ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ಜನರ ಮೇಲೆ ಹೆಚ್ಚುತ್ತಿದೆ ಹೆದ್ದಾರಿ ಟೋಲ್‌ ಹೊರೆ
ಆಳ–ಅಗಲ: ಜನರ ಮೇಲೆ ಹೆಚ್ಚುತ್ತಿದೆ ಹೆದ್ದಾರಿ ಟೋಲ್‌ ಹೊರೆ
Published 4 ಜೂನ್ 2024, 0:18 IST
Last Updated 4 ಜೂನ್ 2024, 0:18 IST
ಅಕ್ಷರ ಗಾತ್ರ

‘ಮೊದಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನಕ್ಕೇರಿವೆ. ಇಂಥಾ ಹೊತ್ತಿನಲ್ಲಿ ಟೋಲ್‌ ದರವನ್ನು ಹೆಚ್ಚಿಸಲಾಗಿದೆ. ಟೋಲ್‌ ದರ ಏರಿಕೆಯು ಜನರು ಹೆದ್ದಾರಿಯಲ್ಲಿ ಓಡಾಡದೇ ಇರುವ ಹಾಗೆ ಮಾಡಿದೆ’ ಎನ್ನುತ್ತಾರೆ ದೆಹಲಿಯಿಂದ ಲಖನೌಗೆ ತೆರಳುವ ಹೆದ್ದಾರಿಯಲ್ಲಿ ಪ್ರತಿನಿತ್ಯ ಪ್ರಯಾಣಿಸುವ ಅಂಕುರ್‌ ಸಕ್ಸೇನಾ. ಇವರು ಜಾಹೀರಾತು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ದೇಶದಾದ್ಯಂತ ಸೋಮವಾರದಿಂದ ಜಾರಿಯಾಗುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಹೆದ್ದಾರಿ ಟೋಲ್‌ ದರವನ್ನು ಶೇ 3ರಿಂದ ಶೇ 5ರವರೆಗೆ ಏರಿಕೆ ಮಾಡಿದೆ. ಪ್ರತಿ ವರ್ಷವೂ ಪ್ರಾಧಿಕಾರ ಟೋಲ್ ದರವನ್ನು ಏರಿಕೆ ಮಾಡುತ್ತದೆ. ಅಂತೆಯೇ 2024ರ ದರ ಏರಿಕೆ ಪ್ರಕ್ರಿಯೆಯನ್ನು ಪ್ರಾಧಿಕಾರ ಕೈಗೊಂಡಿದೆ. ಆದರೆ, ಟೋಲ್‌ ದರ ಏರಿಕೆ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ‘ಎಕ್ಸ್‌’ ಖಾತೆಗಳಲ್ಲಿ ಸಾರ್ವಜನಿಕರು ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ‘ಇನ್ನುಮುಂದೆ ವಾಹನದ ಬದಲು ಎಮ್ಮೆಗಳ ಮೇಲೆ ಕೂತು ಹೆದ್ದಾರಿಗಳಲ್ಲಿ ಓಡಾಡುವುದು ಒಳಿತು’ ಎಂದು ಕೆಲವರು ಪೋಸ್ಟ್‌ ಮಾಡಿದ್ದಾರೆ. 

ರಸ್ತೆ ಸಂಪರ್ಕವನ್ನು ವಿಸ್ತರಿಸಲು, ಹೆಚ್ಚು ಹೆಚ್ಚು ಹೆದ್ದಾರಿಗಳನ್ನು ನಿರ್ಮಿಸಲು ಟೋಲ್‌ ದರವನ್ನು ಹೆಚ್ಚಿಸುವುದು ಅನಿವಾರ್ಯ ಎಂದು ಪ್ರಾಧಿಕಾರ ಹೇಳಿಕೊಂಡಿದೆ. ಹಾಗಾದರೆ, ಪ್ರಾಧಿಕಾರವು ಕೇವಲ ಟೋಲ್‌ವೊಂದರಿಂದಲೇ ಅಭಿವೃದ್ಧಿ ಮಾಡಬೇಕಿದೆಯೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಉತ್ತರ: ಇಲ್ಲ ಎಂದೇ ಹೇಳಬೇಕು. ಹೆದ್ದಾರಿ ಅಭಿವೃದ್ಧಿಗಾಗಿ ಟೋಲ್‌ ಮಾತ್ರವಲ್ಲದೆ ಇನ್ನು ಎರಡು ರೀತಿಯ ಸೆಸ್‌ ರೂಪದ ತೆರಿಗೆಯನ್ನು ಪ್ರಾಧಿಕಾರವು ಜನರಿಂದ ಪಡೆದುಕೊಳ್ಳುತ್ತದೆ. ಒಂದು, ರಸ್ತೆ ಮತ್ತು ಮೂಲಸೌಕರ್ಯ ಸೆಸ್‌ ಮತ್ತೊಂದು ಪೆಟ್ರೋಲ್‌ ಮತ್ತು ಡೀಸೆಲ್ ಮೇಲೆ ಪಡೆಯುವ ‘ವಿಶೇಷ ಹೆಚ್ಚುವರಿ ಎಕ್ಸೈಸ್‌ ಸುಂಕ’.

ರಸ್ತೆ ಮತ್ತು ಮೂಲಸೌಕರ್ಯ ಸೆಸ್‌ನಿಂದ ಸಂಗ್ರಹವಾದ ಹಣವನ್ನು ಹೆದ್ದಾರಿ ಅಭಿವೃದ್ಧಿಗಾಗಿಯೇ ಬಳಸಿಕೊಳ್ಳಬೇಕು ಎಂಬ ನಿಯಮವಿತ್ತು. ಆದರೆ, 2018ರಲ್ಲಿ ಈ ನಿಮಯಗಳಿಗೆ ತಿದ್ದುಪಡಿ ತರಲಾಯಿತು. ಮೊದಲು ಈ ಸೆಸ್‌ ಅನ್ನು ರಾಷ್ಟ್ರೀಯ ಹೆದ್ದಾರಿ ಮತ್ತು ಸೇತುವೆಗಳ ನಿರ್ಮಾಣ ಮತ್ತು ನಿರ್ವಹಣೆಗಷ್ಟೇ ಬಳಸಲಾಗುತ್ತಿತ್ತು. 2018ರಲ್ಲಿ ತಿದ್ದುಪಡಿ ತರುವ ಮೂಲಕ ರೈಲು ಸೌಕರ್ಯ ಅಭಿವೃದ್ಧಿ, ವಿಮಾನ ನಿಲ್ದಾಣಗಳ ಅಭಿವೃದ್ಧಿ–ನಿರ್ವಹಣೆ, ಬಂದರುಗಳ ನಿರ್ಮಾಣ–ನಿರ್ವಹಣೆ, ಶುದ್ಧ ನೀರಿನ ಪೂರೈಕೆ ಯೋಜನೆ ಸೇರಿದಂತೆ ಅನ್ಯ ಸ್ವರೂಪದ ಮೂಲಸೌಕರ್ಯಗಳ ಅಭಿವೃದ್ಧಿಗೆ ಬಳಸಿಕೊಳ್ಳಲು ಅವಕಾಶ ಮಾಡಿಕೊಂಡಿದೆ.

ರಸ್ತೆ ಅಭಿವೃದ್ಧಿಗಾಗಿಯೇ ಸಂಗ್ರಹಿಸುವ ಹಣವನ್ನು ರಸ್ತೆ ಅಭಿವೃದ್ಧಿಗಲ್ಲದೆ, ಇತರ ಮೂಲಸೌಕರ್ಯ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತಿರುವ ಕಾರಣಕ್ಕಾಗಿಯೇ ಈ ಸೆಸ್‌ ಅಡಿಯಲ್ಲಿ ರೂಪಿಸಲಾದ ನಿಧಿಯಲ್ಲಿ ಅಗತ್ಯ ಅನುದಾನ ಇಲ್ಲವಾಗಿದೆ. ಇದರ ಜೊತೆಗೆ, ಈ ಎರಡೂ ತೆರಿಗೆಗಳನ್ನು ಕೇಂದ್ರ ಸರ್ಕಾರವು ರಾಜ್ಯಗಳೊಂದಿಗೆ ಹಂಚಿಕೊಳ್ಳುವಂತಿಲ್ಲ. ಬದಲಿಗೆ ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಬಳಸಿಕೊಳ್ಳುತ್ತದೆ. ಇಷ್ಟೆಲ್ಲಾ ತೆರಿಗೆಗಳನ್ನು ಸಂಗ್ರಹ ಮಾಡುತ್ತಿದ್ದರೂ ಪ್ರತಿ ವರ್ಷ ಟೋಲ್‌ ದರವನ್ನು ಏರಿಕೆ ಮಾಡುವುದು ಎಷ್ಟು ಸರಿ ಎಂದು ಸಾರ್ವಜನಿಕರು ‘ಎಕ್ಸ್‌’ನಲ್ಲಿ ಚರ್ಚಿಸುತ್ತಿದ್ದಾರೆ ಮತ್ತು
ಪ್ರಾಧಿಕಾರವನ್ನೂ ಪ್ರಶ್ನಿಸುತ್ತಿದ್ದಾರೆ.

ವಿರೋಧ ಪಕ್ಷಗಳೂ ಈ ಕ್ರಮವನ್ನು ವಿರೋಧಿಸಿವೆ. ಪ್ರತಿ ವರ್ಷವೂ ಟೋಲ್‌ ದರವನ್ನು ಏರಿಸುವುದರಿಂದ ಅಗತ್ಯ ವಸ್ತುಗಳ ಬೆಲೆಗಳೂ ಏರಿಕೆಯಾಗುತ್ತವೆ. ಇದು ಮತ್ತೆ ಜನರ ಮೇಲೆಯೇ ಹೊರೆಯಾಗಲಿದೆ. ಜನರು ಒಂದು ಕಡೆ ಟೋಲ್‌ ದರವನ್ನು ಪಾವತಿ ಮಾಡಬೇಕು, ಇನ್ನೊಂದೆಡೆ, ಅಗತ್ಯ ವಸ್ತಗಳಿಗೂ ಹೆಚ್ಚಿನ ದರ ನೀಡಬೇಕಾಗುತ್ತದೆ ಎಂದು ವಿರೋಧ ಪಕ್ಷಗಳು ಹೇಳಿವೆ.

ಸಂಗ್ರಹಿಸಿದ್ದು ಎರಡೂವರೆ ಲಕ್ಷ ಕೋಟಿ ವೆಚ್ಚ ಮಾಡಿದ್ದು ಒಂದು ಲಕ್ಷ ಕೋಟಿ

₹1.45 ಲಕ್ಷ ಕೋಟಿ - 2023–24ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಕಚ್ಚಾತೈಲದ ಮೇಲೆ ಸಂಗ್ರಹಿಸಿದ ‘ವಿಶೇಷ ಹೆಚ್ಚುವರಿ ಎಕ್ಸೈಸ್‌ ಸುಂಕ’

₹44,300 ಕೋಟಿ - 2023–24ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಸಂಗ್ರಹಿಸಿದ ರಸ್ತೆ ಮತ್ತು ಮೂಲಸೌಕರ್ಯ ಸೆಸ್‌

₹64,810 ಕೋಟಿ - 2023–24ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಸಂಗ್ರಹಿಸಿದ ಹೆದ್ದಾರಿ ಟೋಲ್‌ ಮೊತ್ತ

₹2.54 ಲಕ್ಷ ಕೋಟಿ - 2023–24ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ರಸ್ತೆ ಮತ್ತು ಹೆದ್ದಾರಿ ಅಭಿವೃದ್ಧಿ ಮತ್ತು ನಿರ್ವಹಣೆಗೆಂದು ಸಂಗ್ರಹಿಸಿದ ವಿವಿಧ ಸೆಸ್‌, ತೆರಿಗೆ ಮತ್ತು ಶುಲ್ಕಗಳ ಒಟ್ಟು ಮೊತ್ತ

₹1.08 ಲಕ್ಷ ಕೋಟಿ - 2023–24ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ರಸ್ತೆ ಮತ್ತು ಹೆದ್ದಾರಿ ಅಭಿವೃದ್ಧಿಗೆಂದು ಮಾಡಿದ ಒಟ್ಟು ವೆಚ್ಚ

ಸಂಗ್ರಹಿಸಿದ್ದು ಎರಡೂವರೆ ಲಕ್ಷ ಕೋಟಿ ವೆಚ್ಚ ಮಾಡಿದ್ದು ಒಂದು ಲಕ್ಷ ಕೋಟಿ ₹1.45 ಲಕ್ಷ ಕೋಟಿ 2023–24ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಕಚ್ಚಾತೈಲದ ಮೇಲೆ ಸಂಗ್ರಹಿಸಿದ ‘ವಿಶೇಷ ಹೆಚ್ಚುವರಿ ಎಕ್ಸೈಸ್‌ ಸುಂಕ’ ₹44,300 ಕೋಟಿ 2023–24ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಸಂಗ್ರಹಿಸಿದ ರಸ್ತೆ ಮತ್ತು ಮೂಲಸೌಕರ್ಯ ಸೆಸ್‌ ₹64,810 ಕೋಟಿ 2023–24ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಸಂಗ್ರಹಿಸಿದ ಹೆದ್ದಾರಿ ಟೋಲ್‌ ಮೊತ್ತ ₹2.54 ಲಕ್ಷ ಕೋಟಿ 2023–24ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ರಸ್ತೆ ಮತ್ತು ಹೆದ್ದಾರಿ ಅಭಿವೃದ್ಧಿ ಮತ್ತು ನಿರ್ವಹಣೆಗೆಂದು ಸಂಗ್ರಹಿಸಿದ ವಿವಿಧ ಸೆಸ್‌, ತೆರಿಗೆ ಮತ್ತು ಶುಲ್ಕಗಳ ಒಟ್ಟು ಮೊತ್ತ ₹1.08 ಲಕ್ಷ ಕೋಟಿ 2023–24ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ರಸ್ತೆ ಮತ್ತು ಹೆದ್ದಾರಿ ಅಭಿವೃದ್ಧಿಗೆಂದು ಮಾಡಿದ ಒಟ್ಟು ವೆಚ್ಚ
ಮೂಲಸೌಕರ್ಯಗಳೇ ಇಲ್ಲದ ಹೆದ್ದಾರಿಗಳು
ಸರ್ಕಾರವೇ ನಿರ್ಮಿಸಿದ ಹೆದ್ದಾರಿಗಳಿರಲಿ, ಸರ್ಕಾರ–ಖಾಸಗಿ ಸಹಭಾಗಿತ್ವದ ಹೆದ್ದಾರಿಗಳಿರಲಿ ಅಥವಾ ಖಾಸಗಿ ಕಂಪನಿಯು ನಿರ್ಮಿಸಿದ ಹೆದ್ದಾರಿಗಳಿರಲಿ ಜನರು ಟೋಲ್‌ ನೀಡಲೇಬೇಕು. ಟೋಲ್‌ ಪಾವತಿ ಜೊತೆಯಲ್ಲಿ ಸೆಸ್‌ ಅನ್ನು ಕೂಡ ಜನರು ನೀಡಬೇಕಿದೆ. ಇಷ್ಟೆಲ್ಲಾ ಹಣ ಪಾವತಿಸಿದರೂ ಹೆದ್ದಾರಿಗಳಲ್ಲಿ ಮೂಲಸೌಕರ್ಯ ಮಾತ್ರ ಮರೀಚಿಕೆಯಾಗಿದೆ. ಇದನ್ನು ಸಿಎಜಿ ವರದಿಯಲ್ಲಿಯೇ ಉಲ್ಲೇಖಿಸಲಾಗಿದೆ. ‘ದಕ್ಷಿಣ ಭಾರತದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ಘಟಕಗಳ ನಿರ್ವಹಣೆ’ ಎಂಬ ವರದಿಯನ್ನು 2023ರಲ್ಲಿ ಸಿದ್ಧಪಡಿಸಲಾಗಿತ್ತು. ದಕ್ಷಿಣ ಭಾರತದ 37 ರಾಷ್ಟ್ರೀಯ ಹೆದ್ದಾರಿಗಳ, ಒಟ್ಟು 41 ಟೋಲ್‌ ಘಟಕಗಳನ್ನು ಪರಿಶೀಲಿಸಿ ವರದಿ ನೀಡಲಾಗಿದೆ. ಶೌಚಾಲಯ, ಆಂಬುಲೆನ್ಸ್‌ ಸೇವೆ, ವಿಶ್ರಾಂತಿ ಕೊಠಡಿ... ಹೀಗೆ ಮೂಕಸೌರ್ಕಗಳನ್ನು ಒದಗಿಸುವುದು ಕಡ್ಡಾಯವಾದರೂ, ಹೆದ್ದಾರಿಗಳಲ್ಲಿ ಇವುಗಳು ಯಾವವೂ ಇಲ್ಲದಾಗಿವೆ ಎಂದು ವರದಿಯಲ್ಲಿ ವಿವರಿಸಲಾಗಿತ್ತು.
ದಂಡ ಶುಲ್ಕದಿಂದಲೂ ಟೋಲ್‌ ಸಂಗ್ರಹ ಭಾರಿ ಏರಿಕೆ
ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಂದ ಸಂಗ್ರಹಿಸಲಾಗುತ್ತಿರುವ ಶುಲ್ಕವು ವರ್ಷದಿಂದ ವರ್ಷಕ್ಕೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 2018–19ನೇ ಆರ್ಥಿಕ ವರ್ಷದಿಂದ 2020–21ನೇ ಆರ್ಥಿಕ ವರ್ಷದವರೆಗಿನ ಅವಧಿಯಲ್ಲಿ ಹೀಗೆ ಸಂಗ್ರಹಿಸಲಾದ ಟೋಲ್‌ ಮೊತ್ತದಲ್ಲಿನ ಏರಿಕೆಯು ಸಾವಿರ ಕೋಟಿಯ ಆಸುಪಾಸಿನಲ್ಲಿ ಇತ್ತು. 2021–22ನೇ ಸಾಲಿನಲ್ಲಿ ಟೋಲ್‌ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದ ಕಾರಣ ಆ ವರ್ಷ ಸಂಗ್ರಹವಾದ ಟೋಲ್‌ ಮೊತ್ತದಲ್ಲಿ ಸುಮಾರು ಐದು ಸಾವಿರ ಕೋಟಿಯಷ್ಟು ಏರಿಕೆಯಾಗಿತ್ತು. ಆದರೆ ನಂತರದ ವರ್ಷಗಳಲ್ಲಿ ಪ್ರತಿ ವರ್ಷ ಸಂಗ್ರಹವಾದ ಟೋಲ್‌ ಮೊತ್ತದಲ್ಲಿ ಸರಾಸರಿ ₹15,000 ಕೋಟಿಯಷ್ಟು ಏರಿಕೆಯಾಗಿದೆ. 2021–22ನೇ ಆರ್ಥಿಕ ವರ್ಷಕ್ಕೆ ಹೋಲಿಸಿದರೆ, 2022–23ರಲ್ಲಿ ಸಂಗ್ರಹವಾದ ಟೋಲ್‌ ಮೊತ್ತದಲ್ಲಿ ₹14,121 ಕೋಟಿಯಷ್ಟು ಏರಿಕೆಯಾಗಿತ್ತು. 2023–24ರಲ್ಲಿ ₹16,782ಕೋಟಿಯಷ್ಟು ಏರಿಕೆಯಾಗಿದೆ. ಫಾಸ್ಟ್‌ಟ್ಯಾಗ್‌ ಬಳಕೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿರುವುದು ಟೋಲ್‌ ಸಂಗ್ರಹ ಹೆಚ್ಚಾಗಲು ಕಾರಣ ಎನ್ನಲಾಗಿದೆ. ಫ್ಯಾಸ್ಟ್‌ಟ್ಯಾಗ್‌ ಮೂಲಕ ಹೆಚ್ಚು ಟೋಲ್‌ ಸಂಗ್ರಹವಾಗುತ್ತಿದ್ದರೂ, ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನಗಳಿಗೆ ಒಂದು ಪಟ್ಟು ಹೆಚ್ಚು ದಂಡ ವಿಧಿಸಲಾಗುತ್ತಿದೆ. ಉದಾಹರಣೆಗೆ ಒಂದು ಹೆದ್ದಾರಿಯಲ್ಲಿನ ಎರಡು ಟೋಲ್‌ಗಳ ನಡುವಣ ಶುಲ್ಕ ₹50 ಇದ್ದು, ಫಾಸ್ಟ್‌ಟ್ಯಾಗ್‌ ಇದ್ದರೆ ₹50ರಷ್ಟು ಶುಲ್ಕವನ್ನೇ ವಿಧಿಸಲಾಗುತ್ತದೆ. ಆದರೆ ಫಾಸ್ಟ್‌ಟ್ಯಾಗ್‌ ಇಲ್ಲದೇ ಇದ್ದರೆ ದಂಡ ಸೇರಿ ₹100 ಶುಲ್ಕ ವಿಧಿಸಲಾಗುತ್ತದೆ. ಹೀಗೆ ದಂಡ ಸೇರಿ ದುಪ್ಪಟ್ಟು ಶುಲ್ಕ ವಿಧಿಸುತ್ತಿರುವ ಕಾರಣದಿಂದಲೂ ಟೋಲ್‌ ಸಂಗ್ರಹ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಆದರೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು, ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆ, ಹೊಸ ಹೆದ್ದಾರಿಗಳ ನಿರ್ಮಾಣದಿಂದಾಗಿ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಈ ಕಾರಣದಿಂದಲೇ ಟೋಲ್‌ ಮೊತ್ತ ಏರಿಕೆಯಾಗಿದೆ ಎಂದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT