ದೇಶದ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಸ್ಥಾನವಿದೆ. 'ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ' ಎಂದಿದ್ದಾರೆ ಹಿರಿಯರು. ಆದಾಗ್ಯೂ ದೇಶದಲ್ಲಿ ಭ್ರೂಣ ಹತ್ಯೆ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿಂತಿಲ್ಲ. ಹೆಣ್ಣು ಮಗುವನ್ನು ಮನೆ ಬೆಳಗುವ ದೀಪ ಎಂದು ಕರೆಯುವ ಅದೇ ಜನ, ಮನೆಯಲ್ಲಿ ಹೆಣ್ಣು ಹುಟ್ಟಿದರೆ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುತ್ತಾರೆ. ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಪ್ರತಿ ವರ್ಷ ಜನವರಿ 24ರಂದು 'ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ'ವನ್ನು ಆಚರಿಸಲಾಗುತ್ತದೆ.
ದೇಶದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ಹೆಣ್ಣು ಮಕ್ಕಳ ಹಕ್ಕುಗಳ ಅರಿವು, ಶಿಕ್ಷಣದ ಮಹತ್ವ, ಆರೋಗ್ಯ ಮತ್ತು ಪೋಷಣೆಯ ಪ್ರಾಮುಖ್ಯತೆಯನ್ನು ಉತ್ತೇಜಿಸುವುದು ಈ ದಿನದ ಉದ್ದೇಶವಾಗಿದೆ.