ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಕಾಲ ದೇಶಗಳ ಎಲ್ಲೆ ಮೀರಿದ ಸಲಿಂಗ ಸಂಬಂಧ..

ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕು ಎಂದು ಕೋರಿದ್ದ ಅರ್ಜಿಗಳ ಸಂಬಂಧ ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ನೀಡಿದ 3:2ರ ಬಹುಮತದ ತೀರ್ಪಿನ ಆಯ್ದಭಾಗ ಇಲ್ಲಿದೆ..
Published 21 ಅಕ್ಟೋಬರ್ 2023, 0:31 IST
Last Updated 21 ಅಕ್ಟೋಬರ್ 2023, 0:31 IST
ಅಕ್ಷರ ಗಾತ್ರ

ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕು ಎಂದು ಕೋರಿದ್ದ ಅರ್ಜಿಗಳ ಸಂಬಂಧ ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ನೀಡಿದ 3:2ರ ಬಹುಮತದ ತೀರ್ಪಿನ ಆಯ್ದಭಾಗ ಇಲ್ಲಿದೆ..

***

ಸಲಿಂಗ ಸಂಬಂಧ ಮತ್ತು ಸಲಿಂಗ ವಿವಾಹ ಎಂಬುದು ಭಾರತೀಯತೆ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ ನೈಸರ್ಗಿಕವೂ ಅಲ್ಲ. ಇದು ಪಾಶ್ಚಾತ್ಯ ದೇಶಗಳಿಂದ ಬಂದ ಸಂಸ್ಕೃತಿ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿಪಾದಿಸಿತ್ತು. ಇದು ಭಾರತೀಯ ಸಂಸ್ಕೃತಿ ಅಲ್ಲದೇ ಇರುವ ಕಾರಣಕ್ಕೇ ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಬಾರದು ಎಂದು ಸರ್ಕಾರವು ವಾದಿಸಿತ್ತು. ಕೆಲವು ಧಾರ್ಮಿಕ ಸಂಘಟನೆಗಳೂ ಇದೇ ವಿಚಾರವನ್ನು ಪ್ರತಿಪಾದಿಸಿದ್ದವು. ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಬೇಕು ಎಂದು ಕೋರಿದ್ದ ಹಲವು ಅರ್ಜಿದಾರರು, ಸಲಿಂಗ ಸಂಬಂಧ ಎಂಬುದು ಭಾರತೀಯ ಸಂಸ್ಕೃತಿಯಲ್ಲಿ ಮೊದಲಿನಿಂದಲೂ ಇದೆ ಎಂದು ವಾದಿಸಿದ್ದರು.

ಎರಡೂ ಸ್ವರೂಪದ ವಾದಗಳನ್ನು ಪರಿಶೀಲಿಸಲು ಪೀಠವು ಧಾರ್ಮಿಕ ಗ್ರಂಥಗಳು, ಪುರಾತನ ಸಾಹಿತ್ಯ ಕೃತಿಗಳು, ಸಂಶೋಧನಾ ಪ್ರಬಂಧಗಳು ಮತ್ತು ಜನಪದ ಸಾಹಿತ್ಯವನ್ನು ಪರಿಶೀಲಿಸಿದೆ. ಸಲಿಂಗ ಸಂಬಂಧ ಎಂಬುದು ಭಾರತೀಯ ಸಂಸ್ಕೃತಿಯಲ್ಲಿ ಮೊದಲಿನಿಂದಲೂ ಇತ್ತು ಎಂದು ಮೂವರು ನ್ಯಾಯಮೂರ್ತಿಗಳು ತಮ್ಮ ಪ್ರತ್ಯೇಕ ತೀರ್ಪುಗಳಲ್ಲಿ ವಿವರಿಸಿದ್ದಾರೆ. ಇನ್ನಿಬ್ಬರು ನ್ಯಾಯಮೂರ್ತಿಗಳು ಈ ಬಗ್ಗೆ ಯಾವುದೇ ಅಸಮ್ಮತಿ ವ್ಯಕ್ತಪಡಿಸಿಲ್ಲ. ಈ ಬಗ್ಗೆ ಹೆಚ್ಚು ವಿಸ್ತೃತವಾದ ತೀರ್ಪು ನೀಡಿರುವುದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್‌. 

ಚಂದ್ರಚೂಡ್‌ ಅವರು ತಮ್ಮ ವಿಸ್ತೃತ ತೀರ್ಪಿನಲ್ಲಿ ಈ ವಿಚಾರದ ಚರ್ಚೆಗೆಂದೇ ಪ್ರತ್ಯೇಕ ವಿಭಾಗವನ್ನು ಮಾಡಿಕೊಂಡಿದ್ದಾರೆ. ‘ಸಲಿಂಗ ಸಂಬಂಧ ಎಂಬುದು ಅತ್ಯಂತ ನೈಸರ್ಗಿಕವಾದುದು ಮತ್ತು ಇದು ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಇದೆ’ ಎಂದೇ ಅವರು ಈ ಭಾಗದ ತೀರ್ಪನ್ನು ಆರಂಭಿಸಿದ್ದಾರೆ. ‘ಸಲಿಂಗಕಾಮ, ಕ್ವಿಯರ್‌ನೆಸ್‌ ಎಂಬುದು ಜನ್ಮಜಾತವಾದುದು ಮತ್ತು ಅತ್ಯಂತ ಸಹಜವಾದುದು ಎಂದು ನವತೇಜ್‌ ಸಿಂಗ್‌ ಜೋಹರ್ ಪ್ರಕರಣದಲ್ಲಿ ಇದೇ ನ್ಯಾಯಾಲಯ ತೀರ್ಪು ನೀಡಿದೆ. ಪ್ರಾಚೀನ ಭಾರತದಿಂದಲೂ ಸಲಿಂಗಕಾಮ, ಸಲಿಂಗ ಸಂಬಂಧ, ಸಲಿಂಗ ಪ್ರೇಮ ಎಂಬುದು ಆಚರಣೆಯಲ್ಲಿದೆ. ಹೀಗಾಗಿ ಸಲಿಂಗ ಲೈಂಗಿಕತೆ ಮತ್ತು ಸಲಿಂಗ ಸಂಬಂಧವು ಸಲ್ಲದು ಎನ್ನುವ ಕೇಂದ್ರ ಸರ್ಕಾರದ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಅವರು ತಮ್ಮ ತೀರ್ಪಿನಲ್ಲಿ ವಿವರಿಸಿದ್ದಾರೆ.

‘ಸಲಿಂಗ ಲೈಂಗಿಕತೆ, ಸಲಿಂಗ ಸಂಬಂಧ ಭಾರತದ್ದು ಅಲ್ಲವೇ ಅಲ್ಲ ಎಂಬುದು ಸರ್ಕಾರದ ವಾದ. ಆದರೆ ಈ ವಾದದಲ್ಲಿ ಯಾವುದೇ ಹುರುಳಿಲ್ಲ. ಹೆಣ್ಣು ಮತ್ತು ಗಂಡು ಎಂದು ಸ್ಪಷ್ಟವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗದ ವ್ಯಕ್ತಿಗಳನ್ನು ಹಿಜ್ರಾ, ಕೋತಿ, ಅರವಾನಿ, ಜೋಗಪ್ಪ, ತಿರುನಂಬಿ, ನುಪಿ ಮಾಂಬಾ, ನುಪಿ ಮಾಂಬಿ ಎಂದೆಲ್ಲಾ ಕರೆಯುವ ಪದ್ಧತಿ ಭಾರತದಲ್ಲಿ ರೂಢಿಯಲ್ಲಿದೆ. ಟ್ರಾನ್ಸ್‌ಜೆಂಡರ್‌ (ಲಿಂಗ ಪರಿವರ್ತಿತರು) ಮತ್ತು ಥರ್ಡ್‌ ಜೆಂಡರ್‌ (ತೃತೀಯ ಲಿಂಗಿಗಳು) ಎಂಬ ಇಂಗ್ಲಿಷ್‌ ಪದವು ಈ ಜನರ ಲೈಂಗಿಕ ಅಸ್ಮಿತೆಯ ವೈವಿಧ್ಯವನ್ನು ಕರಾರುವಕ್ಕಾಗಿ ಪ್ರತಿನಿಧಿಸುವುದಿಲ್ಲ. ಜತೆಗೆ ಭಾರತದಲ್ಲಿ ಈ ಜನರ ಸಾಮಾಜಿಕ ವ್ಯವಸ್ಥೆಯು ಇಲ್ಲಿಗೇ ಅತ್ಯಂತ ವಿಶಿಷ್ಟವಾದುದು ಮತ್ತು ಅದು ಪಾಶ್ಚಾತ್ಯ ದೇಶಗಳಲ್ಲಿನ ಸಾಮಾಜಿಕ ವ್ಯವಸ್ಥೆಗಿಂತ ಸಂಪೂರ್ಣ ಭಿನ್ನವಾಗಿದೆ. ಇದು ಭಾರತದ್ದೇ ಆಗಿದೆ. ಲಿಂಗ ಪರಿವರ್ತಿತರ ಅಸ್ಮಿತೆ ಮತ್ತು ಇತರೆ ಸ್ವರೂಪದ ಕ್ವಿಯರ್‌ ಲೈಂಗಿಕ ಅಸ್ಮಿತೆಯು ಭಾರತದ ಜನಪದ ಸಾಹಿತ್ಯದಲ್ಲೂ ಇದೆ ಎಂಬುದನ್ನು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಪ್ರಕರಣದಲ್ಲಿ ಇದೇ ನ್ಯಾಯಾಲಯ ಹೇಳಿದೆ’ ಎಂದು ಅವರು ವಿವರಿಸಿದ್ದಾರೆ.

‘ದಕ್ಷಿಣ ಭಾರತದಲ್ಲಿ ಹಿಜ್ರಾ ಅಸ್ಮಿತೆಯ ಸಂಸ್ಕೃತಿ ಇರುವುದನ್ನು ಗಾಯತ್ರಿ ರೆಡ್ಡಿ ಅವರು ತಮ್ಮ ‘ವಿತ್ ರೆಸ್ಪೆಕ್ಟ್‌ ಟು ಸೆಕ್ಸ್‌: ನೆಗೋಷಿಯೇಟಿಂಗ್‌ ಹಿಜ್ರಾ ಐಡೆಂಟಿಟಿ ಇನ್‌ ಸೌತ್ ಇಂಡಿಯಾ’ ಎಂಬ ಸಂಶೋಧನಾ ಗ್ರಂಥದಲ್ಲಿ ದಾಖಲಿಸಿದ್ದಾರೆ. ಹಿಜ್ರಾಗಳಲ್ಲಿ ಗುರು–ಶಿಷ್ಯ ಪರಂಪರೆ, ತಾಯಿ–ಮಗಳು ಪರಂಪರೆ, ಜೋಡಿ ಎಂಬ ಪರಂಪರೆಗಳಿವೆ ಎಂಬುದನ್ನು ಅವರು ಗುರುತಿಸಿದ್ದಾರೆ. ಈ ಜನರ ಲೈಂಗಿಕ ಅಸ್ಮಿತೆಯನ್ನು ಗುರುತಿಸಲು ಕೆಲವು ಇಂಗ್ಲಿಷ್ ಪದಗಳನ್ನು ಭಾರತದಲ್ಲಿ ಬಳಸುತ್ತಿರಬಹುದು. ಆದರೆ, ಇಂತಹ ಲೈಂಗಿಕ ಅಸ್ಮಿತೆ ಸಹಜವಾದುದು ಮತ್ತು ಐತಿಹಾಸಿಕವಾಗಿಯೂ ಭಾರತದಲ್ಲಿ ಇವು ಇದ್ದವು. ಈ ಸಂಸ್ಕೃತಿಯನ್ನು ಪಾಶ್ಚಾತ್ಯ ದೇಶಗಳಿಂದ ‘ಆಮದು’ ಮಾಡಿಕೊಂಡಿಲ್ಲ. ಜತೆಗೆ ಇದು ನೈಸರ್ಗಿಕವಾದುದು ಎಂದಾದ ಮೇಲೆ, ಬೇರೆ ದೇಶ ಅಥವಾ ಬೇರೆ ಸಂಸ್ಕೃತಿಯಿಂದ ಇದನ್ನು ಎರವಲು ಪಡೆಯಲಾಗಿದೆ ಎಂಬುದರಲ್ಲಿ ಅರ್ಥವೇ ಇಲ್ಲ’ ಎಂದು ಅವರು ವಿವರಿಸಿದ್ದಾರೆ.

ಇದನ್ನು ಒಪ್ಪಿಕೊಂಡೇ ನ್ಯಾಯಮೂರ್ತಿ ರವೀಂದ್ರ ಭಟ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರು ತೀರ್ಪು ನೀಡಿದ್ದಾರೆ. ‘ಪುರಾಣಗಳಲ್ಲಿ, ಪುರಾತನ ಸಾಹಿತ್ಯಗಳಲ್ಲಿ ಸಲಿಂಗ ಸಂಬಂಧದ ಉಲ್ಲೇಖಗಳಿವೆ. ಆದರೆ ಸಂವಿಧಾನದ ಚೌಕಟ್ಟಿನಲ್ಲಿ ಅವಕಾಶವಿಲ್ಲದ ಕಾರಣಕ್ಕೆ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಲಾಗುವುದಿಲ್ಲ’ ಎಂದು ಅವರು ತೀರ್ಪಿನಲ್ಲಿ ಹೇಳಿದ್ದಾರೆ.

‘ಪುರಾಣಗಳಲ್ಲೂ ಉಲ್ಲೇಖ’

ಸಲಿಂಗ ಸಂಬಂಧ ಎಂಬುದು ಧರ್ಮಕ್ಕೆ ವಿರುದ್ಧವಾದುದು. ಹೀಗಾಗಿ ಅದಕ್ಕೆ ಮಾನ್ಯತೆ ನೀಡಬಾರದು ಎಂದು ಹಿಂದೂ ಮತ್ತು ಮುಸ್ಲಿಂ ಸಮುದಾಯದ ಕೆಲವು ಸಂಘಟನೆಗಳು ಸಲ್ಲಿಸಿದ್ದ ಅರ್ಜಿಗಳೂ ಈ ಪೀಠದ ಎದುರು ಇದ್ದವು. ಈ ವಾದವನ್ನು ಪರಿಶೀಲಿಸಲು ನ್ಯಾಯಮೂರ್ತಿಗಳು ಪುರಾಣ, ಧಾರ್ಮಿಕ ಗ್ರಂಥಗಳು ಮತ್ತು ಪುರಾತನ ಸಾಹಿತ್ಯದ ಮೊರೆ ಹೋಗಿದ್ದಾರೆ. 

ಈ ಬಗ್ಗೆ ನ್ಯಾಯಮೂರ್ತಿ ಎಸ್‌.ಕೆ.ಕೌಲ್ ಅವರು ತಮ್ಮ ತೀರ್ಪಿನಲ್ಲಿ ವಿವರವಾಗಿ ಬರೆದಿದ್ದಾರೆ. ‘ಸಲಿಂಗ ಸಂಬಂಧ ಎಂಬುದು ಪುರಾತನ ಭಾರತೀಯ ನಾಗರಿಕತೆಯ ಭಾಗವಾಗಿತ್ತು ಎಂಬುದಕ್ಕೆ ಧಾರ್ಮಿಕ ಮತ್ತು ಐತಿಹಾಸಿಕ ಪಠ್ಯ ಮತ್ತು ಕಲಾಕೃತಿಗಳಲ್ಲಿ ಸಾಕ್ಷ್ಯ ಸಿಗುತ್ತವೆ. ಋಗ್ವೇದದಲ್ಲಿ ಅಗ್ನಿದೇವನನ್ನು ಹಲವು ಬಾರಿ ‘ದ್ವಿಮಾತ್ರಿ’ (ಇಬ್ಬರು ತಾಯಂದಿರ ಮಗ) ಎಂದು ಉಲ್ಲೇಖಿಸಲಾಗಿದೆ. ಕ್ರಿಸ್ತ ಶಕ 11ನೇ ಶತಮಾನದಲ್ಲಿ ಸೋಮದತ್ತ ಭಟ್ಟ ರಚಿಸಿದ ಕಥಾಸರಿತ್ಸಾಗರ ಕಾವ್ಯದಲ್ಲಿ ಸೋಮಪ್ರಭಾಳು ಕಳಿಂಗಸೇನನನ್ನು ಹಿಂದಿನ ಜನ್ಮದಿಂದಲೂ (ಪುರುಷನಾಗಿದ್ದಾಗ) ಪ್ರೀತಿಸುತ್ತಿದ್ದೆ ಎಂದು ಹೇಳುತ್ತಾಳೆ. ಹಿಂದೂ ಪುರಾಣಗಳಲ್ಲಿ ಇಂತಹ  ಹಲವು ಉಲ್ಲೇಖಗಳು ಇವೆ. ಸೂಫಿ ಪರಂಪರೆಯಲ್ಲೂ ಇಂತಹ ಉಲ್ಲೇಖಗಳಿವೆ’ ಎಂದು ಅವರು ವಿವರಿಸಿದ್ದಾರೆ.

ಸೂಫಿ ಪಂಥದಲ್ಲೂ ಗಂಡು ತನ್ನನ್ನು ತಾನು ಹೆಣ್ಣು ಎಂದು ಪರಿಭಾವಿಸುವ ಪರಿಕಲ್ಪನೆ ಇದೆ ಎಂದು ಕೌಲ್ ಅವರು ತಮ್ಮ ತೀರ್ಪಿನಲ್ಲಿ ವಿವರಿಸಿದ್ದಾರೆ. ‘ಸೂಫಿ ಕವಿಗಳು ಗಂಡಾಗಿದ್ದರೂ ತಮ್ಮನ್ನು ತಾವು ಹೆಣ್ಣು ಎಂದು ಪರಿಭಾವಿಸಿಕೊಂಡು ದೈವವನ್ನು ಆರಾಧಿಸುವ ಉಲ್ಲೇಖಗಳು ಇವೆ. ಮದುವೆ ಎಂಬುದು ಇತಿಹಾಸದುದ್ದಕ್ಕೂ ಬದಲಾಗುತ್ತಲೇ ಬಂದಿದೆ. ಆದರೆ ಈಚಿನ ಶತಮಾನಗಳಲ್ಲಿ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡುವಾಗ ವಿರುದ್ಧ ಲಿಂಗಿಗಳ ಮದುವೆಗಷ್ಟೇ ಮಾನ್ಯತೆ ದೊರೆತಿದೆ. ಹೀಗಾಗಿ ಪುರಾತನ ಭಾರತದಲ್ಲಿ ಸಲಿಂಗ ಸಂಬಂಧ ಇರಲಿಲ್ಲ ಮತ್ತು ಅದು ಆಧುನಿಕ ಕಾಲದ ಸಂಗತಿ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಅವರು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

[object Object]

ಕ್ವಿಯರ್‌ನೆಸ್‌...

ಹೆಣ್ಣು ಮತ್ತು ಗಂಡು ಎಂಬ ಸ್ಪಷ್ಟ ಲೈಂಗಿಕ ಅಸ್ಮಿತೆ ಇಲ್ಲದ ವ್ಯಕ್ತಿಗಳನ್ನು ಕಾನೂನಿನ ಭಾಷೆಯಲ್ಲಿ ಲಿಂಗಪರಿವರ್ತಿತರು, ಲೈಂಗಿಕ ಅಲ್ಪಸಂಖ್ಯಾತರು, ತೃತೀಯ ಲಿಂಗಿಗಳು ಎಂದು ಕರೆಯಲಾಗುತ್ತದೆ. ಆದರೆ ಈ ಪದಗಳು ಸೀಮಿತ ಅರ್ಥವ್ಯಾಪ್ತಿಯದ್ದಾಗಿವೆ. ಈ ಸಮುದಾಯದವರನ್ನು ಗುರುತಿಸಲು ಎಲ್‌ಜಿಬಿಟಿಕ್ಯು+ ಎಂಬ ಹೊಸ ಪರಿಭಾಷೆ ಈಗ ಬಳಕೆಗೆ ಬಂದಿದೆ. ಈ ಪರಿಭಾಷೆಯು ಈ ಸಮುದಾಯದ ಲೈಂಗಿಕ ಅಸ್ಮಿತೆಯನ್ನು ಅತ್ಯಂತ ನಿಖರವಾಗಿ ಪ್ರತಿನಿಧಿಸುತ್ತದೆ.

*ಲೆಸ್ಬಿಯನ್‌ (ಎಲ್‌) : ಮಹಿಳಾ ಸಲಿಂಗಿಗಳು

*ಗೇ (ಜಿ): ಪುರುಷ ಸಲಿಂಗಿಗಳು

*ಬೈಸೆಕ್ಸುಯಲ್‌ (ಬಿ): ಒಬ್ಬ ಪುರುಷ, ಮಹಿಳೆಯೊಂದಿಗೆ ಮತ್ತು ಬೇರೊಬ್ಬ ಪುರುಷನೊಂದಿಗೆ ಸಂಬಂಧದಲ್ಲಿರುವ ಸ್ಥಿತಿ. ಅದೇ ರೀತಿ ಒಬ್ಬ ಮಹಿಳೆ, ಪುರುಷನೊಟ್ಟಿಗೆ ಮತ್ತು ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧದಲ್ಲಿ ಇರುವ ಸ್ಥಿತಿ

*ಟ್ರಾನ್ಸ್‌ಜೆಂಡರ್‌ (ಟಿ): ಮಹಿಳೆಯೊಬ್ಬರು ದೈಹಿಕವಾಗಿ ಮಹಿಳೆಯೇ ಆಗಿದ್ದರೂ, ಮಾನಸಿಕವಾಗಿ ಪುರುಷನಾಗಿರುವುದು. ಅದೇ ರೀತಿ ಪುರುಷನೊಬ್ಬ ದೈಹಿಕವಾಗಿ ಪುರುಷನೇ ಆಗಿದ್ದರೂ, ಮಾನಸಿಕವಾಗಿ ಮಹಿಳೆಯಾಗಿರುವ ಸ್ಥಿತಿ

*ಕ್ವಿಯರ್‌ (ಕ್ಯು): ಮೇಲಿನ ಎಲ್ಲಾ ಸ್ಥಿತಿಗಳಲ್ಲಿ ಇರುವ ವ್ಯಕ್ತಿಗಳನ್ನು ಕ್ವಿಯರ್‌ ಎಂದು ಕರೆಯಲಾಗುತ್ತದೆ

ಕ್ವಿಯರ್‌ ಎಂಬುದು ವಿಶಾಲ ಅರ್ಥವ್ಯಾಪ್ತಿಯ ಪದವಾಗಿರುವ ಕಾರಣ, ಆ ಸ್ಥಿತಿಯನ್ನು ಕ್ವಿಯರ್‌ನೆಸ್‌ ಎಂದು ಕರೆಯಲಾಗುತ್ತಿದೆ. ಈ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಸಹ ‘ಕ್ವಿಯರ್‌, ಕ್ವಿಯರ್‌ನೆಸ್‌, ಕ್ವಿಯರ್‌ ಪರ್ಸನ್‌, ಕ್ವಿಯರ್‌ ಕಪಲ್‌’ ಎಂಬ ಪದಗಳನ್ನು ಬಳಸಿದೆ.

----

ನಗರಕ್ಕಷ್ಟೇ ಸೀಮಿತವೆಂದರೆ ಅಸ್ತಿತ್ವ ನಿರಾಕರಣೆ

ಸಲಿಂಗ ಲೈಂಗಿಕತೆ, ಕ್ವಿಯರ್‌ ಲೈಂಗಿಕ ಅಸ್ಮಿತೆ ಅಥವಾ ಲಿಂಗಪರಿವರ್ತನೆ ಆಗುವುದು– ಇವೆಲ್ಲವೂ ನಗರ ಪ್ರದೇಶಗಳಲ್ಲಿ ಮಾತ್ರವೇ ಕಾಣಸಿಗುತ್ತವೆ. ಲೈಂಗಿಕ ಅಸ್ಮಿತೆಗಳು ಎಂಬಂಥ ಯಾವುದೇ ವಿಚಾರ ಗ್ರಾಮೀಣ ಭಾಗದ ಜನರಿಗೆ ತಿಳಿಯದು. ಇಂಥವೆಲ್ಲ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವುದೂ ಇಲ್ಲ ಎನ್ನುವುದು ಭಾರತ ಸರ್ಕಾರವೂ ಸೇರಿದಂತೆ ಪ್ರತಿವಾದಿಗಳ ವಾದ. ಆದರೆ, ಸತ್ಯ ಈ ಎಲ್ಲದಕ್ಕಿಂತ ಬೇರೆಯದೇ ಇದೆ. ಇಂಗ್ಲಿಷ್‌ನ ‘ಹೋಮೊಸೆಕ್ಸುಯಾಲಿಟಿ’, ‘ಕ್ವಿಯರ್‌’ ಎಂಬೆಲ್ಲಾ ಪದಗಳು ಗ್ರಾಮೀಣರಿಗೆ, ಕಾರ್ಮಿಕ ವರ್ಗದವರಿಗೆ ಗೊತ್ತಿಲ್ಲದೇ ಇರಬಹುದು. ಆದರೆ, ಗ್ರಾಮೀಣ ಭಾಗದಲ್ಲೂ ಕ್ವಿಯರ್‌ ಸಮುದಾಯಕ್ಕೆ ಸೇರಿದವರು ಮದುವೆ ಆಗುತ್ತಾರೆ.

ಕ್ವಿಯರ್‌ ಲೈಂಗಿಕ ಅಸ್ಮಿತೆ ಇರುವುದು ನಗರ ಪ್ರದೇಶಗಳಲ್ಲಿ ಎಂಬ ವಾದದಲ್ಲಿ ಹುರುಳಿಲ್ಲ ಎಂಬುದನ್ನು ಈ ಪ್ರಕರಣದ ಅರ್ಜಿದಾರರ ಪಟ್ಟಿಯನ್ನು ನೋಡಿದರೆ ತಿಳಿದು ಬಿಡುತ್ತದೆ. 

ಒಬ್ಬ ಅರ್ಜಿದಾರರು ಪಶ್ಚಿಮ ಬಂಗಾಳದ ದುರ್ಗಾಪುರದವರು. ಇನ್ನೊಬ್ಬರು ಉತ್ತರ ಪ್ರದೇಶದ ವಾರಾಣಸಿಯವರು. ಮತ್ತೊಬ್ಬರು ಪಂಜಾಬ್‌ನ ಮುಕ್ತಸರ್‌ನ ಇತರೆ ಹಿಂದುಳಿದ ವರ್ಗಕ್ಕೆ ಸೇರಿದವರು. ಕಾರ್ಮಿಕ ವರ್ಗದ ಹಿನ್ನೆಲೆಯಿರುವ ದಲಿತ ಸಮುದಾಯದವರೊಬ್ಬರು ಅರ್ಜಿ ಸಲ್ಲಿಸಿದ್ದಾರೆ.

ಇಂಗ್ಲಿಷ್‌ ಮಾತನಾಡದ, ಕಾರ್ಮಿಕ ವರ್ಗದ ಹಿನ್ನೆಲೆ ಇರುವ ಅಕ್ಕೈ ಪದ್ಮಶಾಲಿ ಅವರೂ ಅರ್ಜಿ ಸಲ್ಲಿಸಿದ್ದಾರೆ. ಸೆರಾಮಿಕ್ಸ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಪರಿಸ್ಥಿತಿಯ ಕಾರಣಕ್ಕೆ ಲೈಂಗಿಕ ಕಾರ್ಯಕರ್ತೆಯಾದರು. ಈಗ ಅವರು ಸಾಮಾಜಿಕ ಕಾರ್ಯಕರ್ತೆ ಆಗಿದ್ದಾರೆ. ಇದಕ್ಕಾಗಿ ಅವರಿಗೆ ಕರ್ನಾಟಕದ ಎರಡನೇ ಅತ್ಯುನ್ನತವಾದ ರಾಜ್ಯೋತ್ಸವ ಪ್ರಶಸ್ತಿಯನ್ನೂ ನೀಡಲಾಗಿದೆ. ತೆಂಗಿನಕಾಯಿ ಹಾಗೂ ವೀಳ್ಯದೆಲೆ ಬೆಳೆಗಾರರ ಮಗಳು ನಂತರ ಲಿಂಗ ಪರಿವರ್ತನೆ ಮಾಡಿಕೊಳ್ಳುತ್ತಾರೆ. ಇವರೂ ಅರ್ಜಿದಾರರು. ಗುಜರಾತ್‌ನ ವಡೋದರಾದ ಒಬ್ಬರು ಅರ್ಜಿ ಹಾಕಿದ್ದಾರೆ.

ಭಾರತದಲ್ಲಿ ಕ್ವಿಯರ್‌ ಮದುವೆಗಳ ಇತಿಹಾಸದ ಕುರಿತು ರುತ್‌ ವನಿತಾ ಎಂಬವರು ‘ಲವ್ಸ್‌ ರೈಟ್‌: ಸೇಮ್‌ ಸೆಕ್ಸ್‌ ಮ್ಯಾರೇಜ್‌ ಇನ್‌ ಇಂಡಿಯಾ ಆ್ಯಂಡ್‌ ದಿ ವೆಸ್ಟ್‌’ ಎಂಬ ಪುಸ್ತಕ ಬರೆದಿದ್ದಾರೆ. ಸ್ವತಃ ಇವರೂ 2000ರಲ್ಲಿ ಯಹೂದಿ ಮಹಿಳೆಯೊಬ್ಬರನ್ನು ಮದುವೆ ಆಗಿದ್ದಾರೆ. ತಮ್ಮಪುಸ್ತಕದಲ್ಲಿ ಅವರು ಉಲ್ಲೇಖಿಸಿದ ಕೆಲವು
ಉದಾಹರಣೆಗಳು ಇಲ್ಲಿವೆ..

ಇಬ್ಬರು ಪುರುಷರು, ಇವರಲ್ಲಿ ಒಬ್ಬರು ಅಮೆರಿಕ ಪ್ರಜೆ ಇನ್ನೊಬ್ಬರು ಭಾರತದ ಪ್ರಜೆ. ಈ ಇಬ್ಬರೂ ಹಿಂದೂ ಸಂಪ್ರದಾಯದಂತೆ 1993ರಲ್ಲಿ ಮದುವೆ ಆಗಿದ್ದಾರೆ. 2004ರಲ್ಲಿ 24 ವರ್ಷದ ದಲಿತ ಮಹಿಳೆಯೊಬ್ಬರು ಹಾಗೂ 22 ವರ್ಷದ ಜಾಟ್‌ ಮಹಿಳೆ ದೆಹಲಿಗೆ ಬಂದು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಭೋಪಾಲ್‌ನ ಕೊಳೆಗೇರಿಯಲ್ಲಿ ವಾಸಿಸುವ ಕುಟುಂಬದ ಯುವತಿಯರು 2004ರಲ್ಲಿ ಮದುವೆ ಆಗಿದ್ದಾರೆ. ದಕ್ಷಿಣ ಭಾರತದ ರಾಜ್ಯವೊಂದರ 21 ವರ್ಷದ ಕ್ರೈಸ್ತ ಹಾಗೂ 23 ವರ್ಷದ ಹಿಂದೂ ಮಹಿಳೆ 2004ರಲ್ಲಿ ಮದುವೆ ಆಗಿದ್ದಾರೆ. ಇಬ್ಬರು ಮುಸ್ಲಿಂ ಪುರುಷರು ಉತ್ತರ ಪ್ರದೇಶದಲ್ಲಿ ಮದುವೆ ಆಗಿದ್ದಾರೆ. ಒಡಿಶಾದ ಇಬ್ಬರು ಆದಿವಾಸಿ ಮಹಿಳೆಯರು ತಮ್ಮ ಬುಡಕಟ್ಟು ಸಮುದಾಯದ ಸಂಪ್ರದಾಯದಂತೆಯೇ ಮದುವೆ ಆಗಿದ್ದಾರೆ.

ಸಮಾಜದಲ್ಲಿ ಮೂಲೆಗುಂಪಾದ ವರ್ಗದ ಕ್ವಿಯರ್ ಜನರ ಅಭಿವ್ಯಕ್ತಿ, ಅವರ ಧ್ವನಿಯನ್ನು ಕೇಳಿಸಿಕೊಳ್ಳುವಂಥ ವಾತಾವರಣವನ್ನೇ ಸೃಷ್ಟಿಮಾಡಲಾಗಿಲ್ಲ ಎನ್ನುತ್ತಾರೆ ಮಾಯಾ ಶರ್ಮಾ. ತಮ್ಮ ‘ಲವಿಂಗ್‌ ವುಮೆನ್‌: ಬೀಯಿಂಗ್‌ ಲೆಸ್ಬಿಯನ್‌ ಇನ್‌ ಅನ್‌ಪ್ರಿವಿಲೆಜ್ಡ್‌ ಇಂಡಿಯಾ’ ಎನ್ನುವ ಪುಸ್ತಕದಲ್ಲಿ ಅವರು ಈ ಮಾತುಗಳನ್ನು ಆಡಿದ್ದಾರೆ. ಮನೆಗೆಲಸ ಮಾಡುವವರು, ಕಾರ್ಖಾನೆಗಳಲ್ಲಿ ದುಡಿಯುವವರು, ಕಟ್ಟಡ ಕಾರ್ಮಿಕರು, ಮನೆಗಳಲ್ಲಿ ಕಾವಲು ಕೆಲಸ ಮಾಡುವ ಕುಟುಂಬಗಳಲ್ಲೂ ಕ್ವಿಯರ್ ಮಹಿಳೆಯರು ಇರುತ್ತಾರೆ ಎನ್ನುತ್ತದೆ ಪುಸ್ತಕ.

ಈ ಎಲ್ಲಾ ಉದಾಹರಣೆಗಳು ಭಾರತದಲ್ಲಿ ಕ್ವಿಯರ್ ಸಮುದಾಯದವರ ಇತಿಹಾಸವನ್ನು ಹೇಳುತ್ತದೆ. ಕ್ವಿಯರ್‌ ಸಮುದಾಯವು ನಗರಕ್ಕೆ ಸೀಮಿತವಾದುದು ಎಂಬ ವಾದವನ್ನು ಇಷ್ಟು ಉಲ್ಲೇಖಗಳೇ ತೊಡೆದು ಹಾಕುತ್ತವೆ. ಜೊತೆಗೆ ಇಂಥ ವಾದಗಳು ಗ್ರಾಮೀಣ ಭಾಗದಲ್ಲಿ ಇರುವ ಕ್ವಿಯರ್‌ ಸಮುದಾಯದ ಜನರ ಅಸ್ತಿತ್ವವನ್ನು ಮರೆಮಾಚುತ್ತವೆ. ಇಷ್ಟೇ ಅಲ್ಲ, ನಗರ ಪ್ರದೇಶಗಳಲ್ಲೇ ವಾಸಿಸುವ ಮೂಲೆಗುಂಪಾದ ವರ್ಗದ, ಬಡವರ ಅಸ್ತಿತ್ವವನ್ನೂ ಅಲ್ಲಗಳೆಯುತ್ತವೆ.

ಕೊನೆಯದಾಗಿ...

ಹಲವು ಕಾರಣಗಳಿಗಾಗಿ ನಗರಪ್ರದೇಶಗಳಲ್ಲಿ ವಾಸಿಸುವ ಕ್ವಿಯರ್‌ ಸಮುದಾಯದ ಜನರ ಧ್ವನಿಗಳು, ಅಭಿವ್ಯಕ್ತಿ ಹೊರಜಗತ್ತಿಗೆ ತೋರುತ್ತವೆ. ನಗರ ಪ್ರದೇಶವು ಈ ಸಮುದಾಯದವರಿಗೆ ಹೆಚ್ಚು ಸ್ವಾತಂತ್ರ್ಯ ನೀಡಬಹುದು. ಅದಕ್ಕಾಗಿ ಅವರು ತಮ್ಮ ಅಸ್ಮಿತೆಯನ್ನು ಭಯವಿಲ್ಲದೇ ಹೇಳಿಕೊಳ್ಳುತ್ತಾರೆ. ಆದರೆ, ಇಂಥ ಪರಿಸ್ಥಿತಿ ಸಣ್ಣ ಸಣ್ಣ ಊರುಗಳಲ್ಲಿ ಇಲ್ಲ. ಸಣ್ಣ ಊರುಗಳಲ್ಲಿ ಈ ಸಮುದಾಯದವರನ್ನು ಜನರು ಒಪ್ಪಿಕೊಳ್ಳುವುದಿಲ್ಲ, ಅವರ ಸ್ಥಿತಿಯು ಚಿಂತಾಜನಕವಾಗಿರುತ್ತದೆ. ನಗರ ಪ್ರದೇಶದ ಕ್ವಿಯರ್‌ ಜನರ ಅಭಿವ್ಯಕ್ತಿಯು ಜಗತ್ತಿಗೆ ತಿಳಿಯುವುದಕ್ಕೆ ಅವರಿಗೆ ಲಭ್ಯ ಇರುವ ಬೇರೆ ಬೇರೆ ಸಂಪನ್ಮೂಲಗಳೂ ಕಾರಣವಾಗಿವೆ. ಅವರ ಅಭಿವ್ಯಕ್ತಿಯನ್ನು ಹೊರಜಗತ್ತಿಗೆ ಕೇಳಿಸಬಲ್ಲ ಹಲವು ವಿಧಾನಗಳಿವೆ. ಮೂಲೆಗುಂಪಾದ ವರ್ಗದ ಜನರ ಅಭಿವ್ಯಕ್ತಿಯನ್ನು ಜಗತ್ತಿಗೆ ತಿಳಿಸುವ ಕಾರ್ಯವಾಗಬೇಕು ಎನ್ನುವುದನ್ನು ಇದು ಸೂಚಿಸುತ್ತದೆ. ಹಾಗೆಯೇ, ಅವರ ಮಾತು ಕೇಳಿಸುತ್ತಿಲ್ಲವಷ್ಟೇ, ಆದರೆ, ಅವರು ಬದುಕಿದ್ದಾರೆ; ಅವರ ಅಸ್ತಿತ್ವ ಇದೆ. ನಗರ ಪ್ರದೇಶಗಳಲ್ಲೂ ಕ್ವಿಯರ್‌ ಸಮುದಾಯದ ಜನರ ಮೇಲೆ ಹಿಂಸೆ, ದೌರ್ಜನ್ಯಗಳು ನಡೆಯುತ್ತಿವೆ. ಆದರೆ, ಅವರ ಮೇಲಾದ ಹಿಂಸೆ, ದೌರ್ಜನ್ಯಗಳನ್ನು ಜಗತ್ತಿಗೆ ತಿಳಿಸುವ ಮೂಲಗಳು ನಗರ ಪ್ರದೇಶಗಳಲ್ಲಿ ಮಾತ್ರ ಇವೆ. ಆದ್ದರಿಂದ, ಕ್ವಿಯರ್ ಸಮುದಾಯದ ಜನರು ನಗರಪ್ರದೇಶಗಳಲ್ಲಿ ಮಾತ್ರ ಇರುವುದಲ್ಲ, ಯಾವುದೇ ವರ್ಗ, ದೇಶ, ಪ್ರದೇಶದವರೂ ಕ್ವಿಯರ್‌ ಆಗಿರಬಹುದು.
ಡಿ.ವೈ. ಚಂದ್ರಚೂಡ್‌, ಮುಖ್ಯ ನ್ಯಾಯಮೂರ್ತಿ

ಆಧಾರ: ಸುಪ್ರೀಂ ಕೋರ್ಟ್‌ ತೀರ್ಪು

*************

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT