ಕಾನೂನಿನ ಸಂಘರ್ಷಕ್ಕೊಳಪಟ್ಟ ಮಕ್ಕಳ ಪಾಲನೆ ಮತ್ತು ರಕ್ಷಣೆಗಾಗಿ ಹಾಗೂ ಅವರ ದೀರ್ಘಾವಧಿ ಪುನರ್ವಸತಿಗಾಗಿ ಬಾಲನ್ಯಾಯ ಕಾಯ್ದೆ- 2015ರ ಸೆಕ್ಷನ್ 47ರ ಅನ್ವಯ ವೀಕ್ಷಣಾಲಯಗಳನ್ನು, ವಿಶೇಷ ಗೃಹಗಳನ್ನು ಸ್ಥಾಪಿಸಬೇಕು. ಆದರೆ, ದೇಶದ ಬಹುತೇಕ ರಾಜ್ಯಗಳಲ್ಲಿ ಕಾನೂನು ಪಾಲನೆ ಆಗುತ್ತಿಲ್ಲ. ಅಂತಹ ಸಾವಿರಾರು ಬಾಲಕ/ಬಾಲಕಿಯರನ್ನು ವಯಸ್ಕರ ಜೈಲಿನಲ್ಲಿಯೇ ಬಂಧಿಸಿಡಲಾಗಿದೆ. ಇದರಿಂದ ಕಾನೂನಿನ ಸಂಘರ್ಷಕ್ಕೆ ಒಳಪಟ್ಟ ಬಾಲಕ/ಬಾಲಕಿಯರ ಮನ ಪರಿವರ್ತನೆಯ ಉದ್ದೇಶಕ್ಕೆ ಪೆಟ್ಟು ಬಿದ್ದಿದೆ. iprobono ಸಂಸ್ಥೆಯು ಈ ಬಗ್ಗೆ ದೇಶದಲ್ಲಿಯೇ ಮೊದಲ ಬಾರಿಗೆ ಮಾಹಿತಿ ಹಕ್ಕಿನ ಆಧಾರದಲ್ಲಿ ಅಧ್ಯಯನ ನಡೆಸಿದೆ.
ಯಾವುದೇ ರೀತಿಯ ಕಾನೂನು ವಿರೋಧಿ ಕೃತ್ಯಗಳಲ್ಲಿ ಭಾಗಿಯಾದ (ಕಾನೂನಿನ ಸಂಘರ್ಷಕ್ಕೆ ಒಳಪಟ್ಟ) ಬಾಲಕ/ಬಾಲಕಿಯರನ್ನು ವಯಸ್ಕರನ್ನು ಇರಿಸುವ ಜೈಲುಗಳಲ್ಲಿ ಇಡುವಂತಿಲ್ಲ. ಬಾಲನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ– 2015ರ ಪ್ರಕಾರ, 18 ವರ್ಷದ ಒಳಗಿನ ಬಾಲಕ/ಬಾಲಕಿ ಯಾವುದೇ ಪ್ರಕರಣದಲ್ಲಿ ಬಂಧಿತರಾದಲ್ಲಿ, ಅವರನ್ನು ವೀಕ್ಷಣಾಲಯದಲ್ಲಿ ಇಲ್ಲವೇ ಅವರಿಗಾಗಿ ವ್ಯವಸ್ಥೆ ಮಾಡಲಾದ ವಿಶೇಷ ಗೃಹಗಳಲ್ಲಿ ಇರಿಸಬೇಕು. ಕಾನೂನಿನ ಸಂಘರ್ಷಕ್ಕೊಳಪಟ್ಟ ಮಕ್ಕಳನ್ನು ವಯಸ್ಕರ ಜೈಲಿನಲ್ಲಿಡುವುದು ಕಾನೂನಿಗೆ ವಿರುದ್ಧವಾದುದು.
ಇದರ ಉದ್ದೇಶ, ಜೈಲಿನಲ್ಲಿ ಬಾಲಕರನ್ನು ದೈಹಿಕ ಹಾಗೂ ಮಾನಸಿಕ ಆಘಾತಗಳಿಂದ ತಪ್ಪಿಸುವುದು ಹಾಗೂ ಅವರ ಪರಿವರ್ತನೆ ಹಾಗೂ ಪುನರ್ವಸತಿಗೆ ಅವಕಾಶ ಕಲ್ಪಿಸುವುದು. ಶೀಲಾ ಬರ್ಸೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕೂಡ ಇದನ್ನು ಒತ್ತಿಹೇಳಿದೆ. ಆದರೆ, ವಾಸ್ತವದಲ್ಲಿ ಇದು ಪಾಲನೆ ಆಗುತ್ತಿಲ್ಲ. //iprobono// ಸಂಸ್ಥೆಯು ಸಂಗ್ರಹಿಸಿದ ದತ್ತಾಂಶದಿಂದ ಇದು ಬಹಿರಂಗಗೊಂಡಿದೆ. ಅಧ್ಯಯನ ವರದಿಯ ಪ್ರಕಾರ, ಐದು ವರ್ಷದಲ್ಲಿ 9,681 ಸಂಘರ್ಷಕ್ಕೊಳಪಟ್ಟ ಬಾಲಕ/ಬಾಲಕಿಯರನ್ನು ವಯಸ್ಕರ ಜೈಲುಗಳಲ್ಲಿ ಬಂಧಿಸಿಡಲಾಗಿತ್ತು.
ಸಾರ್ವಜನಿಕ ಮಾಹಿತಿ ಹಕ್ಕು (ಆರ್‌ಟಿಐ) ಆಧಾರಿತವಾದ ರಾಷ್ಟ್ರಮಟ್ಟದ ಮೊದಲ ಅಧ್ಯಯನ ಇದಾಗಿದೆ. iprobono ಎನ್ನುವುದು ಒಂದು ಲಾಭರಹಿತ ಆನ್‌ಲೈನ್ ಜಾಲವಾಗಿದ್ದು, ಕಾನೂನು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ.
ನಿಯಮದ ಪ್ರಕಾರ, ಬಾಲನ್ಯಾಯ ಮಂಡಳಿಗಳು (ಜೆಜೆಬಿ) ನಿಗದಿತವಾಗಿ ಜಿಲ್ಲಾ ಜೈಲುಗಳಿಗೆ ಭೇಟಿ ನೀಡಿ, ಅವುಗಳಲ್ಲಿ ಸಂಘರ್ಷಕ್ಕೊಳಪಟ್ಟ ಬಾಲಕ/ಬಾಲಕಿಯರನ್ನು ಬಂಧಿಸಿಡಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಒಂದು ವೇಳೆ ಅಂತಹವರು ಜೈಲಿನಲ್ಲಿ ಕಂಡುಬಂದರೆ, ಅವರನ್ನು ಮಕ್ಕಳ ರಕ್ಷಣಾ ಸಂಸ್ಥೆಗಳಿಗೆ ಸ್ಥಳಾಂತರಿಸಬೇಕು. ದೇಶದಲ್ಲಿ ಪ್ರತಿ ವರ್ಷ ಕಾನೂನಿನ ಸಂಘರ್ಷಕ್ಕೊಳಪಟ್ಟ 1600 ಬಾಲಕ/ಬಾಲಕಿಯರನ್ನು ಜೈಲುಗಳಿಂದ ವೀಕ್ಷಣಾಲಯಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ.
ದೇಶದ 28 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಕೇಂದ್ರ ಜೈಲುಗಳು ಮತ್ತು ಜಿಲ್ಲಾ ಜೈಲುಗಳಲ್ಲಿ 124 ಆರ್‌ಟಿಐ ಅರ್ಜಿಗಳನ್ನು ಸಲ್ಲಿಸುವ ಮೂಲಕ ದತ್ತಾಂಶ ಸಂಗ್ರಹಿಸಲಾಗಿದೆ. 570 ಜೈಲುಗಳ ಪೈಕಿ 285 ಜೈಲುಗಳು ಮಾತ್ರ ಆರ್‌ಟಿಐ ಅರ್ಜಿಗಳಿಗೆ ಪ್ರತಿಕ್ರಿಯಿಸಿವೆ. 25 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಂದ 474 ಉತ್ತರಗಳು ಬಂದಿವೆ. ಕೆಲವರು ಸಂಪೂರ್ಣ ಮಾಹಿತಿ ನೀಡಿದರೆ, ಕೆಲವರು ಅರೆಬರೆ ಮಾಹಿತಿ ನೀಡಿದ್ದಾರೆ. ಇನ್ನು ಕೆಲವರು ನಾನಾ ಕಾರಣ ನೀಡಿ ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ದೇಶದಲ್ಲಿ ಅತಿ ಹೆಚ್ಚು ಬಂಧಿಗಳನ್ನು ಹೊಂದಿರುವ ಮೂರನೇ ರಾಜ್ಯವಾದ ಮಧ್ಯಪ್ರದೇಶ ಮತ್ತು ಆರನೇ ರಾಜ್ಯವಾದ ಪಶ್ಚಿಮ ಬಂಗಾಳ ಹಾಗೂ ಅತಿ ಚಿಕ್ಕ ರಾಜ್ಯವಾದ ನಾಗಾಲ್ಯಾಂಡ್, ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಿಂದ ಆರ್‌ಟಿಐ ಅರ್ಜಿಗಳಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಗೋವಾದಲ್ಲಿ ಎರಡು ಕೇಂದ್ರ ಜೈಲುಗಳಿದ್ದು, ಒಂದು ಜೈಲು ಮಾತ್ರ ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯಿಸಿದೆ. ಸಂಘರ್ಷಕ್ಕೊಳಪಟ್ಟ ಬಾಲಕ/ಬಾಲಕಿಯರನ್ನು ವಯಸ್ಕರ ಜೈಲುಗಳಲ್ಲಿ ಇಟ್ಟ ಬಗ್ಗೆ ಯಾವುದೇ ದಾಖಲೆಯನ್ನು ಹೊಂದಿಲ್ಲ ಎಂದು ಅದು ಉತ್ತರದಲ್ಲಿ ತಿಳಿಸಿದೆ. ಇನ್ನು ಮಣಿಪುರದಲ್ಲಿ ಜೆಜೆಬಿಯ ಜೈಲು ಭೇಟಿಯ ಬಗ್ಗೆ ಮಾಹಿತಿ ಲಭ್ಯವಿಲ್ಲ. ಇಲ್ಲಿ ಜೈಲುಗಳಿಂದ ವೀಕ್ಷಣಾಲಯಗಳಿಗೆ ಯಾರನ್ನೂ ಸ್ಥಳಾಂತರ ಮಾಡಲಾಗಿಲ್ಲ ಎಂಬ ಉತ್ತರ ಸಿಕ್ಕಿದೆ.
ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ ಆರೋಪ ಹೊತ್ತ ಅಥವಾ ಕೃತ್ಯದಲ್ಲಿ ಭಾಗಿಯಾಗಿರುವುದು ಸಾಬೀತಾದ ಬಾಲಕ/ಬಾಲಕಿಯರನ್ನು ಬಂಧಿಸುವುದು ಹಾಗೂ ಅವರನ್ನು ಜೈಲಿನಲ್ಲಿಡುವುದರ ಬಗ್ಗೆ 2012ರಲ್ಲಿ ದೆಹಲಿ ಹೈಕೋರ್ಟ್ ಮಾರ್ಗಸೂಚಿ ಪ್ರಕಟಿಸಿತ್ತು. ಅಂತಹ ಬಾಲಕ/ಬಾಲಕಿಯರನ್ನು ತಪ್ಪಾಗಿ ಬಂಧಿಸುವುದು ಮತ್ತು ಅವರನ್ನು ವಯಸ್ಕರ ಜೈಲಿಗೆ ಕಳಿಸುವುದು ಸಲ್ಲದು ಎಂದು ಕೋರ್ಟ್ ಸೂಚಿಸಿತ್ತು. ಒಂದು ವೇಳೆ ಅಂತಹ ಮಕ್ಕಳನ್ನು ಬಂಧಿಸಿ, ತಪ್ಪಾಗಿ ವಯಸ್ಕರ ಜೈಲುಗಳಲ್ಲಿ ಇಟ್ಟಿದ್ದರೆ, ಕೂಡಲೇ ಅವರನ್ನು ವೀಕ್ಷಣಾಲಯಗಳಿಗೆ ಸ್ಥಳಾಂತರಿಸಬೇಕು ಎಂದು ಹೇಳಿತ್ತು. ಅವರ ವಯಸ್ಸಿನ ಬಗ್ಗೆ ತೀರ್ಮಾನ ಮಾಡಲು ಪ್ರತಿ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ವೈದ್ಯಕೀಯ ಮಂಡಳಿ ಇರಬೇಕು ಎಂದು ಸೂಚಿಸಿತ್ತು. ಅದು ಬಂಧಿತರ ವಯಸ್ಸಿನ ಬಗ್ಗೆ ಪರೀಕ್ಷೆ ನಡೆಸಿ 15 ದಿನಗಳ ಒಳಗೆ ವರದಿ ಸಲ್ಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿತ್ತು.
ಕಾನೂನಿನ ಪ್ರಕಾರ, ಬಂಧಿತರ ವಯಸ್ಸನ್ನು ತನಿಖಾಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಮತ್ತು ಅದನ್ನು ಪೊಲೀಸ್ ಠಾಣೆಯ ಮೆಮೊದಲ್ಲಿ ದಾಖಲಿಸಬೇಕು. ಬಂಧಿತರನ್ನು ಮೊದಲ ಬಾರಿಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ, ಅವರು ಅದನ್ನು ಪರಿಶೀಲಿಸಬೇಕು ಎಂದು ನ್ಯಾಯಮೂರ್ತಿ ಎ.ಕೆ.ಸಿಕ್ರಿ ಹೇಳಿದ್ದರು. ಜತೆಗೆ, ಜೈಲುಗಳಿಂದ ಸ್ಥಳಾಂತರ ಮಾಡಲಾಗುವ ಕಾನೂನಿನ ಜೊತೆ ಸಂಘರ್ಷಕ್ಕೆ ಒಳಗಾದ ಮಕ್ಕಳನ್ನು ಮಾತನಾಡಿಸಿ, ಅವರನ್ನು ಹೇಗೆ ನಡೆಸಿಕೊಳ್ಳಲಾಗಿದೆ ಎನ್ನುವ ಬಗ್ಗೆ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಕೂಡ ಸೂಚಿಸಲಾಗಿತ್ತು. ಆದರೆ, ಬಹುತೇಕ ಮೆಮೊಗಳಲ್ಲಿ ಬಂಧಿತರ ವಯಸ್ಸಿನ ಪ್ರಸ್ತಾಪವೇ ಇರುವುದಿಲ್ಲ ಎನ್ನುವುದು ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ನಡೆಸಿದ
ಅಧ್ಯಯನವೊಂದರಲ್ಲಿ ತಿಳಿದುಬಂದಿತ್ತು.
2004ರಲ್ಲಿ ಕಾನೂನಿನ ಜೊತೆ ಸಂಘರ್ಷಕ್ಕೆ ಒಳಗಾದ ಬಾಲಕನೊಬ್ಬನನ್ನು ಮೂರು ವರ್ಷ ವಯಸ್ಕರ ಜೈಲಿನಲ್ಲಿ ಇಡಲು ಕಾರಣವಾಗಿದ್ದ ಬೋರಿವಿಲಿ ಪೊಲೀಸ್ ಸ್ಟೇಷನ್ ಮತ್ತು ಮುಂಬೈ ಕೇಂದ್ರ ಕಾರಾಗೃಹಕ್ಕೆ ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ನ್ಯಾ.ದಲ್ವೀರ್ ಭಂಡಾರಿ ಮತ್ತು ನ್ಯಾ.ಡಿ.ವೈ.ಚಂದ್ರಚೂಡ್ ₹1 ಲಕ್ಷ ದಂಡ ವಿಧಿಸಿ ಅದನ್ನು, ಆ ಬಾಲಕನಿಗೆ ಪಾವತಿಸುವಂತೆ ಕೋರ್ಟ್ ಆದೇಶಿಸಿದ್ದರು.
ಇಂಥದ್ದೇ ಒಂದು ಪ್ರಕರಣದಲ್ಲಿ, ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಬಾಲಕನನ್ನು (ಗರಿಷ್ಠ ಜೈಲುವಾಸದ ಅವಧಿ 3 ವರ್ಷ ಆಗಿದ್ದರೂ) 8 ವರ್ಷ ವಯಸ್ಕರ ಜೈಲಿನಲ್ಲಿ ಇಟ್ಟಿದ್ದಕ್ಕೆ ಆತನಿಗೆ ₹5 ಲಕ್ಷ ಪರಿಹಾರ ನೀಡುವಂತೆ 2011ರಲ್ಲಿ ದೆಹಲಿ ಹೈಕೋರ್ಟ್‌ನ ನ್ಯಾ.ರವೀಂದ್ರ ಭಟ್ ಮತ್ತು ಗೀತಾ ಮಿತ್ತಲ್ ಅವರು ಆದೇಶಿಸಿದ್ದರು.
ಬಾಲಕರು ಅಪರಾಧ ಮಾಡಿದಾಗ ಅವರನ್ನು ಸರಿಯಾಗಿ ನಡೆಸಿಕೊಳ್ಳದಿದ್ದರೆ, ಸಂಬಂಧಪಟ್ಟ ರಾಜ್ಯ ಸರ್ಕಾರಕ್ಕೆ ದೊಡ್ಡ ಮೊತ್ತದ ದಂಡ ವಿಧಿಸಬೇಕು. ಇತರ ಸುಧಾರಣಾ ಕ್ರಮಗಳ ಜತೆಗೆ ದಂಡ ಪಾವತಿಯು ರಾಜ್ಯ ಸರ್ಕಾರಗಳನ್ನು ಅದರ ತಪ್ಪಿಗೆ ಉತ್ತರದಾಯಿಗಳನ್ನಾಗಿ ಮಾಡುತ್ತದೆ
ಅಧಿಕಾರಿಗಳು ಪ್ರಜ್ಞಾಪೂರ್ವಕವಾಗಿ ತಪ್ಪು ಮಾಡಿದ್ದರೆ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು
ಶಾಲಾ ಪಠ್ಯಕ್ರಮದಲ್ಲಿ ಕಾನೂನು ಅಳವಡಿಸುವ ಮೂಲಕ ಮಕ್ಕಳಲ್ಲಿ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು
ಬಾಲಕ/ಬಾಲಕಿಯರನ್ನು ತಪ್ಪಾಗಿ ಬಂಧಿಸುವುದು ಮತ್ತು ಅವರನ್ನು ತಪ್ಪಾಗಿ ವಯಸ್ಕರ ಜೈಲಿನಲ್ಲಿ ಇಡುವುದರ ಬಗ್ಗೆ ಪೋಸ್ಟರ್‌ಗಳ ಮೂಲಕ ಅರಿವು ಮೂಡಿಸಬೇಕು
ಬಾಲಕ/ಬಾಲಕಿಯರನ್ನು ಜೈಲಿಗೆ ಕಳಿಸುವ ಮುನ್ನ ಆರೋಗ್ಯ ಪರೀಕ್ಷೆಗೆ ಎಂದು ವೈದ್ಯರ ಮುಂದೆ ಹಾಜರು ಪಡಿಸಿದಾಗ, ಅವರು ಅಪರಾಧಿಯ ವಯಸ್ಸಿನ ಬಗ್ಗೆ ಪರಿಶೀಲನೆ ನಡೆಸಬೇಕು. ಅನುಮಾನ ಬಂದಲ್ಲಿ ಈ ಬಗ್ಗೆ ನ್ಯಾಯಾಲಯದ ಗಮನ ಸೆಳೆಯಬೇಕು
2023ರ ಮಾರ್ಚ್ 31ರ ವರೆಗಿನ ದತ್ತಾಂಶದಂತೆ, ದೇಶದಲ್ಲಿ 311 ವೀಕ್ಷಣಾಲಯಗಳು, 39 ವಿಶೇಷ ಗೃಹಗಳು, 36 ಸುರಕ್ಷತಾ ಮಂದಿರಗಳಿವೆ. ಅಪರಾಧ ಎಸಗಿದ ಬಾಲಕ/ಬಾಲಕಿಯರನ್ನು ಪರಿವರ್ತನೆ ಮಾಡುವ ದೃಷ್ಟಿಯಿಂದ ಈಗ ಇರುವ ಮೂಲಸೌಕರ್ಯ ಏನೇನೂ ಸಾಲದು. ಬಾಲಕ/ಬಾಲಕಿಯರನ್ನು ಜೈಲಿನಲ್ಲಿ ಕೂಡಿಹಾಕಲು ಇದೇ ಮುಖ್ಯ ಕಾರಣವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರಗಳು ಕ್ರಮ ಜರುಗಿಸಬೇಕು
ಕರ್ನಾಟಕದಲ್ಲಿ 2023ರ ಮಾರ್ಚ್ ಅಂತ್ಯಕ್ಕೆ 17 ವೀಕ್ಷಣಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಇವುಗಳಲ್ಲಿ 103 ಗಂಡು ಮಕ್ಕಳು, 1 ಹೆಣ್ಣು ಮಗು ಸೇರಿ ಒಟ್ಟು 104 ಮಕ್ಕಳು ಆಶ್ರಯ ಪಡೆದಿದ್ದಾರೆ ಎಂದು ಕರ್ನಾಟಕ ಸರ್ಕಾರದ ಮಕ್ಕಳ ರಕ್ಷಣಾ ನಿರ್ದೇಶನಾಲಯವು ಮಾಹಿತಿ ನೀಡಿದೆ. ಇದೇ ಅವಧಿಯಲ್ಲಿ 21 ಮಕ್ಕಳು ವಿಶೇಷ ಗೃಹಗಳಲ್ಲಿ ದಾಖಲಾಗಿದ್ದು, ಅವರಿಗೆ ಆಪ್ತ ಸಮಾಲೋಚನೆಯ ಜತೆಗೆ ಔದ್ಯೋಗಿಕ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಇದರಿಂದ ಮಕ್ಕಳು ಸಂಸ್ಥೆಯಿಂದ ಬಿಡುಗಡೆ ಹೊಂದಿದ ನಂತರ ಸಮಾಜದಲ್ಲಿ ಬದುಕಲು ಸಹಕಾರಿಯಾಗುತ್ತದೆ ಎಂದು ಸರ್ಕಾರ ಹೇಳಿದೆ.
ಆಧಾರ: iprobono ಸಂಸ್ಥೆಯ ‘incarceration of children in prisons in India’ ವರದಿ ಮತ್ತು ಕರ್ನಾಟಕ ಸರ್ಕಾರದ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಮಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.