ಅಲೆಯಬೇಕು. ಯಾವ ಕೆಲಸವೂ ವೇಗವಾಗಿ ನಡೆಯುತ್ತಿಲ್ಲ. ಹೆಚ್ಚಾಗಿ ಹಿರಿಯ ನಾಗರಿಕರು ಕಚೇರಿಗಳಿಗೆ ಬರುತ್ತಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವವರನ್ನು ನಿಯೋಜಿಸಬೇಕುಶಿವಕುಮಾರ್, ತುಮಕೂರು
ತುರ್ತು ಮಾರಾಟಕ್ಕೆ ಅಡ್ಡಿ: ಮಾಲೀಕರು ಈಗ ಪಾಲಿಕೆಗೆ ಇ–ಖಾತೆ ಮಾಡಿಸಲು ಅರ್ಜಿ ಕೊಟ್ಟರೆ ಅವರು ಕೇಳಿದ ದಾಖಲೆಯನ್ನು ಪೂರೈಸಿ ಕೆಲಸ ಪೂರ್ಣಗೊಳ್ಳಲು ಕನಿಷ್ಠ ಒಂದು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಆಸ್ತಿ ಇದೆ. ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಕಳಿಸಲು ಇಲ್ಲವೇ ಮದುವೆ ಮತ್ತಿತರ ಕಾರಣಗಳಿಗೆ ಈಗ ತುರ್ತಾಗಿ ಆಸ್ತಿ ಮಾರಾಟ ಮಾಡಲು ಇ–ಖಾತಾದ ಸಮಸ್ಯೆ ಅಡ್ಡಿಯಾಗಿದೆಶ್ರೀಕಾಂತ್ ಕಾಮತ್, ಶಿವಮೊಗ್ಗ ಜಿಲ್ಲೆ ಲ್ಯಾಂಡ್ ಡೆವಲಪರ್ಸ್ ಅಸೋಸಿಯೇಷನ್ ಕಾರ್ಯದರ್ಶಿ
ವಿಳಂಬ ಧೋರಣೆ: ಇ–ಖಾತೆಗಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಜನರು ಪರದಾಡುವಂತಾಗಿದೆ. ಹಣಕ್ಕಾಗಿ ಅಧಿಕಾರಿಗಳು, ಸಿಬ್ಬಂದಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದೇ ವಿಚಾರಕ್ಕೆ ಲಂಚಕ್ಕೆ ಬೇಡಿಕೆ ಇಟ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಅಧಿಕಾರಿಯೊಬ್ಬರು ಅಮಾನತುಗೊಂಡಿದ್ದ ಪ್ರಕರಣವೂ ಈಚೆಗೆ ನಡೆದಿತ್ತು. ಲಂಚಕ್ಕೆ ಬೇಡಿಕೆ ಇಡುತ್ತಿರುವುದರಿಂದ ಜನರು ನಮಗೆ ನೆರವಿಗಾಗಿ ಕರೆ ಮಾಡುತ್ತಿದ್ದಾರೆ–ಎಸ್.ಟಿ.ವೀರೇಶ್, ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯ
ಬಡ, ಮಧ್ಯಮವರ್ಗದವರಿಗೆ ಸಮಸ್ಯೆ: ತುಂಡು ಭೂಮಿಯ ಮಾಲೀಕರೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೃಷಿ ಭೂಮಿಯನ್ನುಕೃಷಿಯೇತರ ಭೂಮಿ ಪರಿವರ್ತನೆಗೆ ಕನಿಷ್ಠ 3 ಗುಂಟೆ ಜಾಗದ ಅಗತ್ಯವಿದೆ. ಕೃಷಿಯೇತರ ಭೂಮಿಯಾಗಿ ಪರಿವರ್ತನೆ ಆಗದಿದ್ದರೆ ಇ–ಸ್ವತ್ತು, ಇ–ಖಾತಾ ಮಾಡಿಸಲು ಆಗದು. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಸಮಸ್ಯೆ ಎದುರಿಸುವಂತಾಗಿದೆಸತೀಶ ಬೇಳೂರಕರ, ಕಾರವಾರ
ಜನರಿಗೆ ತೊಂದರೆ :ಒಂದೂವರೆ ವರ್ಷದ ಹಿಂದೆ 18 ಸೆಂಟ್ ಜಾಗ ಖರೀದಿಸಿದ್ದೆ. ಅದರಲ್ಲಿ ವಿವಾದಕ್ಕೆ ಒಳಗಾಗಿದ್ದ 1.83 ಸೆಂಟ್ ಜಾಗವನ್ನು ನೋಂದಾಯಿಸಲು ಒಂದೂವರೆ ವರ್ಷದಿಂದ ಓಡಾಡುತ್ತಿದ್ದೇನೆ. ಇ–ಖಾತೆ, ಆ ಖಾತೆ ಎಂದೆಲ್ಲ ಹೇಳಿ ಸತಾಯಿಸುತ್ತಿದ್ದಾರೆ. ನನಗೆ ಅದು ಯಾವುದೂ ಗೊತ್ತಿಲ್ಲ. ವಕೀಲರ ಬಳಿ ದಾಖಲೆಗಳನ್ನು ಕೊಟ್ಟಿದ್ದೇನೆ. ಇನ್ನೂ ನನ್ನ ಕೆಲಸ ಆಗಿಲ್ಲ. ಸರ್ಕಾರದ ವ್ಯವಸ್ಥೆಯೊಂದು ಜನರಿಗೆ ಈ ರೀತಿ ತೊಂದರೆ ಕೊಟ್ಟರೆ ಹೇಗೆ?ರಾಬರ್ಟ್ ಡಿಸೋಜಾ, ಉಳ್ಳಾಲ, ದಕ್ಷಿಣ ಕನ್ನಡ ಜಿಲ್ಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.