ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಳ–ಅಗಲ | ‘ರಾಷ್ಟ್ರೀಯ ವಿಪತ್ತು’ ಮಾನದಂಡವೇ ಇಲ್ಲ

Published : 4 ಆಗಸ್ಟ್ 2024, 23:34 IST
Last Updated : 4 ಆಗಸ್ಟ್ 2024, 23:34 IST
ಫಾಲೋ ಮಾಡಿ
Comments
ದೇಶದ ಯಾವುದೇ ಭಾಗದಲ್ಲಿ ತೀವ್ರ ನೆರೆ, ಬರ ಇತ್ಯಾದಿ ಉಂಟಾದಾಗಲೂ ಅದನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಬೇಕು ಎನ್ನುವ ಬೇಡಿಕೆ ಬರುತ್ತದೆ. ವಿಚಿತ್ರ ಎಂದರೆ, ಯಾವುದೇ ಒಂದು ವಿಕೋಪವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸುವ ಬಗ್ಗೆ ಕೇಂದ್ರದ ನಿಯಮಗಳಲ್ಲಿ ಮಾನದಂಡಗಳೇ ಇಲ್ಲ. ಆದರೂ ಈ ಕುರಿತ ಬೇಡಿಕೆ ಈಗಲೂ ನಿರಂತರವಾಗಿ ಒಂದಿಲ್ಲೊಂದು ರಾಜ್ಯದಿಂದ ಕೇಳಿಬರುತ್ತಲೇ ಇದೆ. ಕೇಂದ್ರ ಸರ್ಕಾರವು ಕಾಲದಿಂದ ಕಾಲಕ್ಕೆ ವಿಕೋಪಗಳ ತೀವ್ರತೆಯ ಆಧಾರದ ಮೇಲೆ, ತನ್ನ ವಿವೇಚನೆಯ ಮೇರೆಗೆ ಹಣಕಾಸಿನ ನೆರವು ನೀಡುತ್ತಾ ಬರುತ್ತಿದೆ...

ಕೇರಳದ ವಯನಾಡ್ ಜಿಲ್ಲೆಯಲ್ಲಿ ಘಟಿಸಿರುವ ಮಹಾದುರಂತವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಪರಿಗಣಿಸಬೇಕು ಎಂದು ವಿಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ಅದರ ಬೆನ್ನಲ್ಲೇ ರಾಷ್ಟ್ರೀಯ ವಿಪತ್ತು ಘೋಷಣೆಯ ಸಂಬಂಧ ವಾದ ಪ್ರತಿವಾದಗಳು ಆರಂಭವಾಗಿವೆ. ಹಾಗೆ ಘೋಷಣೆ ಮಾಡಲು ಸಾಧ್ಯವೇ ಎಂಬುದನ್ನು ಕಾನೂನಿನ ನೆಲೆಯಲ್ಲಿ ಪರಿಶೀಲನೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಹೇಳಿದ್ದರೆ, ನೈಸರ್ಗಿಕ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ನಿಯಮದಲ್ಲಿ ಅವಕಾಶ ಇಲ್ಲ ಎಂದು ಬಿಜೆಪಿ ಮುಖಂಡ ವಿ.ಮುರಳೀಧರನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 

2018ರಲ್ಲಿ ಕೇರಳದಲ್ಲಿ ಭಾರಿ ಮಳೆ ಸುರಿದು, ಪ್ರವಾಹ ಉಂಟಾಗಿ 400 ಮಂದಿ ಸಾವಿಗೀಡಾಗಿದ್ದರು. ಆಗಲೂ ಇದೇ ರೀತಿಯ ಬೇಡಿಕೆ ಬಂದಿತ್ತು. ಕೇರಳದ ಆಡಳಿತಾರೂಢ ಎಲ್‌ಡಿಎಫ್‌ ಮುಖಂಡರು, ಆಗ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಸೇರಿದಂತೆ ಹಲವರು ಈ ಬಗ್ಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ, ಕೇಂದ್ರ ಸರ್ಕಾರವು ಕೇರಳದ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿರಲಿಲ್ಲ. ಈಗ ಕೂಡ ಆ ರಾಜ್ಯವನ್ನು ನಡುಗಿಸಿರುವ ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವ ಬಗ್ಗೆ ಅನುಮಾನಗಳಿವೆ. ಏಕೆಂದರೆ, ಕಾನೂನಿನ ಅಡಿಯಲ್ಲಿ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವ ಬಗ್ಗೆ ಸ್ಪಷ್ಟ ಮಾರ್ಗಸೂಚಿಯೇ ಇಲ್ಲ.

1999ರಲ್ಲಿ ಒಡಿಶಾಕ್ಕೆ ಚಂಡಮಾರುತ ಅಪ್ಪಳಿಸಿತ್ತು. ಅದೇ ರೀತಿ 2001ರಲ್ಲಿ ಗುಜರಾತ್‌ನಲ್ಲಿ ತೀವ್ರ ಭೂಕ‍‍ಂಪ ಸಂಭವಿಸಿತ್ತು. ಅವರೆಡರ ಬಗ್ಗೆ ‘ಈ ಹಿಂದೆಂದೂ ಇಲ್ಲದಷ್ಟು ತೀವ್ರತೆಯ ವಿಕೋಪಗಳು’ ಎಂದು ಆಗ ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವರಾಗಿದ್ದ ಶ್ರೀಪಾದ್ ನಾಯ್ಕ್ ಬಣ್ಣಿಸಿದ್ದರು. ಸಂತ್ರಸ್ತರಿಗೆ ಕೇಂದ್ರ ಪುನರ್ವಸತಿ ಕಲ್ಪಿಸುವುದೇ ಎನ್ನುವ ಪ್ರಶ್ನೆಗೆ ರಾಜ್ಯಸಭೆಯಲ್ಲಿ (ಮಾರ್ಚ್ 15, 2001) ಉತ್ತರಿಸಿದ್ದ ಅವರು, ‘ವಿಪತ್ತು ಪರಿಹಾರ ಎನ್ನುವುದು ಪ್ರಾಥಮಿಕವಾಗಿ ರಾಜ್ಯದ ಕರ್ತವ್ಯ’ ಎಂದು ಹೇಳಿದ್ದರು. ರಾಜ್ಯ ಸರ್ಕಾರದ ಪ್ರಯತ್ನಗಳೊಂದಿಗೆ ಕೇಂದ್ರ ಸರ್ಕಾರವು ಕೈಜೋಡಿಸಲಿದೆ ಎಂದಿದ್ದರು.

ಮತ್ತೊಮ್ಮೆ, ವಿವಿಧ ರಾಜ್ಯಗಳಲ್ಲಿ ಸಂಭವಿಸಿದ ‍ಪ್ರಾಕೃತಿಕ ವಿಕೋಪಗಳು ಹಾಗೂ ಅವು ಸಂಭವಿಸಿದ ರಾಜ್ಯಗಳಿಗೆ ಕೇಂದ್ರ ಸರ್ಕಾರದ ನೆರವಿನ ಬಗ್ಗೆ ಕೇಳಿದ್ದ ಪ್ರಶ್ನೆಗೆ ಲೋಕಸಭೆಯಲ್ಲಿ ಆಗ (ಜುಲೈ 24, 2018) ಗೃಹ ಖಾತೆಯ ರಾಜ್ಯ ಸಚಿವರಾಗಿದ್ದ ಕಿರಣ್ ರಿಜಿಜು ಉತ್ತರಿಸಿದ್ದರು. ‘ವಿಪತ್ತು ನಿರ್ವಹಣೆಯ ಪ್ರಾಥಮಿಕ ಜವಾಬ್ದಾರಿಯು ರಾಜ್ಯಗಳದ್ದಾಗಿದೆ. ವಿಕೋಪದ ತೀವ್ರತೆಗೆ ತಕ್ಕಂತೆ ರಾಜ್ಯವು
ರಾಜ್ಯ ವಿಪತ್ತು ಪರಿಹಾರ ನಿಧಿಯ (ಎಸ್‌ಡಿಆರ್‌ಎಫ್‌) ಮೂಲಕ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತದೆ. ಹೆಚ್ಚುವರಿಯಾಗಿ, ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್‌) ನೆರವು ನೀಡಲಾಗುತ್ತದೆ. ಹಣಕಾಸಿನ ನೆರವು ಪರಿಹಾರ ಕ್ರಮಗಳಿಗೇ ಹೊರತು ಸಂಭವಿಸಿರುವ/ಪ್ರತಿಪಾದನೆ ಮಾಡಲಾಗುವ ನಷ್ಟಕ್ಕಾಗಿ ಅಲ್ಲ’ ಎಂದಿದ್ದರು.

ವಿಪತ್ತು ಎಂದರೆ...
2005ರ ವಿಪತ್ತು ನಿರ್ವಹಣಾ ಕಾಯ್ದೆಯು ವಿಪತ್ತನ್ನು ಈ ರೀತಿ ವ್ಯಾಖ್ಯಾನಿಸುತ್ತದೆ: ‘ಯಾವುದೇ ಪ್ರದೇಶದಲ್ಲಿ ನೈಸರ್ಗಿಕವಾಗಿ ಅಥವಾ ಮಾನವ ನಿರ್ಮಿತವಾದ ಅಥವಾ ಆಕಸ್ಮಿಕ ಇಲ್ಲವೇ ನಿರ್ಲಕ್ಷ್ಯದಿಂದಾಗಿ ಸಂಭವಿಸುವ, ಗಣನೀಯ ಪ್ರಮಾಣದ ಜೀವ ಹಾನಿ ಅಥವಾ ಮನುಷ್ಯರಿಗೆ ಸಂಕಟ ನೀಡುವ ಅಥವಾ ಆಸ್ತಿಗಳನ್ನು ಧ್ವಂಸಗೊಳಿಸುವ ಅಥವಾ ಅವುಗಳಿಗೆ ಹಾನಿ ಮಾಡುವ ಅಥವಾ ಪರಿಸರಕ್ಕೆ ಧಕ್ಕೆ ಉಂಟು ಮಾಡುವ ಮಹಾವಿನಾಶ, ದುರಂತ, ಆ‍ಪತ್ತು ಅಥವಾ ಘೋರವಾದಂತಹ ದುರ್ಘಟನೆ’. ಬಾಧಿತ ಪ್ರದೇಶದಲ್ಲಿ ನೆಲೆಸಿರುವ ಸಮುದಾಯಕ್ಕೆ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದಷ್ಟು ತೀವ್ರತೆಯ ಹಾನಿಯಾಗಿದ್ದರೆ ಅದನ್ನು ‘ವಿಪತ್ತು’ ಎಂದು ಕಾಯ್ದೆ ಪರಿಗಣಿಸುತ್ತದೆ.

ಮೂರು ದಶಕಗಳಿಂದ ಚರ್ಚೆ

ದೇಶದ ವಿವಿಧೆಡೆ ದೊಡ್ಡ ಮಟ್ಟದ ವಿಪತ್ತು ಸಂಭವಿಸಿದಾಗ ಅದನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಬೇಕು ಎಂಬ ಕೂಗು ಕೇಳಿ ಬರುತ್ತಲೇ ಇರುತ್ತದೆ. ಆದರೆ, ನಿಯಮಗಳಲ್ಲಿ ಅದಕ್ಕೆ ಅವಕಾಶ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಾ ಬರುತ್ತಿದೆ.

2005ರ ವಿಪತ್ತು ನಿರ್ವಹಣಾ ಕಾಯ್ದೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗಸೂಚಿಗಳು, ನೀತಿಗಳಲ್ಲೂ ಈ ಬಗ್ಗೆ ಪ್ರಸ್ತಾಪವಿಲ್ಲ. 

ಸಂಸತ್ತಿನಲ್ಲಿ ಈ ಹಿಂದೆ ಈ ವಿಚಾರದ ಬಗ್ಗೆ ಸದಸ್ಯರು ಪ್ರಶ್ನೆ ಕೇಳಿದಾಗ ಗೃಹ ಇಲಾಖೆ ನೀಡಿರುವ ಉತ್ತರವೂ ಇದನ್ನೇ ಹೇಳುತ್ತದೆ. 

1990ರ ದಶಕದಿಂದಲೂ ಹಲವು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಮನವಿ ಮಾಡುತ್ತಲೇ ಇವೆ. 10ನೇ ಹಣಕಾಸು ಆಯೋಗದ (1995–2000) ಮುಂದೆಯೂ ಭಾರಿ ಸಾವು ನೋವಿಗೆ ಮತ್ತು ಗಣನೀಯ ಪ್ರಮಾಣದ ನಷ್ಟಕ್ಕೆ ಕಾರಣವಾದ ವಿಪತ್ತಿನ ಸಂದರ್ಭದಲ್ಲಿ ಕೇಂದ್ರದಿಂದ ಹೆಚ್ಚು ನೆರವು ಸಿಗಬೇಕು ಎಂದು ರಾಜ್ಯಗಳು ಮನವಿ ಮಾಡಿದ್ದವು. 

ಆಯೋಗವು ಇದಕ್ಕೆ ಸ್ಪಂದಿಸಿತ್ತು. ಅಪರೂಪದ ಮತ್ತು ಹೆಚ್ಚು ದಾರುಣವಾಗಿರುವ ವಿಪತ್ತನ್ನು ಆಯೋಗ ‘ರಾಷ್ಟ್ರೀಯ ವಿಪತ್ತು’ ಎಂದು ಕರೆಯದಿದ್ದರೂ, ‌ಕೇಂದ್ರ ಸರ್ಕಾರವು ಅದನ್ನು ‘ರಾಷ್ಟ್ರೀಯ ವಿಪತ್ತು’ ಎಂಬಂತೆ ನಿರ್ವಹಿಸಬೇಕು; ವಿಪತ್ತು ನಿರ್ವಹಣಾ ನಿಧಿಗೆ (ಸಿಆರ್‌ಎಫ್‌) ಸೀಮಿತವಾಗದೆ, ಅದಕ್ಕಿಂತ ಹೆಚ್ಚಿನ ಆರ್ಥಿಕ ನೆರವು ಮತ್ತು ಬೆಂಬಲ ನೀಡಬೇಕು ಎಂದು ಹೇಳಿತ್ತು. 

ಅಲ್ಲದೇ, ಇಂತಹ ಸಂದರ್ಭಗಳಲ್ಲಿ ಕೇಂದ್ರದೊಂದಿಗೆ ರಾಜ್ಯಗಳೂ ಕೈಜೋಡಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದ ಆಯೋಗ, ಅದಕ್ಕಾಗಿ ವಿಪತ್ತು ಪರಿಹಾರ ರಾಷ್ಟ್ರೀಯ ನಿಧಿಯನ್ನು ಸ್ಥಾಪಿಸಬೇಕು; ಕೇಂದ್ರ ಮತ್ತು ರಾಜ್ಯಗಳು ಪ್ರತಿನಿಧಿಸುವ ರಾಷ್ಟ್ರೀಯ ವಿಪತ್ತು ಪರಿಹಾರ ಸಮಿತಿಯು ಈ ನಿಧಿಯನ್ನು ನಿರ್ವಹಿಸಬೇಕು ಎಂದು ಹೇಳಿತ್ತು. 

2001ರಲ್ಲಿ ಪ್ರಧಾನಿ ನೇತೃತ್ವದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿಯು ‘ರಾಷ್ಟ್ರೀಯ ವಿಪತ್ತು’ ಘೋಷಣೆಗೆ ಸಂಬಂಧಿಸಿದ ವಿಚಾರ ಚರ್ಚಿಸಿತ್ತಾದರೂ, ಮಾನದಂಡಗಳನ್ನು ನಿಗದಿಪಡಿಸಿರಲಿಲ್ಲ. 

2013ರಲ್ಲಿ ಉತ್ತರಾಖಂಡದಲ್ಲಿ ಸಂಭವಿಸಿದ ಪ್ರವಾಹ ಮತ್ತು 2014ರಲ್ಲಿ ಆಂಧ್ರಪ್ರದೇಶದಲ್ಲಿ ಹುಡ್‌ಹುಡ್‌ ಚಂಡಮಾರುತದ ಸಂದರ್ಭದಲ್ಲಿ ಅವುಗಳನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಬಂದಿತ್ತು. ಆದರೆ, ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ಜರುಗಿಸಿರಲಿಲ್ಲ. ಬದಲಿಗೆ ಅವುಗಳನ್ನು ‘ತೀವ್ರ ಸ್ವರೂಪದ ವಿಪತ್ತು’ ಎಂದು ಪರಿಗಣಿಸಿತ್ತು.

‘ಹೆಚ್ಚು ತೀವ್ರತೆಯ ವಿಪತ್ತು’: ಮಾನದಂಡಗಳು

  • ವಿಪತ್ತಿನ ತೀವ್ರತೆ ಮತ್ತು ಪರಿಣಾಮ

  • ಪರಿಹಾರ ನೆರವಿನ ಅಗತ್ಯ

  • ಸಮಸ್ಯೆಯನ್ನು ನಿಭಾಯಿಸಲು ರಾಜ್ಯ ಹೊಂದಿರುವ ಸಾಮರ್ಥ್ಯ

  •  ಸಹಾಯ ಮತ್ತು ಪರಿಹಾರ ನೀಡಲು ಇರುವ ಪರ್ಯಾಯ ವ್ಯವಸ್ಥೆಗಳು

–10ನೇ ಹಣಕಾಸು ಆಯೋಗದ ವರದಿ

2018ರಲ್ಲಿ ಕೇರಳಕ್ಕೆ ವಿದೇಶಿ ಸರ್ಕಾರಗಳ ನೆರವು ತಿರಸ್ಕರಿಸಿದ್ದ ಕೇಂದ್ರ

2018ರಲ್ಲಿ ಕೇರಳದಲ್ಲಿ ಪ್ರವಾಹ ಉಂಟಾಗಿದ್ದ ಸಂದರ್ಭದಲ್ಲೂ ‘ರಾಷ್ಟ್ರೀಯ ವಿಪತ್ತು’ ಘೋಷಣೆ ವಿಚಾರ ಚರ್ಚೆಗೆ ಬಂದಿತ್ತು. ಪರಿಹಾರ ಕಲ್ಪಿಸಲು ಹೆಚ್ಚು ನೆರವು ನೀಡುವಂತೆ ಕೇರಳ ಕೇಂದ್ರಕ್ಕೆ ಮನವಿಯನ್ನೂ ಮಾಡಿತ್ತು. 

ಯುಎಇ, ಕತಾರ್‌, ಮಾಲ್ದೀವ್ಸ್‌  ಸೇರಿದಂತೆ, ಕೇರಳದ ಜನರು ಹೆಚ್ಚು ನೆಲೆಸಿರುವ ರಾಷ್ಟ್ರಗಳ ಸರ್ಕಾರಗಳು ನೆರವು ನೀಡಲು ಮುಂದೆ ಬಂದಿದ್ದವು. ಕೇಂದ್ರ ಸರ್ಕಾರ ಇದನ್ನು ತಿರಸ್ಕರಿಸಿತ್ತು. ಕೇಂದ್ರದ ಈ ನಿರ್ಧಾರ ಭಾರಿ ಚರ್ಚೆ ಹುಟ್ಟುಹಾಕಿತ್ತು. 

ಸರ್ಕಾರದ ವಿಪತ್ತು ನೆರವಿನ ನೀತಿಯ ಅನುಸಾರ, ಹೊರದೇಶಗಳ ಸರ್ಕಾರದ ನೆರವನ್ನು ಸ್ವೀಕರಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತ್ತು. 

ಕೇಳಿದಷ್ಟು ಹಣವನ್ನು ಕೇಂದ್ರ ನೀಡಿಲ್ಲ ಎಂದು ಕೇರಳ ಸರ್ಕಾರ ಆರೋಪಿಸಿತ್ತು. ಅದಕ್ಕೆ ಪ್ರತಿಯಾಗಿ, ನೀಡಿದ್ದ ಹಣವನ್ನು ಕೇರಳ ಸಮರ್ಪಕವಾಗಿ ಬಳಸಿಕೊಂಡು, ಅದಕ್ಕೆ ದಾಖಲೆ ಸಲ್ಲಿಸಿಲ್ಲ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿತ್ತು. 

ಕಾನೂನು ತಿದ್ದುಪಡಿಗೆ ಮುಂದಾದ ಕೇಂದ್ರ
ವಿಪತ್ತು ನಿರ್ವಹಣಾ ಕಾನೂನಿಗೆ ತಿದ್ದುಪಡಿ ತರುವ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದೆ. ಈಗಿರುವ ಕಾಯ್ದೆಯನ್ನೇ ಬಲಪಡಿಸುವ ಉದ್ದೇಶದಿಂದ ಮಸೂದೆ ಮಂಡಿಸಲಾಗಿದೆ ಎಂದು ಸರ್ಕಾರ ಹೇಳಿದೆ. ವಿಪತ್ತು ನಿರ್ವಹಣಾ ಯೋಜನೆಗಳನ್ನು ರೂಪಿಸಲು ಮತ್ತು ಅನುಷ್ಠಾನದ ಮೇಲ್ವಿಚಾರಣೆ ಮಾಡಲು ಸಾಂಸ್ಥಿಕ ವ್ಯವಸ್ಥೆಯ ಅಗತ್ಯವಿದೆ. ಇದಕ್ಕಾಗಿ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕೆಲವು ಪ್ರಾಧಿಕಾರಗಳು, ಸಮಿತಿಗಳನ್ನು ರಚಿಸಬೇಕಾಗಿದೆ. ಈ ಉದ್ದೇಶಕ್ಕೆ ತಿದ್ದುಪಡಿ ಮಸೂದೆಯನ್ನು ರೂಪಿಸಲಾಗಿದೆ ಎಂದು ಮಸೂದೆಯಲ್ಲಿ ವಿವರಿಸಲಾಗಿದೆ. ಈ ತಿದ್ದುಪಡಿಗೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಇದರ ಸಂವಿಧಾನಬದ್ಧತೆಯನ್ನು ಪ್ರಶ್ನಿಸಿವೆ.

ಆಧಾರ: ಪಿಟಿಐ, 10ನೇ ಹಣಕಾಸು ಆಯೋಗದ ವರದಿ, ಸಂಸತ್ತಿನಲ್ಲಿ ಸಚಿವರ ಉತ್ತರಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT