ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಕಚ್ಚತೀವು ದ್ವೀಪ: ಸರ್ಕಾರ ಹೇಳಿದ್ದೇ ಒಂದು: 
ಮೋದಿ ಹೇಳುತ್ತಿರುವುದೇ ಇನ್ನೊಂದು
ಕಚ್ಚತೀವು ದ್ವೀಪ: ಸರ್ಕಾರ ಹೇಳಿದ್ದೇ ಒಂದು: ಮೋದಿ ಹೇಳುತ್ತಿರುವುದೇ ಇನ್ನೊಂದು
Published 2 ಏಪ್ರಿಲ್ 2024, 0:24 IST
Last Updated 2 ಏಪ್ರಿಲ್ 2024, 0:24 IST
ಅಕ್ಷರ ಗಾತ್ರ
ಲೋಕಸಭಾ ಚುನಾವಣೆಯ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ‘ಕಚ್ಚತೀವು’ ದ್ವೀಪದ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ‘ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಕಾಂಗ್ರೆಸ್‌ ಬಿಟ್ಟುಕೊಟ್ಟಿದೆ’ ಎಂದು ಮೋದಿ ಅವರು ತಮ್ಮ ವೈಯಕ್ತಿಕ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಆದರೆ ಮೋದಿ ಅವರ ಈ ಆರೋಪ ಸುಳ್ಳು ಎನ್ನುತ್ತವೆ ಸರ್ಕಾರದ ದಾಖಲೆಗಳು. ಎಲ್ಲಕ್ಕಿಂತ ಮುಖ್ಯವಾಗಿ, ‘ಕಚ್ಚತೀವು ದ್ವೀಪವು ಎಂದಿಗೂ ಭಾರತಕ್ಕೆ ಸೇರಿರಲೇ ಇಲ್ಲ’ ಎಂದು ಮೋದಿ ಅವರ ಸರ್ಕಾರವೇ ಈ ಹಿಂದೆ ಆರ್‌ಟಿಐ ಪ್ರಶ್ನೆಯೊಂದಕ್ಕೆ ಉತ್ತರ ನೀಡಿತ್ತು. ತಮ್ಮದೇ ಸರ್ಕಾರ ನೀಡಿದ್ದ ಉತ್ತರಕ್ಕೆ ವ್ಯತಿರಿಕ್ತವಾದ ಆರೋಪವನ್ನು ಪ್ರಧಾನಿ ಈಗ ಮಾಡಿದ್ದಾರೆ

ಲೋಕಸಭಾ ಚುನಾವಣೆಯಲ್ಲಿ ಈಗ ಶ್ರೀಲಂಕಾದ ಕಚ್ಚತೀವು ದ್ವೀಪವೂ ಪ್ರಮುಖ ವಿಷಯದ ಸ್ಥಾನ ಪಡೆದಿದೆ. ಶ್ರೀಲಂಕಾದ ಜಲಗಡಿಯಲ್ಲಿ ಇರುವ 256 ಎಕರೆ ವಿಸ್ತೀರ್ಣದ ಈ ಸಣ್ಣ ದ್ವೀಪವನ್ನು ಪ್ರಧಾನಿ ನರೇಂದ್ರ ಮೋದಿ ಚುನಾವಣೆಯ ಕಣಕ್ಕೆ ಎಳೆದುತಂದಿದ್ದಾರೆ. ಮೋದಿ ಅವರು ತಮ್ಮ ವೈಯಕ್ತಿಕ ಎಕ್ಸ್‌ ಖಾತೆಯಲ್ಲಿ ಭಾನುವಾರ ಒಂದು ಪೋಸ್ಟ್‌ ಮಾಡಿದ್ದರು. ಕಾಂಗ್ರೆಸ್‌ ಸರ್ಕಾರವು ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿತ್ತು. ಇದರಿಂದ ಭಾರತೀಯರು ಆಕ್ರೋಶಗೊಂಡಿದ್ದರು. ದೇಶದ ಸಮಗ್ರತೆ ಮತ್ತು ಏಕತೆಯನ್ನು ದುರ್ಬಲಗೊಳಿಸುವುದೇ ಕಾಂಗ್ರೆಸ್‌ನ ಕಾರ್ಯವೈಖರಿ. ಈ ಕಾರಣದಿಂದ ಕಾಂಗ್ರೆಸ್‌ ಅನ್ನು ನಂಬಲು ಸಾಧ್ಯವಿಲ್ಲ ಎಂದು ಮೋದಿ ಆರೋಪಿಸಿದ್ದರು. ಈ ಆರೋಪಕ್ಕೆ ಮೋದಿ ಅವರು ಪತ್ರಿಕಾ ವರದಿಯೊಂದನ್ನು ಆಧಾರವಾಗಿ ಬಳಸಿಕೊಂಡಿದ್ದಾರೆ. ಆದರೆ ಮೋದಿ ಅವರ ಅಧಿಕಾರದ ಅವಧಿಯಲ್ಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕಚ್ಚತೀವು ದ್ವೀಪವು ಭಾರತಕ್ಕೆ ಎಂದಿಗೂ ಸೇರಿರಲಿಲ್ಲ ಎಂದೇ ಹೇಳಿತ್ತು.

ರಾಮೇಶ್ವರದಿಂದ ಈಶಾನ್ಯ ದಿಕ್ಕಿನಲ್ಲಿ ಇರುವ ಈ ಸಣ್ಣ ದ್ವೀಪವು ಸ್ವಾತಂತ್ರ್ಯಾನಂತರ ಭಾರತ ಮತ್ತು ಶ್ರೀಲಂಕಾ ನಡುವೆ ವಿವಾದಕ್ಕೆ ಕಾರಣವಾಗಿತ್ತು. ಈ ದ್ವೀಪವು ತಮಗೆ ಸೇರಿದ್ದು ಎಂದು ಶ್ರೀಲಂಕಾವು ಡಚ್ಚರು ಮತ್ತು ಬ್ರಿಟಿಷರ ಆಳ್ವಿಕೆ ಅವಧಿಯ ದಾಖಲೆಗಳನ್ನು ತೋರಿಸಿತ್ತು. ರಾಮನಾಥಪುರದ ಅರಸು ಮನೆತನ ಇದರ ಒಡೆತನ ಹೊಂದಿತ್ತು ಎಂದು ಪ್ರತಿಪಾದಿಸಿತ್ತಾದರೂ, ಅದನ್ನು ಬೆಂಬಲಿಸುವ ಯಾವುದೇ ದಾಖಲೆಗಳನ್ನು ಒದಗಿಸಿರಲಿಲ್ಲ. ಎರಡು ದಶಕಕ್ಕೂ ಮೀರಿದ ಅವಧಿಯಲ್ಲಿ ಹಲವು ಸುತ್ತಿನ ಮಾತುಕತೆಗಳ ನಂತರ 1973ರಲ್ಲಿ ಭಾರತ–ಶ್ರೀಲಂಕಾ ಜಲಗಡಿಯನ್ನು ಅಂತಿಮಗೊಳಿಸಲು ನಿರ್ಧರಿಸಲಾಯಿತು. ಆ ಸಂಬಂಧ 1974ರಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು.

1974ರ ಒಪ್ಪಂದದಲ್ಲಿ ಗುರುತಿಸಲಾದ ಜಲಗಡಿಯ ಪ್ರಕಾರ ಕಚ್ಚತೀವು ದ್ವೀಪವು ಶ್ರೀಲಂಕಾಕ್ಕೆ ಸೇರಿತು. ಆದರೆ ಈ ದ್ವೀಪವನ್ನು ಶ್ರೀಲಂಕಾದಿಂದ ಪಡೆದುಕೊಳ್ಳಬೇಕು ಎಂಬ ಕೂಗೂ ರಾಜಕೀಯ ವಲಯದಲ್ಲಿ ಇದ್ದೇ ಇತ್ತು. ಈ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಪ್ರಶ್ನೆಗಳನ್ನು ಎತ್ತಿದಾಗ ಎಲ್ಲಾ ಸರ್ಕಾರಗಳು, ಕಚ್ಚತೀವು ದ್ವೀಪದ ವಿಚಾರ ಈಗಾಗಲೇ ಮುಗಿದಿದೆ. ಅಲ್ಲಿನ ಕೆಲವು ಹಕ್ಕುಗಳ ಬಗ್ಗೆ ಮಾತ್ರ ವಿವಾದವಿದೆ ಎಂದೇ ಹೇಳಿಕೆ ನೀಡಿದ್ದವು. ಈ ಬಗ್ಗೆ ಪ್ರಶ್ನೆ ಕೇಳಿ, ಅಲಾಡಿ ಗುರುಸ್ವಾಮಿ ಅವರು 2015ರ ಜನವರಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರು. ಸಚಿವೆ ಸುಷ್ಮಾ ಸ್ವರಾಜ್‌ ನೇತೃತ್ವದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆ ಅರ್ಜಿಗೆ ಅದೇ ಜನವರಿ 27ರಂದು ಉತ್ತರ ನೀಡಿತ್ತು.

ಉತ್ತರದಲ್ಲಿ, ‘1974 ಮತ್ತು 1976ರ ಒಪ್ಪಂದಗಳ ಪ್ರಕಾರ ಕಚ್ಚತೀವು ದ್ವೀಪವು ಶ್ರೀಲಂಕಾದ ವ್ಯಾಪ್ತಿಯಲ್ಲಿ ಬರುತ್ತದೆ. ಅಲ್ಲಿಯವರೆಗೆ ಆ ದ್ವೀಪವು ಯಾರ ವ್ಯಾಪ್ತಿಗೆ ಸೇರುತ್ತದೆ ಎಂಬುದನ್ನು ಗುರುತಿಸಿರಲೇ ಇಲ್ಲ. ಹೀಗಾಗಿ ಎರಡೂ ದೇಶಗಳ ಮಧ್ಯೆ ಜಲಗಡಿಯನ್ನು ಗುರುತಿಸುವ ಅವಧಿಯಲ್ಲಿ ಭಾರತವು ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಡುವ ಅಥವಾ ಸ್ವಾಧೀನಪಡಿಸಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಸಚಿವಾಲಯವು ವಿವರಿಸಿತ್ತು. ಜತೆಗೆ ಒಪ್ಪಂದಗಳಿಗೆ ಸಂಬಂಧಿಸಿದ ದಾಖಲೆಗಳನ್ನೂ ಉತ್ತರದೊಂದಿಗೆ ನೀಡಿತ್ತು. ಮೋದಿ ಅವರ ಸರ್ಕಾರದ್ದೇ ಸಚಿವಾಲಯವು ಅಧಿಕೃತವಾಗಿ ನೀಡಿದ್ದ ದಾಖಲೆಗಳ ಪ್ರಕಾರ ಕಚ್ಚತೀವು ದ್ವೀಪವು ಎಂದಿಗೂ ಭಾರತಕ್ಕೆ ಸೇರಿರಲೇ ಇಲ್ಲ.

ತಮಿಳುನಾಡಿನ ಕನ್ಯಾಕುಮಾರಿ ಮತ್ತು ರಾಮನಾಥಪುರ ಜಿಲ್ಲೆಯ ಮೀನುಗಾರರು ಪಾಕ್‌ ಜಲಸಂಧಿ ಮತ್ತು ಮನ್ನಾರ್ ಜಲಸಂಧಿಯಲ್ಲಿ ಮೀನುಗಾರಿಕೆ ನಡೆಸುತ್ತಾರೆ. ಆಗ ಶ್ರೀಲಂಕಾದ ಜಲಗಡಿಯನ್ನು ಪ್ರವೇಶಿಸಿದ ಮೀನುಗಾರರನ್ನು ಅಲ್ಲಿನ ನೌಕಾಪಡೆ ಬಂಧಿಸುತ್ತದೆ. ಕನ್ಯಾಕುಮಾರಿಯಲ್ಲಿ ಬಿಜೆಪಿಯ ಮತನೆಲೆ ಇದೆ. 2014ರಲ್ಲಿ ಬಿಜೆಪಿಯ ಅಭ್ಯರ್ಥಿ ಇಲ್ಲಿಂದ ಗೆದ್ದು ಸಂಸತ್ತು ಪ್ರವೇಶಿಸಿದ್ದರು. ಮೀನುಗಾರ ಮತದಾರರೇ ಅಧಿಕವಾಗಿರುವ ಈ ಕ್ಷೇತ್ರದಿಂದ ಮತ್ತೆ ಆರಿಸಿಬರಲು ಬಿಜೆಪಿ ತಂತ್ರ ರೂಪಿಸಿದೆ. ಈ ಕಾರಣದಿಂದಲೇ ಈಗ ಕಚ್ಚತೀವು ದ್ವೀಪದ ವಿಚಾರವನ್ನು ರಾಜಕೀಯಕ್ಕೆ ಎಳೆದುತರುತ್ತಿದೆ ಎಂಬುದು ಕಾಂಗ್ರೆಸ್‌ ಮತ್ತು ಡಿಎಂಕೆ ನಾಯಕರ ಪ್ರತಿಕ್ರಿಯೆ.

ಬಿಜೆಪಿ ಅವಧಿಯಲ್ಲೇ ಹೆಚ್ಚು ಮೀನುಗಾರರ ಬಂಧನ

ಶ್ರೀಲಂಕಾವು ತಮಿಳುನಾಡಿನ ಮೀನುಗಾರರನ್ನು ಬಂಧಿಸುತ್ತಿರುವ ವಿಷಯವು ಚುನಾವಣೆಯ ಹೊಸ್ತಿಲಲ್ಲಿ ಮುನ್ನೆಲೆಗೆ ಬಂದಿದೆ. ಸೋಮವಾರ ಈ ವಿಷಯವನ್ನು ಪ್ರಸ್ತಾಪಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್ ಅವರು, ‘20 ವರ್ಷಗಳಲ್ಲಿ ತಮಿಳುನಾಡಿನ 6,184 ಮೀನುಗಾರರನ್ನು ಶ್ರೀಲಂಕಾ ಬಂಧಿಸಿದೆ’ ಎಂದು ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ, ‘ಅಟಲ್‌ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಶ್ರೀಲಂಕಾ ಮೀನುಗಾರರನ್ನು ಬಂಧಿಸಿರಲಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ. ಈ ರಾಜಕೀಯ ಜಟಾಪಟಿ ಒಂದೆಡೆಯಾದರೆ, ದತ್ತಾಂಶಗಳು ಇನ್ನೊಂದು ಕತೆ ಹೇಳುತ್ತವೆ.

ಈ 20 ವರ್ಷ, ಅಂದರೆ 2004ರಿಂದ 2024ರ ಮಾರ್ಚ್‌ ಮೂರನೇ ವಾರದವರೆಗೆ ಶ್ರೀಲಂಕಾವು ತಮಿಳುನಾಡಿನ ಒಟ್ಟು 6,184 ಮೀನುಗಾರರನ್ನು ಬಂಧಿಸಿದೆ. ಈ 20 ವರ್ಷಗಳಲ್ಲಿ ಕಾಂಗ್ರೆಸ್‌ ನೇತೃತ್ವದ ಮೊದಲ ಹತ್ತು ವರ್ಷಗಳ ಆಡಳಿತಾವಧಿಯಲ್ಲಿ ಬಂಧನಕ್ಕೆ ಒಳಗಾಗಿದ್ದು 2,915 ಮೀನುಗಾರರು. ಆದರೆ ನಂತರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡೂ ಸರ್ಕಾರಗಳ ಅವಧಿಯಲ್ಲಿ ಶ್ರೀಲಂಕಾವು ಬಂಧಿಸಿದ ತಮಿಳುನಾಡಿನ ಮೀನುಗಾರರ ಸಂಖ್ಯೆ 3,269. ಇದು ಯುಪಿಎ ಸರ್ಕಾರದ ಅವಧಿಯಲ್ಲಿನ ಬಂಧನಗಳಿಗಿಂತ ಹೆಚ್ಚು. ಇನ್ನೂ ಕಳವಳಕಾರಿ ಅಂಶವೆಂದರೆ ಈ ವರ್ಷದ ಮೊದಲ 80 ದಿನಗಳಲ್ಲಿ ಶ್ರೀಲಂಕಾವು ತಮಿಳುನಾಡಿನ 132 ಮೀನುಗಾರರನ್ನು ಬಂಧಿಸಿದೆ.

ನಮ್ಮ ಮೀನುಗಾರರಿಗೂ ಇವೆ ಹಕ್ಕುಗಳು

1974ರಲ್ಲಿ ಒಪ್ಪಂದ ಮಾಡಿಕೊಂಡಾಗ ಕಚ್ಚತೀವು ದ್ವೀಪದ ಮೇಲೆ ತಮಿಳುನಾಡಿನ ಮೀನುಗಾರರಿಗೆ ಕೆಲವು ಹಕ್ಕುಗಳನ್ನು ಉಳಿಸಿಕೊಳ್ಳಲಾಗಿತ್ತು.

ಅದಕ್ಕೂ ಮೊದಲು ತಮಿಳುನಾಡು ಮತ್ತು ಶ್ರೀಲಂಕಾದ ಮೀನುಗಾರರು ದ್ವೀಪದ ಸುತ್ತ–ಮುತ್ತ ಮೀನುಗಾರಿಕೆ ನಡೆಸುತ್ತಿದ್ದರು. ಶ್ರೀಲಂಕಾ ಮತ್ತು ಭಾರತದ ನಟ್ಟನಡುವೆ ಇರುವ ಈ ದ್ವೀಪವನ್ನು, ಮೀನುಗಾರಿಕೆ ವೇಳೆ ವಿಶ್ರಾಂತಿ ಪಡೆಯಲು ಮತ್ತು ಬಲೆ ಒಣಗಿಸಿಕೊಳ್ಳಲು ಬಳಸುತ್ತಿದ್ದರು. ಅದರ ಹೊರತಾಗಿ ಈ ದ್ವೀಪವು ಸಂಪೂರ್ಣ ನಿರ್ಜನವಾಗಿತ್ತು. ಈ ದ್ವೀಪದಲ್ಲಿ ಸಂತ ಅಂಥೋಣಿಯವರ ಚರ್ಚ್‌ ಇದೆ. ವರ್ಷದಲ್ಲಿ ಒಮ್ಮೆ ಎರಡೂ ಕಡೆಯ ಮೀನುಗಾರರು ಇಲ್ಲಿ ಸೇರಿ ಸಂತ ಅಂಥೋಣಿಯವರ ಹಬ್ಬವನ್ನು ಆಚರಿಸುತ್ತಾರೆ.

1974ರಲ್ಲಿ ಒಪ್ಪಂದ ಮಾಡಿಕೊಂಡಾಗ ಭಾರತದ ಮೀನುಗಾರರು ದ್ವೀಪದ ಸುತ್ತ ಮೀನುಗಾರಿಕೆ ನಡೆಸುವ ಹಕ್ಕನ್ನು ನೀಡಲು ಶ್ರೀಲಂಕಾ ನಿರಾಕರಿಸಿತು. ಶ್ರೀಲಂಕಾದ ಪೂರ್ವಾನುಮತಿ ಮತ್ತು ವೀಸಾ ಇಲ್ಲದೇ ತಮಿಳುನಾಡಿನ ಮೀನುಗಾರರು ದ್ವೀಪದಲ್ಲಿ ಸಂತ ಅಂಥೋಣಿಯವರ ಹಬ್ಬ ಆಚರಿಸಲು, ಮೀನುಗಾರಿಕೆ ವೇಳೆ ವಿಶ್ರಾಂತಿ ಪಡೆಯಲು ಮತ್ತು ಬಲೆ ಒಣಗಿಸುವ ಹಕ್ಕುಗಳನ್ನು ಭಾರತ ಸರ್ಕಾರವು ಉಳಿಸಿಕೊಂಡಿತು. 1986ರವೆಗೂ ಇದು ಅವ್ಯಾಹತವಾಗಿ ನಡೆಯುತ್ತಿತ್ತು. ಆದರೆ ಆನಂತರ ಎಲ್‌ಟಿಟಿಇ ಚಟುವಟಿಕೆಗಳು ತೀವ್ರವಾದ ಕಾರಣ ಭದ್ರತೆಯ ನೆಪವೊಡ್ಡಿ, ಶ್ರೀಲಂಕಾವು ಈ ಹಕ್ಕುಗಳಿಗೆ ನಿರ್ಬಂಧ ಹೇರಿತು.

ಆದರೆ ಈಗ ತಮಿಳುನಾಡಿನ ಮೀನುಗಾರರು ಸಂತ ಅಂಥೋಣಿಯವರ ಹಬ್ಬ ಆಚರಿಸಲು ಕಚ್ಚತೀವು ದ್ವೀಪಕ್ಕೆ ಭೇಟಿ ನೀಡಬಹುದಾಗಿದೆ. ವಿಶ್ರಾಂತಿ ಪಡೆಯುವ ಮತ್ತು ಬಲೆ ಒಣಗಿಸುವ ಹಕ್ಕು ಇದೆಯಾದರೂ, ಆ ಚಟುವಟಿಕೆ ನಡೆಸಿದವರ ಮೇಲೂ ಮೀನುಗಾರಿಕೆ ನಡೆಸಿದ ಆರೋಪ ಹೊರಿಸಿ ಬಂಧಿಸಲಾಗುತ್ತಿದೆ.

ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಭಾರತ ಸರ್ಕಾರವು ಶ್ರೀಲಂಕಾ ಜತೆಗೆ ಹಲವು ಸುತ್ತಿನ ಮಾತುಕತೆ ನಡೆಸಿದೆಯಾದರೂ, ಅದು ಫಲಪ್ರದವಾಗಿಲ್ಲ.

ಆಧಾರ: 1974ರ ಭಾರತ–ಶ್ರೀಲಂಕಾ ಅಂತರರಾಷ್ಟ್ರೀಯ ಜಲಗಡಿ ಒಪ್ಪಂದ, 1976ರ ಭಾರತ–ಶ್ರೀಲಂಕಾ ಅಂತರರಾಷ್ಟ್ರೀಯ ಜಲಗಡಿ ಒಪ್ಪಂದ, ವಿದೇಶಾಂಗ ಸಚಿವಾಲಯವು ಆರ್‌ಟಿಐ ಅಡಿ ನೀಡಿದ ಉತ್ತರ, ವಿದೇಶಾಂಗ ಸಚಿವಾಲಯವು ಲೋಕಸಭೆ ಮತ್ತು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರಗಳು, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT