ಪರಿಸರ ಸೂಕ್ಷ್ಮ ಪ್ರದೇಶವಾದ ಉತ್ತರ ಕನ್ನಡದಲ್ಲಿ ಈಗಾಗಲೇ ಒಂದು ವಾಣಿಜ್ಯ ಬಂದರು ಇದೆ. ಇಲ್ಲಿಂದಲೇ ಸರಿಯಾಗಿ ಸರಕು ಸಾಗಣೆ ನಡೆಯುತ್ತಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ಹೊನ್ನಾವರದಲ್ಲಿ ಎರಡನೇ ಬಂದರು ನಿರ್ಮಾಣಗೊಳ್ಳುತ್ತಿದೆ. ಆ ಸ್ಥಳದಿಂದ ಕೇವಲ 65 ಕಿ.ಮೀ ದೂರದಲ್ಲಿರುವ ಅಂಕೋಲಾ ತಾಲ್ಲೂಕಿನ ಕೇಣಿಯಲ್ಲಿ ಹೊಸ ಬಂದರು ಸ್ಥಾಪನೆಯ ಅಗತ್ಯ ಏನಿದೆ?

ಇದು ಪರಿಸರವಾದಿಗಳ ಪ್ರಶ್ನೆ. ಇವರದಷ್ಟೇ ಅಲ್ಲ; ಕೇಣಿ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸರ್ವಋತು ಆಳ ಸಮುದ್ರ ಬಂದರಿನಿಂದ ಮೀನುಗಾರಿಕೆ ನೆಲೆ ನಾಶವಾಗುವ ಆತಂಕದಲ್ಲಿರುವ ಸಾಂಪ್ರದಾಯಿಕ ಮೀನುಗಾರರ ಪ್ರಶ್ನೆಯೂ ಹೌದು.

ಪಶ್ಚಿಮ ಘಟ್ಟ, ಅಪರೂಪದ ಸಾಗರ ಜೀವಸಂಕುಲವನ್ನು ಒಳಗೊಂಡ ಕಡಲತೀರಗಳನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಯೋಜನೆ ನೆಪದಲ್ಲಿ ಪದೇ ಪದೇ ಪರಿಸರದ ಮೇಲೆ ದಾಳಿ ನಡೆಯುತ್ತಿದೆ ಎಂಬ ದೂರು ಇಲ್ಲಿನ ಜನರದ್ದು. ಭೂಕುಸಿತ ಸಮಸ್ಯೆಗೆ ನಲುಗಿರುವ ಇಲ್ಲಿನ ಜನರಿಗೆ ಬಂದರು ಯೋಜನೆ ಗುಮ್ಮನಂತೆ ಕಾಡುತ್ತಿದೆ. ಕೇಣಿ ಬಂದರು ಯೋಜನೆ ವ್ಯಾಪ್ತಿಯ ಕೇಣಿ, ಭಾವಿಕೇರಿ, ಅಲಗೇರಿ, ಶಿರಕುಳಿ ಗ್ರಾಮದ ನೂರಾರು ಮೀನುಗಾರ ಮತ್ತು ರೈತ ಕುಟುಂಬಗಳು ನೆಲೆ ಕಳೆದುಕೊಳ್ಳುವ ಆತಂಕದಲ್ಲೇ ದಿನ ಕಳೆಯುತ್ತಿವೆ.

‘ಕೇಣಿಯಲ್ಲಿ ಖಾಸಗಿ ಕಂಪನಿಯು ಬಂದರು ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳುತ್ತಿರುವ ವಿಷಯ ತಿಳಿದ ದಿನದಿಂದಲೇ ಹೋರಾಟ ಆರಂಭಿಸಿದ್ದೇವೆ. ಜೀವನಕ್ಕೆ ಆಧಾರವಾಗಿರುವ ಸಮುದ್ರದಿಂದ ನಮ್ಮನ್ನು ದೂರ ಮಾಡುವುದರ ವಿರುದ್ಧ ನಿರಂತರವಾಗಿ ಪ್ರತಿಭಟಿಸುತ್ತಲೇ ಇದ್ದೇವೆ. ಭೂವೈಜ್ಞಾನಿಕ ಸಮೀಕ್ಷೆ ನಡೆಸಲು ಯತ್ನಿಸಿದಾಗ ಸಮುದ್ರಕ್ಕೆ ಜಿಗಿದು ಪ್ರತಿಭಟಿಸಿದೆವು. ಪೊಲೀಸ್ ಬಲದ ಮೂಲಕ ಹತ್ತಿಕ್ಕಲು ಪ್ರಯತ್ನಿಸಿದಾಗ ಸಮುದ್ರದಲ್ಲೇ ನೂರಾರು ದೋಣಿಗಳಲ್ಲಿ ಸಾಗಿ ಪ್ರತಿಭಟಿಸಿದೆವು. ಜನರು ಕೆಲಸ ಬಿಟ್ಟು ಹೋರಾಟ ನಡೆಸುವುದು ಮಾಮೂಲಿನಂತಾಗಿದೆ’ ಎಂದು ಕೇಣಿ ಬಂದರು ಯೋಜನೆ ವಿರೋಧಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂಜೀವ ಬಲೆಗಾರ ಹೇಳುತ್ತಾರೆ.

‘ಬಂದರು ನಿರ್ಮಿಸಲು ಸಮುದ್ರ ಪ್ರದೇಶವನ್ನಷ್ಟೇ ಬಳಸುತ್ತೇವೆ ಎಂದು ನಮ್ಮನ್ನು ನಂಬಿಸಲು ಮುಂದಾದರು. ನಂತರ ಸರಕು ದಾಸ್ತಾನಿಗೆ ಉಗ್ರಾಣ ನಿರ್ಮಿಸಲು, ಬಂದರಿಗೆ ರಸ್ತೆ, ರೈಲು ಸಂಪರ್ಕಕ್ಕೆ ಮಾತ್ರ ಜಾಗ ಸ್ವಾಧೀನವಾಗುತ್ತದೆ ಎಂದರು. ಯೋಜನೆಯ ಪರಿಸರ ಪರಿಣಾಮ ಮೌಲ್ಯಮಾಪನ ವರದಿಯಲ್ಲಿ 103 ಗ್ರಾಮಗಳು ಯೋಜನೆ ವ್ಯಾಪ್ತಿಗೆ ಒಳಪಡುತ್ತವೆ ಎಂದಿದ್ದಾರೆ. ಹೀಗೆ ಜನರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ’ ಎಂಬ ಅಸಮಾಧಾನ ಅವರದ್ದು.

‘ಬಂದರು ಸ್ಥಾಪನೆಯಾದರೆ ಕೇಣಿ, ಬೇಲೆಕೇರಿ, ಬೆಳಂಬಾರ ಭಾಗದಲ್ಲಿ ಮೀನುಗಾರಿಕೆಯನ್ನೇ ಅವಲಂಬಿಸಿ ಜೀವನ ಸಾಗಿಸುವ 2,000ಕ್ಕೂ ಹೆಚ್ಚು ಕುಟುಂಬಗಳು ಬೀದಿಪಾಲಾಗುತ್ತವೆ. ಮೀನುಗಾರಿಕೆ ನಡೆಸುವ ಸಮುದ್ರ ಪ್ರದೇಶದಲ್ಲಿ ಹಡಗುಗಳ ಸಂಚಾರ ಆರಂಭಗೊಂಡರೆ ಮೀನುಗಾರಿಕೆ ನಿಷೇಧಿಸಲಾಗುತ್ತದೆ. ಹಡಗುಗಳಿಂದ ಹೊರಸೂಸುವ ರಾಸಾಯನಿಕಗಳಿಂದ ಮೀನಿನ ಸಂತತಿ ಕ್ಷೀಣಿಸುತ್ತದೆ. ಈಗಾಗಲೇ ಹಲವು ಯೋಜನೆಗಳಿಂದ ನೆಲೆ ಕಳೆದುಕೊಂಡಿರುವ ಮೀನುಗಾರರಿಗೆ ಜೀವನಕ್ಕೆ ದಾರಿ ಇಲ್ಲದಂತಾಗುತ್ತದೆ’ ಎಂಬುದು ಅವರ ಆತಂಕ.

ಏನಿದು ಯೋಜನೆ?

ದೇಶದ ಒಟ್ಟಾರೆ ಸರಕು ಸಾಗಣೆಯಲ್ಲಿ ನವ ಮಂಗಳೂರು ಬಂದರು ಮಂಡಳಿ (ಎನ್ಎಂಪಿಬಿ) ನಿರ್ವಹಿಸುವ ಪ್ರಮಾಣ ಶೇ 3ರಷ್ಟು. ಈ ಪ್ರಮಾಣ ಹೆಚ್ಚಿಸಲು ಖಾಸಗಿ ಸಹಭಾಗಿತ್ವದಲ್ಲಿ ಬಂದರು ಯೋಜನೆ ಜಾರಿಗೊಳಿಸಬೇಕು ಎಂಬ ವಾದದೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಬೃಹತ್ ಬಂದರು ಯೋಜನೆ ಜಾರಿಗೆ ತರಲಾಗುತ್ತಿದೆ. ಹೊನ್ನಾವರ ತಾಲ್ಲೂಕಿನ ಟೊಂಕದಲ್ಲಿ ಖಾಸಗಿ ಕಂಪನಿಯು ಜನರ ಪ್ರಬಲ ವಿರೋಧದ ನಡುವೆಯೂ ಬಂದರು ಯೋಜನೆ ಜಾರಿಗೊಳಿಸಲು ಕಾಮಗಾರಿ ಆರಂಭಿಸಿದೆ. ಈಗ ಅಂಕೋಲಾದ ಕೇಣಿಯಲ್ಲಿ ನಿರಂತರ ವಿರೋಧದ ಹೊರತಾಗಿಯೂ ಅಂದಾಜು ₹6,515 ಕೋಟಿ ವೆಚ್ಚದ ಬಂದರು ನಿರ್ಮಾಣಕ್ಕೆ ಕೆಪಿಪಿಎಲ್ ಸಿದ್ಧತೆ ಕೈಗೊಂಡಿದೆ.

ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಆಧಾರದಲ್ಲಿ ಕೇಣಿ ಬಂದರು ಯೋಜನೆ ಕೈಗೊಳ್ಳಲು 2022ರಲ್ಲಿ ರಾಜ್ಯ ಸರ್ಕಾರ ಆದೇಶಿಸಿತ್ತು. 2023ರಲ್ಲಿ ಸರ್ಕಾರದೊಂದಿಗೆ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಕೇಣಿ ಗ್ರಾಮದ ಕಡಲತೀರದಿಂದ ಅನತಿ ದೂರದಲ್ಲಿ, ಸಮುದ್ರದಲ್ಲೇ 457 ಎಕರೆ ಪ್ರದೇಶದಲ್ಲಿ ಬಂದರು ನಿರ್ಮಿಸುವ ಯೋಜನೆ ಇದು. 309 ಎಕರೆ ಪ್ರದೇಶದಲ್ಲಿ ಸರಕು ಸಂಗ್ರಹಣೆ ಪ್ರದೇಶ, 116 ಎಕರೆಯಲ್ಲಿ ರಸ್ತೆ, ರೈಲು ಮಾರ್ಗ ನಿರ್ಮಾಣ ನಡೆಯಲಿದೆ. ಇಲ್ಲಿಂದ ಅಂಕೋಲಾ ತಾಲ್ಲೂಕಿನ ಬಾಳೆಗುಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–66ಕ್ಕೆ 4.5 ಕಿ.ಮೀ ಷಟ್ಪಥ ಮಾರ್ಗ, 6.5 ಕಿ.ಮೀ ಉದ್ದದ ರೈಲು ಮಾರ್ಗ ಸ್ಥಾಪನೆ ಯೋಜನೆಯಲ್ಲಿ ಸೇರಿದೆ. ಜೊತೆಗೆ ಕೇಣಿಯಲ್ಲೇ ವಿಶಾಲವಾದ ಸರಕು ದಾಸ್ತಾನು ಉಗ್ರಾಣಗಳನ್ನೂ ನಿರ್ಮಿಸುವುದಾಗಿ ಕೆಪಿಪಿಎಲ್ ಕಂಪನಿ ಹೇಳಿಕೊಂಡಿದೆ.

ಆರಂಭದಲ್ಲಿ ವಾರ್ಷಿಕ ಮೂರು ಕೋಟಿ ಟನ್ (ಎಂಟಿಪಿಎ), ಬಳಿಕ ಹಂತ ಹಂತವಾಗಿ ವಾರ್ಷಿಕವಾಗಿ 9.2 ಕೋಟಿ ಟನ್ ಸರಕು ಸಾಗಣೆ ವಹಿವಾಟು ನಡೆಸಲು ಬಂದರು ಬಳಕೆಯಾಗಲಿದೆ. ಕಲ್ಲಿದ್ದಲು, ಕಚ್ಚಾ ಲೋಹದ ಸೂಕ್ಷ್ಮ ವಸ್ತುಗಳು, ಎಲ್ಪಿಜಿ, ಕಚ್ಚಾ ತೈಲದ ಕಾರ್ಗೋಗಳು, ಕಂಟೇನರ್ ಕಾರ್ಗೋಗಳ ಮೂಲಕ ಅಗತ್ಯ ವಸ್ತುಗಳ ಆಮದು, ರಫ್ತು ಚಟುವಟಿಕೆ ನಡೆಯಲಿದೆ ಎಂದು ಕಂಪನಿ ಹೇಳುತ್ತಿದೆ.

‘ಬಳ್ಳಾರಿಯಲ್ಲಿ ಬೃಹತ್ ಮಟ್ಟದಲ್ಲಿ ಕೈಗಾರಿಕೆ ಹೊಂದಿರುವ ಜೆಎಸ್ಡಬ್ಲ್ಯುಕಂಪನಿ ಕಚ್ಚಾ ವಸ್ತುಗಳ ಆಮದು, ಸಿದ್ಧವಸ್ತುಗಳ ರಫ್ತು ಚಟುವಟಿಕೆಗೆ ಬಂದರು ಬಳಕೆಯಾಗಲಿದೆ. ಜೊತೆಗೆ ಉತ್ತರ ಕರ್ನಾಟಕ ಭಾಗದಲ್ಲಿನ ಕೈಗಾರಿಕೆಗಳಿಗೆ ಪೂರಕವಾಗಿ ಅಗತ್ಯ ಸರಕು ಪೂರೈಕೆ–ಸಾಗಾಟಕ್ಕೂ ನೆರವಾಗಲಿದೆ. ಈ ಮೂಲಕ ಉತ್ತರ ಕರ್ನಾಟಕ, ಪಶ್ಚಿಮ ಕರ್ನಾಟಕ ಭಾಗದಲ್ಲಿನ ಕೈಗಾರಿಕೋದ್ಯಮಿಗಳು ಸರಕು ಸಾಗಾಟಕ್ಕೆ ಗೋವಾ, ಆಂಧ್ರ ಪ್ರದೇಶದ ಬಂದರುಗಳನ್ನು ಅವಲಂಬಿಸುವದು ತಪ್ಪಲಿದೆ’ ಎಂಬುದು ಕೇಣಿ ಪೋರ್ಟ್ ಪ್ರೈವೆಟ್ ಲಿಮಿಟೆಡ್ ಕಂಪನಿಯ (ಕೆಪಿಪಿಎಲ್) ವಾದ.

ಸಿಆರ್ಝಡ್ ನಿಯಮ ಉಲ್ಲಂಘನೆಯ ಆರೋಪ

‘ಕೇಣಿ ಬಂದರು ಯೋಜನೆ ಜಾರಿಯಾದಲ್ಲಿ ಕರಾವಳಿ ನಿಯಂತ್ರಣ ವಲಯ (ಸಿಆರ್ಝಡ್) ಕಾಯ್ದೆಯ ಸಂಪೂರ್ಣ ಉಲ್ಲಂಘನೆ ಆಗಲಿದೆ. ಯೋಜನೆಗೆ ಸಮುದ್ರದಲ್ಲಿನ 4.44 ಕೋಟಿ ಘನ ಮೀಟರ್ಗಳಷ್ಟು ಮಣ್ಣು ತೆಗೆಯಲಾಗುತ್ತದೆ. ಹಡಗುಗಳ ಸಂಚಾರಕ್ಕಾಗಿ ಸಮುದ್ರದಲ್ಲಿ 10 ಕಿ.ಮೀ ದೂರದವರೆಗೆ ಬೃಹತ್ ಯಂತ್ರಗಳ ಮೂಲಕ ಹೂಳೆತ್ತುವ ಕಾಮಗಾರಿ ನಡೆಯಲಿದೆ. ಇದು ಜಲಚರಗಳ ನಾಶಕ್ಕೆ ಕಾರಣವಾಗಲಿದೆ. ಜೊತೆಗೆ ಯೋಜನೆಗೆ ನಿರ್ಮಿಸುವ ಅಲೆ ತಡೆಗೋಡೆಗಳಿಂದ ಕಡಲು ಕೊರೆತದ ಸಮಸ್ಯೆ ಹೆಚ್ಚಲಿದೆ. ಇವೆಲ್ಲವೂ ಸಿಆರ್ಝಡ್ ಕಾಯ್ದೆಯ ಉಲ್ಲಂಘನೆ ಆಗಲಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ’ ಎಂದು ಉತ್ತರ ಕನ್ನಡ ಜಿಲ್ಲಾ ಪರಿಸರ ಸಂರಕ್ಷಣಾ ಸಮಿತಿ ದೂರಿದೆ.

‘ಯೋಜನೆ ವ್ಯಾಪ್ತಿಯ ಪ್ರದೇಶದಲ್ಲಿ ಕಾಂಡ್ಲಾ, ಮರಳುಗುಡ್ಡಗಳು, ಸಸ್ಯ ಮತ್ತು ಜೀವವೈವಿಧ್ಯ ಇಲ್ಲ. ಸಂವೇದನಾಶೀಲ ಪರಿಸರ ವ್ಯವಸ್ಥೆ ಇಲ್ಲದ ಕಾರಣ ಈ ಪ್ರದೇಶವು ಸಿಆರ್ಝಡ್ನ ಮೊದಲ ಹಂತದ ಪ್ರದೇಶಕ್ಕೆ ಸೇರುವುದಿಲ್ಲ ಎಂದು ಇಐಎ ವರದಿಯಲ್ಲಿ ಉಲ್ಲೇಖಿಸಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ’ ಎಂದು ಅದು ಹೇಳಿದೆ.

ಮಾಲಿನ್ಯದ ಉಲ್ಲೇಖ

ಕೇಣಿ ಬಂದರು ನಿರ್ಮಾಣದ ಬಳಿಕ ಸರಕು ಸಾಗಣೆ ವೇಳೆ ಈ ಭಾಗದಲ್ಲಿ ಸಮುದ್ರ ಮಾಲಿನ್ಯ ನಡೆಯುವುದು ಸಹಜ ಎಂದು ಯೋಜನೆಗೆ ಸಂಬಂಧಿಸಿದ ಪರಿಸರ ಪರಿಣಾಮ ಮೌಲ್ಯಮಾಪನ ವರದಿಯಲ್ಲಿ (ಇಐಎ)ಉಲ್ಲೇಖಿಸಲಾಗಿದೆ.

‘ವಾರ್ಷಿಕವಾಗಿ 3.4 ಕೋಟಿ ಟನ್ ಕಲ್ಲಿದ್ದಲು, 80 ಲಕ್ಷ ಟನ್ಗಳಷ್ಟು ಲೈಮ್ ಸ್ಟೋನ್, ಡೋಲೊಮೈಟ್, ಬೆಂಟೋಮೈಟ್ಗಳ ಸಾಗಾಟ ನಡೆಯಲಿದೆ. ತಲಾ 30 ಲಕ್ಷ ಟನ್ ಸಿಮೆಂಟ್ ಕ್ಲಿಂಕರ್ ಮತ್ತು ಹಾರುಬೂದಿ, ಬಾಕ್ಸೈಟ್ ಮುಂತಾದ ಅದಿರುಗಳನ್ನು ಸಾಗಿಸಲಾಗುತ್ತದೆ. ಇದಲ್ಲದೇ ದ್ರವರೂಪದ ಸರಕುಗಳು, ಆಹಾರ ಸಾಮಗ್ರಿಗಳೂ ಇದೇ ಬಂದರು ಮೂಲಕ ಆಮದಾಗಲಿವೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹಡಗು, ಇತರ ಸರಕು ಸಾಗಣೆ ವಾಹನಗಳಿಂದ ಹೊರಸೂಸುವ ತೈಲ, ಹೊಗೆಗಳಿಂದ ಪರಿಸರದ ಮೇಲೆ ಪರಿಣಾಮ ಬೀರುವುದು ಸಹಜ. ಆದರೆ, ಅವುಗಳನ್ನು ಸಾಧ್ಯವಾದಷ್ಟು ನಿಯಂತ್ರಿಸಲು ಮಾರ್ಗೋಪಾಯಗಳನ್ನು ಕೈಗೊಳ್ಳಲು ಸಲಹೆಗಳನ್ನೂ ವರದಿಯಲ್ಲಿ ನೀಡಲಾಗಿದೆ.

‘ಇಐಎ ವರದಿಯೇ ತಪ್ಪು’

‘ಕೇಣಿ ಬಂದರು ಯೋಜನೆಯ ಪರಿಸರ ಪರಿಣಾಮ ಮೌಲ್ಯಮಾಪನ (ಇಐಎ) ವರದಿ ಹಲವು ತಪ್ಪುಗಳಿಂದ ಕೂಡಿದೆ. ಹಲವು ಅಪೂರ್ಣ ಮಾಹಿತಿಗಳಿಂದ ಕೂಡಿದ್ದು ವಿವರವಾದ ಅಧ್ಯಯನ ನಡೆದಿಲ್ಲ. ಕೇವಲ ಮೂರು ತಿಂಗಳಲ್ಲಿ ಪರಿಸರ ಸಮೀಕ್ಷೆ ನಡೆಸುವುದು ಅಸಾಧ್ಯ. ಯೋಜನೆಯಿಂದ ಹಲವು ಕಾಯ್ದೆಗಳ ಉಲ್ಲಂಘನೆ ಆಗುತ್ತಿದೆ. ಬಂದರು ಯೋಜನೆ ಜಾರಿ ಮಾಡುವ ಖಾಸಗಿ ಸಂಸ್ಥೆಯ ಪರವಾಗಿ ಇಐಎ ವರದಿ ನೀಡಲಾಗಿದೆ. ಇದು ನಿಷ್ಪಕ್ಷಪಾತ ವರದಿ ಅಲ್ಲ’ ಎಂಬುದು ಜೀವವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸೇರಿದಂತೆ ಹಲವು ಪರಿಸರ ತಜ್ಞರನ್ನು ಒಳಗೊಂಡಿರುವ ಉತ್ತರ ಕನ್ನಡ ಜಿಲ್ಲಾ ಪರಿಸರ ಸಂರಕ್ಷಣಾ ಸಮಿತಿಯ ಆರೋಪ.

‘ಸ್ವತಂತ್ರ ವಿಜ್ಞಾನ ಸಂಸ್ಥೆ ಮೂಲಕ ಪರಿಸರ ಅಧ್ಯಯನ ನಡೆಯಬೇಕು. ಈಗ ಸಿದ್ಧಪಡಿಸಲಾದ ವರದಿ ರದ್ದು ಮಾಡಬೇಕು’ ಎಂಬ ಒತ್ತಾಯ ಸಮಿತಿಯದ್ದು.

‘ಕೇಣಿ ಬಂದರು ಯೋಜನೆಯಿಂದ ಅಪರೂಪದ, ವಿನಾಶದ ಅಂಚಿನ ಜಲಚರ ಸಮುದ್ರ ಹಾಗೂ ಸಮುದ್ರದ ಅಂಚಿನ ಸಸ್ಯ ಸಮೂಹಗಳು ನಾಶವಾಗಲಿವೆ. ಕೇಣಿ ಸಮುದ್ರ ಪ್ರದೇಶ ನೈಸರ್ಗಿಕ ಜೀವ ವೈವಿಧ್ಯತಾಣ ಎಂದು 2020ರಲ್ಲೇ ಜೀವವೈವಿಧ್ಯ ಮಂಡಳಿ ಗುರುತಿಸಿದೆ. ಇಐಎ ವರದಿಗೆ ಮುನ್ನ ಜೀವವೈವಿಧ್ಯ ಮಂಡಳಿಯಿಂದ ತಜ್ಞರ ಅಭಿಪ್ರಾಯ ಪಡೆದಿಲ್ಲ. ಕೇಣಿ ಸಮುದ್ರದ ಒಳಗೆ ಚಾಚಿಕೊಂಡಿರುವ ನಂದಿಬೆಟ್ಟವನ್ನು ಯೋಜನೆ ನೆಲಸಮ ಮಾಡಲಿದೆ. ಇದು ಪವಿತ್ರ ಐತಿಹಾಸಿಕ ಸ್ಥಳ. ಅರಣ್ಯ ಇಲಾಖೆ ಇದಕ್ಕೆ ಒಪ್ಪಿಗೆ ನೀಡಬಾರದು’ ಎಂಬುದು ಸಮಿತಿಯ ಒತ್ತಾಯ.

‘600 ಪುಟಗಳ ಇಐಎ ವರದಿಯನ್ನು ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯ ಸಿದ್ಧಪಡಿಸಿದೆ. ಇಂಗ್ಲಿಷ್ನಲ್ಲಿರುವ ವರದಿಯ ಕನ್ನಡ ಸಾರಾಂಶವನ್ನು 48 ಪುಟಕ್ಕೆ ಸೀಮಿತಗೊಳಿಸಿದ್ದು, ಹಲವು ತಪ್ಪುಗಳಿಂದ ಕೂಡಿದೆ. ಇಐಎ ವರದಿಯ ಮೂಲಕ ಸ್ಥಳೀಯರ ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿದೆ’ ಎನ್ನುತ್ತಾರೆ ಕಡಲ ಜೀವವಿಜ್ಞಾನಿ ವಿ.ಎನ್.ನಾಯಕ.

‘ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಅನುಕೂಲ’

‘ಕೇಣಿ ಬಂದರು ಯೋಜನೆಯಿಂದ ಆಮದು–ರಫ್ತು ಚಟುವಟಿಕೆ ನಡೆಯುವುದರ ಮೂಲಕ ಕೇವಲ ಬಂದರು ವ್ಯಾಪ್ತಿಯಲ್ಲಷ್ಟೇ ಅಲ್ಲದೆ ಸುತ್ತಮುತ್ತಲೂ ಕೈಗಾರಿಕೆ ಸ್ಥಾಪನೆಗೆ, ವಾಣಿಜ್ಯ ಚಟುವಟಿಕೆ ವೃದ್ಧಿಗೆ ಅವಕಾಶ ಆಗಲಿದೆ. ಬಂದರು ನಿರ್ಮಾಣದ ವೇಳೆಯಲ್ಲೇ ಕನಿಷ್ಠ 2,000 ಉದ್ಯೋಗ ಸೃಷ್ಟಿಯಾಗಲಿದೆ. ಬಂದರು ನಿರ್ಮಾಣದ ಬಳಿಕ, ನಿರ್ವಹಣೆ ವಿಭಾಗದಲ್ಲಿ 500 ಜನರಿಗೆ ಉದ್ಯೋಗಾವಕಾಶ ಲಭಿಸಲಿದೆ’ ಎನ್ನುತ್ತಾರೆ ಕೆಪಿಪಿಎಲ್ ಯೋಜನಾ ನಿರ್ದೇಶಕ ಭರಮಪ್ಪ ಕುಂಟಿಗೇರಿ.‘ಬಂದರು ಯೋಜನೆ ಜಾರಿಯಾದರೆ ಬಂದರಿಗೆ ಸರಕು ಸಾಗಣೆಗೆ ಪೂರಕವಾಗಿ ಹುಬ್ಬಳ್ಳಿ–ಅಂಕೋಲಾ ರೈಲು ಯೋಜನೆ ಕಾರ್ಯಗತಗೊಳಿಸಲಾಗುತ್ತದೆ. ಇದಕ್ಕಾಗಿ ಗರಿಷ್ಠ ಪ್ರಯತ್ನವನ್ನು ನಡೆಸಲಿದೆ. ಯೋಜನೆಗೆ ರಸ್ತೆ, ರೈಲು ಸಂಪರ್ಕಕ್ಕೆ 140 ಎಕರೆಯಷ್ಟು ಜಾಗ ಮಾತ್ರ ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. ಸುಮಾರು 75 ಮನೆಗಳು ತೆರವುಗೊಳ್ಳಬಹುದು. ಅವುಗಳಿಗೆ ಪರಿಹಾರ ಸಿಗಲಿದೆ. ಜೊತೆಗೆ ಸ್ಥಳೀಯರ ಆರ್ಥಿಕ ಸಬಲೀಕರಣಕ್ಕೆ ವಿವಿಧ ಯೋಜನೆ ಹಮ್ಮಿಕೊಳ್ಳಲಾಗುವುದು. ಉದ್ಯೋಗಾವಕಾಶ ಲಭ್ಯತೆಗೆ ಪೂರಕವಾಗಿ ಕೌಶಲ ತರಬೇತಿ ನೀಡಲಾಗುವುದು’ ಎಂದು ಅವರು ಭರವಸೆಯನ್ನೂ ನೀಡುತ್ತಾರೆ.

ವಿರೋಧದಿಂದ ಅನ್ಯ ರಾಜ್ಯಕ್ಕೆ ಲಾಭ

‘ಕೇಣಿ ಸರ್ವಋತು ಆಳ ಸಮುದ್ರ ಬಂದರು ಸ್ಥಾಪನೆ ರಾಜ್ಯದ ಅಭಿವೃದ್ಧಿಗೆ ಪೂರಕ ಆಗಲಿದೆ. ಅತಿ ಉದ್ದದ ಕರಾವಳಿ ಪ್ರದೇಶ ಇದ್ದರೂ ಕರ್ನಾಟಕದಲ್ಲಿ ಒಂದೂ ಸರ್ಕಾರಿ–ಖಾಸಗಿ ಸಹಭಾಗಿತ್ವದ ಬಂದರು ಸ್ಥಾಪನೆ ಆಗಿಲ್ಲ. ಗುಜರಾತ್, ಕೇರಳಕ್ಕೆ ಹೋಲಿಸಿದರೆ ನಾವಿನ್ನೂ ಹಿಂದುಳಿದಿದ್ದೇವೆ. ಈಗ ಬಂದರು ಯೋಜನೆಗೆ ವಿರೋಧ ವ್ಯಕ್ತವಾದರೆ ಕಂಪನಿಯು ಅನ್ಯ ರಾಜ್ಯದಲ್ಲಿ ಬಂದರು ನಿರ್ಮಿಸಬಹುದು’ ಎನ್ನುತ್ತಾರೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ. ‘ಬಂದರು ನಿರ್ಮಾಣವಾದರೆ ಕೈಗಾರಿಕೆಗಳಿಗೆ ಪೂರಕ ಕಚ್ಚಾವಸ್ತುಗಳ ಲಭ್ಯತೆ ಸುಲಭವಾಗಲಿದೆ. ಕರಾವಳಿ ಭಾಗದಲ್ಲಷ್ಟೇ ಅಲ್ಲದೆ ರಾಜ್ಯದ ಉಳಿದ ಪ್ರದೇಶಗಳಲ್ಲೂ ಕೈಗಾರಿಕೆಗಳ ಸ್ಥಾಪನೆಗೆ ಉದ್ಯಮಿಗಳು ಮುಂದೆ ಬರಬಹುದು. ಅಷ್ಟಕ್ಕೂ ಮೀನುಗಾರರು, ರೈತರ ಭೂಮಿ ಸ್ವಾಧೀನಪಡಿಸಿಕೊಂಡು ಬಂದರು ಸ್ಥಾಪನೆಗೆ ನೀಡುತ್ತಿಲ್ಲ. ಸಮುದ್ರ ಪ್ರದೇಶದಲ್ಲೇ ಬಂದರು ನಿರ್ಮಿಸುವ ಯೋಜನೆ ಇದು’ ಎಂದು ಅವರು ಯೋಜನೆ ಸಮರ್ಥಿಸಿಕೊಳ್ಳುತ್ತಾರೆ.

ಶುಕ್ರವಾರ ಅಹವಾಲು ಸಭೆ

ಕರ್ನಾಟಕವು 343 ಕಿ.ಮೀ ಉದ್ದದ ಕಡಲತೀರ ಹೊಂದಿದ್ದರೂ ನೆರೆ ರಾಜ್ಯಗಳಿಗೆ ಹೋಲಿಸಿದರೆ ಸಮುದ್ರ ಮಾರ್ಗವಾಗಿ ಸರಕು ಸಾಗಣೆ ವಿಷಯದಲ್ಲಿ ಹಿಂದೆ ಬಿದ್ದಿದೆ ಎಂಬ ಕಾರಣ ನೀಡಿ ಕೇಣಿ ಬಂದರು ನಿರ್ಮಿಸಲಾಗುತ್ತಿದೆ. ಒಂದೆಡೆ ಸ್ಥಳೀಯ ಮೀನುಗಾರರು, ರೈತರ ವಿರೋಧ, ಇನ್ನೊಂದೆಡೆ ಪರಿಸರವಾದಿಗಳ ಆಕ್ಷೇಪದ ನಡುವೆಯೇ ಯೋಜನೆ ಕಾರ್ಯಗತಗೊಳಿಸಲಿರುವ ಜೆಎಸ್ಡಬ್ಲ್ಯು, ಕೆಪಿಪಿಎಲ್ ಪರಿಸರ ಪರಿಣಾಮ ಮೌಲ್ಯಮಾಪನ ವರದಿ (ಇಐಎ) ಸಿದ್ಧಪಡಿಸಿವೆ. ಅದರ ಆಧಾರದಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಶುಕ್ರವಾರ (ಆಗಸ್ಟ್ 22) ಸಾರ್ವಜನಿಕ ಅಹವಾಲು ಆಲಿಕೆ ಸಭೆ ಆಯೋಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.