ರಾಜ್ಯ ಕಂದಾಯ ಇಲಾಖೆಯು ತನ್ನ ವಿವಿಧ ಪೋರ್ಟಲ್ಗಳಲ್ಲಿ ಇರುವ ದತ್ತಾಂಶ ಮತ್ತು ದಾಖಲೆಗಳನ್ನು, ಬೇರೆ ಇಲಾಖೆಗಳ ಬಳಿ ಇರುವ ದಾಖಲೆಗಳ ಜತೆಗೆ ಸಂಯೋಜಿಸಿ ಡಿಜಿಟಲ್ ದತ್ತಾಂಶಗಳ ಒಂದು ಬೃಹತ್ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಈ ಕ್ರೋಡೀಕೃತ ದತ್ತಾಂಶವನ್ನು ಬಳಸಿಕೊಂಡು ಇ–ಆಡಳಿತ ವ್ಯವಸ್ಥೆಯನ್ನು ರೂಪಿಸಲು ಇಲಾಖೆ ಮುಂದಾಗಿದೆ. ಭೂಮಿ, ಅದರ ಹಕ್ಕು ಮತ್ತು ಮಾಲೀಕತ್ವ ಸಂಬಂಧಿತ ಗೊಂದಲ ನಿವಾರಿಸಿ, ನೈಜ ಮಾಲೀಕರಿಗೆ ಮಾಲೀಕತ್ವ ಒದಗಿಸಿಕೊಡುವ ಉದ್ದೇಶದಿಂದ ಕೈಗೊಂಡಿರುವ ಈ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರವು ‘ಭೂ ಗ್ಯಾರಂಟಿ’ ಎಂದು ಹೆಸರಿಟ್ಟಿದೆ.

ಭೂಮಿ, ಕಾವೇರಿ, ಕುಟುಂಬ, ಫ್ರೂಟ್ಸ್, ಎಜೆಎಸ್ಕೆ ತಂತ್ರಾಂಶ ಮತ್ತು ಪೋರ್ಟಲ್ಗಳಲ್ಲಿ ಇರುವ ಅಪಾರ ಪ್ರಮಾಣದ ದತ್ತಾಂಶಗಳನ್ನು ಸಂಯೋಜಿಸಲಾಗುತ್ತಿದೆ. ಈ ಪೋರ್ಟಲ್ಗಳಲ್ಲಿ ಇರುವ ದತ್ತಾಂಶಗಳನ್ನು ಪರಸ್ಪರ ತಾಳೆ ನೋಡಿ, ವಿವರ ಸರಿಪಡಿಸಲಾಗುತ್ತಿದೆ. ಇದಕ್ಕೆ ಆಧಾರ್ ಆಧಾರಿತ ಇ–ಕೆವೈಸಿ ವ್ಯವಸ್ಥೆಯನ್ನೂ ಜೋಡಿಸಲಾಗುತ್ತಿದೆ. ಹೀಗೆ ಲಭ್ಯವಾದ ಕ್ರೋಡೀಕೃತ ದತ್ತಾಂಶದ ಮೂಲಕ ಕಂದಾಯ ಇಲಾಖೆಯ ಎಲ್ಲ ಕಾರ್ಯಚಟುವಟಿಕೆಗಳನ್ನು ಡಿಜಿಟಲೀಕರಣಗೊಳಿಸುವ ಮತ್ತು ಕಾಗದ ರಹಿತ ಆಡಳಿತ ನಡೆಸುವ ಗುರಿ ಹಾಕಿಕೊಳ್ಳಲಾಗಿದೆ.

ಭೂ ಗ್ಯಾರಂಟಿ ಯೋಜನೆ ಅಡಿ ನನ್ನ ಭೂಮಿ, ನನ್ನ ಹಕ್ಕು, ಭೂ ಸುರಕ್ಷಾ, ಇ–ಪೌತಿ, ಪೋಡಿ ಮುಕ್ತ ಗ್ರಾಮ, ಪಹಣಿ–ಆಧಾರ್ ಜೋಡಣೆ, ಸ್ವಯಂಚಾಲಿತ ಮ್ಯುಟೇಷನ್ ಸೇರಿ ಹತ್ತಾರು ಉಪ ಕಾರ್ಯಕ್ರಮ ಮತ್ತು ಆಂದೋಲನಗಳನ್ನು ಕಂದಾಯ ಇಲಾಖೆ ಆರಂಭಿಸಿದೆ. ಇವುಗಳಲ್ಲಿ ಹಲವು ಕಾರ್ಯಕ್ರಮಗಳು ಈ ಹಿಂದೆಯೇ ಜಾರಿಯಲ್ಲಿದ್ದವು. ಕೆಲವನ್ನು ಹೊಸತಾಗಿ ಆರಂಭಿಸಲಾಗಿದೆ. ಈ ಎಲ್ಲವನ್ನೂ ಒಳಗೊಂಡು ‘ಭೂ ಗ್ಯಾರಂಟಿ’ ಎಂದು ಕರೆಯಲಾಗಿದೆ. ಇಂತಹ ಅಭಿಯಾನಗಳ ಕಾರ್ಯನಿರ್ವಹಣಾ ವಿಧಾನ, ಅವುಗಳಿಂದ ರೈತರಿಗೆ ಆಗುವ ಅನುಕೂಲಗಳ ವಿವರ ಈ ಮುಂದಿನಂತಿವೆ.

ನನ್ನ ಭೂಮಿ: ದರ್ಖಾಸ್ತು ಪೋಡಿ

ರಾಜ್ಯ ಸರ್ಕಾರವು ವಿವಿಧ ಯೋಜನೆ ಮತ್ತು ಕಾರ್ಯಕ್ರಮಗಳ ಅಡಿಯಲ್ಲಿ 1960ರಿಂದ 2000ರದ ನಡುವೆ ಲಕ್ಷಾಂತರ ರೈತರಿಗೆ ಜಮೀನು ಮಂಜೂರು ಮಾಡಿದೆ. ಈ ಜಮೀನುಗಳಲ್ಲಿ ರೈತರು, ಅವರ ವಾರಸುದಾರರು ಸಾಗುವಳಿ ಮಾಡುತ್ತಿದ್ದಾರೆ. ಆದರೆ ಜಮೀನಿನ ಪೋಡಿ ಮಾಡಿ, ಹಕ್ಕು ಬದಲಾವಣೆ ಮಾಡಿಕೊಡದೇ ಇರುವ ಕಾರಣಕ್ಕೆ, ಫಲಾನುಭವಿಗಳಿಗೆ ಅದರ ಮಾಲೀಕತ್ವ ಲಭ್ಯವಾಗಿರಲಿಲ್ಲ. ಈ ಕಾರಣದಿಂದ ಜಮೀನಿನ ಅಭಿವೃದ್ಧಿ, ಭೂ ಪರಿವರ್ತನೆ, ವಿಭಾಗ ಅಥವಾ ಮಾರಾಟ ಮಾಡಲು ಸಾಧ್ಯವಿರಲಿಲ್ಲ. ಜತೆಗೆ ಸಾಲ, ಸಹಾಯಧನ ಮತ್ತು ಇತರ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನ ಪಡೆಯಲೂ ಸಾಧ್ಯವಿಲ್ಲ.

ಇಂತಹ ಜಮೀನುಗಳಿಗೆ ದರ್ಖಾಸ್ತು ಪೋಡಿ ಮಾಡಿಕೊಟ್ಟು, ಫಲಾನುಭವಿಗಳಿಗೆ ಮಾಲೀಕತ್ವ ಒದಗಿಸಿಕೊಡುವ ಕಾರ್ಯಕ್ರಮವಿದು. ಒಬ್ಬ ರೈತನಿಗೆ ಮಂಜೂರಾದ ಜಮೀನಿನ ದರ್ಖಾಸ್ತು ಪೋಡಿ ಮಾಡುವಾಗ, ಆಯಾ ಸರ್ವೆ ಸಂಖ್ಯೆಯಲ್ಲಿರುವ ಎಲ್ಲ ಜಮೀನುಗಳಿಗೂ ಪೋಡಿ ಕಾರ್ಯ ನಡೆಸಲಾಗುತ್ತದೆ. ಇದಕ್ಕಾಗಿ ರೈತರು ಯಾವುದೇ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಸರ್ಕಾರವು ಮಂಜೂರು ಮಾಡಿರುವ ಮೂಲ ದಾಖಲೆಗಳನ್ನು, ಸಾಗುವಳಿ ಚೀಟಿಗಳನ್ನು ಆಧಾರವಾಗಿ ಇರಿಸಿಕೊಂಡು ಕಂದಾಯ ಇಲಾಖೆಯು ಉಚಿತವಾಗಿ ಈ ಕೆಲಸ ಮಾಡಲಿದೆ. ಭೂಮಿ ಮಂಜೂರಾದ ಫಲಾನುಭವಿ ಮೃತಪಟ್ಟಿದ್ದರೆ, ವಾರಸುದಾರರಿಗೆ ಪೋಡಿ ಮಾಡಿಕೊಡಲಾಗುತ್ತದೆ.

ಬಹುತೇಕ ಕಾರ್ಯಗಳು ಡಿಜಿಟಲ್ ರೂಪದಲ್ಲಿ ನಡೆಯಲಿದ್ದು, ಸರ್ವೆ ಮತ್ತು ಪೋಡಿ ವಿವರಗಳನ್ನೂ ಡಿಜಿಟಲ್ ರೂಪದಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಪೋಡಿ ಆದನಂತರ ರೈತರ ಹೆಸರಿನಲ್ಲಿ ಪಹಣಿ ಸೃಜಿಸಲಾಗುತ್ತದೆ. ಆ ಪಹಣಿಗೆ ಆಧಾರ್ ಜೋಡಣೆಯಾಗಿರಲಿದೆ.

ಪಹಣಿ–ಆಧಾರ್ ಜೋಡಣೆ

ರಾಜ್ಯದ ಎಲ್ಲ ರೈತರ ಪಹಣಿಗಳಿಗೆ ಅವರ ಆಧಾರ್ ಸಂಖ್ಯೆಯನ್ನು ಜೋಡಿಸುವ ಯೋಜನೆ ಇದು. ಗ್ರಾಮ ಆಡಳಿತಾಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳ ಕೃಷಿ ಜಮೀನಿನ ಪಹಣಿಗಳ ವಿವರಗಳನ್ನು ತೆಗೆದುಕೊಳ್ಳುತ್ತಾರೆ. ಆನಂತರ ಪಹಣಿಗಳಲ್ಲಿ ಇರುವ ಪ್ರತಿ ರೈತರ ಮನೆಗೆ ಹೋಗಿ, ಅವರ ಆಧಾರ್ ಸಂಖ್ಯೆಯನ್ನು ಪಡೆದುಕೊಳ್ಳುತ್ತಾರೆ. ಅದನ್ನು ಅಪ್ಲೋಡ್ ಮಾಡುವ ಮೂಲಕ ಪಹಣಿ ಮತ್ತು ಆಧಾರ್ ಜೋಡಣೆ ಮಾಡುತ್ತಾರೆ.

ಈ ಕಾರ್ಯಕ್ರಮ ಆರಂಭವಾದಾಗಿನಿಂದ 73.5 ಲಕ್ಷ ಆಧಾರ್–ಪಹಣಿಯನ್ನು ಸೃಜಿಸಲಾಗಿದೆ. ಅಭಿಯಾನದ ವೇಳೆ 55 ಲಕ್ಷ ಜಮೀನುಗಳ ಪೌತಿ ಖಾತೆಯಾಗದೇ ಇರುವುದು ಪತ್ತೆಯಾಗಿದೆ. ಈ ಎಲ್ಲರಿಗೂ ಇಲಾಖೆಯ ವತಿಯಿಂದಲೇ ‘ಇ–ಪೌತಿ’ ಖಾತೆಯನ್ನು ಮಾಡಿಕೊಡಲು ಕ್ರಮವಹಿಸಲಾಗಿದೆ. ಪಹಣಿಗೆ ಆಧಾರ್ ಜೋಡಣೆ ವೇಳೆ, ಮಾಲೀಕ ಮೃತಪಟ್ಟು ವಾರಸುದಾರರಿಗೆ ಪೌತಿಯಾಗಿರುವುದು ಪತ್ತೆಯಾದರೆ ಪೌತಿ ಖಾತೆಗೆ ಕ್ರಮ ವಹಿಸಲಾಗುತ್ತದೆ. ಆಧಾರ್ ಜೋಡಣೆಯಿಂದ ಪಹಣಿಯಲ್ಲಿ ಯಾವುದೇ ಬದಲಾವಣೆ, ಭೂಮಿ ಮಾರಾಟದ ಸಂದರ್ಭದಲ್ಲಿ ಮಾಲೀಕನಿಗೆ ಒಟಿಪಿ ರವಾನೆಯಾಗಲಿದೆ. ಒಟಿಪಿ ಇಲ್ಲದೆ ಯಾವುದೇ ಹಕ್ಕು ಬದಲಾವಣೆ ಕಾರ್ಯ ನಡೆಯುವುದಿಲ್ಲ. ನೈಜ ಮಾಲೀಕನಿಗೆ ವಂಚಿಸಿ, ಆತನ ಹೆಸರಿನಲ್ಲಿ ಮತ್ಯಾರೋ ಭೂಮಿ ಮಾರಾಟ ಮಾಡುವುದನ್ನು ಈ ಇ–ಕೆವೈಸಿ ವ್ಯವಸ್ಥೆ ತಡೆಯಲಿದೆ.

ಇ–ಪೌತಿ ಆಂದೋಲನ

ರಾಜ್ಯದಲ್ಲಿ 51 ಲಕ್ಷಕ್ಕೂ ಹೆಚ್ಚು ಜಮೀನುಗಳು ಮೃತ ರೈತರ ಹೆಸರಿನಲ್ಲಿಯೇ ಇವೆ. ವಾರಸುದಾರರ ಹೆಸರಿಗೆ ಈ ಜಮೀನುಗಳು ಖಾತೆಯಾಗದೇ ಇರುವ ಕಾರಣಕ್ಕೆ ಸಾಲ, ಸಹಾಯಧನ, ಕೃಷಿಹೊಂಡ ನಿರ್ಮಾಣ ಸೇರಿ ಕೃಷಿ ಮತ್ತು ನೀರಾವರಿ ಇಲಾಖೆಯ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ. ಜತೆಗೆ ಭೂಪರಿವರ್ತನೆ ಮಾಡುವುದು ಅಥವಾ ಮಾರಾಟವೂ ಸಾಧ್ಯವಿಲ್ಲ. ಇಂತಹ ಜಮೀನುಗಳನ್ನು ಪತ್ತೆ ಮಾಡಿ, ವಾರಸುದಾರರಿಗೆ ಜಮೀನಿನ ಪೌತಿ ಖಾತೆಯನ್ನು ಮಾಡಿಕೊಡುವ ಆಂದೋಲನವಿದು.

ರೈತರ ಮನೆಗೆ ಗ್ರಾಮ ಆಡಳಿತಾಧಿಕಾರಿಗಳು ಭೇಟಿ ನೀಡಿ, ವಾರಸುದಾರರ ಮಾಹಿತಿ ಕಲೆ ಹಾಕಿ ಪೌತಿ ಖಾತೆ ಪ್ರಕ್ರಿಯೆ ಆರಂಭಿಸುತ್ತಾರೆ. ಈ ಎಲ್ಲ ಪ್ರಕ್ರಿಯೆ ಆಧಾರ್ ಆಧಾರಿತ ಇ–ಕೆವೈಸಿ ಮೂಲಕ ನಡೆಯುತ್ತದೆ. ಪೌತಿ ಖಾತೆಗಾಗಿ ವಾರಸುದಾರರು ಅರ್ಜಿ ಸಲ್ಲಿಸಿ, ಅಲೆದಾಡುವ ಸ್ಥಿತಿ ಇರುವುದಿಲ್ಲ. ಜತೆಗೆ ಈ ಕೆಲಸವನ್ನು ಕಂದಾಯ ಇಲಾಖೆ ಸಂಪೂರ್ಣವಾಗಿ ಉಚಿತವಾಗಿಯೇ ಮಾಡಿಕೊಡುತ್ತದೆ.

ಭೂ ಸುರಕ್ಷಾ ಮತ್ತು ಇ–ದಾಖಲೆ

ರಾಜ್ಯದ ಪ್ರತಿ ಕೃಷಿ ಜಮೀನಿನ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡುವ ಕಾರ್ಯಕ್ರಮ ಇದು. ಭೂಮಿಯ ಮೂಲ ಪಟ್ಟಾ, ಮೂಲ ಆಕಾರಬಂದು, ಸರ್ವೆ ಟಿಪ್ಪಣಿ, ಕೇತವಾರು, ಭೂ ವ್ಯಾಜ್ಯ ತೀರ್ಪಿನ ಪ್ರತಿ ಮೊದಲಾದ ದಾಖಲೆಗಳು ಈಗ ಕಂದಾಯ ಇಲಾಖೆಯ ರೆಕಾರ್ಡ್ ರೂಂಗಳಲ್ಲಿ ಇರುತ್ತವೆ. ಅವುಗಳನ್ನು ಸ್ಕ್ಯಾನ್ ಮಾಡಿ, ‘ಭೂ ಸುರಕ್ಷಾ’ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ. ಈವರೆಗೆ 22 ಕೋಟಿಗೂ ಹೆಚ್ಚು ದಾಖಲೆಗಳನ್ನು ಹೀಗೆ ಅಪ್ಲೋಡ್ ಮಾಡಲಾಗಿದೆ. ಉಳಿದ ದಾಖಲೆಗಳನ್ನು ಅಪ್ಲೋಡ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ.

ಯಾವುದೇ ನಾಗರಿಕ ‘ಭೂ ಸುರಕ್ಷಾ’ ಪೋರ್ಟಲ್ನಲ್ಲಿ ತಮ್ಮ ಮೊಬೈಲ್ ಸಂಖ್ಯೆ, ಹೆಸರು, ವಿಳಾಸ ನಮೂದಿಸಿ ನೋಂದಣಿ ಮಾಡಿಕೊಳ್ಳಬಹುದು. ನಂತರ ತಮ್ಮ ಜಮೀನಿನ ವಿವರ ನಮೂದಿಸಿ, ಅವುಗಳ ದಾಖಲೆಗಳನ್ನು ಪಡೆಯಬಹುದಾಗಿದೆ. ಯಾವ ಉದ್ದೇಶಕ್ಕೆ ದಾಖಲೆ ಅಗತ್ಯವಿದೆ ಎಂಬುದನ್ನು ನಮೂದಿಸಬೇಕು. ನ್ಯಾಯಾಲಯದ ಕೆಲಸಕ್ಕೆ ಅಗತ್ಯವಿದ್ದರೆ ಭೂ ಸುರಕ್ಷಾ ಪೋರ್ಟಲ್ನಿಂದ ನ್ಯಾಯಾಲಯಕ್ಕೆ, ಮಾರಾಟಕ್ಕಾಗಿ ಬೇಕಿದ್ದರೆ ಕಾವೇರಿ ಪೋರ್ಟಲ್ಗೆ ದಾಖಲೆ ರವಾನೆಯಾಗುತ್ತದೆ. ಅರ್ಜಿ ಸಲ್ಲಿಸಿದವರಿಗೂ ಒಂದು ಪ್ರತಿ ರವಾನೆಯಾಗುತ್ತದೆ.

ದಾಖಲೆಗಳನ್ನು ಸಂಪೂರ್ಣವಾಗಿ ಕಾಗದರಹಿತಗೊಳಿಸುವ ಮತ್ತು ಯಾವುದೇ ದಾಖಲೆ ಪಡೆಯಲು ಜನರು ಕಂದಾಯ ಇಲಾಖೆಯ ಯಾವುದೇ ಕಚೇರಿಗೆ ಬರುವುದನ್ನು ಈ ಉಪಕ್ರಮಗಳು ತಪ್ಪಿಸುತ್ತವೆ.

ಪೋಡಿಮುಕ್ತ ಗ್ರಾಮ ಅಭಿಯಾನ

ರಾಜ್ಯದ ಎಲ್ಲ ಗ್ರಾಮಗಳ, ಎಲ್ಲ ಕೃಷಿ ಜಮೀನಿನ ಪೋಡಿ ಕಾರ್ಯವನ್ನು ಪೂರ್ಣಗೊಳಿಸುವ ಕಾರ್ಯವಿದು. ಪೋಡಿ ಮುಕ್ತ ಗ್ರಾಮ ಹಳೆಯ ಯೋಜನೆಯಾದರೂ ಕೆಲ ವರ್ಷಗಳಿಂದ ಸ್ಥಗಿತವಾಗಿತ್ತು. ಈಗ ಈ ಕಾರ್ಯಕ್ರಮಕ್ಕೆ ಮರುಚಾಲನೆ ನೀಡಲಾಗಿದೆ. ಸರ್ವೆ ಅಧಿಕಾರಿಗಳೇ ಪೋಡಿ ಅಗತ್ಯವಿರುವ ಜಮೀನುಗಳಿಗೆ ಭೇಟಿ ನೀಡಿ, ಸರ್ವೆ ಕಾರ್ಯ ನಡೆಸುತ್ತಾರೆ.

ಪೋಡಿ ರಚಿಸಿ, ಅದನ್ನು ಡಿಜಿಟಲ್ ಸ್ವರೂಪದಲ್ಲಿ ಅಪ್ಲೋಡ್ ಮಾಡಿ, ಸಂಬಂಧಿತ ರೈತರಿಗೆ ಆ ಬಗ್ಗೆ ಮಾಹಿತಿ ನೀಡುತ್ತಾರೆ. ರೈತ ಮಂದಿ ತಮ್ಮ ಜಮೀನಿನ ಪೋಡಿ ಮಾಡಿಸಲು ಅರ್ಜಿ ಸಲ್ಲಿಸುವ, ಪೋಡಿ ಕಾರ್ಯಕ್ಕೆ ಜೇಷ್ಠತೆ ಪಡೆಯಲು ಹಲವು ತಿಂಗಳು ಕಾಯುವ ಅಗತ್ಯವಿರುವುದಿಲ್ಲ. ಈ ಅಭಿಯಾನದ ಅಡಿ ಉಚಿತವಾಗಿಯೇ ಪೋಡಿ ಕಾರ್ಯ ನಡೆಸುವ ಕಾರಣ, ರೈತ ಮಂದಿಗೆ ಈ ಹಿಂದೆ ಆಗುತ್ತಿದ್ದ ಶುಲ್ಕದ ಹೊರೆಯೂ ತಪ್ಪುತ್ತದೆ.

ಸ್ವಯಂಚಾಲಿತ ಮ್ಯುಟೇಷನ್

ಕಂದಾಯ ಇಲಾಖೆಯ ವಿವಿಧ ತಂತ್ರಾಂಶ–ಪೋರ್ಟಲ್ಗಳಲ್ಲಿ ಲಭ್ಯವಿರುವ ದತ್ತಾಂಶ ಮತ್ತು ದಾಖಲೆಗಳನ್ನು ಆಧರಿಸಿ ಸ್ವಯಂಚಾಲಿತವಾಗಿ ಮ್ಯುಟೇಷನ್ ಮಾಡುವ ಕಾರ್ಯಕ್ರಮ ಇದು. ಈವರೆಗೆ ಕಂದಾಯ ನಿರೀಕ್ಷಕರ ಸಹಿ ಪಡೆದು ಮ್ಯುಟೇಷನ್ ಕಾರ್ಯ ಪೂರ್ಣಗೊಳಿಸುವ ಪದ್ಧತಿ ಜಾರಿಯಲ್ಲಿತ್ತು. ಈಗ ಮಾನವ ಹಸ್ತಕ್ಷೇಪವಿಲ್ಲದೆ, ಸರ್ವರ್ ಆಧಾರಿತ ಅನುಮೋದನೆ ಪಡೆದು ಮ್ಯುಟೇಷನ್ ಪೂರ್ಣಗೊಳಿಸಲಾಗುತ್ತದೆ. ಪರಿಣಾಮವಾಗಿ ಮ್ಯುಟೇಷನ್ ಕಾರ್ಯಕ್ಕೆ ತಗುಲುತ್ತಿದ್ದ 5 ದಿನಗಳು ಈಗ 12 ತಾಸಿಗೆ ಇಳಿದಿದೆ.

ಪೋಡಿ, ಹಕ್ಕು ಮತ್ತು ಋಣ ಬದಲಾವಣೆ, ಭೂಪರಿವರ್ತನೆ, ಭೂಸ್ವಾಧೀನ, ಕಂದಾಯ ನ್ಯಾಯಾಲಯದ ಆದೇಶ, ಪಹಣಿ ವರ್ಗಾವಣೆ, ಪಹಣಿ ಬದಲಾವಣೆ, ನ್ಯಾಯಾಲಯದ ಆದೇಶಗಳು ಮೊದಲಾದ ಪ್ರಕ್ರಿಯೆಗಳು ಸಂಬಂಧಿತ ಪೋರ್ಟಲ್ಗಳಿಗೆ ಅಪ್ಲೋಡ್ ಆಗುತ್ತಿದ್ದಂತೆಯೇ ಮ್ಯುಟೇಷನ್ ಕಾರ್ಯ ಸ್ವಯಂಚಾಲಿತವಾಗಿ ನಡೆಯುತ್ತದೆ.

ಅತ್ಯಂತ ತ್ವರಿತವಾಗಿ ಮ್ಯುಟೇಷನ್ ಪ್ರಕ್ರಿಯೆ ನಡೆಯುತ್ತದೆ. ಹೀಗಾಗಿ ಈ ಕಾರ್ಯಕ್ರಮ ಆರಂಭವಾದಾಗಿನಿಂದ 19 ಲಕ್ಷಕ್ಕೂ ಹೆಚ್ಚು ಆಸ್ತಿಗಳಿಗೆ ಸ್ವಯಂಚಾಲಿತ ಮ್ಯುಟೇಷನ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.

ರಜೆಯಂದೂ ನೋಂದಣಿ

ಜಮೀನು ನೋಂದಣಿ ಮಾಡಿಸಲು ಕೆಲಸಕ್ಕೆ ರಜೆ ಹಾಕಿ ಉಪ ನೋಂದಣಾಧಿಕಾರಿಗಳ
ಕಚೇರಿಗೆ ಹೋಗಬೇಕಾದ ಅನಿವಾರ್ಯವನ್ನು ತಪ್ಪಿಸಲು ಈ ಉಪಕ್ರಮ ಜಾರಿಗೆ ತರಲಾಗಿದೆ. ರಾಜ್ಯದ ಎಲ್ಲ ಜಿಲ್ಲಾ ನೋಂದಣಾಧಿಕಾರಿ ವ್ಯಾಪ್ತಿಯ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ, ಒಂದು ಕಚೇರಿ ರಜಾದಿನದಂದು ಕಾರ್ಯನಿರ್ವಹಿಸಲಿದೆ. ಆಯಾ ಜಿಲ್ಲೆಯ ವ್ಯಾಪ್ತಿಯಲ್ಲಿ ಇರುವ ಸ್ವತ್ತನ್ನು, ಆ ಜಿಲ್ಲಾ ನೋಂದಣಾಧಿಕಾರಿ ಕಚೇರಿ ಅಧೀನದಲ್ಲಿರುವ ಯಾವುದೇ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಬಹುದಾಗಿದೆ.

ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಪ್ರತಿ ಭಾನುವಾರ ಈ ಕಚೇರಿಗಳು ಕಾರ್ಯನಿರ್ವಹಿಸಲಿವೆ. ಹೀಗಾಗಿ ನೌಕರರು ರಜಾ ದಿನಗಳಂದು ನೋಂದಣಿ ಪ್ರಕ್ರಿಯೆಯಲ್ಲಿ ಭಾಗಿಯಾಗಬಹುದಾಗಿದೆ. ರಜಾದಿನಗಳಲ್ಲಿ ಕಾರ್ಯನಿರ್ವಹಿಸುವ ಉಪ ನೋಂದಣಾಧಿಕಾರಿಗಳ ಕಚೇರಿಗೆ ನಂತರದ ವಾರದ ದಿನದಲ್ಲಿ ರಜೆ ನೀಡಲಾಗುತ್ತದೆ. ಇದೇ ಜೂನ್ 1ರಿಂದ ಈ ಕಾರ್ಯಕ್ರಮ ಜಾರಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.