ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸಿಐಆರ್ ದಾಖಲಿಸಿದೆ. ಅದರ ಬೆನ್ನಲ್ಲೇ, ಮುಡಾ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ನಡೆದಿಲ್ಲ ಹಾಗೂ ಅದು ಇ.ಡಿ ವ್ಯಾಪ್ತಿಗೆ ಬರುವುದಿಲ್ಲ ಎನ್ನುವಂಥ ಮಾತುಗಳು ಕೇಳಿಬಂದಿವೆ. ಹಣ ಅಕ್ರಮ ವರ್ಗಾವಣೆ ವಿಚಾರದಲ್ಲಿ ಇ.ಡಿ ಅಧಿಕಾರ ವ್ಯಾಪ್ತಿ, ಅದು ಎಲ್ಲಿಂದ ಅಕ್ರಮದ ಮಾಹಿತಿ ಪಡೆಯುತ್ತದೆ ಎನ್ನುವುದು ಸೇರಿದಂತೆ ಅದರ ಕಾರ್ಯನಿರ್ವಹಣೆಯ ಬಗ್ಗೆ ಇಲ್ಲಿದೆ ಮಾಹಿತಿ...
ಜಾರಿ ನಿರ್ದೇಶನಾಲಯವು (ಇ.ಡಿ) ಕೇಂದ್ರ ಸರ್ಕಾರದ ಬಹು ಆಯಾಮದ ತನಿಖಾ ಸಂಸ್ಥೆಯಾಗಿದ್ದು, ಆರ್ಥಿಕ ಅಪರಾಧಗಳ ಬಗ್ಗೆ ತನಿಖೆ ನಡೆಸುವುದು ಅದರ ಮುಖ್ಯ ಕಾರ್ಯ. ಹಣಕಾಸು ವ್ಯವಹಾರಗಳ ಇಲಾಖೆಯ ಅಡಿ 1956ರ ಮೇ 1ರಂದು ಇ.ಡಿ ಆರಂಭವಾದಾಗ, ಅದರ ಉದ್ದೇಶ ಇದ್ದದ್ದು ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆಗೆ (ಎಫ್‌ಇಆರ್‌ಎ) ಸಂಬಂಧಿಸಿದ ಪ್ರಕರಣಗಳನ್ನು ತನಿಖೆ ಮಾಡುವುದು.
ನಂತರ ಇ.ಡಿ.ಯ ವ್ಯಾಪ್ತಿ ವಿಸ್ತಾರವಾಯಿತು. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ– 2002 (ಪಿಎಂಎಲ್‌ಎ), ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ– 1999 (ಎಫ್‌ಇಎಂಎ) ಮತ್ತು ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ– 2018ಯ (ಎಫ್‌ಇಒಎ) ಅಡಿಯಲ್ಲಿನ ತನಿಖೆಯೂ ಅದರ ವ್ಯಾಪ್ತಿಯಲ್ಲಿ ಸೇರಿತು. ಹಣ ಅಕ್ರಮ ವರ್ಗಾವಣೆ, ಬ್ಯಾಂಕ್ ವಂಚನೆ, ಆರ್ಥಿಕ ಹಗರಣಗಳು, ವಿದೇಶಿ ವಿನಿಮಯ ಉಲ್ಲಂಘನೆ ಮುಂತಾದ ಪ್ರಕರಣಗಳ ತನಿಖೆ, ಮಾಹಿತಿ ಸಂಗ್ರಹ, ವಿಶ್ಲೇಷಣೆ ಮಾಡುವುದು ಇ.ಡಿ.ಯ ಪ್ರಮುಖ ಕೆಲಸ. ಅಂತರರಾಷ್ಟ್ರೀಯ ಹಣಕಾಸು ಅಕ್ರಮಗಳು, ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ ಹಣಕಾಸಿನ ನೆರವಿನ ಜಾಲ ಇತ್ಯಾದಿ ಅಂಶಗಳ ಬಗ್ಗೆಯೂ ಇ.ಡಿ ತನಿಖೆ ನಡೆಸುತ್ತದೆ.
ಪಿಎಂಎಲ್‌ಎ ಅನ್ನು 2002ರಲ್ಲಿ ಸಂಸತ್ತು ಅಂಗೀಕರಿಸಿದರೂ ಅದು ಜಾರಿಯಾಗಿದ್ದು 2005ರಲ್ಲಿ. ಅದರ ಮುಖ್ಯ ಉದ್ದೇಶ ದೇಶದ ಒಳಗೆ ಮತ್ತು ಹೊರಗೆ ಹಣದ ಅಕ್ರಮ ಸಂಗ್ರಹ, ವರ್ಗಾವಣೆ, ಅದರ ಮೂಲ, ಹಂತಗಳನ್ನು ಪತ್ತೆ ಹಚ್ಚುವುದು. ಕಾಯ್ದೆಯ ಸೆಕ್ಷನ್ 48, 49ರ ಅಡಿ ಇ.ಡಿ ತನಿಖೆ ನಡೆಸುತ್ತದೆ.
ಪಿಎಂಎಲ್‌ಎ ಅಡಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಹಣ ಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಪ್ರಕರಣಗಳ ತನಿಖೆ ಮಾಡುವ, ವಿಚಾರಣೆಗೊಳಪಡಿಸುವ ಸಂಬಂಧ ವ್ಯಾಪಕವಾದ ಅಧಿಕಾರ ಇರುತ್ತದೆ. ತನಿಖೆಗಾಗಿ ಆರೋಪಿಗೆ ಸಮನ್ಸ್ ಜಾರಿ ಮಾಡುವ, ಅವರಿಗೆ ಸಂಬಂಧಿಸಿದ ಜಾಗಗಳಲ್ಲಿ ಶೋಧ ನಡೆಸುವ ಮತ್ತು ಆಸ್ತಿ, ಹಣ ಸ್ವಾಧೀನಕ್ಕೆ ಪಡೆಯುವ ಅಧಿಕಾರವೂ ಅಧಿಕಾರಿಗಳಿಗೆ ಇರುತ್ತದೆ. ಆರೋಪಿಗಳ ಆಸ್ತಿಯನ್ನು ಜಪ್ತಿ ಮಾಡುವ ಮತ್ತು ಬ್ಯಾಂಕ್ ಖಾತೆ ಇತ್ಯಾದಿಗಳನ್ನು ಸ್ಥಗಿತ ಗೊಳಿಸುವ ಅಧಿಕಾರವನ್ನೂ ಇ.ಡಿ ಹೊಂದಿದೆ. ಈ ವಿಚಾರದಲ್ಲಿ ಇ.ಡಿ ಅಧಿಕಾರಿಗಳಿಗೆ ಸಿಬಿಐಸಿ, ಸಿಬಿಡಿಟಿ, ಪೊಲೀಸ್, ಆರ್‌ಬಿಐ, ಸೆಬಿ, ಐಆರ್‌ಡಿಎ ಮುಂತಾದ ಇಲಾಖೆ/ಸಂಸ್ಥೆಗಳು ನೆರವು ನೀಡುತ್ತವೆ.
ಹಣ ಅಕ್ರಮ ವರ್ಗಾವಣೆಯಲ್ಲಿ ಮೂರು ಮುಖ್ಯ ಹಂತಗಳಿರುತ್ತವೆ; ಮೊದಲನೆಯದು, ಅಕ್ರಮ ಹಣವನ್ನು ವ್ಯವಸ್ಥೆಯ ಭಾಗವನ್ನಾಗಿ ಮಾಡುವುದು. ನಿದರ್ಶನಕ್ಕೆ, ಅಕ್ರಮ ಚಟುವಟಿಕೆ ನಡೆಸುವುದಕ್ಕಾಗಿ ದೊಡ್ಡ ಮೊತ್ತದ ಹಣವನ್ನು ಸಣ್ಣ ಸಣ್ಣ ಮೊತ್ತಗಳನ್ನಾಗಿ ಮಾಡಿ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವುದು. ಎರಡನೆಯದು, ಅಕ್ರಮ ವಹಿವಾಟಿನ ಹಂತಗಳು. ಅಂದರೆ, ಹಣವನ್ನು ವಿವಿಧ ಬ್ಯಾಂಕ್ ಖಾತೆಗಳ ನಡುವೆ ಹಂಚುವುದು. ಮೂರನೆಯದಾಗಿ, ಸಂಯೋಜನೆ. ಅಂದರೆ, ಅಕ್ರಮ ಹಣ ಬಳಸಿ ಭಾರಿ ಮೌಲ್ಯದ ದಂಧೆ ನಡೆಸುವುದು/ಆಸ್ತಿ ಕೊಳ್ಳುವುದು.
ಇಷ್ಟಾದರೂ ಇ.ಡಿ.ಗೆ ಹೆಚ್ಚಿನ ಪ್ರಕರಣಗಳು (ಶೇ 47) ವಿಧ್ಯುಕ್ತ ವಲ್ಲದ ಮೂಲಗಳಿಂದಲೇ ಬರುತ್ತಿವೆ ಎನ್ನುವುದು ಗಮನಾರ್ಹ. ಸಾರ್ವಜನಿಕರು ಸಲ್ಲಿಸುವ ದೂರುಗಳು, ಮಾಧ್ಯಮಗಳಲ್ಲಿ ಬರುವ ವರದಿಗಳು ಇವುಗಳಲ್ಲಿ ಮುಖ್ಯವಾದವು. ರಾಜ್ಯಗಳ ತನಿಖಾ ಸಂಸ್ಥೆಗಳಿಂದ ಬರುವ ಮಾಹಿತಿ ಇ.ಡಿ ಪ್ರಕರಣಗಳ ಹಿಂದಿನ ಎರಡನೇ ಅತಿ ದೊಡ್ಡ (ಶೇ 37) ಮೂಲವಾಗಿದೆ. ಅಪರಾಧ ಮತ್ತು ಅಪರಾಧಿಕ ಪತ್ತೆ ಜಾಲ ಮತ್ತು ವ್ಯವಸ್ಥೆಯಲ್ಲಿ (ಸಿಸಿಟಿಎನ್‌ಎಸ್) ಎಲ್ಲ ಪ್ರಕರಣಗಳನ್ನೂ ಡಿಜಿಟಲ್ ರೂಪದಲ್ಲಿ ದಾಖಲಿಸ
ಲಾಗುತ್ತಿದ್ದು, ಅವು ಇ.ಡಿ.ಯ ಶೇ 13ರಷ್ಟು ಪ್ರಕರಣಗಳ ಮೂಲವಾಗಿದೆ.
ಯಾವುದೇ ಪೊಲೀಸ್ ಠಾಣೆಯಲ್ಲಿ ಹಣದ ಅಕ್ರಮದ ಬಗ್ಗೆ ಪ್ರಕರಣ ದಾಖಲಾಗಿದ್ದು, ಅದರ ಮೊತ್ತ ₹1 ಕೋಟಿಗೂ ಹೆಚ್ಚಿದ್ದರೆ, ಅದರ ಮಾಹಿತಿಯು ಇ.ಡಿ.ಗೆ ಸಲ್ಲಿಕೆಯಾಗುತ್ತದೆ ಮತ್ತು ಇ.ಡಿ ಅದರ ವಿಚಾರಣೆ/ತನಿಖೆ ಕೈಗೆತ್ತಿಕೊಳ್ಳುತ್ತದೆ.
ಜನರಿಂದ ಬರುವ ದೂರುಗಳು, ಕಾನೂನು ಜಾರಿ ಸಂಸ್ಥೆ ಗಳಲ್ಲಿರುವ ಇ.ಡಿ ನೋಡಲ್ ಅಧಿಕಾರಿಗಳು ನೀಡುವ ಮಾಹಿತಿ, ಅಪರಾಧ ಮತ್ತು ಕ್ರಿಮಿನಲ್ ನಿಗಾ ಜಾಲಗಳು ಮತ್ತು ವ್ಯವಸ್ಥೆ (ಸಿಸಿಟಿಎನ್‌ಎಸ್), ಖಚಿತ ಮಾಹಿತಿಗಳು ಅಥವಾ ಮಾಧ್ಯಮ ವರದಿಗಳ ಆಧಾರವೂ ಪ್ರಕರಣಗಳ ಮೂಲವಾಗುತ್ತವೆ.
ಜಾರಿ ನಿರ್ದೇಶನಾಲಯವು ಪಿಎಂಎಲ್‌ಎ ಮಾತ್ರವಲ್ಲದೇ, ಇನ್ನೂ ನಾಲ್ಕು ಕಾಯ್ದೆಗಳ ಅಡಿಯಲ್ಲಿ ಹಣ ವರ್ಗಾವಣೆ ಮತ್ತು ವಿದೇಶಿ ವಿನಿಮಯ ಅಕ್ರಮಗಳ ಬಗ್ಗೆ ತನಿಖೆ ನಡೆಸುವ ಅಧಿಕಾರ ಹೊಂದಿದೆ. ಅವುಗಳೆಂದರೆ...
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ–1999 (ಎಫ್‌ಇಎಂಎ–ಫೆಮಾ).
ದೇಶಭಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ–2018 (ಎಫ್‌ಇಒಎ).
ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ–1972 (ಎಫ್‌ಇಆರ್‌ಎ).
1974ರ ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆಯ ಅಡಿಯಲ್ಲಿ (ಸಿಇಎಫ್‌ಇಪಿಎಸ್‌ಎ) ಬರುವ ಪ್ರಕರಣಗಳ ತನಿಖೆಯ ಹೊಣೆಯನ್ನೂ ಇ.ಡಿ ಹೊತ್ತುಕೊಳ್ಳುತ್ತದೆ.
ಆಧಾರ: ದಿ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್‌ನ ‘ಆ್ಯಂಟಿ –ಮನಿ ಲಾಂಡರಿಂಗ್ ಆ್ಯಂಡ್ ಕೌಂಟರ್ ಟೆರರಿಸ್ಟ್ ಫೈನಾನ್ಸಿಂಗ್ ಮೆಷರ್ಸ್ ಇಂಡಿಯಾ’ ವರದಿ, ಹಣಕಾಸು ಇಲಾಖೆಯ ವಾರ್ಷಿಕ ವರದಿ 2023–24 ಮತ್ತು ಜಾರಿ ನಿರ್ದೇಶನಲಾಯದ ವೆಬ್‌ಸೈಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.