ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಹೋಂ ಕ್ವಾರಂಟೈನ್: ಪ್ರತ್ಯೇಕವಾಸ ಹೀಗಿರಲಿ

Last Updated 26 ಮಾರ್ಚ್ 2020, 19:45 IST
ಅಕ್ಷರ ಗಾತ್ರ
ADVERTISEMENT
""
""
""

ಕೊರೊನಾ ವೈರಸ್ ಇಡೀ ಜಗತ್ತನ್ನು ಬಾಧಿಸುತ್ತಿರುವ ಈ ಸಮಯದಲ್ಲಿ ಹೆಚ್ಚು ಬಳಕೆಯಲ್ಲಿರುವ ಪದ ಕ್ವಾರಂಟೈನ್. ಪ್ರತ್ಯೇಕವಾಗಿರುವುದು ಎಂಬುದು ಇದರ ಅರ್ಥ. ಮನೆಯಲ್ಲಿ ಯಾರೊಂದಿಗೂ ಬೆರೆಯದಂತೆ ಏಕಾಂಗಿಯಾಗಿ ವಾಸ ಮಾಡುವುದು ಇದರ ತಿರುಳು. ಒಬ್ಬರಿಂದ ಒಬ್ಬರು ಅಂತರ ಕಾಯ್ದುಕೊಳ್ಳುವುದೇ ಕೊರೊನಾ ವೈರಸ್ ಹರಡದಂತೆ ತಡೆಯಲು ಇರುವ ಏಕೈಕ ಮಾರ್ಗ. ಇದಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಅದರಷ್ಟೇ ಮಹತ್ವದ್ದು ಕೌಟುಂಬಿಕ ಅಂತರ. ಇದು ಎಷ್ಟು ಅಗತ್ಯ ಎಂಬುದಕ್ಕೆ ಚೀನಾದ ಈ ನಿದರ್ಶನ ಎಚ್ಚಕೆಯ ಗಂಟೆಯಾಬಲ್ಲದು. ಅಲ್ಲಿ ಶೇ 70–80ರಷ್ಟು ಪ್ರಮಾಣದ ಕೊರೊನಾ ವೈರಾಣು ಹರಡುವಿಕೆಯು ಕೌಟುಂಬಿಕ ಪರಿಸರದಲ್ಲೇ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.

ಕೊರೊನಾವೈರಸ್‌ ಸೋಂಕು ಶಂಕಿತರು ಮತ್ತು ಅವರ ನೇರ ಸಂಪರ್ಕದಲ್ಲಿ ಇದ್ದವರು ಹೋಮ್‌ ಕ್ವಾರಂಟೈನ್‌ನಲ್ಲಿ ಇರಬೇಕು. ಕೋವಿಡ್–19 ದೃಢಪಟ್ಟಿರುವವರ ನೇರ ಸಂಪರ್ಕದಲ್ಲಿ ಇದ್ದವರಿಗೂ ಇದು ಅನ್ವಯ.

* ಮನೆಬಿಟ್ಟು ಹೊರಗೆ ಹೋಗುವುದು ಒತ್ತಟ್ಟಿಗೆ ಇರಲಿ, ಮನೆಯ ಕುಟುಂಬ ಸದಸ್ಯರ ನಡುವೆಯೇ ವೈರಾಣು ಹರಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಶಂಕಿತರು ಹಾಗೂ ಸೋಂಕು ಪೀಡಿತ ಸದಸ್ಯರು ಒಂದೇ ಮನೆಯಲ್ಲಿದ್ದರೆ ತೊಂದರೆ ಎಂದು ಅರಿತ ಚೀನಾ ಸರ್ಕಾರ, ಮನೆಯ ಜನರನ್ನು ಪ್ರತ್ಯೇಕಗೊಳಿಸಿ ಜಿಮ್, ಕ್ರೀಡಾಂಗಣಗಳಲ್ಲಿ ಬೆಡ್‌ ಹಾಕಿ, ಉಳಿಯುವ ವ್ಯವಸ್ಥೆ ಮಾಡಿದೆ

* ಕ್ವಾರಂಟೈನ್ ಹಾಗೂ ಐಸೊಲೇಷನ್ ಬೇರೆ ಬೇರೆ. ಆರೋಗ್ಯವಂತ ಜನರು ತಮಗೆ ಸೋಂಕು ತಾಗದಂತೆ ತಡೆಯಲು ಸ್ವಯಂ ನಿರ್ಧಾರ ಮಾಡಿ (ಸರ್ಕಾರದ ಒತ್ತಡದಿಂದ ಸಹ) ಮನೆಯಲ್ಲೇ ಪ್ರತ್ಯೇಕವಾಗಿರುವುದು ಕ್ವಾರಂಟೈನ್ ಎನಿಸಿಕೊಳ್ಳುತ್ತದೆ. ಆದರೆ ಕೋವಿಡ್ ಶಂಕೆ ಇರುವವರು ಮತ್ತು ಪೀಡಿತರಿಂದ ಮನೆಯ ಇತರರಿಗೆ ವೈರಾಣು ಹರಡದಂತೆ ತಡೆಯಲು ಅವರನ್ನು ಏಕಾಂಗಿಯಾಗಿ ಇರಿಸುವುದು ಐಸೊಲೇಷನ್ ಎನಿಸಿಕೊಳ್ಳುತ್ತದೆ

* ವಿದೇಶಗಳಿಂದ ವಿಮಾನ, ಹಡಗುಗಳ ಮೂಲಕ ಸ್ವದೇಶಕ್ಕೆ ಮರಳಿದವರಿಗೆ ನಿಲ್ದಾಣಗಳಲ್ಲಿ ಕ್ವಾರಂಟೈನ್ ಮುದ್ರೆ ಹಾಕಲಾಗುತ್ತದೆ. ಅಂದರೆ 14 ದಿನ ಅವರು ಹೊರಗೆ ಎಲ್ಲೂ ಕಾಣಿಸಿಕೊಳ್ಳದೆ, ಮನೆಯಲ್ಲಿ ಪ್ರತ್ಯೇಕವಾಗಿರಬೇಕಾಗುತ್ತದೆ

* ಮನೆಯಲ್ಲಿ ಪ್ರತ್ಯೇಕವಾಗಿ ಇರಿಸುವ ಅವಧಿ 14 ದಿನ. ಇದು ವೈರಸ್ ಬಾಧಿಸಬಹುದಾದ ಅವಧಿ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಸಣ್ಣ ಮಕ್ಕಳು, ವಯಸ್ಸಾದವರು ಅಥವಾ ಹೆಚ್ಚಿನ ಸಂಖ್ಯೆಯ ಜತೆಗಾರರು ಉಳಿದುಕೊಂಡಿದ್ದರೆ ಅದು ನಿಜಕ್ಕೂ ಸವಾಲಿನ ಸಮಯ

* 14 ದಿನಗಳ ಅವಧಿಯಲ್ಲಿ ಕೆಮ್ಮು, ಶೀತ, ಗಂಟಲು ಕೆರೆತದಂತಹ ಸಮಸ್ಯೆ ಕಾಣಿಸಿಕೊಂಡರೆ, ಪ್ರತ್ಯೇಕವಾಗಿರುವ ವ್ಯಕ್ತಿಗಳಲ್ಲಿ ದಿಗಿಲು ಶುರುವಾಗುತ್ತದೆ. ಅಂತಹವರು ಆಸ್ಪತ್ರೆಯನ್ನು ಸಂಪರ್ಕಿಸಬೇಕು

* ಸೋಂಕಿನ ಯಾವ ಗುಣಲಕ್ಷಣ ಇಲ್ಲದಿದ್ದರೂ ಮನೆಯಲ್ಲಿ ಒತ್ತಾಯಪೂರ್ವಕವಾಗಿ ಕಾಲಕಳೆಯುವುದು ಬಹುತೇಕರಿಗೆ ಸಂಕಷ್ಟ ತರಿಸಿದೆ. ಆದರೆ ಸಾಮಾಜಿಕ ಅಂತರದಷ್ಟೇ ಕೌಟುಂಬಿಕ ಅಂತರವೂ ಅತಿಮುಖ್ಯ ಎಂಬ ಅರಿವು ಬೇಕು

* ನಿತ್ಯ ಮನೆಯಲ್ಲಿ ಜತೆಯಲ್ಲಿ ಇರುತ್ತಿದ್ದವರು ಸೋಂಕಿನ ಕಾರಣಕ್ಕೆ ಅದೇ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸಬೇಕಾದ ಅನಿವಾರ್ಯತೆಯನ್ನು ಕ್ವಾರಂಟೈನ್ ಸೃಷ್ಟಿಸಿದೆ

* ಹೋಮ್ ಕ್ವಾರಂಟೈನ್ ಆದೇಶ ಮೀರಿ ಹೊರಬಂದ ವ್ಯಕ್ತಿಯನ್ನು ಮೈಸೂರಿನ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

ಹೀಗೂ ಕಾಲ ಕಳೆಯಬಹುದು..

ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳು ಇಂಟರ್ನೆಟ್ ಮೂಲಕ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಮೀಟಿಂಗ್, ಪ್ರಾರ್ಥನಾ ಸಭೆ ನಡೆಯುತ್ತಿವೆ. ಪ್ರತ್ಯೇಕವಾಸಿಗಳು ಹೀಗೂ ಕಾಲಕಳೆಯುತ್ತಿದ್ದಾರೆ...

* ಅನಿಮೇಟೆಡ್ ಪೆಂಗ್ವಿನ್‌ಗಳ ಜತೆ ಮಕ್ಕಳು ಸಂವಾದ (ವರ್ಚ್ಯುವಲ್) ನಡೆಸುವ ಕ್ಲಬ್ ಪೆಂಗ್ವಿನ್ ಅನ್ನು ಆನ್‌ಲೈನ್ ಡಿಸ್ನಿ ಮೀಡಿಯಾ ಪ್ಲಾಟ್‌ಫಾರ್ಮ್ ಆಯೋಜಿಸಿತ್ತು. 2017ರಿಂದು ಸ್ಥಗಿತವಾಗಿದ್ದ ಇದು ಕಳೆದ ಶುಕ್ರವಾರ ಚಾಲನೆ ಪಡೆಯಿತು. ಮಕ್ಕಳು ತಮ್ಮ ಮನಬಿಚ್ಚಿ ಸಂವಾದ ನಡೆಸಿದವು

* ಜಸ್ಟಿನ್ ಸ್ಟೀಫನ್ ಎಂಬ ಕೊಳಲು ವಾದಕಿಯು ಈ ಸಾಂಕ್ರಾಮಿಕ ರೋಗದಿಂದ ಭಯಭೀತರಾಗಿರುವ ತನ್ನ ಆಪ್ತ ಬಳಗಕ್ಕಾಗಿ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ‘ಫ್ಲ್ಯೂಟ್ ಮೆಡಿಟೇಷನ್’ ಕಾರ್ಯಕ್ರಮ ಆಯೋಜಿಸಿದ್ದರು

* ಕಳೆದ ಭಾನುವಾರ ನ್ಯೂಯಾರ್ಕ್‌ನ ಪ್ರಸಿದ್ಧ ನೈಟ್‌ಕ್ಲಬ್ ಆಯೋಜಿಸಿದ್ದ 9 ಗಂಟೆಗಳ ಆನ್‌ಲೈನ್ ಸಂಗೀತ ಕಾರ್ಯಕ್ರಮಕ್ಕೆ ಜಗತ್ತಿನಾದ್ಯಂತ ಐದು ಸಾವಿರ ಜನ ಸಾಕ್ಷಿಯಾದರು

* ನಿರ್ದೇಶಕ ಜೆಫ್ ಬಯೇನಾ ಅವರು ತಮ್ಮ ಗೆಳತಿ ಜತೆ ಕ್ವಾರಂಟೈನ್‌ನಲ್ಲಿದ್ದಾರೆ. ಅವರು 15ಕ್ಕೂ ಹೆಚ್ಚು ಸೆಲೆಬ್ರಿಟಿಗಳ ಜತೆ ಸೇರಿ ಜಾಕ್‌ಬಾಕ್ಸ್ ಆನ್‌ಲೈನ್ ಆಟದಲ್ಲಿ ತೊಡಗಿಸಿಕೊಂಡಿದ್ದರು

*ತಮ್ಮ ತಮ್ಮ ಮನೆಗಳಲ್ಲಿ ಕ್ವಾರಂಟೈನ್‌ನಲ್ಲಿರುವ ಸ್ನೇಹಿತರು ಬೇಸರ ನೀಗಿಸಲು ಗೂಗಲ್ ಹ್ಯಾಂಗ್ಔಟ್ ಮೊರೆ ಹೋಗಿದ್ದರು. ಲೇಖಕ ಲೌರೆನ್ ಆಶ್ಲೆ ಸ್ಮಿತ್ ಅವರು ಈ ವೇದಿಕೆಯಲ್ಲಿ ಸುಮಾರು 60 ಸ್ನೇಹಿತರನ್ನು ಸೇರಿಸಿದ್ದರು.

ಹೋಂ ಕ್ವಾರಂಟೈನ್‌:ಯಾರಿಗೆ ಅನ್ವಯ

ಕೊರೊನಾವೈರಸ್‌ ಸೋಂಕು ಶಂಕಿತರು ಮತ್ತು ಅವರ ನೇರ ಸಂಪರ್ಕದಲ್ಲಿ ಇದ್ದವರು ಹೋಂ ಕ್ವಾರಂಟೈನ್‌ನಲ್ಲಿ ಇರಬೇಕು.ಕೋವಿಡ್–19ದೃಢಪಟ್ಟಿರುವವರ ನೇರ ಸಂಪರ್ಕದಲ್ಲಿ ಇದ್ದವರಿಗೂ ಇದು ಅನ್ವಯ

*ಕೋವಿಡ್–19ದೃಢಪಟ್ಟಿರುವ ವ್ಯಕ್ತಿಯ ಮನೆಯಲ್ಲೇ ವಾಸ ಇರುವ ಇತರ ವ್ಯಕ್ತಿಗಳು

*ಕೋವಿಡ್–19ದೃಢಪಟ್ಟಿರುವ ವ್ಯಕ್ತಿಯ ಜತೆ ದೈಹಿಕ ಸಂಪರ್ಕದಲ್ಲಿ ಇದ್ದವರು. (ಯಾವುದೇ ಸುರಕ್ಷಾ ಸಾಧನಗಳನ್ನು ಧರಿಸದೇ ಸಂಪರ್ಕದಲ್ಲಿ ಇದ್ದವರು ಮತ್ತು ಸುರಕ್ಷಾ ಸಾಧನಗಳಲ್ಲಿ ನ್ಯೂನತೆ ಇದ್ದಾಗ ಸಂಪರ್ಕದಲ್ಲಿ ಇದ್ದವರು)

*ಕೋವಿಡ್–19ಇರುವ ವ್ಯಕ್ತಿಯ ಜತೆ1ಮೀಟರ್‌ಗಿಂತ ಕಡಿಮೆ ಅಂತರದಲ್ಲಿ ಇದ್ದವರು,ಪ್ರಯಾಣ ಮಾಡಿದವರು,ವಿಮಾನದಲ್ಲಿ ಪ್ರಯಾಣ ಮಾಡಿದವರು

ಹೋಮ್ ಕ್ವಾರಂಟೈನ್‌ನಲ್ಲಿ ಇರುವವರು ಮಾಡಬೇಕಾದದ್ದು

*ಅಗ್ಗಾಗ್ಗೆ ಸೋಪು–ನೀರು ಅಥವಾ ಸಾನಿಟೈಸರ್ ಬಳಸಿ ಕೈತೊಳೆಯುತ್ತಿರಿ

*ಪ್ರತ್ಯೇಕ ತಟ್ಟೆ–ಲೋಟ,ದಿಂಬು,ಹಾಸಿಗೆ,ಹೊದಿಕೆ,ಟವಲ್‌ಗಳನ್ನು ಬಳಸಿ.ಅವುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ

*ಸದಾ ವೈದ್ಯಕೀಯ(ಸರ್ಜಿಕಲ್)ಮಾಸ್ಕ್‌ ಹಾಕಿಕೊಂಡಿರಿ.ಪ್ರತಿ7–8ಗಂಟೆಗೆ ಒಮ್ಮೆ ಮಾಸ್ಕ್ ಬದಲಿಸಿ.ಬಳಸಿದ ಮಾಸ್ಕ್‌ ಅನ್ನು ಡಿಸ್ಪೋಸ್ ಮಾಡಿ

*ವೃದ್ಧರು,ಮಕ್ಕಳು ಮತ್ತು ಗರ್ಭಿಣಿಯರಿಂದ ದೂರ ಇರಿ.ಸಾಧ್ಯವಾದಷ್ಟೂ ತಮಗೆಂದೇ ನಿಗದಿ ಮಾಡಲಾದ ಕೊಠಡಿಯಲ್ಲೇ ಇರಿ

*ಹೋಮ್‌ ಕ್ವಾರಂಟೈನ್ ಅವಧಿ ಮುಗಿದು,ತಪಾಸಣೆಯ ಫಲಿತಾಂಶ(ನೆಗೆಟಿವ್)ಬರುವವರೆಗೂ ಯಾವುದೇ ಕಾರಣಕ್ಕೂ,ಮನೆಯಿಂದ ಹೊರಗೆ ಬರಬೇಡಿ

ಕೊಠಡಿ ಮತ್ತು ಅದರ ಸ್ವಚ್ಛತೆ

*ಕೊಠಡಿಯಲ್ಲಿ ಚೆನ್ನಾಗಿ ಗಾಳಿ ಆಡುವಂತಿರಬೇಕು

*ಒಂದೇ ಕೊಠಡಿಯಲ್ಲಿ ಇಬ್ಬರು ವ್ಯಕ್ತಿಗಳು(ಇಬ್ಬರೂ ಕ್ವಾರಂಟೈನ್‌ನಲ್ಲಿ ಇರುವವರು)ಇರಬೇಕಾದ ಪರಿಸ್ಥಿತಿ ಇದ್ದರೆ,ಇಬ್ಬರೂ ಪ್ರತ್ಯೇಕ ಹಾಸಿಗೆ ಬಳಸುವುದು.ಇಬ್ಬರ ಹಾಸಿಗೆಗಳ ನಡುವೆ ಕನಿಷ್ಠ1ಮೀಟರ್ ಅಂತರ ಇರಬೇಕು

*ಕೊಠಡಿಗೆ ಹೊಂದಿಕೊಂಡಿರುವಂತೆ ಶೌಚಾಲಯ ಇದ್ದರೆ ಸೂಕ್ತ.ಇಲ್ಲವೇ ಕ್ವಾರಂಟೈನ್‌ನಲ್ಲಿ ಇರುವವರು ಬಳಸುವ ಶೌಚಾಲಯವನ್ನು ಮನೆಯಲ್ಲಿ ಇರುವ ಇತರರು ಬಳಸದೇ ಇರುವುದು ಸುರಕ್ಷಿತ

*ಶೌಚಾಲಯವನ್ನು ಪ್ರತಿದಿನ ಬ್ಲೀಚ್‌ ಬಳಸಿ ಅಥವಾ ಟಾಯ್ಲೆಟ್‌ ಕ್ಲೀನರ್ ಬಳಸಿ ಶುಚಿ ಮಾಡಲೇಬೇಕು

*ಕೊಠಡಿಯ ನೆಲೆ,ಕಿಟಿಕಿ ಮೇಜು–ಕುರ್ಚಿ ಮತ್ತು ಇತರ ಉಪಕರಣಗಳನ್ನು ಪ್ರತಿದಿನ ಸೋಪು ನೀರು ಅಥವಾ ಕ್ಲೀನರ್‌ಗಳನ್ನು ಬಳಸಿ ಒರೆಸಬೇಕು

ಕುಟುಂಬದವರು ಅನುಸರಿಸಬೇಕಾದ ಸೂಚಿಗಳು

*ಪ್ರತ್ಯೇಕವಾಗಿ ಇರಿಸಲಾದ ವ್ಯಕ್ತಿಗಳ ಆರೈಕೆಯನ್ನು ಮನೆಯ ಉಳಿದ ಸದಸ್ಯರಲ್ಲಿ ಯಾರಾದರೂ ಒಬ್ಬರು ಮಾತ್ರ ಮಾಡುವುದು

*ಪ್ರತ್ಯೇಕವಾಗಿ ಇರುವವರು ಬಳಸಿದ ಬಟ್ಟೆ,ಕರ್ಚೀಪು,ಮಾಸ್ಕ್‌ ಮತ್ತ ಕೈಗವಸನ್ನು ನೇರವಾಗಿ ಮುಟ್ಟಬಾರದು.ಇವುಗಳನ್ನು ಶುಚಿ ಮಾಡುವಾಗ ಬಳಸಿ ಬಿಸಾಡುವಂತಹ ಕೈಗವಸು ಬಳಸಿ

*ಕೈಗವಸು ತೆಗೆದ ನಂತರ ಕೈಗಳನ್ನು ಸೋಪುನೀರಿನಿಂದ ಚೆನ್ನಾಗಿ ತೊಳೆಯಿರಿ

*ಅನವಶ್ಯಕವಾಗಿ ಮನೆಗೆ ಹೊರಗಿನವರು ಭೇಟಿ ನೀಡುವುದನ್ನು ತಪ್ಪಿಸಿ

*ಪ್ರತ್ಯೇಕವಾಗಿ ಇರಿಸಲಾದ ವ್ಯಕ್ತಿಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಲ್ಲಿ ವೈದ್ಯರಿಗೆ ಮಾಹಿತಿ ನೀಡಬೇಕು ಮತ್ತು ಆ ವ್ಯಕ್ತಿಯನ್ನು ಮತ್ತೆ ಹೆಚ್ಚುವರಿಯಾಗಿ14ದಿನ ಪ್ರತ್ಯೇಕವಾಗಿ ಇರಿಸಬೇಕು.ಆ ವ್ಯಕ್ತಿಯ ಸಂಪರ್ಕದಲ್ಲಿ ಇರುವ ಎಲ್ಲರೂ14ದಿನ ಪ್ರತ್ಯೇಕವಾಗಿ ಇರಬೇಕು.ಇದು ತಪಾಸಣಾ ವರದಿ(ನೆಗೆಟಿವ್)ಬರುವವರೆಗೂ ಮುಂದುವರಿಯಬೇಕು

ಮಾಸ್ಕ್‌ಗಳ ನಿರ್ವಹಣೆ

ಒಮ್ಮೆ ಬಳಸಿದ ಮಾಸ್ಕ್‌ ಅನ್ನು ಮತ್ತೆ ಬಳಸಬಾರದು.ಕ್ವಾರಂಟೈನ್‌ನಲ್ಲಿ ಇರುವವರು ಬಳಸಿದ ಮಾಸ್ಕ್‌ಗಳನ್ನು ಬ್ಲೀಚಿಂಗ್ ದ್ರಾವಣ ಮತ್ತು ಬಿಸಿ ನೀರಿನಲ್ಲಿ ತೊಳೆದು,ಒಣಗಿಸಬೇಕು.ನಂತರ ಬೆಂಕಿಯಲ್ಲಿ ಸಂಪೂರ್ಣವಾಗಿ ಸುಡಬೇಕು ಅಥವಾ ಆಳವಾಗಿ ಮಣ್ಣು ತೆಗೆದು ಹೂಳಬೇಕು.ಯಾವುದೇ ಕಾರಣಕ್ಕೂ ಇಂತಹ ಮಾಸ್ಕ್‌ಗಳನ್ನು ಮರುಬಳಕೆ ಮಾಡಬಾರದು.

ನೆನಪಿರಲಿ ಈ ಹತ್ತು ನಿಯಮಗಳು

1. ಮನೆಯಲ್ಲಿ ಪ್ರತ್ಯೇಕವಾಗಿರುವ (ಹೋಮ್ ಕ್ವಾರಂಟೈನ್) ವ್ಯಕ್ತಿಗೆ ಸರಾಗವಾಗಿ ಗಾಳಿಯಾಡುವ ಪ್ರತ್ಯೇಕ ಕೋಣೆಯನ್ನು ಮೀಸಲಿಡುವುದು ಸೂಕ್ತ

2. ಕುಟುಂಬ ಸದಸ್ಯರು ಪರಸ್ಪರ ಒಂದು ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು

3. ಉಳಿದ ಸದಸ್ಯರು ಪ್ರತ್ಯೇಕ ಶೌಚಾಲಯ ಬಳಸುವುದು ಸೂಕ್ತ. ಒಂದೇ ಶೌಚಾಲಯ ಇದ್ದಲ್ಲಿ, ನಲ್ಲಿ, ಬಾಗಿಲ ಹಿಡಿಕೆ ಮೊದಲಾದವನ್ನು ಸೋಪು ನೀರಿನಿಂದ ಸ್ವಚ್ಛಗೊಳಿಸುವುದು ಅವಶ್ಯ

4. ಮನೆಗೆ ಬರುವ ಅತಿಥಿಗಳ ಸಂಖ್ಯೆ ಕಡಿತಗೊಳಿಸಿ. ಪ್ರತ್ಯೇಕವಾಗಿರುವ ವ್ಯಕ್ತಿಯು ಮನೆಗೆ ಬಂದ ಅತಿಥಿಗಳ ಜತೆ ಸಂವಾದ ನಡೆಸಬಾರದು

5. ಸೋಪು ನೀರಿನಿಂದ ಕನಿಷ್ಠ 20 ಸೆಕೆಂಡ್ ಕೈತೊಳೆಯಬೇಕು. ನೀರಿನ ಅಭಾವವಿದ್ದರೆ, ಆಲ್ಕೊಹಾಲ್ ಆಧರಿತ ಸ್ಯಾನಿಟೈಸರ್‌ಗಳನ್ನು ನಿಯಮಿತವಾಗಿ ಬಳಸಬೇಕು

6. ತೊಳೆಯದ ಕೈಗಳಿಂದ ಮೂಗು, ಕಣ್ಣು, ಬಾಯಿ ಸ್ಪರ್ಶಿಸುವುದನ್ನು ತಪ್ಪಿಸಿ

7. ಮನೆಯಲ್ಲಿ ಪ್ರತ್ಯೇಕವಾಗಿರುವ ವ್ಯಕ್ತಿಯು ಥರ್ಮಾಮೀಟರ್ ಬಳಸಿ, ದಿನಕ್ಕೆರಡು ಬಾರಿ ದೇಹದ ಉಷ್ಣಾಂಶ ಪರೀಕ್ಷಿಸಿಕೊಳ್ಳುವುದು ಅಪೇಕ್ಷಿತ. ಕೆಮ್ಮು, ನೆಗಡಿ, ಗಂಟಲು ಕೆರೆತ, ಉಸಿರಾಟದಲ್ಲಿ ತೊಂದರೆ, ಮೈಕೈ ನೋವು ಅಥವಾ ಜ್ವರದಂತಹ ಲಕ್ಷಣಗಳು ಕಾಣಿಸಿಕೊಂಡರೆ ಸಮೀಪದ ಆಸ್ಪತ್ರೆಯನ್ನು ಸಂಪರ್ಕಿಸಬೇಕು

8. ಮುಖಗವಸು, ಕೈಗವಸುಗಳನ್ನು ಮರು ಬಳಕೆಮಾಡದೆ ಸುರಕ್ಷಿತವಾಗಿ ವಿಲೇವಾರಿ ಮಾಡಬೇಕು

9. ಮನೆಯಲ್ಲಿ ಪ್ರತ್ಯೇಕವಾಗಿರುವ ವ್ಯಕ್ತಿಗೆ ಪ್ರತ್ಯೇಕ ಆಹಾರ, ನೀರಿನ ಲೋಟ, ತಟ್ಟೆ, ಟವೆಲ್, ಹಾಸಿಗೆ ಮೊದಲಾದವನ್ನು ಒಗಿಸಬೇಕು

10. ಬಳಸಿದ ಪಾತ್ರೆ, ಹಾಸಿಗೆ ಹೊದಿಕೆ, ಬಟ್ಟೆಗಳನ್ನು ಸೋಪು ನೀರಿನಿಂದ ಸ್ವಚ್ಛಗೊಳಿಸಬೇಕು

ಆಧಾರ:ಆರೋಗ್ಯ ಸಚಿವಾಲಯ, WHO

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT