ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ | ಲಡಾಖ್‌: ಭಾರತದ ನೆಲವನ್ನು ಸರ್ಕಾರ ಚೀನಾಕ್ಕೆ ಬಿಟ್ಟುಕೊಟ್ಟಿತೇ?
ಆಳ–ಅಗಲ | ಲಡಾಖ್‌: ಭಾರತದ ನೆಲವನ್ನು ಸರ್ಕಾರ ಚೀನಾಕ್ಕೆ ಬಿಟ್ಟುಕೊಟ್ಟಿತೇ?
Published 4 ಏಪ್ರಿಲ್ 2024, 23:50 IST
Last Updated 4 ಏಪ್ರಿಲ್ 2024, 23:50 IST
ಅಕ್ಷರ ಗಾತ್ರ
ಪೂರ್ವ ಲಡಾಖ್‌ನಲ್ಲಿ ಚೀನಾ ಸೇನೆಯು ಭಾರತದ ನೆಲವನ್ನು ಅತಿಕ್ರಮಿಸಿದೆ. ಭಾರತ ಸರ್ಕಾರವು ಸಾವಿರಾರು ಚದರ ಕಿ.ಮೀ.ನಷ್ಟು ಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದೆ ಎಂಬುದು ಲಡಾಖ್‌ ನಿವಾಸಿಗಳ ಮತ್ತು ವಿರೋಧ ಪಕ್ಷಗಳ ಆರೋಪ. ಕೇಂದ್ರ ಸರ್ಕಾರ ಇದನ್ನು ನಿರಾಕರಿಸುತ್ತಲೇ ಇದೆ. ಆದರೆ ವಾಸ್ತವದಲ್ಲಿ ಲಡಾಖ್‌ನ ಹಲವು ಪ್ರದೇಶಗಳ ಮೇಲೆ ಕೇಂದ್ರ ಸರ್ಕಾರವು ಭಾರತದ ಹಕ್ಕನ್ನು ಬಿಟ್ಟುಕೊಟ್ಟಿದೆ, ಬಫರ್‌ ಝೋನ್‌ ಹೆಸರಿನಲ್ಲಿ. ಕೇಂದ್ರ ಸರ್ಕಾರದ ಪತ್ರಿಕಾ ಪ್ರಕಟಣೆಗಳೇ ಇದನ್ನು ದೃಢಪಡಿಸುತ್ತವೆ

ಲಡಾಖ್‌ ಪೂರ್ಣ ಪ್ರಮಾಣದಲ್ಲಿ ಭಾರತದ ನಿಯಂತ್ರಣದಲ್ಲಿ ಇಲ್ಲ. ಸ್ವಾತಂತ್ರ್ಯಾನಂತರ ರೂಪಿಸಲಾದ ಗಡಿಗಳನ್ನು ಚೀನಾ ಒಪ್ಪಿಕೊಂಡಿಲ್ಲ. ಪೂರ್ವ ಲಡಾಖ್‌ನ 60,000 ಚದರ ಕಿ.ಮೀ.ಗಿಂತಲೂ ಹೆಚ್ಚು ಪ್ರದೇಶವು ತನ್ನದೆಂದು ಚೀನಾ ಪ್ರತಿಪಾದಿಸುತ್ತಿದೆ. ಅಲ್ಲಿ ಒಪ್ಪಿತ ಅಂತರರಾಷ್ಟ್ರೀಯ ಗಡಿ ಇಲ್ಲ. 1962ರ ಯುದ್ಧದ ನಂತರ ಎರಡೂ ದೇಶಗಳ ಸೇನೆಗಳು ತಾತ್ಕಾಲಿಕ ಕದನ ವಿರಾಮ ರೇಖೆಯನ್ನು ಘೋಷಿಸಿಕೊಂಡವು. ಅದೇ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ). 1962ರ ನಂತರ ಈ ರೇಖೆಯಲ್ಲಿ ಗಮನಾರ್ಹ ಬದಲಾವಣೆ ಇರಲಿಲ್ಲ. ಆದರೆ 2020ರ ನಂತರ ಈ ರೇಖೆಯನ್ನು ಬದಲಿಸಲು ಚೀನಾ ಯತ್ನಿಸಿದೆ. ಅದರ ಫಲವಾಗಿಯೇ 2020ರ ಮೇ–ಜೂನ್‌–ಅಕ್ಟೋಬರ್‌ನಲ್ಲಿ ಗಾಲ್ವಾನ್‌, ಪ್ಯಾಂಗಾಂಗ್‌ ಸರೋವರದ ಬಳಿ ಭಾರತ–ಚೀನಾ ಸೈನಿಕರ ನಡುವೆ ಸಂಘರ್ಷ ನಡೆಯಿತು. ಸಂಘರ್ಷ ತೀವ್ರವಾದಾಗ ಎರಡೂ ಕಡೆಯಿಂದ ಭಾರಿ ಪ್ರಮಾಣದಲ್ಲಿ ಸೇನೆ ಜಮಾವಣೆ ನಡೆದಿತ್ತು. ನಂತರದ ದಿನಗಳಲ್ಲಿ ಮಾತುಕತೆಯ ಮೂಲಕ ಸೇನೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಲಾಗಿದೆ. ಆದರೆ ವಾಸ್ತವದಲ್ಲಿ ಭಾರತವೇ ತನ್ನ ನೆಲವನ್ನು ಬಿಟ್ಟುಕೊಂಟ್ಟಂತಾಗಿದೆ.

ಈ ಸಂಘರ್ಷಗಳ ನಂತರ ಎರಡೂ ಸೇನೆಯ ಅಧಿಕಾರಿಗಳು ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ಆನಂತರ ಹೆಚ್ಚಿನ ಸೈನಿಕರನ್ನು ವಾಪಸ್‌ ಕರೆಸಿಕೊಳ್ಳಲು ಒಪ್ಪಿದ್ದರು. ಚೀನಾ ಸೈನಿಕರು ಎಲ್‌ಎಸಿ ದಾಟಿ ಬಂದಿದ್ದರಿಂದಲೇ ಸಂಘರ್ಷ ನಡೆದಿದ್ದದ್ದು. ಆದರೆ ವಾಪಸ್‌ ಕರೆಸಿಕೊಳ್ಳುವಾಗ ಸಂಘರ್ಷದ ಜಾಗದಿಂದ ಹಲವು ಕಿ.ಮೀ.ವರೆಗೆ ‘ಬಫರ್‌ ಝೋನ್‌’ ರೂಪಸಿಬೇಕು. ಅಲ್ಲಿಗೆ ಎರಡೂ ಕಡೆಯ ಸೈನಿಕರು ಪ್ರವೇಶಿಸಬಾರದು ಎಂದು ಚೀನಾ ಷರತ್ತು ಹಾಕಿತ್ತು. ಹೀಗೆ ನಿರ್ಮಿಸಲಾದ ಬಫರ್ ಝೋನ್‌ ಸಂಪೂರ್ಣವಾಗಿ ಭಾರತದ ನೆಲದಲ್ಲಿ ಇತ್ತು. ಭಾರತವು ತಾನು ಈ ಹಿಂದೆ ಗಸ್ತು ನಡೆಸುತ್ತಿದ್ದ ಠಾಣೆಗೇ ಪ್ರವೇಶಿಸದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಲಡಾಖ್‌ನ ಗೋಗ್ರಾ ನೆಲೆಯ ಸಮೀಪದ ಮತ್ತು ಪ್ಯಾಂಗಾಂಗ್‌ ಸರೋವರದ ಉತ್ತರ ದಂಡೆಯಲ್ಲಿನ ಹಲವು ಗಸ್ತು ಠಾಣೆಗಳನ್ನು ಕೇಂದ್ರ ಸರ್ಕಾರವು ಈ ರೂಪದಲ್ಲಿ ಬಿಟ್ಟುಕೊಟ್ಟಿದೆ.

ಈ ಬಗ್ಗೆ 2021ರ ಫೆಬ್ರುವರಿಯಲ್ಲಿ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸಂಸದರು ಪ್ರಶ್ನೆ ಎತ್ತಿದಾಗ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಉತ್ತರ ನೀಡಿದ್ದರು. ‘ಸಂಘರ್ಷದ ನೆಲೆಗಳಲ್ಲಿ ಮುಂದಿನ ಆದೇಶದವರೆಗೆ ಎರಡೂ ಕಡೆಯಿಂದ ಹೊಸ ತುಕಡಿಗಳನ್ನು ನಿಯೋಜಿಸುವಂತಿಲ್ಲ. ಇದು ಸಂಘರ್ಷ ಕೊನೆಯಾಗುವವರೆಗೆ ಮಾತ್ರ. ಆನಂತರ ಸೇನೆ ನಿಯೋಜಿಸಬಹುದು’ ಎಂದು ರಾಜನಾಥ್‌ ಹೇಳಿದ್ದರು. ಆದರೆ ಈವರೆಗೆ ಆ ಪ್ರದೇಶಗಳಲ್ಲಿ ಮತ್ತೆ ಗಸ್ತು ನಡೆಸಲು ಭಾರತದ ಸೈನಿಕರಿಗೆ ಸಾಧ್ಯವಾಗಿಲ್ಲ. 

ಗಸ್ತು ಠಾಣೆ 15, ಗಸ್ತು ಠಾಣೆ 17ಎ, ಕೈಲಾಶ್‌ ಪಾಸ್‌, ಗಾಲ್ವಾನ್‌ ಕಣಿವೆ ಬಳಿಯ ಗಸ್ತು ಠಾಣೆ 10, 11, 12, 12ಎ ಮತ್ತು 13ರನ್ನು ಹೀಗೆ ಬಿಟ್ಟುಕೊಡಲಾಗಿದೆ. ಈ ಪ್ರದೇಶಗಳಲ್ಲಿ ಚೀನಾವು ಎಲ್‌ಎಸಿಯನ್ನು ದಾಟಿ ಒಳಗೆ ಬಂದಿದೆ. ಈ ಹಿಂದೆ ಇಲ್ಲೆಲ್ಲಾ ಭಾರತದ ಸೈನಿಕರು ಗಸ್ತು ನಡೆಸುತ್ತಿದ್ದರು. ಆದರೆ ಈಗಿನ ಒಪ್ಪಂದದ ಪ್ರಕಾರ ಭಾರತದ ಸೈನಿಕರು ಈ ಗಸ್ತುಠಾಣೆಗಳಿಗೆ ಹೋಗುವಂತಿಲ್ಲ. ಈ ರೂಪದಲ್ಲಿ ಭಾರತದ ನೆಲವನ್ನು ಕೇಂದ್ರ ಸರ್ಕಾರವು ಬಿಟ್ಟುಕೊಟ್ಟಿದೆ. ಇದನ್ನೇ ಲಡಾಖ್‌ನ ಜನರು, ಸಾಮಾಜಿಕ ಕಾರ್ಯಕರ್ತರು, ಜನಪ್ರತಿನಿಧಿಗಳು, ಲಡಾಖ್‌ನ ಬಿಜೆಪಿ ಸಂಸದ ಜೆ.ಟಿ.ನಾಮಗ್ಯಲ್‌ ಅವರೂ ಚೀನಾವು ಭಾರತದ ನೆಲವನ್ನು ಅತಿಕ್ರಮಿಸಿದೆ ಎಂದು ಹೇಳುತ್ತಿದ್ದಾರೆ. ಆದರೆ ಕೇಂದ್ರದದ ಬಿಜೆಪಿ ನೇತೃತ್ವದ ಸರ್ಕಾರ ಮಾತ್ರ ಇದನ್ನು ನಿರಾಕರಿಸುತ್ತಿದೆ.

‘ನಮ್ಮ ನೆಲದಲ್ಲಿ ಚೀನಾ’

‘ಚೀನಾವು ಲಡಾಖ್‌ ಅನ್ನು ಮುತ್ತುತ್ತಿದೆ. ಇಲ್ಲಿನ ಉತ್ತರ ದಿಕ್ಕಿನಿಂದ ಸುಮಾರು 4 ಸಾವಿರ ಚದರ ಕಿ.ಮೀ ಅನ್ನು ಚೀನಾ ಆಕ್ರಮಿಸಿದೆ. ಹೀಗೆ ಹೇಳಿದ ನನ್ನನ್ನು ದೇಶದ್ರೋಹಿ ಅನ್ನುತ್ತಾರೆ. 10 ಸಾವಿರ ಲಡಾಖ್‌ ಜನರೊಂದಿಗೆ ‘ಗಡಿಯತ್ತ ನಡಿಗೆ’ ಕಾರ್ಯಕ್ರಮವನ್ನು ಏಪ್ರಿಲ್‌ 7ರಂದು ಮಾಡಲಿದ್ದೇವೆ. ಚೀನಾವು ಭಾರತದ ಒಳಗೆ ಬಂದಿರುವುದನ್ನು ಅಂದು ಸಾಕ್ಷ್ಯ ಸಮೇತ ತೋರಿಸುತ್ತೇವೆ. ಭಾರತ–ಚೀನಾ ಗಡಿ ಪ್ರದೇಶದಲ್ಲಿರುವ ಲಡಾಖ್‌ನ ಅಲೆಮಾರಿ ಜನಾಂಗದವರು ನಡಿಗೆಯನ್ನು ಮುನ್ನಡೆಸಲಿದ್ದಾರೆ’

–ಇದು ಖ್ಯಾತ ಪರಿಸರ ಹೋರಾಟಗಾರ ಸೋನಮ್‌ ವಾಂಗ್ಚುಕ್‌ ಅವರ ಮಾತುಗಳು. ‘ಭಾರತ–ಚೀನಾ ಗಡಿ ಪ್ರದೇಶದಲ್ಲಿನ ಜನರು ಹಾಗೂ ಅಲೆಮಾರಿ ಬುಡಕಟ್ಟು ಜನಾಂಗದವರು ನಡಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ತಮ್ಮ ಜಮೀನುಗಳನ್ನು ಚೀನಾದವರು ಹಾಗೂ ಉದ್ಯಮಿಗಳು ಕಬಳಿಸಿದ್ದಾರೆ ಎಂಬುದನ್ನು ಅವರು ಮೊದಲಿನಿಂದಲೂ ಹೇಳುತ್ತಿದ್ದಾರೆ. ಇದನ್ನು ಏಪ್ರಿಲ್‌ 7ರಂದು ಜಗತ್ತಿಗೇ ಅವರು ತೋರಿಸಲಿದ್ದಾರೆ. ತಮ್ಮ ಜಾಗವನ್ನೂ ಚೀನಾದವರು ಆಕ್ರಮಿಸಿದ್ದಾರೆ ಎಂದು ಸ್ಥಳೀಯ ಕುರಿಗಾಹಿಗಳು ಆರೋಪಿಸುತ್ತಲೇ ಇದ್ದಾರೆ. ತಮ್ಮ ಕುರಿಗಳನ್ನು ಮೇಯಿಸುವ ಕೆಲವು ಪ್ರದೇಶವು ಚೀನಾದ ಹಿಡಿತದಲ್ಲಿದೆ. ಕೆಲವೊಮ್ಮೆ ಕುರಿಗಾಹಿಗಳು ಹಾಗೂ ಚೀನಾದ ಗಸ್ತು ಸೈನಿಕರ ನಡುವೆ ಘರ್ಷಣೆ ಕೂಡ ನಡೆದಿದೆ ಎಂದು ಸ್ಥಳೀಯರು ಹೇಳುತ್ತಾರೆ’ ಎಂದೂ ವಾಂಗ್ಚುಕ್‌ ಅವರು ರಾಯಿಟರ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಪ್ಯಾಂಗಾಂಗ್‌ ಸರೋವರ

ಪ್ಯಾಂಗಾಂಗ್‌ ಸರೋವರದ ಉತ್ತರ ದಂಡೆಯಲ್ಲಿರುವ ಪರ್ವತಗಳ ಚಾಚುಗಳನ್ನು ‘ಫಿಂಗರ್‌’ಗಳು ಎಂದು ಕರೆಯಲಾಗುತ್ತದೆ. ಭಾರತದ ನೆಲದಲ್ಲಿರುವ ಸರೋವರದ ಉತ್ತರದ ದಂಡೆಯಲ್ಲಿ ಇಂತಹ ಎಂಟು ಫಿಂಗರ್‌ಗಳನ್ನು ಗುರುತಿಸಲಾಗಿದೆ. ಈ ಎಂಟೂ ಫಿಂಗರ್‌ಗಳವರೆಗೆ ಭಾರತದ ಸೈನಿಕರು ಗಸ್ತು ನಡೆಸಬಹುದಿತ್ತು. ಆದರೆ 2020ರಲ್ಲಿನ ಸಂಘರ್ಷದ ವೇಳೆ ಚೀನಾ ಸೈನಿಕರು ಫಿಂಗರ್ 5ವರೆಗೆ ಅತಿಕ್ರಮಣ ಮಾಡಿದ್ದರು. ಒಪ್ಪಂದದ ನಂತರ ಚೀನಾ ಸೇನೆ ಅಲ್ಲಿಂದ ವಾಪಸ್‌ ತೆರಳಬೇಕು ಎಂದು ಭಾರತ ಷರತ್ತು ಹಾಕಿತ್ತು. ಭಾರತವು ಫಿಂಗರ್‌ 5ವರೆಗೆ ಮಾತ್ರ ಗಸ್ತು ನಡೆಸಬೇಕು ಎಂದು ಚೀನಾ ಷರತ್ತು ಹಾಕಿತ್ತು. ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಕೊಂಡಿತ್ತು. ಈ ಪ್ರಕಾರ ಫಿಂಗರ್ 4ರಿಂದ ಫಿಂಗರ್‌–8ರವರೆಗೆ ಸುಮಾರು 8 ಕಿ.ಮೀ. ದೂರದಷ್ಟು ಪ್ರದೇಶವನ್ನು ಭಾರತದ ಬಿಟ್ಟುಕೊಟ್ಟಂತಾಗಿದೆ. ಇದೇ ಅವಧಿಯಲ್ಲಿ ಚೀನಾ ಫಿಂಗರ್–5ರವರೆಗೆ ಸುಸಜ್ಜಿತ ಹೆದ್ದಾರಿ ಮತ್ತು ಸೇನಾಠಾಣೆಗಳನ್ನು ನಿರ್ಮಿಸಿದೆ. ಬಂಕರ್‌ಗಳನ್ನೂ ನಿರ್ಮಿಸಿದೆ.

ಆಧಾರ: ರಾಯಿಟರ್ಸ್‌, ಡೆಕ್ಕನ್‌ ಹೆರಾಲ್ಡ್‌, ಲಡಾಖ್‌ ಎಸ್‌ಪಿಯಾಗಿದ್ದ ಪಿ.ಡಿ. ನಿತ್ಯಾ ಅವರು 57ನೇ ವಾರ್ಷಿಕ ಪೊಲೀಸ್‌ ಮಹಾನಿರ್ದೇಶಕರ ಸಮ್ಮೇಳನದಲ್ಲಿ ಮಂಡಿಸಿದ್ದ ವರದಿ, ಪಿಟಿಐ, ಸೊನಮ್‌ ವಾಂಗ್ಚುಕ್‌ ಅವರ ಸಾಮಾಜಿಕ ಜಾಲತಾಣ ಪೋಸ್ಟ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT