ಮಂಗಳವಾರ, 12 ಆಗಸ್ಟ್ 2025
×
ADVERTISEMENT
ಆಳ–ಅಗಲ | ಅಣ್ವಸ್ತ್ರ ಬೆದರಿಕೆ: ಪಾಕಿಸ್ತಾನದ ಚಾಳಿ
ಆಳ–ಅಗಲ | ಅಣ್ವಸ್ತ್ರ ಬೆದರಿಕೆ: ಪಾಕಿಸ್ತಾನದ ಚಾಳಿ
ಅಮೆರಿಕ ನೆಲದಲ್ಲಿ ‘ಅರ್ಧ ಜಗತ್ತು’ ನಾಶ ಮಾಡುವ ಬೆದರಿಕೆ ಹಾಕಿದ ಪಾಕ್‌ ಸೇನಾ ಮುಖ್ಯಸ್ಥ ಮುನೀರ್‌
ಫಾಲೋ ಮಾಡಿ
Published 11 ಆಗಸ್ಟ್ 2025, 23:30 IST
Last Updated 11 ಆಗಸ್ಟ್ 2025, 23:30 IST
Comments
ಅಣ್ವಸ್ತ್ರ ಹೊಂದಿರುವ ರಾಷ್ಟ್ರ ತಮ್ಮದಾಗಿದ್ದು, ತಾವು ಸೋಲುವ ಸ್ಥಿತಿ ಬಂದರೆ, ಅರ್ಧ ಜಗತ್ತನ್ನು ನಾಶ‍‍ಪಡಿಸುವುದಾಗಿ ಪಾಕಿಸ್ತಾನದ ಸೇನಾ ಪಡೆಗಳ ಮುಖ್ಯಸ್ಥ ಆಸಿಮ್ ಮುನೀರ್ ಅಮೆರಿಕದ ನೆಲದಲ್ಲಿ ನಿಂತು ಅಕ್ಷರಶಃ ಬೆದರಿಕೆ ಹಾಕಿದ್ದಾರೆ. ಆಸಿಮ್ ಮುನೀರ್ ಮಾತುಗಳು ಭಾರತಕ್ಕಷ್ಟೇ ಅಲ್ಲ, ‘ಅರ್ಧ ಜಗತ್ತಿಗೇ’ ಒಡ್ಡಿದ ಬೆದರಿಕೆಯಾಗಿದೆ. ಪಾಕಿಸ್ತಾನದ ರೀತಿಯಲ್ಲೇ ಚೀನಾ ಮತ್ತು ಉತ್ತರ ಕೊರಿಯಾದಲ್ಲಿಯೂ ಅಣ್ವಸ್ತ್ರಗಳಿದ್ದು, ಅಲ್ಲಿಯೂ ಸರ್ವಾಧಿಕಾರಿಗಳೇ ಆಡಳಿತ ನಡೆಸುತ್ತಿದ್ದಾರೆ. ಇವರೆಲ್ಲರೂ ವಿಶ್ವಶಾಂತಿಗೆ ಕಂಟಕವಾಗುವಂಥ ಸ್ವಭಾವ, ಸಾಮರ್ಥ್ಯ ಹೊಂದಿದ್ದು, ಅಪಾಯಕಾರಿಗಳಾಗಿದ್ದಾರೆ. ಇದರಲ್ಲಿ ವಿಶ್ವದ ‘ದೊಡ್ಡಣ್ಣ’ ಎಂದೇ ಕರೆಸಿಕೊಳ್ಳುವ ಅಮೆರಿಕದ ಬೆಂಬಲ ಅಥವಾ ‘ಮೌನ ಸಮ್ಮತಿ’ಯ ಪಾಲೂ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ
ಪ್ರಚೋದನಕಾರಿ ಮಾತು:
ಇದೇ ಮುನೀರ್ ಅವರು ಹಿಂದೊಮ್ಮೆ ‘ಕಾಶ್ಮೀರವು ಪಾಕಿಸ್ತಾನದ ಕಂಠನಾಳ’ ಎಂದಿದ್ದರು. ಆದಾದ ಕೆಲವೇ ದಿನಗಳಲ್ಲಿ ಪಹಲ್ಗಾಮ್ ಮೇಲೆ ಉಗ್ರರು ದಾಳಿ ನಡೆಸಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಭಯೋತ್ಪಾದಕರ ದಾಳಿಗೆ ಮುನೀರ್ ಅವರ ಆ ಮಾತೇ ಪ್ರೇರಣೆ ಎನ್ನಲಾಗಿತ್ತು. ಈಗ ಅಮೆರಿಕದ ನೆಲದಿಂದ ಅಂಥವೇ ಪ್ರಚೋದನಕಾರಿ ಮಾತುಗಳನ್ನು ಆಡಿದ್ದಾರೆ.
ಪದೇ ಪದೇ ಬೆದರಿಕೆ:
ಅಣ್ವಸ್ತ್ರ ಹೊಂದಿರುವ ಯಾವುದೇ ರಾಷ್ಟ್ರವು, ಮತ್ತೊಂದು ರಾಷ್ಟ್ರದ ಮೇಲೆ ಅಣ್ವಸ್ತ್ರ ಪ್ರಯೋಗಿಸುವುದು ಸುಲಭ ಅಲ್ಲ. ಆದರೂ ಪಾಕಿಸ್ತಾನವು ಹಿಂದಿನಿಂದಲೂ ಭಾರತವನ್ನು ಗುರಿಯಾಗಿಸಿಕೊಂಡು ಆಗಿಂದಾಗ್ಗೆ ಈ ಬಗ್ಗೆ ಪುನರುಚ್ಚಾರ ಮಾಡುತ್ತಿದ್ದು, ಅದನ್ನೇ ಚಾಳಿಯಾಗಿಸಿಕೊಂಡಿದೆ. 2002ರಲ್ಲಿ ಅಧ್ಯಕ್ಷರಾಗಿದ್ದ ಪರ್ವೇಜ್ ಮುಷರಫ್ ಅವರು, ‘ಪಾಕಿಸ್ತಾನದ ಅಣ್ವಸ್ತ್ರಗಳ ಏಕೈಕ ಗುರಿ ಭಾರತವಾಗಿದ್ದು, ದೇಶದ ಅಸ್ತಿತ್ವಕ್ಕೆ ಆತಂಕ ಎದುರಾದಾಗ ಅವುಗಳನ್ನು ಬಳಸಲಾಗುವುದು’ ಎಂದು ಹೇಳಿದ್ದರು.
ಅಮೆರಿಕದ ಮೌನ:
ಅಮೆರಿಕವು ಜಪಾನ್‌ನ ನಾಗಸಾಕಿ ಮೇಲೆ ಬಾಂಬ್ ಹಾಕಿದ 80ನೇ ವಾರ್ಷಿಕ ದಿನದಂದೇ ಮುನೀರ್ ಅಮೆರಿಕದಿಂದ ಅಣ್ವಸ್ತ್ರ ದಾಳಿಯ ಬಗ್ಗೆ ಮಾತನಾಡಿದ್ದಾರೆ. ಆದರೆ, ಅಮೆರಿಕ ಇದರ ಬಗ್ಗೆ ಮೌನವಾಗಿದೆ. ಸುಂಕಕ್ಕೆ ಸಂಬಂಧಿಸಿದ ಭಾರತ–ಅಮೆರಿಕ ಮಾತುಕತೆ ಯಶಸ್ವಿಯಾಗದೇ ಇರುವುದು, ಭಾರತದ ಉತ್ಪನ್ನಗಳ ಮೇಲೆ ಅಮೆರಿಕ ಶೇ 50ರಷ್ಟು ಸುಂಕ ಹೇರಿರುವುದು.. ಇವೇ ಮುಂತಾದ ಕಾರಣಗಳಿಂದ ಭಾರತ ಮತ್ತು ಅಮೆರಿಕ ಸಂಬಂಧ ಹಳಸಿದೆ. ಇದೇ ವೇಳೆ ಪಾಕ್ ಅಮೆರಿಕಕ್ಕೆ ಹೆಚ್ಚು ಹತ್ತಿರವಾಗಿದ್ದು, ತನ್ನ ಅದ್ಭುತ ಪಾಲುದಾರ ಎಂದು ಪಾಕ್ ಅನ್ನು ಅಮೆರಿಕ ಬಣ್ಣಿಸಿದೆ. ಪಾಕಿಸ್ತಾನದಂಥ ದುರ್ಬಲ ಹಾಗೂ ಅಸ್ಥಿರ ರಾಜಕೀಯ ಪರಿಸ್ಥಿತಿಯ ದೇಶವನ್ನು ಅಮೆರಿಕ ತನ್ನ ಕೈಗೊಂಬೆಯಂತೆ ಮಾಡಿಕೊಳ್ಳಲು ಯತ್ನಿಸುತ್ತಿದೆ. ಆಸಿಮ್ ಮುನೀರ್ ಅವರ ಹೇಳಿಕೆಯನ್ನು ಈ ನೆಲೆಯಲ್ಲಿಯೂ ಅರ್ಥೈಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT