ಕೋಲ್ಕತ್ತದಲ್ಲಿ ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆಯ ನಂತರ ವೈದ್ಯಕೀಯ ಸಮುದಾಯವು ತಮ್ಮ ಜೀವ ರಕ್ಷಣೆಗಾಗಿ ದೇಶದಲ್ಲಿ ಬಿಗಿ ಕಾನೂನು ಬೇಕು ಎಂದು ಆಗ್ರಹಿಸುತ್ತಿದೆ. ಬಹುತೇಕ ರಾಜ್ಯಗಳಲ್ಲಿ ಕಾನೂನುಗಳಿದ್ದರೂ ರಾಷ್ಟ್ರಕ್ಕೆ ಅನ್ವಯವಾಗುವ ಕಾಯ್ದೆ ರೂಪಿಸಬೇಕು ಎಂಬುದು ವೈದ್ಯ ಸಮೂಹದ ಒತ್ತಾಯ. 2019ರಲ್ಲಿ ಕೇಂದ್ರ ಸರ್ಕಾರ ಕರಡು ಮಸೂದೆ ಸಿದ್ಧಪಡಿಸಿದ್ದರೂ ಅದು ಇನ್ನೂ ಕಾನೂನು ರೂಪ ಪಡೆದಿಲ್ಲ
ಕೋಲ್ಕತ್ತದಲ್ಲಿ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆಯ ನಂತರ ದೇಶದ ವೈದ್ಯರು ಪ್ರತಿಭಟನೆಗಿಳಿದಿದ್ದಾರೆ. ತಮಗೆ ರಕ್ಷಣೆ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ವೈದ್ಯರು, ದಾದಿಯರು, ಅರೆವೈದ್ಯಕೀಯ ವೃತ್ತಿನಿರತರು, ಪ್ರಯೋಗಾಲಯಗಳ ಪರೀಕ್ಷಕರು ಮುಂತಾದ ವೈದ್ಯಕೀಯ ಸಿಬ್ಬಂದಿಯ ರಕ್ಷಣೆಗಾಗಿ ರಾಷ್ಟ್ರವ್ಯಾಪಿ ಅನ್ವಯವಾಗುವಂಥ ಒಂದು ಕಾನೂನು ರೂಪಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ. ಆದರೆ, ಆರೋಗ್ಯ ಮತ್ತು ಕಾನೂನು ಸುವ್ಯವಸ್ಥೆ ರಾಜ್ಯಗಳಿಗೆ ಸಂಬಂಧಿಸಿದ ವಿಚಾರ ಎಂದು ಕೇಂದ್ರ ಸರ್ಕಾರ ವಾದಿಸುತ್ತಿದ್ದರೆ, ರಾಜ್ಯಗಳಲ್ಲಿ ಇರುವ ಕಾಯ್ದೆಗಳು ವೈದ್ಯಕೀಯ ಸಿಬ್ಬಂದಿಯ ರಕ್ಷಣೆಗೆ ಸಮರ್ಥವಾಗಿಲ್ಲ ಎನ್ನುವುದು ವೈದ್ಯ ಸಮೂಹದ ವಾದ.
ಕರ್ನಾಟಕವೂ ಸೇರಿದಂತೆ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವೈದ್ಯಕೀಯ ಸಿಬ್ಬಂದಿಯ ಮೇಲೆ ನಡೆಯುವ ದಾಳಿಗಳನ್ನು ತಡೆಗಟ್ಟುವ ದಿಸೆಯಲ್ಲಿ ತಮ್ಮದೇ ಪ್ರತ್ಯೇಕ ಕಾಯ್ದೆಗಳನ್ನು ರೂಪಿಸಿವೆ. ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ, ದೌರ್ಜನ್ಯ ನಡೆಸುವುದು, ಅವರ ಜೀವಕ್ಕೆ ಅಪಾಯ ಉಂಟುಮಾಡುವುದು, ಕೆಲಸಕ್ಕೆ ಅಡ್ಡಿಪಡಿಸುವುದು, ಆಸ್ಪತ್ರೆಯ ಆಸ್ತಿಗೆ ಹಾನಿ ಮಾಡುವುದನ್ನು ಶಿಕ್ಷಾರ್ಹ ಅಪರಾಧ ಎಂದು 25 ರಾಜ್ಯಗಳ ಕಾಯ್ದೆಗಳಲ್ಲಿ ಹೇಳಲಾಗಿದೆ.
ಆದರೆ, ರಾಜ್ಯಗಳು ತಂದಿರುವ ಕಾಯ್ದೆಗಳಲ್ಲಿ ಹಲವು ಲೋಪಗಳಿವೆ ಎನ್ನುವುದು ವೈದ್ಯರ ವಾದ. ಹೀಗಾಗಿ, ಕೆಲವು ರಾಜ್ಯಗಳಲ್ಲಿ ಕಾನೂನು ತಿದ್ದುಪಡಿಗೆ ಪ್ರಯತ್ನಗಳು ಕೂಡ ನಡೆದಿವೆ.
2020ರ ಸೆಪ್ಟೆಂಬರ್‌ನಲ್ಲಿ ಮಹಾರಾಷ್ಟ್ರದ ಹೈಕೋರ್ಟ್‌ನಲ್ಲಿ ಕಾನೂನು ತಿದ್ದುಪಡಿಯ ಸಂಬಂಧ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಅದರ ವಿಚಾರಣೆಯ ವೇಳೆ, ಅಸ್ತಿತ್ವದಲ್ಲಿರುವ ಮಹಾರಾಷ್ಟ್ರ ಆರೋಗ್ಯ ಸೇವೆ ಸಿಬ್ಬಂದಿ ಮತ್ತು ವೈದ್ಯಸೇವಾ ಸಂಸ್ಥೆಗಳು (ದಾಳಿ ಮತ್ತು ಹಾನಿ ಅಥವಾ ಆಸ್ತಿ ಹಾನಿ ತಡೆ) ಕಾಯ್ದೆ–2010ಕ್ಕೆ ತಿದ್ದುಪಡಿಗೆ ಸರ್ಕಾರ ಪ್ರಯತ್ನ ನಡೆಸುತ್ತಿರುವುದಾಗಿಯೂ, ಕರಡು ಸಿದ್ಧಪಡಿಸುತ್ತಿರುವುದಾಗಿಯೂ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ 2021ರಲ್ಲಿ ಕೋರ್ಟ್‌ಗೆ ತಿಳಿಸಿದ್ದರು. ಅದಾಗಿ ಮೂರು ವರ್ಷವಾಗಿದ್ದರೂ ಈ ದಿಸೆಯಲ್ಲಿ ಯಾವುದೇ ಬೆಳವಣಿಗೆ ಆಗಿಲ್ಲ.
ಕೇರಳದಲ್ಲಿ ಕಿರಿಯ ವೈದ್ಯೆ ವಂದನಾ ದಾಸ್ ಅವರನ್ನು ಮಾದಕದ್ರವ್ಯ ವ್ಯಸನಿ ಶಿಕ್ಷಕನೊಬ್ಬ ಹತ್ಯೆ ಮಾಡಿದ್ದ. ಅದರ ನಂತರ ರಾಜ್ಯವು ಕಾಯ್ದೆಗೆ ತಿದ್ದುಪಡಿ ತಂದು, ಕೇರಳ ಆರೋಗ್ಯ ಸೇವೆ ಸಿಬ್ಬಂದಿ ಮತ್ತು ವೈದ್ಯಸೇವಾ ಸಂಸ್ಥೆಗಳು (ದಾಳಿ ಮತ್ತು ಹಾನಿ ಅಥವಾ ಆಸ್ತಿಹಾನಿ ತಡೆ) ಕಾಯ್ದೆ–2023 ರೂಪಿಸಿ, ಕ್ಲರ್ಕ್‌ಗಳು, ಭದ್ರತಾ ಸಿಬ್ಬಂದಿ ಮತ್ತು ಆಸ್ಪತ್ರೆಯ ಇತರ ಕೆಲಸಗಾರರನ್ನೂ ವೈದ್ಯಕೀಯ ಸಿಬ್ಬಂದಿಯ ಪಟ್ಟಿಯಲ್ಲಿ ಸೇರಿಸಿತು. ದಾಳಿ ನಡೆದರೆ, ಒಂದು ಗಂಟೆಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಕೇರಳ ಹೈಕೋರ್ಟ್ ನಿರ್ದೇಶಿಸಿತು. ರೋಗಿಗಳ ಪ್ರಾಣ ರಕ್ಷಣೆಗೆ ‘ಗೋಲ್ಡನ್ ಅವರ್’ ಇರುವಂತೆಯೇ ವೈದ್ಯಕೀಯ ಸಿಬ್ಬಂದಿ ರಕ್ಷಣೆಯ ವಿಚಾರದಲ್ಲಿ ಅದನ್ನು ‘ಗೋಲ್ಡನ್ ಅವರ್’ ಎಂದು ಕರೆಯಲಾಯಿತು. ಪ್ರಕರಣದ ತ್ವರಿತ ವಿಚಾರಣೆಯ ಬಗ್ಗೆಯೂ ಕಾಯ್ದೆಯಲ್ಲಿ ವಿವರಿಸಲಾಯಿತು. ವೈದ್ಯಕೀಯ ಸಿಬ್ಬಂದಿಯ ರಕ್ಷಣೆಗಾಗಿ ಕೇರಳ ಸರ್ಕಾರವು ಇತ್ತೀಚೆಗೆ ಆಸ್ಪತ್ರೆಗಳಲ್ಲಿ ‘ಕೋಡ್ ಗ್ರೇ ಶಿಷ್ಟಾಚಾರ’ವನ್ನು ಜಾರಿಗೊಳಿಸಿದೆ. ಚಿಕಿತ್ಸೆಗೆ ಬಂದ ರೋಗಿಗಳು ಹಾಗೂ ಸಾರ್ವಜನಿಕರೂ ಈ ಶಿಷ್ಟಾಚಾರದ ಪ್ರಯೋಜನ ಪಡೆಯಬಹುದು.
ವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಸಂಬಂಧಿಸಿದಂತೆ, ಕರ್ನಾಟಕ ಮತ್ತು ಕೇರಳ ರಾಜ್ಯಗಳ ಕಾಯ್ದೆಗಳು ಸಮರ್ಥವಾಗಿವೆ ಎನ್ನುವ ವಿಶ್ಲೇಷಣೆಯಿದೆ. ಇಷ್ಟಾದರೂ ಎಲ್ಲ ರಾಜ್ಯಗಳಿಗೂ ಅನ್ವಯವಾಗುವಂತಹ ಕಾಯ್ದೆಯೊಂದು ಬೇಕು ಎಂದು ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘವು ಕೇಂದ್ರಕ್ಕೆ ಪತ್ರ ಬರೆದಿದೆ. ಕೇಂದ್ರ ಸರ್ಕಾರವು ವೈದ್ಯಕೀಯ ಸಂಸ್ಥೆಗಳು (ನೋಂದಣಿ ಮತ್ತು ನಿಯಂತ್ರಣ) ಕಾಯ್ದೆ– 2010 ರೂಪಿಸಿತ್ತು. ನಂತರ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಯ ರಕ್ಷಣೆಗಾಗಿ ಸಾಂಕ್ರಾಮಿಕ ರೋಗಗಳ ಕಾಯ್ದೆ–1897ಕ್ಕೆ ತಿದ್ದುಪಡಿ ಮಾಡಿ, 2020ರ ಏಪ್ರಿಲ್ 22ರಂದು ಸುಗ್ರೀವಾಜ್ಞೆ ಹೊರಡಿಸಿತು (ಇದರ ನಿಯಮಗಳು ಕೋವಿಡ್ ಅವಧಿಗೆ ಮಾತ್ರ ಅನ್ವಯವಾಗಿದ್ದವು). ಅದೇ ರೀತಿ, ವೈದ್ಯಕೀಯ ಸಿಬ್ಬಂದಿಯ ರಕ್ಷಣೆಗೆ ಈಗ ರಾಷ್ಟ್ರಮಟ್ಟದಲ್ಲಿ ಕಾಯ್ದೆ ರೂಪಿಸಬೇಕು ಎನ್ನುವುದು ವೈದ್ಯ ಸಮೂಹದ ಬೇಡಿಕೆ.
ಕೋಲ್ಕತ್ತದ ಘಟನೆಯ ನಂತರ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆದೇಶವೊಂದನ್ನು ಹೊರಡಿಸಿದ್ದು, ಕೆಲಸದ ಸ್ಥಳದಲ್ಲಿ ವೈದ್ಯಕೀಯ ಸಿಬ್ಬಂದಿಯ ಮೇಲೆ ದಾಳಿ ನಡೆದರೆ, ಆರು ಗಂಟೆಗಳ ಒಳಗೆ ಸಾಂಸ್ಥಿಕ ಎಫ್‌ಐಆರ್ ದಾಖಲಿಸಬೇಕು. ಅದಕ್ಕೆ ಆ ಸಂಸ್ಥೆಯ ಮುಖ್ಯಸ್ಥರೇ ಹೊಣೆಗಾರರಾಗಿರುತ್ತಾರೆ ಎಂದು ಹೇಳಿದೆ. ಜತೆಗೆ, ವೈದ್ಯಕೀಯ ಕಾಲೇಜುಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಸುರಕ್ಷಿತ ಕೆಲಸದ ವಾತಾವರಣ ರೂಪಿಸಲು ಎಲ್ಲ ವೈದ್ಯಕೀಯ ಕಾಲೇಜುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಸೂಚಿಸಿದೆ. ವೈದ್ಯ ವಿದ್ಯಾರ್ಥಿಗಳ ಮೇಲೆ ದಾಳಿ ನಡೆದರೆ, ಕಾಲೇಜು ಆಡಳಿತ ಮಂಡಳಿಯೇ ಆ ಬಗ್ಗೆ ತನಿಖೆ ನಡೆಸಬೇಕು ಮತ್ತು ಎಫ್‌ಐಆರ್ ದಾಖಲಿಸಬೇಕು ಎಂದೂ ಸೂಚಿಸಲಾಗಿದೆ. ಪ್ರಕರಣದ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಎನ್‌ಎಂಸಿಗೆ ಘಟನೆ ನಡೆದ 48 ಗಂಟೆಗಳ ಒಳಗೆ ವರದಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
2019ರ ಕರಡು ಮಸೂದೆ ನನೆಗುದಿಗೆ...
2019ರಲ್ಲಿ ಸ್ವತಃ ವೈದ್ಯರಾಗಿರುವ ಡಾ.ಹರ್ಷವರ್ಧನ್ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದಾಗ, ಆರೋಗ್ಯ ಸೇವಾ ಸಿಬ್ಬಂದಿಯ ರಕ್ಷಣೆಗಾಗಿ ಆರೋಗ್ಯ ಸೇವೆ ಸಿಬ್ಬಂದಿ ಮತ್ತು ವೈದ್ಯಕೀಯ ಸಂಸ್ಥೆಗಳು (ಹಿಂಸಾಚಾರ ಮತ್ತು ಆಸ್ತಿ ಹಾನಿ ತಡೆ) ಕರಡು ಮಸೂದೆಯನ್ನು ಸಚಿವಾಲಯ ಸಿದ್ಧಪಡಿಸಿತ್ತು. ಸಾರ್ವಜನಿಕರಿಂದ ಅಭಿಪ್ರಾಯಗಳನ್ನೂ ಸಂಗ್ರಹಿಸಿತ್ತು. ವೈದ್ಯಕೀಯ ಸಿಬ್ಬಂದಿಯ ರಕ್ಷಣೆಯ ವ್ಯಾಪ್ತಿ ರಾಜ್ಯಗಳಿಗೆ ಬರುವುದರಿಂದ ಕೇಂದ್ರ ಸರ್ಕಾರ ಕಾನೂನು ರೂಪಿಸಲು ಆಗುವುದಿಲ್ಲ ಎಂದು ಗೃಹ ಸಚಿವಾಲಯ ಅಭಿಪ್ರಾಯಪಟ್ಟಿದ್ದರಿಂದ ಈ ಮಸೂದೆ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಕೋಲ್ಕತ್ತದ ಘಟನೆಯ ಬಳಿಕ ಈ ಕರಡು ಮಸೂದೆ ಮತ್ತೆ ಚರ್ಚೆಗೆ ಬಂದಿದ್ದು, ಇದನ್ನು ಇನ್ನಷ್ಟು ಪರಿಷ್ಕರಿಸಿ ಕಾನೂನು ರೂಪಿಸುವಂತೆ ಕೇಂದ್ರ ಸರ್ಕಾರದ ಮೇಲೆ ಭಾರತೀಯ ವೈದ್ಯಕೀಯ ಸಂಘ ಒತ್ತಡ ಹಾಕುತ್ತಿದೆ.
ಕರಡು ಮಸೂದೆಯಲ್ಲಿ ಏನಿದೆ?
ಆರೋಗ್ಯ ಸೇವೆ ಒದಗಿಸುವ ಯಾವುದೇ ವ್ಯಕ್ತಿ /ಸಿಬ್ಬಂದಿ ಮೇಲೆ ದಾಳಿ ಅಥವಾ ಹಾನಿ ಅಥವಾ ವೈದ್ಯಕೀಯ ಸಂಸ್ಥೆಗಳ ಆಸ್ತಿಗಳಿಗೆ ಯಾರೊಬ್ಬರೂ ನಷ್ಟ ಮಾಡುವಂತಿಲ್ಲ
ವೈದ್ಯಕೀಯ ಸಿಬ್ಬಂದಿ ವಿರುದ್ಧ ಯಾರಾದರೂ ದಾಳಿ ಮಾಡಿದರೆ ಅಥವಾ ಹಿಂಸೆಗೆ ಕುಮ್ಮಕ್ಕು ಕೊಟ್ಟರೆ, ಅಂತಹವರು ಶಿಕ್ಷೆಗೆ ಅರ್ಹರಾಗಿದ್ದು, ಕನಿಷ್ಠ ಆರು ತಿಂಗಳಿಂದ ಗರಿಷ್ಠ ಐದು ವರ್ಷದವರೆಗೆ ಶಿಕ್ಷೆ ವಿಧಿಸಬಹುದು. ಕನಿಷ್ಠ ₹50 ಸಾವಿರದಿಂದ ಗರಿಷ್ಠ ₹5 ಲಕ್ಷದವರೆಗೆ ದಂಡ ವಿಧಿಸಬಹುದು
ದಾಳಿಯಲ್ಲಿ ವೈದ್ಯಕೀಯ ಸಿಬ್ಬಂದಿಯ ಜೀವಕ್ಕೆ ಅಪಾಯವಾದರೆ, ತೀವ್ರವಾಗಿ ಗಾಯಗೊಂಡಿದ್ದರೆ ಮತ್ತು ಆಸ್ತಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದ್ದರೆ (ಐಪಿಸಿ ಸೆಕ್ಷನ್ 320ರಲ್ಲಿ ವ್ಯಾಖ್ಯಾನಿಸಿದಂತೆ), ದಾಳಿ ನಡೆಸಿದವರಿಗೆ ಕನಿಷ್ಠ ಮೂರು ವರ್ಷಗಳಿಂದ ಗರಿಷ್ಠ 10 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದು. ಅಲ್ಲದೇ, ಕನಿಷ್ಠ ₹2 ಲಕ್ಷದಿಂದ ಗರಿಷ್ಠ ₹10 ಲಕ್ಷದವರೆಗೆ ದಂಡ ವಿಧಿಸಬಹುದು
ಕಾಯ್ದೆಯ ಅಡಿಯಲ್ಲಿ ಬರುವ ಅಪರಾಧ ಕೃತ್ಯಗಳು ಗಂಭೀರ ಸ್ವರೂಪದವು ಮತ್ತು ಜಾಮೀನು ರಹಿತವಾದವು
ಕಾಯ್ದೆಯಡಿ ದಾಖಲಾದ ಪ್ರಕರಣವನ್ನು ಡಿವೈಎಸ್‌ಪಿ ಹಾಗೂ ಆ ಶ್ರೇಣಿಗಿಂತ ಮೇಲ್ಮಟ್ಟದ ಅಧಿಕಾರಿಗಳು ತನಿಖೆ ನಡೆಸಬೇಕು
ದಾಳಿ ನಡೆಸಿದವರು ಉಂಟು ಮಾಡಿರುವ ಹಾನಿಗೆ ಪರಿಹಾರವನ್ನೂ ಪಾವತಿಸಬೇಕಾಗುತ್ತದೆ
(i) ಹಾನಿಗೀಡಾದ ಆಸ್ತಿಯ ಮಾರುಕಟ್ಟೆ ಮೌಲ್ಯದ ಎರಡು ಪಟ್ಟು ಅಥವಾ ಕೋರ್ಟ್ ನಿಗದಿಪಡಿಸಿದ ನಷ್ಟದ ಆಧಾರದಲ್ಲಿ ಪರಿಹಾರ ಮೊತ್ತವನ್ನು ಪಾವತಿಸಬೇಕು
(ii) ವೈದ್ಯಕೀಯ ಸಿಬ್ಬಂದಿಗೆ ಸಾಮಾನ್ಯ ಸ್ವರೂಪದ ಗಾಯಗಳಾಗಿದ್ದರೆ ₹1 ಲಕ್ಷ ಮತ್ತು ಗಂಭೀರ ಗಾಯಗಳಾಗಿದ್ದರೆ ₹5 ಲಕ್ಷ ಪಾವತಿಸಬೇಕು
ಕರ್ತವ್ಯ ನಿರತರಾಗಿದ್ದಾಗ ದಾಳಿಯಲ್ಲಿ ಮೃತಪಟ್ಟ ವೈದ್ಯರು
2012 ಜನವರಿ 1: ಡಾ.ಟಿ ಸೇತುಲಕ್ಷ್ಮಿ, ತೂತ್ತುಕುಡಿ, ತಮಿಳುನಾಡು– ‘ಗಂಭೀರ ಸ್ಥಿತಿ’ಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಪತ್ನಿಯು ಮೃತಪಟ್ಟಿದ್ದಕ್ಕೆ ಆಕ್ರೋಶಗೊಂಡು ಆಟೊ ಚಾಲಕನೊಬ್ಬ ಅರವಳಿಕೆ ತಜ್ಞೆಯಾಗಿದ್ದ ಸೇತುಲಕ್ಷ್ಮಿ ಅವರನ್ನು ಹತ್ಯೆ ಮಾಡಿದ್ದ
2019 ಜುಲೈ 31: ಡಾ.ದೇವನ್ ದತ್ತಾ, ಜೊರ್‌ಹಾಟ್, ಅಸ್ಸಾಂ – ಕಾರ್ಮಿಕರೊಬ್ಬರಿಗೆ ಚಿಕಿತ್ಸೆ ನೀಡಲು ವಿಳಂಬ ಮಾಡಿದರು ಎಂದು ಆರೋಪಿಸಿ ಟಿಯಾಕ್ ಟೀ ಎಸ್ಟೇಟ್‌ನ ವೈದ್ಯಕೀಯ ಅಧಿಕಾರಿಯಾಗಿದ್ದ ದತ್ತಾ ಅವರ ಮೇಲೆ ಉದ್ರಿಕ್ತ ಗುಂಪು ಮಾರಕಾಸ್ತ್ರಗಳಿಂದ ದಾಳಿಮಾಡಿ ಹತ್ಯೆ ಮಾಡಿತ್ತು
2023 ಮೇ 10: ಡಾ.ವಂದನಾ ದಾಸ್, ಕೊಟ್ಟಾರಕ್ಕರ, ಕೇರಳ– ಕೊಟ್ಟಾರಕ್ಕರ ತಾಲ್ಲೂಕು ಆಸ್ಪತ್ರೆಗೆ ಪೋಲೀಸರು ಚಿಕಿತ್ಸೆಗಾಗಿ ಕರೆತಂದ ಬಂಧಿತ ಮಾದಕ ದ್ರವ್ಯ ವ್ಯಸನಿಯೊಬ್ಬ, ಅಲ್ಲಿ ಇಂಟರ್ನಿಯಾಗಿ ಕೆಲಸ ಮಾಡುತ್ತಿದ್ದ ವಂದನಾ ಮೇಲೆ ದಾಳಿ ಮಾಡಿದ್ದ. ತೀವ್ರವಾಗಿ ಗಾಯಗೊಂಡಿದ್ದ ಆಕೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು
ಕಾಯ್ದೆ ತಿದ್ದುಪಡಿ ಮಾಡಿದ ಕರ್ನಾಟಕ
‘ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕೆಲವು ಕಾನೂನು (ತಿದ್ದುಪಡಿ) ಕಾಯ್ದೆ–2024’ ಅನ್ನು ರಾಜ್ಯ ಸರ್ಕಾರ ಕಾನೂನು ಆಯೋಗದ ಸಲಹೆಯ ಮೇರೆಗೆ ರೂಪಿಸಿದೆ. ಕರ್ನಾಟಕ ವೈದ್ಯಕೀಯ ನೋಂದಣಿ ಕಾಯ್ದೆ -1961 ಮತ್ತು ಕರ್ನಾಟಕ ಆರೋಗ್ಯ ಸೇವಾ ಸಿಬ್ಬಂದಿ ಮೇಲಿನ ಹಿಂಸಾಚಾರ ಮತ್ತು ವೈದ್ಯಕೀಯ ಸಂಸ್ಥೆಗಳ ಆಸ್ತಿಗೆ ಹಾನಿ ಮಾಡುವುದನ್ನು ನಿಷೇಧಿಸುವ ಕಾಯ್ದೆ -2009ಕ್ಕೆ ತಿದ್ದುಪಡಿ ಮಾಡಿ ಈ ಕಾಯ್ದೆ ರೂಪಿಸಲಾಗಿದೆ.
ಕೇರಳ ಕಾಯ್ದೆಯಲ್ಲಿರುವ ಬಹುತೇಕ ಎಲ್ಲ ಅಂಶಗಳನ್ನೂ ಒಳಗೊಂಡಿರುವ ಕರ್ನಾಟಕದ ಈ ಕಾಯ್ದೆಯಲ್ಲಿ, ತಪ್ಪಿತಸ್ಥರು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಇನ್ನೂ ಕೆಲವು ಹೊಸ ಅಂಶಗಳನ್ನು ಸೇರಿಸಲಾಗಿದೆ.
41 ವರ್ಷ ನರಳಿದ್ದ ಅರುಣಾ
ಅರುಣಾ ರಾಮಚಂದ್ರ ಶಾನಭಾಗ್
ಮುಂಬೈನ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಕಿರಿಯ ನರ್ಸ್ ಆಗಿದ್ದ, ಕರ್ನಾಟಕದವರೇ ಆದ ಅರುಣಾ ರಾಮಚಂದ್ರ ಶಾನಭಾಗ್ ಅವರ ಮೇಲೆ ಆಸ್ಪತ್ರೆಯ ಸ್ವಚ್ಛತಾ ಕಾರ್ಮಿಕನೊಬ್ಬ ಘೋರ ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದ. ಅವರು 41 ವರ್ಷ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿದ್ದರು. 2015ರಲ್ಲಿ ಅರುಣಾ ಮೃತಪಟ್ಟರು.
ಆಧಾರ: 2019ರ ಕರಡು ಮಸೂದೆ, ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ‘ಎಂಡಿಂಗ್ ವಯಲೆನ್ಸ್ ಅಗೆನೆಸ್ಟ್ ಹೆಲ್ತ್‌ಕೇರ್ ವರ್ಕರ್ಸ್ ಇನ್ ಇಂಡಿಯಾ: ಎ ಬಿಲ್ ಫಾರ್ ಎ ಬಿಲಿಯನ್’, ಐಎಂಎ ಕೇಂದ್ರಕ್ಕೆ ಬರೆದ ಪತ್ರ, ಪಿಐಬಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.