ಸುಮಾರು 24 ವರ್ಷಗಳ ಹಿಂದೆ ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನದ ಬಗ್ಗೆ ಡಿ.ಎಂ.ನಂಜುಂಡಪ್ಪ ಅವರ ನೇತೃತ್ವದ ಸಮಿತಿಯು ಅಧ್ಯಯನ ಮಾಡಿ ವರದಿ ನೀಡಿತ್ತು. ಮತ್ತೆ ಇಂತಹದ್ದೇ ಅಧ್ಯಯನ ನಡೆಸಿರುವ ಆರ್ಥಿಕ ತಜ್ಞ ಪ್ರೊ.ಗೋವಿಂದ ರಾವ್ ಅವರ ಅಧ್ಯಕ್ಷತೆಯ ಸಮಿತಿಯು, ರಾಜ್ಯ ಸರ್ಕಾರಕ್ಕೆ ಇದೀಗ ವರದಿ ಸಲ್ಲಿಸಿದೆ. ಹಿಂದುಳಿದಿರುವಿಕೆಯು ರಾಜ್ಯದ ಉತ್ತರ ಭಾಗದಲ್ಲಿಯೇ ಹೆಚ್ಚಾಗಿದೆ ಎಂದು ವರದಿ ಹೇಳಿದೆ. ಉತ್ತರ ಕರ್ನಾಟಕದ ಒಂದು ಜಿಲ್ಲೆಯನ್ನೂ ಅಭಿವೃದ್ಧಿ ಹೊಂದಿದ ಜಿಲ್ಲೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿರುವ ವರದಿಯು, ರಾಜ್ಯದ ಇತರೆ ತಾಲ್ಲೂಕುಗಳ ಹಿಂದುಳಿದ ಸ್ಥಿತಿಗತಿ, ಅಭಿವೃದ್ಧಿಯ ಚಿತ್ರಣವನ್ನೂ ಒಳಗೊಂಡಿದೆ.