ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ಆಳ–ಅಗಲ: IIPS ನಿರ್ದೇಶಕರ ಅಮಾನತು- ಅಪ್ರಿಯ ದತ್ತಾಂಶ ಸರ್ಕಾರಕ್ಕೆ ಅಪಥ್ಯವೇ?
ಆಳ–ಅಗಲ: IIPS ನಿರ್ದೇಶಕರ ಅಮಾನತು- ಅಪ್ರಿಯ ದತ್ತಾಂಶ ಸರ್ಕಾರಕ್ಕೆ ಅಪಥ್ಯವೇ?
IIPS ನಿರ್ದೇಶಕರ ರಾಜೀನಾಮೆ ಪ್ರಹಸನ..
Published 18 ಅಕ್ಟೋಬರ್ 2023, 0:32 IST
Last Updated 18 ಅಕ್ಟೋಬರ್ 2023, 0:32 IST
ಅಕ್ಷರ ಗಾತ್ರ

ದೇಶದ ಅತ್ಯುನ್ನತ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾದ ಮುಂಬೈನ ‘ಅಂತರರಾಷ್ಟ್ರೀಯ ಜನಸಂಖ್ಯಾ ವಿಜ್ಞಾನ ಸಂಸ್ಥೆ–ಐಐಪಿಎಸ್‌’ನ ನಿರ್ದೇಶಕ ಕೆ.ಎಸ್‌. ಜೇಮ್ಸ್‌ ಅವರ ಅಮಾನತು ಆದೇಶವನ್ನು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ವಾಪಸ್‌ ಪಡೆದಿದೆ. ತಕ್ಷಣವೇ ಅವರ ರಾಜೀನಾಮೆಯನ್ನು ಅಂಗೀಕರಿಸಿದೆ. ‘ಐಐಪಿಎಸ್‌ ಸಿದ್ಧಪಡಿಸುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್‌) ವರದಿಯ ದತ್ತಾಂಶಗಳು ಸರ್ಕಾರಕ್ಕೆ ವಿರುದ್ಧವಾಗಿದ್ದವು. ಹೀಗಾಗಿ ಜೇಮ್ಸ್‌ ಅವರ ಮೇಲೆ ಒತ್ತಡ ಹೇರಿ ರಾಜೀನಾಮೆ ಪಡೆಯಲಾಗಿದೆ. ತನಗೆ ಅಪ್ರಿಯವಾದ ಸತ್ಯವನ್ನು ಕೇಂದ್ರದ ಬಿಜೆಪಿ ಸರ್ಕಾರವು ಸಹಿಸಿಕೊಳ್ಳುವುದೇ ಇಲ್ಲ’ ಎಂದು ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ ಆರೋಪಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಯಾಗುತ್ತಿದೆ.

––––––

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ಎನ್‌ಎಫ್‌ಎಚ್‌ಎಸ್‌) ವರದಿಯು ಸರ್ಕಾರದ ನೀತಿ ನಿರೂಪಣೆಗೆ ಅತ್ಯಗತ್ಯವಾದ ದತ್ತಾಂಶಗಳಲ್ಲಿ ಪ್ರಮುಖವಾದುದು. ದೇಶದ ಜನರ ಆರೋಗ್ಯದ ಸ್ಥಿತಿಗತಿ, ಅಪೌಷ್ಟಿಕತೆ, ರಕ್ತಹೀನತೆಯ ಪ್ರಮಾಣ, ಜನಸಂಖ್ಯಾ ನಿಯಂತ್ರಣ ಕ್ರಮಗಳ ಪಾಲನೆ, ಶೌಚಾಲಯದ ಲಭ್ಯತೆ ಪ್ರಮಾಣ, ಎಲ್‌ಪಿಜಿ ಬಳಕೆ ಪ್ರಮಾಣ, ಸಾಕ್ಷರತೆ ಪ್ರಮಾಣ, ಬಾಲ್ಯವಿವಾಹದ ಪ್ರಮಾಣ, ವೈದ್ಯಕೀಯ ಸೌಲಭ್ಯದ ಲಭ್ಯತೆ ಕುರಿತು ಹೆಚ್ಚು ಕರಾರುವಾಕ್ಕಾದ ದತ್ತಾಂಶಗಳನ್ನು ಎನ್‌ಎಫ್‌ಎಚ್‌ಎಸ್‌ ವರದಿ ಕಟ್ಟಿಕೊಡುತ್ತದೆ. 1992–93ರಲ್ಲಿ ಆರಂಭಿಸಲಾದ ಈ ಸಮೀಕ್ಷೆಯು 2019–20ರ ವೇಳೆಗೆ ಐದನೇ ಆವೃತ್ತಿಯನ್ನು ಪೂರೈಸಿದೆ. ಈಗ ಆರನೇ ಆವೃತ್ತಿಯ ಸಮೀಕ್ಷೆ ನಡೆಯುತ್ತಿದೆ. ಸರ್ಕಾರವು ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಒದಗಿಸಬೇಕು ಮತ್ತು ಯಾವ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು ಎಂದು ಶಿಫಾರಸು ಮಾಡುವ ನೀತಿ ಆಯೋಗವು, ಆ ಶಿಫಾರಸುಗಳನ್ನು ಸಿದ್ಧಪಡಿಸಲು ಎನ್‌ಎಫ್‌ಎಚ್‌ಎಸ್‌ ವರದಿಯನ್ನು ಆಧಾರವಾಗಿ ಬಳಸಿಕೊಳ್ಳುತ್ತದೆ. ಹೀಗೆ ಸರ್ಕಾರದ ಕಾರ್ಯಚಟುವಟಿಕೆಗಳ ದೃಷ್ಟಿಯಿಂದ ಹೆಚ್ಚು ಮಹತ್ವ ಪಡೆದ ವರದಿ ಇದು.

ಈ ವರದಿಯನ್ನು ಸಿದ್ಧಪಡಿಸುವ ಹೊಣೆಗಾರಿಕೆ ಐಐಪಿಎಸ್‌ನದ್ದು. ಐಐಪಿಎಸ್‌, ಕೇಂದ್ರ ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಅರೆಸ್ವಾಯತ್ತ ಸಂಸ್ಥೆ. 2019–20ರಲ್ಲಿ ದೇಶದ ಜನರ ಆರೋಗ್ಯದ ಸ್ಥಿತಿ ಮತ್ತು ಅವರಿಗೆ ಲಭ್ಯವಿರುವ ಮೂಲಸೌಕರ್ಯ ಹಾಗೂ ವೈದ್ಯಕೀಯ ಸವಲತ್ತುಗಳ ಬಗ್ಗೆ ಸಿದ್ಧಪಡಿಸಿದ್ದ ಎನ್‌ಎಫ್‌ಎಚ್‌ಎಸ್‌–5 ವರದಿಯನ್ನು ಆರೋಗ್ಯ ಸಚಿವಾಲಯವೇ 2021ರ ನವೆಂಬರ್‌ನಲ್ಲಿ ಬಿಡುಗಡೆ ಮಾಡಿತ್ತು. ಎರಡನೇ ಹಂತದ ವರದಿಯನ್ನು 2022ರಲ್ಲಿ ಬಿಡುಗಡೆ ಮಾಡಿತ್ತು. ದೇಶದ ಜನರ ಆರೋಗ್ಯ ಸುಧಾರಣೆಯಲ್ಲಿ ಸರ್ಕಾರವು ನಕಾರಾತ್ಮಕ ಪ್ರಗತಿ ಸಾಧಿಸಿದೆ ಮತ್ತು ದೇಶದ ಜನರ ಆರೋಗ್ಯದ ಸ್ಥಿತಿ ಮೊದಲಿಗಿಂತ ಹೆಚ್ಚು ಬಿಗಡಾಯಿಸಿದೆ ಎಂಬುದನ್ನು ಈ ವರದಿಯ ದತ್ತಾಂಶಗಳು ಹೇಳಿದ್ದವು.

ಆರೋಗ್ಯ ಸಚಿವಾಲಯ ಈ ವರದಿಯನ್ನೇನೋ ಬಿಡುಗಡೆ ಮಾಡಿತು. ಆದರೆ ಸರ್ಕಾರವು ತಾನು ಸಾಧಿಸಿದ್ದೇನೆ ಎಂದು ಹೇಳಿಕೊಂಡ ಸಾಧನೆಗಳೆಲ್ಲವೂ ವಾಸ್ತವದಲ್ಲಿ ನಿಜವಲ್ಲ ಎಂಬುದನ್ನು ಈ ವರದಿಯು ದತ್ತಾಂಶ ಸಹಿತ ಬಹಿರಂಗಪಡಿಸಿತ್ತು. ಮಾಧ್ಯಮಗಳು ಈ ಬಗ್ಗೆ ವರದಿ ಪ್ರಕಟಿಸಿದವು. ವಿರೋಧ ಪಕ್ಷಗಳು ಮತ್ತು ಕೆಲವು ಸಾಮಾಜಿಕ ಕಾರ್ಯಕರ್ತರು ಸರ್ಕಾರದ ಸಾಧನೆಯನ್ನು ಪ್ರಶ್ನಿಸಿದರು. ಆಗ ಆರೋಗ್ಯ ಸಚಿವಾಲಯವು, ‘ದತ್ತಾಂಶ ಸಂಗ್ರಹ ವಿಧಾನದಲ್ಲೇ ಲೋಪವಿದೆ’ ಎಂಬ ಲೇಖನವನ್ನು ಬಿಡುಗಡೆ ಮಾಡಿತು.

5ನೇ ಆವೃತ್ತಿಯ ಸಮೀಕ್ಷೆ ನಡೆದ ಮತ್ತು ವರದಿ ಸಿದ್ಧಪಡಿಸುವಾಗ ಐಐಪಿಎಸ್‌ ನಿರ್ದೇಶಕರಾಗಿದ್ದವರು ಕೆ.ಎಸ್. ಜೇಮ್ಸ್‌. ವರದಿ ಬಿಡುಗಡೆಯಾದ ಕೆಲವೇ ತಿಂಗಳಲ್ಲಿ ಅವರ ವಿರುದ್ಧ ಆರೋಗ್ಯ ಸಚಿವಾಲಯಕ್ಕೆ 35 ದೂರುಗಳು ಸಲ್ಲಿಕೆಯಾದವು. ಐಐಪಿಎಸ್‌ನ ನೇಮಕಾತಿಯಲ್ಲಿ ಅಕ್ರಮ ನಡೆದಿದೆ, ಕಟ್ಟಡ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ, ಸಂಸ್ಥೆಯ ಕೆಲಸ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ, ಲಂಚ ನೀಡುವ ಉದ್ದೇಶದಿಂದ ಹಣ್ಣಿನ ವ್ಯಾಪಾರಿಯೊಬ್ಬರಿಂದ 80 ಪ್ಲೇಟ್‌ ಹಣ್ಣಿನ ಸಲಾಡ್‌ ಖರೀದಿಸಲಾಗಿದೆ, ಸಂಸ್ಥೆಯ ಪ್ರೊಫೆಸರ್‌ ಒಬ್ಬರು ಚೀನಾದ ಸಂಸ್ಥೆಯೊಂದರ ವೆಬಿನಾರ್‌ನಲ್ಲಿ ಭಾಗವಹಿಸಿದ್ದಾರೆ... ಇವು ಆ 35ರಲ್ಲಿ ದೂರುಗಳು.

ಈ ಎಲ್ಲಾ ದೂರುಗಳಿಗೆ ಜೇಮ್ಸ್‌ ಅವರನ್ನು ಹೊಣೆಯಾಗಿಸಿ ಅವರ ವಿರುದ್ಧ ತನಿಖೆಗೆ ಆರೋಗ್ಯ ಸಚಿವಾಲಯವು ಸತ್ಯಶೋಧನಾ ಸಮಿತಿಯನ್ನು ಇದೇ ಏಪ್ರಿಲ್‌ನಲ್ಲಿ ರಚಿಸಿತ್ತು. ಸಮಿತಿಯು ವರದಿ ನೀಡಿದೆ, ಅದರ ಆಧಾರದಲ್ಲಿ ಹೆಚ್ಚಿನ ತನಿಖೆ ಅಗತ್ಯವಿದೆ. ಮುಕ್ತ ತನಿಖೆ ನಡೆಸಲು ಅನುಕೂಲವಾಗಲಿ ಎಂದು ಜೇಮ್ಸ್‌ ಅವರನ್ನು 90 ದಿನ ಅಮಾನತು ಮಾಡಿ ಜುಲೈ 27ರಂದು ಸಚಿವಾಲಯ ಆದೇಶ ಹೊರಡಿಸಿತ್ತು. ಅದರ ಬೆನ್ನಲ್ಲೇ ಜೇಮ್ಸ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅದನ್ನು ಸರ್ಕಾರ ಪರಿಗಣಿಸಿರಲಿಲ್ಲ. ಈ ಪ್ರಕರಣದಲ್ಲಿ ಆರೋಗ್ಯ ಸಚಿವಾಲಯಕ್ಕೆ ದೂರು ನೀಡಿದವರು ಯಾರು, ಆರೋಪಗಳಿಗೆ ಜೇಮ್ಸ್‌ ಅವರು ನೀಡಿರುವ ವಿವರಣೆ ಏನು ಮತ್ತು ಸತ್ಯಶೋಧನಾ ಸಮಿತಿಯ ವರದಿ ಏನು ಹೇಳುತ್ತದೆ ಎಂಬುದನ್ನು ಆರೋಗ್ಯ ಸಚಿವಾಲಯ ಬಹಿರಂಗಪಡಿಸಿಲ್ಲ. ಆದರೆ, ಅಕ್ಟೋಬರ್ 16ರ ಸೋಮವಾರದಂದು ಜೇಮ್ಸ್‌ ಅವರ ಅಮಾನತು ಆದೇಶವನ್ನು ಹಿಂಪಡೆಯಿತು. ಅದೇ ದಿನ ಅವರ ರಾಜೀನಾಮೆಯನ್ನು ಅಂಗೀಕರಿಸಿತು.

ತಮಗೆ ಅಪ್ರಿಯವಾದ ದತ್ತಾಂಶವನ್ನು ನೀಡಿದ ಕಾರಣಕ್ಕೆ ಜೇಮ್ಸ್‌ ಅವರನ್ನು ಕೇಂದ್ರ ಸರ್ಕಾರ ಬಲಿಪಶು ಮಾಡಿದೆ. ದೇಶದಲ್ಲಿ ಮುಕ್ತವಾದ ಮತ್ತು ಪ್ರಜಾಸತ್ತಾತ್ಮಕವಾದ ಸಂಶೋಧನೆಗೂ ಅವಕಾಶವಿಲ್ಲದಂತಾಗಿದೆ ಎಂದು ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ.

ಎಲ್‌ಪಿಜಿ ಸಂಪರ್ಕ: ಸರ್ಕಾರದ ಹೇಳಿಕೆಗೆ ವ್ಯತಿರಿಕ್ತವಾಗಿದ್ದ ದತ್ತಾಂಶ

‘ದೇಶದಲ್ಲಿ ಉಜ್ವಲ ಯೋಜನೆ ಯಶಸ್ವಿಯಾಗಿದೆ. ದೇಶದ ಎಲ್ಲಾ ಜನರಿಗೂ ಎಲ್‌ಪಿಜಿ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ. ದೇಶದ ಶೇ 99.50ರಷ್ಟು ಕುಟುಂಬಗಳು ಈಗ ಎಲ್‌ಪಿಜಿ ಅಡುಗೆ ಅನಿಲ ಬಳಸುತ್ತಿವೆ’ ಎಂದು 2021ರ ಫೆಬ್ರುವರಿಯಲ್ಲಿ ಕೇಂದ್ರ ಸರ್ಕಾರವು ರಾಜ್ಯಸಭೆಗೆ ಮಾಹಿತಿ ನೀಡಿತ್ತು.

2021ರ ನವೆಂಬರ್ ವೇಳೆಗೆ ಬಿಡುಗಡೆಯಾದ ಎನ್‌ಎಫ್‌ಎಚ್‌ಎಸ್‌–5 ವರದಿಯ ದತ್ತಾಂಶಗಳು, ‘ದೇಶದ ಶೇ 41.40ರಷ್ಟು ಜನರು ಎಲ್‌ಪಿಜಿ ಬಳಕೆಯಿಂದ ವಂಚಿತರಾಗಿದ್ದಾರೆ. ಎನ್‌ಎಫ್‌ಎಚ್‌ಎಸ್‌ ವರದಿಯನ್ನು ಆಧರಿಸಿಯೇ ನೀತಿ ಆಯೋಗವು ಸಿದ್ಧಪಡಿಸಿದ ಬಹುಆಯಾಮದ ಬಡತನ ಸೂಚ್ಯಂಕ ವರದಿಯಲ್ಲೂ, ‘ದೇಶದ ಶೇ 41ರಷ್ಟು ಜನರು ಎಲ್‌ಪಿಜಿ ಬಳಕೆಯಿಂದ ವಂಚಿತರಾಗಿದ್ದಾರೆ’ ಎಂದು ಹೇಳಿತ್ತು. ಎನ್‌ಎಫ್‌ಎಚ್‌ಎಸ್‌–5ರ ಮೊದಲ ಹಂತದ ಮತ್ತು ಎರಡನೇ ಹಂತದ ವರದಿ ಬಿಡುಗಡೆಯಾದ ನಂತರ, ಸರ್ಕಾರವನ್ನು ವಿರೋಧ ಪಕ್ಷಗಳು ಟೀಕಿಸಿದ್ದವು. 

ವಿದ್ಯುತ್ ಸಂಪರ್ಕ: ಭಾರತದ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ ಎಂದು 2018ರ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರ ಘೋಷಿಸಿತ್ತು. ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದೇನೂ ಸರ್ಕಾರ ಹೇಳಿರಲಿಲ್ಲ. ಆದರೆ, ಎಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲ ಎಂಬುದನ್ನೂ ಸರ್ಕಾರ ಹೇಳಿರಲಿಲ್ಲ. ಬದಲಿಗೆ ಎನ್‌ಎಫ್‌ಎಚ್‌ಎಸ್‌–5 ವರದಿಯು ದೇಶದ ಶೇ 3.2ರಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲ ಎಂಬ ಮಾಹಿತಿಯನ್ನು ಒದಗಿಸಿತ್ತು.

ದೇಶದ ಜನರಲ್ಲಿ ರಕ್ತಹೀನತೆ ಏರಿಕೆಯಾಗಿದೆ ಎಂದಿದ್ದ ವರದಿ

ದೇಶದ ಜನರಲ್ಲಿ ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಬಳಲುವವರ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ, ಈ ಹಿಂದೆ ಇದ್ದ ಮತ್ತು ಈಗಿನ ಸರ್ಕಾರಗಳು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿವೆ. ಎನ್‌ಎಫ್‌ಎಚ್‌ಎಸ್‌ ಸಮೀಕ್ಷೆಯಲ್ಲಿ ಅಪೌಷ್ಟಿಕತೆ ಮತ್ತು ರಕ್ತಹೀನತೆಗೆ ಸಂಬಂಧಿಸಿದ ದತ್ತಾಂಶ ಕಲೆ ಹಾಕಲು ಆರಂಭಿಸಿದ ವರ್ಷದಿಂದ, ಈ ಎರಡೂ ಕೊರತೆಗಳನ್ನು ನೀಗುವಲ್ಲಿ ದೇಶವು ಗಣನೀಯ ಪ್ರಗತಿ ಸಾಧಿಸಿದೆ. ಆದರೆ 2015–16ಕ್ಕೆ ಹೋಲಿಸಿದರೆ, 2019–20ರ ಅವಧಿಯಲ್ಲಿ ರಕ್ತಹೀನತೆಯಿಂದ ಬಳಲುವವರ ಪ್ರಮಾಣ ಏರಿಕೆಯಾಗಿತ್ತು. ಇದನ್ನು ಎನ್‌ಎಫ್‌ಎಚ್‌ಎಸ್‌–5ರ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

2015–16ರಯಲ್ಲಿ ದೇಶದ ಮಹಿಳೆಯರಲ್ಲಿ ರಕ್ತಹೀನತೆಯಿಂದ ಬಳಲುವವರ ಪ್ರಮಾಣ ಶೇ 53ರಷ್ಟಿತ್ತು. ಆದರೆ 2019–20ರಲ್ಲಿ ಅಂತಹ ಮಹಿಳೆಯರ ಪ್ರಮಾಣ ಶೇ 67ಕ್ಕೆ ಏರಿಕೆಯಾಗಿತ್ತು. 2015-16ರಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ, ರಕ್ತಹೀನತೆಯಿಂದ ಬಳಲುವವರ ಪ್ರಮಾಣ ಶೇ 53.1ರಷ್ಟಿತ್ತು. 2019–20ರಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವ ಮಕ್ಕಳ ಪ್ರಮಾಣ ಶೇ 57ಕ್ಕೆ ಏರಿಕೆಯಾಗಿತ್ತು. ಇದೇ ಅವಧಿಯಲ್ಲಿ ದೇಶದ ಪುರುಷರಲ್ಲಿ ರಕ್ತಹೀನತೆಯಿಂದ ಬಳಲುವವರ ಪ್ರಮಾಣ ಶೇ 22.7ರಿಂದ ಶೇ 25ಕ್ಕೆ ಏರಿಕೆಯಾಗಿತ್ತು. ಈ ಎಲ್ಲಾ ಮಾಹಿತಿಯನ್ನು ಎನ್‌ಎಫ್‌ಎಚ್‌ಎಸ್‌–5 ವರದಿಯಲ್ಲಿ ದತ್ತಾಂಶ ಸಮೇತ ನೀಡಲಾಗಿತ್ತು.

‘ಈ ವರದಿಯ ಸಂಬಂಧ ನಡೆದ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು’ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು.

‘ಬಯಲು ಬಹಿರ್ದೆಸೆ ಮುಕ್ತ ವಾಸ್ತವಕ್ಕೆ ದೂರ’

ಭಾರತವು ಬಯಲು ಬಹಿರ್ದೆಸೆ ಮುಕ್ತ ದೇಶವಾಗಿದೆ ಎಂದು 2019ರ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರವು ಘೋಷಿಸಿತ್ತು. ಆದರೆ, ವಾಸ್ತವದಲ್ಲಿ ಇದನ್ನು ಸಾಧಿಸಿಲ್ಲ ಎಂಬುದರತ್ತ ಎನ್‌ಎಫ್‌ಎಚ್‌ಎಸ್‌–5 ವರದಿ ಬೊಟ್ಟು ಮಾಡಿತ್ತು.

ಯಾವುದೇ ಪ್ರದೇಶದಲ್ಲಿ ಇರುವ ಎಲ್ಲಾ ಮನೆಗಳಲ್ಲೂ ಶೌಚಾಲಯವಿರಬೇಕು, ಆ ಶೌಚಾಲಯಕ್ಕೆ ನೀರಿನ ಸಂಪರ್ಕವಿರಬೇಕು, ಶೌಚತ್ಯಾಜ್ಯ ವೈಜ್ಞಾನಿಕ ವಿಲೇವಾರಿಗೆ ವ್ಯವಸ್ಥೆ ಇರಬೇಕು ಮತ್ತು ಅಲ್ಲಿನ ಎಲ್ಲಾ ಜನರು ಶೌಚಾಲಯವನ್ನು ಬಳಸುತ್ತಿರಬೇಕು. ಈ ಎಲ್ಲವೂ ಸಾಧ್ಯವಾಗಿರುವ ಪ್ರದೇಶವನ್ನು ಮಾತ್ರ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಬೇಕು. ದೇಶವನ್ನು ಬಯಲು ಬಹಿರ್ದೆಸೆ ಮುಕ್ತ ಎಂದು 2019ರಲ್ಲಿ ಘೋಷಿಸಿದ್ದರೂ, ಅದೇ ಅವಧಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ದೇಶದ ಶೇ 29.9ರಷ್ಟು ಜನರಿಗೆ ಶೌಚಾಲಯದ ಲಭ್ಯತೆ ಇಲ್ಲ ಮತ್ತು ಆ ಜನ ಶೌಚಾಲಯ ಬಳಸುತ್ತಿಲ್ಲ ಎಂದು ಎನ್‌ಎಫ್‌ಎಚ್‌ಎಸ್‌–5 ವರದಿಯ ದತ್ತಾಂಶಗಳು ಹೇಳಿದ್ದವು.

ಸರ್ಕಾರ ಹೇಳಿಕೊಳ್ಳುತ್ತಿರುವುದಕ್ಕೂ, ಎನ್‌ಎಫ್‌ಎಚ್‌ಎಸ್‌ ವರದಿಯ ದತ್ತಾಂಶಗಳಿಗೂ ತಾಳೆಯಾಗುತ್ತಿಲ್ಲ ಎಂದು ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು. ಮಾಧ್ಯಮಗಳಲ್ಲೂ ಈ ಬಗ್ಗೆ ವಿಸ್ತೃತ ಚರ್ಚೆಯಾಗಿತ್ತು.

ಸರ್ಕಾರ ನಿರಾಕರಿಸಿದ ವರದಿಗಳು

ತನ್ನ ನೀತಿಗಳು ಪರಿಣಾಮಕಾರಿಯಾಗಿಲ್ಲ ಎಂಬುದನ್ನು ಬೊಟ್ಟುಮಾಡಿ ತೋರಿಸುವ ಸಮೀಕ್ಷಾ ವರದಿಗಳು ಮತ್ತು ಜಾಗತಿಕ ಸೂಚ್ಯಂಕಗಳನ್ನು ಕೇಂದ್ರ ಸರ್ಕಾರ ನಿರಾಕರಿಸುತ್ತಲೇ ಬಂದಿದೆ. ಅಂತಹ ಕೆಲವು ಸಮೀಕ್ಷಾ ವರದಿಗಳು ಇಂತಿವೆ

*ಎನ್‌ಎಫ್‌ಎಚ್‌ಎಸ್ ಸಮೀಕ್ಷೆಯ ದತ್ತಾಂಶ ಸಂಗ್ರಹ ವಿಧಾನದಲ್ಲೇ ಲೋಪವಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು

*2022ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ರ‍್ಯಾಂಕ್‌ ಕುಸಿದಿತ್ತು. ಆಗ ಆ ಸೂಚ್ಯಂಕವೇ ಸರಿ ಇಲ್ಲ ಎಂದು ಸರ್ಕಾರ ಹೇಳಿತ್ತು. 2023ರ ಹಸಿವು ಸೂಚ್ಯಂಕ ಈಗಷ್ಟೇ ಬಿಡುಗಡೆಯಾಗಿದೆ. ಭಾರತದ ರ‍್ಯಾಂಕ್‌ ಮತ್ತಷ್ಟು ಕುಸಿದಿದೆ. ಸೂಚ್ಯಂಕವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಮತ್ತೆ ಹೇಳಿದೆ

*ಪತ್ರಿಕಾ ಸ್ವಾತಂತ್ರ್ಯದಲ್ಲಿ ಭಾರತದ ರ‍್ಯಾಂಕ್‌ ಕುಸಿಯುತ್ತಲೇ ಸಾಗಿದೆ. ಆದರೆ ಆ ರ‍್ಯಾಂಕ್‌ ಪದ್ಧತಿ ಮತ್ತು ಅದಕ್ಕೆ ಬಳಸುವ ಮಾನದಂಡಗಳಲ್ಲೇ ಲೋಪವಿದೆ ಎಂದು ಸರ್ಕಾರ ಹೇಳಿತ್ತು

*ಜಾಗತಿಕ ಬಡತನ ಸೂಚ್ಯಂಕದಲ್ಲೂ ಭಾರತದ ಸ್ಥಾನ ಕುಸಿದಿದೆ ಮತ್ತು ಬಡತನ ಹೆಚ್ಚಾಗಿದೆ ಎಂದು ಹೇಳಿದ್ದ ವಿಶ್ವಬ್ಯಾಂಕ್‌ನ ವರದಿಯನ್ನು ಕೇಂದ್ರ ಸರ್ಕಾರ ನಿರಾಕರಿಸಿತ್ತು

*ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ತಜ್ಞರ ಸಮಿತಿ ವರದಿ ನೀಡಿತ್ತು. ಆ ವರದಿಯನ್ನೂ ಕೇಂದ್ರ ಸರ್ಕಾರ ನಿರಾಕರಿಸಿತ್ತು

ಆಧಾರ: ಪಿಟಿಐ, ಎನ್‌ಎಫ್‌ಎಚ್‌ಎಸ್‌ ವರದಿಗಳು, ರಾಯಿಟರ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT