ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ಕಾನೂನುಗಳ ವೈವಿಧ್ಯ | ಹಿಂದೂ, ಮುಸ್ಲಿಂ ವಿವಾಹ ಕಾಯ್ದೆಗಳು ಏನು ಹೇಳುತ್ತವೆ..?

Published 10 ಜುಲೈ 2023, 5:24 IST
Last Updated 10 ಜುಲೈ 2023, 5:24 IST
ಅಕ್ಷರ ಗಾತ್ರ

ದೇಶದಲ್ಲಿ ಹೆಚ್ಚಿನ ಧರ್ಮದವರಿಗೆ ಅವರದ್ಧೇ ಆದ ವೈಯಕ್ತಿಕ ಕಾನೂನುಗಳಿವೆ. ಕೆಲವು ಕಾನೂನುಗಳು ಕೆಲವು ಪ್ರದೇಶಕ್ಕಷ್ಟೇ ಅನ್ವಯವಾಗುತ್ತವೆ

ಹಿಂದೂ ವಿವಾಹ ಕಾಯ್ದೆ

ಇದು ದೇಶದ ಬಹುತೇಕ ಹಿಂದೂಗಳಿಗೆ ಅನ್ವಯಾಗುತ್ತದೆ. ಹೆಸರಿನಲ್ಲಿ ‘ಹಿಂದೂ ವಿವಾಹ ಕಾಯ್ದೆ’ ಎಂದು ಇದೆಯಾದರೂ, ಸಿಖ್‌, ಜೈನ ಮತ್ತು ಬೌದ್ಧ ಧರ್ಮೀಯರಿಗೂ ಈ ಕಾಯ್ದೆ ಅನ್ವಯವಾಗುತ್ತದೆ. ವಿವಾಹವು ಒಂದು ಪವಿತ್ರ ಸಂಬಂಧ ಎಂದು ಈ ಕಾಯ್ದೆಯು ಪರಿಗಣಿಸುತ್ತದೆ. ವೈವಾಹಿಕ ಸಂಬಂಧ, ವೈವಾಹಿಕ ಸಂಬಂಧದಲ್ಲಿನ ಜವಾಬ್ದಾರಿಗಳು, ವಿಚ್ಛೇದನಕ್ಕೆ ಕಾರಣಗಳು, ವಿಚ್ಛೇದನದ ಪ್ರಕ್ರಿಯೆಗಳು, ವಿಚ್ಛೇದನದ ನಂತರದ ಪರಿಹಾರಗಳು, ಎರಡನೇ ಮದುವೆ ಮೊದಲಾದ ಅಂಶಗಳನ್ನು ಈ ಕಾಯ್ದೆಯು ನಿರ್ದೇಶಿಸುತ್ತದೆ. ಈ ಕಾಯ್ದೆಗೆ ಹಲವು ಬಾರಿ ತಿದ್ದುಪಡಿ ತರಲಾಗಿದೆ.

ಹಿಂದೂ ಉತ್ತರಾಧಿಕಾರ ಕಾಯ್ದೆ

ಇದು ದೇಶದ ಬಹುತೇಕ ಹಿಂದೂಗಳಿಗೆ, ಸಿಖ್‌, ಜೈನ ಮತ್ತು ಬೌದ್ಧ ಧರ್ಮದವರಿಗೆ ಅನ್ವಯಾಗುತ್ತದೆ. ಈ ಧರ್ಮದ ಜನರಲ್ಲಿ ವಿವಾಹ ಮತ್ತು ಕೌಟುಂಬಿಕ ಸಂಬಂಧದಲ್ಲಿ ಆಸ್ತಿಯ ಹಕ್ಕು ಯಾರಿಗೆಲ್ಲಾ ದೊರೆಯುತ್ತದೆ ಎಂಬುದನ್ನು ಈ ಕಾಯ್ದೆಯು ವಿವರಿಸುತ್ತದೆ. ಯಾವ ಸ್ವರೂಪದ ಆಸ್ತಿಗಳ ಮೇಲೆ ಈ ಕಾಯ್ದೆಯ ಅನ್ವಯ ಹಕ್ಕು ಸಾಧಿಸಬಹುದು ಅಥವಾ ವಾರಸುದಾರಿಕೆ ಸಾಧಿಸಬಹುದು ಎಂಬುದನ್ನು ಇದರಲ್ಲಿ ವಿವರಿಸಲಾಗಿದೆ. ಕುಟುಂಬದಲ್ಲಿನ ವ್ಯಕ್ತಿಗಳ ಸಂಬಂಧದ ಸ್ವರೂಪ, ಆ ಸಂಬಂಧದ ಆಧಾರದ ಮೇಲೆ ಅವರಿಗೆ ದೊರೆಯುವ ಆಸ್ತಿ ಮತ್ತು ಉತ್ತರಾಧಿಕಾರದ ಹಕ್ಕುಗಳು ಎಂಥವು ಎಂಬುದನ್ನು ಇದರಲ್ಲಿ ವಿವರಿಸಲಾಗಿದೆ. ಹೀಗಾಗಿ ಹಿಂದೂ, ಸಿಖ್‌, ಜೈನ, ಬೌದ್ಧ ಧರ್ಮೀಯರಿಗೆ ಇದು ಅತ್ಯಂತ ಮಹತ್ವದ ವೈಯಕ್ತಿಕ ಕಾನೂನಾಗಿದೆ.‌

ಹಿಂದೂ ಅಪ್ರಾಪ್ತ ವಯಸ್ಕರು ಮತ್ತು ಪಾಲಕತ್ವ ಕಾಯ್ದೆ

ಹಿಂದೂ ಕುಟುಂಬದಲ್ಲಿನ ಅಪ್ರಾಪ್ತ ವಯಸ್ಕರ ಹೊಣೆಗಾರಿಕೆಯನ್ನು ವಿವರಿಸುವ  ಕಾಯ್ದೆ ಇದಾಗಿದೆ. ಇದು ಜೈನ, ಬೌದ್ಧ ಮತ್ತು ಸಿಖ್‌ ಧರ್ಮದವರಿಗೂ ಅನ್ವಯವಾಗುತ್ತದೆ. ಒಂದು ಕುಟುಂಬದಲ್ಲಿನ ಅಪ್ರಾಪ್ತ ವಯಸ್ಕರ ಹೊಣೆಗಾರಿಕೆ ಯಾರದ್ದು, ಅವರಿಗೆ 18 ವರ್ಷ ತುಂಬುವವರೆಗೆ ಅವರ ಆಸ್ತಿಯ ಹೊಣೆಗಾರಿಕೆ ಯಾರದು ಎಂಬುದನ್ನು ಈ ಕಾಯ್ದೆ ವಿವರಿಸುತ್ತದೆ. ಇದನ್ನೂ ಒಂದು ವೈಯಕ್ತಿಕ ಕಾನೂನು ಎಂದು ಪರಿಗಣಿಸಲಾಗಿದೆ. 

ಕ್ರೈಸ್ತ ವಿವಾಹ ಕಾಯ್ದೆ

ಭಾರತದಲ್ಲಿರುವ ಕ್ರೈಸ್ತ ಧರ್ಮೀಯರ ವಿವಾಹ ಮತ್ತು ವಿಚ್ಛೇದನವನ್ನು ಈ ಕಾಯ್ದೆ ವಿವರಿಸುತ್ತದೆ. ವಿವಾಹದ ರೂಪುರೇಷೆಗಳು, ಉತ್ತರಾಧಿಕಾರದ ಹಕ್ಕುಗಳು, ವಿಚ್ಛೇದನಕ್ಕೆ ಕಾರಣಗಳು, ವಿಚ್ಛೇದನದ ಪ್ರಕ್ರಿಯೆಗಳು, ಪರಿಹಾರಗಳನ್ನು ಈ ಕಾಯ್ದೆ ವಿವರಿಸುತ್ತದೆ. ಭಾರತೀಯ ಕ್ರೈಸ್ತರಿಗೆ ಇದು ಅನ್ವಯವಾಗುತ್ತದೆ. ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಇತರ ಭಾರತೀಯರಿಗೂ ಈ ಕಾಯ್ದೆಯ ನಿಯಮಗಳು ಅನ್ವಯವಾಗುತ್ತವೆ.

ಪಾರ್ಸಿ ವಿವಾಹ ಕಾಯ್ದೆ

ಪಾರ್ಸಿ ಧರ್ಮದವರ ವೈವಾಹಿಕ ಸಂಬಂಧ ಮತ್ತು ವಿಚ್ಛೇದನವನ್ನು ನಿರ್ದೇಶಿಸಲು ಪ್ರತ್ಯೇಕ ಕಾನೂನು ರಚಿಸಲಾಗಿದೆ. ಭಾರತದಲ್ಲಿನ ಯಹೂದಿಗಳಿಗೂ ಇದು ಅನ್ವಯವಾಗುತ್ತದೆ.

ಈಶಾನ್ಯ ಭಾರತದ ರಾಜ್ಯಗಳ ಗುಡ್ಡಗಾಡು ಪ್ರದೇಶ ನಿವಾಸಿಗಳಿಗೆ 371–ಎ, 371–ಬಿ ಮತ್ತು 371–ಐ ವಿಧಿಗಳ ಅಡಿಯಲ್ಲಿ ಸ್ವಾಯತ್ತ ಜಿಲ್ಲೆಗಳ ಅಧಿಕಾರ ನೀಡಲಾಗಿದೆ. ಈ ಜನರು ವಿವಾಹ, ಆಸ್ತಿ, ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ತಮ್ಮದೇ ಕಾನೂನುಗಳನ್ನು ರಚಿಸಿಕೊಳ್ಳಲು ಮತ್ತು ಅವನ್ನು ಪಾಲಿಸಲು ಅವಕಾಶವಿದೆ
ನಂಬೂದಿರಿ ಸಮುದಾಯಕ್ಕೆ ಸಂಬಂಧಿಸಿದಂತೆ ಮದ್ರಾಸ್‌ ನಂಬೂದಿರಿ ಕಾಯ್ದೆ, ಮದ್ರಾಸ್‌ ಕಾಯ್ದೆ, ಕೊಚ್ಚಿ ನಂಬೂದಿರಿ ಕಾಯ್ದೆಗಳು ಜಾರಿಯಲ್ಲಿವೆ

ಮುಸ್ಲಿಂ ವಿವಾಹ ಕಾಯ್ದೆ

ಸ್ವಾತಂತ್ರ್ಯಾಪೂರ್ವದಲ್ಲೇ ಈ ಕಾನೂನು ಜಾರಿಯಲ್ಲಿತ್ತು. ಆನಂತರ ಈ ಕಾಯ್ದೆಗೆ ಹಲವು ಬಾರಿ ತಿದ್ದುಪಡಿ ತರಲಾಗಿದೆ. ಇದು ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲೇ ಅತ್ಯಂತ ಮಹತ್ವದ ಕಾಯ್ದೆಯಾಗಿದೆ. ವಿವಾಹವು ಒಂದು ಗಂಡು ಮತ್ತು ಹೆಣ್ಣಿನ ನಡುವಣ ಒಪ್ಪಂದ ಎಂದು ಈ ಕಾನೂನು ಪರಿಗಣಿಸುತ್ತದೆ. ಇಬ್ಬರೂ ಒಪ್ಪಿದರೆ ಮಾತ್ರ ಆ ವಿವಾಹ ಏರ್ಪಡುತ್ತದೆ ಮತ್ತು ಇದಕ್ಕೆ ಇಬ್ಬರು ಸಾಕ್ಷಿಗಳು ಇರಲೇಬೇಕು. ವೈವಾಹಿಕ ಸಂಬಂಧದ ಜವಾಬ್ದಾರಿಗಳು, ವೈವಾಹಿಕ ಒಪ್ಪಂದದ ಹೊಣೆಗಾರಿಕೆಗಳನ್ನು ಈ ಕಾನೂನು ವಿವರಿಸುತ್ತದೆ. ವೈವಾಹಿಕ ಸಂಬಂಧದ ಒಪ್ಪಂದವನ್ನು ಯಾರೇ ಮುರಿದರೂ, ಸಂಬಂಧ ಮುಂದುವರಿಸುವುದು ಅಸಾಧ್ಯ ಎನಿಸಿದಾಗ ವಿಚ್ಛೇದನ ಪಡೆಯುವ ಹಕ್ಕನ್ನು ಗಂಡ–ಹೆಂಡತಿ ಇಬ್ಬರಿಗೂ ಈ ಕಾಯ್ದೆ ನೀಡುತ್ತದೆ. ನ್ಯಾಯಾಲಯದ ಮೊರೆ ಹೋಗದೆಯೇ, ತ್ರಿವಳಿ ತಲಾಖ್‌ ಅಡಿಯಲ್ಲಿ ವಿಚ್ಛೇದನ ಪಡೆಯುವ ಪದ್ಧತಿ ಜಾರಿಯಲ್ಲಿ ಇತ್ತು. ಅದನ್ನು ಈಚೆಗೆ ರದ್ದುಪಡಿಸಲಾಗಿದೆ. ಆಸ್ತಿಯ ಮತ್ತು ಉತ್ತರಾಧಿಕಾರದ ಹಕ್ಕನ್ನೂ ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ವಿವರಿಸಲಾಗಿದೆ.

ದೇಶದಲ್ಲಿ ಹೆಚ್ಚಿನ ಧರ್ಮದವರಿಗೆ ಅವರದ್ಧೇ ಆದ ವೈಯಕ್ತಿಕ ಕಾನೂನುಗಳಿವೆ. ಕೆಲವು ಕಾನೂನುಗಳು ಕೆಲವು ಪ್ರದೇಶಕ್ಕಷ್ಟೇ ಅನ್ವಯವಾಗುತ್ತವೆ

ಇದನ್ನೂ ಓದಿ : ಆಳ–ಅಗಲ: ಏಕರೂಪ ನಾಗರಿಕ ಸಂಹಿತೆಯ ಚರ್ಚೆ– ವೈಯಕ್ತಿಕ ಕಾನೂನುಗಳ ಗತಿ ಏನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT