ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾಳ ಕಥೆಯ ಹಿಂದೆ... | ಹತ್ತಾರು ಹತ್ಯೆಗಳ ಹಿಂದಿನ ‘ಡಾನ್‌’ ವಿಕಾಸ್‌ ದುಬೆ

ವಿಕಾಸ್‌ ದುಬೆ ಎನ್‌ಕೌಂಟರ್
Last Updated 11 ಜುಲೈ 2020, 2:15 IST
ಅಕ್ಷರ ಗಾತ್ರ
ADVERTISEMENT
""

ಕಾನ್ಪುರ: ಬಹುದೊಡ್ಡ ‘ಡಾನ್‌’ ಆಗಿ ಮೆರೆದಿದ್ದ ಈ ಕಾನ್ಪುರ್‌ವಾಲಾ, ಅಷ್ಟೇ ದೊಡ್ಡ ರಿಯಲ್‌ ಎಸ್ಟೇಟ್‌ ಕುಳವೂ ಆಗಿದ್ದ. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆಲುವಿನ ರುಚಿ ಕಂಡಿದ್ದ ಆತನಿಗೆ, ಹಲವು ರಾಜಕೀಯ ಮುಖಂಡರ ಸಖ್ಯವೂ ಇತ್ತು.

ಹೌದು, ಕಾನ್ಪುರ ಸಮೀಪ ನಡೆದ ಎನ್‌ಕೌಂಟರ್‌ನಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಕುಖ್ಯಾತ ರೌಡಿಶೀಟರ್‌ ವಿಕಾಸ್ ದುಬೆಯ ಕಥೆ ಇದು.

ಸಾಮಾಜಿಕ ಜಾಲತಾಣಗಳಲ್ಲಿ ದುಬೆಯ ಹಳೆಯ ಚಿತ್ರವೊಂದು ಹರಿದಾಡುತ್ತಿದೆ. ಸಮಾರಂಭ ವೊಂದರ ಆ ಚಿತ್ರದಲ್ಲಿ ದುಬೆಯ ಪಕ್ಕ ಇದ್ದವರು ಉತ್ತರ ಪ್ರದೇಶ ಸರ್ಕಾರದ ಒಬ್ಬ ಸಚಿವರು. ಬೇರೆ ಪಕ್ಷದಿಂದ ಅವರು ಬಿಜೆಪಿಗೆ ಪಕ್ಷಾಂತರ ಮಾಡಿದವರು.

ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ಚಿತ್ರವೂ ಹರಿದಾಡುತ್ತಿದೆ. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ತನ್ನ ಪತ್ನಿ ರಿಚಾ ದುಬೆ ಪರವಾಗಿ ವಿಕಾಸ್‌ ಮತಯಾಚನೆ ಮಾಡುತ್ತಿದ್ದ ಚಿತ್ರವದು. ರಿಚಾ, ಘಿಮಾವು ಕ್ಷೇತ್ರದಿಂದ ಜಯ ಸಾಧಿಸಿದ್ದರು. ದುಬೆಯ ತವರು ಬಿಕ್ರು ಗ್ರಾಮ ಇರುವುದು ಇದೇ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯಲ್ಲಿ.

ಕುಖ್ಯಾತ ರೌಡಿಶೀಟರ್‌ ವಿಕಾಸ್ ದುಬೆ

ತನಗೆ ಇಬ್ಬರು ರಾಜಕೀಯ ನಾಯಕರ ಬೆಂಬಲವಿದೆ ಎಂದು ಆಗಿನ ಚುನಾವಣಾ ಪೋಸ್ಟರ್‌ಗಳಲ್ಲಿ ಅವರ ಚಿತ್ರಗಳನ್ನೂ ಹಾಕಿಸಿದ್ದರು ರಿಚಾ. ಆ ನಾಯಕರೀಗ ವಿರೋಧ ಪಕ್ಷದಲ್ಲಿದ್ದಾರೆ. ಸ್ವತಃ ದುಬೆ 2000ರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಶಿವರಾಜಪುರ ಕ್ಷೇತ್ರದಿಂದ ಜಯ ಗಳಿಸಿದ್ದ. ಕೊಲೆ ಪ್ರಕರಣವೊಂದರಲ್ಲಿ ಜೈಲಿನಲ್ಲಿದ್ದ ಆತ, ಅಲ್ಲಿಂದಲೇ ಗೆಲುವಿನ ನಗೆಯನ್ನು ಬೀರಿದ್ದ. ತಾನು ಹತ್ತು ವರ್ಷಗಳವರೆಗೆ ಬಿಕ್ರು ಗ್ರಾಮದ ಪ್ರಧಾನನಾಗಿದ್ದ (ಮುಖ್ಯಸ್ಥ) ಕುರಿತೂ ದುಬೆ ಹೇಳಿಕೊಂಡಿದ್ದ.

ದುಬೆಯ ಬಂಧನವಾದಾಗ ಆತನ ತಾಯಿ ಸರಳಾದೇವಿ, ‘ಆತನೀಗ ಬಿಜೆಪಿಯಲ್ಲಿ ಇಲ್ಲ. ಎಸ್ಪಿ ಜತೆಗಿದ್ದಾನೆ’ ಎಂದು ಹೇಳಿದ್ದರು. ಆದರೆ, ಸಮಾಜವಾದಿ ಪಕ್ಷ ‘ಆತ ನಮ್ಮ ಪಕ್ಷದ ಸದಸ್ಯನಲ್ಲ ಎಂದು ಹೇಳಿತ್ತು. ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌, ‘ದುಬೆಯ ಎಲ್ಲ ಫೋನ್‌ ಕರೆಗಳ ಮಾಹಿತಿಯನ್ನು ಬಹಿರಂಗ ಗೊಳಿಸಬೇಕು’ ಎಂದು ಆಗ್ರಹಿಸಿದ್ದರು.

60ಕ್ಕೂ ಅಧಿಕ ಪ್ರಕರಣಗಳಲ್ಲಿ ದುಬೆ ಭಾಗಿಯಾಗಿದ್ದ ಎಂದು ಪೊಲೀಸರು ಹೇಳುತ್ತಾರೆ. ಆದರೆ, ಕೊಲೆಯಂತಹ ಗಂಭೀರ ಪ್ರಕರಣಗಳಲ್ಲೂ ಆತ ಶಿಕ್ಷೆಗೆ ಗುರಿಯಾಗಿರಲಿಲ್ಲ ಎಂಬ ಮಾಹಿತಿ ಹಿರಿಯ ಅಧಿಕಾರಿಗಳಿಂದ ಸಿಗುತ್ತದೆ. ಶಿವಲಿ ಪೊಲೀಸ್‌ ಠಾಣೆ ಆವರಣದಲ್ಲೇ ಬಿಜೆಪಿ ಮುಖಂಡ ಸಂತೋಷ್‌ ಶುಕ್ಲಾ ಅವರನ್ನು ಅಟ್ಟಾಡಿಸಿ ಹತ್ಯೆಗೈದ ಆರೋಪವೂ ಆತನ ಮೇಲಿತ್ತು.

‘ದುಬೆ ಎಂತಹ ಭಯ ಹುಟ್ಟಿಸಿದ್ದನೆಂದರೆ ರಾಜ್ಯ ಸಚಿವ ಸ್ಥಾನಮಾನ ಹೊಂದಿದ್ದ ಬಿಜೆಪಿ ನಾಯಕನ ಹತ್ಯೆ ನಡೆದರೂ ಆತನ ವಿರುದ್ಧ ಸಾಕ್ಷ್ಯ ನುಡಿಯಲು ಒಬ್ಬ ಪೊಲೀಸ್‌ ಅಧಿಕಾರಿಯೂ ಮುಂದೆ ಬಂದಿರಲಿಲ್ಲ’ ಎಂದು ಅವರು ಹೇಳುತ್ತಾರೆ. ‘ಸಾಕ್ಷ್ಯಗಳ ಕೊರತೆಯಿಂದಾಗಿ ಆತ ಕೋರ್ಟ್‌ನಿಂದ ಆರೋಪ ಮುಕ್ತನಾಗಿ ಹೊರಬಂದ. ಜೈಲಿನಲ್ಲಿ ಇದ್ದಾಗಲೂ ಹಲವು ಅಪರಾಧ ಕೃತ್ಯಗಳನ್ನು ಆತ ಮಾಡಿಸಿದ್ದ. ಹತ್ಯೆ ಪ್ರಕರಣಗಳಿಗೂ ಕಾರಣನಾಗಿದ್ದ’ ಎಂದು ಅವರು ವಿವರಿಸುತ್ತಾರೆ.

ಬಿಕ್ರು ಹತ್ಯಾಕಾಂಡದ ಬಳಿಕ ಕಾನ್ಪುರ ಹತ್ತಿರದಲ್ಲಿರುವ ಚೌಬೇಪುರ ಪೊಲೀಸ್‌ ಠಾಣೆಯ ಎಲ್ಲ 68 ಸಿಬ್ಬಂದಿಯ ಮೇಲೆ ಸಂಶಯ ವ್ಯಕ್ತಪಡಿಸಿ ಕಳೆದ ಮಂಗಳವಾರವಷ್ಟೆ ಅವರನ್ನೆಲ್ಲ ಮೀಸಲು ಪೊಲೀಸ್‌ ವಿಭಾಗಕ್ಕೆ ವರ್ಗಾಯಿಸಲಾಗಿದೆ. ದುಬೆಯು ಪೊಲೀಸರೊಂದಿಗೆ ಎಂತಹ ಸಂಬಂಧ ಹೊಂದಿದ್ದ ಎಂಬುದಕ್ಕೆ ಈ ಸಾಮೂಹಿಕ ವರ್ಗಾವಣೆಯೇ ಸಾಕ್ಷಿ.

ಕಾನ್ಪುರದ ತಾರಾಚಂದ್‌ ಇಂಟರ್‌ ಕಾಲೇಜಿನಲ್ಲಿ ವ್ಯವಸ್ಥಾಪಕರಾಗಿದ್ದ ಸಿದ್ಧೇಶ್ವರ ಪಾಂಡೆ ಹಾಗೂ ರಾಮ್‌ ಬಾಬು ಯಾದವ್‌ ಎಂಬುವರ ಕೊಲೆ (2000ರಲ್ಲಿ) ಪ್ರಕರಣಗಳಲ್ಲಿ ದುಬೆಯೇ ಮುಖ್ಯ ಆರೋಪಿಯಾಗಿದ್ದ. 2004ರಲ್ಲಿ ಉದ್ಯಮಿ ದಿನೇಶ್‌ ದುಬೆ ಎಂಬುವರ ಹತ್ಯೆಯಾದಾಗಲೂ ಆರೋಪಿಗಳ ಸಾಲಿನಲ್ಲಿ ಈತನ ಹೆಸರೂ ಇತ್ತು. 2013ರಲ್ಲಿ ಮತ್ತೊಂದು ಕೊಲೆ ಮಾಡಿದ ಆಪಾದನೆಯೂ ದುಬೆ ಮೇಲಿತ್ತು. ತನ್ನ ಸಂಬಂಧಿ ಅನುರಾಗ್‌ ಎಂಬಾತನನ್ನು 2018ರಲ್ಲಿ ಆತ ಜೈಲಿನಿಂದಲೇ ಕೊಲೆ ಮಾಡಿಸಿದ ಆರೋಪವನ್ನೂ ಎದುರಿಸುತ್ತಿದ್ದ.

ದುಬೆ ಹಾಗೂ ಆತನ ಸಹೋದರ ದೀಪು ದುಬೆ ರಿಯಲ್‌ ಎಸ್ಟೇಟ್‌ ದಂಧೆಯಲ್ಲೂ ತೊಡಗಿದ್ದರು. ಇನ್ನೊಬ್ಬ ಸಹೋದರ ಅವಿನಾಶ್‌ನ ಹತ್ಯೆಯಾಗಿತ್ತು ಎಂದು ಸ್ಥಳೀಯರು ಮಾಹಿತಿ ನೀಡುತ್ತಾರೆ.

ಬಿಕ್ರು ಹಾಗೂ ಸುತ್ತಮುತ್ತಲಿನ ಗ್ರಾಮಗಳನ್ನು ದುಬೆ ತನ್ನ ಹತೋಟಿಯಲ್ಲಿ ಇಟ್ಟುಕೊಂಡಿದ್ದ. ಪೊಲೀಸರ ದಾಳಿ, ಹುಡುಕಾಟ ಸೇರಿ ಯಾವುದೇ ಮಾಹಿತಿಯು ಆತನಿಗೆ ಬಹುಬೇಗ ತಲುಪುತ್ತಿತ್ತು. ಎಲ್ಲ ಪ್ರಮುಖ ರಾಜಕೀಯ ಪಕ್ಷಗಳೊಂದಿಗೆ ದುಬೆ ಸಂಪರ್ಕ ಹೊಂದಿದ್ದ. ಡಕಾಯಿತಿಯಿಂದ ಹಿಡಿದು ಕೊಲೆಗಳವರೆಗೂ ಅಪರಾಧ ಕೃತ್ಯಗಳನ್ನು ಮಾಡಲು ಗ್ರಾಮೀಣ ಭಾಗದ ಯುವಕರ ಸೇನೆಯನ್ನೇ ಕಟ್ಟಿ ಬೆಳೆಸಿದ್ದ ಎಂದು ವಿವರಿಸುತ್ತಾರೆ.

ಗುಂಡಿನ ಸದ್ದಿಗೆ ಮುನ್ನ ಮಾಧ್ಯಮಗಳ ವಾಹನಗಳನ್ನು ತಡೆದ ಪೊಲೀಸರು

ದುಬೆಯನ್ನು ರಸ್ತೆಯ ಮೂಲಕ ಕಾನ್ಪುರಕ್ಕೆ ಕರೆತರುತ್ತಿರುವ ಮಾಹಿತಿ ಸಿಕ್ಕ ಬಳಿಕ ಪೊಲೀಸ್‌ ವಾಹನಗಳನ್ನು ಹಿಂಬಾಲಿಸಿಕೊಂಡು ಮಾಧ್ಯಮ ಪ್ರತಿನಿಧಿಗಳಿದ್ದ ವಾಹನಗಳೂ ಹೊರಟಿದ್ದವು. ಆದರೆ, ಎನ್‌ಕೌಂಟರ್‌ ನಡೆದ ಸ್ಥಳ ಇನ್ನೂ ದೂರ ಇರುವಾಗಲೇ ಪೊಲೀಸರು ಮಾಧ್ಯಮದ ವಾಹನಗಳನ್ನು ತಡೆದು ನಿಲ್ಲಿಸಿದರು ಎಂದು ವರದಿಯಾಗಿದೆ.

ಪೊಲೀಸ್‌ ವಾಹನಗಳು ಕಾನ್ಪುರ ಜಿಲ್ಲೆಯನ್ನು ಪ್ರವೇಶಿಸಿದ್ದು ಬೆಳಗಿನ 6.30ರ ಸುಮಾರಿಗೆ. ಆ ವೇಳೆಗೆ ಅರ್ಧ ಡಜನ್‌ನಷ್ಟು ಮಾಧ್ಯಮ ಪ್ರತಿನಿಧಿಗಳ ವಾಹನಗಳು ಅವುಗಳನ್ನು ಹಿಂಬಾಲಿಸಲು ಆರಂಭಿಸಿದ್ದವು. ಪೊಲೀಸರು ಹಠಾತ್‌ ಆಗಿ ಮಾಧ್ಯಮ ಪ್ರತಿನಿಧಿಗಳದೂ ಸೇರಿದಂತೆ ಎಲ್ಲ ಖಾಸಗಿ ವಾಹನಗಳನ್ನು ತಡೆಗಟ್ಟಿದರು. ಅಷ್ಟರಲ್ಲಾಗಲೇ ದುಬೆ ಇದ್ದ ಪೊಲೀಸ್‌ ವಾಹನ ಮುಂದೆ ಹೋಗಿತ್ತು.

ಸುಮಾರು ಹೊತ್ತು ತಪಾಸಣೆ ನೆಪದಲ್ಲಿ ತಡೆದು ನಿಲ್ಲಿಸಿದ ಮೇಲೆ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಅಷ್ಟರಲ್ಲಿ ಎನ್‌ಕೌಂಟರ್‌ ಪ್ರಕ್ರಿಯೆ ಪೂರ್ಣಗೊಂಡಿತ್ತು ಎಂದು ‘ದಿ ವೈರ್‌’ ಪೋರ್ಟಲ್‌ ಮತ್ತು ‘ಆಜ್‌ ತಕ್‌’ ಸುದ್ದಿವಾಹಿನಿ ವರದಿ ಮಾಡಿವೆ.

ದುಬೆ ರಕ್ಷಣೆಗಾಗಿ ರಾತ್ರಿಯೇ ಸುಪ್ರೀಂ ಕೋರ್ಟ್‌ಗೆ ಮೊರೆ

ವಿಕಾಸ್‌ ದುಬೆಯ ಪ್ರಾಣಕ್ಕೆ ಹಾನಿ ಆಗದಂತೆ ನೋಡಿಕೊಳ್ಳಲು ಉತ್ತರ ಪ್ರದೇಶ ಸರ್ಕಾರ ಮತ್ತು ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ದಾಖಲಾಗಿತ್ತು. ದುಬೆಯ ಹತ್ಯೆಯಾದ ಕೆಲವೇ ತಾಸು ಮೊದಲು ಅಂದರೆ, ಗುರುವಾರ ರಾತ್ರಿ ಎರಡು ಗಂಟೆಗೆ ಈ ಅರ್ಜಿ ಸಲ್ಲಿಸಲಾಗಿತ್ತು! ದುಬೆಯ ಐವರು ಸಹಚರರ ಎನ್‌ಕೌಂಟರ್‌ ಕುರಿತು ಸಿಬಿಐ ತನಿಖೆ ನಡೆಸಬೇಕೆಂದೂ ಆ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು. ವಕೀಲ ಘನಶ್ಯಾಮ ಉಪಾಧ್ಯಾಯ ಅವರು ಈ ಅರ್ಜಿಯನ್ನು ದಾಖಲಿಸಿದ್ದರು.

‘ದುಬೆ ಸಹಚರರ ಎನ್‌ಕೌಂಟರ್‌ಗಳು ಕಾನೂನುಬಾಹಿರ ಹಾಗೂ ಅಮಾನವೀಯವಾಗಿದ್ದವು. ಅಲ್ಲದೆ ನ್ಯಾಯವ್ಯವಸ್ಥೆಯನ್ನೇ ಅಣಕ ಮಾಡುವಂತಿದ್ದವು. ಇಂತಹ ಪ್ರತೀಕಾರದ ಕ್ರಮಗಳು ದೇಶವನ್ನು ತಾಲೀಬಾನೀಕರಣ ಮಾಡುವುದಲ್ಲದೇ ಬೇರೇನಲ್ಲ’ ಎಂದು ಉಪಾಧ್ಯಾಯ ‘ಪಿಟಿಐ’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

‘ದುಬೆಗೆ ರಕ್ಷಣೆ ನೀಡುವಂತೆ ಕೋರಿ ನಾನು ನಸುಕಿನ 2ಕ್ಕೆ ಇ–ಅರ್ಜಿ ಸಲ್ಲಿಸಿದೆ. ತಾತ್ಕಾಲಿಕ ಸಂಖ್ಯೆಯೂ ನನಗೆ ಸಿಕ್ಕಿತ್ತು’ ಎಂದು ಅವರು ಹೇಳಿದ್ದಾರೆ. ‘ಎನ್‌ಕೌಂಟರ್‌ಗಳಲ್ಲದೆ ದುಬೆಯ ಮನೆಯನ್ನು ನೆಲಸಮ ಮಾಡಿದ ಹಾಗೂ ಆತನ ವಾಹನಗಳನ್ನು ಧ್ವಂಸಗೊಳಿಸಿದ ಪ್ರಕರಣಗಳ ವಿರುದ್ಧ ಎಫ್ಐಆರ್‌ ದಾಖಲಿಸಲು ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ನಾನು ಕೋರಿದ್ದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.

***

ವಿಕಾಸ್‌ ದುಬೆಯನ್ನು ಬೆಳೆಸಿದವರು ಮತ್ತು ರಕ್ಷಿಸುತ್ತಿದ್ದವರು ಯಾರು ಎಂಬುದು ಜನರಿಗೆ ತಿಳಿಯಬೇಕಿದೆ. ಈ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ನೇತೃತ್ವದ ತಂಡ ನಡೆಸಬೇಕು

- ರಣದೀಪ್‌ ಸಿಂಗ್‌ ಸುರ್ಜೇವಾಲ, ಕಾಂಗ್ರೆಸ್ ವಕ್ತಾರ

***

ನ್ಯಾಯ ನೀಡುವುದು ನ್ಯಾಯಾಲಯಗಳ ಕೆಲಸ, ಅಪರಾಧಿಗಳನ್ನು ಕರೆದುಕೊಂಡು ಬರುವುದು ಪೊಲೀಸರ ಕೆಲಸ. ಉತ್ತರಪ್ರದೇಶದ ಬಿಜೆಪಿ ಸರ್ಕಾರ ಇದನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದೆ. ಯೋಗಿ ಅವರ ಎನ್‌ಕೌಂಟರ್‌ ರಾಜ್‌ನಲ್ಲಿ ಸತ್ತಿದ್ದು ನ್ಯಾಯ ಮಾತ್ರ

- ಮಹುವಾ ಮೋಯಿತ್ರಾ, ಟಿಎಂಸಿ ಸಂಸದೆ

***
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ತನಿಖೆ ನಡೆಯಬೇಕು. ಆಗ ಮಾತ್ರ ಅಪರಾಧಿಗಳು–ಪೊಲೀಸರು–ರಾಜಕಾರಣಿಗಳ ನಡುವಣ ಸಂಬಂಧ ಏನು ಎಂಬುದು ಬಹಿರಂಗವಾಗುತ್ತದೆ

- ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

***

ಕಾರು ಮಾತ್ರ ಉರುಳಲಿಲ್ಲ. ಹೊರಬರುವ ಸತ್ಯಗಳ ಕಾರಣ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಉರುಳುವುದರಿಂದ ತನ್ನನ್ನು ತಾನು ರಕ್ಷಿಸಿಕೊಂಡಿತು

- ಅಖಿಲೇಶ್ ಯಾದವ್, ಎಸ್‌ಪಿ ರಾಷ್ಟ್ರೀಯ ಅಧ್ಯಕ್ಷ

***

ಕಾನ್ಪುರ ತಲುಪಲಾರ’

‘ದುಬೆ ಕಾನ್ಪುರ ತಲುಪುವುದಿಲ್ಲ ಎಂದು ನನಗೆ ಅನಿಸುತ್ತದೆ’ ಎಂದು ಮಧ್ಯ ಪ್ರದೇಶದ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿರುವುದು ಎನ್‌ಕೌಂಟರ್‌ ಕುರಿತ ಅನುಮಾನವನ್ನು ಮತ್ತಷ್ಟು ಬಲಗೊಳಿಸಿದೆ. ಪೊಲೀಸ್‌ ಅಧಿಕಾರಿಯ ಈ ಹೇಳಿಕೆಯುಳ್ಳ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದುಬೆಯು ಕಾನ್ಪುರವನ್ನು ಎಷ್ಟು ಹೊತ್ತಿಗೆ ತಲುಪಬಹುದು ಎಂದು ಸಿಬ್ಬಂದಿಯೊಬ್ಬರ ಪ್ರಶ್ನೆಗೆ ನಕ್ಕು ಉತ್ತರಿಸುವ ಆ ಅಧಿಕಾರಿ, ‘ದುಬೆ ಕಾನ್ಪುರ ತಲುಪುವುದಿಲ್ಲ ಅನಿಸುತ್ತದೆ’ ಎಂದು ಹೇಳುತ್ತಾರೆ.

ದೇಶದಲ್ಲಿ ಸದ್ದು ಮಾಡಿದ್ದ ಎನ್‌ಕೌಂಟರ್‌ಗಳು

ದೇಶದಲ್ಲಿ ನಡೆದಿರುವ ಎನ್‌ಕೌಂಟರ್‌ಗಳಲ್ಲಿ ಹಲವು ನಕಲಿ ಎಂಬ ಹಣೆಪಟ್ಟಿ ಹಚ್ಚಿಕೊಂಡಿವೆ. ಜನರ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದ ಕೆಲವು ಪ್ರಕರಣಗಳಲ್ಲೂ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ. ಇಂತಹ ಎನ್‌ಕೌಂಟರ್‌ನ ಕೆಲವು ನ್ಯಾಯಾಲಯದ ಮೆಟ್ಟಿಲೇರಿವೆ. ಇನ್ನು ಕೆಲವು ಜನರ ಮನಸಿನಲ್ಲಿ ಅಚ್ಚಳಿಯದೆ ಉಳಿದಿವೆ

ಹೈದರಾಬಾದ್‌ ಎನ್‌ಕೌಂಟರ್‌

ಹೈದರಾಬಾದ್‌ನ ವೈದ್ಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ, ಕೊಂದು, ಸುಟ್ಟುಹಾಕಿದ್ದ ಪ್ರಕರಣದಲ್ಲಿ ಸೈಬರಾಬಾದ್ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಈ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವು ದೇಶದಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪ್ರಕರಣವು ‘ದಿಶಾ’ ಪ್ರಕರಣ ಎಂದೇ ಗುರುತಿಸಲಾಗುತ್ತಿದೆ. ಯುವತಿಯ ಶವವನ್ನು ಸುಟ್ಟಿದ್ದ ಜಾಗದ ಮಹಜರು ನಡೆಸಲು ಆರೋಪಿಗಳನ್ನು ಕರೆದುಕೊಂಡು ಹೋಗಿದ್ದಾಗ ಎನ್‌ಕೌಂಟರ್ ನಡೆದಿತ್ತು.

‘ಆರೋಪಿಗಳಿಗೆ ಕೋಳ ಹಾಕಿರಲಿಲ್ಲ. ನಮ್ಮ ಪಿಸ್ತೂಲು ಕಸಿದುಕೊಂಡು, ನಮ್ಮತ್ತ ಗುಂಡು ಹಾರಿಸಿದರು. ಆತ್ಮ ರಕ್ಷಣೆಗಾಗಿ ನಾವು ಗುಂಡು ಹಾರಿಸಿದಾಗ ಆರೋಪಿಗಳು ಸತ್ತರು’ ಎಂದು ಪೊಲೀಸರು ಹೇಳಿಕೆ ನೀಡಿದ್ದರು.

ತನಿಖೆಯ ಆರಂಭಿಕ ಹಂತದಲ್ಲೇ ಈ ಹತ್ಯೆ ನಡೆದಿತ್ತು. ಆದರೆ, ಎನ್‌ಕೌಂಟರ್ ಹತ್ಯೆ ನಡೆದ ನಂತರವೂ ಅದೇ ಸ್ಥಳದಲ್ಲಿ ‘ದಿಶಾ’ ಪ್ರರಕಣದ ರೀತಿಯಲ್ಲಿಯೇ ಅತ್ಯಾಚಾರ ಮತ್ತು ಕೊಲೆಗಳು ನಡೆದವು. ಇದು ಪೊಲೀಸರ ಮೇಲೆ ಸಾರ್ವಜನಿಕರು ಸಂದೇಹಪಡಲು ಕಾರಣವಾಯಿತು. ಸುಪ್ರೀಂ ಕೋರ್ಟ್‌ ರಚಿಸಿರುವ ತಂಡವು ಈ ಪ್ರಕರಣದ ತನಿಖೆ ನಡೆಸುತ್ತಿದೆ.

ಸೊಹ್ರಾಬುದ್ದೀನ್ ಷೇಕ್ ಹತ್ಯೆ

ಗುಜರಾತ್‌ನ ಉದ್ಯಮಿ ಸೊಹ್ರಾಬುದ್ದೀನ್ ಷೇಕ್‌ನ ಎನ್‌ಕೌಂಟರ್‌ ಹತ್ಯೆ ಭಾರತದಲ್ಲಿ ಹೆಚ್ಚು ಸದ್ದುಮಾಡಿದ ಪ್ರಕರಣಗಳಲ್ಲಿ ಒಂದು. ಅಮಿತ್ ಶಾ ಅವರು ಗುಜರಾತ್‌ನ ಗೃಹ ಸಚಿವರಾಗಿದ್ದಾಗ ಈ ಹತ್ಯೆ ನಡೆದಿತ್ತು. ಹೈದರಾಬಾದ್‌ನಲ್ಲಿದ್ದ ಸೊಹ್ರಾಬುದ್ದೀನ್, ಆತನ ಪತ್ನಿ ಮತ್ತು ಸಹಾಯಕ ಪ್ರಜಾಪತಿಯನ್ನು ಗುಜರಾತ್ ಪೊಲೀಸರು ಬಂಧಿಸಿದ್ದರು. ಮೊದಲು ಪ್ರಜಾಪತಿಯ ಹತ್ಯೆ ನಡೆಯಿತು. ನಂತರ ಸೊಹ್ರಾಬುದ್ದೀನ್ ಹತ್ಯೆ ನಡೆಯಿತು. ಆತನ ಪತ್ನಿಗೆ ಏನಾಯಿತು ಎಂಬುದು ಗೊತ್ತಾಗಲೇ ಇಲ್ಲ. ಈ ಪ‍್ರಕರಣದಲ್ಲಿ ಅಮಿತ್ ಶಾ ಜೈಲುವಾಸ ಅನುಭವಿಸಿದರು. ಈ ಪ್ರಕರಣದಲ್ಲಿ ಎಲ್ಲಾ ಆರೋಪಿಗಳೂ ಖುಲಾಸೆ ಆದರು.

ಆಧಾರ: ಪಿಟಿಐ

ನಿಲ್ಲದ ಎನ್‌ಕೌಂಟರ್ ರಾಜ್

2017ರಲ್ಲಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಪರಾಧಿಗಳ ವಿರುದ್ಧ ಅಕ್ಷರಶಃ ಸಮರವನ್ನೇ ಸಾರಿತು. ಅಪರಾಧಿಗಳನ್ನು ಎನ್‌ಕೌಂಟರ್‌ ಮಾಡಲು ಸರ್ಕಾರವು ಉತ್ತೇಜನ ನೀಡಿತು. ನಂತರದ ದಿನಗಳಲ್ಲಿ ಎನ್‌ಕೌಂಟರ್‌ಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಿತು. 2017ರ ಸೆಪ್ಟೆಂಬರ್ 6ರಂದು ಅಂದಿನ ಎಡಿಜಿಪಿ ಆನಂದ್ ಕುಮಾರ್ ಅವರು, ‘ಸರ್ಕಾರದ ಆದೇಶದ ಮೇರೆಗೆ ಎನ್‌ಕೌಂಟರ್ ನಡೆಸಲಾಗುತ್ತಿದೆ’ ಎಂದು ಬಹಿರಂಗವಾಗಿ ಹೇಳಿದ್ದರು.

ಎನ್‌ಕೌಂಟರ್‌ ರಾಜ್‌ ಮೂಲಕ ಜಂಗಲ್‌ ರಾಜ್‌ಗೆ ಕೊನೆ ಹಾಡುತ್ತೇವೆ ಎಂದು ಸಚಿವರೇ ಘೋಷಿಸಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲಿ ಐದು ಸಾವಿರಕ್ಕೂ ಹೆಚ್ಚು ಬಾರಿ ಪೊಲೀಸರು ಮತ್ತು ಅಪರಾಧಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.

‘ಎನ್‌ಕೌಂಟರ್‌ ರಾಜ್‌ನಿಂದ ಉತ್ತರ ಪ್ರದೇಶದಲ್ಲಿ ಅಪರಾಧ ಚಟುವಟಿಕೆ ಇಳಿಕೆಯಾಗಿದೆ. ಇದನ್ನು ಪ್ರಚಾರ ಮಾಡಿ’ ಎಂದು ವಿವಿಧ ಇಲಾಖೆಗಳಿಗೆ ಸರ್ಕಾರವೇ ಸುತ್ತೋಲೆ ಹೊರಡಿಸಿತ್ತು. ಎನ್‌ಕೌಂಟರ್ ನಡೆಸುವ ಪೊಲೀಸ್ ತಂಡಕ್ಕೆ ರಾಜ್ಯ ಗೃಹ ಇಲಾಖೆಯು, 2017ರ ಸೆಪ್ಟೆಂಬರ್‌ 6ರಂದು ₹ 1 ಲಕ್ಷ ಬಹುಮಾನ ಘೋಷಿಸಿತ್ತು. ಹೀಗಾಗಿ ಎನ್‌ಕೌಂಟರ್‌ಗಳ ಸಂಖ್ಯೆ ಹೆಚ್ಚಾಯಿತು.

ಎನ್‌ಕೌಂಟರ್‌ ರಾಜ್‌ನ ಬಗ್ಗೆ ಉತ್ತರ ಪ್ರದೇಶದ ನಿವೃತ್ತ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ‘ಅಪರಾಧಿಗಳನ್ನು ಕಾನೂನು ಪ್ರಕ್ರಿಯೆಗೆ ಒಳಪಡಿಸದೆ, ಎನ್‌ಕೌಂಟರ್‌ ಮಾಡುವುದು ಸರಿಯಲ್ಲ. ಪೊಲೀಸರು ಇದನ್ನು ನಿಲ್ಲಿಸಬೇಕು, ಕಾನೂನನ್ನು ಪಾಲಿಸಬೇಕು’ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಪ್ರಕಾಶ್ ಸಿಂಗ್, ಗೃಹ ಇಲಾಖೆಗೆ ಪತ್ರ ಬರೆದಿದ್ದರು. ಆದರೆ, ಈ ಎಚ್ಚರಿಕೆಯನ್ನು ಗೃಹ ಇಲಾಖೆಯೂ ಕಡೆಗಣಿಸಿತು. ಪೊಲೀಸರು ಕಡೆಗಣಿಸಿದರು.

ಪೊಲೀಸರ ಎನ್‌ಕೌಂಟರ್‌ಗಳಿಗೆ ನಿರಪರಾಧಿಗಳೂ ಬಲಿಯಾಗುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿತ್ತು. ಆದರೆ, ಸರ್ಕಾರ ಮತ್ತು ಪೊಲೀಸ್‌ ಇಲಾಖೆ ಇದನ್ನು ನಿರಾಕರಿಸುತ್ತಲೇ ಬಂದಿತ್ತು. ಎನ್‌ಕೌಂಟರ್‌ ಮಾಡುವ ಉತ್ಸಾಹದಲ್ಲಿ ಪೊಲೀಸರು ಎಡವಿದ್ದು ಹಲವು ಪ್ರಕರಣಗಳಲ್ಲಿ ಬಹಿರಂಗವಾಯಿತು. 2018ರಲ್ಲಿ ಸುನಿಲ್ ಗುರ್ಜಾರ್‌ ಎಂಬ ಯುವಕನನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಲಾಯಿತು. ₹ 50,000 ಬಹುಮಾನವೂ ಬಿಡುಗಡೆಯಾಯಿತು. ಆದರೆ ಹತ್ಯೆ ನಡೆದು, ಎರಡು ದಿನಗಳ ನಂತರ ಪೊಲೀಸರಿಗೆ ಬೇಕಾಗಿದ್ದ ಸುನಿಲ್ ಗುರ್ಜಾರ್‌ ಬೇರೆ ವ್ಯಕ್ತಿ ಎಂಬುದು ಗೊತ್ತಾಯಿತು.

ಇಬ್ಬರೂ ಒಂದೇ ಊರಿನವರಾಗಿದ್ದರು. ಒಬ್ಬ 11 ಪ್ರಕರಣಗಳಲ್ಲಿ ಬೇಕಾಗಿದ್ದ ಅಪರಾಧಿಯಾಗಿದ್ದ, ಇನ್ನೊಬ್ಬ ಕಾಲೇಜು ವಿದ್ಯಾರ್ಥಿ. ಆದರೆ ಪೊಲೀಸರ ಗುಂಡಿಗೆ ಬಲಿಯಾಗಿದ್ದು ಕಾಲೇಜು ವಿದ್ಯಾರ್ಥಿ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿಮಾಡಿ, ನಾಲ್ಕು ವಾರಗಳಲ್ಲಿ ಉತ್ತರಿಸಿ ಎಂದು ಸೂಚಿಸಿತು. ಆದರೆ, ಸರ್ಕಾರ ನೋಟಿಸ್‌ಗೆ ಈವರೆಗೆ ಉತ್ತರ ನೀಡಿಲ್ಲ.

ಇದೇ ರೀತಿ ರಸ್ತೆಯಲ್ಲಿ ಸಹೋದ್ಯೋಗಿ ಜತೆ ಇದ್ದ ಆ್ಯಪಲ್‌ ಕಂಪನಿಯ ಉದ್ಯೋಗಿಯನ್ನೂ ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದರು. ಸಹೋದ್ಯೋಗಿ ಜತೆ ರಾತ್ರಿಯಲ್ಲಿ ರಸ್ತೆಯಲ್ಲಿ ಇದ್ದದ್ದೇ ಆತ ಮಾಡಿದ ಅಪರಾಧವಾಗಿತ್ತು. ಮೃತನ ಪತ್ನಿಗೆ ಸರ್ಕಾರಿ ಕೆಲಸ ಮತ್ತು ₹ 25 ಲಕ್ಷ ಮೊತ್ತದ ಪರಿಹಾರ ದೊರೆಯಿತು. ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಸಚಿವರು, ಮುಖ್ಯಮಂತ್ರಿ ಮತ್ತು ಪೊಲೀಸರು ಹೇಳುತ್ತಲೇ ಇದ್ದಾರೆ. ಆದರೆ, ಇದರ ಮಧ್ಯೆಯೇ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇವೆ. ಬಿಜೆಪಿ ಮುಖಂಡ ಕುಲದೀಪ್ ಸೆಂಗರ್‌ ಮೇಲೆ ಇರುವ ಅತ್ಯಾಚಾರ ಆರೋಪ ಮತ್ತು ಅದಕ್ಕೆ ಸಂಬಂಧಿಸಿದ ಹತ್ಯೆಗಳ ಸರಣಿ ನೆನಪಿನಿಂದ ಇನ್ನೂ ಮಾಸಿಲ್ಲ. ಉನ್ನಾವ್‌ನಲ್ಲಿ ಅತ್ಯಾಚಾರ ಸಂತ್ರಸ್ತೆಯನ್ನು ಸಜೀವವಾಗಿ ಸುಟ್ಟ ಪ್ರಕರಣವಂತೂ ಭಾರಿ ಚರ್ಚೆಗೆ ಕಾರಣವಾಗಿತ್ತು.

ಆಧಾರ: ಪಿಟಿಐ, ದಿ ವೀಕ್, ರಾಯಿಟರ್ಸ್‌, ಟ್ವಿಟರ್‌, ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಅಧಿಕೃತ ಟ್ವಿಟರ್ ಖಾತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT