ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ಆಳ–ಅಗಲ | ವಿಮೆಗೆ ಜಿಎಸ್‌ಟಿ; ಇಳಿಯಲಿದೆಯೇ ಹೊರೆ?
ಆಳ–ಅಗಲ | ವಿಮೆಗೆ ಜಿಎಸ್‌ಟಿ; ಇಳಿಯಲಿದೆಯೇ ಹೊರೆ?
ಫಾಲೋ ಮಾಡಿ
Published 11 ಸೆಪ್ಟೆಂಬರ್ 2024, 22:39 IST
Last Updated 11 ಸೆಪ್ಟೆಂಬರ್ 2024, 22:39 IST
Comments
ಆರೋಗ್ಯ ಮತ್ತು ಜೀವ ವಿಮಾ ಕಂತುಗಳ ಮೇಲೆ ಜಿಎಸ್‌ಟಿ ವಿಧಿಸುವುದರ ವಿರುದ್ಧ ಕೇಳಿ ಬಂದಿರುವ ಮಾತುಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಿದಂತೆ ಕಾಣುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸುವುದಕ್ಕಾಗಿ ಸಚಿವರ ತಂಡವನ್ನು ರಚಿಸಿದೆ. ತಂಡವು ವಸ್ತುಸ್ಥಿತಿ ಅಧ್ಯಯನ ಮಾಡಿ ಜಿಎಸ್‌ಟಿ ಕೌನ್ಸಿಲ್‌ಗೆ ವರದಿ ನೀಡಲಿದೆ. ಮುಂದಿನ ಸಭೆಯಲ್ಲಿ ಈ ಬಗ್ಗೆ ಮಂಡಳಿಯು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಜಿಎಸ್‌ಟಿಯನ್ನು ಪೂರ್ಣವಾಗಿ ರದ್ದುಪಡಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರ ಪರಿಗಣಿಸಿದಂತೆ ಕಾಣುತ್ತಿಲ್ಲ. ತೆರಿಗೆ ಕಡಿತಕ್ಕೆ ಮಾತ್ರ ಒಲವು ತೋರಿದಂತಿದೆ.

ಭಾರತದ ಪ್ರತಿಯೊಬ್ಬ ಪ್ರಜೆಯೂ 2047ರ ವೇಳೆಗೆ ವಿಮಾ ಸೌಲಭ್ಯವನ್ನು ಹೊಂದಿರಬೇಕು ಎಂಬ ಮಹತ್ವಾಕಾಂಕ್ಷೆಯ ಗುರಿಯನ್ನು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಹೊಂದಿದೆ. ದೇಶದ ವಿಮಾ ಕ್ಷೇತ್ರದಲ್ಲಿ ನಡೆಯುತ್ತಿರುವ ಈಗಿನ ಬೆಳವಣಿಗೆಯನ್ನು ಗಮನಿಸಿದರೆ ಈ ಗುರಿಯನ್ನು ತಲುಪಲು ಪ್ರಾಧಿಕಾರಕ್ಕೆ ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ. ಜೀವವಿಮೆ, ಆರೋಗ್ಯ ವಿಮೆಗಳ ಕಂತುಗಳ ಮೇಲೆ ವಿಧಿಸಲಾಗುತ್ತಿರುವ ಸರಕು ಮತ್ತು ಸೇವಾ ತೆರಿಗೆಯು (ಜಿಎಸ್‌ಟಿ) ದೇಶದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ತೆರಿಗೆಯನ್ನು ಕಡಿತಗೊಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ರಾಜಕೀಯ, ಸಾರ್ವಜನಿಕ, ವಿಮಾ ವಲಯಗಳಿಂದ ಒತ್ತಡವೂ ಬಂದಿದೆ. ‌ಕೇಂದ್ರ ಸರ್ಕಾರವು ಒತ್ತಡಕ್ಕೆ ಮಣಿದಂತೆ ಕಾಣುತ್ತಿದೆ. ಮುಂದಿನ ಜಿಎಸ್‌ಟಿ ಮಂಡಳಿಯ ಸಭೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. 

ಸದ್ಯ, ಆರೋಗ್ಯ ಮತ್ತು ಜೀವ ವಿಮೆ ಪಾಲಿಸಿಗಳ ಮೇಲೆ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. 2017ರಲ್ಲಿ ಜಿಎಸ್‌ಟಿ ಜಾರಿಗೆ ಬರುವುದಕ್ಕೂ ಮುನ್ನ ವಿಮಾ ಕಂತುಗಳ ಮೇಲೆ ಶೇ 15ರಷ್ಟು ಸೇವಾ ತೆರಿಗೆ ವಿಧಿಸಲಾಗುತ್ತಿತ್ತು (ಈ ತೆರಿಗೆಯಲ್ಲಿ ಮೂಲ ಸೇವಾ ತೆರಿಗೆ, ಸ್ವಚ್ಛ ಭಾರತ್‌ ಸೆಸ್‌, ಕೃಷಿ ಸೆಸ್‌ ಸೇರಿದಂತೆ ಇನ್ನಿತರ ಸೆಸ್‌ಗಳು ಸೇರಿದ್ದವು).  ಜಿಎಸ್‌ಟಿ ಅನುಷ್ಠಾನದ ಬಳಿಕ ವಿಮಾ ಕಂತುಗಳ ಮೊತ್ತ ಜಾಸ್ತಿಯಾಗಿದೆ. ಜೀವ, ಆರೋಗ್ಯಕ್ಕೆ ವಿಮೆಯ ರಕ್ಷಣೆ ಪಡೆಯುವಾಗಲೂ ಹೆಚ್ಚು ತೆರಿಗೆ ಪಾವತಿಸಬೇಕಾಗಿದೆ ಎಂಬ ಭಾವನೆ ಪಾಲಿಸಿದಾರರಲ್ಲಿ ಬೇರೂರಿದೆ. ಇತ್ತೀಚಿನ ವರ್ಷಗಳಲ್ಲಿ ಕೆಲವು ಆರೋಗ್ಯ ವಿಮೆ ಕಂಪನಿಗಳು ಕೂಡ ಕಂತಿನ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಿವೆ. ಮೂರು ವರ್ಷಗಳಲ್ಲಿ ಆರೋಗ್ಯ ವಿಮೆ ಕಂತುಗಳ ಮೇಲೆ ₹24,529 ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯವೇ ಹೇಳಿದೆ.

2023–24ನೇ ಸಾಲಿನಲ್ಲೇ ಆರೋಗ್ಯ ವಿಮೆ ಕಂತುಗಳಿಂದ ಮೇಲೆ ₹8,262.94 ಕೋಟಿ ಮತ್ತು ಆರೋಗ್ಯ ಮರುವಿಮೆ ಕಂತುಗಳಿಂದ ₹1,484.36 ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ. 

ವಿನಾಯಿತಿಗೆ ಹೆಚ್ಚಿದ ಕೂಗು

ವಿಮೆ ಮೇಲೆ ಜಿಎಸ್‌ಟಿ ವಿಧಿಸಬಾರದು ಎಂಬ ಒತ್ತಾಯ ಹಲವು ಸಮಯದಿಂದ ಕೇಳಿಬರುತ್ತಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಜುಲೈ 31ರಂದು ಪತ್ರ ಬರೆದ ನಂತರ ಈ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ.

‘ಜೀವ ವಿಮೆ ಮತ್ತು ಆರೋಗ್ಯ ವಿಮೆ ಕಂತುಗಳ ಮೇಲೆ ಜಿಎಸ್‌ಟಿ ವಿಧಿಸುವುದರಿಂದ ಬದುಕಿನ ಅನಿಶ್ಚಿತತೆಯ ಮೇಲೆ ತೆರಿಗೆ ವಿಧಿಸಿದಂತೆ ಆಗುತ್ತದೆ. ಜೀವನದ ಅನಿಶ್ಚಿತತೆಯ ಸಂದರ್ಭದಲ್ಲಿ ಕುಟುಂಬಕ್ಕೆ ರಕ್ಷಣೆ ಒದಗಿಸುವ ಉದ್ದೇಶದಿಂದ ವ್ಯಕ್ತಿಯೊಬ್ಬ ಖರೀದಿಸಿದ ವಿಮೆಗೆ ತೆರಿಗೆ ವಿಧಿಸಬಾರದು ಎಂದು ವಿಮಾ ನೌಕರರ ಒಕ್ಕೂಟ ಅಭಿಪ್ರಾಯಪಟ್ಟಿದೆ’ ಎಂದು ಅವರು ಪತ್ರದಲ್ಲಿ ಹೇಳಿದ್ದರು. ವಿಮೆ ಮೇಲಿನ ಜಿಎಸ್‌ಟಿ ತೆಗೆದು ಹಾಕಬೇಕು ಎಂದೂ ಅವರು ಕೋರಿದ್ದರು. ಗಡ್ಕರಿ ಹೇಳಿಕೆಗೆ ವಿವಿಧ ವಲಯಗಳಿಂದ ಭಾರಿ ಬೆಂಬಲ ವ್ಯಕ್ತವಾಗಿತ್ತು. ಆಗಸ್ಟ್‌ನಲ್ಲಿ ನಡೆದಿದ್ದ ಮುಂಗಾರು ಅಧಿವೇಶನದಲ್ಲಿ ವಿರೋಧ ಪಕ್ಷಗಳು ಇದೇ ವಿಚಾರವನ್ನು ಪ್ರಸ್ತಾಪಿಸಿದ್ದವು. ಸದನದ ಒಳಗೆ ಮಾತ್ರವಲ್ಲದೆ ಹೊರಗೂ ಹೋರಾಟ ನಡೆಸಿದ್ದವು.

ಸರ್ಕಾರದ ವಾದವೇನು?

ವಿಮೆಯು ಒಂದು ಸೇವೆ ಆಗಿರುವುದರಿಂದ ಎಲ್ಲ ವಿಮಾ ಪಾಲಿಸಿಗಳು ತೆರಿಗೆ ವಿಧಿಸಲು ಅರ್ಹವಾಗಿವೆ ಎಂಬುದು ಸರ್ಕಾರದ ವಾದ. ವಿಮಾ ಕಂತುಗಳ ಮೇಲೆ ವಿಧಿಸಲಾಗುತ್ತಿರುವ ಜಿಎಸ್‌ಟಿಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಉತ್ತಮ ವರಮಾನ ತರುತ್ತಿದೆ. ಜಿಎಸ್‌ಟಿ ವಿಧಿಸುತ್ತಿರುವುದನ್ನು ಸಮರ್ಥಿಸಿಕೊಂಡು ಮಾತನಾಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ‘ಮೂರು ವರ್ಷಗಳಲ್ಲಿ ಸಂಗ್ರಹವಾಗಿದ್ದ ₹24,529 ಕೋಟಿ ಜಿಎಸ್‌ಟಿಯಲ್ಲಿ ₹12,264 ಕೋಟಿ ಹಣವು ಎಸ್‌ಜಿಎಸ್‌ಟಿಯಾಗಿ ನೇರವಾಗಿ ರಾಜ್ಯಗಳಿಗೆ ಸಂದಿವೆ’ ಎಂದು ಹೇಳಿದ್ದರು.

ಜೀವ ವಿಮೆ, ಆರೋಗ್ಯ ವಿಮೆ ಮಾಡಿಸಿಕೊಂಡವರಿಗೆ ಆದಾಯ ಲೆಕ್ಕಪತ್ರ ಸಲ್ಲಿಕೆ ವೇಳೆ ತೆರಿಗೆ ರಿಯಾಯಿತಿ ಸಿಗುತ್ತದೆ ಎಂಬುದು ಸರ್ಕಾರದ ಇನ್ನೊಂದು ವಾದ. ವಸ್ತುಗಳು, ಸೇವೆಗಳ ಮೇಲೆ ಜಿಎಸ್‌ಟಿ ನಿಗದಿಪಡಿಸುವುದು ಜಿಎಸ್‌ಟಿ ಮಂಡಳಿಯ ಶಿಫಾರಸಿನ ಮೇಲೆ. ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯ ಈ ಮಂಡಳಿಯಲ್ಲಿ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಸಚಿವರು ಇರುತ್ತಾರೆ. ಜಿಎಸ್‌ಟಿ ವಿನಾಯಿತಿ ಅಥವಾ ಕಡಿತ ಮಾಡುವ ಸಂಬಂಧ ಮಂಡಳಿಯ ಸದಸ್ಯರು ತೀರ್ಮಾನಿಸಬೇಕು ಎಂದು ಸರ್ಕಾರ ಹೇಳಿತ್ತು.

ವಿಮಾ ಕಂತಿನ ಮೇಲೆ ಜಿಎಸ್‌ಟಿ ಲೆಕ್ಕಾಚಾರ ಹೇಗೆ?
ಜೀವ ವಿಮೆ, ಆರೋಗ್ಯ ವಿಮೆ ಸೇರಿದಂತೆ ಯಾವುದೇ ವಿಮೆಯ ಮೂಲ ಕಂತಿನ ಮೇಲೆ ಶೇ 18ರಷ್ಟು ಜಿಎಸ್‌ಟಿಯನ್ನು ವಿಧಿಸಲಾಗುತ್ತದೆ. ಆರೋಗ್ಯ ವಿಮೆಯೊಂದರ ಕಂತಿನ ಮೂಲ ಮೊತ್ತ ₹10 ಸಾವಿರ ಎಂದಿದ್ದರೆ, ಆ ಮೊತ್ತಕ್ಕೆ ಶೇ18ರಷ್ಟು ತೆರಿಗೆಯಂತೆ ಲೆಕ್ಕ ಹಾಕಿದಾಗ ಬರುವ ಮೊತ್ತ (₹1,800) ಪಾವತಿಸ ಬೇಕಾಗಿರುವ ತೆರಿಗೆಯಾಗಿರುತ್ತದೆ. ಈ ಮೊತ್ತವನ್ನು ಮೂಲ ಕಂತಿಗೆ (₹10 ಸಾವಿರ) ಸೇರಿಸಿದಾಗ ಬರುವ ಒಟ್ಟು ಮೊತ್ತವನ್ನು (₹11,800) ಪಾಲಿಸಿದಾರ ವಿಮೆಯ ಕಂತಾಗಿ ಪಾವತಿಸಬೇಕಾಗುತ್ತದೆ.

ವಿಮಾ ಕಂತುಗಳ ಮೇಲೆ ತೆರಿಗೆ

  • 18%: 2017ರಲ್ಲಿ ಜಿಎಸ್‌ಟಿ ಜಾರಿಗೆ ಬಂದ ನಂತರ ನಿಗದಿಪಡಿಸಲಾಗಿರುವ ತೆರಿಗೆ ಪ್ರಮಾಣ

  • 15%: ಜಿಎಸ್‌ಟಿ ಜಾರಿಗೆ ಬರುವುದಕ್ಕೂ ಮುನ್ನ ವಿಧಿಸಲಾಗುತ್ತಿದ್ದ ಸೇವಾ ತೆರಿಗೆ ಪ್ರಮಾಣ

ವಿಮಾ ಮಾರುಕಟ್ಟೆ: ಏನು, ಎತ್ತ?

ಭಾರತೀಯ ವಿಮಾ ಮಾರುಕಟ್ಟೆಯು ಹಲವು ವರ್ಷಗಳಿಂದ ಗಣನೀಯವಾಗಿ ಪ್ರಗತಿ ಕಾಣುತ್ತಿವೆ. ಇದರಲ್ಲಿ ಭಾರತೀಯ ಜೀವ ವಿಮಾ ನಿಗಮ ಮತ್ತು ಇತರೆ ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳ ಪಾಲೇ ಶೇ 60ಕ್ಕೂ ಹೆಚ್ಚಿವೆ.

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ, 2022–23ರಲ್ಲಿ  ಜೀವ ವಿಮಾ ಉದ್ಯಮವು ಶೇ 12.98 ರಷ್ಟು ಬೆಳವಣಿಗೆ ಸಾಧಿಸಿತ್ತು. ವಿಮಾ ಕಂತುಗಳಿಂದ ₹7.83 ಲಕ್ಷ ಆದಾಯ ಗಳಿಸಿತ್ತು.  ಆ ವರ್ಷ 2.85 ಕೋಟಿಗಳಷ್ಟು ಹೊಸ ವಿಮಾ ಪಾಲಿಸಿಗಳನ್ನು ವಿತರಿಸಿದ್ದವು. ಇವುಗಳಲ್ಲಿ ಶೇ 71.75ರಷ್ಟು ಪಾಲಿಸಿಗಳನ್ನು ಸರ್ಕಾರಿ ಸ್ವಾಮ್ಯದ ಕಂಪನಿಗಳೇ ವಿತರಿಸಿದ್ದವು.

ಜೀವ ವಿಮಾಯೇತರ ವಿಮಾ (ಆರೋಗ್ಯ, ಅಗ್ನಿಆಕಸ್ಮಿಕ, ನೌಕೆ, ವಾಹನ ವಿಮೆ) ಉದ್ಯಮವು 2022–23ರ ಸಾಲಿನಲ್ಲಿ ಶೇ 16.40ರಷ್ಟು ಪ್ರಗತಿ ಸಾಧಿಸಿತ್ತು. ಆ ವರ್ಷ ₹2.57 ಲಕ್ಷ ಕೋಟಿಯಷ್ಟು ಆದಾಯ ವಿಮಾ ಕಂತುಗಳಿಂದ ಬಂದಿತ್ತು.  ವಿಮಾ ಕಂತಿನ ಆದಾಯದಲ್ಲಿ ಆರೋಗ್ಯ ವಿಮೆಯ ಕೊಡುಗೆಯೇ ಶೇ 38.02ರಷ್ಟಿತ್ತು. ಆ ಸಾಲಿನಲ್ಲಿ ಆರೋಗ್ಯ ವಿಮಾ ಕ್ಷೇತ್ರವು ಶೇ 21.32ರಷ್ಟು ಪ್ರಗತಿ ದಾಖಲಿಸಿತ್ತು. ₹97,634 ಕೋಟಿಯಷ್ಟು ಹಣ ಕಂತು ಪಾವತಿಯಿಂದ ಸಂಗ್ರಹವಾಗಿತ್ತು. 

ಹೆಚ್ಚಿದ ವೈದ್ಯಕೀಯ ಹಣದುಬ್ಬರ
ಕೆಲವು ವರ್ಷಗಳಿಂದೀಚೆಗೆ ಆರೋಗ್ಯ ಸೇವೆ ದುಬಾರಿಯಾಗುತ್ತಿದೆ. ರೋಗಿಗಳ ಆಸ್ಪತ್ರೆ ವೆಚ್ಚ ಜಾಸ್ತಿಯಾಗುತ್ತಿದೆ. ಕಳೆದ ವರ್ಷ ವೈದ್ಯಕೀಯ ಹಣದುಬ್ಬರ ಶೇ 14ರಷ್ಟಿತ್ತು. ಇದು ವಿಮಾ ಕಂಪನಿಗಳಿಗೆ ಹೊರೆಯಾಗುತ್ತಿದೆ. ಇದರೊಂದಿಗೆ ಜಿಎಸ್‌ಟಿಯೂ ಜಾಸ್ತಿ ಇರುವುದರಿಂದ ವಿಮಾ ಕಂತುಗಳ ಮೊತ್ತ ಹೆಚ್ಚಳವಾಗಿದೆ. ಹೀಗಾಗಿ ಜಿಎಸ್‌ಟಿಯಲ್ಲಿ ಕಡಿತ ಮಾಡಬೇಕು ಎಂಬುದು ವಿಮಾ ಕ್ಷೇತ್ರದಲ್ಲಿ ತೊಡಗಿಕೊಂಡವರ ಹೇಳಿಕೆ. ಭಾರತೀಯ ಸಾಮಾನ್ಯ ವಿಮಾ ಏಜೆಂಟರ ಮಹಾ ಒಕ್ಕೂಟವು ಜೂನ್‌ ತಿಂಗಳಲ್ಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಪತ್ರ ಬರೆದು ಸಾಮಾನ್ಯ ವಿಮೆಗಳ ಮೇಲಿನ ಜಿಎಸ್‌ಟಿಯನ್ನು ಶೇ 18ರಿಂದ ಶೇ 5ಕ್ಕೆ ಇಳಿಸಬೇಕು ಎಂದು ಒತ್ತಾಯಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT