ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ರೈತರ ಆತ್ಮಹತ್ಯೆಗಿಲ್ಲ ಕಡಿವಾಣ

Last Updated 11 ಆಗಸ್ಟ್ 2022, 19:41 IST
ಅಕ್ಷರ ಗಾತ್ರ

‘ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಎಂಟು ವರ್ಷಗಳಲ್ಲಿ ದೇಶದಲ್ಲಿ ಒಬ್ಬ ರೈತನೂ ಆತ್ಮಹತ್ಯೆ ಮಾಡಿಕೊಂಡಿಲ್ಲ’ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಈಚೆಗೆ ಲೋಕಸಭೆಯಲ್ಲಿ ಹೇಳಿದ್ದಾರೆ. ಆದರೆ, ಸರ್ಕಾರದ್ದೇ ದಾಖಲೆಗಳ ಪ್ರಕಾರ 2014ರಿಂದ 2020 ಅಂತ್ಯದವರೆಗೆ 78 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆಗಳಿಗೆ ಸಂಬಂಧಿಸಿದ ಅಧಿಕೃತ ದಾಖಲೆಗಳು ಸರ್ಕಾರಿ ಸಂಸ್ಥೆಗಳ ಜಾಲತಾಣಗಳಲ್ಲಿ ಸಾರ್ವಜನಿಕರಿಗೆ ಲಭ್ಯವಿವೆ.

ಕೇಂದ್ರ ಗೃಹ ಸಚಿವಾಲಯದ ಅಧೀನ ಸಂಸ್ಥೆಯಾದ ‘ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ–ಎನ್‌ಸಿಆರ್‌ಬಿ’ಯು, ದೇಶದಲ್ಲಿನ ಎಲ್ಲಾ ಸ್ವರೂಪದ ಅಪರಾಧಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನಿರ್ವಹಿಸುತ್ತದೆ. ಪ್ರತಿ ವರ್ಷ ದೇಶದಲ್ಲಿ ನಡೆದ ಅಪರಾಧಗಳು ಮತ್ತು ಅಸಹಜ ಸಾವುಗಳ ದಾಖಲೆಗಳನ್ನೂ ನಿರ್ವಹಿಸುತ್ತದೆ ಹಾಗೂ ಅವುಗಳಿಗೆ ಸಂಬಂಧಿಸಿದ ವರದಿಯನ್ನು ಬಿಡುಗಡೆ ಮಾಡುತ್ತದೆ.

ಅಪಘಾತಗಳು ಮತ್ತು ಆತ್ಮಹತ್ಯೆಗಳಿಗೆ ಸಂಬಂಧಿಸಿದಂತೆ ಎನ್‌ಸಿಆರ್‌ಬಿಯು ಪ್ರತಿವರ್ಷ ‘ಭಾರತದಲ್ಲಿ ಅಪಘಾತದ ಸಾವುಗಳು ಮತ್ತು ಆತ್ಮಹತ್ಯೆ’ ಎಂಬ ವರದಿಯನ್ನು ಬಿಡುಗಡೆ ಮಾಡುತ್ತದೆ. ಎನ್‌ಸಿಆರ್‌ಬಿಯು 1967ರಿಂದ ಈ ವರದಿಯ ಪ್ರಕಟಣೆ ಆರಂಭಿಸಿತ್ತು. ಈಗ 2020ರವರೆಗಿನ ವರದಿಯನ್ನು ಬಿಡುಗಡೆ ಮಾಡಿದೆ. 2021ರ ವರದಿಯನ್ನು ಇನ್ನಷ್ಟೇ ಬಿಡುಗಡೆ ಮಾಡಬೇಕಿದೆ. 1967ರಿಂದ 2020ರವರೆಗಿನ ಒಟ್ಟು 54 ವಾರ್ಷಿಕ ವರದಿಗಳು ಎನ್‌ಸಿಆರ್‌ಬಿಯ ಅಧಿಕೃತ ಜಾಲತಾಣದಲ್ಲಿ ಲಭ್ಯವಿವೆ.

2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದ ನಂತರವೂ ಎನ್‌ಸಿಆರ್‌ಬಿ ಈ ವರದಿಯನ್ನು ಪ್ರಕಟಿಸುತ್ತಿದೆ. 2014ರಿಂದ 2020ರವರೆಗೆ ಪ್ರಕಟವಾದ ವರದಿಗಳ ಪ್ರಕಾರ, ಆ ಅವಧಿಯಲ್ಲಿ ಪ್ರತಿ ವರ್ಷ 10,000ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಏಳು ವರ್ಷಗಳಲ್ಲಿ ಆತ್ಮಹತ್ಯೆಗೆ ಬಲಿಯಾದ ರೈತರ ಒಟ್ಟು ಸಂಖ್ಯೆ 78,303 ಆಗುತ್ತದೆ. 2021ರ ವರದಿ ಬಿಡುಗಡೆಯಾದರೆ, ಎಂಟು ವರ್ಷಗಳ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಇನ್ನೂ ಹೆಚ್ಚುತ್ತದೆ. ಆದರೂ, ಎಂಟು ವರ್ಷಗಳಲ್ಲಿ ಒಬ್ಬ ರೈತನೂ ಆತ್ಮಹತ್ಯೆಯಿಂದ ಸತ್ತಿಲ್ಲ ಎಂದು ಬಿಜೆಪಿ ಸಂಸದ ದುಬೆ ಅವರು ಲೋಕಸಭೆಯಲ್ಲಿ ಹೇಳಿದ್ದಾರೆ.

ನಿಶಿಕಾಂತ್ ದುಬೆ ಅವರು ನೀಡಿದ ಈ ತಪ್ಪು ಮಾಹಿತಿಯನ್ನು ಆಧರಿಸಿ, ಹಲವು ಸುದ್ದಿತಾಣಗಳು ‘ಎಂಟು ವರ್ಷಗಳಲ್ಲಿ ಒಬ್ಬ ರೈತನೂ ಆತ್ಮಹತ್ಯೆ ಮಾಡಿಕೊಂಡಿಲ್ಲ’ ಎಂದು ಸುದ್ದಿ ಪ್ರಕಟಿಸಿವೆ.

ದುಬೆ ಹೇಳಿದ್ದೇನು...

‘ವಿರೋಧ ಪಕ್ಷಗಳುರೈತರ ಆತ್ಮಹತ್ಯೆಯ ಬಗ್ಗೆಎಂಟು ವರ್ಷಗಳಲ್ಲಿ ಒಂದು ಚರ್ಚೆಯನ್ನಾದರೂ ನಡೆಸಿವೆಯೇ? ಅವರು ನಡೆಸಿಲ್ಲ ಅಂದರೆ, ಆ ಅವಧಿಯಲ್ಲಿ ದೇಶದಲ್ಲಿ ಒಬ್ಬ ರೈತನೂ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಅರ್ಥ. ನಾವು ರೈತರನ್ನು ಎಷ್ಟು ಬಲಪಡಿಸಿದ್ದೇವೆ ಅಂದರೆ, ಅವರು ಪ್ರತಿಭಟಿಸುವಷ್ಟು ಪ್ರಬಲರಾಗಿದ್ದಾರೆ. ರೈತರು ವರ್ಷಪೂರ್ತಿ ಪ್ರತಿಭಟನೆಯಲ್ಲೇ ಇದ್ದರೂ, ಅಷ್ಟೂ ಅವಧಿಯ ಹಣ ಅವರಿಗೆ ದೊರೆಯುವಷ್ಟು ಅವರನ್ನು ಮೋದಿ ಬಲಪಡಿಸಿದ್ದಾರೆ. ಆದರೆ, ಈ ಅವಧಿಯಲ್ಲಿ ಒಬ್ಬ ರೈತನೂ ಆತ್ಮಹತ್ಯೆಯಿಂದ ಸತ್ತಿಲ್ಲ’ ಎಂದು ನಿಶಿಕಾಂತ್ ದುಬೆ ಅವರು ಲೋಕಸಭೆಯಲ್ಲಿ ಹೇಳಿದ್ದರು.

ಭೂಮಿ ಹೊಂದಿದ್ದ ರೈತರಲ್ಲೇ ಆತ್ಮಹತ್ಯೆ ಹೆಚ್ಚು

ಆತ್ಮಹತ್ಯೆ ಮಾಡಿಕೊಂಡ ರೈತರಲ್ಲಿ ಕೃಷಿ ಭೂಮಿ ಹೊಂದಿದ್ದ ರೈತರ ಸಂಖ್ಯೆ ಎಷ್ಟು ಎಂಬುದನ್ನು ಎನ್‌ಸಿಆರ್‌ಬಿಯು ಪ್ರತ್ಯೇಕ ದತ್ತಾಂಶಗಳ ಮೂಲಕ ವಿವರಿಸಿದೆ. ಇದರಲ್ಲಿ ಸ್ವಂತ ಭೂಮಿ ಹೊಂದಿದ್ದ, ಜಮೀನು ಭೋಗ್ಯಕ್ಕೆ ಪಡೆದುಬೇಸಾಯ ಮಾಡುತ್ತಿದ್ದ, ಗೇಣಿ ಆಧಾರದಲ್ಲಿಬೇಸಾಯ ಮಾಡುತ್ತಿದ್ದ ರೈತರನ್ನು ಸೇರಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ಒಟ್ಟು ರೈತರಲ್ಲಿ ಈ ವರ್ಗಕ್ಕೆ ಸೇರಿದ್ದ ರೈತರ ಸಂಖ್ಯೆಯೇ ಹೆಚ್ಚು. ಆತ್ಮಹತ್ಯೆ ಮಾಡಿಕೊಂಡ ಪ್ರತಿ ನೂರು ರೈತರಲ್ಲಿ, ಈ ವರ್ಗಕ್ಕೆ ಸೇರಿದ್ದ ರೈತರ ಸಂಖ್ಯೆ 55ರಷ್ಟು.

ಕೃಷಿ ಕಾರ್ಮಿಕರ ಸಂಖ್ಯೆಯೂ ಕಡಿಮೆಯಲ್ಲ

ಆತ್ಮಹತ್ಯೆ ಮಾಡಿಕೊಂಡ ಕೃಷಿ ಕಾರ್ಮಿಕರಿಗೆ ಸಂಬಂಧಿಸಿದ ದತ್ತಾಂಶವನ್ನೂ ಎನ್‌ಸಿಆರ್‌ಬಿಯು ಪ್ರತ್ಯೇಕವಾಗಿ ನೀಡುತ್ತದೆ.ದಿನಗೂಲಿ ಆಧಾರದಲ್ಲಿ, ಗುತ್ತಿಗೆಗೆ ಪಡೆದ ಕೃಷಿ ಭೂಮಿಯಲ್ಲಿದುಡಿಯುವವರನ್ನು ಈ ವರ್ಗದಲ್ಲಿ ಸೇರಿಸಲಾಗಿದೆ. 2014ರಿಂದ 2020ರವರೆಗೆ ಆತ್ಮಹತ್ಯೆಗೆಶರಣಾದ ಕೃಷಿ ಕಾರ್ಮಿಕರ ಸಂಖ್ಯೆ 35 ಸಾವಿರವನ್ನು ದಾಟುತ್ತದೆ. ಈ ಅವಧಿಯಲ್ಲಿ ಆತ್ಮಹತ್ಯೆಮಾಡಿಕೊಂಡ ರೈತರಲ್ಲಿ ಈ ವರ್ಗದವರಪ್ರಮಾಣ ಶೇ 45ರಷ್ಟು.

ವಿಶ್ಲೇಷಣೆ ಕೈಬಿಟ್ಟ ಎನ್‌ಸಿಆರ್‌ಬಿ

ಪ್ರತಿ ವರ್ಷ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಕುರಿತು ಎನ್‌ಸಿಆರ್‌ಬಿಯು ವರದಿಗಳಲ್ಲಿ ವಿಶ್ಲೇಷಣಾ ವರದಿಯನ್ನು ಪ್ರತ್ಯೇಕವಾಗಿ ನೀಡುತ್ತಿತ್ತು. ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣಗಳೇನು ಎಂಬುದನ್ನು ಈ ವಿಶ್ಲೇಷಣೆಯಲ್ಲಿ ವಿವರಿಸಲಾಗುತ್ತಿತ್ತು.

2014 ಮತ್ತು 2015ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಒಟ್ಟು ರೈತರಲ್ಲಿ ಸಾಲ ಮತ್ತು ಆರ್ಥಿಕ ಸಮಸ್ಯೆಯಿಂದ, ಆತ್ಮಹತ್ಯೆ ಮೊರೆ ಹೋದ ರೈತರ ಪ್ರಮಾಣ ಶೇ 35ಕ್ಕಿಂತಲೂ ಹೆಚ್ಚು. ಅದೇ ರೀತಿ ಶೇ 25ಕ್ಕಿಂತಲೂ ಹೆಚ್ಚು ರೈತರು ಆತ್ಮಹತ್ಯೆಗೆ ಮೊರೆ ಹೋಗಲು ಕಾರಣಗಳೇನು ಎಂಬುದನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಆ ಎರಡು ವರ್ಷಗಳ ವರದಿಗಳಲ್ಲಿ ವಿವರಿಸಲಾಗಿದೆ. 2014ಕ್ಕಿಂತಲೂ ಹಿಂದಿನ ವರ್ಷದ ವರದಿಗಳಲ್ಲೂ ಈ ಸ್ವರೂಪದ ವಿಶ್ಲೇಷಣೆಯನ್ನು ನೀಡಲಾಗಿದೆ. ಎನ್‌ಸಿಆರ್‌ಬಿ ವರದಿಯ ‘2ಎ’ ಅಧ್ಯಾಯದಲ್ಲಿ 15 ಪುಟಗಳ ವಿಶ್ಲೇಷಣೆಯನ್ನು ನೀಡಲಾಗುತ್ತಿತ್ತು.

ಆದರೆ 2016ನೇ ಸಾಲಿನ ವರದಿಯಿಂದ ಈ ಸ್ವರೂಪದ ವಿಶ್ಲೇಷಣೆಯನ್ನು ಕೈಬಿಡಲಾಗಿದೆ. ಹಾಗಾಗಿ 2016ರಿಂದ 2020ರ ಮಧ್ಯೆ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಏನು ಕಾರಣ ಎಂಬ ಮಾಹಿತಿ ಸಾರ್ವಜನಿಕರಿಗೆ ಲಭ್ಯವಿಲ್ಲ.

ರೈತರ ಆತ್ಮಹತ್ಯೆ: ಕರ್ನಾಟಕದಲ್ಲೂ ಏರಿಕೆ

ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಪ್ರತೀ ವರ್ಷ ವರದಿಯಾಗುತ್ತಿವೆ. ಎನ್‌ಸಿಆರ್‌ಬಿ ದತ್ತಾಂಶಗಳ ಪ್ರಕಾರ, 2014ರಿಂದ 2020ರ ಅವಧಿಯಲ್ಲಿ ಅಂದರೆ, ಏಳು ವರ್ಷಗಳಲ್ಲಿ ರಾಜ್ಯದ 12,989 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2014ರಲ್ಲಿ 768 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಮಾಣ 2020ರ ವೇಳೆಗೆ 2016ಕ್ಕೆ ಏರಿಕೆಯಾಗಿದೆ. ಅಂದರೆ ಪ್ರತೀ ವರ್ಷ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಸಂಖ್ಯೆಯಲ್ಲಿ ಕ್ರಮೇಣ ಏರಿಕೆ ಕಂಡುಬಂದಿದೆ. 2018ರಲ್ಲಿ ಅತಿಹೆಚ್ಚಿನ ಅಂದರೆ,2,405 ರೈತರು ಆತ್ಮಹತ್ಯೆಗೆ ಶರಣಾಗಿದ್ದರು. 2015ರಿಂದೀಚೆಗೆ ರೈತರ ಆತ್ಮಹತ್ಯೆ ಸಂಖ್ಯೆ ಎರಡು ಸಾವಿರದ ಆಸುಪಾಸಿನಲ್ಲಿದೆ. ಎನ್‌ಸಿಆರ್‌ಬಿಯ 2021ನೇ ವರದಿ ಇನ್ನಷ್ಟೇ ಪ್ರಕಟವಾಗಬೇಕಿದೆ. ಕಳೆದ ಏಳು ವರ್ಷಗಳ ದತ್ತಾಂಶಗಳನ್ನು ಆಧಾರವಾಗಿ ಪರಿಗಣಿಸಿದರೆ, 2021ರಲ್ಲೂ ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿರುವ ಸಾಧ್ಯತೆಯಿದೆ.

ಆದರೆ, ಕರ್ನಾಟಕದ ಕೃಷಿ ಇಲಾಖೆಯು ಪ್ರತಿ ಆರ್ಥಿಕ ವರ್ಷದಲ್ಲಿ ಆತ್ಮಹತ್ಯೆಗೆ ಬಲಿಯಾದ ರೈತರ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಒದಗಿಸಿದ್ದು, ಎನ್‌ಸಿಆರ್‌ಬಿ ದತ್ತಾಂಶಗಳಿಗೂ, ಇಲಾಖೆಯ ದತ್ತಾಂಶಗಳಿಗೂ ವ್ಯತ್ಯಾಸವಿದೆ. 12 ವರ್ಷಗಳಲ್ಲಿ 8,207 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇಲಾಖೆ ಹೇಳುತ್ತದೆ.2015–16ರಲ್ಲಿ ಅತಿ ಹೆಚ್ಚು ಅಂದರೆ 1,525 ಪ್ರಕರಣಗಳು ವರದಿಯಾಗಿವೆ.

ಆದರೆ, ಆತ್ಮಹತ್ಯೆ ಎಂಬುದಾಗಿ ವರದಿಯಾದ ಎಲ್ಲ ಪ್ರಕರಣಗಳನ್ನೂ ಸರ್ಕಾರವು ಪರಿಹಾರಕ್ಕೆ ಪರಿಗಣಿಸಿಲ್ಲ.ಕೃಷಿ ಇಲಾಖೆಯಲ್ಲಿ ದಾಖಲಾದ ಪ್ರಕಾರ ವರದಿಯಾದ ಒಟ್ಟು 8,207 ಪ್ರಕರಣಗಳಲ್ಲಿ 6,160 ಪ್ರಕರಣಗಳಷ್ಟೇ ಪರಿಹಾರಕ್ಕೆ ಅರ್ಹ ಎಂದು ಪರಿಗಣಿಸಲಾಗಿದೆ. ವಿವಿಧ ಕಾರಣಗಳನ್ನು ನೀಡಿ 1,809 ಪ್ರಕರಣಗಳಲ್ಲಿ ಪರಿಹಾರ ನೀಡಲಾಗಿಲ್ಲ.

ಆಧಾರ: ಎನ್‌ಸಿಆರ್‌ಬಿ, ಎನ್‌ಸಿಆರ್‌ಬಿಯ ‘ಭಾರತದಲ್ಲಿ ಅಪಘಾತದ ಸಾವುಗಳು ಮತ್ತು ಆತ್ಮಹತ್ಯೆ’ ವರದಿಗಳು, ಪಿಟಿಐ, ಕರ್ನಾಟಕ ರಾಜ್ಯ ವಿಧಾನಸಭಾ ಪ್ರಶ್ನೋತ್ತರಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT