ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಫಲಿತಾಂಶ ಬಂದು ಮಹಾಯುತಿ ಮೈತ್ರಿಕೂಟವು ಸ್ಪಷ್ಟ ಬಹುಮತ ಪಡೆದಿದ್ದರೂ ಸರ್ಕಾರ ರಚನೆ ಸಾಧ್ಯವಾಗಿಲ್ಲ. 14ನೇ ವಿಧಾನಸಭೆಯ ಅವಧಿ ನವೆಂಬರ್ 26ಕ್ಕೇ ಮುಗಿದಿದ್ದರೂ ಇನ್ನೂ ಹೊಸ ಸರ್ಕಾರ ರಚನೆಯಾಗದಿರುವುದರಿಂದ ಬಿಕ್ಕಟ್ಟಿನ ಸ್ಥಿತಿ ಸೃಷ್ಟಿಯಾಗಿದ್ದು, ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ. ವಿಶೇಷ ಅಂದರೆ, ರಾಜ್ಯದಲ್ಲಿ ಈ ಹಿಂದೆ ಇಂಥ ಸಂದರ್ಭದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾದ ನಿದರ್ಶನಗಳಿವೆ. ಅದೇ ರೀತಿ, ವಿಧಾನಸಭೆಯ ಅವಧಿ ಮುಗಿದ ನಂತರವೂ ಹೊಸ ಸರ್ಕಾರಗಳು ರಚನೆಯಾಗಿವೆ
ಅಂತಹ ಸನ್ನಿವೇಶ ಉದ್ಭವಿಸಿಲ್ಲ: ಮಹಾರಾಷ್ಟ್ರದಲ್ಲಿ ಮಹಾಯುತಿಗೆ ಸ್ಪಷ್ಟ ಬಹುಮತ ಇದೆ. ಸದ್ಯದ ಸ್ಥಿತಿಯಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತಹ ಯಾವುದೇ ಸನ್ನಿವೇಶ ಉದ್ಭವ ಆಗಿಲ್ಲ. ಯಾವುದೇ ಪಕ್ಷಕ್ಕೆ ಬಹುಮತ ಇಲ್ಲ ಎಂದಾಗ ಸಂವಿಧಾನದ 356ನೇ ವಿಧಿಯಡಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಲಾಗುತ್ತದೆ. ಅಷ್ಟೇ ಅಲ್ಲ, ಇದಕ್ಕಾಗಿ ರಾಜ್ಯಪಾಲರು ವರದಿಯನ್ನೂ ಕಳುಹಿಸಿಕೊಡಬೇಕು.