ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ಆಳ–ಅಗಲ | ಮೀಸಲಾತಿ: ಶೇ 50ರ ಮಿತಿಗೆ ವಿನಾಯಿತಿಯೂ ಇದೆ...
ಆಳ–ಅಗಲ | ಮೀಸಲಾತಿ: ಶೇ 50ರ ಮಿತಿಗೆ ವಿನಾಯಿತಿಯೂ ಇದೆ...
Published 8 ನವೆಂಬರ್ 2023, 23:30 IST
Last Updated 8 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಈಗ ಇರುವ ಶೇ 50ರಷ್ಟು ಮೀಸಲಾತಿಯನ್ನು ಶೇ 65ಕ್ಕೆ ಏರಿಕೆ ಮಾಡುವ ಪ್ರಸ್ತಾವಕ್ಕೆ ಬಿಹಾರ ಸಚಿವ ಸಂಪುಟವು ಮಂಗಳವಾರವಷ್ಟೇ ಒಪ್ಪಿಗೆ ನೀಡಿದೆ. ಮೀಸಲಾತಿಗೆ ಶೇ 50ರ ಮಿತಿ ಇರಬೇಕು ಎಂಬ ಸುಪ್ರೀಂ ಕೋರ್ಟ್‌ ತೀರ್ಪಿನ ಉಲ್ಲಂಘನೆ ಇದು ಎಂಬ ಆಕ್ಷೇಪವೂ ಅದರ ಬೆನ್ನಲ್ಲೇ ವ್ಯಕ್ತವಾಗಿದೆ. ಮೀಸಲಾತಿಗೆ ಇರುವ ಮಿತಿಗೆ ಸಕಾರಣವಾದ ವಿನಾಯಿತಿಯೂ ಇದೆ ಎನ್ನುತ್ತದೆ ಸುಪ್ರೀಂ ಕೋರ್ಟ್‌ ತೀರ್ಪು. ಈಗ ಜಾತಿಗಣತಿ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ದತ್ತಾಂಶಗಳ ಆಧಾರದಲ್ಲಿ ಮೀಸಲಾತಿ ಹೆಚ್ಚಳಕ್ಕೆ ಮುಂದಾಗಿರುವ ಬಿಹಾರ ಸರ್ಕಾರದ ನಡೆ ಹೆಚ್ಚು ಮಹತ್ವ ಪಡೆದುಕೊಂಡಿದೆ.

*****

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ನೇಮಕಾತಿಯಲ್ಲಿ ನೀಡುವ ಮೀಸಲಾತಿಗೆ ಶೇ 50ರಷ್ಟು ಮಿತಿ ಹಾಕಬೇಕು ಎಂಬುದು ಇಂದಿರಾ ಸಹಾನಿ ಪ್ರಕರಣ/ಮಂಡಲ ಆಯೋಗ ಪ್ರಕರಣದಲ್ಲಿ 9 ಸದಸ್ಯರ ಸಂವಿಧಾನ ಪೀಠದ ಮುಂದೆ ಇದ್ದ ಪ್ರಶ್ನೆಗಳಲ್ಲಿ ಒಂದು. ಈ ಸಮುದಾಯಗಳಿಗೆ ನೀಡುವ ಮೀಸಲಾತಿಯು ಶೇ 50ರ ಮಿತಿಯನ್ನು ದಾಟಬಾರದು ಎಂದು ಈ ಪೀಠವು 6:3 ಬಹುಮತದ ತೀರ್ಪು ನೀಡಿತ್ತು. ಈ ಸಮುದಾಯಗಳಿಗೆ ನೀಡಲಾಗುತ್ತಿರುವ ಮೀಸಲಾತಿಯನ್ನು ಹೆಚ್ಚಿಸುವ ಪ್ರಸ್ತಾವ ಬಂದಾಗಲೆಲ್ಲಾ ಈ ಪ್ರಕರಣದ ತೀರ್ಪನ್ನು ಉದಾಹರಿಸಲಾಗುತ್ತದೆ ಮತ್ತು ಅದನ್ನೇ ಮುಂದು ಮಾಡಿ, ಪ್ರಸ್ತಾವವನ್ನು ತಿರಸ್ಕರಿಸಲಾಗುತ್ತದೆ. ಆದರೆ, ‘ಮೀಸಲಾತಿಯು ಶೇ 50ರ ಮಿತಿಯನ್ನು ಮೀರುವಂತಿಲ್ಲ ಎಂಬುದು ಒಂದು ನಿಯಮವಾದರೂ, ಅದನ್ನು ಮೀರಬಾರದು ಎಂದೇನಿಲ್ಲ’ ಎಂದೂ ಇಂದಿರಾ ಸಹಾನಿ ಪ್ರಕರಣದ ಬಹುಮತದ ತೀರ್ಪಿನಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ.

ಈ ತೀರ್ಪು ನೀಡಿದ 9 ನ್ಯಾಯಮೂರ್ತಿಗಳಲ್ಲಿ ಒಬ್ಬರು ಮಾತ್ರ, ಮೀಸಲಾತಿಗೆ ಶೇ 50ರಷ್ಟು ಮಿತಿ ಇರಬಾರದು ಎಂದು ಹೇಳಿದ್ದರು. ಸಂವಿಧಾನದ 16(1) ಮತ್ತು 16(4) ವಿಧಿಗಳ ಅಡಿಯಲ್ಲಿ ನೀಡಲಾಗುವ ಮೀಸಲಾತಿಗೆ ಎಲ್ಲಿಯೂ ಗರಿಷ್ಠ ಮಿತಿಯನ್ನು ಹೇರಿಲ್ಲ. ಹೀಗಾಗಿ ಶೇ 50ರಷ್ಟು ಮಿತಿ ಹೇರಬೇಕು ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಒಬ್ಬರು ನ್ಯಾಯಮೂರ್ತಿಗಳು ಹೇಳಿದ್ದರು.

ಉಳಿದ ಎಂಟು ನ್ಯಾಯಮೂರ್ತಿಗಳು ಮೀಸಲಾತಿಗೆ ಶೇ 50ರ ಮಿತಿ ಬೇಕು ಎಂದು ತೀರ್ಪು ನೀಡಿದ್ದರು. ಆದರೆ, ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ನೀಡಲಾಗುವ ಮೀಸಲಾತಿಯ ಪ್ರಮಾಣ ಶೇ 50ರ ಮಿತಿ ಮೀರಬಾರದು. ಈ ದೇಶ ಮತ್ತು ಇಲ್ಲಿನ ಜನರ ಅಗಾಧ ವೈವಿಧ್ಯದ ಕಾರಣದಿಂದ ಒದಗಿಬರುವ ಅಸಾಧಾರಣ ಸನ್ನಿವೇಶಗಳಲ್ಲಿ, ಶೇ 50ರ ಮಿತಿಯನ್ನು ಮೀರಬೇಕಾದ ಸ್ಥಿತಿಯನ್ನು ತೆಗೆದುಹಾಕುವಂತಿಲ್ಲ. ಅಂತಹ ಅಸಾಧಾರಣ ಸ್ಥಿತಿಗಳನ್ನು ಎದುರಿಸುವಾಗ ಶೇ 50 ಮಿತಿಯನ್ನು ಸಡಿಲಿಸುವುದು ಅನಿವಾರ್ಯವಾಗುತ್ತದೆ. ಆದರೆ ಹಾಗೆ ಮಾಡುವಾಗ ಅತ್ಯಂತ ಎಚ್ಚರಿಕೆಯನ್ನು ವಹಿಸಬೇಕು’ ಎಂಬುದು ಈ ತೀರ್ಪಿನ ಬಹುಮತದ ಅಭಿಪ್ರಾಯವಾಗಿತ್ತು. 

ಸುಪ್ರೀಂ ಕೋರ್ಟ್‌

ಸುಪ್ರೀಂ ಕೋರ್ಟ್‌

‘ಅತಿ ಅಸಾಧಾರಣ ಸನ್ನಿವೇಶಗಳಲ್ಲಿ ಈ ಮಿತಿಯನ್ನು ಮೀರಬಹುದು. ಆದರೆ ಶೇ 50ಕ್ಕಿಂತಲೂ ಹೆಚ್ಚಿನ ಪ್ರಮಾಣದ ಮೀಸಲಾತಿಯನ್ನು ಯಾವ ಕಾರಣಕ್ಕೆ ನೀಡಲಾಗುತ್ತಿದೆ, ಮತ್ತು ಹೆಚ್ಚಿನ ಮೀಸಲಾತಿ ಏಕೆ ಅಗತ್ಯ ಎಂಬುದನ್ನು ಅತ್ಯಂತ ನಿಖರವಾಗಿ ಸಮರ್ಥಿಸಿಕೊಳ್ಳಬೇಕು. ಜತೆಗೆ ಸರ್ಕಾರಿ ಉದ್ಯೋಗದಲ್ಲಿ ಯಾವುದೋ ಒಂದು ಸಮುದಾಯದ ಪ್ರತಿನಿಧಿಗಳ ಸಂಖ್ಯೆ ಕಡಿಮೆ ಇದೆ ಎಂಬುದಷ್ಟೇ ಮೀಸಲಾತಿ ಹೆಚ್ಚಳಕ್ಕೆ ಕಾರಣವಾಗಬಾರದು. ಬದಲಿಗೆ ಸರ್ಕಾರದ ವಿವಿಧ ಶ್ರೇಣಿಯ ಹುದ್ದೆಗಳಲ್ಲಿ ಆ ಸಮುದಾಯದ ಪ್ರಾತಿನಿಧ್ಯ ಎಷ್ಟಿದೆ ಎಂಬುದನ್ನೂ ಪರಿಗಣಿಸಬೇಕು. ಶೇ 50ರ ಮಿತಿ ಎಂಬುದು ಒಂದು ವರ್ಷದಲ್ಲಿ ನಡೆಯುವ ಒಟ್ಟು ನೇಮಕಾತಿಗೆ ಅನ್ವಯವಾಗಬೇಕು’ ಎಂದು ತೀರ್ಪಿನಲ್ಲಿ ವಿವರಿಸಲಾಗಿತ್ತು.

ಇಂದಿರಾ ಸಹಾನಿ ಪ್ರಕರಣದ ತೀರ್ಪಿನಲ್ಲಿ ಮೀಸಲಾತಿಗೆ ಶೇ 50ರಷ್ಟು ಮಿತಿ ಇರಬೇಕು ಎಂದು ಹೇಳಿರುವುದು ಎಷ್ಟು ಸತ್ಯವೋ, ಆ ಮಿತಿಯನ್ನು ಮೀರಲು ಅದೇ ತೀರ್ಪಿನಲ್ಲಿ ಅವಕಾಶ ಮಾಡಿಕೊಟ್ಟಿರುವುದೂ ಅಷ್ಟೇ ಸತ್ಯ. ಆದರೆ ಶೇ 50ಕ್ಕಿಂತಲೂ ಹೆಚ್ಚು ಮೀಸಲಾತಿಯನ್ನು ಏಕೆ ನೀಡಬೇಕು ಎಂಬುದನ್ನು ರಾಜ್ಯ ಸರ್ಕಾರಗಳು ದತ್ತಾಂಶಗಳ ಆಧಾರದಲ್ಲಿ ಸಮರ್ಥಿಸಿಕೊಳ್ಳಬೇಕು. ಸಕಾರಣವನ್ನು ನೀಡಿ ಮೀಸಲಾತಿ ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳಬೇಕು. ಈಗ ಬಿಹಾರವು ಜಾತಿ ಗಣತಿ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಆಧಾರದಲ್ಲಿ ಮೀಸಲಾತಿ ಹೆಚ್ಚಳವನ್ನು ಪ್ರಸ್ತಾಪಿಸಿದೆ. ಜತೆಗೆ ಬಿಹಾರ ಸಚಿವ ಸಂಪುಟವೂ ಅದಕ್ಕೆ ಒಪ್ಪಿಗೆ ನೀಡಿದೆ. ಒಂದೊಮ್ಮೆ ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾದರೆ, ಸುಪ್ರೀಂ ಕೋರ್ಟ್‌ ನೀಡುವ ತೀರ್ಪು ದೇಶದ ರಾಜಕಾರಣದಲ್ಲಿ ಮತ್ತು ಸಾಮಾಜಿಕ ನ್ಯಾಯದಲ್ಲಿ ಮಹತ್ವದ ಮೈಲುಗಲ್ಲಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಡಬ್ಲ್ಯುಎಸ್‌ಗೆ ಅನ್ವಯವಾಗದ ಮಿತಿ

ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್‌) ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಶೇ 10ರಷ್ಟು ಮೀಸಲಾತಿಯನ್ನು 2019ರಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿತ್ತು. ಅದರಿಂದ ರಾಜ್ಯಗಳಲ್ಲಿನ ಮೀಸಲಾತಿಯ ಒಟ್ಟು ಪ್ರಮಾಣ ಶೇ 60ಕ್ಕೆ ಏರಿಕೆಯಾಗಿತ್ತು. ಮೀಸಲಾತಿ ಪ್ರಮಾಣ ಶೇ 50ರ ಮಿತಿ ಮೀರುವಂತಿಲ್ಲ ಎಂಬ ತೀರ್ಪನ್ನು ಇದು ಉಲ್ಲಂಘಿಸುತ್ತದೆ ಎಂದು ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹಲವು ಅರ್ಜಿಗಳನ್ನು ಹಾಕಲಾಗಿತ್ತು. 

ಇಂದಿರಾ ಸಹಾನಿ ಪ್ರಕರಣದ ತೀರ್ಪಿನಲ್ಲಿ ಸಂವಿಧಾನ ಪೀಠವು, ‘ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ನೀಡುವ ಮೀಸಲಾತಿಯ ಒಟ್ಟು ಪ್ರಮಾಣ ಶೇ 50ರಷ್ಟನ್ನು ಮೀರಬಾರದು’ ಎಂದು ಹೇಳಿತ್ತು. ಹೀಗಾಗಿ ಇಡಬ್ಲ್ಯುಎಸ್‌ ಮೀಸಲಾತಿಗೆ ಈ ಮಿತಿ ಅನ್ವಯವಾಗುವುದಿಲ್ಲ ಎಂದೂ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಲಾಗಿತ್ತು. ಆರ್ಥಿಕವಾಗಿ ದುರ್ಬಲವಾದವರಿಗೆ ಮೀಸಲಾತಿಯ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದ ಕಾರಣಕ್ಕೆ, ಮೀಸಲಾತಿಯನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿತ್ತು. ಜತೆಗೆ ಶೇ 50ರಷ್ಟು ಮೀಸಲಾತಿಯ ಮಿತಿಯನ್ನು ಸಡಿಲ ಮಾಡಬಹುದು ಎಂದೂ ಹೇಳಿತ್ತು.

ವಿಫಲ ಯತ್ನಗಳು

ಶೇ 50ಕ್ಕಿಂತಲೂ ಹೆಚ್ಚಿನ ಮೀಸಲಾತಿ ನೀಡಲು ಹಲವು ರಾಜ್ಯ ಸರ್ಕಾರಗಳು ಯತ್ನಿಸಿವೆಯಾದರೂ, ವಿವಿಧ ಕಾರಣಗಳಿಂದಾಗಿ ಅವು ಅನುಷ್ಠಾನವಾಗಿಲ್ಲ. ಅಂತಹ ಕೆಲವು ಯತ್ನಗಳ ವಿವರ ಇಲ್ಲಿದೆ.

ಛತ್ತೀಸಗಢ

ಭೂಪೇಶ್‌ ಬಘೆಲ್‌ ನೇತೃತ್ವದ ರಾಜ್ಯ ಸರ್ಕಾರವು ಶಿಕ್ಷಣ ಮತ್ತು ನೇಮಕಾತಿಯಲ್ಲಿ ಶೇ 76ರಷ್ಟು ಮೀಸಲಾತಿ ನೀಡುವ ಸಂಬಂಧ ಎರಡು ತಿದ್ದುಪಡಿ ಮಸೂದೆಯನ್ನು 2022ರ ಡಿಸೆಂಬರ್‌ನಲ್ಲಿ ಮಂಡಿಸಿತ್ತು. ಇದು ದೇಶದಲ್ಲೇ ಅತಿ ಹೆಚ್ಚಿನ ಪ್ರಮಾಣದ ಮೀಸಲಾತಿ ನೀಡುವ ಮಸೂದೆಯಾಗಿತ್ತು. ಪರಿಶಿಷ್ಟ ಪಂಗಡಕ್ಕೆ ಶೇ 32, ಇತರೆ ಹಿಂದುಳಿದ ವರ್ಗಗಳಿಗೆ ಶೇ 27, ಪರಿಶಿಷ್ಟ ಜಾತಿಗೆ ಶೇ 13 ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇ 4ರಷ್ಟು ಮೀಸಲಾತಿಯನ್ನು ಮಸೂದೆಯಲ್ಲಿ ನೀಡಲಾಗಿತ್ತು. ಈ ಮಸೂದೆಯನ್ನು ರಾಜ್ಯಪಾಲೆ ಅನುಸೂಯ ಉಯಿಕೆ ಅವರಿಗೆ ಕಳುಹಿಸಲಾಗಿದೆ. ಆದರೆ, ಇದಕ್ಕೆ ಅವರು ಅಂಕಿತ ಹಾಕಿಲ್ಲ. ಈ ಕುರಿತು ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ಮಧ್ಯೆ ತಿಕ್ಕಾಟ ನಡೆಯುತ್ತಿದೆ.

ಈ ಹಿಂದೆ, 2012ರಲ್ಲಿ ರಮಣ್ ಸಿಂಗ್‌ ನೇತೃತ್ವದ ಸರ್ಕಾರದಲ್ಲಿಯೂ ಶೇ 50ರಷ್ಟು ಮೀಸಲಾತಿ ಮಿತಿಯನ್ನು ಮೀರಿ, ಶೇ 58ರಷ್ಟು ಮೀಸಲಾತಿ ನೀಡುವ ಮಸೂದೆಗೆ ವಿಧಾನಸಭೆಯ ಅನುಮೋದನೆ ದೊರೆತಿತ್ತು. ಇದಕ್ಕೆ ರಾಜ್ಯಪಾಲರ ಅಂಕಿತವೂ ದೊರೆತಿತ್ತು. 2022ರ ಸೆಪ್ಟೆಂಬರ್‌ವರೆಗೂ ಶೇ 58ರಷ್ಟು ಮೀಸಲಾತಿಯ ಕಾನೂನು ರಾಜ್ಯದಲ್ಲಿ ಜಾರಿಯಲ್ಲಿತ್ತು. 2022ರ ಸೆಪ್ಟೆಂಬರ್‌ನಲ್ಲಿ ಛತ್ತೀಸಗಢ ಹೈಕೋರ್ಟ್‌ ಈ ಕಾನೂನಿಗೆ ತಡೆ ನೀಡಿತ್ತು. ಈ ಕಾನೂನನ್ನು ಅಸಾಂವಿಧಾನಿಕ ಎಂದೂ ಹೇಳಿತ್ತು. ನಂತರ ರಾಜ್ಯ ಸರ್ಕಾರವು ಈ ಬಗ್ಗೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತು. ಹೈಕೋರ್ಟ್‌ನ ಆದೇಶಕ್ಕೆ 2023ರ ಮೇ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

ಮಹಾರಾಷ್ಟ್ರ

2001ರ ರಾಜ್ಯ ಮೀಸಲಾತಿ ಕಾಯ್ದೆಯ ಅನ್ವಯ ನೇಮಕಾತಿ ಮತ್ತು ಶಿಕ್ಷಣದಲ್ಲಿ ಶೇ 52ರಷ್ಟು ಮೀಸಲಾತಿ ಜಾರಿಯಲ್ಲಿದೆ. ಪರಿಶಿಷ್ಟ ಜಾತಿಗೆ ಶೇ 13, ಪರಿಶಿಷ್ಟ ಪಂಗಡಕ್ಕೆ ಶೇ 7, ಇತರೆ ಹಿಂದುಳಿದ ವರ್ಗಗಳಿಗೆ ಶೇ 19, ಅತಿ ಹಿಂದುಳಿದ ವರ್ಗಗಳಿಗೆ (ವಿಮುಕ್ತ ಜಾತಿ ಮತ್ತು ಅಲೆಮಾರಿ ಬುಡಕಟ್ಟುಗಳು, ವಿಶೇಷ ಹಿಂದುಳಿದ ವರ್ಗಗಳು) ಶೇ 13ರಷ್ಟು ಮೀಸಲಾತಿ ಇದೆ. ಮರಾಠ ಮೀಸಲಾತಿ ಹೋರಾಟವು ರಾಜ್ಯದಲ್ಲಿ ಇತ್ತೀಚೆಗೆ ತೀವ್ರಗೊಂಡಿದೆ.

1981ರಿಂದಲೂ ಮರಾಠ ಮೀಸಲಾತಿ ವಿಚಾರವು ಚರ್ಚೆಯಲ್ಲಿದೆ. 2014ರಲ್ಲಿ ಕಾಂಗ್ರೆಸ್‌ ಹಾಗೂ ಎನ್‌ಸಿಪಿ ನೇತೃತ್ವದ ಸರ್ಕಾರವು ಮರಾಠರಿಗೆ ಶೇ 16ರಷ್ಟು ಮೀಸಲಾತಿಯನ್ನು ಸುಗ್ರೀವಾಜ್ಞೆಯ ಮೂಲಕ ನೀಡಿತು. ನಂತರ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗದ ಕಾಯ್ದೆ 2018ರ ವಿಶೇಷ ಅವಕಾಶದ ಅಡಿಯಲ್ಲಿ ಮೀಸಲಾತಿಯನ್ನು ನೀಡಿತು. ಆಗ ರಾಜ್ಯದಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಶೇ 68ರಷ್ಟಿತ್ತು. ಆದರೆ, 2019ರಲ್ಲಿ ಬಾಂಬೆ ಹೈಕೋರ್ಟ್‌ ಈ ಮೀಸಲಾತಿ ಅವಕಾಶವನ್ನು ತಿರಸ್ಕರಿಸಿತು. ನಂತರ 2021ರಲ್ಲಿ ಸುಪ್ರೀಂ ಕೋರ್ಟ್‌ ಸಹ ಇದನ್ನೇ ಹೇಳಿತು. ‘ಶೇ 50ಕ್ಕಿಂತ ಹೆಚ್ಚಿನ ಮೀಸಲಾತಿ ನೀಡುವಂಥ ಅಸಾಧಾರಣ ಸಂದರ್ಭವೇನೂ ನಿರ್ಮಾಣವಾಗಿಲ್ಲ’ ಎಂದು ತನ್ನ ಆದೇಶದಲ್ಲಿ ಹೇಳಿತ್ತು.

ತೆಲಂಗಾಣ

2017ರಲ್ಲಿ ಕೆ.ಸಿ. ಚಂದ್ರಶೇಖರ ರಾವ್‌ (ಕೆಸಿಆರ್‌) ಅವರ ನೇತೃತ್ವದ ಟಿಆರ್‌ಎಸ್‌ (ಈಗಿನ ಬಿಆರ್‌ಎಸ್‌) ಸರ್ಕಾರವು ಶಿಕ್ಷಣ ಹಾಗೂ ಉದ್ಯೋಗದಲ್ಲಿ ಪರಿಶಿಷ್ಟ ಪಂಗಡ ಹಾಗೂ ಮುಸ್ಲಿಂ ಸಮುದಾಯಗಳ ಮೀಸಲಾತಿಯನ್ನು ಹೆಚ್ಚಿಸಿ ವಿಧಾಸಭೆಯಲ್ಲಿ ಮಸೂದೆ ಮಂಡಿಸಿತ್ತು. ಪರಿಶಿಷ್ಟ ಪಂಗಡಕ್ಕೆ ಶೇ 6ರಷ್ಟಿರುವ ಮೀಸಲಾತಿಯನ್ನು ಶೇ 10ಕ್ಕೆ ಏರಿಸುವ ಹಾಗೂ ಶೇ 4ರಷ್ಟಿದ್ದ ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ಶೇ 12ಕ್ಕೆ ಏರಿಸುವ ಮಸೂದೆ ಅದಾಗಿತ್ತು. ಆಗ ರಾಜ್ಯದಲ್ಲಿರುವ ಒಟ್ಟು ಮೀಸಲಾತಿ ಪ್ರಮಾಣವು 62ಕ್ಕೆ ಏರಿಕೆ ಆಗುತ್ತಿತ್ತು. ಇದಕ್ಕೆ ವಿಧಾನಸಭೆಯ ಅನುಮೋದನೆಯೂ ದೊರಕಿತ್ತು. ರಾಜ್ಯಪಾಲರು, ರಾಷ್ಟ್ರಪತಿ ಅಂಕಿತಕ್ಕಾಗಿ ಈ ಮಸೂದೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಆದರೆ, ಕಾನೂನು ತೊಡಕಿನ ಕಾರಣ ನೀಡಿ, ಕೇಂದ್ರವು ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಿಲ್ಲ.

ಆಧಾರ: ಇಂದಿರಾ ಸಹಾನಿ ಪ್ರಕರಣದ ತೀರ್ಪು, ಪಿಟಿಐ, ಇಡಬ್ಲ್ಯುಎಸ್‌ ಮೀಸಲಾತಿ ಪ್ರಕರಣದ ತೀರ್ಪು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT