ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Hit And Run ಭಾರಿ ಶಿಕ್ಷೆ; ಚಾಲಕನ ಸುರಕ್ಷತೆಯ ಹಕ್ಕು ಕಸಿದುಕೊಳ್ಳುವ 'ನ್ಯಾಯ'

Published : 3 ಜನವರಿ 2024, 0:30 IST
Last Updated : 3 ಜನವರಿ 2024, 0:30 IST
ಫಾಲೋ ಮಾಡಿ
Comments

ಅಪಘಾತ ಮಾಡಿ ಪರಾರಿಯಾಗುವ (ಹಿಟ್‌ ಅಂಡ್‌ ರನ್‌) ಚಾಲಕರಿಗೆ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಲು ನೂತನ ‘ಭಾರತೀಯ ನ್ಯಾಯ ಸಂಹಿತೆ’ಯಲ್ಲಿ ಅವಕಾಶ ಮಾಡಿಕೊಡಲಾಗಿದೆ. 10 ವರ್ಷಗಳವರೆಗೆ ಶಿಕ್ಷೆ ಮತ್ತು ಭಾರಿ ಪ್ರಮಾಣದ ದಂಡ ವಿಧಿಸುವುದು ನಮ್ಮ ಬದುಕನ್ನೇ ಕಸಿದುಕೊಳ್ಳುತ್ತದೆ ಎಂದು ಉತ್ತರ ಮತ್ತು ಮಧ್ಯ ಭಾರತದ ಟ್ರಕ್‌ ಚಾಲಕರು ಮುಷ್ಕರ ನಡೆಸುತ್ತಿದ್ದಾರೆ. ಕಠಿಣ ಶಿಕ್ಷೆ ಮತ್ತು ಭಾರಿ ದಂಡಕ್ಕಿಂತ ಕಡು ಕಳವಳಕಾರಿ ವಿಷಯವೊಂದು ಭಾರತೀಯ ನ್ಯಾಯ ಸಂಹಿತೆಯಲ್ಲಿದೆ. ನೂತನ ಸಂಹಿತೆಯಲ್ಲಿ ಅಪಘಾತ ಮಾಡಿ ಪರಾರಿಯಾಗುವ ಕೃತ್ಯದ ವ್ಯಾಖ್ಯಾನ ಬದಲಿಸಲಾಗಿದೆ. ಈ ವ್ಯಾಖ್ಯಾನವು ಮೋಟಾರು ವಾಹನ ಕಾಯ್ದೆ ಮತ್ತು ಸಂಚಾರ ನಿಯಂತ್ರಣ ಅಧಿನಿಯಮದಲ್ಲಿ ಇರುವ ವ್ಯಾಖ್ಯಾನಕ್ಕೆ ವ್ಯತಿರಿಕ್ತವಾಗಿದೆ.

–––––

ರಸ್ತೆ ಅಪಘಾತ ನಡೆದಾಗ ಗಾಯಾಳುಗಳಿಗೆ ವೈದ್ಯಕೀಯ ನೆರವು ಒದಗುವಂತೆ ಮಾಡುವುದು ಆಯಾ ವಾಹನದ ಚಾಲಕನ ಮೊದಲ ಕರ್ತವ್ಯ. ನಂತರ ಆತ ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ಒದಗಿಸಿ, ಪ್ರಕರಣ ದಾಖಲಿಸಬೇಕು. ಇದು ಅಪಘಾತ ಮಾಡಿದ ಚಾಲಕನ ಎರಡನೇ ಕರ್ತವ್ಯ. ಆದರೆ ಅಪಘಾತದಲ್ಲಿ ಆ ವಾಹನದ ಚಾಲಕನೂ ತೀವ್ರವಾಗಿ ಗಾಯಗೊಂಡಿದ್ದರೆ ಈ ಮೇಲಿನ ಎರಡೂ ಕರ್ತವ್ಯಗಳಿಗೆ ಅವನು ಬದ್ಧನಾಗಿರಬೇಕಿಲ್ಲ. ಅವುಗಳ ಉಲ್ಲಂಘನೆಯು ಅಪರಾಧವಾಗುವುದಿಲ್ಲ. ಇದಲ್ಲದೆ ಅಪಘಾತ ನಡೆದಾಗ ಜನ ಗುಂಪುಗೂಡಿ ಹಲ್ಲೆ ನಡೆಸುವ ಅಪಾಯದ ಸನ್ನಿವೇಶ ನಿರ್ಮಾಣವಾದರೆ, ಆ ಚಾಲಕ ಅಲ್ಲಿಂದ ಪರಾರಿಯಾಗಬಹುದು. ಆಗ ಅದು ಹಿಟ್‌ ಅಂಡ್‌ ರನ್‌ (ಅಪಘಾತ ಮಾಡಿ ಪರಾರಿ) ಎನಿಸಿಕೊಳ್ಳುವುದಿಲ್ಲ. ಚಾಲಕ ತನ್ನ ಜೀವ ಮತ್ತು ವಾಹನ ಉಳಿಸಿಕೊಳ್ಳಲು ಕಾನೂನು ಮಾಡಿಕೊಟ್ಟಿದ್ದ ಅವಕಾಶವಿದು. ಆದರೆ ಕೇಂದ್ರದ ಬಿಜೆಪಿ ಸರ್ಕಾರವು ಜಾರಿಗೆ ತರಲು ಹೊರಟಿರುವ ನೂತನ ‘ಭಾರತೀಯ ನ್ಯಾಯ ಸಂಹಿತೆ’ಯು ಇಂತಹ ಅವಕಾಶವನ್ನು ಕಸಿದುಕೊಳ್ಳುತ್ತದೆ.

ಮೋಟಾರು ವಾಹನ ಕಾಯ್ದೆಯ 134ನೇ ಸೆಕ್ಷನ್‌ನಲ್ಲಿ ‘ಅಪಘಾತ ನಡೆದಾಗ ವಾಹನ ಚಾಲಕನ ಕರ್ತವ್ಯ’ಗಳನ್ನು ವಿವರಿಸಲಾಗಿದೆ. ಅಪಘಾತ ನಡೆದಾಗ ಯಾವುದೇ ವ್ಯಕ್ತಿ ಮತ್ತು ಯಾವುದೇ ಸ್ವತ್ತಿಗೆ ಹಾನಿಯಾದರೆ, ಅಪಘಾತಕ್ಕೆ ಕಾರಣವಾದ ವಾಹನದ ಚಾಲಕನಿಗೆ ಈ ನಿಯಮಗಳು ಅನ್ವಯವಾಗುತ್ತವೆ. ಅಪಘಾತಕ್ಕೆ ಕಾರಣವಾದ ವಾಹನದ ಚಾಲಕನು ಗಾಯಾಳುಗಳಿಗೆ ವೈದ್ಯಕೀಯ ನೆರವು ದೊರೆಯುವಂತೆ ಮಾಡಬೇಕು ಮತ್ತು ಪೊಲೀಸರಿಗೆ ಆ ಬಗ್ಗೆ ಮಾಹಿತಿ ನೀಡಬೇಕು. ಈ ಎರಡೂ ಕರ್ತವ್ಯಗಳನ್ನು ನಿರ್ವಹಿಸದೇ ಇರುವುದು ಶಿಕ್ಷಾರ್ಹ ಮತ್ತು ದಂಡಾರ್ಹ ಅಪರಾಧವಾಗುತ್ತದೆ. 

ಈ ಕರ್ತವ್ಯಗಳಿಂದ ಚಾಲಕನಿಗೆ ವಿನಾಯಿತಿಯನ್ನೂ ಮೋಟಾರು ವಾಹನ ಕಾಯ್ದೆ ನೀಡುತ್ತದೆ. ಅಪಘಾತದ ಸ್ಥಳದಲ್ಲಿ ಜನ ಗುಂಪುಗೂಡಿ ವಾಹನಕ್ಕೆ ಹಾನಿ ಮಾಡುವ ಸಂದರ್ಭ ಎದುರಾದರೆ ಅಥವಾ ಚಾಲಕನ ಮೇಲೆ ಹಲ್ಲೆಗೆ ಮುಂದಾದಾರೆ ಆತ ಅಲ್ಲಿಂದ ತಪ್ಪಿಸಿಕೊಳ್ಳಬಹುದು. ಈ ಕಾಯ್ದೆಯ 134(ಎ) ಸೆಕ್ಷನ್‌ನಲ್ಲಿ ಇದನ್ನು ವಿವರಿಸಲಾಗಿದೆ. ಜತೆಗೆ ಮೇಲೆ ಹೇಳಿದ ಕಾರಣಗಳಿಂದಾಗಿ ಆತ ಪರಾರಿಯಾದರು, ಅಪಘಾತ ನಡೆದ 24 ಗಂಟೆಗಳ ಒಳಗೆ ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲೇಬೇಕು ಎಂದು 134(ಬಿ) ಸೆಕ್ಷನ್‌ ಹೇಳುತ್ತದೆ. 24 ಗಂಟೆಗಳ ಒಳಗೂ ಆತ ಮಾಹಿತಿ ನೀಡದೇ ಇದ್ದರೆ, ಆ ಕೃತ್ಯವನ್ನು ‘ಅಪಘಾತ ಮಾಡಿ ಪರಾರಿ’ ಎಂದು ಪರಿಗಣಿಸಲಾಗುತ್ತದೆ. ನಿರ್ಲಕ್ಷ್ಯ ಮತ್ತು ಅಜಾಗರೂಕ ಚಾಲನೆಯಿಂದ ನಡೆದ ಅಪಘಾತದಿಂದ ಅನ್ಯರ ಸಾವು ಸಂಭವಿಸಿದ್ದಾಗಲೂ ಚಾಲಕನಿಗೆ ಈ ಕರ್ತವ್ಯಗಳು ಮತ್ತು ಕರ್ತವ್ಯದಿಂದ ವಿನಾಯಿತಿ ಅನ್ವಯವಾಗುತ್ತದೆ. ಕೇಂದ್ರ ಸರ್ಕಾರದ ಸಂಚಾರ ನಿಯಂತ್ರಣ ಅಧಿನಿಯಮದಲ್ಲೂ ಇದನ್ನು ಸ್ಪಷ್ಟವಾಗಿ ವಿವರಿಸಲಾಗಿದೆ.

ಸಾರಿಗೆ ಮತ್ತು ಸಂಚಾರವು ಸಮವರ್ತಿ ಪಟ್ಟಿಯಲ್ಲಿ ಬರುವುದರಿಂದ ಕೇಂದ್ರ ಸರ್ಕಾರವು ಕಾಯ್ದೆ ಮಾಡಿದರೂ, ರಾಜ್ಯ ಸರ್ಕಾರಗಳೂ ಕಾಯ್ದೆ ಮಾಡಬೇಕಾಗುತ್ತದೆ. ಅಂತೆಯೇ ರಾಜ್ಯ ಸರ್ಕಾರಗಳು ಸಂಬಂಧಿಸಿದ ಕಾಯ್ದೆ–ನಿಯಮಗಳನ್ನು ಜಾರಿಯಲ್ಲಿಟ್ಟಿವೆ. ಕರ್ನಾಟಕ ಸಂಚಾರ ನಿಯಂತ್ರಣ ಅಧಿನಿಯಮದ 13ನೇ ಸೆಕ್ಷನ್‌ನಲ್ಲಿ ಇವನ್ನು ವಿವರಿಸಲಾಗಿದೆ.

ಈ ಕಾನೂನು ಮತ್ತು ನಿಯಮಗಳಲ್ಲಿ ಕೇಂದ್ರ ಸರ್ಕಾರವಾಗಲೀ ರಾಜ್ಯ ಸರ್ಕಾರಗಳಾಗಲೀ ಯಾವುದೇ ಬದಲಾವಣೆ ತಂದಿಲ್ಲ. ಆದರೆ, ಈ ಕಾನೂನುಗಳಿಗೆ ವ್ಯತಿರಿಕ್ತವಾಗಿರುವ ಅಂಶಗಳನ್ನು ಕೇಂದ್ರ ಸರ್ಕಾರವು ಭಾರತೀಯ ನ್ಯಾಯ ಸಂಹಿತೆಯಲ್ಲಿ ಸೇರಿಸಿದೆ. ‘ನಿರ್ಲಕ್ಷ್ಯದ ಮತ್ತು ಅಜಾಗರೂಕ ಚಾಲನೆಯ ಕಾರಣದಿಂದ ಸಂಭವಿಸಿದ ಅಪಘಾತದಲ್ಲಿ ಸಾವು ಸಂಭವಿಸಿದ್ದರೆ, ಆ ವಾಹನದ ಚಾಲಕನು ಅಪಘಾತ ನಡೆದ ಶೀಘ್ರದಲ್ಲೇ ಪೊಲೀಸರಿಗೆ ಅಥವಾ ಮ್ಯಾಜಿಸ್ಟ್ರೇಟ್‌ಗೆ ಮಾಹಿತಿ ನೀಡಬೇಕು. ಹಾಗೆ ಮಾಡದೇ ಇದ್ದರೆ ಆತನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ’ ಎಂದು ನ್ಯಾಯ ಸಂಹಿತೆಯಲ್ಲಿ ವಿವರಿಸಲಾಗಿದೆ. ಗುಂಪುಜನರ ಹಲ್ಲೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಚಾಲಕ ಪರಾರಿಯಾದರೂ ಅದಕ್ಕೆ, ಈ ಶಿಕ್ಷೆ ಅನ್ವಯವಾಗುತ್ತದೆ. ಅಪಘಾತ ನಡೆದ ನಂತರ ಎಂಥಹದ್ದೇ ಸ್ಥಿತಿ ಇದ್ದರೂ, ಚಾಲಕನು ಪೊಲೀಸರಿಗೆ ಮಾಹಿತಿ ನೀಡಲೇಬೇಕಾದ ಅನಿವಾರ್ಯತೆಯನ್ನು ನ್ಯಾಯ ಸಂಹಿತೆ ಸೃಷ್ಟಿಸುತ್ತದೆ.

ಹೀಗೆ ಚಾಲಕನ ಸುರಕ್ಷತೆಗಾಗಿ ಒಂದು ಕಾನೂನು ವಿನಾಯಿತಿ ನೀಡಿದರೆ, ಮತ್ತೊಂದು ಕಾನೂನು ಆ ವಿನಾಯಿತಿಗೆ ಅರ್ಥವೇ ಇಲ್ಲದಂತೆ ಮಾಡುತ್ತದೆ. ಇದು ಕೇಂದ್ರದ ಬಿಜೆಪಿ ಸರ್ಕಾರವು ತರಲು ಹೊರಟಿರುವ ಭಾರತೀಯ ನ್ಯಾಯ ಸಂಹಿತೆಯು ತಂದೊಡ್ಡುತ್ತಿರುವ ಒಂದು ಅಪಾಯಕಾರಿ ಬೆಳವಣಿಗೆ.

₹7 ಲಕ್ಷ ದಂಡ?

ಅಪಘಾತ ಮಾಡಿ ಪರಾರಿಯಾಗುವ ಚಾಲಕರಿಗೆ ₹7 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ ಎಂದು ಮುಷ್ಕರ ನಡೆಸುತ್ತಿರುವ ಟ್ರಕ್‌ ಚಾಲಕರು, ಅದನ್ನು ಬೆಂಬಲಿಸುತ್ತಿರುವ ಟ್ರಕ್‌ ಚಾಲಕರ ಮತ್ತು ಮಾಲೀಕರ ಸಂಘಟನೆಗಳು ಕಳವಳ ವ್ಯಕ್ತಪಡಿಸುತ್ತಿವೆ. ಆದರೆ ಭಾರತೀಯ ದಂಡ ಸಂಹಿತೆಯಲ್ಲಿ ಈ ಸ್ವರೂಪದ ಕೃತ್ಯಕ್ಕೆ ₹7 ಲಕ್ಷದವರೆಗೆ ದಂಡ ವಿಧಿಸಬಹುದು ಎಂಬ ಮಾಹಿತಿ ಇಲ್ಲ.

ಇಂತಹ ಕೃತ್ಯ ಎಸಗುವವರಿಗೆ 10 ವರ್ಷಗಳವರೆಗೆ ಜೈಲುಶಿಕ್ಷೆ ಮತ್ತು ದಂಡವನ್ನೂ ವಿಧಿಸಬಹುದು ಎಂದಷ್ಟೇ ನ್ಯಾಯ ಸಂಹಿತೆಯ 106(2)ನೇ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ.

ನ್ಯಾಯ ಸಂಹಿತೆಯ ಈ ಸೆಕ್ಷನ್‌ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕಾರಿಯೊಬ್ಬರು ‘ಪಿಟಿಐ’ಗೆ ಮಾಹಿತಿ ನೀಡಿದ್ದಾರೆ. ‘ಅಪಘಾತ ನಡೆಸಿ ಪೊಲೀಸರಿಗೆ ಆ ಬಗ್ಗೆ ಮಾಹಿತಿ ನೀಡದೇ ಪರಾರಿಯಾಗುವ ಚಾಲಕರಿಗೆ ಮಾತ್ರ 10 ವರ್ಷಗಳ ಜೈಲುಶಿಕ್ಷೆಯಾಗುತ್ತದೆ’ ಎಂದಷ್ಟೇ ಅವರು ಹೇಳಿದ್ದಾರೆ. ₹7 ಲಕ್ಷ ದಂಡ ವಿಧಿಸಬಹುದು ಎಂಬುದರ ಬಗ್ಗೆ ಅವರೂ ಮಾತನಾಡಿಲ್ಲ. ಟ್ರಕ್‌ ಚಾಲಕರು ಮತ್ತು ಮಾಲೀಕರು ₹7 ಲಕ್ಷ ದಂಡದ ಬಗ್ಗೆ ವ್ಯಕ್ತಪಡಿಸುತ್ತಿರುವ ಕಳವಳವನ್ನು, ಕೇಂದ್ರ ಸರ್ಕಾರವೇ ಸ್ಪಷ್ಟಗೊಳಿಸಬೇಕಿದೆ.

****

ವಿವರಣೆ, ಶಿಕ್ಷೆಯಲ್ಲಿ ಭಾರಿ ಬದಲಾವಣೆ

ಭಾರತೀಯ ದಂಡ ಸಂಹಿತೆ

ನಿರ್ಲಕ್ಷ್ಯದಿಂದ ಉಂಟುಮಾಡಿದ ಸಾವು: ಸೆಕ್ಷನ್‌ 304ಎ – ನಿರ್ಲಕ್ಷ್ಯ ಮತ್ತು ಅಜಾಗರೂಕ ಕೃತ್ಯದಿಂದ ಸಾವನ್ನು ಉಂಟು ಮಾಡುವ ವ್ಯಕ್ತಿಗೆ ಎರಡು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಬಹುದು ಅಥವಾ ದಂಡ ವಿಧಿಸಬಹುದು ಅಥವಾ ಶಿಕ್ಷೆ ಮತ್ತು ದಂಡ ಎರಡನ್ನೂ ವಿಧಿಸಬಹುದು

––––––

ಭಾರತೀಯ ನ್ಯಾಯ ಸಂಹಿತೆ

ನಿರ್ಲಕ್ಷ್ಯದಿಂದ ಉಂಟುಮಾಡಿದ ಸಾವು: ಸೆಕ್ಷನ್‌ 106(1)– ನಿರ್ಲಕ್ಷ್ಯ ಮತ್ತು ಅಜಾಗರೂಕ ಕೃತ್ಯದಿಂದ ಸಾವನ್ನು ಉಂಟು ಮಾಡುವ ವ್ಯಕ್ತಿಗೆ ಐದು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಬಹುದು ಮತ್ತು ದಂಡವನ್ನೂ ವಿಧಿಸಬಹುದು

ಸೆಕ್ಷನ್‌ 106(2)–ವ್ಯಕ್ತಿಯೊಬ್ಬ ನಿರ್ಲಕ್ಷ್ಯ ಮತ್ತು ಅಜಾಗರೂಕ ಕೃತ್ಯದಿಂದ ಸಾವನ್ನು ಉಂಟು ಮಾಡಿದ್ದು, ಆ ಬಗ್ಗೆ ಪೊಲೀಸರಿಗೆ ಅಥವಾ ಮ್ಯಾಜಿಸ್ಟ್ರೇಟ್‌ಗೆ ಶೀಘ್ರವೇ ಮಾಹಿತಿ ನೀಡದೆ ಪರಾರಿಯಾದರೆ ಆತನಿಗೆ 10 ವರ್ಷಗಳವರೆಗೆ ಜೈಲುಶಿಕ್ಷೆ ಮತ್ತು ದಂಡವನ್ನೂ ವಿಧಿಸಬಹುದು

––––

* ಭಾರತೀಯ ದಂಡ ಸಂಹಿತೆಯಲ್ಲಿ ಶಿಕ್ಷೆಯನ್ನು ಮಾತ್ರ ವಿವರಿಸಲಾಗಿತ್ತು. ಆದರೆ ಭಾರತೀಯ ನ್ಯಾಯ ಸಂಹಿತೆಯಲ್ಲಿ ಕೃತ್ಯವನ್ನೂ ವಿವರಿಸಲಾಗಿದೆ

* ನಿರ್ಲಕ್ಷ್ಯ ಮತ್ತು ಅಜಾಗರೂಕ ಕೃತ್ಯದಿಂದ ಸಾವನ್ನು ಉಂಟು ಮಾಡಿದ್ದಕ್ಕೆ ಭಾರತೀಯ ದಂಡ ಸಂಹಿತೆಯಲ್ಲಿ ಗರಿಷ್ಠ ಎರಡು ವರ್ಷಗಳ ಶಿಕ್ಷೆ ವಿಧಿಸಲಷ್ಟೇ ಅವಕಾಶವಿತ್ತು. ಆದರೆ ನ್ಯಾಯ ಸಂಹಿತೆಯಲ್ಲಿ ಇಂತಹ ಕೃತ್ಯಕ್ಕೆ ನೀಡಲಾಗುವ ಶಿಕ್ಷೆಯ ಪ್ರಮಾಣವನ್ನು ಐದು ವರ್ಷಗಳಿಗೆ ಏರಿಕೆ ಮಾಡಲಾಗಿದೆ. ಅಂತಹ ಕೃತ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೇ ಇದ್ದರೆ ಶಿಕ್ಷೆಯನ್ನು 10 ವರ್ಷಗಳವರೆಗೆ ಏರಿಕೆ ಮಾಡಲು ಅವಕಾಶವಿದೆ

–––

* ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆಯು ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದನ್ನೇ ಪ್ರಧಾನ ಉದ್ದೇಶವಾಗಿರಿಸಿಕೊಂಡಿತ್ತು. ಇದನ್ನು ನಾವು ಬದಲಿಸುತ್ತೇವೆ. ನ್ಯಾಯ ಒದಗಿಸುವುದು ಕಾನೂನಿನ ಮೂಲಮಂತ್ರವಾಗಬೇಕು. ಹೀಗಾಗಿಯೇ ದಂಡ ಸಂಹಿತೆಯನ್ನು ನ್ಯಾಯ ಸಂಹಿತೆಯನ್ನಾಗಿ ಬದಲಿಸುತ್ತಿದ್ದೇವೆ. ಶಿಕ್ಷೆಯ ಬದಲಿಗೆ ನ್ಯಾಯ ಮತ್ತು ಸುಧಾರಣೆಗೆ ಒತ್ತು ನೀಡಿದ್ದೇವೆ ಎಂದು ಭಾರತೀಯ ನ್ಯಾಯ ಸಂಹಿತೆಯನ್ನು ಆಗಸ್ಟ್‌ನಲ್ಲಿ/ ಲೋಕಸಭೆಯಲ್ಲಿ ಮಂಡಿಸಿದ್ದಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಆದರೆ ಅವರ ಹೇಳಿಕೆಗೆ ವ್ಯತಿರಿಕ್ತವಾಗಿ ನ್ಯಾಯ ಸಂಹಿತೆಯಲ್ಲಿ ಶಿಕ್ಷೆಯನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ.

ಟ್ರಕ್‌ ಚಾಲಕರಿಗಷ್ಟೇ ಅನ್ವಯವಲ್ಲ

ಭಾರತೀಯ ನ್ಯಾಯ ಸಂಹಿತೆಯಲ್ಲಿ ವಿವರಿಸಲಾಗಿರುವ ‘ಅಪಘಾತ ನಡೆಸಿ ಪರಾರಿ’ ಕೃತ್ಯಕ್ಕೆ ನೀಡಲಾಗುವ ಶಿಕ್ಷೆ ಮತ್ತು ದಂಡ ಪ್ರಮಾಣ ಟ್ರಕ್‌ ಚಾಲಕರಿಗಷ್ಟೇ ಅನ್ವಯವಾಗುವುದಿಲ್ಲ. ಸ್ಕೂಟರ್‌, ಮೋಟಾರು ಬೈಕ್‌, ರಿಕ್ಷಾ, ಟ್ರ್ಯಾಕ್ಟರ್‌, ಕಾರು, ಬಸ್ಸು ಚಾಲಕರಿಗೂ ಅನ್ವಯವಾಗುತ್ತದೆ. ಈ ಕಾನೂನಿನಲ್ಲಿ ಇರುವ ಅಪಾಯಗಳ ವಿರುದ್ಧ ಟ್ರಕ್‌ ಚಾಲಕರಷ್ಟೇ ದನಿ ಎತ್ತಿದ್ದಾರೆ.

ಮೋಟಾರು ವಾಹನ ಕಾಯ್ದೆಯ ಪ್ರಕಾರ ಚಾಲಕ ಎಂದರೆ ಕೇವಲ ಚಾಲಕ ಮಾತ್ರನಲ್ಲ. ಬದಲಿಗೆ ವಾಹನದ ಮಾಲೀಕನನ್ನೂ ‘ಚಾಲಕ’ ಎಂದೇ ಪರಿಗಣಿಸಲಾಗುತ್ತದೆ. ಅಪಘಾತ ನಡೆಸಿ ಪರಾರಿ ಪ್ರಕರಣದಲ್ಲಿ ಚಾಲಕ ಪತ್ತೆಯಾಗದೇ ಇದ್ದರೆ, ವಾಹನದ ಮಾಲೀಕನೇ ಆರೋಪಿಯಾಗುತ್ತಾನೆ.

ಆಧಾರ: ಮೋಟಾರು ವಾಹನ ಕಾಯ್ದೆ–2019, ಸಂಚಾರ ನಿಯಂತ್ರಣ ಅಧಿನಿಯಮ, ಭಾರತೀಯ ದಂಡ ಸಂಹಿತೆ, ಭಾರತೀಯ ನ್ಯಾಯ ಸಂಹಿತೆ, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT