ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದೇಶ ವಿದ್ಯಮಾನ | ಬ್ರಿಟನ್‌ ಚುನಾವಣೆ: ಬದಲಾವಣೆ ಸನ್ನಿಹಿತ?

Published 1 ಜುಲೈ 2024, 0:47 IST
Last Updated 1 ಜುಲೈ 2024, 0:47 IST
ಅಕ್ಷರ ಗಾತ್ರ
ಬ್ರಿಟನ್‌ನ ಸಂಸತ್ತಿಗೆ (ಹೌಸ್‌ ಆಫ್‌ ಕಾಮನ್ಸ್‌) ಜುಲೈ 4ರಂದು ಚುನಾವಣೆ ನಡೆಯಲಿದೆ. ಕನ್ಸರ್ವೇಟಿವ್‌ ಪಾರ್ಟಿಯ ನೇತೃತ್ವ ವಹಿಸಿರುವ ಬ್ರಿಟನ್‌ ಪ್ರಧಾನಿ, ಭಾರತ ಮೂಲದ ರಿಷಿ ಸುನಕ್‌ ಅವರು ಅವಧಿಗೂ ಮೊದಲೇ ಚುನಾವಣೆ ಘೋಷಿಸಿ ಎಲ್ಲರನ್ನೂ ಅಚ್ಚರಿಗೆ ಕೆಡವಿದ್ದಾರೆ. 14 ವರ್ಷಗಳಿಂದ ವಿರೋಧ ಪಕ್ಷದ ಸ್ಥಾನದಲ್ಲಿರುವ ಲೇಬರ್‌ ಪಾರ್ಟಿ ಈ ಬಾರಿ ಗೆಲುವಿನ ವಿಶ್ವಾಸದಲ್ಲಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಲೇಬರ್‌ ಪಾರ್ಟಿ ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿದಿವೆ. ಜಾಗತಿಕ ಸಮುದಾಯದ ಗಮನ ಸೆಳೆದಿರುವ ಈ ಚುನಾವಣೆ ಮೇಲಿನ ನೋಟ ಇಲ್ಲಿದೆ... 

ಈ ಬಾರಿಯ ಬ್ರಿಟನ್‌ ಸಾರ್ವತ್ರಿಕ ಚುನಾವಣೆ ಕುತೂಹಲ ಕೆರಳಿಸಿದೆ. ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆ ಈ ಬಾರಿ ಆರು ತಿಂಗಳು ಮೊದಲೇ ನಡೆಯುತ್ತಿದೆ. ಈ ವರ್ಷದ ಡಿಸೆಂಬರ್‌ ಅಂತ್ಯಕ್ಕೆ ಚುನಾವಣೆ ನಡೆಯಬೇಕಿತ್ತು. ಆದರೆ, ಪ್ರಧಾನಿ, ಕನ್ಸರ್ವೇಟಿವ್‌ ಪಕ್ಷದ ರಿಷಿ ಸುನಕ್‌ ಅವರು ಜುಲೈ 4ರಂದು ಚುನಾವಣೆ ನಡೆಯಲಿದೆ ಎಂದು ಮೇ 22ರಂದು ಘೋಷಿಸಿದ್ದರು. ಮೇ 30ಕ್ಕೆ ಸಂಸತ್ತನ್ನು ವಿಸರ್ಜಿಸಲಾಗಿದೆ. 

ಬಹು ಪಕ್ಷೀಯ ವ್ಯವಸ್ಥೆ ಇರುವ ಬ್ರಿಟನ್‌ನಲ್ಲಿ 12ಕ್ಕೂ ಹೆಚ್ಚು ರಾಜಕೀಯ ಪಕ್ಷಗಳಿವೆ. ಭಾರತದಲ್ಲಿ ಇರುವಂತೆ ಅಲ್ಲೂ ಸಂಸತ್ತಿನಲ್ಲಿ ಕೆಳಮನೆ (ಹೌಸ್‌ ಆಫ್‌ ಕಾಮನ್ಸ್‌), ಮೇಲ್ಮನೆ (ಹೌಸ್‌ ಆಫ್‌ ಲಾರ್ಡ್ಸ್‌) ಇವೆ. 650 ಸದಸ್ಯ ಬಲದ ಕೆಳಮನೆ ಸದಸ್ಯರನ್ನು ಜನರೇ ನೇರವಾಗಿ ಆರಿಸುತ್ತಾರೆ. ಪ್ರತಿ ಚುನಾವಣೆಯಲ್ಲೂ ಇಲ್ಲಿ ಕನ್ಸರ್ವೇಟಿವ್‌ ಪಾರ್ಟಿ ಮತ್ತು ಲೇಬರ್‌ ಪಾರ್ಟಿ ನಡುವೆ ಪೈಪೋಟಿ ನಡೆಯುತ್ತದೆ. ಈ ಬಾರಿಯೂ ಎರಡೂ ಪಕ್ಷಗಳ ನಡುವೆ ಪೈಪೋಟಿ ಏರ್ಪಟ್ಟಿದೆ. 

2010ರಿಂದ ಆಡಳಿತದಲ್ಲಿರುವ ಕನ್ಸರ್ವೇಟಿವ್‌ ಪಕ್ಷ ಈ ಬಾರಿ, ರಿಷಿ ಸುನಕ್‌ ನಾಯಕತ್ವದಲ್ಲಿ ಅಧಿಕಾರಕ್ಕೆ ಏರಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಐದು ವರ್ಷಗಳಲ್ಲಿ ನಡೆದ ಹಲವು ಹಗರಣಗಳು, ಇಬ್ಬರು ಪ್ರಧಾನಿಗಳ ರಾಜೀನಾಮೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಎದುರಾಗಿರುವ ಸೋಲು ಸುನಕ್‌ ಪಕ್ಷಕ್ಕೆ ಹಿನ್ನಡೆ ತಂದಿದೆ.  

ಮೂರು ಚುನಾವಣೆಗಳಿಂದ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿರುವ ಲೇಬರ್‌ ಪಾರ್ಟಿ ಕೀರ್‌ ಸ್ಟಾರ್ಮರ್‌ ನೇತೃತ್ವದಲ್ಲಿ ಅಧಿಕಾರಕ್ಕೆ ಏರುವ ಲೆಕ್ಕಾಚಾರದಲ್ಲಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಲೇಬರ್‌ ಪಾರ್ಟಿ ಗೆಲುವು ಸಾಧಿಸಲಿವೆ ಎಂದು ಹೇಳಿರುವುದು ಅದರ ವಿಶ್ವಾಸವನ್ನು ಹೆಚ್ಚಿಸಿದೆ. ಸಮೀಕ್ಷೆಗಳಲ್ಲಿ ಲೇಬರ್‌ ಪಾರ್ಟಿ ಶೇ 20ರಷ್ಟು ಅಂಶಗಳಿಂದ ಮುನ್ನಡೆಯಲ್ಲಿದೆ.

ದೇವಸ್ಥಾನಗಳಲ್ಲಿ ಪ್ರಚಾರ

ಬ್ರಿಟನ್‌ನಲ್ಲಿರುವ ಹಿಂದೂಗಳ ಮತಗಳನ್ನು ಸೆಳೆಯಲು ಪ್ರಮುಖ ಪಕ್ಷಗಳು ನಾನಾ ಕಸರತ್ತು ಮಾಡುತ್ತಿವೆ. ಕೆಲವು ಮುಖಂಡರಂತೂ ಹಿಂದೂಗಳನ್ನು ಆಕರ್ಷಿಸಲು ದೇವಸ್ಥಾನಗಳಿಗೇ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ರಿಷಿ ಸುನಕ್ ಮತ್ತು ಕೀರ್ ಸ್ಟಾರ್ಮರ್ ಪೈಪೋಟಿಗೆ ಬಿದ್ದಿದ್ದಾರೆ.

ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರಕ್ಕೆ ಭೇಟಿ ಪೂಜೆ ಸಲ್ಲಿಸಿದ್ದಾರೆ. ಹಿಂದೂಗಳ ಮೌಲ್ಯಗಳು ಹಾಗೂ ಕನ್ಸರ್ವೇಟಿವ್ ಪಕ್ಷದ ಮೌಲ್ಯಗಳು ಒಂದೇ ಎಂದು ಒತ್ತಿ ಹೇಳಿದ್ದಾರೆ. ತಮ್ಮ ಹಿಂದೂ ಹಿನ್ನೆಲೆ, ತಮ್ಮ ಕುಟುಂಬದ ಸದಸ್ಯರು ಮಾಡುತ್ತಿರುವ ಸೇವಾ ಕಾರ್ಯಗಳ ಬಗ್ಗೆ ವಿವರಿಸುತ್ತಿದ್ದಾರೆ.

ತಾನೊಬ್ಬ ಹಿಂದೂ ಎಂಬುದನ್ನು ನೆನಪಿಸಿರುವ ಸುನಕ್, ಸಾರ್ವಜನಿಕ ಸೇವೆಗೆ ತನಗೆ ಧರ್ಮವೇ ಮಾರ್ಗದರ್ಶನ ನೀಡುತ್ತಿದೆ ಎಂದಿದ್ದಾರೆ. ತಮ್ಮ ತಂದೆ, ತಾಯಿಯ ಜತೆಗೆ ಅತ್ತೆ ಸುಧಾ ಮೂರ್ತಿ ಮಾಡುತ್ತಿರುವ ಸಾಮಾಜಿಕ ಸೇವಾ ಕೆಲಸಗಳನ್ನೂ ಉಲ್ಲೇಖಿಸಿದ್ದಾರೆ. ತಾನು ಭಗವದ್ಗೀತೆ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದನ್ನು ನೆನಪಿಸಿದ್ದಾರೆ. ಹೀಗೆ ಹಿಂದೂಗಳ ಮನ ಗೆಲ್ಲಲು ತೀವ್ರ ಪ್ರಯತ್ನ ಮಾಡುತ್ತಿದ್ದಾರೆ.

ಲೇಬರ್ ಪಾರ್ಟಿಯ ಕೀರ್ ಸ್ಟಾರ್ಮರ್ ಕೂಡ ಕಿಂಗ್ಸ್‌ಬರಿಯ ಸ್ವಾಮಿನಾರಾಯಣ ಆಲಯಕ್ಕೆ ಭೇಟಿ ಕೊಟ್ಟು, ದೇವರ ದರ್ಶನ ಪಡೆದಿದ್ದಾರೆ. ಭಾರತದೊಂದಿಗೆ ಉತ್ತಮ ಸಂಬಂಧ ರೂಪಿಸುವ ಭರವಸೆ ನೀಡಿದ್ದಾರೆ. ‘ಬ್ರಿಟನ್‌ನಲ್ಲಿ ಹಿಂದೂಫೋಬಿಯಾಗೆ ಅವಕಾಶ ನೀಡುವುದಿಲ್ಲ’ ಎಂದು ಹೇಳುವ ಮೂಲಕ ಹಿಂದೂಗಳ ಮನವೊಲಿಕೆಗೆ ಯತ್ನಿಸಿದ್ದಾರೆ.

ಕೀರ್ ಸ್ಟಾರ್ಮರ್ ಮುಂದಿನ ಪ್ರಧಾನಿ?

ಬ್ರಿಟನ್‌ನಲ್ಲಿ ನಡೆದ ಉಪಚುನಾವಣೆಗಳು ಮತ್ತು ಸ್ಥಳೀಯ ಚುನಾವಣೆಗಳಲ್ಲಿ ಲೇಬರ್ ಪಕ್ಷ ಮುನ್ನಡೆ ಸಾಧಿಸಿತ್ತು. ಈ ಬಗ್ಗೆ ಮೇ ತಿಂಗಳಲ್ಲಿ ಪ್ರತಿಕ್ರಿಯಿಸಿದ್ದ ಪ್ರಧಾನಿ ರಿಷಿ ಸುನಕ್, ‘ಸಾರ್ವತ್ರಿಕ ಚುನಾವಣೆಯಲ್ಲಿ ಯಾವ ಪಕ್ಷವೂ ಬಹುಮತ ಪಡೆಯದೇ ಇರಬಹುದು’ ಎಂದು ಸೂಚ್ಯವಾಗಿ ಹೇಳಿದ್ದರು.

ರಿಷಿ ಸುನಕ್ ಅವರ ಪ್ರಧಾನಿ ಅವಧಿ ಹಾಗೂ 14 ವರ್ಷಗಳ ಕನ್ಸರ್ವೇಟಿವ್ ಪಕ್ಷದ ಆಡಳಿತ ಈ ಚುನಾವಣೆಯೊಂದಿಗೆ ಅಂತ್ಯವಾಗಲಿವೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ಬ್ರಿಟನ್‌ನ ಮುಂದಿನ ಪ್ರಧಾನಿ ಆಗುವುದು ಬಹುತೇಕ ನಿಶ್ಚಿತ ಎನ್ನಲಾಗುತ್ತಿದೆ. 

ಕೀರ್ ಸ್ಟಾರ್ಮರ್, ವಕೀಲರು. ಆರ್ಥಿಕ ಮತ್ತು ರಾಜಕೀಯ ಸ್ಥಿರತೆಗಾಗಿ ಲೇಬರ್ ಪಕ್ಷಕ್ಕೆ ಮತ ನೀಡಿ ಎಂದು ಪ್ರಚಾರ ಮಾಡಿ ಜನರನ್ನು ಸೆಳೆಯುತ್ತಿದ್ದಾರೆ. 2008 ಮತ್ತು 2013ರ ನಡುವೆ ಇಂಗ್ಲೆಂಡ್ ಮತ್ತು ವೇಲ್ಸ್‌ನ ಚೀಫ್ ಪ್ರಾಸಿಕ್ಯೂಟರ್ ಆಗಿದ್ದರು. ಜನರಿಂದ ದೂರ ಇರುತ್ತಾರೆ ಎನ್ನುವುದನ್ನು ಸೂಚಿಸಲು ಅವರ ವಿರೋಧಿಗಳು ‘ಸರ್ ಕೀರ್ ಸ್ಟಾರ್ಮರ್’ ಎಂದು ವ್ಯಂಗ್ಯ ಮಾಡುವುದುಂಟು. ಸಮೀಕ್ಷೆಗಳು ನಿಜವಾದರೆ, ದೀರ್ಘ ಕಾಲದ ನಂತರ, ಲೇಬರ್ ಪಕ್ಷದ ಪ್ರಧಾನಿ ಆಗಿ 61 ವರ್ಷದ ಸ್ಟಾರ್ಮರ್ ಆಡಳಿತ ನಡೆಸಲಿದ್ದಾರೆ.

ಸಿದ್ಧವಾಯಿತು ‘ಹಿಂದೂ ಪ್ರಣಾಳಿಕೆ’

2021ರ ಜನಗಣತಿಯ ಪ್ರಕಾರ, ಬ್ರಿಟನ್‌ನಲ್ಲಿ ಸುಮಾರು 10 ಲಕ್ಷ ಹಿಂದೂಗಳಿದ್ದು, ಮತದಾರರ ಪೈಕಿ ಗಮನಾರ್ಹ ಸಂಖ್ಯೆಯೆನಿಸಿಕೊಂಡಿದ್ದಾರೆ. ಇದೇ ಸೂಕ್ತ ಸಮಯ ಎಂದು ಅರಿತಿರುವ ಹಿಂದೂ ಸಮುದಾಯ ಕೂಡ ರಾಜಕೀಯ ಪಕ್ಷಗಳನ್ನು ಉತ್ತರದಾಯಿಗಳನ್ನಾಗಿಸಲು ಹೊಸ ತಂತ್ರ ಹೂಡಿದೆ. ಸಾರ್ವತ್ರಿಕ ಚುನಾವಣೆಯ ಕಾರಣಕ್ಕೆ ಬ್ರಿಟಿಷ್ ಹಿಂದೂ ಸಂಘಟನೆಗಳು ಮೊದಲ ಬಾರಿಗೆ ‘ಹಿಂದೂ ಪ್ರಣಾಳಿಕೆ’ ಸಿದ್ಧಪಡಿಸಿದ್ದು, ಚುನಾಯಿತ ಪ್ರತಿನಿಧಿಗಳು ಹಿಂದೂಗಳ ಧಾರ್ಮಿಕ ಕೇಂದ್ರಗಳನ್ನು ರಕ್ಷಿಸಬೇಕು ಮತ್ತು ಹಿಂದೂ ದ್ವೇಷವನ್ನು ಶಮನ ಮಾಡಬೇಕು ಎಂದು ಬೇಡಿಕೆ ಇಟ್ಟಿವೆ.

ಚುನಾವಣಾ ವಿಷಯಗಳು...

ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರ ಬಂದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದು.  2019ರ ಸಾರ್ವತ್ರಿಕ ಚುನಾವಣೆಯಲ್ಲಿ ಇದು ಪ್ರಮುಖ ವಿಚಾರವಾಗಿತ್ತು. 

ಏರುತ್ತಿರುವ ಹಣದುಬ್ಬರ, ಆರ್ಥಿಕ ಪ್ರಗತಿ ನಿಧಾನವಾಗಿರುವುದು, ಜೀವನ ವೆಚ್ಚ ಹೆಚ್ಚಳ, ವಲಸೆ ಸಮಸ್ಯೆ, ವಿದೇಶಾಂಗ ನೀತಿ, ಆರೋಗ್ಯ ಸೇವೆ ಈ ಬಾರಿಯ ಚುನಾವಣಾ ವಿಚಾರಗಳಾಗಿವೆ. ‍ಪಕ್ಷಗಳು ಇದೇ ವಿಚಾರಗಳನ್ನು ಇಟ್ಟುಕೊಂಡು ತಮ್ಮ ಚುನಾವಣಾ ಪ್ರಣಾಳಿಕೆಗಳನ್ನು ರೂಪಿಸಿವೆ. 

ರಾಜೀನಾಮೆ ಪರ್ವ ತಂದ ಸಂಕಷ್ಟ

ಚುನಾವಣೆ ಘೋಷಣೆಯಾದ ಬಳಿಕ 135 ಸಂಸದರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿರುವುದಷ್ಟೇ ಅಲ್ಲದೇ, ಚುನಾವಣಾ ಕಣದಿಂದಲೂ ದೂರ ಸರಿದಿದ್ದಾರೆ. ಅವರಲ್ಲಿ 78 ಮಂದಿ ಕನ್ಸರ್ವೇಟಿವ್ ಪಕ್ಷದವರಾಗಿದ್ದು, ರಿಷಿ ಸುನಕ್ ಸಂಪುಟದ ಸಚಿವರು ಹಾಗೂ ಸಂಸದರಾಗಿದ್ದಾರೆ.

ಪ್ರತಿ ಚುನಾವಣೆ ಸಮಯದಲ್ಲಿಯೂ ಒಂದಷ್ಟು ಮಂದಿ ಕಣದಿಂದ ದೂರ ಸರಿಯುವ ಪರಂಪರೆ ಬ್ರಿಟನ್‌ನಲ್ಲಿ ಹಿಂದಿನಿಂದಲೂ ಇದೆ. 

2010ರಲ್ಲಿ 149 ಸಂಸದರು ಕಣದಿಂದ ನಿವೃತ್ತರಾಗಿದ್ದರು. 2015ರಲ್ಲಿ 90, 2017ರಲ್ಲಿ 31 ಮತ್ತು 2019ರಲ್ಲಿ 74 ಮಂದಿ ನಿವೃತ್ತರಾಗಿದ್ದರು.

ಕಣದಿಂದ ನಿವೃತ್ತರಾಗುತ್ತಿರುವುದಕ್ಕೆ ಒಬ್ಬೊಬ್ಬ ಸಂಸದ ಒಂದೊಂದು ಕಾರಣ ನೀಡಿದ್ದಾರೆ. ಆದರೆ, ಅವೆಲ್ಲವೂ ನೆಪಗಳಾಗಿದ್ದು, ಈ ಬಾರಿ ಕನ್ಸರ್ವೇಟಿವ್ ಪಕ್ಷ ಸೋಲುತ್ತದೆ ಎಂದು ಮನಗಂಡೇ ಹೆಚ್ಚಿನವರು ಕಣದಿಂದ ದೂರ ಉಳಿಯುತ್ತಿದ್ದಾರೆ ಎನ್ನಲಾಗುತ್ತಿದೆ.

ಆಧಾರ: ಪಿಟಿಐ, ಬಿಬಿಸಿ, ಯುಕೆ ಪಾರ್ಲಿಮೆಂಟ್ ವೆಬ್‌ಸೈಟ್, ಅಲ್‌ಜಝೀರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT