

ಆನ್‌ಲೈನ್/ಮೊಬೈಲ್ ಗೇಮ್‌ಗಳ ಚಟ ಮತ್ತು ಅದು ಹುಟ್ಟಿಸಿದ ಭ್ರಮೆ, ಒತ್ತಡದಿಂದ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ದೇಶದಲ್ಲಿ ವರದಿಯಾಗುತ್ತಲೇ ಇವೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ಮೊಬೈಲ್ ಗೇಮ್‌ಗಳ ವ್ಯಸನವು ಗಂಭೀರ ಸ್ವರೂಪ ತಾಳುತ್ತಿದೆ. ಇಂಟರ್ನೆಟ್ ಗೇಮಿಂಗ್ ಡಿಸಾರ್ಡರ್ (ಐಜಿಡಿ) ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಿ, ಅವರ ಬಾಲ್ಯ, ಭವಿಷ್ಯ ಮುರುಟುತ್ತಿದೆ. ಮಕ್ಕಳನ್ನು ಆನ್‌ಲೈನ್ ಗೇಮಿಂಗ್ ವ್ಯಸನದಿಂದ ಮುಕ್ತ ಮಾಡಲು ಸರ್ಕಾರ, ಸಮಾಜ, ಶಾಲೆಗಳು, ಪೋಷಕರು ಎಲ್ಲರೂ ಒಟ್ಟಿಗೆ ಕಾರ್ಯೋನ್ಮುಖರಾಗಬೇಕಾದ ಸಂದರ್ಭ ಇದಾಗಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ಮೊಬೈಲ್‌ನಂತಹ ಡಿಜಿಟಲ್ ಸಾಧನಗಳ ಅತಿಯಾದ ಬಳಕೆ ವ್ಯಸನವಾಗಿ ಮಾರ್ಪಟ್ಟಿದೆ. ನಡವಳಿಕೆ ಆಧಾರಿತ ಈ ವ್ಯಸನದಿಂದ ಹೊರಬರಲು ಸಾಧ್ಯವಾಗದ ಮಕ್ಕಳು, ಜೀವಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ. ಈ ವ್ಯಸನಕ್ಕೆ ಒಳಗಾದವರ ಲಕ್ಷಣಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವುದು ಕಷ್ಟಸಾಧ್ಯ. ಸುತ್ತಮುತ್ತಲಿನವರಿಗೂ ಇದರ ಗಂಭೀರತೆ ಅರಿವಿಗೆ ಬರುವುದಿಲ್ಲ. ಮನಸ್ಸಿನ ಮೇಲೆ ನಿಗ್ರಹವಿಲ್ಲದೆ ಉತ್ತುಂಗಕ್ಕೆ ತಲುಪಿದಾಗ, ವಾಸ್ತವ ಪ್ರಪಂಚದಿಂದ ದೂರವಾಗಿ ಕಲ್ಪನಾ ಪ್ರಪಂಚದಲ್ಲಿ ವಿಹರಿಸುತ್ತಾರೆ. ಆಗ ಗೇಮ್‌ಗಳಲ್ಲಿ ನೀಡಲಾಗುವ ಸೂಚನೆಗಳನ್ನು ತಮ್ಮವರೇ ನೀಡುತ್ತಿದ್ದಾರೆ ಎಂದು ಭಾವಿಸಿ, ಅದನ್ನು ಚಾಚೂತಪ್ಪದೆ ಪಾಲಿಸುತ್ತಾರೆ. ಮಾನಸಿಕವಾಗಿ ಅವರು ವಾಸ್ತವ ಪ್ರಪಂಚದಿಂದ ಸಾಕಷ್ಟು ದೂರ ಸಾಗಿರುತ್ತಾರೆ. ಆದ್ದರಿಂದ ಆ ವೇಳೆ ಯೋಚಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಗೇಮ್‌ಗಳ ಹಿಡಿತಕ್ಕೆ ಸಿಲುಕಿಕೊಂಡಿರುತ್ತಾರೆ. ಅದರಿಂದ ಅವರಿಗೆ ಹೊರಬರಲು ಸಾಧ್ಯವಾಗುವುದಿಲ್ಲ. ದುರ್ಬಲ ಮನಃಸ್ಥಿತಿಯೂ ಇದಕ್ಕೆ ಕಾರಣ. ಈ ರೀತಿ ವ್ಯಸನಕ್ಕೆ ಒಳಗಾಗುವ ಮಕ್ಕಳು ಪಾಲಕರಿಂದಲೂ ಪ್ರಭಾವಿತರಾಗಿರುತ್ತಾರೆ. ಆದ್ದರಿಂದ ಪಾಲಕರ ನಡವಳಿಕೆ ಮುಖ್ಯ. ಮಕ್ಕಳಲ್ಲಿನ ವ್ಯತ್ಯಾಸವನ್ನು ಅವರ ಅರಿವಿಗೆ ಬಾರದಂತೆ ಗುರುತಿಸಬೇಕಾಗುತ್ತದೆ. ಸಮಸ್ಯೆ ಗಂಭೀರ ಸ್ವರೂಪ ಪಡೆದಲ್ಲಿ ಥೆರೆಪಿ, ಸಮಾಲೋಚನೆ ಮೂಲಕ ಅವರನ್ನು ಈ ವ್ಯಸನದಿಂದ ಹೊರತರಬೇಕಾಗುತ್ತದೆ.– ಡಾ. ಶಶಿಧರ್ ಎಚ್.ಎನ್., ನಿಮ್ಹಾನ್ಸ್‌ನ ಸ್ಥಾನಿಕ ವೈದ್ಯಾಧಿಕಾರಿ
ಬಹುತೇಕ ಕುಟುಂಬಗಳಲ್ಲಿ ಪಾಲಕರು ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿರುವುದರಿಂದ ಮಕ್ಕಳಿಗೆ ಏಕಾಂಗಿತನ ಕಾಡುತ್ತದೆ. ಇದರಿಂದಾಗಿ ಮಕ್ಕಳು ದಿನದ ಬಹುತೇಕ ಅವಧಿ ಮೊಬೈಲ್ ಬಳಸುತ್ತಾ, ಮೊಬೈಲ್ ಗೇಮ್ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಪಾಯಿಂಟ್ಸ್‌ಗಳು ಬರುತ್ತವೆ ಎಂಬ ಕಾರಣಕ್ಕೆ ಈ ಗೇಮ್‌ಗಳ ಹಿಂದೆ ಬಿದ್ದು, ತಮ್ಮನ್ನು ತಾವು ಮರೆಯುತ್ತಾರೆ. ದೈಹಿಕ ಚಟುವಟಿಕೆಗಳು ಇಲ್ಲದಿರುವುದು, ಸಂವಹನ ಕೊರತೆಯೂ ಈ ವ್ಯಸನಕ್ಕೆ ಹಾದಿ ಮಾಡಿಕೊಡಲಿದೆ. ಸ್ನೇಹಿತರು ಮೊಬೈಲ್ ಗೇಮ್‌ಗಳನ್ನು ಆಡುತ್ತಾರೆ, ಸಾಮಾಜಿಕ ಜಾಲತಾಣಗಳಲ್ಲಿ ಇರುತ್ತಾರೆ ಎಂಬ ಕಾರಣಕ್ಕೂ ಹಲವರು ಒಬ್ಬರನ್ನೊಬ್ಬರು ಅನುಸರಿಸಿ ಸಮಸ್ಯೆ ತಂದುಕೊಳ್ಳುತ್ತಿದ್ದಾರೆ. ಈ ರೀತಿ ವ್ಯಸನದಿಂದ ಹೊರಬರಲು ಮಕ್ಕಳು ಮೊಬೈಲ್ ಬಳಕೆ ಕಡಿಮೆ ಮಾಡಿ, ದೈಹಿಕ ಚಟುವಟಿಕೆಯಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಪಾಲಕರು ಮಕ್ಕಳ ಜತೆಗೆ ಸಮಾಲೋಚನೆ ನಡೆಸುತ್ತಾ ಇರಬೇಕು.–ಡಾ. ಮನೋಜ್ ಕುಮಾರ್ ಶರ್ಮಾ, ನಿಮ್ಹಾನ್ಸ್‌ನ ‘ಶಟ್’ (ಸರ್ವಿಸ್ ಫಾರ್ ಹೆಲ್ದಿ ಯೂಸ್ ಆಫ್ ಟೆಕ್ನಾಲಜಿ) ಕ್ಲಿನಿಕ್ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.