ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ | ವಿಶ್ವ ಪರಿಸರ ದಿನ ಇಂದು: ಮಾಲಿನ್ಯವನ್ನು ತಡೆಯೋಣ
ಆಳ–ಅಗಲ | ವಿಶ್ವ ಪರಿಸರ ದಿನ ಇಂದು: ಮಾಲಿನ್ಯವನ್ನು ತಡೆಯೋಣ
Published 5 ಜೂನ್ 2023, 4:49 IST
Last Updated 5 ಜೂನ್ 2023, 4:49 IST
ಅಕ್ಷರ ಗಾತ್ರ

ಸುನಿತಾ ನಾರಾಯಣ್‌

‘ಪ್ಲಾಸ್ಟಿಕ್‌ ಮಾಲಿನ್ಯವನ್ನು ತಡೆಯಿರಿ’ ಎಂಬುದು ಈ ಸಾಲಿನ ವಿಶ್ವ  ಪರಿಸರ ದಿನಾಚರಣೆಯ ವಿಷಯ. ಏಕಬಳಕೆಯ ಪ್ಲಾಸ್ಟಿಕ್‌ಗಳನ್ನು ದೇಶದಲ್ಲಿ ಈಗಾಗಲೇ ನಿಷೇಧ ಮಾಡಲಾಗಿದೆ. ಆದರೆ, ನಿಷೇಧ ಪರಿಣಾಮಕಾರಿ ಆಗಿಲ್ಲ. ಏಕಬಳಕೆ ಪ್ಲಾಸ್ಟಿಕ್‌ಗಳು ಈಗಲೂ ಲಭ್ಯ ಇವೆ. ಪ್ಲಾಸ್ಟಿಕ್‌ ಸರ್ವಾಂತರ್ಯಾಮಿ ಎಂಬುದು ನಮಗೆಲ್ಲ ತಿಳಿದಿದೆ. ಅದರಿಂದ ಆಗುವ ಅಪಾಯದ ಅರಿವೂ ಇದೆ. ಹಾಗಿದ್ದರೂ ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಲು ನಾವು ಸಿದ್ದವಿಲ್ಲ. ಪರಿಸರ ದಿನದ ಅಂಗವಾಗಿ, ಪ್ಲಾಸ್ಟಿಕ್‌ ಕುರಿತ ಜಾಗೃತಿಯ ಲೇಖನ

ಹಿಂದೂ ಧರ್ಮದಲ್ಲಿ ಸೃಷ್ಟಿಕರ್ತ ಬ್ರಹ್ಮನಿಗಿಂತ, ಲಯದ ಹೊಣೆ ಹೊತ್ತ ಶಿವನಿಗೆ ಹೆಚ್ಚಿನ ಪ್ರಾಮುಖ್ಯತೆ ಇರಲು ಹಲವು ಕಾರಣಗಳಿವೆ. ದೀರ್ಘಕಾಲ ಬಾಳಿಕೆಯ ಮತ್ತು ಸುಲಭವಾಗಿ ನಾಶವಾಗದ ವಸ್ತುಗಳೆಲ್ಲವೂ ಅತ್ಯದ್ಭುತ ಎಂದು ಪರಿಗಣಿಸಿದ್ದು, ನಾವು ಮಾಡಿದ ದೊಡ್ಡ ತಪ್ಪು ಎಂಬುದನ್ನು ಈ ಹಿಂದಿನ 50 ವರ್ಷಗಳಲ್ಲಿ ನಾವು ಕಲಿತಿದ್ದೇವೆ. ಡಿಡಿಟಿಯನ್ನೇ ಉದಾಹರಣೆಗೆ ತೆಗೆದುಕೊಳ್ಳಿ. ಈ ಕೀಟನಾಶಕವು ಪರಿಸರದಲ್ಲಿ ದೀರ್ಘಕಾಲದವರೆಗೆ ಉಳಿಯುತ್ತದೆ. ಈಗ ಅದು ಪಕ್ಷಿಗಳ ಮೊಟ್ಟೆಗಳು ಮತ್ತು ಮಾನವನ ರಕ್ತವನ್ನೂ ಪ್ರವೇಶಿಸಿದೆ. ನಾಶ ಮಾಡಲು ಆಗದೇ ಇರುವ ಕ್ಲೋರೋಫ್ಲೋರೊಕಾರ್ಬನ್‌ಗಳು ನಮ್ಮ ಓಝೋನ್‌ ಪದರದಲ್ಲಿ ರಂಧ್ರವನ್ನುಂಟು ಮಾಡಿವೆ. ಇಂಗಾಲದ ಡೈಆಕ್ಸೈಡ್‌ಗಳು ಇನ್ನೂ ವಿನಾಶಕಾರಿ. ನಾವು ಪಳೆಯುಳಿಕೆ ಇಂಧನಗಳನ್ನು ದಹಿಸಿದಾಗ ಉಂಟಾಗುವ ಇಂಗಾಲದ ಡೈಆಕ್ಸೈಡ್‌ ನಮ್ಮ ವಾತಾವರಣದಲ್ಲಿ 150–200 ವರ್ಷಗಳವರೆಗೆ ಉಳಿಯುತ್ತದೆ. ಅದರ ಪರಿಣಾಮವೇ ವಿಧ್ವಂಸಕಾರಿ ಹವಾಮಾನ ವೈಪರೀತ್ಯ.

‘ಪ್ಲಾಸ್ಟಿಕ್‌ ಮಾಲಿನ್ಯವನ್ನು ತಡೆಯಿರಿ’ ಎಂಬುದು ಈ ಸಾಲಿನ ವಿಶ್ವ  ಪರಿಸರ ದಿನಾಚರಣೆಯ ವಿಷಯ. ಈ ಸಂದರ್ಭದಲ್ಲಿ ಧರ್ಮ ಮತ್ತು ವಿಜ್ಞಾನದ ಸಮ್ಮಿಲನ ಅತ್ಯಂತ ಮುಖ್ಯವಾದುದು. ಮೇಲೆ ಹೇಳಲಾದಂತಹ ‘ಅತ್ಯದ್ಭುತ ವಸ್ತು’ಗಳಲ್ಲಿ ಪ್ಲಾಸ್ಟಿಕ್‌ ಸಹ ಒಂದು. ನಮ್ಮ ಬದುಕಿನ ಎಲ್ಲಾ ಅಗತ್ಯಗಳಲ್ಲೂ ಇರುವ ಸರ್ವಾಂತರ್ಯಾಮಿ ಪ್ಲಾಸ್ಟಿಕ್‌. ಅದು ದೀರ್ಘಕಾಲ ಬಾಳಿಕೆ ಬರುತ್ತದೆ ಮತ್ತು ಎಲ್ಲೆಡೆಯೂ, ಅಂದರೆ ನೀರಿನ ಕೊಳವೆಯಿಂದ ಚಿಪ್ಸ್‌ ಪ್ಯಾಕಿಂಗ್‌ವರೆಗೆ ಅದನ್ನು ಬಳಸಬಹುದು ಎಂಬುದೇ, ಅದರ ಪ್ರಾಮುಖ್ಯವನ್ನು ಹೆಚ್ಚಿಸಿದೆ. ಪ್ಲಾಸ್ಟಿಕ್‌ನ ಈ ಲಕ್ಷಣಗಳೇ, ನಮ್ಮ ಪರಿಸರಕ್ಕೆ ಇಂದು ಮಾರಕವಾಗಿದೆ. ಮನುಷ್ಯನು ಪರಿಸರವನ್ನು ಹಾಳುಗೆಡವುತ್ತಿರುವುದರ  ಸಂಕೇತವಾಗಿ ಪ್ಲಾಸ್ಟಿಕ್‌ ಇದೆ. ಏಕೆಂದರೆ, ಎಲ್ಲಾದರೂ ಪ್ಲಾಸ್ಟಿಕ್‌ ಕಂಡರೆ ಆ ಸ್ಥಳದಲ್ಲಿ ಮನುಷ್ಯನಿದ್ದಾನೆ ಎಂದು ಸುಲಭವಾಗಿ ಹೇಳಬಹುದು. ಇದಕ್ಕಿಂತಲೂ ದುರ್ಬರವಾದ ಸ್ಥಿತಿಯೆಂದರೆ, ಪ್ಲಾಸ್ಟಿಕ್‌ ಈಗ ಸಮುದ್ರದಲ್ಲೂ ರಾಶಿರಾಶಿ ಬಿದ್ದಿದೆ. ಅದು ಮೀನಿನ ಮೂಲಕ ನಮ್ಮ ಆಹಾರ ಸರಪಣಿಯನ್ನೂ ಸೇರಿದೆ. ಇದು ನಿಜಕ್ಕೂ ಒಳ್ಳೆಯ ಸುದ್ದಿ ಅಲ್ಲ.

ಹೀಗಾಗಿಯೇ, ಪ್ಲಾಸ್ಟಿಕ್‌ ಎಂಬ ಉಪದ್ರವವನ್ನು ನಿರ್ವಹಿಸುವಲ್ಲಿ ನಾವು ಏನನ್ನೆಲ್ಲಾ ಮಾಡಲೇಬೇಕು ಎಂಬುದು ಈ ಬಾರಿಯ ವಿಶ್ವ ಪರಿಸರ ದಿನದ ಕೇಂದ್ರ ವಿಷಯವಾಗಿದೆ. ಭಾರತದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯವನ್ನು ನಿರ್ವಹಣೆ ಮತ್ತು ವಿಲೇವಾರಿ ಮಾಡಲು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಈಚೆಗೆ ಎರಡು ಕಾನೂನುಗಳನ್ನು ಜಾರಿಗೆ ತಂದಿದೆ. ಈ ಕಾನೂನುಗಳು 19 ಸ್ವರೂಪದ ಪ್ಲಾಸ್ಟಿಕ್‌ಗಳನ್ನು ‘ಏಕಬಳಕೆಯ ಪ್ಲಾಸ್ಟಿಕ್‌’ ಎಂದು ವರ್ಗೀಕರಿಸಿದೆ. ಮತ್ತು 19 ಸ್ವರೂಪದ ಏಕಬಳಕೆಯ ಪ್ಲಾಸ್ಟಿಕ್‌ಗಳ ತಯಾರಿಕೆ ಮತ್ತು ಬಳಕೆಯನ್ನು ನಿಷೇಧಿಸಿದೆ. ಇದಕ್ಕಾಗಿ ತಯಾರಕರ ವಿಸ್ತೃತ ಹೊಣೆಗಾರಿಕೆ ನಿಯಮಗಳನ್ನು (ಇಪಿಆರ್‌) ರೂಪಿಸಲಾಗಿದೆ. ಈ ಇಪಿಆರ್‌ ನಿಯಮಗಳ ಪ್ರಕಾರ, ಯಾವುದೇ ಕಂಪನಿ ತಾನು ತಯಾರಿಸುವ ಪ್ಲಾಸ್ಟಿಕ್‌ ತ್ಯಾಜದಷ್ಟೇ ಪ್ಲಾಸ್ಟಿಕ್‌ ಅನ್ನು ಮರುಬಳಕೆ ಮಾಡಬೇಕು ಇಲ್ಲವೇ ವೈಜ್ಞಾನಿಕವಾಗಿ ಮತ್ತು ಸುರಕ್ಷಿತವಾಗಿ ವಿಲೇವಾರಿ ಮಾಡಬೇಕು.

ಕೆಟ್ಟ ಸುದ್ದಿ ಏನೆಂದರೆ, ದೇಶದಲ್ಲಿ ಉತ್ಪಾದನೆಯಾಗುತ್ತಿರುವ ಎಲ್ಲಾ ಪ್ಲಾಸ್ಟಿಕ್‌ ತ್ಯಾಜ್ಯವನ್ನು ನಿರ್ವಹಣೆ ಮಾಡುವಲ್ಲಿ ಈ ಕಾನೂನುಗಳು ಪರಿಣಾಮಕಾರಿ ಆಗಿಲ್ಲ. ಏಕಬಳಕೆಯ ಪ್ಲಾಸ್ಟಿಕ್‌ಗಳು ಈಗಲೂ ಲಭ್ಯವಿವೆ. ತಯಾರಿಕೆ ಮತ್ತು ಬಳಕೆಗೆ ಅನುಮತಿ ಇರುವ ಏಕಬಳಕೆಯ ಪ್ಲಾಸ್ಟಿಕ್‌ನ ಗಾತ್ರ (ಮೈಕ್ರಾನ್‌ಗಳಲ್ಲಿ) ಎಷ್ಟು ಇರಬೇಕು ಎಂಬುದರ ಬಗ್ಗೆ ಗೊಂದಲಗಳಿವೆ. ಈ ಕಾನೂನುಗಳಲ್ಲಿನ ಅಪಾರದರ್ಶಕತೆ ಮತ್ತು ಅನುಷ್ಠಾನದಲ್ಲಿನ ಲೋಪಗಳ ಕಾರಣದಿಂದ ಇಪಿಆರ್‌ ವ್ಯವಸ್ಥೆ ದುರ್ಬಲವಾಗಿದೆ. ತಯಾರಿಕಾ ಕಂಪನಿಗಳು ಬಳಸುತ್ತಿರುವ ಪ್ಲಾಸ್ಟಿಕ್‌ ಎಷ್ಟು ಮತ್ತು ಅವು ಉತ್ಪಾದಿಸುತ್ತಿರುವ ಪ್ಲಾಸ್ಟಿಕ್‌ ತ್ಯಾಜ್ಯವೆಷ್ಟು ಎಂಬುದರ ಬಗ್ಗೆ ಮಾಹಿತಿಯೇ ಇಲ್ಲ. ಏಕೆಂದರೆ, ಈ ಎಲ್ಲಾ ದತ್ತಾಂಶಗಳನ್ನು ‘ಸ್ವಯಂಘೋಷಣೆ’ ಅಡಿಯಲ್ಲಿ ತರಲಾಗಿದೆ. ಈ ನಿಯಮಗಳು ಜಾರಿಯಾಗಿವೆಯೇ? ಈ ಬಗ್ಗೆ ಮಾಹಿತಿಗಳು ಲಭ್ಯವಿವೆಯೇ? ಲಭ್ಯವಿರುವ ಮಾಹಿತಿಯ ಸತ್ಯಾಸತ್ಯತೆ ಏನು ಎಂಬುದನ್ನು ಪರಿಶೀಲಿಸುವ ಯಾವ ವ್ಯವಸ್ಥೆಯೂ ಸಾರ್ವಜನಿಕ ವೇದಿಕೆಗಳಲ್ಲಿ ಲಭ್ಯವಿಲ್ಲ.

ಇದಕ್ಕಿಂತಲೂ ವಿಪರ್ಯಾಸದ ಸಂಗತಿ ಎಂದರೆ, ಕಂಪನಿಗಳು ಈಗ ಉತ್ಪಾದಿಸುತ್ತಿರುವ ಪ್ಲಾಸ್ಟಿಕ್‌ ತ್ಯಾಜ್ಯವನ್ನು 2024ರ ನಂತರ ಮರುಬಳಕೆ ಮಾಡಬೇಕು. ಹಾಗಿದ್ದರೆ, ಕಂಪನಿಗಳು ಈಗ ತಾವು ಉತ್ಪಾದಿಸುತ್ತಿರುವ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಏನು ಮಾಡುತ್ತಿವೆ? 2024ರ ನಂತರ ಮರುಬಳಕೆ ಮಾಡಲು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಪೇರಿಸಿ ಇಡುತ್ತಿವೆಯೇ ಅಥವಾ ಅವನ್ನು ಎಲ್ಲೆಂದರಲ್ಲಿ ಬಿಸಾಕುತ್ತಿವೆಯೇ ಎಂಬುದು ನಮ್ಮ ಮುಂದೆ ಇರುವ ದೊಡ್ಡ ಪ್ರಶ್ನೆಗಳು.

ಕೆಲವು ಒಳ್ಳೆಯ ಸುದ್ದಿಗಳೂ ಇವೆ. ಮೇಲೆ ಹೇಳಲಾದ ಕಾನೂನುಗಳು ದುರ್ಬಲವಾಗಿದ್ದರೂ, ಕೆಲವೆಡೆ ನಗರಾಡಳಿತ ಸಂಸ್ಥೆಗಳು ಈ ಕಾನೂನುಗಳ ಆಚೆಗೂ ಮುನ್ನಡೆದಿವೆ. ಮಳೆನೀರಿನ ಕಾಲುವೆಗಳಲ್ಲಿ ಕಟ್ಟಿಕೊಳ್ಳುವ, ನಗರದಾಚೆ ತ್ಯಾಜ್ಯದ ಗುಡ್ಡವಾಗುವ ಪ್ಲಾಸ್ಟಿಕ್‌ಗಳ ವಿಲೇವಾರಿಗೆ ಪರಿಹಾರ ಕಂಡುಕೊಳ್ಳಲು ಯತ್ನಿಸಿವೆ. ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಲ್ಲಾ ಸ್ವರೂಪದ ಪ್ಲಾಸ್ಟಿಕ್‌ ಚೀಲಗಳ ಬಳಕೆಯನ್ನು ನಿಷೇಧಿಸಿವೆ. ಪ್ಲಾಸ್ಟಿಕ್‌ ಬಳಕೆ ನಿಷೇಧವನ್ನು ಅನುಷ್ಠಾನಕ್ಕೆ ತರುವಲ್ಲಿ ಇಂತಹ ನಿಷೇಧಗಳು ನೆರವಾಗಿವೆ. ಹಲವು ನಗರಗಳಲ್ಲಿ ಮನೆಮಟ್ಟದಲ್ಲೇ ಕಸ ವಿಂಗಡಣೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿವೆ. ಇದರಿಂದ ಪ್ಲಾಸ್ಟಿಕ್‌ ಅನ್ನು ಒಳಗೊಂಡ ಎಲ್ಲಾ ಒಣ ಕಸವನ್ನು ಮರುಬಳಕೆ ಮಾಡುವುದು ಸುಲಭವಾಗಿದೆ. ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಬೇರ್ಪಡಿಸುವ ಘಟಕಗಳನ್ನು ಆರಂಭಿಸಲಾಗಿದೆ. ಕೆಲವೆಡೆ ಮರುಬಳಕೆ ಮಾಡಬಹುದಾದ ವಸ್ತುಗಳನ್ನಷ್ಟೇ ಸಂಗ್ರಹಿಸುತ್ತಿವೆ. ಕೆಲವು ನಗರಾಡಳಿತಗಳು ಹೀಗೆ ಸಂಗ್ರಹಿಸಿದ, ಮರುಬಳಕೆ ಸಾಧ್ಯವಿಲ್ಲದ ಪ್ಲಾಸ್ಟಿಕ್‌ ಅನ್ನು ಸಿಮೆಂಟ್‌ ತಯಾರಿಕಾ ಘಟಕಗಳಿಗೆ ರವಾನಿಸುತ್ತಿವೆ. ಅಂತಹ ಪ್ಲಾಸ್ಟಿಕ್‌ ಅನ್ನು ಸಿಮೆಂಟ್‌ ತಯಾರಿಕೆ ಅಥವಾ ಡಾಂಬರು ರಸ್ತೆ ನಿರ್ಮಾಣದಲ್ಲಿ ಬಳಸಲಾಗುತ್ತಿದೆ. ಇವೆಲ್ಲವೂ ಪ್ಲಾಸ್ಟಿಕ್‌ ಮಾರಿಯನ್ನು ನಿಯಂತ್ರಿಸಲು ನೆರವಾಗುತ್ತಿವೆ.

ಆದರೆ ಇಲ್ಲಿ ಬಹುದೊಡ್ಡ ಸವಾಲುಗಳಿವೆ ಮತ್ತು ಆ ಸವಾಲುಗಳನ್ನು ಎದುರಿಸಲು ಮುಂದಿನ ದಿನಗಳಲ್ಲಿ ಕೆಲಸ ಮಾಡಬೇಕಿದೆ. ಮೊದಲು ನಾವು ಈ ‘ಏಕ ಬಳಕೆಯ ಪ್ಲಾಸ್ಟಿಕ್‌’ ಎಂಬ ವ್ಯಾಖ್ಯಾನ ಮತ್ತು ವರ್ಗೀಕರಣವನ್ನು ತೆಗೆದುಹಾಕಬೇಕು. ಏಕೆಂದರೆ ಎಲ್ಲಾ ಪ್ಲಾಸ್ಟಿಕ್‌ಗಳು, ಅದರಲ್ಲೂ ಪ್ಯಾಕೇಂಜಿಂಗ್‌ಗೆ ಬಳಸುವ ಪ್ಲಾಸ್ಟಿಕ್‌ ‘ಏಕ ಬಳಕೆಯ ಪ್ಲಾಸ್ಟಿಕ್‌’ ಆಗಿದೆ. ಅವನ್ನು ಪ್ಯಾಕ್‌ ಮಾಡುತ್ತೇವೆ, ಬಳಸುತ್ತೇವೆ ಮತ್ತು ಬಿಸಾಕುತ್ತೇವೆ. ನಾವು ಸಣ್ಣ ಪ್ರಮಾಣದ ವಸ್ತುಗಳನ್ನು ಮಾತ್ರ ನಿರ್ಬಂಧಿಸುತ್ತಿದ್ದೇವೆ ಮತ್ತು ಅದನ್ನು ಜಾರಿ ಸಂಸ್ಥೆಗಳು ಪರಿಣಾಮಕಾರಿಯಾಗಿ ಜಾರಿಗೆ ತರಲಿ ಎಂದು ನಿರೀಕ್ಷಿಸುತ್ತಿರುವುದು ಏಕೆ ಎಂಬುದನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ಇದರ ಬದಲಿಗೆ ‘ಮರುಬಳಕೆ ಸಾಧ್ಯತೆ’ಯ ಆಧಾರದಲ್ಲಿ ನಿಷೇಧವನ್ನು ಹೇರಬೇಕು. ಇಲ್ಲಿಯೇ ನಿಜವಾದ ರಾಜಕೀಯ ಆರಂಭವಾಗುವುದು.

ಯಾವ ಪ್ಲಾಸ್ಟಿಕ್‌ ಅನ್ನು ಸಂಗ್ರಹಿಸಲು ಕಷ್ಟವೋ, ಅಂತಹ ಪ್ಲಾಸ್ಟಿಕ್‌ ಅನ್ನು ಮರುಬಳಕೆಗೆ ಕಳುಹಿಸುವುದೂ ಕಷ್ಟ ಎಂಬುದು ಈಗಾಗಲೇ ಸಾಬೀತಾಗಿರುವ ಸತ್ಯ. ಗುಟ್ಕಾ ಮತ್ತು ಚಿಪ್ಸ್‌ ಪ್ಯಾಕಿಂಗ್‌ನಲ್ಲಿ ಬಳಸುವ ಬಹು–ಪದರದ ಪ್ಲಾಸ್ಟಿಕ್‌ಗಳೂ ಸೇರಿ, ಹಲವು ಸ್ವರೂಪದ ಪ್ಲಾಸ್ಟಿಕ್‌ಗಳ ಮರುಬಳಕೆ ಕಷ್ಟಸಾಧ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಕಾರಣದಿಂದಲೇ ಬಹು–ಪದರದ ಪ್ಲಾಸ್ಟಿಕ್‌ಗಳನ್ನು 2018ರ ವೇಳೆಗೆ ಹಂತಹಂತವಾಗಿ ನಿಷೇಧಿಸಬೇಕು ಎಂದು 2016ರ ಪ್ಲಾಸ್ಟಿಕ್‌ ನಿರ್ವಹಣಾ ನಿಯಮಗಳಲ್ಲಿ ಹೇಳಲಾಗಿತ್ತು. ಆದರೆ, ಆನಂತರದ ದಿನಗಳಲ್ಲಿ ಈ ಅಂಶವನ್ನು ತಿದ್ದುಪಡಿ ಮಾಡಲಾಗಿತ್ತು. ‘ಬಹು–ಪದರದ ಪ್ಲಾಸ್ಟಿಕ್‌ನ ಮರುಬಳಕೆ ಸಾಧ್ಯವಿಲ್ಲ ಎಂಬುದು ಸಾಬೀತಾಗದೆ, ಅಂತಹ ಪ್ಲಾಸ್ಟಿಕ್‌ ನಿಷೇಧ ಮಾಡಬಾರದು’ ಎಂದು ಕಾನೂನಿನಲ್ಲಿ ತಿದ್ದುಪಡಿ ತರಲಾಯಿತು. ಬಹು–ಪದರ ಪ್ಲಾಸ್ಟಿಕ್‌ಗಳೇ ನಮ್ಮ ಕಸದ ರಾಶಿಯಲ್ಲಿ ಬೆಟ್ಟದಂತೆ ಬಿದ್ದಿರುವುದು, ಅವುಗಳ ಸಂಗ್ರಹವೂ ಕಷ್ಟ, ಅವಕ್ಕೆ ಯಾವುದೇ ಬೆಲೆ ಇಲ್ಲ ಮತ್ತು ಅವುಗಳ ಮರುಬಳಕೆ ಅತ್ಯಂತ ಕಷ್ಟ ಎಂಬುದು ಗೊತ್ತಿದ್ದೂ ಇಂತಹ ತಿದ್ದುಪಡಿ ತರಲಾಯಿತು.

ಎರಡನೆಯದಾಗಿ ನಮ್ಮ ‘ತ್ಯಾಜ್ಯ ನಿರ್ವಹಣಾ ಯೋಧ’ರತ್ತ ಗಮನ ಹರಿಸಬೇಕು. ನಾವು ಇಂದು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸ್ವಲ್ಪವಾದರೂ ನಿರ್ವಹಣೆ ಮಾಡುತ್ತಿದ್ದೇವೆ ಎಂದರೆ, ಅದರಲ್ಲಿ ಇಂತಹ ಕೋಟ್ಯಂತರ ಯೋಧರ ಕೊಡುಗೆ ಅಪಾರವಾದುದು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಅಸಂಘಟಿತ ವಲಯದಲ್ಲಿರುವ ಈ ಯೋಧರು, ಕಸದಿಂದ ರಸ ತೆಗೆಯುತ್ತಿರುವುದರಿಂದಲೇ ಈ ನಿರ್ವಹಣೆ ಸಾಧ್ಯವಾಗುತ್ತಿದೆ. ‘ನಾವು ಉತ್ಪಾದಿಸುವ ಕಸಕ್ಕೆ ನಾವೇ ಹೊಣೆಗಾರರು’ ಎಂಬ ಮನಃಸ್ಥಿತಿಯನ್ನು ಬೆಳೆಸಿಕೊಳ್ಳಬೇಕಿದೆ. ಇಂದು ನಿಷೇಧವಾಗಿರುವ ಪ್ಲಾಸ್ಟಿಕ್‌ ಅನ್ನು ನಾವು ಬಳಸಲೇಬಾರದು, ಮುಂದೆ ನಿಷೇಧವಾಗಬೇಕಿರುವ ಪ್ಲಾಸ್ಟಿಕ್‌ ಇಲ್ಲದೆಯೇ ಬುದುಕುವುದನ್ನು ನಾವು ಇಂದೇ ರೂಢಿಸಿಕೊಳ್ಳಬೇಕು. ಅಂತಹ ಪ್ಲಾಸ್ಟಿಕ್‌ ಅನ್ನು ನಿಷೇಧಿಸಿ ಎಂದು ಈಗಲೇ ಆಗ್ರಹಿಸಬೇಕು.

ಲೇಖಕಿ: ಸೆಂಟರ್‌ ಫಾರ್ ಸೈನ್ಸ್ ಅಂಡ್‌ ಎನ್ವಿರಾನ್‌ಮೆಂಟ್‌ನ (ಸಿಎಸ್‌ಇ) ಪ್ರಧಾನ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT