ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ-ಅಗಲ | ಪಶ್ಚಿಮ ಬಂಗಾಳದ ಹೊಂಡಗಳ ಯಶೋಗಾಥೆ
ಆಳ-ಅಗಲ | ಪಶ್ಚಿಮ ಬಂಗಾಳದ ಹೊಂಡಗಳ ಯಶೋಗಾಥೆ
Published 26 ಸೆಪ್ಟೆಂಬರ್ 2023, 23:30 IST
Last Updated 26 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ನೂರಾರು ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹಣಾ ಸಾಮರ್ಥ್ಯವಿರುವ ಬೃಹತ್ ಜಲಾಶಯಗಳನ್ನು ನಿರ್ಮಿಸುವುದರಿಂದ ಬರಗಾಲದ ಸಂದರ್ಭದಲ್ಲಿ ನೀರಿನ ಕೊರತೆಯನ್ನು ನೀಗಿಸಬಹುದು ಎಂಬುದು ಬಹುತೇಕ ಸರ್ಕಾರಗಳು ಇಡುವ ವಾದ. ಇಂತಹ ಯೋಜನೆಗಳ ಅನುಷ್ಠಾನಕ್ಕೆ ಸಾವಿರಾರು ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಆದರೆ, ಪಶ್ಚಿಮ ಬಂಗಾಳ ಸರ್ಕಾರವು ದೊಡ್ಡ–ದೊಡ್ಡ ಜಲಾಶಯಗಳ ಬದಲಿಗೆ ಕಿರುಹೊಂಡಗಳ ನಿರ್ಮಾಣಕ್ಕೆ ಒತ್ತು ನೀಡಿದೆ. ಹೊಂಡಗಳ ಮೂಲಕವೇ ನೀರಿನ ಕೊರತೆಯನ್ನು ನೀಗುವ ಮತ್ತು ಜನರ ಆರ್ಥಿಕತೆಯನ್ನು ಸುಧಾರಿಸುವ ರೂಪದಲ್ಲಿ ಯೋಜನೆ ರೂಪಿಸಿದೆ. ಮಳೆ ಕೊರತೆಯಾದಾಗಲೆಲ್ಲಾ ನೀರಿನ ಕೊರತೆ ಎದುರಿಸುವ ಕರ್ನಾಟಕಕ್ಕೂ ಇಂತಹ ಯೋಜನೆ ಮಾದರಿಯಾಗಬಲ್ಲದು

ಎಲ್ಲಾ ರಾಜ್ಯಗಳಂತೆ ಪಶ್ಚಿಮ ಬಂಗಾಳದಲ್ಲೂ ದೊಡ್ಡ ಜಲಾಶಯಗಳು ಇವೆಯಾದರೂ, ಯಾವೊಂದು ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯವೂ 50 ಟಿಎಂಸಿ ಅಡಿಯನ್ನು ಮುಟ್ಟುವುದಿಲ್ಲ. ಅತಿ ಮಳೆ ಮತ್ತು ಸದಾ ಪ್ರವಾಹಕ್ಕೆ ತುತ್ತಾಗುವ ರಾಜ್ಯಗಳಲ್ಲಿ ಒಂದಾದ ಪಶ್ಚಿಮ ಬಂಗಾಳವೂ ನೀರಿನ ಸಂರಕ್ಷಣೆಗೆ ಹಲವು ಯೋಜನೆಗಳುನ್ನು ಅನುಷ್ಠಾನಕ್ಕೆ ತಂದಿದೆ. ಪ್ರವಾಹದ ಪರಿಣಾಮವನ್ನು ತಗ್ಗಿಸುವುದು ಈ ಯೋಜನೆಗಳ ಮುಖ್ಯ ಉದ್ದೇಶವಾದರೆ, ಅದರ ಜತೆಯಲ್ಲೇ ಕೃಷಿ ಬಳಕೆಗೆ ಮತ್ತು ಮೀನುಸಾಕಾಣಿಕೆಯ ಉದ್ದೇಶವನ್ನೂ ಈ ಯೋಜನೆಗಳು ಹೊಂದಿವೆ. ಎಲ್ಲಾ ರಾಜ್ಯಗಳು ಮಳೆ ನೀರಿನ ಸಂಗ್ರಹ, ನೀರಿನ ಸಂರಕ್ಷಣೆ ಮತ್ತು ನೀರಿನ ಬಳಕೆಗೆ ಕೆರೆ ಮತ್ತು ಕಾಲುವೆಗಳ ಮೊರೆ ಹೋಗಿದ್ದರೆ, ಪಶ್ಚಿಮ ಬಂಗಾಳವು ಹೊಂಡಗಳ ಮೊರೆ ಹೋಗಿದೆ. ದೇಶದಲ್ಲಿ ಅತಿಹೆಚ್ಚು ಹೊಂಡಗಳಿರುವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳ ಮೊದಲ ಸಾಲಿನಲ್ಲಿದೆ. ರಾಜ್ಯದಲ್ಲಿ 7.47 ಲಕ್ಷ ಜಲಮೂಲಗಳಿವೆ. ಅವುಗಳಲ್ಲಿ ಶೇ 61ರಷ್ಟು ಅಂದರೆ, 4.57 ಲಕ್ಷ ಜಲಮೂಲಗಳು ಹೊಂಡಗಳೇ ಆಗಿವೆ.

ಪಶ್ಚಿಮ ಬಂಗಾಳದ ಜನರು ಸಾಂಪ್ರದಾಯಿಕವಾಗಿ ಹೊಂಡಗಳನ್ನು ಬಳಸುತ್ತಾರೆ. ಬಹುತೇಕ ರೈತರೂ ತಮ್ಮ ಜಮೀನಿನಲ್ಲೇ ಹೊಂಡವನ್ನು ನಿರ್ಮಿಸಿಕೊಂಡು ನೀರು ಸಂಗ್ರಹಿಸುತ್ತಾರೆ. ಆ ನೀರನ್ನು ಕೃಷಿ ಮತ್ತು ಮೀನುಸಾಕಾಣಿಕೆಗೆ ಬಳಸುತ್ತಾರೆ. ಈ ಹೊಂಡಗಳು ತೀರಾ ಚಿಕ್ಕದಾಗಿದ್ದು, ಕೆಲವೇ ಚದರ ಮೀಟರ್‌ ವಿಸ್ತೀರ್ಣದಷ್ಟು ಇರುತ್ತವೆ. ದೊಡ್ಡವು ಎಂದರೂ ಅರ್ಧ ಎಕರೆಗಿಂತಲೂ ಕಡಿಮೆ ವಿಸ್ತೀರ್ಣ ಹೊಂದಿರುತ್ತವೆ. 2008–10ರ ಅವಧಿಯಲ್ಲಿ ಒಮ್ಮೆ ಪ್ರವಾಹ ಮತ್ತೊಮ್ಮೆ ಮಳೆ ಕೊರತೆಯನ್ನು ಪಶ್ಚಿಮ ಬಂಗಾಳ ಎದುರಿಸಿತ್ತು. ಅದರ ಪರಿಣಾಮವಾಗಿ ಜಲಸಂರಕ್ಷಣೆ ಯೋಜನೆಯನ್ನು ಬಂಗಾಳ ಸರ್ಕಾರ ಆರಂಭಿಸಿತ್ತು.

2011ರಲ್ಲಿ ಸರ್ಕಾರವು ‘ನೀರನ್ನು ಉಳಿಸಿ, ನೀರನ್ನು ಭರಿಸಿ’ ಎಂಬ ಯೋಜನೆಗೆ ಚಾಲನೆ ನೀಡಿತು. ಅತಿಯಾದ ಮಳೆ ಮತ್ತು ಪ್ರವಾಹದ ಸಂದರ್ಭದಲ್ಲಿ ನೀರನ್ನು ಹೊಂಡ, ಕಟ್ಟೆ ಮತ್ತು ಕೆರೆಗಳಲ್ಲಿ ಸಂಗ್ರಹಿಸುವುದು ಮತ್ತು ಅದನ್ನು ಕೃಷಿಗೆ ಬಳಸಿಕೊಳ್ಳುವುದು. ಜತೆಗೆ ಮೀನು ಸಾಕಾಣಿಕೆಗೆಂದೇ ಹೊಂಡಗಳನ್ನು ನಿರ್ಮಿಸಿ, ಮೀನು ಸಾಕಾಣಿಕೆ ಮಾಡುವುದು. ಮಳೆ ಕೊರತೆಯ ವರ್ಷಗಳಲ್ಲಿ ಮೀನು ಸಾಕಾಣಿಕೆ ಹೊಂಡಗಳ ನೀರನ್ನು ಕೃಷಿಗೆ ಬಳಸಿಕೊಳ್ಳುವುದು ‘ನೀರನ್ನು ಉಳಿಸಿ, ನೀರನ್ನು ಭರಿಸಿ’ಯ ಕಾರ್ಯಯೋಜನೆಯಾಗಿತ್ತು. ಇಂತಹ ಹೊಂಡಗಳನ್ನು ಸರ್ಕಾರವೆ ನಿರ್ಮಿಸಿದರೂ, ಅವನ್ನು ರೈತರ ಜಮೀನಿನಲ್ಲಿ ನಿರ್ಮಿಸುತ್ತಿತ್ತು. ಆಯಾ ಜಮೀನಿನ ಒಡೆಯನೇ ಆಯಾ ಹೊಂಡದ ಒಡೆಯನೂ ಆಗಿರುತ್ತಿದ್ದ. ಹೊಂಡ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಭರಿಸಲಾಗುತ್ತಿತ್ತು. ಹೊಂಡ ಮಾಡಿಸಿಕೊಂಡ ರೈತನಿಗೆ ಭೂಗಂದಾಯದಲ್ಲಿ ರಿಯಾಯಿತಿ ಮತ್ತಿತರ ಸವಲತ್ತುಗಳನ್ನು ಒದಗಿಸಿತ್ತು. ಹೀಗಾಗಿ ಎಲ್ಲಾ ರೈತರು ತಮ್ಮ ಜಮೀನಿನಲ್ಲಿ ಹೊಂಡಗಳನ್ನು ನಿರ್ಮಿಸಿಕೊಂಡರು. ಈ ಕಾರಣದಿಂದಲೇ ಪಶ್ಚಿಮ ಬಂಗಾಳದಲ್ಲಿನ ಒಟ್ಟು ಜಲಮೂಲಗಳಲ್ಲಿ ಶೇ 96.6ರಷ್ಟು ಜಲಮೂಲಗಳು ಖಾಸಗಿ ವ್ಯಕ್ತಿಗಳ ಒಡೆತನದಲ್ಲಿಯೇ ಇವೆ.

ಈ ಯೋಜನೆ ಆರಂಭಿಸುವುದಕ್ಕೂ ಮುನ್ನ ರಾಜ್ಯದಲ್ಲಿ ಇಂತಹ 2.8 ಲಕ್ಷದಷ್ಟು ಹೊಂಡಗಳಿದ್ದವು. ‘ನೀರನ್ನು ಉಳಿಸಿ, ನೀರನ್ನು ಭರಿಸಿ’ ಯೋಜನೆ ಅಡಿ ಸರ್ಕಾರವು 1.7 ಲಕ್ಷದಷ್ಟು ಹೊಂಡಗಳನ್ನು ಹೊಸದಾಗಿ ನಿರ್ಮಿಸಿತು. ಬರಿಯ ಹೊಂಡಗಳು ಮಾತ್ರವಲ್ಲದೆ, ಚೆಕ್‌ಡ್ಯಾಂಗಳು ಮತ್ತು ಬ್ಯಾರೇಜ್‌ಗಳ ನಿರ್ಮಾಣಕ್ಕೂ ರಾಜ್ಯ ಸರ್ಕಾರ ಒತ್ತು ನೀಡಿದೆ. ಪಶ್ಚಿಮ ಬಂಗಾಳವು ದೇಶದಲ್ಲೇ ಅತಿಹೆಚ್ಚು ಚೆಕ್‌ಡ್ಯಾಂ ಮತ್ತು ಬ್ಯಾರೇಜ್‌ ಹೊಂದಿರುವ ರಾಜ್ಯ ಎನಿಸಿದೆ. ಕೇಂದ್ರ ಸರ್ಕಾರದ ಜಲಮೂಲಗಳ ಗಣತಿಯ ಪ್ರಕಾರ ಪಶ್ಚಿಮ ಬಂಗಾಳದಲ್ಲಿ 2.80 ಲಕ್ಷ ಚೆಕ್‌ಡ್ಯಾಂ ಮತ್ತು ಬ್ಯಾರೇಜ್‌ಗಳಿವೆ. ಇವೆಲ್ಲವನ್ನೂ ಸೂಕ್ಷ್ಮ ಮತ್ತು ಸಣ್ಣ ನೀರಾವರಿ ಯೋಜನೆಗಳು ಎಂದು ಅನುಷ್ಠಾನಕ್ಕೆ ತರಲಾಗಿದೆ. ರಾಜ್ಯದಲ್ಲಿ 30 ಕಿರು ಜಲಾಶಯಗಳು ಮತ್ತು 5 ದೊಡ್ಡ ಜಲಾಶಯಗಳಿದ್ದರೂ, ಕೃಷಿ ಜಮೀನಿಗೆ ನೀರನ್ನು ಚೆಕ್‌ಡ್ಯಾಂ ಮತ್ತು ಬ್ಯಾರೇಜ್‌ಗಳ ಮೂಲಕವೇ ಒದಗಿಸಲಾಗುತ್ತಿದೆ. 4.57 ಲಕ್ಷದಷ್ಟಿರುವ ಹೊಂಡಗಳಿಗೆ ನೀರನ್ನು ಈ ಚೆಕ್‌ಡ್ಯಾಂ ಮತ್ತು ಬ್ಯಾರೇಜ್‌ಗಳಿಂದ ಒದಗಿಸಲಾಗುತ್ತದೆ.

ನದಿ–ತೊರೆಗಳಿಗೆ ಅಡ್ಡವಾಗಿ ನಿರ್ಮಿಸಿರುವ ಚೆಕ್‌ಡ್ಯಾಂ ಮತ್ತು ಬ್ಯಾರೇಜ್‌ಗಳಿಂದ ಹೊಂಡಗಳಿಗೆ ನೀರು ಹರಿದುಹೋಗಲು ಕಾಲುವೆಗಳನ್ನು ನಿರ್ಮಿಸಿ, ಅವನ್ನು ಸದಾ ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಲಾಗಿದೆ. ಇದರಿಂದಾಗಿ ಅತಿಯಾದ ಮಳೆ ಬಂದರೂ, ಪ್ರವಾಹ ಉಂಟಾಗದೆ ಹೆಚ್ಚುವರಿ ನೀರು ಹೊಂಡಗಳಿಗೆ ಹರಿದುಹೋಗುತ್ತದೆ. ಮಳೆ ಕೊರತೆಯಾದಾಗ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ. ಹೀಗಾಗಿ ರಾಜ್ಯದ ಶೇ 93ರಷ್ಟು ಜಲಮೂಲಗಳು ವರ್ಷದ ಎಲ್ಲಾ ಕಾಲದಲ್ಲೂ ತುಂಬೇ ಇರುತ್ತವೆ ಎನ್ನುತ್ತದೆ ಕೇಂದ್ರ ಸರ್ಕಾರದ ಜಲಮೂಲಗಳ ಗಣತಿ ವರದಿ. ಹೀಗೆ ಕಡಿಮೆ ಪ್ರಮಾಣದ ಸಂಗ್ರಹ ಸಾಮರ್ಥ್ಯ ಇರುವ ಜಲಮೂಲಗಳನ್ನು ನಿರ್ಮಿಸಿ ಪ್ರವಾಹ ನಿಯಂತ್ರಣ ಮತ್ತು ಮಳೆ ಕೊರತೆ ನಿರ್ವಹಣೆ ಎರಡನ್ನೂ ಸಾಧಿಸಿರುವುದಕ್ಕೆ ಪಶ್ಚಿಮ ಬಂಗಾಳದ ‘ನೀರನ್ನು ಉಳಿಸಿ, ನೀರನ್ನು ಭರಿಸಿ’ ಯೋಜನೆ ಉತ್ತಮ ನಿದರ್ಶನ.

ಕಿರು ಹೊಂಡಗಳದ್ದೇ ಸಿಂಹಪಾಲು

ಪಶ್ಚಿಮ ಬಂಗಾಳದಲ್ಲಿನ ಒಟ್ಟು ಜಲಮೂಲಗಳ ಸಂಖ್ಯೆ: 7.47 ಲಕ್ಷ

ಕಿರುಹೊಂಡಗಳ ಸಂಖ್ಯೆ: 4.57 ಲಕ್ಷ

ಚೆಕ್‌ಡ್ಯಾಂಗಳು ಮತ್ತು ಬ್ಯಾರೇಜ್‌ಗಳ ಸಂಖ್ಯೆ: 2.80 ಲಕ್ಷ

ಕೆರೆಗಳ ಸಂಖ್ಯೆ: 8934

ಜಲಾಶಯಗಳ ಸಂಖ್ಯೆ: 35

ದೊಡ್ಡ ಜಲಾಶಯಗಳಷ್ಟೇ ಪರಿಹಾರವಲ್ಲ

ದೊಡ್ಡ ದೊಡ್ಡ ಅಣೆಕಟ್ಟುಗಳು ಮಾನವನ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಿವೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಇಂಥ ಅಣೆಕಟ್ಟುಗಳಿಂದ ಮಾನವನು ಪಡೆದುಕೊಳ್ಳುತ್ತಿರುವ ಲಾಭ ಕೂಡ ಅಷ್ಟೇ ಮಹತ್ವದ್ದು. ಆದರೆ ಹಲವು ಸಂದರ್ಭಗಳಲ್ಲಿ ಪ್ರಮುಖವಾಗಿ ಸಾಮಾಜಿಕವಾಗಿ ಹಾಗೂ ಪರಿಸರದ ದೃಷ್ಟಿಯಿಂದ ಈ ‘ಲಾಭ’ಕ್ಕಾಗಿ ತೆರುತ್ತಿರುವ ಹಣವು ಅನಾವಶ್ಯಕ ಹಾಗೂ ಒಪ್ಪಲು ಅಸಾಧ್ಯವಾದುದು. ಜಲಾಶಯ ನಿರ್ಮಾಣದಿಂದಾಗಿ ಜನರು ತಮ್ಮ ಮನೆ ಜಮೀನುಗಳನ್ನು ಕಳೆದುಕೊಂಡಿದ್ದಾರೆ ಮುಳುಗಿಸಿಕೊಂಡಿದ್ದಾರೆ

– ವರ್ಲ್ಡ್‌ ಕಮಿಷನ್‌ ಫಾರ್‌ ಡ್ಯಾಂ

ದೇಶದಲ್ಲಿ ದೊಡ್ಡ ಪ್ರಮಾಣದ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ ಹಲವು ಅಣೆಕಟ್ಟುಗಳಿವೆ. ಸ್ವಾತಂತ್ರ ಪಡೆದ ಕೆಲವು ವರ್ಷಗಳಲ್ಲಿಯೇ ಹಲವು ಅಣೆಕಟ್ಟು ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಾಗಿತ್ತು. ಹಸಿರು ಕ್ರಾಂತಿ ಮಾಡಲಾಗಿತ್ತು. ದೊಡ್ಡ ಪ್ರಮಾಣದ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದ ದೇಶದ ಪ್ರಥಮ ಅಣೆಕಟ್ಟು ಎಂದರೆ ಭಾಖಡಾ ನಂಗಲ್‌ ಅಣೆಕಟ್ಟು. ಎರಡು ಮೂರು ರಾಜ್ಯಗಳ ಬಹುಭಾಗಕ್ಕೆ ಇಂಥ ಹಲವು ಅಣೆಕಟ್ಟೆಗಳು ನೀರುಣಿಸಿವೆ. ಜೊತೆಗೆ ಕೃಷಿ ಭೂಮಿಯ ನೀರಾವರಿಗೆ ಆಧಾರವಾಗಿದ್ದಾವೆ.

ಇಂತೆಲ್ಲಾ ಹಲವು ಕ್ರಾಂತಿಕಾರಿ ಬದಲಾವಣೆಗಳನ್ನು ತಂದ ಅಣೆಕಟ್ಟುಗಳು ಜನರ ಬದುಕನ್ನೂ ಮುಳುಗಿಸಿವೆ ಎನ್ನುವುದೂ ಸತ್ಯ. ಅಣೆಕಟ್ಟು ನಿರ್ಮಾಣಕ್ಕಾಗಿ ತಮ್ಮ ಸ್ವಂತ ಭೂಮಿಗಳನ್ನು ನೀಡಿದ ಜನರ ಬದುಕು ದುಸ್ತರವಾಗಿದೆ; ಅವರುಗಳು ಬೀದಿಗೆ ಬಿದ್ದಿದ್ದಾರೆ. ಇಂಥ ಹಲವು ಯೋಜನೆಗಳ ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸಿಕೊಡಬೇಕಾದ ಸರ್ಕಾರಗಳು ತಮ್ಮ ಕರ್ತವ್ಯ ಮರೆತಿವೆ. ಅಣೆಕಟ್ಟು ನಿರ್ಮಾಣವಾದ 50 40 ವರ್ಷಗಳ ಬಳಿಕವೂ ಜನರಿಗೆ ಪುನರ್‌ವಸತಿ ಕಲ್ಪಿಸಿ ಕೊಡಲು ಸರ್ಕಾರಗಳು ಸೋತಿವೆ. ಭೂಮಿ ಮುಳುಗಿಸಿಕೊಂಡಿದ್ದಕ್ಕಾಗಿ ಸರ್ಕಾರ ಗೊತ್ತು ಮಾಡಿದ್ದ ಪರಿಹಾರ ಕೂಡ ಇಂದಿಗೂ ಎಲ್ಲ ಸಂತ್ರಸ್ತರ ಕೈ ಸೇರಿಲ್ಲ.  2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹುಟ್ಟುಹಬ್ಬದ ದಿನದಂದು ಸರ್ದಾರ್‌ ಸರೋವರ ಅಣೆಕಟ್ಟಿನ ಉದ್ಘಾಟನೆ ಮಾಡಿದ್ದರು. ಈ ಅಣೆಕಟ್ಟಿನ ನಿರ್ಮಾಣ ಹಿಂದೆ ಹೋರಾಟದ ದೊಡ್ಡ ಇತಿಹಾಸವೇ ಇದೆ. ನೆಹರೂ ಅವಧಿಯಲ್ಲಿ ರೂಪಿಸಲಾದ ಈ ಯೋಜನೆಗೆ ಆಗಿನಿಂದಲೂ ವಿರೋಧವಿದ್ದೇ ಇತ್ತು. ಈ ಅಣೆಕಟ್ಟು ನಿರ್ಮಾಣವನ್ನು ವಿರೋಧಿಸಿ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಅವರು ‘ನರ್ಮದಾ ಬಚಾವೊ ಆಂದೋಲ’ನವನ್ನು ಕಟ್ಟಿದ್ದರು.

ಇಂದಿನವರೆಗೂ ಈ ಹೋರಾಟ ಮುಂದುವರೆದಿದೆ. 2017ರಲ್ಲಿ ಮೋದಿ ಅವರು ಅಣೆಕಟ್ಟನ್ನು ಉದ್ಘಾಟಿಸಿದ ದಿನವೇ ಮಧ್ಯಪ್ರದೇಶದಲ್ಲಿ ಮುಳುಗಡೆ ಆಗುತ್ತಿದ್ದ ಗ್ರಾಮಸ್ಥರು ಹಾಗೂ ಮೇಧಾ ಪಾಟ್ಕರ್‌ ಅವರು ಜೊತೆಗೂಡಿ ನದಿ ನೀರಿನಲ್ಲಿ ಅರ್ಧ ಮುಳುಗಿ ಪ್ರತಿಭಟನೆ ನಡೆಸಿದ್ದರು. ‘ರಾಷ್ಟ್ರೀಯ ಹಿತಕ್ಕಾಗಿ’ ಮನೆ ಜಮೀನು ಕಳೆದುಕೊಂಡ ಜನರ ಸಂಕಷ್ಟವನ್ನು ಆಲಿಸುವ ವ್ಯವಧಾನವನ್ನು ಸರ್ಕಾರಗಳು ಇನ್ನುವರೆಗೂ ಮೈಗೂಡಿಸಿಕೊಂಡಿಲ್ಲ. ಅಣೆಕಟ್ಟುಗಳಿಂದ ಆಗುವ ಲಾಭದ ಕುರಿತು ಮಾತ್ರವೇ ಸರ್ಕಾರಗಳು ಗಮನ ಕೇಂದ್ರೀಕರಿಸುತ್ತವೆ. ಇದು ಒಪ್ಪತಕ್ಕದ್ದಲ್ಲ ಎನ್ನುವುದು ವರ್ಲ್ಡ್‌ ಕಮಿಷನ್‌ ಫಾರ್‌ ಡ್ಯಾಂನ ಸ್ಪಷ್ಟ ನಿಲುವು. ಇಂಥ ‘ಅಭಿವೃದ್ಧಿ ಸಂತ್ರಸ್ತರು ಕಾಲಾಂತರಲ್ಲಿ ಕಳೆದೇ ಹೋಗುತ್ತಾರೆ. ಇವರುಗಳಿಗೆ ಸರ್ಕಾರಗಳು ನೀಡುವ ಭರವಸೆಗಳನ್ನು ಕಡ್ಡಾಯವಾಗಿ ಈಡೇರಿಸಬೇಕು ಎಂದೂ ಅದು ಅಭಿಪ್ರಾಯಪಡುತ್ತದೆ.

ಆಧಾರ: ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ‘ಜಲಮೂಲಗಳ ಗಣತಿ ವರದಿ–1 ಮತ್ತು 2’, ಪಶ್ಚಿಮ ಬಂಗಾಳದ ಜಲ ಸಂಪನ್ಮೂಲ ಇಲಾಖೆ ವರದಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT