ಆ ಕಾಲದಲ್ಲಿ ಕ್ರಿಕೆಟ್ ಆಡುವವರು ಮತ್ತು ನೋಡುವವರಿಬ್ಬರಿಗೂ ಇದ್ದುದು ಒಂದೇ ಭಾವ– ಅದು ಪ್ರೀತಿಯಷ್ಟೇ. ಅಂತಹ ಕಾಲಘಟ್ಟದಲ್ಲಿ ಎರ‍್ರಪಳ್ಳಿ ಪ್ರಸನ್ನ ನಾಯಕತ್ವದ ತಂಡವು ಕರ್ನಾಟಕಕ್ಕೆ ಮೊಟ್ಟಮೊದಲ ರಣಜಿ ಟ್ರೋಫಿ ಗೆದ್ದುಕೊಟ್ಟ ಸಾಧನೆಗೆ ಈಗ ಚಿನ್ನದ ಸಂಭ್ರಮ. 1974 ಮಾರ್ಚ್ 23ರಿಂದ 27ರವರೆಗೆ ರಾಜಸ್ಥಾನದ ಎದುರು ಜೈಪುರದಲ್ಲಿ ನಡೆದ ಫೈನಲ್‌ನಲ್ಲಿ ತಂಡವು ಅಮೋಘ ಜಯ ಸಾಧಿಸಿತ್ತು. ಭಾರತ ತಂಡದಲ್ಲಿ ಆಡುತ್ತಿದ್ದ ಐವರು ಖ್ಯಾತನಾಮರೊಂದಿಗೆ ಇದ್ದ ಇನ್ನುಳಿದ ಪ್ರತಿಭಾವಂತರೂ ಈ ಜಯಕ್ಕೆ ತಮ್ಮದೇ ಆದ ಕಾಣಿಕೆ ನೀಡಿದ್ದರು. ಎಲ್ಲರೂ ತಂಡವಾಗಿ ಆಡಿದ ಫಲವಾಗಿ ಪ್ರಶಸ್ತಿ ದಕ್ಕಿತು.